31 ಅಕ್ಟೋಬರ್ 2025

ಕರುನಾಡ ಕಣ್ಮಣಿಗಳು.. ಭಾಗ ೧ ಸಿದ್ದಪ್ಪ ಕಂಬಳಿ

 


ಕರುನಾಡ ಕಣ್ಮಣಿಗಳು..

ಭಾಗ ೧

ಸಿದ್ದಪ್ಪ ಕಂಬಳಿ





ಕರ್ನಾಟಕದ ಏಕೀಕರಣದ ಕನಸು ಕಂಡು ಆ ನಿಟ್ಟಿನಲ್ಲಿ ಹೋರಾಟ ಮಾಡಿದ ಅನೇಕ ಮಹನೀಯರಲ್ಲಿ ಸಿದ್ದಪ್ಪ ಕಂಬಳಿ ಕೂಡಾ ಒಬ್ವರು. ನಮ್ಮ ನಾಡಿನ ಜನರ ಶಿಕ್ಷಣಕ್ಕಾಗಿ ಅನೇಕ  ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಸಿದ್ದಪ್ಪ ನವರನ್ನು ಇಂದು ನಾವೆಲ್ಲರೂ ಕೃತಜ್ಞತೆಯಿಂದ ನೆನೆಯಬೇಕಿದೆ.

ತೋಟಪ್ಪ ಮತ್ತು ಗಂಗಮ್ಮ ದಂಪತಿಗಳ ಮಗನಾಗಿದ್ದ ಸಿದ್ದಪ್ಪ ರವರು 1882ರಲ್ಲಿ ಜನಿಸಿದರು. ಈ ದಂಪತಿಗಳು ಕಂಬಳಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಶ್ರೀ ಸಿದ್ಧಾರೂಢರ ಆಶೀರ್ವಾದದಿಂದ ಸಿದ್ದಪ್ಪ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಮತ್ತು ಸಮಾಜದ ಬಡ ವರ್ಗಗಳಿಗೆ ಸೇವೆ ಸಲ್ಲಿಸುವಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಾಗಿ ವಿಕಸನಗೊಂಡರು. ಹುಬ್ಬಳ್ಳಿ ಮತ್ತು ಧಾರವಾಡದ ಕನ್ನಡ ಮಾತನಾಡುವ ಪ್ರದೇಶಗಳಲ್ಲಿಯೂ ಮರಾಠಿ ಪ್ರಾಬಲ್ಯ ಹೊಂದಿದ್ದ ಸಮಯದಲ್ಲಿ, ಸಿದ್ದಪ್ಪ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಐತಿಹಾಸಿಕ ಪಟ್ಟಣವಾದ ಲಕ್ಕುಂಡಿಯಲ್ಲಿ ಮುಗಿಸಿದರು. ನಂತರ ಧಾರವಾಡದಲ್ಲಿ ಪ್ರೌಢಶಾಲೆಗೆ ಹೋಗಿ ಪುಣೆಯಲ್ಲಿ ಪದವಿ ಪಡೆದರು. ಅವರು ಬಾಂಬೆಯ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು  ಪ್ರಸಿದ್ಧ ವಕೀಲರಾದರು. ಕಾಲ ಕಳೆದಂತೆ ಅವರು ದೀನದಲಿತರ ಪರವಾಗಿ ಹೋರಾಡಿದರು.  ಅನೇಕ ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕಂಬಳಿಯವರು
1917 ರಲ್ಲಿ  ಆಗಿನ  ಹುಬ್ಬಳ್ಳಿ  ಪುರಸಭೆಯ ಸದಸ್ಯರಾಗಿ ಆಯ್ಕೆಯಾದರು. 1921 ರಲ್ಲಿ CMC ಯ ಕಾನೂನು ಸಲಹೆಗಾರರಾದರು.ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಮಂಡಳಿಯ ಅಧ್ಯಕ್ಷರಾಗಿ ಜಾಗೂ  ಬಾಂಬೆ ಪ್ರಾಂತೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಶಿಕ್ಷಕರ ತರಬೇತಿ ಅಗತ್ಯ ಕಂಡ ಅವರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಕರ ತರಬೇತಿ ಕಾಲೇಜನ್ನು ಸ್ಥಾಪಿಸಿದರು. ಆದರೆ, ಸರ್ಕಾರವು ಕಠಿಣ ಕ್ರಮಗಳನ್ನು ಉಲ್ಲೇಖಿಸಿ 1922 ರಲ್ಲಿ ಅದನ್ನು ಮುಚ್ಚಿತು. ಕಾಲೇಜನ್ನು ಮತ್ತೆ ತೆರೆಯುವಂತೆ ಕಂಬಳಿಯವರು ನೋಡಿಕೊಂಡರು. 
ಹರಿದು ಹಂಚಿಹೋಗಿದ್ದ ನಮ್ಮ ನಾಡಿನ ಎಕೀಕರಣ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿದ ಅವರು
1926 ರಲ್ಲಿ ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಆಗಿನ  ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಅವರ ಕರ್ತವ್ಯ, ಕಾರ್ಯವೈಖರಿ, ಅಧ್ಯಯನಶೀಲತೆ ಮತ್ತು ಸಮರ್ಪಣೆಯಿಂದ ಬ್ರಿಟಿಷರು ಬೆರಗಾದರು. ವೆಚ್ಚವನ್ನು ಉಳಿಸಲು ಸರ್ಕಾರ ಧಾರವಾಡದ ಕರ್ನಾಟಕ ಕಾಲೇಜನ್ನು ಮುಚ್ಚಲು ಯೋಜಿಸುತ್ತಿತ್ತು ಆದರೆ ಕಾಲೇಜು ಮುಚ್ಚಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಂಬಳಿಯವರು  ಕಠಿಣ ನಿಲುವು ತೆಗೆದುಕೊಂಡರು.
ಈ ಕಾಲೇಜನ್ನು ಸರ್ಕಾರಿ ನಿಧಿಯಿಂದ ಸ್ಥಾಪಿಸಲಾಗಿಲ್ಲ, ಬದಲಾಗಿ ಜನರ ಕೊಡುಗೆಯಿಂದ ಸ್ಥಾಪಿಸಲಾಗಿದೆ ಎಂದು ಹೇಳುವ ಮೂಲಕ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಕಾಲೇಜು ಮುಚ್ಚಿದರೆ ಜನರು ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದರು. ಅವರ ಒತ್ತಾಯದ ಮೇರೆಗೆ ಸರ್ಕಾರ ಕಾಲೇಜನ್ನು ಮುಚ್ಚುವ ಕ್ರಮವನ್ನು ಕೈಬಿಟ್ಟಿತು. ನಂತರದ ದಿನಗಳಲ್ಲಿ ಈ ಸಂಸ್ಥೆಯು ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಪ್ರಗತಿ ಸಾಧಿಸಿತು. 


ಕರ್ನಾಟಕದ ಏಕೀಕರಣವು ಸಿದ್ದಪ್ಪರವರ ಬಹುಕಾಲದ ಕನಸಾಗಿತ್ತು. ದುರದೃಷ್ಟವಶಾತ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು.  ಆರು ವರ್ಷಗಳ ಅನಾರೋಗ್ಯದ ನಂತರ ಏಪ್ರಿಲ್ 1956 ರಲ್ಲಿ ನಿಧನರಾದರು. ಕೆಲವು ತಿಂಗಳುಗಳ ನಂತರ, ನವೆಂಬರ್ 1956 ರಲ್ಲಿ ಏಕೀಕೃತ ಕರ್ನಾಟಕ ಉದಯವಾದಾಗ ಅವರ ಕನಸು ನನಸಾಗಿತ್ತು.  ಆದರೆ ಅದನ್ನು ನೋಡಲು ಅವರಿರಲಿಲ್ಲ.
ಇಂದಿನ ‌ಕಲುಷಿತ ರಾಜಕೀಯ ವ್ಯವಸ್ಥೆಯನ್ನು ನೀಡಿದಾಗ
ರಾಜಕೀಯ ಪ್ರವೇಶಿಸಲು ಯೋಜಿಸುತ್ತಿರುವ ಯುವಕರಿಗೆ ಕಂಬಳಿಯವರು  ನೀಡಿದ ಸಂದೇಶವು ಗಮನ ಸೆಳೆಯುತ್ತದೆ. "ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪೋಷಿಸಲು ನಿಮಗೆ ಸಾಧನವಿದ್ದರೆ ಮಾತ್ರ ನೀವು ರಾಜಕೀಯಕ್ಕೆ ಧುಮುಕಿ. ಇಲ್ಲದಿದ್ದರೆ, ರಾಜಕೀಯ ಪ್ರವೇಶಿಸುವ ಕನಸು ಕಾಣಬೇಡಿ. ಸುರಕ್ಷಿತ ಮತ್ತು ಸುಸ್ಥಿರ ಆದಾಯದ ಮೂಲವಿಲ್ಲದ ರಾಜಕಾರಣಿ ಭ್ರಷ್ಟನಾಗುತ್ತಾನೆ" ಅವರ ಮಾತುಗಳು ಎಷ್ಟು ಸತ್ಯ ಎಂಬುದಕ್ಕೆ ಇಂದಿನ ರಾಜಕಾರಣಿಗಳೇ ಜೀವಂತ ಸಾಕ್ಷಿ.



ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು  ಸಿದ್ದಪ್ಪ ಕಾಂಬ್ಳಿಯವರ ಪ್ರತಿಮೆಯನ್ನು ಸ್ಥಾಪಿಸಿದೆ. ರಸ್ತೆಯೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಿದೆ. ಧಾರವಾಡದ ಕರ್ನಾಟಕ ಕಾಲೇಜಿನ ಆವರಣದಲ್ಲಿ ಕಾಂಬ್ಳಿಯವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
 
ಇಂತಹ ಮಹಾನ್ ನಾಯಕರ ಆದರ್ಶಗಳನ್ನು ನಮ್ಮ ಯುವಕರು ಇಂದು ಮೈಗೂಡಿಸಿಕೊಳ್ಳಲಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

30 ಅಕ್ಟೋಬರ್ 2025

ಉಸಿರುಗಟ್ಟುವ ವಾತಾವರಣ ತ್ಯಜಿಸಿ ಉಸಿರಾಡೋಣ. (ಲೇಖನ)

 


ಉಸಿರುಗಟ್ಟುವ ವಾತಾವರಣ ತ್ಯಜಿಸಿ ಉಸಿರಾಡೋಣ.


ನಾವು ಕೊಳ್ಳುಬಾಕ ಸಂಸ್ಕೃತಿಯ ದಾಸರಾಗಿ ವಿವಿಧ ಆನ್ಲೈನ್ ಪ್ಲಾಟ್ ಫಾರ್ಮ್ ಮೂಲಕ ಹಬ್ಬ, ಹುಟ್ಟು ಹಬ್ಬ, ಮದುವೆ, ಮುಂಜಿ   ಹೀಗೆ ವಿವಿಧ ಕಾರಣದಿಂದಾಗಿ ಬೇಕಿದ್ದು ಬೇಡವಾದ್ದು  ಖರೀದಿಸಿ  ನಮ್ಮ  ಬೀರುಗಳು,ವಾರ್ಡ್ ರೋಬ್ ಗಳು ತುಂಬಿ ತುಳುಕುವಷ್ಟು ಶಾಪಿಂಗ್ ಮಾಡುತ್ತೇವೆ.ಹಣ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಬಳಸಿಯಾದರೂ ಕೊಳ್ಳುತ್ತೇವೆ.  ಕೊಂಡ ವಸ್ತುಗಳನ್ನು ಮನೆಯಲ್ಲಿ ಪೇರಿಸಿಕೊಂಡು   ಇ ಎಂ ಐ ಕಟ್ಟುತ್ತಾ, ಸಾಲ ತೀರಿಸುವ ಟನ್ಷನ್ ನಲ್ಲಿ ಕೆಲವೊಮ್ಮೆ ಉಸಿರುಗಟ್ಟಿದ ವಾತಾವರಣದಲ್ಲಿ ಜೀವಿಸುತ್ತೇವೆ. ಮಾಲ್ ಸಂಸ್ಕೃತಿ ಇದಕ್ಕೆ ಪ್ರಚೋದನಕಾರಿ. ಹಾಗೆಂದ ಮಾತ್ರಕ್ಕೆ ನೀವು ಕಂಜ್ಯೂಸ್ ಆಗಿ ಎಂತಲೂ ನಾನು ಹೇಳುವುದಿಲ್ಲ.

ಬೇಕಾದ್ರೆ ಉಪಯೋಗಕ್ಕೆ ಎನ್ನುವ ಡಬ್ಬಿಗಳು, ನೆನಪಿಗೂ ಬರದ ಹಳೆಯ ಸ್ಮರಣಿಕೆಗಳು. ನಾವು ಖರೀದಿಸುತ್ತೇವೆ. ಸಂಗ್ರಹಿಸುತ್ತೇವೆ.ಅಪ್‌ಗ್ರೇಡ್ ಮಾಡುತ್ತೇವೆ.ಆದರೆ   ಕೊನೆಗೆ  ಯಾವುದೋ ನಮಗಿಷ್ಟದ ಹಳೆ  ಶರ್ಟ್ ಹುಡುಕಿ ಇದೊಂದೇ ಸಾಕು ಎಂದು ಹಾಕಿಕೊಂಡು ನಡೆದುಬಿಡುತ್ತೇವೆ. ಇವೆಲ್ಲವುಗಳ ಬಗ್ಗೆ
ಜೆಮ್ಸ್ ವಾಲ್ಮನ್ ರವರು “Stuffocation”  ಎಂಬ ಪುಸ್ತಕದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ.

ನಾವೆಲ್ಲರೂ ಸಂತೋಷವನ್ನು ವಸ್ತುಗಳನ್ನು ಹೆಚ್ಚು ಗುಡ್ಡೇ ಹಾಕುವುದರಲ್ಲಿ ಬೇರೆಯವರಿಗಿಂತ ಹೆಚ್ಚು ವಸ್ತುಗಳನ್ನು ಶೇಖರಣೆ ಮಾಡುವುದರಲ್ಲಿ ಹುಡುಕುವ ಭರದಲ್ಲಿ ನಿಜಕ್ಕೂ ಈ ವಸ್ತುಗಳ ಅಗತ್ಯ ನನಗಿದೆಯಾ? ಎಂಬು ಸ್ವಯಂ ಪ್ರಶ್ನಿಸಿಕೊಳ್ಳುವ ಮನೋಭಾವ ಕಾಣೆಯಾಗಿದೆ.

   ಗ್ರಾಹಕ ಕೇಂದ್ರಿತ  ಕನಸುಗಳಿಂದ ತುಂಬಿರುವ ಮನೆಗಳು, ಸ್ಥಾನಮಾನಕ್ಕಾಗಿ ಕಟ್ಟಲ್ಪಟ್ಟ ದೊಡ್ಡ  ಕಚೇರಿಗಳು ಇಂದಿನ ಟ್ರೆಂಡ್. ಹೆಚ್ಚು ವಸ್ತುಗಳಿದ್ದರೆ  ಉತ್ತಮ ಜೀವನ  ಎಂಬ  ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡು ಜೀವಿಸುತ್ತಿದ್ದೇವೆ. 


ವಸ್ತುಗಳು ಕೇವಲ ನಮ್ಮ ಕೋಣೆ ಮತ್ತು ಕಟ್ಟಡಗಳನ್ನು ತುಂಬಿಸಬಹುದು.ಆದರೆ  ಆ ವಸ್ತುಗಳನ್ನು ಬಳಸಿದ   ನೆನಪುಗಳು  ವಸ್ತುವಿಗಿಂತ ಹೆಚ್ಚು ದೀರ್ಘಕಾಲದ ಸಂತೋಷವನ್ನು ನೀಡುತ್ತವೆ. ಉದಾಹರಣೆಗೆ   ನಾವು ಖರೀದಿಸಿದ ಬೂಟುಗಳನ್ನು ನೆನಪಿಡುವುದಿಲ್ಲ. ಆದರೆ ಅವುಗಳನ್ನು ಧರಿಸಿ ನೃತ್ಯ ಮಾಡಿದ ಆ ರಾತ್ರಿ ಎಂದಿಗೂ ಮರೆಯಲಾಗುವುದಿಲ್ಲ. ಅನುಭವಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ.


ನಾವು ನಮ್ಮಲ್ಲಿರುವ ಆಸ್ತಿ   ಅಂತಸ್ತು  ಸಂಪತ್ತು ಪ್ರದರ್ಶನಕ್ಕೆ ಹಾತೊರೆಯುತ್ತೇವೆ. ತೋರಿಸಬೇಕಾದದ್ದು ಸ್ಥಾನಮಾನಗಳನ್ನಲ್ಲ.ಬದಲಿಗೆ ನಮ್ಮ ಜೀವನವನ್ನು ಪ್ರವಾಸಗಳು, ಆಳವಾದ ಸ್ನೇಹಗಳು, ಕಲಿತ ಕೌಶಲ್ಯಗಳು, ನೋಡಿದ ಸ್ಥಳಗಳಿಂದ ಅರ್ಥಪೂರ್ಣ ಮಾಡಿಕೊಳ್ಳಬೇಕು. ಇವೇ ನಿಜವಾದ ಟ್ರೋಫಿಗಳು!

  ನಾವು  ಸರಳವಾದಂತೆ  ಜೀವನ ವಿಸ್ತರಿಸುತ್ತದೆ.
ಅವ್ಯವಸ್ಥೆ ಹೋಗಿ  ಶಕ್ತಿ ಮರಳುತ್ತದೆ. ಬಯಕೆಗಳು ಕಡಿಮೆಯಾದಾಗ ಕೃತಜ್ಞತೆ ಬೆಳೆಯುತ್ತದೆ. ಹೆಚ್ಚು ಬೇಕು ಎಂದು ಓಡುವುದನ್ನು   ನಿಲ್ಲಿಸಿದಾಗ  ಸಾಕು ಎಂಬುದನ್ನು ಅರಿಯುತ್ತೇವೆ.ಇನ್ನಾದರೂ ನಾವು ನಮ್ಮದೇ ಅತಿಯಾದ  ವಸ್ತುಗಳಿಂದ ನಮಗರಿವಿಲ್ಲದೇ  ಉಸಿರುಗಟ್ಟುವುದನ್ನು ತಪ್ಪಿಸಿಕೊಂಡು ಅರ್ಥಪೂರ್ಣವಾಗಿ ಜೀವಿಸೋಣ.
ನಮ್ಮ ಯಶಸ್ಸಿನ ಮಾನಕಗಳು    ಎಷ್ಟು ವಸ್ತುಗಳನ್ನು ಹೊಂದಿದ್ದೇವೆ ಎಂಬುದಲ್ಲ. ಎಷ್ಟು ಕಾಲ   ಸಂತಸದಿಂದ  ಬದುಕಿದ್ದೇವೆ ಎಂಬುದರಿಂದ  ಅಳೆಯಬೇಕಾಗಿದೆ.
ಅದನ್ನು ಅರಿತ ಕ್ಷಣ ನಿಜವಾಗಿಯೂ ಮತ್ತೆ ನಾವು ಹೊಸದಾಗಿ ಉಸಿರಾಡಲು ಆರಂಭಿಸಿದಂತಾಗುತ್ತದೆ. ಅಂತಹ ಜೀವನದ ಕಡೆ ಸಾಗೋಣ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

26 ಅಕ್ಟೋಬರ್ 2025

ಬೆಲೆ. ಹನಿಗವನ


 

ಬೆಲೆ

ಜಂಭ ಕೊಚ್ಚಿಕೊಳ್ಳುತ್ತಾ ಹೇಳಿಕೊಳ್ಳಬೇಡ ಎಲ್ಲರೂ ನನ್ನನ್ನೇ ಇಷ್ಟಪಡುತ್ತಾರೆಂದು| ಕೆಲವೊಮ್ಮೆ ಕಡಿಮೆ ಕಿಮ್ಮತ್ತಿನ ವಸ್ತುಗಳನ್ನು ಕೊಳ್ಳಲು ಜನ ಮುಗಿ ಬೀಳುತ್ತಾರೆ ನಾ ಮುಂದು,ತಾ ಮುಂದು||

ಸಿಹಿಜೀವಿ ವೆಂಕಟೇಶ್ವರ #QuoteSubhashitha #Sihijeevi #Venkateswara #WisdomInKannada #LifeLessons #InspirationalQuotes #SpiritualWisdom #MotivationalQuotes #KannadaCulture #QuoteOfTheDay #SubhashithaWisdom #KannadaProverbs #SelfAwareness #SoulfulQuotes #PositiveVibes #LifeInspired #Venkateswar

22 ಅಕ್ಟೋಬರ್ 2025

ದೋಸೆ ಹಾಕಿ ವಿಶ್ವ ದಾಖಲೆ ನಿರ್ಮಿಸಿದ ವಿಷ್ಣು!


 ಬಹಳಷ್ಟು ಜನರಿಗೆ ದೋಸೆಯೆಂದರೆ ಪ್ರಾಣ.ತರಾವರಿ‌ ದೋಸೆಗಳು ಜನರ ಬಾಯಲ್ಲಿ ನೀರೂರಿಸುತ್ತವೆ.ನನಗೆ ವೈಯಕ್ತಿಕವಾಗಿ ಬೆಣ್ಣೆ ದೋಸೆ,ಈರುಳ್ಳಿ ದೋಸೆ ಇಷ್ಟವಾದರೆ ನಮ್ಮ ಮನೆಯವರಿಗೆ ಮಸಾಲೆ ದೋಸೆ ಇಷ್ಟ.

ಇಲ್ಲೊಬ್ಬರು ರೆಕಾರ್ಡ್ ನಿರ್ಮಿಸಿದ್ದಾರೆ. ದೋಸೆ ತಿನ್ನುವುದರಲ್ಲಿ  ಅಲ್ಲ. ದೋಸೆ ಮಾಡುವುದರಲ್ಲಿ.

ಹೌದು ಈ ದಾಖಲೆಯನ್ನು ನಿರ್ಮಿಸಿದವರು ಭಾರತದ ಪ್ರಸಿದ್ಧ ಬಾಣಸಿಗ ವಿಷ್ಣು ಮನೋಹರ್!


25 ಗಂಟೆಗಳಲ್ಲಿ 15,773 ದೋಸೆಗಳನ್ನು ಹಾಕಿ    ವಿಷ್ಣು ಮನೋಹರ್ ರವರು ತಮ್ಮದೇ  ಹೆಸರಲ್ಲಿ ಇದ್ದ ದಾಖಲೆಯನ್ನು ಮುರಿದು   ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಇಷ್ಟಕ್ಕೆ ಸುಮ್ಮನಾಗದ ಅವರು ಅಮೆರಿಕದಲ್ಲಿ ಮತ್ತೊಂದು ದಾಖಲೆ ನಿರ್ಮಿಸಲು ಕಾತರರಾಗಿದ್ದಾರೆ.

 


 ಪ್ರಸಿದ್ಧ ಶೆಫ್ ವಿಷ್ಣು ಮನೋಹರ್ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಿರಂತರವಾಗಿ 25 ಗಂಟೆಗಳ ಕಾಲ 15,773 ದೋಸೆಗಳನ್ನು ತಯಾರಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈಗ ಅವರು ಅಮೆರಿಕಾದಲ್ಲಿ 26 ಗಂಟೆಗಳ ದೋಸೆ ಮ್ಯಾರಥಾನ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವರ್ಷ, ಅವರು ನಾಗಪುರದಲ್ಲಿ 24 ಗಂಟೆಗಳಲ್ಲಿ 14,400 ದೋಸೆಗಳನ್ನು ತಯಾರಿಸಿ ದಾಖಲೆ ಮಾಡಿದ್ದರು.


  ಅಕ್ಟೋಬರ್ 2025 ರ  ಶನಿವಾರ ಬೆಳಗ್ಗೆ 7 ಗಂಟೆಗೆ ದೋಸ ತಾವಾ  ಲಾನ್‌ನಲ್ಲಿ ದೋಸೆ ತಯಾರಿಕೆ ಪ್ರಾರಂಭಿಸಿದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಅವರು ಹಿಂದಿನ ದಾಖಲೆಯನ್ನು ಮುರಿದು 15,700 ದೋಸೆಗಳನ್ನು ತಯಾರಿಸಿದರು. 20 ನಿಮಿಷಗಳ ಅಧಿಕೃತ ವಿರಾಮದ ನಂತರ, ಅವರು ಮತ್ತೆ ಕೆಲಸಕ್ಕೆ ಮುಂದಾಗಿ ಅಮರಾವತಿ ಜನತೆಗೆ ಬಿಸಿ ಬಿಸಿ ದೋಸೆಗಳನ್ನು ನೀಡಿದರು.


ಬೆಳಗ್ಗೆ 8 ಗಂಟೆಗೆ ಅವರು 15,773ನೇ ದೋಸೆಯನ್ನು ತಯಾರಿಸಿ ಹೊಸ ದಾಖಲೆಯನ್ನು ಅಧಿಕೃತವಾಗಿ ಮುಗಿಸಿದರು. ಅದೇ ವೇಳೆ, ಇಂಡಿಯಾ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ಪ್ರವೀಣ್ ರಾಉತ್ ಅವರು ಮನೋಹರ್ ಅವರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಅಮರಾವತಿ ಜನರಿಂದ ದೋಸೆ ತಿನ್ನಲು ಹಾಗೂ ದಾಖಲೆಯನ್ನು ನೋಡಲು ಭಾರಿ ಪ್ರತಿಕ್ರಿಯೆಯು ವ್ಯಕ್ತವಾಯಿತು.ಶನಿವಾರ ಬೆಳಗ್ಗೆ 7 ಗಂಟೆಯಿಂದ ಮನೋಹರ್ ದೋಸೆ ತಯಾರಿಕೆ ಪ್ರಾರಂಭಿಸಿದ ನಂತರ ಸಾವಿರಾರು ಜನರು ಸಾಲಿನಲ್ಲಿ ನಿಂತು ದೋಸೆ ಸವಿದರು. ರಾತ್ರಿ 3 ರಿಂದ 5ರವರೆಗೆ ಜನರ ಸಂಖ್ಯೆ ಸ್ವಲ್ಪ ಕಡಿಮೆಯಾದರೂ, ಬೆಳಗ್ಗೆ 5 ರಿಂದ 8ರವರೆಗೆ ಮತ್ತೆ ಉತ್ಸಾಹ ತುಂಬಿತು.


ಈ ದಾಖಲೆಯ ಕಾರ್ಯಕ್ರಮದಲ್ಲಿ 30,000ಕ್ಕೂ ಹೆಚ್ಚು ಜನರು ಮನೋಹರ್, ಅವರ ಪತ್ನಿ ಅಪರ್ಣಾ, ಮತ್ತು ತಂಡ ತಯಾರಿಸಿದ ದೋಸೆಗಳನ್ನು ಸವಿದರು. ಭಾನುವಾರ ರಾತ್ರಿ ಬದ್ನೇರಾ ಶಾಸಕ ರವಿ ರಾಣಾ ಕೂಡ ಸ್ಥಳಕ್ಕೆ ಬಂದು ಸ್ವತಃ ಕೆಲವು ದೋಸೆಗಳನ್ನು ತಯಾರಿಸಿದರು. ಎಲ್ಲರಿಗೂ ಉಚಿತ ದೋಸೆಗಳನ್ನು ವಿತರಿಸಲಾಯಿತು.

ಈ ದಾಖಲೆಯ ದೋಸೆ ತಯಾರಿಸಲು ಅವರು ಒಂದೇ ಸಮಯದಲ್ಲಿ ನಾಲ್ಕು ತವಾಗಳಲ್ಲಿ  ದೋಸೆ ತಯಾರಿಸಲಾಯಿತು. ಪ್ರತಿ ಎರಡು ನಿಮಿಷಕ್ಕೆ ಸುಮಾರು 28 ಡೋಸೆ ಸಿದ್ಧವಾಗಿ ತಿನ್ನವವರ ಹೊಟ್ಟೆ ಸೇರಿದವು  ಇದಕ್ಕಾಗಿ  500 ಕೆ.ಜಿ. ದೋಸೆ ಹಿಟ್ಟನ್ನು ಮತ್ತು 800 ಕೆ.ಜಿ. ಚಟ್ನಿಯನ್ನು ಬಳಸಲಾಯಿತು


#Dosa #Food #WorldRecord #VishnuManohar #IndianCuisine #StreetFood #CulinaryArts #FoodLovers #Foodiegram #FoodInspiration #GourmetDosa #CulturalHeritage #TastyTreats #DosaLove #ChefVishnu #EpicureanDelight #GlobalCookoff #FoodChallenge #RecordBreakingFood

18 ಅಕ್ಟೋಬರ್ 2025

ದೀಪ..


 ದೀಪ..


ಹಣ ಅಂತಸ್ತು ನೋಡುತಾ
ಮಾಡದಿರು ಎಂದಿಗೂ ತರತಮ|
ದೀಪವ ನೋಡಿ ಕಲಿ ಅದು
ಓಡಿಸುವುದು ದೀನ ದಲಿತರ
ಮನೆ ಮನಗಳ  ತಮ||

ಸಿಹಿಜೀವಿ ವೆಂಕಟೇಶ್ವರ