17 ಜುಲೈ 2024

ಸಿಹಿಜೀವಿಯ ಹನಿಗಳು

 


ಪಂಚೆ ನಮ್ಮ ಅಸ್ಮಿತೆ 


ಓ ಮಾಲಿನ ಮಾಲಿಕರೆ

ರೈತ ಪಂಚೆ ಉಟ್ಟು ಬಂದರೆ

ತೆಗೆಯಬೇಡಿ ಕ್ಯಾತೆ|

ಮನದಟ್ಟು ಮಾಡಿಕೊಳ್ಳಿ 

ಪಂಚೆ ನಮ್ಮ ಅಸ್ಮಿತೆ||


ಕಾಯುತ್ತ ಕೂರಬೇಡ

ಸಿಗಲಿಲ್ಲವೆಂದು ಅವಕಾಶ|

ಸತತ ಪ್ರಯತ್ನ ಪಡುತ್ತಲಿದ್ದರೆ 

ಮುಟ್ಟಿಬಿಡಬಹುದು ಆಕಾಶ||


ಸಿಹಿಜೀವಿ ವೆಂಕಟೇಶ್ವರ 

ತುಮಕೂರು


12 ಜುಲೈ 2024

ವಾಕಿಂಗ್ ಲೈಬ್ರರಿ #walking library

 


ವಾಕಿಂಗ್ ಲೈಬ್ರರಿ.


ನಮ್ಮ ಕನ್ನಡದ ಸಾಹಿತಿಗಳಾದ ಗಳಗನಾಥರು ತಲೆಯ ಮೇಲೆ ಪುಸ್ತಕ ಹೊತ್ತು ಮಾರಾಟ ಮಾಡಿ ಕನ್ನಡ ಸೇವೆಯ ಮಾಡುತ್ತಾ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿದ್ದು ನಮಗೆಲ್ಲ ತಿಳಿದಿದೆ.

 1930 ರ ದಶಕದಲ್ಲಿ ಲಂಡನ್‌ನಲ್ಲಿನ "ವಾಕಿಂಗ್ ಲೈಬ್ರರಿ" ಪರಿಕಲ್ಪನೆಯು ಪುಸ್ತಕಗಳನ್ನು ತಮ್ಮೊಂದಿಗೆ ಕೊಂಡೊಯ್ಯುವ ಮತ್ತು ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಿಗೆ ನೀಡುವ ವ್ಯಕ್ತಿಗಳನ್ನು ಕಾಣಬಹುದಾಗಿತ್ತು. ಇವರೇ ವಾಕಿಂಗ್ ಲೈಬ್ರರಿ!  ಈ ವಾಕಿಂಗ್ ಲೈಬ್ರರಿಗಳು ಮೂಲಭೂತವಾಗಿ ಮೊಬೈಲ್ ಗ್ರಂಥಾಲಯಗಳಾಗಿದ್ದು, ಸಾಂಪ್ರದಾಯಿಕ ಗ್ರಂಥಾಲಯಗಳಿಗೆ ಸುಲಭ ಪ್ರವೇಶವನ್ನು ಹೊಂದಿರದ ಜನರಿಗೆ ಪುಸ್ತಕಗಳನ್ನು ತಲುಪಿಸುವ ಮಹತ್ಕಾರ್ಯ ಮಾಡುತ್ತಿದ್ದವು.

 

 ಜನರಲ್ಲಿ ಸಾಕ್ಷರತೆ ಮತ್ತು ಓದುವ ಪ್ರೀತಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು.  ವಾಕಿಂಗ್ ಲೈಬ್ರರಿಗಳಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಬೀದಿಗಳು, ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಾ, ಪುಸ್ತಕಗಳನ್ನು ಕೊಡುತ್ತಿದ್ದರು.ಅನಿವಾರ್ಯ ಕಾರಣದಿಂದಾಗಿ  ಗ್ರಂಥಾಲಯಗಳಿಗೆ  ಭೇಟಿ ಮಾಡಲು ಸಾಧ್ಯವಾಗದವರಿಗೆ ಈ ವಾಕಿಂಗ್ ಗ್ರಂಥಾಲಯಗಳು ವರದಾನವಾಗಿದ್ದವು.

 

 1930 ರ ದಶಕವು ಆರ್ಥಿಕ ಸವಾಲುಗಳಿಂದ ಗುರುತಿಸಲ್ಪಟ್ಟ ಅವಧಿಯಾಗಿತ್ತು. ಅಂತಹ ನವೀನ ಆಲೋಚನೆಗಳು ಜನಸಾಮಾನ್ಯರಿಗೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದವು.  ವಾಕಿಂಗ್ ಲೈಬ್ರರಿಗಳು ಸಮುದಾಯದ ಪ್ರಜ್ಞೆಯನ್ನು ಬೆಳೆಸಿದವು ಮತ್ತು ಕಲಿಕೆಯ ಅನುಭವಗಳನ್ನು ಹಂಚಿಕೊಂಡವು.


ಪ್ರಸ್ತುತ ಭಾರತದ ಇತರೆ ನಗರಗಳಲ್ಲಿ ಮೊಬೈಲ್ ಲೈಬ್ರರಿಗಳು ಕಾರ್ಯನಿರತವಾಗಿವೆ. ಬೆಂಗಳೂರಿನಲ್ಲಿ ಬಸ್ಸುಗಳ ಮೇಲೆ ಸಂಚರಿಸುವ ಸಂಚಾರಿ ಮೊಬೈಲ್ ಕಾಣಬಹುದು. ಗುಜರಿ ನೀತಿಯ ಪರಿಣಾಮವಾಗಿ ಹಳೆಯ ಬಸ್ ಗಳಲ್ಲಿನ ಸಂಚಾರಿ ಗ್ರಂಥಾಲಯಗಳು ನಿಂತಲ್ಲೇ ನಿಲ್ಲುವಂತಾಗಿದ್ದು ಇವುಗಳು ಚಲಿಸಲು ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಮೊಬೈಲ್ ಲೈಬ್ರರಿ  ಪರಿಕಲ್ಪನೆ ಸಾಕಾರಗೊಳಿಸಲು ಕೆಲ ಖಾಸಗಿ ಸಂಸ್ಥೆಗಳು ಮತ್ತು ಪ್ರಕಾಶನ ಸಂಸ್ಥೆಗಳು ಪ್ರಯತ್ನ ಪಡುತ್ತಿರುವುದು ಆಶಾದಾಯಕ ಬೆಳೆವಣಿಗೆ. ಈ ನಿಟ್ಟಿನಲ್ಲಿ ವೀರಲೋಕ ಬುಕ್ಸ್ ನ ವೀರಕಪುತ್ರ ಶ್ರೀನಿವಾಸ್ ರವರು ಇಲ್ಲಿ ಉಲ್ಲೇಖಾರ್ಹ. ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಹಾಗೂ ರಾಜ್ಯದ ವಿವಿಧೆಡೆ ಮೊಬೈಲ್ ಲೈಬ್ರರಿಗಳು ಹೆಚ್ಚಾಗಲಿ ಎಲ್ಲೆಡೆಯೂ ಜ್ಞಾನ ಪಸರಿಸಲಿ ಎಂದು ಆಶಿಸೋಣ.

 ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


#kannada #books #booklover #library #walking #Veeraloka #sihijeevi #tumkur

ನಂಜುಂಡಪ್ಪನವರು


 


ಬೆನ್ನುಡಿ.


ನಂಜುಂಡಪ್ಪನವರು ಸರಳ ಸಜ್ಜನ ಅದ್ಯಾತ್ಮ ಸಾಧಕರು.ಕಳೆದ ಐದು ವರ್ಷಗಳ ಅವರ ಒಡನಾಟದಲ್ಲಿ ಅವರೊಂದಿಗೆ ಮಾತನಾಡುತ್ತಾ ಕುಳಿತರೆ ಅವರ ವ್ಯಕ್ತಿತ್ವ ಅನಾವರಣಗೊಳ್ಳುವುದು. ಅವರ ಮಾತುಗಳಲ್ಲಿ  ದೇಶಭಕ್ತಿ, ಯುವಕರ ಬಗ್ಗೆ ಕಾಳಜಿ, ಅದ್ಯಾತ್ಮದ ವಿಷಯಗಳು ಹೆಚ್ಚು ಕಂಡು ಬರುತ್ತವೆ.ಅವರೊಂದಿಗೆ ಮಾತನಾಡುತ್ತಿದ್ದರೆ ನಮ್ಮಲ್ಲಿ ಹೊಸ ಚಿಂತನೆಗಳು ಮೂಡುತ್ತವೆ.

ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಮೆಟ್ಟಿ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿ, ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಅವರ ಜೀವನವೇ ಒಂದು ಪವಾಡದಂತೆ ನನಗನ್ನಿಸುತ್ತದೆ.

ನಿವೃತ್ತ ಅಂಗ್ಲ ಉಪನ್ಯಾಸಕರಾದ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರದೊಂದಿಗೆ ಜ್ಞಾನವನ್ನು ನೀಡಿ ಅವರ ವ್ಯಕ್ತಿತ್ವ ಸುಧಾರಿಸಲು ಮಾರ್ಗದರ್ಶನ ನೀಡಿದ್ದಾರೆ. "ಪರೋಪಕಾರ್ಥಂ ಇದಮಿತ್ತಂ ಶರೀರಂ" ಎಂಬ ವಾಣಿಯಂತೆ ಪರೋಪಕಾರದಲ್ಲಿ ಇವರು ಎತ್ತಿದ ಕೈ. ದೇಶ ಸುತ್ತುವುದು ಕೋಶ ಓದುವುದು ಇವರ ಪ್ರಮುಖ ಹವ್ಯಾಸಗಳು.  ಇವರು ಪ್ರಸ್ತುತ ತಮ್ಮ ಚಾರ್ ಧಾಮ್ ಯಾತ್ರೆ ಮತ್ತು ಅಂಡಮಾನ್ ಪ್ರವಾಸ ಕಥನ ಬರೆದಿದ್ದಾರೆ. ಚಾರ್ ಧಾಮ್ ಯಾತ್ರೆಯ ಅವರ ಪ್ರವಾಸ ಕಥನ ಓದುವಾಗ ಒಬ್ಬ ಯೋಗಿಯ ಆತ್ಮಕಥೆ ಓದಿದ ಅನುಭವವಾಯಿತು.ಅಂತಹ ಸಾಧಕರ ಜೊತೆಯಲ್ಲಿ ಒಡನಾಡುವುದು ನಮ್ಮ ಭಾಗ್ಯ ಎಂದರೆ ಅತಿಶಯೋಕ್ತಿಯಲ್ಲ.

ನಾನು ಕಳೆದ ವರ್ಷ ಅಂಡಮಾನ್ ಗೆ ಅವರ ಜೊತೆಯಲ್ಲಿ ಪ್ರವಾಸ ಹೋಗಿದ್ದೆ. ಅವರ ಅಂಡಮಾನ್ ಪ್ರವಾಸದ ಅನುಭವಗಳನ್ನು ಓದುವಾಗ ನನ್ನ ಮನದ ಭಾವನೆಗಳೇನೋ ಎಂಬ ರೀತಿಯ ಸಾಮ್ಯತೆ ಕಂಡು ಸಂತಸವಾಯಿತು.ಅದರಲ್ಲೂ ಬಾರಾಟಂಗ್ ಐಲ್ಯಾಂಡ್‌ ನಲ್ಲಿ ಅವರಿಗಾದ ಅಲೌಕಿಕ ಅನುಭವಗಳನ್ನು ನಾವು ಓದಿಯೇ ತಿಳಿಯಬೇಕು. ಈಗಾಗಲೇ ಹಲವಾರು ಕವಿತೆ ಹಾಗೂ ಲೇಖನಗಳನ್ನು ಬರೆದಿರುವ ಇವರು ಅವುಗಳನ್ನು ಪ್ರಕಟ ಮಾಡಿರಲಿಲ್ಲ. ಗೆಳೆಯರ ಬಳಗದ ಒತ್ತಾಯದ ಮೇರೆಗೆ ಬರೆದ ಈ ಪ್ರವಾಸ ಕಥನ ಈಗ ಪ್ರಕಟವಾಗಿದೆ. ಇನ್ನೂ ಹೆಚ್ಚಿನ ಕೃತಿಗಳು ಇವರ ಲೇಖನಿಯಿಂದ ಹೊರಹೊಮ್ಮಿ ತಾಯಿ ಭುವನೇಶ್ವರಿಯ ಆಶೀರ್ವಾದ ಪಡೆಯಲಿ ಎಂದು ಮನಃಪೂರ್ವಕವಾಗಿ  ಹಾರೈಸುವೆ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು

ತುಮಕೂರು

9900925529


ದ್ರಾವಿಡ್

 


ಗೋಡೆಯ ಹೆಮ್ಮೆಯ ನಡೆ.


ಭಾರತದ ಗೋಡೆ ನಿರಾಕರಿಸಿದೆ ಹೆಚ್ಚವರಿ ಎರಡೂವರೆಕೋಟಿ ಬಹುಮಾನದ ಮೊತ್ತ!

ಹಣದಾಸೆಗೆ ಆರೋಗ್ಯ ಹಾಳು    ಮಾಡುವ ಜಾಹಿರಾತುಗಳನ್ನು ನೀಡುವ ನಟ ನಟಿಯರು ಗಮನಿಸಬೇಕು ಇತ್ತ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

04 ಜುಲೈ 2024

ದೀಪದಾರಿಣಿ ಫ್ಲಾರೆನ್ಸ್ ನೈಟಿಂಗೇಲ್

 



ದೀಪದಾರಿಣಿ ಫ್ಲಾರೆನ್ಸ್ ನೈಟಿಂಗೇಲ್ 


ನನ್ನಮ್ಮ ನೂರಾರು ಹೆರಿಗೆ ಮಾಡಿಸಿದ ಮಹಾತಾಯಿ. ನಾನು ಬಾಲಕನಾಗಿದ್ದಾಗ ಆ ಸೇವೆಯ ಬಗ್ಗೆ ಅಷ್ಟೊಂದು ಮಾಹಿತಿಯಿರಲಿಲ್ಲ   ಫ್ಲಾರೆನ್ಸ್ ನೈಟಿಂಗೇಲ್ ಬಗ್ಗೆ ಓದಿ ತಿಳಿದಾಗ ನನ್ನಮ್ಮನ ಬಗ್ಗೆ ನನಗೆ ಇನ್ನೂ ಗೌರವ ಹೆಚ್ಚಾಯಿತು. 

ನೀವೂ ಫ್ಲಾರೆನ್ಸ್ ನೈಟಿಂಗೇಲ್ ಬಗ್ಗೆ ತಿಳಿಯಲು ಓದಿ.

ಫ್ಲಾರೆನ್ಸ್ ನೈಟಿಂಗೇಲ್  "ಲೇಡಿ ವಿತ್ ದಿ ಲ್ಯಾಂಪ್" ಎಂದೇ ಪ್ರಖ್ಯಾತರಾಗಿದ್ದ ಮಹಿಳೆ.ಜನನ ಇಟಲಿಯಲ್ಲಿ  1820 ರ ಮೇ 12 ರಂದು.ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ,ತಮ್ಮ 17ನೇ ವಯಸ್ಸಿನಲ್ಲೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು.ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು. 1858ರ ಅಕ್ಟೋಬರ್ 21ರಂದು ತಮ್ಮ 38 ನರ್ಸ್ ತಂಡದೊಂದಿಗೆ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಶುಶ್ರೂಷೆ ಮಾಡಿದರು.ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದಳು. ಇದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಳು. ಇಂದಿಗೂ ಈಕೆ ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲ ಆಸ್ಪತ್ರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ. ಈ 'ದೀಪ ಧಾರಿಣಿ' ಇಟಲಿಯ ಫ್ಲಾರೆನ್ಸ್ ನಗರದಲ್ಲಿ ಹುಟ್ಟಿದ ಪ್ಲಾರೆನ್ಸ್ ನೈಟಿಂಗೇಲ್. ಇವರ ನೆನಪಿಗಾಗಿ ಲಂಡನ್‌ನ ವಾಟರ್‌ಲೂ ಅರಮನೆಯಲ್ಲಿ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ.


ತನ್ನ ಮನೆತನದ ವಿರೋಧದ ನಡುವೆಯು ತನ್ನ ಸಮಸ್ತ ಪ್ರತಿಷ್ಠೆ ಗೌರವ ಸಿರಿತನ ಹಾಗೂ ತನ್ನ ವೈಯಕ್ತಿಕ ಸುಖ ಸಂತೋಷವನ್ನು ಧಾರೆಯೆರೆದು ಇಂಗ್ಲೆಂಡಿನ ಹೈಸರ್‌ವರ್ಥ್ ನಗರದ ಲೂಥರನ್‌ ಆಸ್ಪತ್ರೆಯಲ್ಲಿ ದಾದಿಯರ ಶುಶ್ರೂಷೆ ಶಿಕ್ಷಣ ಶಾಲೆಗೆ ವಿದ್ಯಾರ್ಥಿನಿಯಾಗಿ ಸೇರ್ಪಡೆಗೊಂಡಳು. ತನ್ನ ಶ್ರದ್ಧೆ ಮತ್ತು ಅನುಪಮ ಸೇವೆಯಿಂದ ಶಿಕ್ಷಕರ ಪ್ರಶಂಸೆಗೆ ಪಾತ್ರಳಾದಳು. ತನ್ನ ಮನದಭಿಲಾಷೆಯಂತೆ ರೋಗಿಗಳ ಆರೈಕೆಯ ಸೇವೆಗೆ ಧುಮುಕಿದಳು. ಆ ಕಾಲದಲ್ಲಿ ಮಹಿಳೆಯರಿಗೆ ಸೇವೆ ಸಲ್ಲಿಸುವ ಅನುಮತಿ ಇರಲಿಲ್ಲ.ಪುರುಷ ಪ್ರಾಧಾನ್ಯತೆ ಹೊಂದಿದಂತಹ ಆ ಸಮಯದಲ್ಲಿ ನೈಟಿಂಗೇಲ್‌ ತನ್ನ ಮಾನವೀಯತೆಯ ಮಾತೃತ್ವದ ಅಮೋಘ ಸೇವೆಯಿಂದ ಮನಗೆದ್ದು ಮಹಿಳೆಯರಿಗೆ ದಾದಿಯ ವೃತ್ತಿಗೆ ಅಡಿಪಾಯ ಹಾಕಿದಳು. ನೈಟಿಂಗೇಲ್‌ ಒಬ್ಬಂಟಿ ಮಹಿಳೆಯಾದರೂ ಧೃತಿಗೆಡದೆ ಯುದ್ಧ ಶಿಬಿರದಲ್ಲಿ ಸಲ್ಲಿಸಿದ ಸೇವೆಯಲ್ಲಿ ಇಡೀ ಸೈನಿಕರಿಗೆ ದೇವತೆಯಂತೆ ಕಂಡಳು. ಅಂದಿನ ಅಧಿಕಾರಷಾಹಿಗಳಿಗೆ ಯುದ್ಧದಲ್ಲಿ ಮತ್ತೊಂದು ಸಾಮ್ರ್ಯಾಜ್ಯವನ್ನು ಕಸಿದು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಗುಣವಿತ್ತೇ ವಿನಃ ತಮಗಾಗಿ ಯುದ್ಧ ಮಾಡುವವನಿಗೆ ಏನಾಗಿದೆ ಆತನಿಗೆ ಪೆಟ್ಟು ಬಿದ್ದಾಗ ಏನು ಮಾಡಬೇಕೆಂಬುದರ ಕಾಳಜಿ ಇರಲಿಲ್ಲ. ರೋಗಿಗಳಲ್ಲಿ ತುಂಬಾ ಗಂಭೀರರಾದವರನ್ನು ಸಮುದ್ರದಲ್ಲಿ ಎಸೆದರೆ, ಸ್ವಲ್ಪ ತ್ರಾಣವಿರುವವರನ್ನು ತಿಂಗಳಾನುಗಟ್ಟಲೆ ಹಡಗಿನ ಪ್ರಯಾಣದಲ್ಲಿ ಸಾಗಿಸಿ ಪ್ರಾಣಿಗಳಿಗೂ ಸಹ್ಯವೆನಿಸದ ಅಮಾನುಷ ಸ್ಥಳಗಳಲ್ಲಿ ಯಾವುದೇ ಶುಶ್ರೂಷಾ ವ್ಯವಸ್ಥೆಯಿಲ್ಲದ ಸ್ಥಳಗಳಿಗೆ ದಬ್ಬುತ್ತಿದ್ದರು. ಸಾವಿರಾರು ಜನರಿಗೆ ಒಬ್ಬನೋ ಇಬ್ಬರೋ ವೈದ್ಯರಿದ್ದರೆ ಉಂಟು ಇಲ್ಲದಿದ್ದರಿಲ್ಲ. ಅಂಥಹ ಒಂದು ಯುದ್ಧದಲ್ಲಿ ಸ್ಕುಟಾರ್ ಎಂಬ ಸ್ಥಳದಲ್ಲಿ ಯುದ್ಧ ಗಾಯಾಳುಗಳನ್ನು ತುಂಬಿದ್ದ ಕೊಠಡಿಗೆ ಸಿಡ್ನಿ ಹರ್ಬರ್ಟ್ ಎಂಬ ಬ್ರಿಟಿಶ್ ಮಂತ್ರಿಮಂಡಲದ ಅಧಿಕಾರಿಯ ಮನವಿಯ ಮೇರೆಗೆ ಆಗಮಿಸಿದ ಫ್ಲಾರೆನ್ಸ್ ಮಾಡಿದ ಸುಧಾರಣೆ ಮನೋಜ್ಞ ಸೇವೆ ಚರಿತ್ರಾರ್ಹವಾದದ್ದು. 


ಬೃಹದಾಕಾರದ ಮಿಲಿಟರಿ ಆಸ್ಪತ್ರೆಯ ಕಟ್ಟಡವು ದೊಡ್ಡದಾಗಿತ್ತು. ಆದರೆ ಕನಿಷ್ಠ ಸೌಕರ್ಯವೂ ಇಲ್ಲದ ಆಸ್ಪತ್ರೆ. ಆಸ್ಪತ್ರೆಯ ಉದ್ದ ಸುಮಾರು 7 ಕಿಲೋಮೀಟರು. ಆಸ್ಪತ್ರೆಯಲ್ಲಿ ಸಾವಿರಾರು ಹಾಸಿಗೆಗಳು ಆದರೆ ಒಬ್ಬ ರೋಗಿಯ ಹಾಸಿಗೆಗೂ ಇನ್ನೊಬ್ಬ ರೋಗಿಯ ಹಾಸಿಗೆಗೂ ಇದ್ದ ಅಂತರ ಕೇವಲ 45 ಸೆಂಟಿಮೀಟರುಗಳು. ಇಂಥಹ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರಾತ್ರಿಯ ಹೊತ್ತು ಆಕೆ ಕೈಯಲ್ಲಿ ದೀಪ ಹಿಡಿದು ಪ್ರತಿಯೊಂದು ಹಾಸಿಗೆಯ ಬಳಿ ಹೋಗುತ್ತಾಳೆ. ಪ್ರತಿಯೊಬ್ಬ ರೋಗಿಯನ್ನೂ ವಿಚಾರಿಸುತ್ತಾಳೆ. ಅವರಿಗೆ ಅಗತ್ಯವಾದ ಔಷದ ಮತ್ತು ಇತರ ವಸ್ತುಗಳನ್ನು ನೀಡುತ್ತಾಳೆ. ಮೆಲುದನಿಯಲ್ಲಿ ಅವರನ್ನು ಉಪಚರಿಸುತ್ತಾಳೆ. ಅವರಿಗೆ ಧೈರ್ಯ ತುಂಬುತ್ತಾಳೆ. ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಗೆ ಆಗತಾನೇ ಚೇತರಿಸಿಕೊಳ್ಳುತ್ತಿರುವ ರೋಗಿಗೆ ಅವಳು ಮಾಡುತ್ತಿದ್ದ ಸೇವೆಯಿಂದ 'ಅವಳೊಬ್ಬ ದೇವತೆ' ಎನಿಸಿದ್ದರೆ ಆಶ್ಚರ್ಯವಿಲ್ಲ. ಪ್ರತಿದಿನ ಕತ್ತಲಾದೊಡನೆ ದೀಪವನ್ನು ಹಿಡಿದು ರೋಗಿಗಳನ್ನು ವಿಚಾರಿಸಲು ಬರುತ್ತಿದ್ದ ಈಕೆಯನ್ನು 'ದೀಪಧಾರಿಣಿ' ಎಂದೇ ಕರೆಯುತ್ತಿದ್ದರು.

ಭಾರತದಲ್ಲಿ ಸಿಪಾಯಿ ದಂಗೆಯ ಸಮಯದಲ್ಲೂ ಆಕೆ ಮಾಡಿದ ಸೇವೆ ಅಭೂತಪೂರ್ವವಾದದ್ದು. ಯಾವುದೇ ವ್ಯವಸ್ಥೆಗಳಿಲ್ಲದ, ಬೇಜವಾಬ್ದಾರಿಗಳ ಸರ್ಕಾರಿ ವ್ಯವಸ್ಥೆ, ಅಪಹಾಸ್ಯಗಳನ್ನು ಎದುರಿಸಿ ಕೂಡಾ, ಮಾನವೀಯ ಅನುಕಂಪ, ಸೇವಾ ಮನೋಭಾವನೆಗಳ ಹಾದಿಯಲ್ಲಿ ಬಂದ ಅಡೆತಡೆಗಳನ್ನೆಲ್ಲಾ ನಿವಾರಿಸಿ ಮಾನವ ಕುಲಕ್ಕೆ ಈಕೆ ಸಲ್ಲಿಸಿದ ಸೇವೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತು. ತನ್ನ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಮುಂದೆ ಮಾನವ ಕುಲವನ್ನು ಸಲಹುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾಗಿ ಎಂದೆಂದೂ ನೆನಪಿನಲ್ಲಿ ಉಳಿಯುತ್ತಾಳೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529