13 ಫೆಬ್ರವರಿ 2020

ರೇಡಿಯೋ (ಕವನ)

‌*ರೇಡಿಯೋ*

(ಇಂದು ವಿಶ್ವ ರೇಡಿಯೋ ದಿನ)

ಬೆಳಗು ಮಾಡಲು
ವಂದೇ ಮಾತರಂ
ಸುಪ್ರಭಾತದೊಂದಿಗೆ ಬಂದು
ಪ್ರದೇಶ ಸಮಾಚಾರ ತಿಳಿಸಿ
ಗಾಂಧೀ ಸ್ಮೃತಿಯನ್ನು
ಮಾಡಿಸುತ್ತಿದ್ದ ನಿನ್ನ ಹೇಗೆ ಮರೆಯಲಿ.

ನನ್ನೂರು ಪರವೂರುಗಳ
ವರ್ತೆಗಳ ತಿಳಿಸಿ
ಸಂಸ್ಕೃತ ಬರದಿದ್ದರೂ ಕೇಳಿಸಿ
ಕೃಷಿಕರಿಗೆ ಮಾಹಿತಿ ನೀಡಿ
ಯುವಕರಿಗೆ ಯುವವಾಣಿಯಾದ
ನಿನ್ನ ಹೇಗೆ ಮರೆಯಲಿ.

ನಮ್ಮ ಹೆಸರು ಹೇಳಿ
ನಿಮ್ಮ ಮೆಚ್ಚಿನ ಗೀತೆಗಳ ಕೇಳಿಸಿ
ಮಕ್ಕಳ ಚಿಲಿಪಿಲಿ
ಗಿಳಿವಿಂಡು ಆಲಿಸಲು
ಕಲಿಸಿದ ನಿನ್ನ ಹೇಗೆ ಮರೆಯಲಿ.

ಕ್ರಿಕೆಟ್ ಎಬಿಸಿ
ಗೊತ್ತಿಲ್ಲದಿದ್ದರೂ
ಇಂಗ್ಲಿಷ್ ಮತ್ತು ಹಿಂದಿಯ
ಮೂಲಕ ವಿವರಣೆ ನೀಡಿ
ಬಹುಭಾಷೆಗಳ ಕಲಿಸಿದ
ನಿನ್ನ ಹೇಗೆ ಮರೆಯಲಿ.

ನೂರಾರು.ಜಿ ಬಿ ಗಟ್ಟಳೆ ಹಾಡಿವೆ,
ಹತ್ತಾರು ಚಾನೆಲ್ಗಳು ಮಾಹಿತಿ ನೀಡಿವೆ
ಸುದ್ದಿಗೆ ಸಾವಿರಾರು ವಾಹಿನಿಗಳಿವೆ
ನಿನ್ನಷ್ಟು ಆಪ್ತ ಯಾರೂ ಇಲ್ಲ
ನೀ ಮಾಡಿದ ಮೋಡಿ ಮರೆಯಲ್ಲ
ಕೋಟಿ ನಮನಗಳು ನಿ‌ನಗೆ ರೇಡಿಯೋ.

*ಸಿ ಜಿ ವೆಂಕಟೇಶ್ವರ*


12 ಫೆಬ್ರವರಿ 2020

ಗೌರವ ( ರುಬಾಯಿ)

ಗೌರವ (ರುಬಾಯಿ)
ಮರೆತುಬಿಡು ಇತರರಿಗೆ ಮಾಡಿದ ಉಪಕಾರವ
ನೆನೆಯದಿರು ನಿನಗೆ ಮಾಡಿದ ಅಪಕಾರವ
ಎಲ್ಲರಲೂ‌ ಉಂಟು ‌ಒಳಿತು ಕೆಡುಕು
ಒಳ್ಳೆಯದು ಗುರುತಿಸು ಹುಡುಕಿ ಬರುವುದು ಗೌರವ.
*ಸಿ ಜಿ ವೆಂಕಟೇಶ್ವರ*

11 ಫೆಬ್ರವರಿ 2020

ವೀಣಾಪಾಣಿ(ಭಕ್ತಿಗೀತೆ)




*ವೀಣಾಪಾಣಿ*

ಸುಜ್ಞಾನದಾಯಿಕೆ ಶಾರದಾ ಮಾತೆ
ವಂದಿಪೆ ನಿನಗೆ ಹೇ ಜಗನ್ಮಾತೆ
ವಿದ್ಯೆ ಬುದ್ಧಿಯ ನೀಡುವ ತಾಯಿ
ಹರಸುತ ನಮ್ಮನ್ನು ನೀ ಕಾಯಿ.

ಸುವಿಮಳ ಚರಿತೆ  ನಮಿಪೆ ನಿನಗೆ
ಗೆಲುವನು ಕರುಣಿಸು ನಮಗೆ
ಶ್ವೇತ ವಸ್ತ್ರ ದ   ಶಾರದಾ ಮಾತೆ
ಜ್ಞಾನವ ನೀಡಮ್ಮ ವಾತ್ಸಲ್ಯದಾತೆ.

ವಾಣಿ ವೀಣಾಪಾಣಿಯೆ ಭಕ್ತಿದಾತೆ
ತಮವ ತೊರೆಯಮ್ಮ ಮುಕ್ತಿದಾತೆ
ಕರದಲಿ ಪುಸ್ತಕವ ಹಿಡಿದಿರುವೆ
ಶರಣೆಂದರೆ ಪೊರೆದು‌ ಕಾಯುವೆ.

ಧರಸಿರುವೆ ಹೊಳೆವ ವರಮಣಿ
ಅಜನ ರಾಣಿ ಕರುಣಿಸು ವಾಣಿ
ಅರಿವನು ನೀಡುವ ತಾಯಿಸರಸ್ವತಿ
ನಿನ್ನ ಮಕ್ಕಳಿಗೆ ನೀಡು ಸದಾ ಸನ್ಮತಿ .

*ಸಿ ಜಿ ವೆಂಕಟೇಶ್ವರ*


ಯಾವಾಗ? (ಕವನ)

*ಯಾವಾಗ?*

ತನ್ನ ಮನೆ ಕಸವ ತೆಗೆದು
ಪರರ ಮನೆಯ ಮುಂದೆ,
ಬೀದಿಗೆ ಹಾಕುವ ಮನಸ್ಸಲ್ಲೆ
ನಾನು ಸ್ವಚ್ಚ ಮಾನವ ಎಂಬ
ಹುಸಿ ಆತ್ಮ ಪ್ರೌಢಿಮೆ ಬೇರೂರುತ್ತಿದೆ.

ಮೇಲು ಕೀಳು
ಜಾತಿ ಮತದ ಕಳೆಯು ಹೆಚ್ಚಾಗಿ
ನಾ ಹೆಚ್ಚು ನೀ ಕಡಿಮೆ
ಅವನು ಸರಿಯಿಲ್ಲ ಎಂಬ
ಸಂಕುಚಿತ ಮನೋಭಾವ ಬೇರೂರುತ್ತಿದೆ.

ಪರೋಪಕಾರಂ ಇದಮಿತ್ತಂ ಶರೀರ
ಎಂಬ ಕಲ್ಪನೆ ಕ್ರಮೇಣವಾಗಿ ಮಾಯವಾಗಿ
ನಾನಿದ್ದರೆ ನೀನು ,ನಾನೇ ಮುಖ್ಯ ಎಂಬ
ಸ್ವಾರ್ಥ ಎಲ್ಲೆಡೆ ಬೇರೂರುತ್ತಿದೆ.

ಲೌಕಿಕ ಸುಖದ ಹಿಂದೆ ಬಿದ್ದು
ಅಲೌಕಿಕದ ಆತ್ಮಸಂತೋಷವ
ಕಡೆಗಣಿಸುವ ಮನೋಭಾವನೆ
ಬೇರೂರುತ್ತಿದೆ .

ಸರ್ವೇ ಭದ್ರಾಣಿ ಪಶ್ಯಂತು ಎಂಬ
ಭಾವನೆ ಮರೆಯಾಗಿ ದುಃಖದಲ್ಲಿರುವವರ
ನೋಡಿ ಸೆಲ್ಪಿ ವೀಡಿಯೋ ಮಾಡುವ
ಸಂಸ್ಕೃತಿಯ ಬೇರೂರುತ್ತಿದೆ.

ಬೇರೂರುಬೇಕಿದ್ದ ಪ್ರೀತಿ, ದಯೆ,ಕರುಣೆ,ಸಹಕಾರ ಸಹಬಾಳ್ವೆ, ಅನುಕಂಪಗಳು.ಮೊಳಕೆಯೊಡಲು ಸಹ
ಬಿಡದ ನಾವು ನಿಜವಾದ ಮಾನವೀಯ ಸಮಾಜ ನಿರ್ಮಿಸುವುದು ಯಾವಾಗ?

*ಸಿ ಜಿ ವೆಂಕಟೇಶ್ವರ*

04 ಫೆಬ್ರವರಿ 2020

ಸ್ವಾಸ್ಥ್ಯ ಸಮಾಜ ನಿರ್ಮಿಸೋಣ( ಲೇಖನ)


ಸ್ವಾಸ್ಥ್ಯ ಸಮಾಜ ನಿರ್ಮಿಸೋಣ
ಕರ್ನಾಟಕದಲ್ಲಿ ಮಕ್ಕಳ ಅಪೌಷ್ಟಿಕತೆ ಗಣನೀಯವಾಗಿ ಕಡಿಮೆಯಾಗಿರುವ ವರದಿ ನೋಡಿ ತುಂಬಾ ಸಂತಸವಾಯಿತು.ಇಪ್ಪತ್ತೊಂದನೇ ಶತಮಾನದಲ್ಲಿ ನಾವಿದ್ದರೂ ವಿವಿಧ ಕ್ರಾಂತಿಗಳಾದ ಹಸಿರು ಕ್ರಾಂತಿ, ನೀಲಿಕ್ರಾಂತಿ,ಹಳದಿಕ್ರಾಂತಿ,ಶ್ವೇತ ಕ್ರಾಂತಿ ಮಾಡಿರುವೆವವು ಎಂದು ಕೊಚ್ಚಿಕೊಂಡರೂ ಇಂದು ಜಗದಲ್ಲಿ ಕೋಟ್ಯಾಂತರ ಜನರು ಬಡತನದಲ್ಲಿ ಇರುವುದು ವ್ಯವಸ್ಥೆಯನ್ನು ಮತ್ತು ಅಭಿವೃದ್ಧಿಯನ್ನು ಅಣಕಿಸಿದಂತೆ. ಅದರಲ್ಲೂ ಏನೂ ಅರಿಯದ ಕಂದಮ್ಮಗಳು ಅಪೌಷ್ಟಿಕತೆಯ ಕೂಪಕ್ಕೆ ಸಿಕ್ಕು ತಮ್ಮದಲ್ಲದ ತಪ್ಪಿನಿಂದ ವಿವಿಧ ರೋಗಗಳಿಂದ ಬಳಲುತ್ತಿರುವ ಮತ್ತು ಮರಣಹೊಂದುತ್ತಿರುವ ಚಿತ್ರಣ. ನಮ್ಮ ಕಣ್ಣ ಮುಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಶಾಕಿರಣ ಎಂಬಂತೆ ಕರ್ನಾಟಕದಲ್ಲಿ ಈ ವರ್ಷ ಅಪೌಷ್ಟಿಕತೆಯ ಪ್ರಮಾಣ 0.33 ಕಡಿಮೆಯಾಗಿದೆ. ನೋಡಲು ಈ ಆನುಪಾತ ಚಿಕ್ಕದು ಎಂದು ಕಂಡರೂ 2015 ರಲ್ಲಿ ರಾಜ್ಯದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆ 21652 ರಿಂದ ಈ ವರ್ಷದ ಹೊತ್ತಿಗೆ 11265 ಕ್ಕೆ ಕಡಿಮೆಯಾಗಿದೆ ಇದು ಗಮನಾರ್ಹವಾದ ಬೆಳವಣಿಗೆ ಈ ದಿಸೆಯಲ್ಲಿ ಕಾರ್ಯಪ್ರವತ್ತವಾದ ಸರ್ಕಾರಗಳು ಸರ್ಕಾರೇತರ ಸಂಘ ಸಂಸ್ಥೆಗಳು, ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಅಭಿನಂದನಾರ್ಹರು. ಅನ್ನಭಾಗ್ಯ,ಕ್ಷೀರಭಾಗ್ಯ,ಸೃಷ್ಟಿ ಯೋಜನೆ, ವೈದ್ಯಕೀಯ ವೆಚ್ಚ ಯೋಜನೆಗಳ ಫಲ ಈ ಸಕಾರಾತ್ಮಕ ಬೆಳವಣಿಗೆ.ಆದರೂ ಬೆಳಗಾವಿಯಲ್ಲಿ1249 ಮಕ್ಕಳು, ಬಳ್ಳಾರಿಯಲ್ಲಿ 1134  ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ವರದಿ ಅತಂಕ ತರುವ ಅಂಶವಾಗಿದೆ.ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಅಪೌಷ್ಟಿಕತೆಯ ಹೋಗಲಾಡಿಸಲು ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ. ಇದರ ಜೊತೆಗೆ ಸಮರ್ಪಕವಾಗಿ ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾದರೆ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯು ಕಡಿಮೆಯಾಗುತ್ತದೆ ತನ್ಮೂಲಕ ಸ್ವಾಸ್ಥ್ಯ ಜನತೆ ಸ್ವಾಸ್ಥ್ಯ ಸಮಾಜದ ಪರಿಕಲ್ಪನೆಯನ್ನು ಸಾಕಾರ ಮಾಡಬಹುದು.
ಸಿ ಜಿ ವೆಂಕಟೇಶ್ವರ