30 ಜೂನ್ 2024

ಕೋಹ್ಲಿ

 ಕೋಹ್ಲಿ


ತಮ್ ಪಾಡಿಗೆ ತಾವ್ ಆಡ್ತಾರೆ

ಯಾರೆ ಹೊಗುಳ್ಲಿ ಬೈಯ್ಲಿ|

ಫೈನಲ್ ನಲ್ ಮಸ್ತ್ ಆಟ ಆಡಿ

ಕಪ್ ಗೆಲ್ಲೋಕೆ ಕಾರ್ಣ ಆದ್ರು 

ನೋಡ್ರಿ ನಮ್ ಕೋಹ್ಲಿ||


ಸಿಹಿಜೀವಿ ವೆಂಕಟೇಶ್ವರ


ರಾವುಲ್ ದ್ರಾವಿಡ್..

 ರಾಹುಲ್  ದ್ರಾವಿಡ್


ನಾಯಕನಾದಾಗ ಪ್ರಯತ್ನಿಸಿದರೂ 

ಕಪ್ ಗೆಲ್ಲಲಿಲ್ಲ  ಮುಸುಕಿತ್ತು ಸೋಲಿನ ಕಾರ್ಮೋಡ|

ದ್ರೋಣಾಚಾರ್ಯರಾಗಿ ವಿದ್ಯೆ

ನೀಡಿ ಕಪ್ ತಂದಿದ್ದಾರೆ ನೊಡೀಗ

ನಮ್ಮ ರಾಹುಲ ದ್ರಾವಿಡ||


ಸಿಹಿಜೀವಿ ವೆಂಕಟೇಶ್ವರ

ಕಪ್ ನಮ್ದೆ..

 ಕಪ್  ನಮ್ದೆ .


ಗೆಲುವಿನ ಬಳಿ ಸಾರಿ

ಮುಗ್ಗುರಿಸುತ್ತಿತ್ತು ಸತತ|

ಈ ಬಾರಿ ವಿಶ್ವಕಪ್ ಕಿರೀಟ

ಧರಿಸಿ ಬೀಗಿದೆ ಭಾರತ||

25 ಜೂನ್ 2024

ಮಾನವೀಯ ಮೌಲ್ಯಗಳು

 


ಮಾನವೀಯ ಮೌಲ್ಯಗಳು 


ಇಂದಿನ ಆಧುನಿಕ ಪ್ರಪಂಚದಲ್ಲಿ ಚಾರ್ವಾಕ ಸಂಸ್ಕೃತಿಯ ಪರಿಣಾಮವಾಗಿ ಭೌತಿಕ ಸುಖ ಸಂತೋಷಕ್ಕೆ ಹೆಚ್ಚು ಮಾನ್ಯತೆ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ.ಮಾನವೀಯ ಮೌಲ್ಯಗಳು ಮತ್ತು ನೈತಿಕತೆ ಕುಸಿತವಾಗುತ್ತಿವೆ. ಹೀಗೆಯೇ ಮುಂದುವರೆದರೆ ಮುಂದಿನ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ.


ಮಾನವನು ಬದುಕಬೇಕೆಂದಾದರೆ ಪ್ರತಿ ನಿತ್ಯವೂ ಉತ್ತಮ ಆಹಾರ ಸೇವನೆ ಮಾಡಬೇಕು. ಬದುಕು ಸಾಗಿಸಬೇಕೆಂದರೆ ಕೇವಲ ಆಹಾರ ಮಾತ್ರ ಸಾಕಾಗುವುದಿಲ್ಲ. ಶರೀರದ ಮೇಲೆ ಉನ್ನತ ಸ್ತರದ ಉಡುಗೆ ತೊಡುಗೆಗಳೂ, ಆಕರ್ಷಕವಾದ ಮುತ್ತು, ರತ್ನ, ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯದ ಆಭರಣಗಳೂ ಇರಬೇಕೆಂದು ಬಯಸುತ್ತಾರೆ. ಆದರೆ ವಾಸ್ತವದಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳಿಂದಲೂ ಶ್ರೇಷ್ಠವಾದುದು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳು ಹಾಗೂ ನೈತಿಕತೆ ಎಂಬುದನ್ನು    ನಿರೂಪಿಸುವ ಒಂದು ಪ್ರಸಂಗ ಹೀಗಿದೆ.


ಮಧ್ಯಪ್ರಾಚ್ಯದ ಸುಪ್ರಸಿದ್ಧ ನಗರವಾದ ಬಗ್ದಾದ್‌ನ ಆಡಳಿತಗಾರನನ್ನು ಖಲೀಫರೆಂದು ಕರೆಯುತ್ತಾರೆ. ಈ ಖಲೀಫರ ಬಳಿ ಒಬ್ಬ ಗುಲಾಮನಿದ್ದ. ನೋಡಲು ಅತ್ಯಂತ ಕುರೂಪಿಯಾಗಿದ್ದ. ಈ ಗುಲಾಮನ ಹೆಸರು ಹಾಶಮ್‌. ಏನೇನೂ ಆಕರ್ಷಣೆಯಿಲ್ಲದ ಈತನ ಬಗ್ಗೆ ಇತರ ಗುಲಾಮರು ನಕ್ಕು ತಮಾಷೆ ಮಾಡುತ್ತಿದ್ದರು. ಆದರೆ ಅತ್ಯಂತ ಬಡವನಾಗಿದ್ದ ಹಾಶಮ್‌, ಅವರ ತಮಾಷೆಯನ್ನು ಲೆಕ್ಕಿಸದೆ, ತನ್ನಷ್ಟಕ್ಕೆ ತಾನೇ ಇರುತ್ತಿದ್ದ ಹಾಗೂ ಖಲೀಫರ ಬಗ್ಗೆ ಸ್ವಾಮಿ ಭಕ್ತಿಯುಳ್ಳವನಾಗಿದ್ದ.


ಅವರ ಎಲ್ಲ ಆಜ್ಞೆಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ. ಒಂದು ಸಲ ಈ ಖಲೀಫರು ಒಂದು ಕುದುರೆ ಗಾಡಿಯನ್ನೇರಿ, ನಗರ ಸಂಚಾರಕ್ಕೆ ಹೊರಟಿದ್ದರು. ಹಿಂದಿನಿಂದ ಹಿಂಬಾಲಿಸುತ್ತಿದ್ದ ಗುಲಾಮರ ಜತೆಗೆ ಹಾಶಮನೂ ಇದ್ದನು. ಅಕಸ್ಮಾತ್ತಾಗಿ ದಾರಿಯಲ್ಲಿ ಖಲೀಫರ ಕುದುರೆಯ ಕಾಲು ಕೆಸರಲ್ಲಿ ಜಾರಿಬಿಟ್ಟಿತು.


ಆ ಖಲೀಫರ ಕೈಯಲ್ಲಿ ಮುತ್ತು, ವಜ್ರಗಳುಳ್ಳ ಒಂದು ಪೆಟ್ಟಿಗೆಯಿತ್ತು. ಕುದುರೆಯ ಕಾಲು ಜಾರಿದಾಗ, ಖಲೀಫರ ಕೈ ನಡುಗಿ ವಜ್ರದ ಪೆಟ್ಟಿಗೆಯೂ ಜಾರಿ ಉರುಳಿತು. ಮುತ್ತು, ವಜ್ರಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯ ಮೇಲೆ ಬಿದ್ದವು. ಇದನ್ನು ಕಂಡು ಖಲೀಫರು ತಮ್ಮ ಗುಲಾಮರೊಡನೆ 'ರಸ್ತೆಯಲ್ಲಿ ಬಿದ್ದ ಮುತ್ತು, ವಜ್ರಗಳನ್ನು ಆರಿಸಿಕೊಳ್ಳಿ. ಅವು ನಿಮ್ಮದೆಂದೇ ಭಾವಿಸಿ ಆರಿಸಿಕೊಳ್ಳಿರಿ' ಎಂದಾಗ, ಎಲ್ಲರೂ ರಸ್ತೆಯಿಂದ ಆರಿಸಿ, ಸಂತೋಷಪಟ್ಟರು.


ಆದರೆ ಹಾಶಮ್‌ ಖಲೀಫರ ಬಳಿಯೇ ನಿಂತಿದ್ದ. ಖಲೀಫರು ಅವನೊಡನೆ ''ನೀನೇಕೆ ಅಮೂಲ್ಯ ಮುತ್ತು, ವಜ್ರಗಳನ್ನು ಆರಿಸಿಕೊಂಡಿಲ್ಲ?,'' ಎಂದು ಪ್ರಶ್ನಿಸಿದರು. ಆಗ ಹಾಶಮ್‌ ನುಡಿದ ''ನನ್ನ ಮಟ್ಟಿಗೆ ಅಮೂಲ್ಯ ವಜ್ರವೆಂದರೆ ತಾವೇ ಆಗಿದ್ದೀರಿ. ಹಾಗಿರುವಾಗ ತಮ್ಮನ್ನು ಬಿಟ್ಟು ನಾನೆಂತು ಹೋದೇನು?,''


ಹಾಶಮನ ಉತ್ತರ ಕೇಳಿ ಪ್ರಸನ್ನರಾದ ಖಲೀಫರು ಬಹು ಸಂತುಷ್ಟರಾಗಿ, ತಕ್ಷ ಣವೇ ಹಾಶಮ್‌ನನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡಿಬಿಟ್ಟರು. ಅನಿರೀಕ್ಷಿತವಾಗಿ ಹಾಶಮನಿಗೆ ಬಹುಶ್ರೇಷ್ಠ ಬಹುಮಾನ ದೊರಕಿತ್ತು.



ಸಿಹಿಜೀವಿ ವೆಂಕಟೇಶ್ವರ

ತುಮಕೂರು


12 ಜೂನ್ 2024

ಕಾಡಿದ ಗಜಲ್

 ಕಾಡಿದ  ಗಜಲ್ 


ಅರವಳಿಕೆ ತಜ್ಞರು,ಗಜಲ್ ಕಾರರಾದ ಡಾ  ಗೋವಿಂದ ಹೆಗಡೆರವರು ನನ್ನ ಗಜಲ್ ಗುರುಗಳು.

ನನ್ನ ಗಜಲ್ ಗುರುಗಳ ಎಲ್ಲಾ  ಗಜಲ್ ಗಳು ಇಂದಿಗೂ ನನ್ನ ಕಾಡಿವೆ ಕಾಡುತ್ತಲಿವೆ‌.

ಹೀಗೆ ಅತಿಯಾಗಿ ಕಾಡಿದ ಗಜಲ್ ಇದು.



*ಗಜಲ್* 


ಇರುವೆಯ ಇರುವು ಗಮನಕ್ಕೇ ಬರುವುದಿಲ್ಲ 

ಗೆದ್ದ ಎತ್ತನ್ನೇ ಹಿಂಬಾಲಿಸುವುದು ಜಗವೆಲ್ಲ 


ಅಳಿಲನ್ನು ಗುರುತಿಸಲು ರಾಮನಿಗಷ್ಟೇ ಸಾಧ್ಯ 

ಲೋಕಕ್ಕೆ ಅಷ್ಟೆಲ್ಲ ಪುರುಸೊತ್ತು ಇರುವುದಿಲ್ಲ 


ತಮ್ಮ ಪುಂಗಿಯನ್ನು ಊದುತ್ತಲೇ ಇರುತ್ತಾರೆ 

ನಿಶ್ಶಬ್ದ ಗೈಮೆಯನ್ನು ಯಾರೂ ಕೇಳುವುದಿಲ್ಲ 


ಮೊಳಕೆ ತೆನೆಯಾಗಿ ಊಡುತ್ತಲೇ ಇರುತ್ತದೆ 

ಹೊಟ್ಟೆ ತುಂಬಿದರಾಯ್ತು- ಬೇರೆ ಪರಿವೆಯಿಲ್ಲ


ಲೋಕದ ಡೊಂಕಿಗೆ ಕಣ್ಮುಚ್ಚು 'ಜಂಗಮ'

'ತನು, ಮನವ ಸಂತೈಸು' - ಹಿರಿಯರಿಗೆ ಎದುರಿಲ್ಲ 


★ ಡಾ. ಗೋವಿಂದ ಹೆಗಡೆ


ಜಗತ್ತೇ ಹಾಗೆ ದೊಡ್ಡದು, ದೊಡ್ಡವರು, ಸಿರಿವಂತರು ,ಉಳ್ಳವರ ಕಂಡರೆ ಅತಿಯಾದ ಆದರ ಮತ್ತು  ಅಭಿಮಾನ. ಚಿಕ್ಕದು, ಬಡವರ ಕಂಡರೆ ಎನೋ ತಾತ್ಸಾರ.ಅಲಕ್ಷ್ಯ.

ಗಜಲ್ ಕಾರರಾದ ಗೋವಿಂದ ಹೆಗಡೆರವರು ಇದೇ ಆಶಯದಲ್ಲಿ ಇರುವೆಯ ಇರವು ಯಾರ ಗಮನಕ್ಕೂ ಬರುವುದಿಲ್ಲ. ನಾವೆಲ್ಲರೂ ದೊಡ್ಡದಾದ ವಸ್ತು, ಪ್ರಾಣಿಗಳ ಕಡೆ ಗಮನಹರಿಸಿ ಗೆದ್ದೆತ್ತಿನ ಬಾಲ ಹಿಡಿಯುವವರು ಎಂದು ನಮ್ಮ ಗುಣಗಳ ಎತ್ತಿ ಹಿಡಿಯುತ್ತಾ ಮತ್ಲಾದಲ್ಲಿ  ನವಿರಾದ ಚಾಟಿ ಬೀಸಿದ್ದಾರೆ.


ಎರಡನೇ ಶೇರ್ ನಲ್ಲಿ ರಾಮಾಯಣದ ಹಿನ್ನೆಲೆಯಲ್ಲಿ

ಸೀತಾ ಮಾತೆಯ ಬಂಧನದಿಂದ ಬಿಡಿಸಲು ಅಳಿಲೂ ಸಹ ತನ್ನದೇ ಚಿಕ್ಕ ಸಹಾಯ ಮಾಡಿದ್ದನ್ನು ಶ್ರೀರಾಮರು ಗುರ್ತಿಸಿದ್ದರು.ಚಿಕ್ಕವರ ಚಿಕ್ಕ ಸಹಾಯವನ್ನು ಗುರ್ತಿಸುವುದು ದೊಡ್ಡ ಮನಸ್ಸಿನ ರಾಮನಿಗೆ ಮಾತ್ರ ಸಾಧ್ಯ. ಅಂತಹ ವಿಶಾಲ ಮನಸ್ಸು ನಮ್ಮದಾಗಬೇಕಿದೆ ಎಂಬ ಭಾವ ನನಗೆ ಬಹಳ ಹಿಡಿಸಿತು.

ಮೂರನೇ  ಶೇರ್ ನಲ್ಲಿನ ಆಶಯ ಎಂತವರನ್ನು ಚಿಂತನೆಗೆ ಹೆಚ್ಚುತ್ತದೆ.

ನಾವೆಲ್ಲರೂ ಮೂಲತಃ ಹೊಗಳಿಕೆ ಪ್ರಿಯರು.ಬಸವಣ್ಣನವರು ನನ್ನ ಹೊಗಳಿ ಹೊನ್ನ ಶೂಲಕ್ಕೇರಿಸಬೇಡಿ ಎಂದು ಕರೆ ಕೊಟ್ಟು ನಮಗೆ ಬುದ್ದಿ ಹೇಳಿದರೂ ನಾವು ಮಾತ್ರ ಹೊಗಳಿಕೆಗೆ ಹಾತೊರೆವ ಜನರು. ಯಾರೂ ಹೊಗಳದಿದ್ದರೂ ತಮ್ಮ ಬೆನ್ನ ತಾವೇ ತಟ್ಟಿಕೊಳ್ಳುವ ಮಹನೀಯರು ಮತ್ತೊಂದು ಕಡೆ.ಇಂತಹವರ ನಡುವೆ ಸುಮ್ಮನೇ ತಮ್ಮ ಪಾಡಿಗೆ ತಾವು ಕಾಯಕ ನಿರತರಾದ ಅಸಂಖ್ಯ ಜೀವಗಳಿವೆ.ಅವರನ್ನು ಗೌರವಿಸೋಣ ಅಂತವರು ನಮಗೆ ಆದರ್ಶವಾಗಲಿ ಎಂಬ ಸಾಲುಗಳು ಅರ್ಥಪೂರ್ಣವಾಗಿವೆ.

ನಾಲ್ಕನೇ ಶೇರ್ ನಲ್ಲಿ ಒಂದು ಕಾಳಾಗಲು ಅದು ಮೊಳಕೆಯಿಂದ ಹೇಗೆ ಹಂತ ವಾಗಿ ಬೆಳೆದು ಹಾರೈಕೆಹೊಂದಿ ಒಂದು ರುಪ ತಾಳಿ ನಮ್ಮ ಹೊಟ್ಟೆ ತಣಿಸಲು ಸಿದ್ದವಾಗುತ್ತದೆ. ಆದರೆ ತಿನ್ನುವವರಿಗೆ ಇದಾವುದರ ಪೂರ್ವಾಪರ ಪರಿಚಯ ಬೇಕಿರುವುದಿಲ್ಲ ಅವರಿಗೆ ಹೊಟ್ಟೆ ತುಂಬಿದರಾಯಿತು ಅಷ್ಟೇ.

ಮುಕ್ತಾದಲ್ಲಿ ಹೆಗಡೆರವರು ಅವರಿವರ ದುರ್ಗುಣಗಳ  ಬದಲಾಯಿಸಲು ಪ್ರಯತ್ನ ಮಾಡುವುದು ಗೋರ್ಕಲ್ಲ ಮೇಲೆ ನೂರ್ಕಾಲ ಮಳೆ ಸುರಿದಂತೆ ಎಂಬ ಮಾತಿನಂತೆ ತಮ್ಮ ಶೇರ್ ನಲ್ಲಿ  ಲೋಕದ ಡೊಂಕಿಗೆ ಕಣ್ಮುಚ್ಚು ಜಂಗಮ

ತನು, ಮನವ ಸಂತೈಸು ಹಿರಿಯರಿಗೆ ಎದುರಿಲ್ಲ ಎಂದು ಮಾರ್ಮಿಕವಾಗಿ ಅಭಿವ್ಯಕ್ತಿಸಿದ್ದಾರೆ.

ಒಟ್ಟಾರೆ ಗೋವಿಂದ ಹೆಗಡೆರವರ ಈ ಗಜಲ್ ನನ್ನ ಕಾಡಿದೆ.ಅವರ ಮುಂದಿನ ಗಜಲ್ ಓದಲು ಕಾತನಾಗಿರುವೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529