30 ಡಿಸೆಂಬರ್ 2017

ಕನ್ನಡ ನಾಡು (ಭಾವಗೀತೆ)



ಭಾವಗೀತೆ

*ಕನ್ನಡ ನಾಡು*

ನೋಡು ಬಾ ಯಾತ್ರಿಕ ನಮ್ಮ ನಾಡಸಿರಿಯ
ಸುಂದರ ಮನೋಹರ  ಕರುನಾಡ  ಸಿರಿಯ

ಗಂಗ ಕದಂಬ ರಾಷ್ಟ್ರಕೂಟರು ಆಳಿದ ನಾಡು
ಸಂಗೀತ ನಾಟ್ಯ  ಸಾಹಿತ್ಯ ಕಲೆಗಳ ನೆಲೆವೀಡು
ಕಲೆ  ನಾಟಕ ಶಿಲ್ಪಕಲೆಗಳ ತವರೂರು ಇದು
ಆದಿಪಂಪ ಕುಮಾರವ್ಯಾಸರುದಿಸುದ ನಾಡಿದು

ಕೃಷ್ಣ ತುಂಗೆ ಕಾವೇರಿ ನೇತ್ರಾವತಿಯರ ತಾಣ
ತೇಗ ಹೊನ್ನೆ ಬೀಟೆ  ಗಂಧದ ಮರಗಳ ವನ
ನವಿಲು ಸಾರಂಗ ಹುಲಿ ಕರಡಿಯ ನೋಡಿ
ಸಹ್ಯಾದ್ರಿಯ ಸೊಬಗಿನ ಸುಂದರ ಮೋಡಿ

ಹಕ್ಕ ಬುಕ್ಕ ಕೃಷ್ಣದೇವರಾಯರಾಳಿದ ನಾಡು
ಕನಕ ಪುರಂದರ ದಾಸರ ಪದಗಳ ನೆಲೆವೀಡು
ಶಾಸ್ತ್ರೀಯ ನುಡಿ ಕನ್ನಡ ಭಾಷೆಯ ತವರೂರು
ದಾನಧರ್ಮಗಳಿಗೆ ಹೆಸರಾದ ಹಿರಿಯೂರು

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 ಡಿಸೆಂಬರ್ 2017

ಹನಿಗವನಗಳು (ಜೀವನ. ಕುವೆಂಪು ರವರಿಗೆ ಸಮರ್ಪಣೆ)


ಹನಿಗವನಗಳು

*೧*

*ಸೂತ್ರಧಾರ*

ಜೀವನವೊಂದು ನಾಟಕ ರಂಗ
ನಾವೆಲ್ಲ ಪಾತ್ರ ದಾರಿಗಳು
ಭಗವಂತ ಸೂತ್ರಧಾರ
ಸೂತ್ರ ಹರಿದರೆ
ಹೊಲಿಯಲು
ಉಪಯೋಗಕ್ಕೆ ಬರುವುದಿಲ್ಲ
ನಮ್ಮ ಸೂಜಿದಾರ

*೨*

*ದಾರಿ*

ಒಳ್ಳೆಯ ಮಾರ್ಗದಿ ನಡೆ
ಜೀವನ ಉತ್ತಮವಾಗುವುದು
ಎಂದು ಬುದ್ದಿಹೇಳಿದೆ
ಸಾರಿ ಸಾರಿ
ಕೇಳಲಿಲ್ಲ ಹಿಡಿದ ಅಡ್ಡದಾರಿ
ಪರಿಣಾಮ ಭಗವಂತ
ಬೇಗ  ತೋರಿದ
ಯಮಪುರಕ್ಕೆ ದಾರಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



ರಸ ಋಷಿಗೆ ನಮನ ( ಕುವೆಂಪುರವರು ಹುಟ್ಟು ಹಬ್ಬದ ಮತ್ತು ನನ್ನ ಬ್ಲಾಗ್ನ 20೦ ನೇ ಪೋಸ್ಟ್ ಸಂಭ್ರಮ)

*ರಸ ಋಷಿಗೆ ನಮನ*

ರಸಋಷಿಗೆ ನಮನ  ಕವಿರಾಜ ಇದೋ
ನಿಮ್ಮಾತ್ಮಕೆ ಸವಿಯ ನಮನ

ಕುಪ್ಪಳ್ಳಿ ನೆಲದಿ  ನಲಿಯುತಲಿ ಉದಿಸಿ
ಸಾಹಿತ್ಯದ ಸುಧೆಯ ನೀಡಿ
ಸಮರಸದ ಕವನ ಪ್ರಕೃತಿಯ ಶಿವನ
ವರ್ಣಿಸಿದೆ ಕಾಲ ಕಾಲಕೆ

ಬೋಧಕರ ಕಾರ್ಯ ಕವಿತೆಗಳ ರಚನೆ
ಎಡೆಬಿಡದೆ ಮಾಡುತ ನೀವು
ರಚಿಸಿದಿರಿ ಕಾವ್ಯ ಸೃಜಿಸಿದಿರಿ ನಾಟಕ
ಕಾದಂಬರಿ ಕತೃವು  ನೀವೆ

ಮಲೆನಾಡ ಕವಿಯೆ ಮದುಮಗಳ ಬರೆದೆ
ಮಹಾಕವಿ ರಾಮನ ನೆನೆದು
ತೇಜಸ್ವಿ ಪಿತನೆ ಓಜಸ್ಸು ಪಡೆದ
ಕನ್ನಡದ ಆಸ್ತಿ ನೀವು

ಯುಗದಕವಿ ತಾವು ಜಗದಕವಿ ನೀವು
ಅನಿಕೇತನ ಸಂದೇಶ ಕೊಟ್ಟು
ಜ್ಞಾನ ಪೀಠವ ಪಡೆದ ಜ್ಞಾನಿಗಳು ನೀವು
ವಿಶ್ವಮಾನವ ಸಂದೇಶ ಕೊಟ್ಟಿರಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




28 ಡಿಸೆಂಬರ್ 2017

ಜಲವೆಲ್ಲಿ?(ಹನಿಗವನ)

ಜಲವೆಲ್ಲಿ
ನೀರಿಲ್ಲ ಊರಿನಲಿ ಹೇಗಿರಲಿ ನಾ
ಹೊರಟಿರುವೆ ಹಿಡಿದು ಕೊಡಪಾನಾ
ವರತೆಯಲಿ ನೀರಿದ್ದ ಕಾಲವೊಂದಿತ್ತು
ಸಕಲಜೀವಿಗಳು ನಲಿದಾಡುತಿತ್ತು
ಅಂತರ್ಜಲವಿಂದು ಪಾತಾಳ ಸೇರಿದೆ
ಹಗ್ಗವಿಡಿದು ನೀರ ತರಲು ನಾ ಸಾಗಿದೆ

ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು
9900925529

ಹನಿಗವನ

ಹನಿಗವನ

*ಬೇಡಿಕೆ*

ಒಡಲ ಕೊಟ್ಟೆ  ನೀ ನನಗೆ ದೇವ
ಅನ್ನ ನೀಡದೆ ಕೊಟ್ಟೇಕೆ  ನೋವ
ನಾಯೀಗೀವ ಆಹಾರ  ನನಗಿಲ್ಲ
ಹಸುವಿನ  ಅನ್ನ ನನ್ನ ಹಸಿವಿಗಿಲ್ಲ
ನರರು ನನ್ನಸಿವ  ಹಂಗಿಸುತಿಹರು
ಸುರರು ನನಗೆಂದು ಅನ್ನವೀವರು?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
೯೯೦೦೯೨೫೫೨೯
Venkatesh.c.g9@gmail. Com