29 ಜನವರಿ 2018

ಭಾಗ್ಯವಿಧಾತ (ಕವನ) "ಕನ್ನಡ ಸಾಹಿತ್ಯ ಲೋಕ " ವಾಟ್ಸಪ್ ಗುಂಪಿನ ವಾರದ ಸ್ಪರ್ಧೆಯಲ್ಲಿ" ಉತ್ತಮ ಕವನ" ಪುರಸ್ಕಾರ ಪಡೆದ ಕವನ




*ಭಾಗ್ಯವಿಧಾತ*

ವಂದಿಪೆನು ನೇತಾಜಿಗೆ 
ನಮಿಪೆನು ವೀರಸಿಂಹನಿಗೆ
ಭಾರತ ರಾಷ್ಟ್ರೀಯ ಸೇನೆ ಕಟ್ಟಿದೆ
ಬ್ರಿಟಿಷರ ಧಿಮಾಕಿಗೆ ಕುಟ್ಟಿದೆ|೧|

ಜೈ ಹಿಂದ್ ಘೋಷ ಮೊಳಗಿಸಿದೆ
ದೇಶ ಭಕ್ತಿಯ ಕಿಚ್ಚು ಹತ್ತಿಸಿದೆ 
ಫಾರ್ವರ್ಡ್ ಬ್ಲಾಕ್ ಹರಿಕಾರ
ಪರಂಗಿಯರ ಎದುರಿಸಿದ ಎದೆಗಾರ|೨|

ಭಾರತ ದೇಶದ ಭಾಗ್ಯವಿಧಾತ 
ತಾಯಿಯ ಋಣವ ತೀರಿಸಿದಾತ
ಶಿಸ್ತಿನ ಸಿಪಾಯಿ ನಮಗೆಲ್ಲ
ಸ್ಪೂರ್ತಿಯ ಸೆಲೆಯು ಜಗಕೆಲ್ಲ|೩|

ಹಾತೊರೆಯಲಿಲ್ಲ ನಿಮ್ಮ ಸುಖಕೆ 
ಹೋರಾಡಿದಿರಿ ನೀವು ಸ್ವಾತಂತ್ರಕೆ 
ಉಳಿದಿದೆ ನಿಮ್ಮೆಸರು ಧರೆಯಲೆಲ್ಲ 
 ನಾವೆಂದಿಗೂ ನಿಮ್ಮನು ಮರೆಯಲ್ಲ|೪|

*ಸಿ.ಜಿ..ವೆಂಕಟೇಶ್ವರ*
*ಗೌರಿಬಿದನೂರು*

28 ಜನವರಿ 2018

*ಸೊಕ್ಕು ಮುರಿಯೋಣ*( ಕ್ರಾಂತಿ ಗೀತೆ) ಹನಿ ಹನಿ ಇಬ್ನನಿ ಗುಂಪಿನ ಉತ್ತಮ ಗೀತೆ ಪುರಸ್ಕರಿತ

*ಕ್ರಾಂತಿ ಗೀತೆ*

*ಸೊಕ್ಕು ಮುರಿಯೋಣ*

ಎದ್ದು ನಿಲ್ಲುವ ಗೆಲ್ಲಲು
ಒದ್ದು ಬುದ್ದಿ ಕಲಿಸಲು|ಪ|

ಜಾತಿ ಮತವ ಅಳಿಸಿ
ಮಾನವತೆಯ ಉಳಿಸಿ
ನಿಲ್ಲಲಿ ನಮ್ಮ ಶೋಷಣೆ
ಮಾಡಿ ಏಕತೆಯ ಘೋಷಣೆ|೧|

ಮೌನದಲಿದ್ದುದು ಸಾಕು
ಬುಗಿಲೆದ್ದು ನಿಲ್ಲಬೇಕು
ಹಗೆತನ ಬಡಿದೋಡಿಸಿ
ನೀಚರನು ಬಡಿದು ಶಿಕ್ಷಿಸಿ|೨|

ಶುರುವಾಗಲಿ ಸಮರ
ಮದದಿ ಕೊಬ್ಬಿದವರ
ಸೊಕ್ಕು ಮುರಿಯೋಣ
ನಮ್ಮ ಹಕ್ಕು ಕೇಳೋಣ|೩|

ನಾನು ಮನುಜ ತಿಳಿ
ಬಾಳಿ ಬದುಕಲು ಕಲಿ
ನಾನು ನೀನು ಒಂದೆ
ಮಾನವ ಕುಲವೊಂದೆ|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 ಜನವರಿ 2018

*ಸಜ್ಜೆತೆನೆ ಮತ್ತು ರಾಜಪ್ಪ ಮಾಸ್ಟರ್ (ಕಿರುಗಥೆ) ಕವಿಬಳಗ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಕಥೆ

ಕಿರುಗಥೆ

*ಸಜ್ಜೆತೆನೆ ಮತ್ತು ರಾಜಪ್ಪ ಮಾಸ್ಟರ್*

 ನಮ್ಮ ಊರು ಚೌಡಗೊಂಡನಹಳ್ಳಿ ಶಾಲೆಯಲ್ಲಿ  ನಾಲ್ಕನೇ ತರಗತಿ ಪಾಸಾಗಿ ಎರಡು ಕಿಲೋಮೀಟರ್ ದೂರದ ಉಪ್ಪರಿಗೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಹೋದರೆ ಆಗ ಉನ್ನತ ವ್ಯಾಸಂಗಕ್ಕೆ ಬೇರೆ ನಗರಕ್ಕೆ ಹೋದಂತೆ ಕೊಚ್ಚಿಕೊಳ್ಳುತ್ತಿದ್ದೆವು ಕಾರಣ ನಾಲ್ಕನೇ ತರಗತಿ ಪಾಸಾಗುವವರೇ ಅಂದು ವಿರಳ.
ನಾನು ಮತ್ತು ನನ್ನ ಸ್ನೇಹಿತರು ಐದನೇ ತರಗತಿ ಓದಲು ಉಪ್ಪರಿಗೇನಹಳ್ಳಿಗೆ ಪ್ರತಿದಿನ ಎರಡು ಕಿಲೋಮೀಟರ್ ನಡೆದೇ ಹೋಗುತ್ತಿದ್ದೆವು ಆಗ ಸ್ನೇಹಿತರ ಜೊತೆ ನಮ್ಮ ಆಟಗಳಿಗೆ ಕೊನೆ ಇರುತ್ತಿರಲಿಲ್ಲ.
ಒಮ್ಮೆ ಈಗೆ ನಡೆದು ಹೋಗುವಾಗ ಫಲ ಬಿಟ್ಟ ಹೊಲ ನೋಡುವುದೇ ಒಂದು ಆನಂದ. ಬರೀ ನೋಡಿ ಸುಮ್ಮನೆ ಬಿಡುವ ಜಾಯಮಾನವೆ ನಮ್ಮದು ? ಇಲ್ಲ ಪ್ರತಿದಿನ ಜೋಳದ ತೆನೆ ,ಸಜ್ಜೆಯತೆನೆ ಈಗೆ ಒಂದೊಂದು ದಿನ ಒಂದು ತರಹದ ಬೆಳೆ ಕಿತ್ತು ತಿಂದು ಆನಂದ ಪಡುತ್ತಿದ್ದೆವು. ಜೊತೆಗೆ ನಮ್ಮನ್ನು ಯಾರೂ ನೋಡಿಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದೆವು .
ಒಂದು ದಿನ ಹೊಲದ ಮಾಲಿಕ ಅಣ್ಣಪ್ಪ ನಾವು ಶಾಲೆಗೆ ಹೋಗುವ ಮೊದಲೇ ಮುಖ್ಯ ಶಿಕ್ಷಕರ ಮುಂದೆ ಹಾಜರಾಗಿದ್ದರು ಮತ್ತು ನಮ್ಮ ಪರಾಕ್ರಮ ಅವರಿಗೊಪ್ಪಿಸಿದ್ದರು .
ಪರಿಣಾಮವಾಗಿ ನಮ್ಮ ಕೈಚೀಲ ತಪಾಸಣೆ ಮಾಡಿದಾಗ ಪ್ರತಿ ಬ್ಯಾಗ್ ನಲ್ಲಿ ಎರಡು ಮೂರು ಸಜ್ಜೆ ತೆನೆಗಳು ಸಿಕ್ಕವು .*ನೋಡಿ ಸ್ವಾಮಿ ನಿಮ್ಮ ಹುಡುಗರು ನನ್ನ ಹೊಲ ಹಾಳು ಮಾಡವ್ರೆ ಇದನ್ನೇ ಏನು ನೀವು ಇಸ್ಕೂಲ್ನಾಗೆ ಹೇಳ್ಕೊಡೋದು* ಎಂದು ಅಣ್ಣಪ್ಪ ಅಬ್ಬರಿಸಿದರು .ಅದನ್ನು ಕೇಳಿದ ನಮ್ಮ ರಾಜಪ್ಪ ಮಾಸ್ತರು ಕಚ್ಚೇ ಪಂಚೆ ಎಡಗೈ ನೆರಳಿನಲ್ಲಿ ಸುತ್ತುತ್ತಾ ಹಸಿ ಹುಣಸೇ ಬರಲಿನಿಂದ ನಮ್ಮನ್ನು ಚೆನ್ನಾಗಿ ಬಾರಿಸಿ *ರೈತನು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಇನ್ನೊಮ್ಮೆ ಹಾಳು ಮಾಡಿದರೆ ಇದೇ ತರ ಬೀಳುವುದು* ಎಂದರು ಅಂದಿನಿಂದ ಸಜ್ಜೆ ಹೊಲ ಮತ್ತು ಹುಣಸೇ ಬರಲು(ಕೋಲು) ನೋಡಿದಾಕ್ಷಣ ರಾಜಪ್ಪ ಮಾಸ್ತರ್ ಮತ್ತು ಏಟು ನನೆದು ಮೈ ಸವರಿಕೊಳ್ಳುವೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು ( ಗಣರಾಜ್ಯ ದಿನ)

ಹನಿಗವನಗಳು ( ಗಣರಾಜ್ಯ ದಿನ)

*೧*
*ಎಚ್ಚರಿಕೆ*

ನಾವೆಲ್ಲರೂ ಸೇರಿ
ಒಟ್ಟಾಗಿ ಆಚರಿಸಿದರೆ
ಗಣತಂತ್ರ ದಿನ
ಒಗ್ಗಟ್ಟಿಲ್ಲದೇ ಕಿತ್ತಾಡಿ
ಬಡಿದಾಡಿಕೊಂಡರೆ
ಮುಂದೆ ಬರುವುದು
ಅತಂತ್ರ ದಿನ

*೨*

*ಅಸಹಾಯಕರು*


ನಮ್ಮ ಗಣರಾಜ್ಯೋತ್ಸವದಲ್ಲಿ
ಪಾಲ್ಗೊಂಡರು ೧೦ ದೇಶದ
ನಾಯಕರು
ಹುಲಿಯಂತೆ ಗರ್ಜಿಸುತ್ತಿದ್ದ
ನಮ್ಮ ವೈರಿದೇಶಗಳಿಗೆ
ಅನಿಸುತಿದೆ
ನಾವೀಗ ಬರೀ
ಅಸಹಾಯಕರು

*೩*

*ತಾಕತ್ತು*

ಗಣರಾಜ್ಯೋತ್ಸವದಲ್ಲಿ
ಈಬಾರಿ ಪಾಲ್ಗೊಂಡ
ವಿದೇಶಿ ನಾಯಕರು
ಹತ್ತು
ನಮ್ಮ ವೈರಿದೇಶಗಳು
ಸುಸ್ತಾಗಿವೆ
ಅತ್ತು ಅತ್ತು
ಇದು ಭಾರತದ
ತಾಕತ್ತು

 *ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಜನವರಿ 2018

*ಯರಬಳ್ಳಿ ಮಾರಮ್ಮ*(ಭಕ್ತಿಗೀತೆ)

*ಯರಬಳ್ಳಿ ಮಾರಮ್ಮ*

ನಮ್ಮ ಕಾಪಾಡಲು  ಬಾರಮ್ಮ
ಯರಬಳ್ಳಿಯ ದೇವಿ  ಮಾರಮ್ಮ|ಪ|

ಯರಬಳ್ಳಿಯಲಿ ನೆಲೆಸಿಹ ತಾಯಿ
ನಮ್ಮೆಲ್ಲರ ಹರಸು ಮಹಾತಾಯಿ
ತಳಿರು ತೋರಣವ  ಕಟ್ಟುವೆವು
ತಂಬಿಟ್ಟು ಆರತಿ ಬೆಳಗುವೆವು|೧|

ವರುಷದ ಜಾತ್ರೆಯ ಮಾಡುವೆವು
ಗಾವು ಸಿಡಿ ಸೇವೆ ಅರ್ಪಿಸುವೆವು
ಜಲದಿ ಉತ್ಸವಕೆ ನಗುತ ಸಾಗು
ನಮ್ಮಯ ದುರಿತಗಳ  ನೀ ನೀಗು|೨|

ಹೊಳೆಯ ಪೂಜೆಯ ಮಾಡುವೆವು
ಹಳೆ ಕೊಳೆ ಕಳೆಯಲು ಬೇಡುವೆವು
ಬಾನಗುರಿ ಸೇವೆಯ ಮಾಡುವೆವು
ಊರ ಸುತ್ತ ತಳಿಯ  ಹಾಕುವೆವು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*