04 ಮಾರ್ಚ್ 2018

ಗಜ಼ಲ್ ೨೭ (ತೆರೆದಿರಲಿ ಬಾಗಿಲು) ಕನ್ನಡ ಕಾವ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆ ಯಲ್ಲಿ ಉತ್ತಮ ಗಜ಼ಲ್ ಎಂದು ‌ಪುರಸ್ಕೃತ ಗಜ಼ಲ್



*ಗಜ಼ಲ್ ೨೭*
ಅಜ್ಞಾನದಿಂದ ಸುಜ್ಞಾನ ಪಡೆಯಲು ತೆರೆದಿರಲಿ ಬಾಗಿಲು
ಅಂಧಕಾರವನಳಿಸಿ ಬೆಳಕು ಪಸರಿಸಲು ತೆರೆದಿರಲಿ ಬಾಗಿಲು 

ಅಸೂಯೆ ದ್ವೇಷ ಸ್ವಜನ ಪಕ್ಷಪಾತ ಕಲುಷಿತ ಮನಗಳು
ಸರ್ವರ ಬೆಳೆಸಲು  ಪ್ರೀತಿಸಲು ತೆರೆದಿರಲಿ ಬಾಗಿಲು

ಕರಕಲು ಕೊಳೆತ ಕಲುಷಿತ ಕರ್ಮಟ ವಾಸನೆ ಎಲ್ಲೆಡೆ
ಸುಗಂಧ ಹೃದಯವ ಹೊಂದಲು ತೆರೆದಿರಲಿ ಬಾಗಿಲು

ದೇಶ ಭಾಷೆ ಬಣ್ಣ  ಜಾತಿ ಮತಗಳ ಹೆಸರಲಿ ಕಿತ್ತಾಟ
ಸಹಮತ ಸಮನ್ವಯ ಸಹಬಾಳ್ವೆ ನಡೆಸಲು ತೆರೆದಿರಲಿ ಬಾಗಿಲು

ನಾನು ನನ್ನದೆಂಬ ಸ್ವಾರ್ಥತೆ ತೊರೆಯಲು ಸೀಜೀವಿಯ ಆಶಯ
ಸಂಕುಚಿತತೆ ತೊರೆದು ವೈಶಾಲ್ಯತೆ  ಬೆಳೆಸಲು ತೆರೆದಿರಲಿ ಬಾಗಿಲು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 ಮಾರ್ಚ್ 2018

ಪ್ರೇಮ ಬರಹ (ಹನಿಗವನ)

*ಹನಿಗವನ*

*ಪ್ರೇಮ ಬರಹ*

ನಾನೊಂದು  ತೀರ
ನೀನೊಂದು ತೀರ
ಮಗಿಯದ ವಿರಹ
ಹೋಗದಿರು ದೂರ
ಸನಿಹಕೀಗ  ಬಾರ
ಬರೆವ ಪ್ರೇಮ ಬರಹ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಬದುಕಲು ಬಿಡಿ* (ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ನನ್ನ ಕವನ)

*ಬದುಕಲು ಬಿಡಿ*
(ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ನನ್ನ ಕವನ)


ನಮಗೂ ಹಕ್ಕಿದೆ ಬಾಳಲು
ಭುವಿ ನಮಗೂ ಸೇರಿದ್ದು
ನಮ್ಮನೆಲ್ಲ  ಕೊಲ್ಲಲು
ಯಾರು ನಿಮಗೆ ಹೇಳಿದ್ದು

ನಾವಿರುವೆವು ಕಾಡಲಿ
ಅದಕೆ ಕೊಡಲಿ ಬೀಸುವಿರಿ
ನಾವು ನಾಡಿಗೆ ಬಂದರೆ
ಬೊಬ್ಬೆ ಹೊಡೆಯುವಿರಿ

ಚರ್ಮ ಹಲ್ಲು ದಂತಕೆ
ನಮ್ಮೆಲ್ಲರ ಕೊಲ್ಲುವಿರಿ
ನಮ್ಮ ಸಂತತಿ ಉಳಿಸಲು
ಯೋಜನೆ  ಮಾಡುವಿರಿ

ಅತಿಯಾಸೆ ಏಕೆ ನಿಮಗೆ
ನಮ್ಮ ಪಾಡಿಗೆ ನಮ್ಮ ಬಿಡಿ
ನಿಮ್ಮ ಆಸೆಗೆ ಮಿತಿ ಇರಲಿ
ನಮಗೂ ಬದುಕಲು ಬಿಡಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




ಪಯಣಿಸು (ಭಾವಗೀತೆ)



*ಪಯಣಿಸು*

ಈಸಬೇಕು ಇದ್ದು ಜೈಸಬೇಕು
ಜೀವನದ ತೀರ ಸೇರಬೇಕು|ಪ|

ಕಡಲಲೆಗಳು ನಿರಂತರ
ಎದುರಿಸಿ ಮುನ್ನುಗ್ಗಬೇಕು
ಬಿರುಗಾಳಿ ಆಗೊಮ್ಮೆ ಈಗೊಮ್ಮೆ
ಸಾವಕಾಶವಾಗಿ ಸಾಗಬೇಕು|೧|

ತಿಮಿಂಗಿಲ ಮೊಸಳೆಗಳು ನೂರಾರು
ಎಚ್ಚರವಿರಲಿ ಪಯಣದಲಿ
ನಡುವೆ ಮಂಗಳ ತಂಗಾಳಿ
ಆಸ್ವಾದಿಸು ಆನಂದದಲಿ|೨|

ಮೈಮರೆಯದಿರು ಎಂದಿಗೂ
ಅಡೆತಡೆಗಳಿವೆ ಹೆಜ್ಜೆ ಹೆಜ್ಜೆಗು
ಎಲ್ಲರೊಳಗೊಂದಾಗಿ ಪಯಣಿಸು
ಎಲ್ಲರನು ಗೌರವಿಸುತ ಸಾಗು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



02 ಮಾರ್ಚ್ 2018

ಬದುಕಿನ ದಾರಿ(ಕವನ)

*ಬದುಕಿನ ದಾರಿ*

ಬಣ್ಣ ಹಚ್ಚಿ ನಟನೆ ಮಾಡಿ
ನಿಮ್ಮ ನಾನು ನಗಿಸುವೆ
ಮುಖವಾಡ ಹಾಕಿ ಬದುಕುವವರ
ಬಣ್ಣ ಬಯಲು ಮಾಡುವೆ |೧|

ಸರಿ ಗಮ ರಾಗ ತಿಳಿದು
ಹಾಡನ್ನು ಹಾಡುವೆ
ಸರಿಯಾದ ಮಾರ್ಗ ತಿಳಿಸಿ
ಬಾಳು ಸಂಗೀತಮಯ ಎನ್ನುವೆ |೨|

ಬಣ್ಣ ಕುಂಚ ಹಿಡಿಯುವೆ
ಜಗದ ಚಿತ್ರ ಬಿಡಿಸುವೆ
ಮೊಗದಿ ಸಿಹಿ ಒಳಗೆ ಕಹಿ
ಜನರ ವಿಚಿತ್ರ ಗುಣವ  ತೋರುವೆ |೩|

ನವರಸಗಳ ಅರಿಯುವೆ
ನಟನೆಯನ್ನು ಮಾಡುವೆ
ಕೆಟ್ಟ ಜನರ ಮುಖವಾಡವ
ದಿಟ್ಟ ತನದಿ ತೋರುವೆ|೪|

ಸೀಮೆ ಸುಣ್ಣ ಪುಸ್ತಕ ಹಿಡಿವೆ
ಒಲವಿನಲಿ ಪಾಠ ಮಾಡುವೆ
ದಾರಿ ತಪ್ಪಿದ ಮಕ್ಕಳ ತಿದ್ದಿ
ಬದುಕಿನ ದಾರಿ ತೋರುವೆ|೫|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*