22 ಜನವರಿ 2018

ನಮಗೆ ಎಂತಹ ಮುಖ್ಯ ಮಂತ್ರಿ ಬೇಕು? (ಸಂಗ್ರಹ ಲೇಖನ)

ಈ ರಾಜ್ಯವನ್ನು ಲಿಂಗಾಯಿತನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಒಕ್ಕಲಿಗನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ದಲಿತನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಬ್ರಾಹ್ಮಣನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಕುರುಬನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಇತರೆ ಯಾವ ಜಾತಿಯವನೂ ಮುನ್ನಡೆಸಬಾರದು.
ಈ ರಾಜ್ಯವನ್ನು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಯಾವ ಧರ್ಮದವನೂ ಮುನ್ನಡೆಸಬಾರದು.
ಈ ರಾಜ್ಯವನ್ನು ರೈತ ಕಾರ್ಮಿಕ ವಿಜ್ಞಾನಿ ಸಮಾಜ ಸೇವಕ ಧಾರ್ಮಿಕ ಮುಖಂಡ ಮುಂತಾದ ಯಾರೂ ಮುನ್ನಡೆಸಬಾರದು.
ಏಕೆಂದರೆ ,...
ಇವರು ಯಾರೂ ಪರಿಪೂರ್ಣರಲ್ಲ. ಎಲ್ಲರೂ ತಮ್ಮ ಹಿತದ ಪಕ್ಷಪಾತಿಗಳಾಗುತ್ತಾರೆ. ಅದು ಅವರವರದೇ ಆಡಳಿತವಾಗುತ್ತದೆ.

ಸುಮಾರು ಏಳು ಕೋಟಿ ಜನಸಂಖ್ಯೆಯ ಹೆಚ್ಚು ಕಡಿಮೆ ಜಪಾನ್ ದೇಶದಷ್ಟು ವಿಸ್ತೀರ್ಣದ ವಿಶ್ವದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ಅಂಧಾಭಿಮಾನಿಗಳಲ್ಲದ ಉದಾರ ಮನಸ್ಸಿನ  ಈ ನಮ್ಮ ಕರ್ನಾಟಕ ರಾಜ್ಯವನ್ನು ಆಳುವವನು ಮುನ್ನಡೆಸುವವನು ಒಬ್ಬ ಮನುಷ್ಯನಾಗಿರಬೇಕು.

ಹೌದು,
ಇದನ್ನು ಕಲ್ಪಿಸಿಕೊಳ್ಳಲು ಬಹಳ ಜನರಿಗೆ ಸಾಧ್ಯವಾಗುವುದಿಲ್ಲ.
ಏಕೆಂದರೆ ಅವರಿಗೆ ಮನುಷ್ಯರೇ ಕಾಣುತ್ತಿಲ್ಲ. ಎಲ್ಲರೂ ಹುಟ್ಟಿನಿಂದಲೇ ಬಂದ TITLE ಗಳಿಂದಲೇ ಗುರುತಿಸಲ್ಪಡುತ್ತಾರೆ. ತಾವು ಸೃಷ್ಟಿಯ ಸ್ವತಂತ್ರ ಜೀವಿಗಳು ಎಂದು ಮರೆತು ಬಿಟ್ಟಿದ್ದಾರೆ. ಹುಟ್ಟಿದ ಕ್ಷಣವೇ ಅನೇಕ ಬಂಧನಗಳಿಂದ ಬಂಧಿಗಳಾಗುತ್ತಾರೆ.
                         ಅದರೆ ಈಗಲೂ ಕೆಲವು ಮನುಷ್ಯರಿದ್ದಾರೆ. ಈ ಎಲ್ಲವನ್ನೂ ಮೀರಿದವರಿದ್ದಾರೆ. ಅವರನ್ನು ಗುರುತಿಸಬೇಕಿದೆ. ಅವರಿಗೆ ಈ ಸುಂದರ ಪ್ರದೇಶವನ್ನು ಮುನ್ನಡೆಸುವ ಅವಕಾಶ ಕೊಡಬೇಕಾಗಿದೆ. ಮತಭಿಕ್ಷೆಬೇಡಿ ಜನರ ಭಾವನೆಗಳನ್ನು ಕೆರಳಿಸಿ ಸುಳ್ಳುಭರವಸೆ ನೀಡುವವರಿಗಿಂತ ನಾವೇ ಖುದ್ದಾಗಿ ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕಿದೆ.
                             ಆಗ ರಾಮರಾಜ್ಯ ಭೀಮರಾಜ್ಯ ಕಲ್ಯಾಣ ರಾಜ್ಯ ಖಂಡಿತ ಸಾಧ್ಯವಿದೆ. ಕಳ್ಳರಿಲ್ಲದ ವಂಚಕರಿಲ್ಲದ ಭ್ರಷ್ಟರಿಲ್ಲದ ದುರಹಂಕಾರಿಗಳಿಲ್ಲದ ನೆಮ್ಮದಿಯ ಕ್ರಿಯಾತ್ಮಕ ಚಟುವಟಿಕೆಗಳ ಸಾಧಕರ ನಾಡು ಇದಾಗುತ್ತದೆ.

ಅಹಹಹಹಾ.........
ನಿಮ್ಮ ಮನಸ್ಸಿನಾಳದ ಮುಸುನಗೆ ನಿಮ್ಮ ಮುಖದಲ್ಲಿ ನನಗೆ ಕಾಣುತ್ತಿದೆ. ಇದೊಂದು ಹಗಲುಗನಸು ಎಂಬದು ನಿಮ್ಮ ಅನಿಸಿಕೆ.
ಏಕೆ.......ಕೋಟ್ಯಾಂತರ ಮೈಲಿಗಳ ಮಂಗಳನಲ್ಲಿಗೆ ಮುನ್ನುಗ್ಗುತ್ತಿಲ್ಲವೇ -
ಸಾಗರದ ತಳವನ್ನು ಸ್ಪರ್ಶಿಸಿಲ್ಲವೇ - ಸಾವಿರಾರು ಕಿಲೋಮೀಟರ್ ವೇಗದಲ್ಲಿ ಶಬ್ದದ ವೇಗವನ್ನು ಮೀರಿ ಹಾರಾಡುವ ವಿಮಾನವನ್ನು ಕಂಡುಹಿಡಿದಿಲ್ಲವೇ,
ವಿಶ್ವವನ್ನೇ ಏಕಕಾಲದಲ್ಲಿ ಸಂಪರ್ಕಿಸುವ ಸಾಧನ ಸಂಶೋದಿಸಿಲ್ಲವೇ ,
ಇಡೀ ಭೂಮಂಡಲವನ್ನೇ ಕ್ಷಣಾರ್ಧದಲ್ಲಿ  ನಾಶ ಮಾಡುವ ಬಾಂಬ್ ಗಳನ್ನು ಸೃಷ್ಟಿಸಿಲ್ಲವೇ.
   ಇದೆಲ್ಲಾ              ಸಾಧ್ಯವಾಗಿರಬೇಕಾದರೆ ಕೇವಲ ನಮ್ಮದೇ ಮನಸ್ಸುಗಳನ್ನು ನಿಯಂತ್ರಿಸಿ ಸಾಧಿಸಬಹುದಾದ ಆಡಳಿತ ರೂಪಿಸಲು ಸಾಧ್ಯವಿಲ್ಲವೇ.
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಯಾದರೆ ಇದು ಸಾಧ್ಯ.
ಆ ನಿರೀಕ್ಷೆಯಲ್ಲಿ ........
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
 ಮನಸ್ಸುಗಳ ಅಂತರಂಗದ ಚಳವಳಿ

ಸಂಗ್ರಹ
ಸಿ.ಜಿ.ವೆಂಕಟೇಶ್ವರ
ಕೃಪೆ
ವಿವೇಕಾನ೦ದ. ಹೆಚ್.ಕೆ.

21 ಜನವರಿ 2018

*ಗಜ಼ಲ್*೨೧ (ಪ್ರೀತಿ ಇಲ್ಲದ ಮೇಲೆ)



*ಗಜ಼ಲ್*೨೧ (ಪ್ರೀತಿ ಇಲ್ಲದ ಮೇಲೆ)

ಚೆಲುವಿಲ್ಲ ಒಲವಿಲ್ಲ ಎಲ್ಲೆಡೆ ಹಣದ ಲೆಕ್ಕಾಚಾರ
ಪ್ರಕೃತಿಯೆಡೆ ಅತ್ಯಾಚಾರ ಲಾಭದ ಲೆಕ್ಕಾಚಾರ

ತಾಯ ಎದೆಹಾಲು ಡಬ್ಬಿ ಬಾಟಲ್ಗಳಲಿ ತುಂಬಿದೆ
ದಂಪತಿಗಳಲಿ ಮೇಲು ಕೀಳಿನ ಮುಗಿಯದ  ಲೆಕ್ಕಾಚಾರ

ಅನಾಥಾಶ್ರಮ  ವೃದ್ದಾಶ್ರಮ ಹೆಚ್ಚಳ ಎಲ್ಲೆಲ್ಲೂ
ಬಾಡಿಗೆ ತಾಯಿ‌ ಬಾಡಿಗೆ ಸಂಬಂಧದ ಲೆಕ್ಕಾಚಾರ

ಧನಕನಕಗಳು ಎಲ್ಲಾ  ಸಂಬಂಧಗಳಿಗೆ ಆಧಾರ
ದನಕರುಗಳು ಕೇವಲ ಮಾಂಸದ ಲೆಕ್ಕಾಚಾರ

ಭುವಿಯಲಿ ಅರಳುವ ಬಂಧಗಳ ಕೊರತೆ
ಸೀಜೀವಿಗೆ  ಪ್ರೀತಿ ತುಂಬಿದ ಜಗದ ಲೆಕ್ಕಾಚಾರ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 ಜನವರಿ 2018

ಯುವಕರು ಮತ್ತು ಉದ್ಯೋಗ (ಲೇಖನ)

*ಯುವಕರು ಮತ್ತು ಉದ್ಯೋಗ*

ಇಂದಿನ ಯುವ ಜನತೆಯು ಎಷ್ಟೇ ಓದಿದರೂ  ನಿರುದ್ಯೋಗದಿಂದ ಬಳಲುತಿರುತ್ತಾರೆ.ಇದಕ್ಕೆ ಹಲವಾರು ಕಾರಣಗಳಿವೆ, ಉದ್ಯೋಗದ ಕೊರತೆ ಇರಬಹುದು.ಕೆಲವೊಮ್ಮೆ ಉದ್ಯೋಗ ಲಬ್ಯವಿದ್ದರೂ  ಈಗಿನ ಕೆಲ  ಯುವಕರಲ್ಲಿ ಕೆಲಸ ಮಾಡುವ ಆಸಕ್ತಿಯು ಕಡಿಮೆ ಆಗಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ , ಹಾಗೂ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ಇರದೆ ಇರುವುದು ಸಹ ಕಾರಣವಾಗಿರುತ್ತೆ. ಇದರ ನಡುವೆ ತಮ್ಮ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗಗಳನ್ನು ಹುಡುಕುವುದರಲ್ಲೆ ಯುವಕರು ಕಾಲಹರಣ ಮಾಡುತ್ತಿದ್ದಾರೆ.
    ಉದ್ಯೋಗಂ ಪುರುಷ ಲಕ್ಷಣಂ,ಎನ್ನುವುದು ಹಳೆಯದಾದ ಮಾತು ಈಗ ಉದ್ಯೋಗಂ ಮಾನವ ಲಕ್ಷಣಂ ಎನ್ನುವಂತಾಗಿದೆ   ಪ್ರತಿಯೊಬ್ಬರೂ ಒಂದಲ್ಲ ಒಂದು ಕಾಯಕ  ಮಾಡಿದರೆ ನಮ್ಮ ಬಾಳು ಹಸನಾಗುವುದು ಬಹಳ ಯುವಕರು  ತಮಗೆ ಸಿಗುವ ಕೆಲಸಗಳಲ್ಲಿ ತೃಪ್ತಿಗೊಳ್ಳುವುದು ಬಿಟ್ಟು,ಬೇರೆ ಶಾಶ್ವತ ಉದ್ಯೋಗಿಗಳಿಗೆ ಪರದಾಡುತ್ತಾರೆ. ಇದು ತಪ್ಪಲ್ಲ ಆದರೆ ಕ್ರಮೇಣ ಕೆಲಸ ಮಾಡುತ್ತಾ ಹುನ್ನತ ಹುದ್ದೆಗಳ ಪಡೆದರೆ ಉತ್ತಮ
   
       ಕೆಲ ಯುವಕರು ತಾವು ಎಷ್ಟೇ ಸಂದರ್ಶನದಲ್ಲಿ ಗ ಭಾಗವಹಿಸಿದರೂ ಕೂಡ ಕೆಲಸ ಸಿಗದೆ ಖಿನ್ನತೆಯಿಂದ ಬಳಲುತಿರುತ್ತಾರೆ, ಅದರ ಬದಲು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಇಂದಿಲ್ಲಾ ನಾಳೆ ನನ್ನ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತೆ ಅನ್ನೋ ಆತ್ಮ ಬಲ ಹೊಂದಿರಬೇಕು.
ಮರಳಿ ಯತ್ನ ಮಾಡು ಎಂಬಂತೆ  ಸರ್ಕಾರಿ ಅಥವಾ ಖಾಸಗಿ ಯಾವದೇ ಕೆಲಸ ಮಾಡಲು ಸಿದ್ದರಿರಬೇಕು
       ಇತ್ತೀಚಿಗೆ ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ ಮೇಕ್ ಇನ್ ಇಂಡಿಯಾ ಮುಂತಾದ ಕಾರ್ಯ ಕ್ರಮಗಳ ಮೂಲಕ ಯುವಕರು ಹೆಚ್ಚಾಗಿ ಕೆಲಸವನ್ನು ಪಡೆಯಲು ತರಬೇತು ನೀಡುತ್ತಿದೆ
ಮುದ್ರಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲದ ನೆರವು ನೀಡುತ್ತಿದೆ ಇವನ್ನೆಲ್ಲಾ ಬಳಸಿಕೊಂಡು ನಮ್ಮ ಯುವ ಸಮೂಹ ಉದ್ಯೋಗ ಮಾಡಬೇಕು ತನ್ಮೂಲಕ ಭವ್ಯ ಭಾರತದ ನಿರ್ಮಾಣದ ಪಣ ತೊಡಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 ಜನವರಿ 2018

*ಪ್ರಜಾತಂತ್ರ ಗಣರಾಜ್ಯದಲ್ಲಿ ನಮ್ಮ ಜವಾಬ್ದಾರಿ*(ಲೇಖನ)

ಲೇಖನ

*ಪ್ರಜಾತಂತ್ರ ಗಣರಾಜ್ಯದಲ್ಲಿ
ನಮ್ಮ ಜವಾಬ್ದಾರಿ*

ನಾಲ್ಕಾರು ಜನ‌ ಒಂದೆಡೆ ಸೇರಿದರೆ ಮುಗಿಯಿತು "ಈ ಸರ್ಕಾರ ಸರಿಯಿಲ್ಲ ಆ ಸರ್ಕಾರ ಸರಿಯಿಲ್ಲ ಈ ಮುಖ್ಯಮಂತ್ರಿ ಸರಿ ಇಲ್ಲ ಆ ಮಂತ್ರಿ ಉಪಯೊಗ ಇಲ್ಲ ಈ ಎಂ ಎಲ್ ಎ ಬರೀ ಆಶ್ವಾಸನೆ ಕೊಡೋದೆ ಆಯ್ತು " ಈಗೆ ಪುಂಕಾನುಪುಂಕವಾಗಿ ಮಾತನಾಡಿ ವೀರಾವೇಶ ತೋರುವಲ್ಲಿ ಎಲ್ಲರೂ ನಾ ಮುಂದು ತಾ ಮುಂದು ಎಂದು‌  ಬೇರೆಯವರ ತೆಗಳಲು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮನೋಭಾವ ತೋರುವರ ಸಂಖ್ಯೆ ಹೆಚ್ಚಾಗಿದೆ.

ಪ್ರಜಾತಂತ್ರ ಗಣರಾಜ್ಯ ದಲ್ಲಿ  ಪ್ರಜೆಗಳ ಜವಾಬ್ದಾರಿ ಅಗಾಧ. ಅದು ಚುನಾವಣಾ ಕಾರ್ಯದಿಂದ ಹಿಡಿದು ನೀತಿ ನಿರೂಪಣೆಯ ವರೆಗೂ ವಿಸ್ತರಿಸಿದೆ .

ಚುನಾವಣಾ ಸಂದರ್ಭದಲ್ಲಿ ದೇಶದಲ್ಲಿ ಶೇಕಡಾವಾರು ನೂರು ಮತದಾನ ಸ್ವಾತಂತ್ರ್ಯ ಬಂದಾಗಿನಿಂದ ಆಗಿಲ್ಲ .ಶೇಕಡಾ ಎಪ್ಪತ್ತು ಮತದಾನವಾದರೆ ಅದೇ ದಾಖಲೆ  ಉಳಿದ ಮತದಾರರಿಗೆ ಜವಾಬ್ದಾರಿ ಇಲ್ಲವೆ ?ಇಂತವರು ನಾಯಕರ ರಾಜಕಾರಣಿಗಳ ಸರ್ಕಾರಗಳನ್ನು ಯಾವ ನೈತಿಕತೆಯಿಂದ ಟೀಕಿಸುತ್ತಾರೆ.?

ಇನ್ನೂ ಮತದಾನ ಮಾಡುವ ಮಹಾಪ್ರಭುಗಳ ಕಥೆ ಬೇರೆಯೇ ಇದೆ ಮತದಾನಕ್ಕೆ ಮುನ್ನ ಹಣ ಹೆಂಡ ಸೀರೆ ಮುಂತಾದ  ಆಮಿಷಗಳಿಗೆ ಬಲಿಯಾಗಿ ತಮ್ಮ ಮತ ಮಾರಿಕೊಂಡು ಮೊದಲ ಬಾರಿಗೆ ಭ್ರಷ್ಟಾಚಾರ ಬೆಳೆಯಲು ಕಾರಣರಾಗಿ ಮುಂದೆ ಇದೇ ಮತದಾರರು ತಮ್ಮ ನೇತಾರರ ತೆಗಳುವುದೆಷ್ಟು ಸರಿ?

*ಹಾಗಾದರೆ ನಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿ ಯಾಗಿ ನಿಭಾಯಿಸುವುದು ಹೇಗೆ*

* ಮುಂಬರುವ ಎಲ್ಲಾ ಚುನಾವಣೆಯಲ್ಲಿ ಎಲ್ಲರೂ ಮತ ಚಲಾಯಿಸುವ ಪ್ರತಿಜ್ಞೆ ಮಾಡೋಣ

* ಆಮಿಷಕ್ಕೆ  ಬಲಿಯಾಗದೇ ಮತ ಚಲಾಯಿಸೋಣ

* ಶಾಸನ ಮಾಡುವಾಗ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು  ನಮ್ಮ ನೀತಿ ನಿಯಮಗಳನ್ನು ನಾವೆ ರೂಪಿಸಿಕೊಳ್ಳಲು ಪಣ ತೊಡೋಣ

* ಸರಿಯಾಗ ಕಾರ್ಯ ನಿರ್ವಿಸದ ನಮ್ಮ ಪ್ರತಿನಿಧಿ ಗಳ ಹಿಂದಕ್ಕೆ ಕರೆಯುವ ಚಳುವಳಿ ರೂಪಿಸೋಣ

* ಕಾರ್ಯಾಂಗದ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡಿ ಆಡಳಿತವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಲು ಪ್ರಯತ್ನ ಮಾಡೋಣ

* ನ್ಯಾಯಾಂಗ ಮತ್ತು  ಕಾನೂನು ಗಳನ್ನು ಗೌರವಿಸೋಣ

*ಸರ್ಕಾರದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ವನ್ನು ಸಮಾಜದ ಅಭಿವೃದ್ಧಿ ಗೆ ಬಳಸಿ ಬೆಳೆಸೋಣ

ಈ ಮೇಲಿನ‌ ಸಂಕಲ್ಪ ದೊಂದಿಗೆ ಎಲ್ಲಾ ಭಾರತೀಯರು ಮುನ್ನೆಡದರೆ ಆಗ ಪರಿಣಾಮಕಾರಿ ಗಣತಂತ್ರದ ಮೂಲಕ ನಮ್ಮ ದೇಶ ಪ್ರಪಂಚದಲ್ಲಿ ಮಾದರಿ ಆಗುವುದರಲ್ಲಿ  ಸಂದೇಹವಿಲ್ಲ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ಜನವರಿ 2018

ಭಾವಗೀತೆ (ಪ್ರಾರ್ಥನೆ)

ಭಾವಗೀತೆ

*ಪ್ರಾರ್ಥನೆ*

ರವಿ ನೀನು ಬಾರೋ
ನಿನ್ನ ಮೊಗ ತೋರೋ

ಕಾಯತಿಹೆ ನಿನಗಾಗಿ
ಪೂಜಿಸುವೆ ಶಾಂತಿಗಾಗಿ
ಉದಯಿಸು ಕಾದಿರುವೆ
ಅರ್ಘ್ಯವನು ನೀಡಿರುವೆ

ಜಗದ ಶಕ್ತಿಯು ನೀನು
ಯುಗದ ಸಾಕ್ಷಿಯು ನೀನು
ಈಗಲೇ ದಯಮಾಡು
ಜೀವಿಗಳಿಗೆ ಕಳೆ ನೀಡು

ನಿನ್ನ ಬರುವಿಕೆಗಾಗಿ ಕಾದು
ಸಹನೆಯಿಂದಲಿ ನಿಂದು
ಕಣ್ತುಂಬಿಕೊಳ್ಳುವೆ ಈಗ
ಬಾ ತೋರೋ ನಿನ್ನ ಮೊಗ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*