22 ಸೆಪ್ಟೆಂಬರ್ 2024

ಆದರ್ಶ ಪಿತ ,ಹೆಮ್ಮೆಯ ಸುತ.


 


ಆದರ್ಶ ಪಿತ ,ಹೆಮ್ಮೆಯ ಸುತ.


ಜಗತ್ತಿನಲ್ಲಿ ತಾಯಿಯ ತ್ಯಾಗಕ್ಕೆ, ಮಮತೆಗೆ, ಪಾಲನೆ ಮಾಡುವ ಗುಣಕ್ಕೆ ಸಾಟಿ ಬೇರಾವುದೂ ಇಲ್ಲ ಅಂತೆಯೇ ತಾಯಿಯ ಗುಣಗಳನ್ನು ಕೊಂಡಾಡುವ ಸಾವಿರದ ಕಥೆಗಳಿಗೆ ಬರವಿಲ್ಲ. ಸಂಸಾರ ಪೋಷಣೆಯಲ್ಲಿ   ತಾಯಿಗೆ ಬೆಂಬಲವಾಗಿ ನಿಂತ ತಂದೆಯನ್ನು ನಾವು ಮರೆತೇ ಬಿಟ್ಟೆವೇನೋ ಎಂದೆನಿಸುವುದು ಸುಳ್ಳಲ್ಲ. ಇತ್ತೀಚೆಗೆ ಗೆಳೆಯನೊಬ್ಬ ಕಳಿಸಿದ ಸಂದೇಶವು ತಂದೆ ಮಗನ ನಡುವಿನ ಅಗೋಚರವಾದ ಬಾವುಕ ಪ್ರೀತಿಯನ್ನು ತರೆದಿಟ್ಟಿತು.ಅದನ್ನು  ನೀವು ಓದಿದರೆ ಖಂಡಿತವಾಗಿಯೂ ನೀವು ಬಾವುಕರಾಗುವಿರಿ.


ತಂದೆ ತಾಯಿ ತಮ್ಮ ಒಬ್ಬನೇ ಮಗನನ್ನು ಮಮತೆಯಿಂದ ಸಾಕಿ ಸಲಹಿ ಒಳ್ಳೆಯ ವಿದ್ಯಾಭ್ಯಾಸವನ್ನೂ ಕೊಡಿಸಿದರು. ಮಗನೂ ಸಹ ಕಷ್ಟಪಟ್ಟು ಓದಿ ತುಂಬಾ ವಿಧೇಯನಾಗಿ ನಡೆದುಕೊಂಡು ವಿಧ್ಯಾಭ್ಯಾಸವನ್ನು ಮುಗಿಸಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದನು. ಒಂದು ಉತ್ಕೃಷ್ಟ ಕಂಪನಿಯಲ್ಲಿ ಕೆಲಸವೂ ಅರಸಿಕೊಂಡು ಬಂತು. ಮೊದಲನೇ ಸಂಬಳವೂ ಸಹ ಅವನ ಕೈ ಸೇರಿತು.


   ತನ್ನ ಮೊದಲ ಸಂಬಳವನ್ನು ತಾಯಿಯ ಕೈಗೆ ಕೊಟ್ಟು ನಮಸ್ಕರಿಸಿದ. ತಾಯಿಗೆ ಖುಷಿಯಾಯಿತು. ಅವಳು ಒಂದು ಕ್ಷಣ ಆಲೋಚಿಸಿ, ಮೊದಲು ಇದನ್ನು ನಿಮ್ಮ ತಂದೆಯ ಕೈಗೆ ಕೊಡು ಎಂದಳು. ಮಗನು ತಾಯಿಯ ಮಾತು ಕೇಳಿಸಿಕೊಂಡರೂ ಕೇಳದಂತೆ ಇದ್ದನು. ಮತ್ತೆ ತಾಯಿಯು ತಂದೆಯ ಕೈಗೆ ಕೊಡುವಂತೆ  ಹೇಳಿ  ಆ ಹಣವನ್ನು ಮರಳಿ ಮಗನ ಕೈಗೆ ನೀಡಿದಳು.


ಆಗ ಮಗನು, ''ಇಲ್ಲಮ್ಮ ನಾನು ಅವರಿಗೆ ಕೊಡುವುದಿಲ್ಲ'' ಎಂದನು. "ಹಾಗೆ ಹೇಳಬಾರದು ಕಂದಾ"ಎಂದಳು ತಾಯಿ. "ನನ್ನಿಂದ ಸಾಧ್ಯವಿಲ್ಲ" ಎಂದು ಮಗ ಉತ್ತರಿಸಿದ. ಇದರಿಂದ ತಾಯಿಗೆ ಸಿಟ್ಟು ಬಂದಿತು. ಇದುವರೆಗೆ ವಿಧೇಯನಾಗಿದ್ದ ಮಗನ ಈ ವರ್ತನೆಗೆ ನೊಂದಳು. ಬೆಳೆದ ಮಗ ಮುಂದೆ ಮನೆಯ ಜವಾಬ್ಧಾರಿ ಹೊರುವ ಈತ ಹೀಗೇಕೆ ? ಎಂದು ಮನದಲ್ಲಿಯೇ ಸಂಕಟ ಪಟ್ಟುಕೊಂಡಳು. ಕೊನೆಗೆ ಏನಾಯಿತೋ ಏನೋ ಬೆಳೆದ ಮಗ ಎಂದೂ ನೋಡದೆ ತಕ್ಷಣವೇ ಕಪಾಳಕ್ಕೆ ಚಟಾರ್ ಎಂದು ಭಾರಿಸಿದಳು. ಕೋಪದಿಂದ ಬೈದಳು. ಮುಂದುವರೆದು "ಮೊದಲ ಸಂಬಳ ತೆಗೆದುಕೊಂಡ ಕೂಡಲೆ ನೀನು ದೊಡ್ಡವನಾದಿಯೇನೋ, ಬಹಳ ದೊಡ್ಡ ವ್ಯಕ್ತಿ ಆಗಿಬಿಟ್ಟಿಯೇನೋ,ಛೇ!" ಎಂದು ಮೂದಲಿಸಿದಳು.

"ತಂದೆಗೆ ಕೊಡು ಎಂಬ ನನ್ನ ಮಾತನ್ನು ಸಹ ನೀನು ದಿಕ್ಕರಿಸಿರುವೆ. ಇದೇನಾ ನೀನು ಇದುವರೆಗೂ ಕಲಿತುಕೊಂಡ ಸಂಸ್ಕಾರ" ಎಂದು ಬೈದಳು.


ಮಗನು ತನ್ನ ಕೆನ್ನೆಯನ್ನು ಸವರಿಕೊಳ್ಳುತ್ತಾ ಕಣ್ಣಿಂದ ಸಿಡಿದ ಹನಿಯನ್ನು ಅಂಗೈಯಿಂದ  ಒರೆಸಿಕೊಳ್ಳುತ್ತಾ  ದುಃಖದಿಂದ ತಾಯಿಗೆ ಹೇಳುತ್ತಾನೆ, ''ಇಲ್ಲಮ್ಮ, ನನ್ನ ತಂದೆಯ ಕೈ ಯಾವತ್ತೂ ಮೇಲೆಯೇ ಇರಬೇಕು. ಕೆಳಗೆ ಕೈ ಚಾಚಕೂಡದು. ಹಾಗೆಯೇ ಮೇಲೆಯೇ ಇರಲಿ ಎಂಬುದೇ ನನ್ನ ಅದಮ್ಯ ಆಸೆ. ಇದುವರೆಗೂ ಅವರಿಂದ ನಾನು ಹಣ ಪಡೆದುಕೊಳ್ಳುವಾಗ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಈಗ ನಾನು ಅವರಿಗೆ ಇದನ್ನು ಕೊಡುವಾಗ ಅವರ ಕೈ ನನ್ನ ಕೈಗಳ ಕೆಳಗೆ ಬರುತ್ತದೆ. ಅದು ನನಗಿಷ್ಟವಿಲ್ಲ. ಎಂದೆಂದೂ  ಸರ್ವಕಾಲಕ್ಕೂ ನನ್ನ ತಂದೆಯ ಕೈಗಳು ಮೇಲೆಯೇ ಇರಬೇಕು.      ನೀವೇ ಇದನ್ನು ಅಪ್ಪನಿಗೆ ಕೊಟ್ಟು ಬಿಡಿ. ಅವರಿಗೆ ಹಣ ಕೊಡುವಷ್ಟು ಯಾವ ಅರ್ಹತೆಯೂ ನನಗಿಲ್ಲ. ನೀವು ಕೊಡಿ, ನಾನು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆಯುವೆ'' ಎಂದನು. 

ತಾಯಿಗೆ ದಿಗ್ಭ್ರಮೆಯಾಯಿತು. ವಿಗ್ರಹದಂತೆ   ನಿಂತು ಬಿಟ್ಟಳು.


   ಕೊಠಡಿಯ ಒಳಗೆ ಕುಳಿತು ತಾಯಿ-ಮಗನ ಸಂಭಾಷಣೆಯನ್ನು ಕೇಳಿಸಿ ಕೊಳ್ಳುತ್ತಿದ್ದ ತಂದೆ, ತಕ್ಷಣ ಹೊರಬಂದು ತಮ್ಮ ಮಗನನ್ನು ನೋಡಿದ. ಕಣ್ಣಲ್ಲಿ ನೀರು ತುಂಬಿ ಬಂತು. ಅದು ಆನಂದ ಭಾಷ್ಬ. ತನ್ನ ಎರಡು ಬಾಹುಗಳಿಂದ ಮಗನಿಗೆ ಬಿಗಿಯಾದ ದೀರ್ಘಾಲಿಂಗನ ಮಾಡಿದನು. ತನ್ನ ಮಗ ತನ್ನನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವನಲ್ಲ ಎಂದು ಹೆಮ್ಮೆಯಿಂದ ಮಗನ ಕಣ್ಣಿನೊಳಗೆ ತನ್ನ ಬಿಂಬವನ್ನು ನೋಡಿ ಪುಳಕಿತನಾದನು. ಮನದಲ್ಲಿ ಹೆಮ್ಮೆಯ ಸಾರ್ಥಕ ಭಾವ ತುಂಬಿ ಬಂದಿತು. ಮೈ ಮನಸ್ಸು ಹಗುರವಾಗಿ ಗಾಳಿಯಲ್ಲಿ ತೇಲಿದ ಅನುಭವ. ಕೈಯಲ್ಲಿ ಮೋಡ ಹಿಡಿದ ಅನುಭವವಾಯಿತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


 

20 ಸೆಪ್ಟೆಂಬರ್ 2024

ಸಿಹಿಜೀವಿಯ ನುಡಿ


 



ಸವಾಲುಗಳೆಷ್ಟೇ ಇರಲಿ। 

ಗುರಿಮುಟ್ಟುವ ನಿರಂತರ ಪ್ರಯತ್ನ ಜಾರಿಯಲ್ಲಿರಲಿ॥


©ಸಿಹಿಜೀವಿ ವೆಂಕಟೇಶ್ವರ

ಭಾರತದ ಅಗಲವಾದ ರಸ್ತೆ...


 ಹೊಸ ಬೆಂಗಳೂರು- ಮುಂಬೈ ಎಕ್ಸ್‌ಪ್ರೆಸ್ ವೇ

  ಹೊಸ 14 ಲೇನ್ ಗಳ  ಮುಂಬೈ-ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಾಣ ಮಾಡಲಾಗುತ್ತದೆ.

 ಆರಂಭದಲ್ಲಿ ಇದನ್ನು 8 ಲೇನ್ ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜಿಸಲಾಗಿತ್ತು ಆದರೆ ಈಗ ಮುಂಬೈ-ಬೆಂಗಳೂರು ಅನ್ನು ಪುಣೆ ಮೂಲಕ ಸಂಪರ್ಕಿಸಲು ಯೋಜನೆಯನ್ನು ಬದಲಾಯಿಸಲಾಗಿದೆ ಈ ಎಕ್ಸ್‌ಪ್ರೆಸ್‌ವೇ ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕವನ್ನು ಮುಂಬೈ ಮತ್ತು ಬೆಂಗಳೂರಿಗೆ ಹತ್ತಿರ ತರುತ್ತದೆ ಮತ್ತು ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ ಮತ್ತು ಸಾಗಾಣಿಕೆ ವೆಚ್ಚವನ್ನು ಬಹಳ  ಕಡಿಮೆ ಮಾಡುತ್ತದೆ. ಈ ಯೋಜನೆ ಪೂರ್ಣಗೊಂಡ ಮೇಲೆ ಭಾರತದಲ್ಲಿ ಅಗಲದಲ್ಲಿ ಅತಿದೊಡ್ಡ ಎಕ್ಸ್‌ಪ್ರೆಸ್‌ವೇ ಆಗಿರಲಿದೆ...

#road #infrastructure #Expressway #sihijeeviVenkateshwara

19 ಸೆಪ್ಟೆಂಬರ್ 2024

ಹನಿಗವನ

 

ಸಿರಿಬಂದ ಕಾಲಕ್ಕೆ ನೆಂಟರು

ನೂರು|

ಆಪತ್ಕಾಲದಲ್ಲಿ ತಿಳಿವುದು ನಮಗೆ ನಮ್ಮವರಾರು?||


#sihijeeviVenkateshwara #quotes #kannada #quoteoftheday

16 ಸೆಪ್ಟೆಂಬರ್ 2024

ಮಹಾಶರಣ ಕಮ್ಮಾರ ಕಲ್ಲಯ್ಯ...ಪುಸ್ತಕ ಪರಿಚಯ..


 


ಕಮ್ಮಾರ ಕಲ್ಲಯ್ಯ.

ಮಾಹಾಶರಣರ ಬಗ್ಗೆ ಒಂದು ಸಂಶೋಧನಾ ಕೃತಿ


ಎಂದಿನಂತೆ ಮಗಳೊಂದಿಗೆ ವಾಕ್ ಮಾಡಿ ಬರುವಾಗ ಆತ್ಮೀಯರಾದ ಮಂಜಣ್ಣನವರು ಒಂದು ಪುಸ್ತಕ ನೀಡಿ  ಈ  ಪುಸ್ತಕ  ಓದಿ ಸರ್ ಎಂದರು. ಬಹುತೇಕ ನನ್ನ ಎಲ್ಲಾ  ಬರೆಹಗಳನ್ನು ಓದಿ ಪ್ರೋತ್ಸಾಹ ಮಾಡುವ ಮಂಜಣ್ಣನವರ ಸಾಹಿತ್ಯಾಭಿರುಚಿ ಕಂಡು ಅವರನ್ನು ಆಗಾಗ ಧನ್ಯವಾದಗಳನ್ನು ಹೇಳುತ್ತಲೇ ಬಂದಿರುವೆ.ಈಗ ಒಂದು ಕಿರುಹೊತ್ತಿಗೆ ನೀಡಿ ಹಿರಿದಾದ ಜ್ಞಾನವನ್ನು ಪಡೆಯಲು ಸಹಕಾರಿಯಾದ ಮಂಜಣ್ಣನವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳಲೇಬೇಕು.

ಅಂದ ಹಾಗೆ ಅವರು ಅಂದು ನನಗೆ ನೀಡಿದ ಪುಸ್ತಕ  "ಮಹಾಶರಣ ಕಮ್ಮಾರ ಕಲ್ಲಯ್ಯ"


ಆಕಾಶದಲ್ಲಿ ನಕ್ಷತ್ರದಂತೆ ಮಿನುಗುತ್ತಾ ಬೆಳೆದು ಬಂದಂತಹ 12 ನೇ ಶತಮಾನದಲ್ಲಿ ಬೆಳಕಿಗೆ ಬಂದ ಸಂತತಿಯಲ್ಲಿ ಶರಣ ಬಸವಣ್ಣನವರ ಸಂಸ್ಕಾರ ದಡಿಯಲ್ಲಿ ಸಾವಿರಾರು ಶರಣರು ಬೆಳೆದು ಹೆಮ್ಮರವಾಗಿದ್ದಾರೆ.

ಎಲ್ಲಾ ವರ್ಗದ ಶರಣರನ್ನು ಸಮಾನವಾಗಿ ಕಂಡು ಪ್ರೋತ್ಸಾಹ ನೀಡಿ ಬೆಳೆಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು. ಈಗಾಗಲೇ ಹಲವಾರು ಶರಣರು ಲಭ್ಯ ವಚನಗಳ  ಆಧಾರದ ಮೇಲೆ ಜನಜನಿತರಾಗಿದ್ದಾರೆ.ಇನ್ನೂ ಕೆಲ ಶರಣರು ದಾಖಲೆಗಳ ಕೊರತೆಯಿಂದ  ಅಜ್ಞಾತವಾಗಿಯೇ ಉಳಿದಿದ್ದಾರೆ.ಅಂತಹವರಲ್ಲಿ  ಒಬ್ಬರು ಮಹಾ ಶರಣ ಕಮ್ಮಾರ ಕಲ್ಲಯ್ಯ‌.

 ಕಮ್ಮಾರಿಕೆ ಕುಲವೃತ್ತಿಯನ್ನು ಮಾಡುತ್ತಾ ದಾರ್ಶನಿಕರಾಗಿ ಜಗತ್ತಿನ ಶ್ರೇಷ್ಠ ಪಂಕ್ತಿಯಲ್ಲಿ ಬೆಳೆದಿರುವ ಶರಣರಲ್ಲಿ ನಿಜ ಶರಣ ಕಮ್ಮಾರ ಕಲ್ಲಯ್ಯನವರು

 ತಮ್ಮ ಜೀವನವನ್ನು ಪೂರ್ಣವಾಗಿ ಶರಣ ಸಂತತಿಯ ಬೆಳವಣಿಗೆಗೆ ಧಾರೆ ಎರೆದ ಮಹಾನುಭಾವರು. ಇಂತವರ ಬಗ್ಗೆ ಅನೇಕ ಗ್ರಂಥಗಳು ಬಹುತೇಕ ಕಡೆ ಹುಡುಕಿದರೂ ಸಿಗದಿರುವ ಅಪರೂಪದ ವಿಚಾರಗಳನ್ನು  ಅನೇಕ ಗ್ರಂಥಗಳನ್ನು ಪರಿಶೀಲಿಸಿ, ಜನಪದ ಆಕರಗಳನ್ನು ಬಳಸಿಕೊಂಡು ತಮ್ಮ ಬುದ್ದಿವಂತಿಕೆಯ ಚಾತುರ್ಯವನ್ನು ಕಮ್ಮಾರ ಸಮುದಾಯಕ್ಕೆ ದಾರಿದೀಪವಾಗುವಂತೆ ಆಧಾರವನ್ನಾಗಿಸುವ ಪ್ರಯತ್ನವನ್ನು ಮಾಡಿ ಡಾ. ಸೋಮನಾಥ ಯಾಳವಾರ  ಕಿರು ಹೊತ್ತಿಗೆ ರಚಿಸಿದ್ದಾರೆ.

ಹೊತ್ತಿಗೆ ಕಿರಿದಾದರೂ ಅದರಲ್ಲಿ ಸತ್ವಯುತವಾದ ವಿಚಾರವಿದೆ ಎಂಬುದು ನನ್ನ ಅಭಿಪ್ರಾಯ.


ಡಾ. ಸೋಮನಾಥ ಯಾಳವಾರರವರ ಅಧ್ಯಯನದ, ಹರವು ಬಹುವಿಸ್ತಾರ, ದೃಷ್ಟಿ ವಿಶಾಲ ಮತ್ತು ಬರವಣಿಗೆ ಪ್ರಖರವಾದದ್ದು, ಸಾಹಿತ್ಯದ ವಿವಿಧ ಘಟ್ಟಗಳು, ಪ್ರಕಾರಗಳು, ಆಯಾಮಗಳು ಅವರಿಗೆ ಕರತಲಾಮಲಕ ಜನಪದ, ತತ್ವಪದ, ಕೀರ್ತನ ಸಾಹಿತ್ಯ, ವಚನ ಸಾಹಿತ್ಯ ಮತ್ತು ಆಧುನಿಕ ಸಾಹಿತ್ಯವನ್ನು ಸೂಕ್ಷ್ಮ ಹಾಗೂ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿರುವ ಇವರು. ವಚನ ಸಾಹಿತ್ಯ ಕುರಿತಾಗಿ ಹೆಚ್ಚಿನ ಒಲವಿನಿಂದ  ಬಸವಾದಿ ಶರಣರ ಕುರಿತಾಗಿ ಅನೇಕ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಜಾನಪದರ ಹಾಡಿನ ಜಾಡು ಹಿಡಿದು ಆ ಹಾಡುಗಳ ಆಧಾರದ ಮೇಲೆ ಅವರು  ನಮಗೆ ಕಲ್ಲಯ್ಯನವರ ದರ್ಶನ ಮಾಡಿಸಿದ್ದಾರೆ. 


'ಕಮ್ಮಾರಿಕೆ' ಯ ಪವಿತ್ರ ಕಾಯಕ ಕೈಕೊಂಡಿದ್ದ ಕಲ್ಲಯ್ಯ ಬಿಜಾಪುರ ಭಾಗದ 'ಮುತ್ತಗಿ' ಯಲ್ಲಿ ಹುಟ್ಟಿದ ಮುತ್ತು. ಭಕ್ತನಾಗಿದ್ದ ಈತ ಸಿದ್ಧರಾಮೇಶ್ವರ ಪ್ರಭಾವಲಯಕ್ಕೆ ಬಂದು ವಿರಕ್ತನಾಗಿ ನಂತರ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ, ಸಿದ್ದರಾಮೇಶ್ವರರಿಂದ ಶರಣತತ್ವ ತಿಳಿದುಕೊಂಡು ಶರಣಜೀವಿಯಾದ ಬಗ್ಗೆ ಜನಪದ ತ್ರಿಪದಿಯ ಆಧಾರದಿಂದ  ತಿಳಿದುಬರುತ್ತದೆ. ಕಮ್ಮಾರ ಕಲ್ಲಯ್ಯ ಬಸವಣ್ಣನವರ ಕಟ್ಟಾ ಅನುಯಾಯಿಯಾಗಿದ್ದರು. ಗೌರಮ್ಮ ಮಾದಾರ ಹಾಡಿರುವ  64 ತ್ರಿಪದಿಗಳು ಕಮ್ಮಾರ ಕಲ್ಲಯ್ಯನವರ ಜೀವನದ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.ಇಂತಹ ಪ್ರಯತ್ನಗಳು ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ  ಎಲೆ ಮರೆ ಕಾಯಿಗಳಾಗಿರುವ ನೂರಾರು ಶರಣರ ಜೀವನ ಚರಿತ್ರೆಗಳು ಹೊರತರುವಲ್ಲಿ. ಕೆಲ ಸಂಘ ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ.

ಲಿಂಗಾಯತ ವಿಶ್ವ ವಿದ್ಯಾಲಯದ ಪ್ರಸಾರಾಂಗವು   ಅನುಭವ ಮಂಟಪ ಶರಣಚರಿತಾಮೃತ ಮಾಲಿಕೆಯಡಿಯಲ್ಲಿ 39 ನೇ ಕೃತಿಯಾಗಿ ಪ್ರಕಟಿಸಿದ ಈ ಕೃತಿಯು ಮೌಲಿಕವಾದದ್ದು ಇಂತಹ ನೂರಾರು ಶರಣರ ಕೃತಿಗಳು ಪ್ರಕಟವಾಗಲಿ ಎಂಬುದೇ ನಮ್ಮ ಆಶಯ.



ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು.

ತುಮಕೂರು.

9900925529