27 ಡಿಸೆಂಬರ್ 2017

ಕಣ್ಣುಗಳು (ಕವನ)

*ಕಣ್ಣುಗಳು*

ನನ್ನ ಮಕ್ಕಳ ಹೊತ್ತು ಹೊರಟಿರುವೆ
ಜೀವನದ ಬಟ್ಟೆಯನರಸಿ ನಡೆದಿರುವೆ
ಅಡ್ಡೆಯಲಿಹವು ನನ್ನಯ  ಕುಡಿಗಳು
ಅವುಗಳು ನನ್ನ ಬಾಳಿನ ಕಣ್ಣುಗಳು

ನನ್ನ ಕಂದಮ್ಮಗಳು ನನಗೆ ಭಾರವೆ
ಏರುಪೇರುಗಳಿರಲಿ ಸಲಹಿ ತೋರುವೆ
ಬಡತನ ಸಿರಿತನ ಕಂಡಿರುವೆ ನಾನು
ನಿಮಗೆ ಕಷ್ಟ ತಿಳಿಯದ ಹಾಗೆ ಸಾಕುವೆನು

ಹೆಣ್ಣು ನಾನೆಂಬ ಕೀಳರಿಮೆ ನನಗಿಲ್ಲ
ನನ್ನ ಕಂದಗಳ ಸಾಕಿ ತೋರಿಸುವೆನಿಲ್ಲಿ
ಜನರ ಅನುಕಂಪ ನನಗೆ ಬೇಕಿಲ್ಲ
ಪ್ರೋತ್ಸಾಹದ ಮಾತೆರಡು ಸಾಕಲ್ಲ

ಆಧುನಿಕ ಶ್ರವಣಕುಮಾರ ನಾನಲ್ಲ
ನನ್ನ ಮಕ್ಕಳ ಪೊರೆವುದ ನಿಲಿಸಲ್ಲ
ಬಾಳಿ ತೋರುವೆ ನಾನು ಜಗದಿ
ತಾಳಿ ಬದುಕುವೆ ಎಂದು ಮುದದಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಡಿಸೆಂಬರ್ 2017

ನಾಲ್ಕು ಹನಿಗವನಗಳು

*ಹನಿಗವನಗಳು*

*೧*

*ಆಟಿಕೆಗಳು*

ಆಟಿಕೆ ಕೊಳ್ಳಲು ಅಂಗಡಿಗೋದೆ
ಯಾವುದು ಕೊಳ್ಳಲು ತಿಳಿಯದಾದೆ
ಟೋಪಿ‌ ಕನ್ನಡಕ  ಬೊಂಬೆಗಳು
ಸಾಲದಾಗಿವೆ ನೋಡಲೆನ್ನ  ಕಂಗಳು
ಕೇಳಿ ಅವುಗಳ  ಬೆಲೆಗಳ ಹೌಹಾರಿದೆ
ಮುಂದೆ ಕೊಳ್ಳುಲು ತೀರ್ಮಾನಿಸಿದೆ

*೨*
*ನಲ್ಲ*

ನೀನು ಅನುಮತಿಸಿದರೆ
ಈಗಲೇ ಆಗುವೆನು
ನಾನು ನಿನ್ನ ನಲ್ಲ
ಅವಳಂದಳು
ನೀನವನಲ್ಲ


*೩*

*ಬೇಡಿಕೆ*

ಬಟ್ಟೆ ಒಗೆವ ಯಂತ್ರ ಕೊಡಿಸಲೇಬೇಕು
ಎಂದು ಕೇಳಿದಳು ನನ್ನವಳು
ತೊರುತ್ತಾ ಆವೇಗ
ನಾನು ಶಾಂತವಾಗಿ ಉತ್ತರಿಸಿದೆ
ಖಂಡಿತ  ಕೊಡಿಸುವೆ ಜಾರಿಯಾಗಲಿ
ವೇತನ ಆಯೋಗ

*೪*

*ಪ್ರೀತಿ*

ಚಳಿಯಿರಲಿ ಮಳೆಯಿರಲಿ
ನಿನ್ನೆ ಪ್ರೀತಿಸುವೆ
ಅವಳೆಂದಳು
ರವಿಯೂ ಇರಲಿ ಶಶಿಯೂ ಇರಲಿ
ನಿನ್ನನೂ ಪ್ರೀತಿಸುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 ಡಿಸೆಂಬರ್ 2017

ಹನಿಗವನ (ಭಾರತ ಮಾರ್ಗ ವಿಧಾತ) ವಾಜಪೇಯಿ ಅವರ ಜನ್ಮದಿನದ ನೆನಪಿಗಾಗಿ

*ಭಾರತಮಾರ್ಗ ವಿಧಾತ*

ಗೊತ್ತಿಲ್ಲದ ಇಂಗ್ಲೆಂಡ್ ನವನಿಗೆ
ರಾಷ್ಟಗೀತೆಯಲ್ಲಿ  ಹೇಳುವೆವು
ಭಾರತ ಭಾಗ್ಯವಿಧಾತ
ಸುವರ್ಣ ಚತುಷ್ಪತ ರಸ್ತೆ ಕೊಟ್ಟ
ನಮ್ಮ ವಾಜಪೇಯಿ ಯವರಿಗೆ
ಹೇಳಲು ಮರೆತಿರುವೆವು
ಭಾರತ ಮಾರ್ಗ ವಿಧಾತ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಎ.ಬಿ.ವಾಜಪೇಯಿ ರವರ ಸ್ಮರಣಾರ್ಥವಾಗಿ

ಹನಿಗವನ

*ಆಶಯ*

ನಿಲ್ಲಮ್ಮ ಮುಳ್ಳು ಕೀಳುವೆನು
ನಿನ್ನ   ನೋವ  ನೀಗುವೆನು
ಹೊತ್ತಿರುವೆ ಸಂಸಾರದ ನೊಗ
ಇಳಿಸುವೆ ಭಾರ ನಾ ನಿನ್ನ ಮಗ
ಬೆಳೆಸುವೆ ನನ್ನ ಮುದ್ದು  ತಂಗಿಯ
ಹಂಚುವೆ ನಮ್ಮವರಿಗೆ ಪ್ರೀತಿಯ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 ಡಿಸೆಂಬರ್ 2017

ಅನ್ನದಾತಗೆ ನಮಿಸೋಣ (ರೈತ ದಿನಾಚರಣೆಯ ಪ್ರಯುಕ್ತ ಕವನ)

*ಅನ್ನದಾತಗೆ ನಮಿಸೋಣ*

ಇವನೆ ನೋಡು ನಮ್ಮ ರೈತ ಅನ್ನ ನೀಡ್ವನು
ಬಿಸಿಲು ಮಳೆ ಲೆಕ್ಕಿಸದೆ ಹೊಲದಿ ದುಡಿವನು
ಹಿಗ್ಗದೇ ಜಗ್ಗದೇ ಮುಂದೆ ನುಗ್ಗಿ   ನಡೆವನು
ಯೋಗಿಯಾಗಿ ತ್ಯಾಗಿಯಾಗಿ ಬಾಳುತಿರುವನು

ಅವನ ಬೆಳೆಗೆ ಬೆಲೆಯು ಇಲ್ಲ ಸಾಲದಲಿರುವನು
ಮಧ್ಯವರ್ತಿ ಶೋಷಣೆ ಯಲಿ ನಲುಗುತಿರುವನು
ಅಂತರ್ಜಲ ಕಡಿಮೆಯಾಗಿ‌ ಕೊರಗುತಿರುವನು
ಎಲ್ಲರ ಸೇವೆಗೈದು ನರಳಿ  ಬಳಲುತಿರುವನು

ಒಳ್ಳೆಯ ಬೆಲೆ ಅವನ  ಬೆಳೆಗೆ ನಾವು ನೀಡೋಣ
ಗೌರವದಿ  ನಮಿಸಿ ಜೈ ಕಿಸಾನ್ ಎಂದು ಹೇಳೊಣ
ಕೃಷಿಯ ದೇಶದ ಬೆನ್ನೆಲುಬೆಂದು ಸಾರೋಣ
ನಮ್ಮ ರೈತ ನಮ್ಮ ಗೆಳೆಯ ಇವಗೆ ನಮಿಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*