14 ಡಿಸೆಂಬರ್ 2017

ಹನಿಗವನಗಳು (ದಾರಿ)

*ಹನಿಗವನಗಳು*

*೧*
*ಮನೆ*

ದಿಡೀರ್ ಶ್ರೀಮಂತ ರಾಗಲು
ಹಿಡಿವರು ಅಡ್ಡದಾರಿ ನೂರಾರು
ಕಟ್ಟಿಸುವರು ಮಹಾಮನೆ
ಕೊನೆಗೆ ಇವರ ಕೈ ಬೀಸಿ
ಕರೆವುದು ಸೆರೆಮನೆ !

*೨*

*ಮಾರಿ*

ನನ್ನವಳೆಂದಳು ಕಟ್ಟಿ ಒಂದು
ನಮ್ಮದೇ ಸ್ವಂತ ಮನೆ
ಹಿಡಿಯದೇ ಯಾವುದೇ
ಅಡ್ಡದಾರಿ
ನಾನಂದೇ ಕಟ್ಟುವೆ ಮನೆ
ನಿನ್ನ ಒಡವೆಗಳ
ಮಾರಿ !

*೩*

*ಹಾರ*

ಇವರು ಮಹಾನ್ ವ್ಯಕ್ತಿ!
ಹೋದಲ್ಲೆಲ್ಲಾ ಸನ್ಮಾನ
ಹೂವಿನ ಹಾರ
ಇವರ ಘನಂದಾರಿ ಕೆಲಸಕ್ಕೆ
ಇವರ ಕೈಬೀಸಿ ಕರೆದಿದೆ
ಪರಪ್ಪನ ಅಗ್ರಹಾರ!

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಡಿಸೆಂಬರ್ 2017

*ದೇವರು ನನ್ನ ಅನಿಸಿಕೆ*(ಲೇಖನ)

*ದೇವರು ನನ್ನ ಅನಿಸಿಕೆ*

ಪ್ರಪಂಚದ ಎಲ್ಲಾ ಕಾರ್ಯಗಳು ಒಂದು ಅಗೋಚರ ಶಕ್ತಿ ಯ ನಿಯಮಕ್ಕೆ ಮತ್ತು ನಿಯಂತ್ರಣ ಕ್ಕೆ ಒಳಪಟ್ಟಿರುವುದು ಸುಳ್ಳಲ್ಲ ಈ ವಿಶೇಷವಾದ ಶಕ್ತಿಯನ್ನು ಕೆಲವರು ಕೆಲವೊಂದು ಹೆಸರಿನಲ್ಲಿ ಕರೆದುಕೊಂಡಿದ್ದರೆ ಬಹುತೇಕರು ಹೇಳುವ ಹೆಸರೆ *ದೇವರು*
ದೇವರನ್ನು ವಿವಿಧ ಧರ್ಮದ ಆಧಾರದ ಮೇಲೆ ವಿವಿಧ ಹೆಸರುಗಳಿಂದ ಕರೆದರೂ ನಮ್ಮ ಅನುಕೂಲಕ್ಕೆ ಸಂಭೋದಿಸಿದರೂ ದೇವನೊಬ್ಬ ನಾಮ ಹಲವು ಎಂಬುದು ಸರ್ವವೇದ್ಯ
"ರಘುಪತಿ ರಾಘವ ರಾಜಾರಾಂ ,ಪತಿತಪಾವನ ಸೀತಾರಾಂ, ಈಶ್ವರ ಅಲ್ಲಾ, ತೇರೆ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್" ಎಂದು ಗಾಂಧೀಜಿಯವರು ದೇವರ ವಿವಿದ ನಾಮಾವಳಿ ಬೇರೆ ಇದ್ದರೂ ಪರಮಾತ್ಮ ಒಬ್ಬನೇ ಎಂದು ಪ್ರತಿಪಾದಿಸಿದರು. ದೇವರು ಕೇವಲ ಮಂದಿರ ಮಸೀದಿಗಳಲ್ಲಿ ಇಲ್ಲ ಬದಲಾಗಿ ನಾವು ಮಾಡುವ ಕಾರ್ಯ ದಲ್ಲಿ ದೇವರಿದ್ದಾನೆ "ದಿನಗಟ್ಟಲೆ ಮಂತ್ರ ಹೇಳುವ ,ಜಪತಪ ಮಾಡುವ ಕೋಣೆಯಲ್ಲಿ ದೇವರಿಲ್ಲ, ಬದಲಿಗೆ ಹರಿದ ಬಟ್ಟೆಗಳನ್ನು ಧರಿಸಿ ಹೊಲದಲ್ಲಿ ಹೂಳುವ ರೈತನ ಬಳಿ ,ಮಾಸಿದ ಅಂಗಿ ಧರಿಸಿ ರಸ್ತೆ ಕೆಲಸ ಮಾಡುವವನ ಬಳಿ ದೇವನಿರುವನು" ಎಂದು ನಮ್ಮ ಕವಿ ರವೀಂದ್ರ ನಾಥ್ ಠಾಕೂರ್ ರವರು ಹೇಳಿದಂತೆ ದೇವರನ್ನು ನಮ್ಮ ಕ್ರಮದಲ್ಲಿ ಕಾಣಬೇಕು ಇದನ್ನೇ ಭಗವದ್ಗೀತೆಯ*ಕರ್ಮ ಮಾರ್ಗ* ಎಂದಿರುವುದು .ಭಕ್ತಿಭಂಡಾರಿ ಬಸವಣ್ಣ ನವರು ಇದೇ ಅರ್ಥ ದಲ್ಲಿ‌"ಕಾಯಕವೇ ಕೈಲಾಸ" ಎಂದರು.  ಆಡಂಬರದ ಭಕ್ತಿ ಯನ್ನು ದೇವರು ಒಪ್ಪುವುದಿಲ್ಲ ಸ್ವಾಮಿ ವಿವೇಕಾನಂದರು ಹೇಳುವಂತೆ" ಜನತಾ ಸೇವೆಯೇ ಜನಾರ್ದನ ಸೇವೆ " ನಮ್ಮ ಶುದ್ದಮನಸ್ಸಿನಲ್ಲಿ ದೇವರ ಸ್ಮರಿಸಿ ಬೇಡಿದೊಡೆ ಅವ ನಮ್ಮ ಕೈಬಿಡಲಾರ ಅದಕ್ಕೆ ಉದಾಹರಣೆಗೆ ಬೇಡರ ಕಣಣಯ, ಭಕ್ತ ಸಿರಿಯಾಳ ಇತ್ಯಾದಿ ಉದಾಹರಣೆ ನೀಡಬಹುದು. ಇನ್ನೂ ಕೆಲ ಕವಿ ವಾಣಿ ಹೇಳಿದಂತೆ " ಮನೆಯೇ ಮಂತ್ರಾಲಯ ,ಮನಸೇ ದೇವಾಲಯ, ದೇವರೆಂದು ಪ್ರೇಮ ಸ್ವರೂಪ, " ಎಂಬಂತೆ ದೇವರು ಸದಾ ನಮ ಮೇಲೆ ದಯೆ ತೋರುವನು
ಹಿಂದೆ ಕೆಲ ಯೋಗಿಗಳು ಸಾಧು ಪುರುಷರು ಸಿದ್ದಿಯಿಂದ ದೇವರ ಸ್ಥಾನ ಪಡೆದು ಹರಸಿದ್ದರು ಇದನ್ನು ಬಂಡವಾಳ ಮಾಡಿಕೊಂಡ ಕೆಲ ಡೊಂಗಿ ಬಾಬಾ ಗಳನ್ನು ಜನರು ಕುರುಡರಂತೆ ಹಿಂಬಾಲಿಸುತ್ತಿರುವುದು ವಿಪರ್ಯಾಸ .ದೇವರ ಹೆಸರಲ್ಲಿ ನಮ್ಮ ನಮ್ಮಲ್ಲಿ ಜಗಳ ಆಡುವುದು ಸರಿಯಲ್ಲ . ನಾವೆಲ್ಲರೂ ಒಂದೆ ದೇವರ ಆರಾಧನೆ ಮಾಡಲು ವಿವಿಧ ಮಾರ್ಗ ಅನುಸರಿಸಿದರೂ ಅವನ ಕರುಣೆ ಎಲ್ಲರ ಮೇಲಿರಲಿದೆ
ಇನ್ನು ಮುಂದಾದರು ಪ್ರಬುದ್ಧ ರಾಗೋಣ
ದೇವರ ದಯೆ ಪಡೆಯೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಆರಾಧನೆ)

*ಹನಿಗವನಗಳು*

*೧*

*ರೋದಿಸುತ್ತಾರೆ*

ನಮ್ಮ ಜನ ಸಿನಿಮಾ ತಾರೆಯರು,
ಪತ್ರಕರ್ತರು, ಆಟಗಾರರ ಕುರುಡಾಗಿ
ಆರಾಧಿಸುತ್ತಾರೆ
ಅವರ ನಿಜ ಬಣ್ಣ ಬಯಲಾಗಿ
ಜೈಲು ಸೇರಿದಾಗ ಸುಮ್ಮನೇ
ರೋದಿಸುತ್ತಾರೆ


*೨*

*ಕಾಳಿಯಾಗುತ್ತಾಳೆ*

ನನ್ನವಳ ಬಂಗಾರ ,ಬೆಳ್ಳಿ.ವಜ್ರದ
ಆಭರಣಗಳಿಂದ ಅಲಂಕರಿಸಿ
ಆರಾಧನೆ ಮಾಡಿದರೆ
ಶ್ರೀದೇವಿಯಾಗುತ್ತಾಳೆ
ಬರೀ ಹೂಗಳು, ಅರಿಷಿಣ ,ಕುಂಕುಮ
ಇವುಗಳಿಂದ ಸರಳವಾಗಿ
ಆರಾಧಿಸಿದರೆ ಭದ್ರ
ಕಾಳಿಯಾಗುತ್ತಾಳೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

12 ಡಿಸೆಂಬರ್ 2017

ನನ್ನ ಖುಷಿ (ಶಿಶು ಗೀತೆ)

*ನನ್ನ ಖುಷಿ*

ನೀರು ಬೇಕು ನನಗೆ ಈಗ
ದಾಹ ನೀಗಲು
ಕುಡಿಯಬೇಕು ನಳದ ನೀರು
ಮನವ ತಣಿಯಲು

ಬಾಟಲಿಯ ನೀರು ಮುಚ್ಚಿ
ಚೀಲದಲಿಡುವೆನು
ಅಮ್ಮನ ಕಣ್ಣ ತಪ್ಪಿಸಿ  ನಳದ
ನೀರು ಕುಡಿವೆನು

ಬಿಸಿಯೊ ತಂಪೋ ನೀರ ಬಗ್ಗೆ
ನಾನು ಅರಿಯೆನು
ರಭಸದಿಂದ ಬರುವ ನೀರಿಗೆ
ಬೊಗಸೆ ಒಡ್ಡುವೆನು

ಯಾರು ಏನು ನೋಡುವರೆಂಬ
ಪರಿವೆ ನನಗಿಲ್ಲ
ನನ್ನ ಖುಷಿಯ ಅನುಭವಿಸುವೆ
ಎಂದು ಬಿಡಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (೪ನಲಿವಿನ ಹನಿಗಳು)

*೧*
*ವಜ್ರದುಂಗುರ*


ನಲಿಯುತ ನನ್ನ ಬಳಿ ಬಂದವಳು
ಕೇಳಿದಳು ವಜ್ರದುಂಗುರ
ನಾನು ಕೊಡಿಸದಿದ್ದಾಗ
ಉಲಿದಳು ಆಕೆ   ನಾನೊಬ್ಬ
ಪ್ರೀತಿಯ ಬೆಲೆ ತಿಳಿಯದ ಗಮಾರ

*೨*

*ನಲ್ಲ*

ನೋವು ನಲಿವಿನಲಿ ಜೊತೆಗಿರುವೆ
ಎಂದಿದ್ದ ನನ್ನ ನಲ್ಲ
ಮದುವೆಯಾಗು ಎಂದಾಕ್ಷಣ
ಕಾಣಿಸದೇ ಮರೆಯಾಗಿ
ಕೈ ಕೊಟ್ಟನಲ್ಲ !

*೩*

*ಸುಲಿಯುತಿಹಳು*

ಮದುವೆಗೆ ಮೊದಲು ನನ್ನವಳು
ನುಲಿಯುತ್ತಿದ್ಸಳು
ಮದುವೆಯಾದ ಹೊಸದರಲ್ಲಿ
ನಲಿಯುತ್ತಿದ್ದಳು
ಈಗ ಕೊಳ್ಳುಬಾಕಳಾಗಿ ನನ್ನ ಜೇಬ
ಸುಲಿಯುತಿಹಳು !

*೪*

*ಸಮ್ಮಿಶ್ರ ಸರ್ಕಾರ*

ಕೈಯಲಿ ಕಮಲ  ಹಿಡಿದ ಹುಡುಗ
ನಾನು ಬಿ.ಜೆ ಪಿ ಯವನು ನನ್ನ
ಮದುವೆಯಾಗೆಂದ ಅವಳ ಬಳಿಸಾರಿದ
ಸರಸರ
ನಾನು ಕಾಂಗ್ರೆಸ್ ನವಳು ಆಗುವುದಿಲ್ಲ
ಎಂದು ಅವಳು ತೋರಿದಳು ನಕಾರದ
ಕರ
ಪವಾಡ ಎಂಬಂತೆ ಈಗ ನಡೆಯುತ್ತಿದೆ
ಅವರಿಬ್ಬರ ಸಂಸಾರದ ಸಮ್ಮಿಶ್ರ
ಸರ್ಕಾರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*