27 ನವೆಂಬರ್ 2017

ಪ್ರೇರಣೆ (ಕವನ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಧಾಟಿಯಲ್ಲಿ)

*೧*

*ಪ್ರೇರಣೆ*

(ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಧಾಟಿಯಲ್ಲಿ)

ಮನವು ಹೇಳುತೈತೆ ಮತ್ತೆ ಹೇಳುತೈತೆ
ನೀನೆ ಧನ್ಯನು ಎಂದು.||೨||

ಹನಿಯನು ಸೇರಿ ಮಾನವನು ತಣಿದು
ಹಿರಿಯರ ಸ್ನೇಹ ಪ್ರೀತಿಯ ಪಡೆದು
ಕಲಿಯುತಲಿರುವೆ ನಲಿಯುವತಲಿರುವೆ
ನಾನು ಧನ್ಯನು|
ಕವನಗಳೆ ಇರಲಿ ಗೀತೆಗಳೆ ಇರಲಿ
ಎಂದೂ ಬರೆವೆನು ನಾನು ಎಂದೂ ಬರೆವನು .|

|ಮನವು ಹೇಳುತೈತೆ|

ಗೀತೆಯ ಹೇಳಿದ ಕೃಷ್ಣನು ಇಲ್ಲಿ ಸಾರಥಿಯಾಗಿಯನು .
ನಮ್ಮ ಸ್ನೇಹಿತನಾಗಿಹನು
ತಂಪನ್ನೀವ ಚಂದಿರನಿಲ್ಲಿ ಬೆಳಕ ನೀಡುವನು
ನಮಗೆ ಬಲವ ನೀಡಿಹನು .
ಎಲ್ಲಾ ಸೇರಿ ಬಳಗ ಕಟ್ಟಿ ಸೇವೆಗೆ ನಿಂತಿಹರು
ತಾನು ಬೆಳೆದು ಇತರರು ಬೆಳೆಯಲು
ಪಣವ ತೊಟ್ಟಿಹರು
ಜೊತೆಗಿರಿ ನೀವು ಹಿರಿಯರ ಹಾಗೆ
ಬೆಳೆವೆವು ನಿಮ್ಮ ನೆರಳಲೆ ಹಾಗೆ ,
ಹನಿಯನು ಸೇರಿದ ನಾನು ಪುನೀತ ,
ಬರೆಯುವೆ ನಗು ನಗುತಾ ||

|ಮನವು ಹೇಳುತೈತೆ|

ತಾವು ಬರೆದು ಇತರರು ಬರೆಯಲು
ಸ್ಪೂರ್ತಿಯ ನೀಡಿಹರು .
ನಮಗೆ ಸ್ಪೂರ್ತಿಯಾಗಿಹರು.
ಚಿಂತಕರಿಂದ ಕೂಡಿರುವಂತಹ ಚಾವಡಿ ಇಲ್ಲಿದೆ
ಚಿಂತನ ಮಂತನ ನಡೆದಿದೆ .
ಒಂದು ಹನಿಯು ಮತ್ತೊಂದು ಹನಿಗೆ
ಪ್ರೇರಣೆ ನೀಡಿಹವು ,
ವಿವಿಧ ಪ್ರಕಾರದ ಸಾಹಿತ್ಯ ಕೃಷಿಯು ನಡೆದಿಹುದಿಲ್ಲಿ ,
ಹನಿಯನು ಅಂದು ಸೇರಿದೆ ನಾನು
ಮನದ ಭಾವನೆ ಹಂಚಿದೆ ಇಲ್ಲಿ
ಕೃಷ್ಣ, ಚಂದಿರ ಇರುವವರಗೆ ಹನಿಯನು ತೊರೆಯೆನು ನಾ
ಹನಿಹನಿಇಬ್ಬನಿ ತೊರೆಯನು ನಾ |

ಕವನಗಳೆ ಇರಲಿ ಗೀತೆಗಳೆ ಇರಲಿ
ಎಂದೂ ಬರೆವೆನು ನಾನು ಎಂದು ಬರೆವೆನು |

|ಮನವು ಹೇಳುತೈತೆ|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ನವೆಂಬರ್ 2017

ಹನಿಗವನ (ಸಾಲುಮರದ ತಿಮ್ಮಕ್ಕ)

ಚಿತ್ರ ಹನಿಗವನ

*ಪೂಜೆ*

ಮಾಡೋಣ ಪೂಜೆ ಪರಿಸರ ಮಾತೆಗೆ
ತೋರೋಣ ಕಾಳಜಿ ಪ್ರತಿ  ಜೀವಿಗೆ
ಬರೀ ಮಾಡಿದರೆ ಸಾಲದು ಪೂಜೆ
ಆಗೋಣ ಪ್ರಜ್ಞಾವಂತ  ಪ್ರಜೆ
ಇಂದು ನಾವು ಸಸಿ ನೆಡೋಣ
ಮುಂದೆ ನಮ್ಮ ರಕ್ಷಿಸಿಕೊಳ್ಳೋಣ
ಕೇಳಿ ನಾ ಹೇಳುವೆ ನಿಮ್ಮಕ್ಕ
ನಿಮ್ಮ ಸಾಲುಮರದ ತಿಮ್ಮಕ್ಕ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಹೆಜ್ಜೆ)

ಹನಿಗವನಗಳು
*೧*
*ಗಂಟು*

ನಮ್ಮ ಮದುವೆಯಲ್ಲಿ
ಏಳು ಹೆಜ್ಜೆ ಬೇಡ ನಲ್ಲೆ
ಏಳು ಬೀಳು
ಇರಲಿ ಎಂಟು
ಅವಳೆಂದಳು
ಬೇಡ ನನಗೆ ಎಂಟು
ನನಗೆ ಗೊತ್ತು ಯಾವಾಗಲೂ
ನಿಮ್ಮ ಮುಖ ಗಂಟು

*೨*
*ಗುಂಡು*

ತಿರುಪತಿಯಲ್ಲಿ ಹೆಜ್ಜೆ ಹೆಜ್ಜಗೆ
ಕಂಡಲ್ಲಿ ಗುಂಡು
ನಮ್ಮೂರ ದಾರಿಯಲೂ
ಎಡತಾಗುವನು
ಗುಂಡಿನ ಗಂಡು

*೩*
*ವಿಶ್ರಾಂತಿ*

ನಿಂತಹೆಜ್ಹೆಯಲಿ ನಿಂತಿರುವೆ
ಎಷ್ಟೋ ವರ್ಷಗಳಿಂದ
ಕುಳಿತುಕೊಂಡು ವಿಶ್ರಾಂತಿ
ತೆಗೆದುಕೊ ಗೋವಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 ನವೆಂಬರ್ 2017

*ಕಿರು ಕಥೆ* ದಾನಿ (ನೈಜ ಘಟನೆ ಆದಾರಿತ)

*ಕಿರು ಕಥೆ*(ನೈಜ ಘಟನೆ ಆದಾರಿತ)

ರಾಜ್ಯದ ಆಗರ್ಭ ಶ್ರೀಮಂತರಾದ ಹನುಮಂತರಾಜು ಅವರು ದೇವಾಲಯಕ್ಕೆ ಬರುವ ಸುದ್ದಿ ತಿಳಿದು ದೇವಾಲಯದ ಆಡಳಿತ ಮಂಡಳಿಯ ಎಲ್ಲಾ ಪದಾದಿಕಾರಿಗಳು ಸಕಲ ಸಿದ್ದತೆ ಮಾಡಿಕೊಂಡು , ದೇವಾಲಯದ ಮುಂದಿರುವ ಭಿಕ್ಷುಕರು ,ಹಣ್ಣು,ಹೂ ಮಾರುವವರು ,ಎಲ್ಲರನ್ನೂ ಜಾಗ ಖಾಲಿ ಮಾಡಿಸಿ ಅತಿಥಿ ಆಗಮನಕ್ಕೆ ಕಾದರು.
ಪೂಜೆ ಮುಗಿದ ನಂತರ ಆಡಳಿತ ಮಂಡಳಿಯ ಸದಸ್ಯರು ದೇವಾಲಯದ ಜೀರ್ಣೋದ್ದಾರಕ್ಕೆ ಹನುಂತರಾಜು ಅವರಿಗೆ ಬೇಡಿಕೆ ಸಲ್ಲಿಸುತ್ತಾ "ದೇವಾಲಯದ ಗರ್ಭಗುಡಿಯು ಮಳೆ ಬಂದರೆ ಸೋರುತ್ತದೆ ಆದ್ದರಿಂದ ದಯಮಾಡಿ ಒಂದು ಲಕ್ಷ ನೆರವು ನೀಡಿದರೆ ಅನುಕೂಲಕರ ಆಗುವುದು" ಎಂದರು ಈ ಮಾತನ್ನು ಕೇಳಿ "ಆಯಿತು ನೋಡೋಣ "ಎಂದು ಕಾರು ಏರಿ ಹೊರಟೇ ಬಿಟ್ಟರು ಪುಣ್ಯಾತ್ಮರು.
ದೂರದಲ್ಲಿ ಇದನ್ನೆಲ್ಲಾ ಗಮನಿಸುತ್ತಿದ್ದ ಶ್ರೀದೇವಮ್ಮ ಎಂಬ ೮೦ ವರ್ಷದ ವೃದ್ದೆ ಒಂದು ತುಂಬಿದ ಗೋಣಿ ಚೀಲ ತಂದು ಆಡಳಿತ ಮಂಡಳಿಯ ಮುಂದಿಟ್ಟರು. ಇದನ್ನು ನೋಡಿ ಮುಖ ಸಿಂಡರಿಸಿಕೊಂಡ ಅವರು" ಏ ಮುದುಕಿ ಆಚೆ ಹೋಗು "ಎಂದು ಗದರಿದರು .ಆ ಮುದುಕಿ ವಿನಮ್ರತೆಯಿಂದ ಈ ಚೀಲದಲ್ಲಿ ಹಣವಿದೆ ಆಂಜನೇಯಸ್ವಾಮಿ ಗರ್ಭಗುಡಿಯ ರಿಪೇರಿ ಮಾಡಿಸಿ ಎಂದಾಗ ಎಲ್ಲಾ ತಬ್ಬಿಬ್ಬಾಗಿ ಆಶ್ಚರ್ಯಕರವಾಗಿ "ಈ ಭಿಕ್ಷುಕಿಯ ಬಳಿ ಎಷ್ಟು ಮಹಾ ಹಣವಿರಬಹುದು?" ಎಂದು ಮಾತಾಡಿಕೊಂಡು ಎಣಿಸಿದಾಗ ೨ಲಕ್ಷ ಆಗಿತ್ತು ಅದನ್ನು ದೇವಾಲಯಕ್ಕೆ ಸಮರ್ಪಿಸಿ ಧನ್ಯತಾ ಭಾವದಿಂದ ದೇವರ ಪ್ರಸಾದ ಸ್ಚೀಕರಿಸಿ ಹೊರನಡೆದಳು ಅಲ್ಲಿದ್ದವರು ಪ್ರಶ್ನಿಸಿ ಕೊಂಡರು "ಯಾರು ಭಿಕ್ಷುಕರು?" ಇದನ್ನು ನೋಡಿ ದೇವಾಲಯದಲ್ಲಿ ಆಂಜನೇಯಸ್ವಾಮಿ ನಸುನಕ್ಕರು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನ್ಯಾನೋ ಕಥೆ (ಮುಗುಳ್ನಗು)

*ನ್ಯಾನೋ ಕಥೆ*

*ಮುಗುಳ್ನಗು*

ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಬುದ್ದಿ ಜೀವಿಯೊಬ್ಬರು "ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ ನಾವೆಲ್ಲರೂ ಕಚ್ಚಾಡುತ್ತಿದ್ದೇವೆ...."ಹೀಗೆ ಒಂದು ಗಂಟೆ ಭಾಷಣ ಮಾಡಿದರು. ನಿರೂಪಕಿ "ಈಗ ವೇಷಭೂಷಣ ಸ್ಪರ್ಧೆ ಮೊದಲಿಗೆ ಶ್ರೀ ರಾಮನ ಪಾತ್ರದಲ್ಲಿ ಇಸ್ಮಾಯಿಲ್ ಜಬೀಉಲ್ಲಾ .ಎ.ಪಿ.ಜೆ ಅಬ್ದುಲ್ ಕಲಾಂ ಪಾತ್ರದಲ್ಲಿ ಸುರೇಶ್...."ಕೊನೆಯದಾಗಿ ಬಂದ ಗೌತಮ ಬುದ್ದನ ಪಾತ್ರದಾರಿಯು ಮುಗುಳ್ನಗುತ್ತಿದ್ದನು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*