31 ಜನವರಿ 2024

30 ಜನವರಿ 2024

ಸಂಸ್ಕೃತಿ ಸಂಸ್ಕಾರ ಬೆಳೆಸುವ ಮಿಶ್ರ ಮಾಧುರ್ಯ.

 

ಸಂಸ್ಕೃತಿ ಸಂಸ್ಕಾರ ಬೆಳೆಸುವ  ಮಿಶ್ರ ಮಾಧುರ್ಯ.


ಸೋಷಿಯಲ್ ಮೀಡಿಯಾಗಳು ಜನರ ಸಮಯ ಹಾಳು ಮಾಡುತ್ತಿವೆ. ಯುವ ಜನರ ದಾರಿ ತಪ್ಪಿಸುತ್ತಿವೆ ಎಂಬ ಆರೋಪದ ನಡುವೆ ಕೆಲ ಸಂಘ ಸಂಸ್ಥೆಗಳು, ಸಮಾನ ಮನಸ್ಕ ತಂಡಗಳು ವಾಟ್ಸಪ್ ,ಪೇಸ್ ಬುಕ್ ಮುಂತಾದ ಮಾಧ್ಯಮಗಳ ಮೂಲಕ ಕಲೆ ,ಸಾಹಿತ್ಯ, ಸಂಸ್ಕೃತಿ ಬೆಳೆಸುವ ಕಾಯಕ ಮಾಡುವುದು ಸ್ತುತ್ಯಾರ್ಹ.ಈ ಸಾಮಾಜಿಕ ಮಾಧ್ಯಮಕ್ಕೆ ಹೊಸ ಸೇರ್ಪಡೆ ಕ್ಲಬ್ ಹೌಸ್ ಅಥವಾ ಕೇಳು ಕೋಣೆ.ಇಂತಹ ಕೇಳು ಕೋಣೆಯನ್ನು ಸಮರ್ಪಕವಾಗಿ ಬಳಸಿಕೊಂಡು 

ಡಾ.ಗಣಪತಿ ಹೆಗಡೆ ರವರ ನೇತೃತ್ವದಲ್ಲಿ 

ಮೈತ್ರಿ ಫೌಂಡೇಶನ್ ರವರು ಸಂಸ್ಕೃತ ಮತ್ತು ಸಂಸ್ಕೃತಿಗಳ ಪ್ರಸಾರ ಮಾಡುವಲ್ಲಿ ಬಹಳ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಈಗಾಗಲೇ 123 ದಿನಗಳ ಕಾಲ  ಸತತವಾಗಿ ಮುಂಜಾನೆಯ "ಮಿಶ್ರ ಮಾಧುರ್ಯ" ಕಾರ್ಯಕ್ರಮದಲ್ಲಿ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಶ್ರೋತೃಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಪ್ರತಿದಿನ ಮುಂಜಾನೆ ಆರೂವರೆಯಿಂದ ಎಂಟರವರೆಗೆ ‌ನಡೆಯುವ ಈ ಕಾರ್ಯಕ್ರಮದ ಹಿಂದೆ ಒಂದು ಸಂಘಟಿತ ಪ್ರಯತ್ನ ಇರುವುದು ಎದ್ದು ಕಾಣುತ್ತದೆ.ರಾಮತಾರಕ ಜಪದ ಮೂಲಕ ಆರಂಭವಾಗುವ ಕೇಳು ಕೋಣೆಯ ಈ ಕಾರ್ಯಕ್ರಮದಲ್ಲಿ

ಗೀತಾ ಪಠಣವಿರುತ್ತದೆ. ವೇದ ಘೋಷದ ಶ್ಲೋಕಗಳ ಪಠಣ ಮತ್ತು ಅರ್ಥವಿವರಣೆ ಇರುತ್ತದೆ.ನಮ್ಮ ಮೆದುಳಿಗೆ ಮೇವು ಹಾಕುವ ನಮ್ಮ ಸಂಸ್ಕಾರ ಸಂಸ್ಕೃತಿ ಪರಿಚಯ ಮಾಡುವ  ರಸ ಪ್ರಶ್ನೆ ಮೂಡಿಬರುತ್ತದೆ.  ನಾವು ಬಾಲ್ಯದಲ್ಲಿ "ಈಯಂ ಆಕಾಶವಾಣಿ..".ಎಂಬ ಬಲದೇವಾನಂದ್ ಸಾಗರ್ ರವರ  ಸಂಸ್ಕೃತ ವಾರ್ತೆಯನ್ನು ನೆನಪಿಸುವ ಸಂಸ್ಕೃತ ವಾರ್ತೆಯನ್ನು ಕೇಳುವಾಗ ಸಾಮಾನ್ಯ ಜ್ಞಾನದ ಜೊತೆ ಜೊತೆಗೆ ಸಂಸ್ಕೃತ ಭಾಷೆಯ ಜ್ಞಾನ ವಿಕಾಸ ಆಗುವಲ್ಲಿ ಸಹಕಾರಿ.  ಇದರ ಜೊತೆಗೆ ನಮ್ಮ ಆರೋಗ್ಯದ ಬಗ್ಗೆ ಆಯುರ್ವೇದ ಮೂಲದ ಔಷಧೀಯ ಗುಣಗಳ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡುವ  ಅಂಗೈಯಲ್ಲಿ ಆರೋಗ್ಯ ನಮಗೆ ಬಹಳ ಉಪಯುಕ್ತವಾಗಿದೆ. ಹೀಗೆ ಹಲವಾರು ಪ್ರಕಾರಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಿವಿಯಾಗುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಹಲವಾರು ಕೇಳುಗರು ತಮ್ಮ ಮನದಾಳದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದ ಕೇಂದ್ರ ಬಿಂದು ಮುತ್ತು ಮಾರ್ಗದರ್ಶಕರಾದ ಸಂಸ್ಕೃತ ವಿದ್ವಾನ್ ಡಾ. ಗಣಪತಿ  ಹೆಗಡೆ ರವರು   ಸದ್ಯದಲ್ಲೇ ಇದಕ್ಕೆ ಇನ್ನೂ ಕೆಲ ಅಂಶಗಳನ್ನು ಸೇರಿಸಿ ಈ ಕೇಳುಕೋಣೆಯ ಮಿಶ್ರಮಾಧುರ್ಯ ಕಾರ್ಯಕ್ರಮವನ್ನೂ ಮತ್ತಷ್ಟು ಮಧುರವಾಗಿಸುವ ಸುಳಿವು ನೀಡಿದ್ದಾರೆ. ನಾನಂತೂ ಪ್ರತಿ ದಿನ ಮುಂಜಾನೆ  ಈ ಮಧುರಾನುಭೂತಿ ಪಡೆಯುತ್ತಿರುವೆ ನೀವು ಸಹ ಇಂತಹ ಕ್ಲಬ್ ಹೌಸ್ ಕಾರ್ಯಕ್ರಮ ಕೇಳಿ ನಿಮ್ಮ ವ್ಯಕ್ತಿತ್ವ ಉತ್ತಮ ಪಡಿಸಿಕೊಳ್ಳಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

29 ಜನವರಿ 2024

ಪರೀಕ್ಷಾ ಪೇ ಚರ್ಚಾ..ಮತ್ತು ಸಲಹೆಗಳು


ಪರೀಕ್ಷಾ ಪೇ ಚರ್ಚಾ..ಮತ್ತು ಸಲಹೆಗಳು 


ನೆಹರೂ ರವರು ಮಕ್ಕಳ ಪ್ರೀತಿಯ ಚಾಚಾ ನೆಹರೂ ಆಗಿದ್ದರು.ಡಾ ಅಬ್ದುಲ್ ಕಲಾಂ ಜಿ ರವರು ಮಕ್ಕಳಿಗೆ ಅಮೂಲ್ಯವಾದ ಸಲಹೆ ಮಾರ್ಗದರ್ಶನ ನೀಡಿ ಪುಸ್ತಕಗಳನ್ನು ಸಹ ಬರೆದು ಹುರಿದುಂಬಿಸಿದರು.ಅದೇ ಹಾದಿಯಲ್ಲಿ ನಮ್ಮ ಪ್ರಧಾನಿಯವರು ಸಾಗುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಮಾನ್ಯ ಪ್ರಧಾನ ಮಂತ್ರಿಗಳು ಪರೀಕ್ಷಾ ಪೆ ಚರ್ಚಾ 2024 ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನೇರ ಸಂವಾದ ನಡೆಸಿದರು. ಈ ಕಾರ್ಯಕ್ರಮವು ದೆಹಲಿಯ  ಭಾರತ್‌ ಮಂಟಪದಲ್ಲಿ ಬೆಳಿಗ್ಗೆ 11:00 ಗಂಟೆಯಿಂದ  ನಡೆಯಿತು  ಈ ಬಾರಿ  ಒಟ್ಟು 205.62 ಲಕ್ಷ ವಿದ್ಯಾರ್ಥಿಗಳು, 14.93 ಲಕ್ಷ ಶಿಕ್ಷಕರು ಮತ್ತು 5.69 ಲಕ್ಷ ಪೋಷಕರು ಪರೀಕ್ಷಾ ಪೇ ಚರ್ಚಾ 2024 ನೋಂದಾಯಿಸಿಕೊಂಡಿದ್ದರು. 


ಮಾನ್ಯ ಪ್ರಧಾನ ಮಂತ್ರಿಗಳು  ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಸಾಮೂಹಿಕವಾಗಿ ಕಾರ್ಯತಂತ್ರ ರೂಪಿಸಲು ಅತ್ಯಂತ ಸ್ಮರಣೀಯ ಸಭೆ ಇದಾಗಿದೆ ಎಂದರು.

ಜೊತೆಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದರು. ಅದರಲ್ಲೂ, ಪರೀಕ್ಷೆಯ ಕುರಿತು ವಿದ್ಯಾರ್ಥಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು, ಪ್ರಧಾನಿಯವರು  ಹಲವು ಸಲಹೆಗಳನ್ನು ನೀಡಿದ್ದಾರೆ. ಉದಾಹರಣೆ, ನಿದರ್ಶನಗಳ ಮೂಲಕ ಪರೀಕ್ಷಾ ಭಯ ಹೋಗಲಾಡಿಸಲು ಯತ್ನಿಸಿದ್ದಾರೆ. ಅವುಗಳಲ್ಲಿ ಪ್ರಮುಖ 10 ಸಲಹೆಗಳು ಇಲ್ಲಿವೆ.


ರೈಲು ಬರುತ್ತಲೇ ಯಾರೂ ಸ್ಟೇಷನ್‌ ತಲುಪುವುದಿಲ್ಲ. ರೈಲು ಬರುವ 10 ನಿಮಿಷ ಮೊದಲೇ ತೆರಳುತ್ತೇವೆ. ಹಾಗೆಯೇ, ಪರೀಕ್ಷೆಯ ಕೊಠಡಿಗೂ ಮೊದಲೇ ತೆರಳಬೇಕು. ಕೊಠಡಿಯ ಬಾಗಿಲಿನವರೆಗೆ ಪುಸ್ತಕ ಹಿಡಿದುಕೊಂಡು ಹೋಗಬಾರದು. 10 ನಿಮಿಷ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಗೆಳೆಯರೊಂದಿಗೆ ಮಾತನಾಡಿ, ಒಂದು ಜೋಕ್‌ ಹೇಳಿ, ಮೊದಲು ನಿರಾತಂಕವಾಗಿ ಉಸಿರಾಡಿ.

ಪ್ರಶ್ನೆಪತ್ರಿಕೆ ಕೈಗೆ ನೀಡುತ್ತಲೇ ಗಾಬರಿಯಾಗದಿರಿ. ಪ್ರಶ್ನೆ ಪತ್ರಿಕೆ ಸಿಗುತ್ತಲೇ ಎಲ್ಲ ಪ್ರಶ್ನೆಗಳನ್ನು ಓದಿಕೊಳ್ಳಿ. ಯಾವ ಪ್ರಶ್ನೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬುದನ್ನು ಯೋಚಿಸಿ. ಊಟ ಮಾಡುವಾಗ ಯಾರೂ ಗಡಿಯಾರ ನೋಡುವುದಿಲ್ಲ. ಹಾಗೆಯೇ, ಪರೀಕ್ಷೆ ಬರೆಯುವಾಗ ಅನಗತ್ಯವಾಗಿ ಗಡಿಯಾರ ನೋಡಿಕೊಳ್ಳದಿರಿ. ಅವಸರಕ್ಕೆ ಬಿದ್ದು ಬರೆಯಲು ಮುಂದಾಗದಿರಿ.

ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಓದಿಕೊಂಡು ಹೋಗುತ್ತಾರೆಯೇ ಹೊರತು, ಮೊದಲು ಬರೆದು ಬರೆದು ಅಭ್ಯಾಸ ಮಾಡಿಕೊಂಡಿರುವುದಿಲ್ಲ. ಹಾಗಾಗಿ, ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಹಾಗಾಗಿ, ಪರೀಕ್ಷೆಗೂ ಮೊದಲು ಪ್ರಶ್ನೆಗಳಿಗೆ ಉತ್ತರ ಬರೆದು ಬರೆದು ಅಭ್ಯಾಸ ಮಾಡಿಕೊಳ್ಳಿ. ಆಗ ಮನನವೂ ಆಗುತ್ತದೆ, ಪರೀಕ್ಷೆಯಲ್ಲಿ ಸುಲಭವಾಗಿ ಬರೆಯುವುದೂ ಸಾಧ್ಯವಾಗುತ್ತದೆ.

ಯಾರೇ ಆಗಲಿ, ನೀರಿಗೆ ಇಳಿಯದ ಹೊರತು ಈಜು ಕಲಿಯಲು ಸಾಧ್ಯವಿಲ್ಲ. ಹಾಗೆಯೇ, ಹಳೆಯ ಪ್ರಶ್ನೆಪತ್ರಿಕೆಗಳಿಗೆ, ಪ್ರಶ್ನೆಗಳಿಗೆ ಬರೆದು, ನೋಟ್ಸ್‌ಗಳನ್ನು ಮಾಡಿಕೊಂಡು ಪರೀಕ್ಷೆಗೆ ತಯಾರಾಗಿ. ಬರೆದು ಅಭ್ಯಾಸ ಮಾಡಿಕೊಂಡರೆ, ಮನನ ಮಾಡಿಕೊಂಡರೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಬಹುದು.

ವಿದ್ಯಾರ್ಥಿಗಳು ಓದಿಕೊಂಡು, ಬರೆದುಕೊಂಡು ಪರೀಕ್ಷೆಗೆ ಹೋಗುವುದರ ಜತೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗಲೇ ಶಿಕ್ಷಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಓದುವಾಗ ಗೊಂದಲ ಬಂದರೆ ಶಿಕ್ಷಕರಿಗೆ ಪ್ರಶ್ನೆ ಕೇಳಬೇಕು, ಮನೆಯಲ್ಲಿದ್ದರೆ ಮೊಬೈಲ್‌ ಕರೆ ಮಾಡಬೇಕು. ಆಗ ತಕ್ಷಣವೇ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

ಎಲ್ಲ ವಿದ್ಯಾರ್ಥಿಗಳ ಬಳಿಯೂ, ಮನೆಗಳಲ್ಲೂ ಮೊಬೈಲ್‌ ಇದೆ. ಆ ಮೊಬೈಲ್‌ಅನ್ನು ನಿತ್ಯ ಚಾರ್ಜ್‌ ಮಾಡದಿದ್ದರೆ ಅದು ಸ್ವಿಚ್‌ಆಫ್‌ ಆಗುತ್ತದೆ. ಹಾಗೆಯೇ ಮನುಷ್ಯನ ದೇಹವನ್ನೂ ರಿಚಾರ್ಜ್‌ ಮಾಡಬೇಕಾಗುತ್ತದೆ. ಅದರಲ್ಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೆದುಳು, ಮನಸ್ಸಿನ ಜತೆಗೆ ದೇಹವನ್ನೂ ಉಲ್ಲಸಿತಗೊಳಿಸಬೇಕು.

ವಿದ್ಯಾರ್ಥಿಗಳು ಒಂದೇ ಕಡೆ ಓದುವ ಬದಲು ಎಳೆ ಬಿಸಿಲಿನಲ್ಲಿ ಕುಳಿತು ಓದಬೇಕು. ಶಾಂತಿಯುತ ವಾತಾವರಣದಲ್ಲಿ ಅಧ್ಯಯನ ಮಾಡಬೇಕು. ಸರಿಯಾಗಿ ನಿದ್ದೆ ಮಾಡಬೇಕು. ಮೊಬೈಲ್‌ನಲ್ಲಿ ಒಂದರ ಹಿಂದೆ ಒಂದು ರೀಲ್ಸ್‌ಗಳನ್ನು ನೋಡಿದರೆ ಮೊದಲು ನೋಡಿದ ರೀಲ್‌ ನೆನಪಿರುವುದಿಲ್ಲ. ಹಾಗಾಗಿ, ಎಡೆಬಿಡದೆ ಓದುವ ಬದಲು ದೇಹಕ್ಕೆ ಬೇಕಾಗುವಷ್ಟು ನಿದ್ದೆ ಮಾಡಬೇಕು. ಇದು ಮೆದುಳು, ಮನಸ್ಸು ಹಾಗೂ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಂತ ಮೋದಿ ಹೇಳಿದರು ಎಂದು ಬರೀ ನಿದ್ದೆಯನ್ನೇ ಮಾಡಬೇಡಿ ಎಂದು ಚಟಾಕಿ ಹಾರಿಸಿದರು.

ಮಕ್ಕಳು ಓದುವುದು, ಬರೆಯುವುದು, ಮನನ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಮುಖ್ಯ. ಪರೀಕ್ಷೆಯ ದಿನಗಳಲ್ಲಿ ನಿಯಮಿತ ಆಹಾರ ಸೇವಿಸಿ. ಬಡತನ ಇರಲಿ ಸಿರಿತನ ಇರಲಿ ಇರುವ ಆಹಾರ ಸೇವಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ.

ವ್ಯಾಯಾಮವು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ. ನಿತ್ಯವೂ ಬೆಳಗ್ಗೆ ಎದ್ದು ಹಲ್ಲುಜ್ಜುವ ರೀತಿ, ಬೆಳಗ್ಗೆ ಎದ್ದ ತಕ್ಷಣ 10 ನಿಮಿಷವಾದರೂ ವ್ಯಾಯಾಮ ಮಾಡಿ. ಇದರಿಂದ ದೇಹವು ಉಲ್ಲಾಸಗೊಳ್ಳುತ್ತದೆ. ದೈಹಿಕ ಚಟುವಟಿಕೆಯು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ.

ನಾವು ಚಳಿಯೊಂದಿಗೆ ಜೀವನ ಸಾಗಿಸುವ ಮನಸ್ಥಿತಿ ರೂಢಿಸಿಕೊಂಡರೆ, ಹೆಚ್ಚು ಚಳಿ ಎನಿಸುವುದಿಲ್ಲ. ಪರೀಕ್ಷೆಯೂ ಹಾಗೆಯೇ ನಾವು ಮೊದಲು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ದೃಢ ನಿಶ್ಚಯ ಮಾಡಿಕೊಳ್ಳಬೇಕು. ನಾವು ಮೊದಲು ಮೆದುಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜತೆಗೆ ಮನಸ್ಸನ್ನೂ ಹುರಿಗೊಳಿಸಬೇಕು. ಈ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕ ಪಡೆಯುತ್ತೇನೆ ಎಂದು ನಿಶ್ಚಯ ಮಾಡಿಕೊಳ್ಳಬೇಕು. ಎಂದು ತಿಳಿಸಿದ್ದಾರೆ.


ಮಾನ್ಯ ಪ್ರಧಾನ ಮಂತ್ರಿಗಳು ಈ ಪರೀಕ್ಷ ಪೆ ಚರ್ಚಾ ಕಾರ್ಯಕ್ರಮದಲ್ಲಿ ಕೇವಲ ಮಕ್ಕಳಿಗೆ ಮಾತ್ರ ಸಲಹೆ ನೀಡದೆ ಪೋಷಕರು ಮತ್ತು ಶಿಕ್ಷಕರಿಗೂ ಕೆಲ ಕಿವಿ ಮಾತುಗಳನ್ನು ಹೇಳಿದರು.

 ಕೆಲವು ಪೋಷಕರು ಮಗುವಿನ ರಿಪೋರ್ಟ್ ಕಾರ್ಡನ್ನು ತಮ್ಮ ವಿಸಿಟಿಂಗ್ ಕಾರ್ಡ್ ಆಗಿ ಪರಿವರ್ತಿಸುತ್ತಾರೆ.

ಸ್ವತಃ ಯಶಸ್ವಿಯಾಗದಂತಹ ಪೋಷಕರು ತಮ್ಮ ಮಕ್ಕಳ ರಿಪೋರ್ಟ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಅವರು ಎಲ್ಲಿಗೆ ಹೋದರೂ, ಅವರು ತಮ್ಮ ಮಕ್ಕಳ ಬಗ್ಗೆ ಕಥೆಗಳನ್ನು ಹೇಳುತ್ತಾ, ತಮ್ಮ ಯಶಸ್ಸೆನ್ನುವಂತೆ ಬಿಂಬಿಸುತ್ತಾರೆ.

 ಪೋಷಕರು ತಮ್ಮ ಮಕ್ಕಳನ್ನು ಯಾವಾಗಲೂ ಶಪಿಸುತ್ತಾರೆ, ಆದ್ದರಿಂದ ಇದು ನಿಮ್ಮ ಮನಸ್ಸಿನಲ್ಲಿ ರೂಢಿಯಾಗುತ್ತದೆ.ಇದು ತಪ್ಪಬೇಕು ಎಂದರು 

ಪೋಷಕರು-ಮಕ್ಕಳ ಸಂವಹನ ಹೆಚ್ಚಬೇಕು.

ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡುವಲ್ಲಿ ಶಿಕ್ಷಕರು ಸಹ ಪ್ರಮುಖವಾದ ಪಾತ್ರ ವಹಿಸುತ್ತಾರೆ ಹಾಗೂ ವಹಿಸಬೇಕು.

 ಆದ್ದರಿಂದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಯಾವಾಗಲೂ ಸಕಾರಾತ್ಮಕ ಸಂಬಂಧ ಇರಬೇಕು.

 ಶಿಕ್ಷಕರ ಕೆಲಸ ಕೇವಲ ಕೆಲಸ ಮಾಡುವುದು ಮಾತ್ರವಲ್ಲ, ಜೀವನವನ್ನು ರೂಪಿಸುವುದು, ಜೀವನಕ್ಕೆ ಶಕ್ತಿ ನೀಡುವುದು,

ಪರೀಕ್ಷೆಯ ಒತ್ತಡವನ್ನು ವಿದ್ಯಾರ್ಥಿಗಳು ಮತ್ತು ಇಡೀ ಕುಟುಂಬ ಮತ್ತು ಶಿಕ್ಷಕರು ಒಟ್ಟಾಗಿ ಪರಿಹರಿಸಬೇಕು.

 ನಾವು ಯಾವುದೇ ಒತ್ತಡವನ್ನು ತಡೆದುಕೊಳ್ಳಲು ಸಮರ್ಥರಾಗಿ, ನಮ್ಮ ಮಾನಸಿಕ ಸ್ಥಿತಿಯಿಂದ ಒತ್ತಡವನ್ನು ನಿವಾರಿಸಬೇಕು.

 ಏನೇ ತೊಂದರೆಗಳಿರಲಿ, ನಾವು ಅದನ್ನು ಕುಟುಂಬದಲ್ಲಿಯೂ ಚರ್ಚಿಸಬೇಕು.

ಜೀವನದಲ್ಲಿ ಯಾವುದೇ ಸವಾಲು ಮತ್ತು ಸ್ಪರ್ಧೆ ಇಲ್ಲದಿದ್ದರೆ, ಜೀವನವು ಸ್ಫೂರ್ತಿದಾಯಕ ಮತ್ತು ಬುದ್ಧಿಹೀನವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು 


ಈ ಸಲಹೆಗಳು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಈ ವರ್ಷ ಪರೀಕ್ಷೆ ಬರೆಯುವ ಎಲ್ಲಾ ಪರೀಕ್ಷಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ  ನೀಡಿದ ಸಲಹೆಯಂತೆ ತೋರುತ್ತದೆ. ಇವುಗಳನ್ನು ಪಾಲಿಸಿ,ಹಾಗೂ ಗೆಲ್ಲವ ಪಾಲಿಸಿ ನಿಮ್ಮದಾಗಲಿ ಪರೀಕ್ಷೆ ಬರೆಯುವ ಸರ್ವರಿಗೂ ಶುಭವಾಗಲಿ..


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529


27 ಜನವರಿ 2024

ಮಾನವರಾಗೋಣ..ಭಾಗ ೮

 


ಮಾನವರಾಗೋಣ 


 ಅಮೇರಿಕದಲ್ಲಿ ಒಬ್ಬ   ಖೈದಿಗೆ ಮರಣದಂಡನೆ ವಿಧಿಸಿದಾಗ, ಕೆಲವು ವಿಜ್ಞಾನಿಗಳು ಈ ಖೈದಿಯ ಮೇಲೆ ಕೆಲವು ಪ್ರಯೋಗಗಳನ್ನು ಮಾಡಬೇಕೆಂದು ಸೂಚಿಸಿದ್ದರಿಂದ ಖೈದಿಯನ್ನು ನೇಣು ಹಾಕುವ ಬದಲು ವಿಷಕಾರಿ ಹಾವಿನ  ದಾಳಿಯಿಂದ ಕೊಲ್ಲಲಾಗುವುದು ಎಂದು ತಿಳಿಸಲಾಯಿತು.


ಒಂದು ದೊಡ್ಡ ವಿಷಪೂರಿತ ಹಾವನ್ನು ಕೈದಿಯ ಮುಂದೆ ತರಲಾಯಿತು. ನಂತರ ಖೈದಿಯ ಕಣ್ಣುಗಳನ್ನು ಮುಚ್ಚಿ ಅವನನ್ನು ಕುರ್ಚಿಗೆ ಕಟ್ಟಲಾಯಿತು.  ಅವನಿಗೆ ಹಾವಿನಿಂದ ಕಚ್ಚಿಸಲಿಲ್ಲ, ಆದರೆ ಎರಡು ಪಿನ್ ಗಳಿಂದ ಚುಚ್ಚಲಾಯಿತು. ಆ ಖೈದಿ ಎರಡೇ ಸೆಕೆಂಡುಗಳಲ್ಲಿ ಸತ್ತುಹೋದ.

ಮರಣೋತ್ತರ ಪರೀಕ್ಷೆಯಲ್ಲಿ ಖೈದಿಯ ದೇಹದಲ್ಲಿ ಹಾವಿನ ವಿಷವನ್ನು ಹೋಲುವ ವಿಷವಿದೆ ಎಂದು ತಿಳಿದುಬಂತು.

ಎಲ್ಲರಿಗೂ ಅಚ್ಚರಿ!  ಈ ವಿಷ ಆ ಮೃತ ಖೈದಿಯ ದೇಹದಲ್ಲಿ ಎಲ್ಲಿಂದ ಬಂತು!!? ಅಥವಾ ಖೈದಿಯ ಸಾವಿಗೆ ಕಾರಣವೇನು!? 

ಇದಕ್ಕೆ ಸಿಕ್ಕ ಉತ್ತರವೇನೆಂದರೆ..  "ಮಾನಸಿಕ ಆಘಾತದಿಂದಾಗಿ ಆ ವಿಷವನ್ನು ಅವನ ದೇಹದಿಂದಲೇ ಉತ್ಪಾದಿಸಲಾಯಿತು!!!"


ಆದ್ದರಿಂದ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಧನಾತ್ಮಕ ಅಥವಾ ಋಣಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ದೇಹವು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

90% ಕಾಯಿಲೆಗಳಿಗೆ ಮೂಲ ಕಾರಣ ನಕಾರಾತ್ಮಕ ಆಲೋಚನೆಗಳಿಂದ ಉತ್ಪತ್ತಿಯಾಗುವ ಶಕ್ತಿ. 

ನಾವು ಮಾನಸಿಕವಾಗಿ ಆರೋಗ್ಯವಾಗಿದ್ದರೆ ದೈಹಿಕವಾಗಿ ಆರೋಗ್ಯವಿದ್ದಂತೆ ಸರಿ .ಕಷ್ಟ ಕಾಲದಲ್ಲಿ ನಮ್ಮ ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಳ್ಳುವುದು ಅತ್ಯವಶ್ಯಕ. ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಯಾವುದೇ ಕಾರಣಕ್ಕೂ ಧೃತಿಗೆಡದೆ ಮುನ್ನೆಡೆಯಬೇಕು. ಕೆಲವರಂತೂ ಮಂಬರುವ ಕಲ್ಪಿತ ತೊಂದರೆಗಳನ್ನು ಊಹಿಸಿಕೊಂಡು ಹಿಂಸೆಪಡುವುದನ್ನು ನೋಡಲಾಗದು. ಬಾರದು ಬಪ್ಪುದು,ಬಪ್ಪುದು ತಪ್ಪುದು ಎಂಬ ಅಣ್ಣನ ವಚನವನ್ನು ನೆನಯುತ್ತಾ ಬಂದದ್ದೆಲ್ಲಾ ಬರಲಿ ರಾಘವೇಂದ್ರನ ದಯೆವೊಂದಿರಲಿ ಎಂದು ನಮ್ಮ ನಮ್ಮ  ಕಾಯಕ ಮಾಡಿದರೆ ಧರೆಯೇ  ಕೈಲಾಸವಾಗುವುದು ಅಲ್ಲವೇ?


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು


 


22 ಜನವರಿ 2024

ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳೋಣ: ಡಾ.ಗುರುರಾಜ್ ಕರ್ಜಗಿ.





 


ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳೋಣ: ಡಾ.ಗುರುರಾಜ್ ಕರ್ಜಗಿ.


ಜೀವರಾಶಿಗಳಲ್ಲಿ ಶ್ರೇಷ್ಠವಾದ ಮಾನವ ಜನ್ಮವನ್ನು ಡಿ ವಿ ಜಿ ಯಂತವರ ಸಾಹಿತ್ಯದ ಬೆಳಕಿನಲ್ಲಿ  ಪಾವನ ಮಾಡಿಕೊಳ್ಳೋಣ ಎಂದು ಶಿಕ್ಷಣ ತಜ್ಞರು ಹಾಗೂ ವಾಗ್ಮಿಗಳಾದ ಡಾ ಗುರುರಾಜ್ ಕರ್ಜಗಿರವರು ಕರೆ ನೀಡಿದರು.

ತುಮಕೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಡಿ ವಿ ಜಿ ಯವರ ಜೀವನಧರ್ಮ  ದರ್ಶನ ಉಪನ್ಯಾಸ ಮಾಲಿಕೆಯ 100 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಡಿ ವಿ ಜಿಯವರು ಸಲ್ಲಿಸಿದ ಕೊಡುಗೆ ಅಪಾರ, ತುಮಕೂರಿಗೂ ಡಿ ವಿ ಜಿ ರವರಿಗೂ ಅವಿನಾಭಾವ ಸಂಬಂಧವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿರವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಿ ವಿ ಜಿ ರವರ ಸಹೋದರ ಸಂಬಂಧಿ ಆರ್ ಚಂದ್ರಮೌಳಿ ರವರು ಡಿ ವಿ ಗುಂಡಪ್ಪನವರ ಸಮಾಜ ಮುಖಿ ಚಿಂತನೆಗಳನ್ನು ಉದಾಹರಣೆ ಸಮೇತ ವಿವರಿಸಿದರು. 

ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಜಪಾನಂದ್ ಜೀ ಮಹಾರಾಜ್ ರವರು ಡಿ ವಿ ಜಿ ಯವರ ಗೀತೆಯನ್ನು ಹಾಡಿ ಕಗ್ಗಗಳ ಮಹತ್ವ ಮತ್ತು ಕನ್ನಡ ಭಾಷೆಯ ಬಳಕೆಯ ಬಗ್ಗೆ ಯುವ ಜನತೆಗೆ ಮಾರ್ಗದರ್ಶನ ನೀಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತುಮಕೂರು ಘಟಕದ ಅಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪ ರವರು ಡಿ ವಿ ಜಿ ರವರ ಜೀವನ ಧರ್ಮದರ್ಶನ  ದ ನೂರು ಕಾರ್ಯಕ್ರಮ ಮಾಡಲು ಸಹಕರಿಸಿದ ಸರ್ವರನ್ನು ಸ್ಮರಿಸಿ ಧನ್ಯವಾದಗಳನ್ನು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಡಿ ವಿ ಜಿ ರವರ ಕಗ್ಗ ವಾಚನ ಮತ್ತು ಗಮಕ ಕಲಾಶ್ರೀ ವಿದ್ವಾನ್ ಎಂ ಜಿ ಸಿದ್ದರಾಮಯ್ಯ ರವರು ವ್ಯಾಖ್ಯಾನ ಮಾಡಿದರು. 

ತುಮಕೂರು ವಿಶ್ವ ವಿದ್ಯಾನಿಲಯದದ ಉಪಕುಲಪತಿಗಳಾದ ಪ್ರೊ ಎಂ ವೆಂಕಟೇಶ್ವರಲು ಸ್ವಾಗತಿಸಿದರು.

ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ಎಸ್ ನಾಗಣ್ಣ ರವರು ವಂದಿಸಿದರು.

ತುಮಕೂರು ಜಿಲ್ಲಾ ಕ ಸಾ ಪ ಮಹಿಳಾ ಪ್ರತಿನಿಧಿ ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ವಾಸವಿ ಸಂಘದ ಅಧ್ಯಕ್ಷರಾದ ಡಾ ಆರ್.ಎಲ್ ರಮೇಶ್ ಬಾಬು, 

ಜಿಲ್ಲಾ ಕ ಸಾ ಪ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಕಿರಣ್,

ತಾಲ್ಲೂಕು ಕ ಸಾ ಪ ಅಧ್ಯಕ್ಷರಾದ ಚಿಕ್ಕಬೆಳ್ಳಾವಿ ಶಿವಕುಮಾರ್,  ನಗರ ಕ ಸಾ ಪ ಅಧ್ಯಕ್ಷರಾದ ಗೀತಾ ನಾಗೇಶ್ ,ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್ವರ, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.