31 ಮಾರ್ಚ್ 2024

ಮಾನವೀಯ ಗುಣಗಳ ಒರತೆ


ಮಾನವೀಯ ಗುಣಗಳ ಒರತೆ 


"ಕಾಲ ಕೆಟ್ಟೋಯ್ತು, ಮಾನವೀಯತೆಗೆ ಬೆಲೆ ಇಲ್ಲ. ಎಲ್ಲಾ ಸ್ವಾರ್ಥಿಗಳು.ಮೌಲ್ಯಗಳು ಅದಃಪತನ ಹೊಂದಿವೆ" ಹೀಗೆ ನಾವು ಆಗಾಗ್ಗೆ ಮಾತನಾಡಿಕೊಳ್ಳುತ್ತೇವೆ.ಯಾವುದೋ ಘಟನೆ, ಅಥವಾ ವ್ಯಕ್ತಿಗಳ ಅಧಾರದ ಮೇಲೆ ಸಾರಾಸಗಟಾಗಿ ಇಡೀ ಸಮಾಜವನ್ನು ಮೌಲ್ಯಮಾಪನ ಮಾಡುವಲ್ಲಿ ನಾವು ನಿಸ್ಸೀಮರಾಗಿದ್ದೇವೆ.ನಾವಂದುಕೊಂಡಂತೆ ಸಮಾಜದಲ್ಲಿ ಎಲ್ಲರೂ ಕೆಟ್ಟವರಲ್ಲ ಒಳ್ಳೆಯವರು ಇಲ್ಲದೇ ಇಲ್ಲ.ಸುಮ್ಮನೆ ನಿಮ್ಮ ಬೈಕ್ ಸ್ಟ್ಯಾಂಡ್ ತೆಗೆಯದೆ ಬೈಕ್ ಓಡಿಸಿ   ನೋಡಿ ಹತ್ತಾರು ಕೈಗಳು ನಿಮ್ಮ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಬೈಕ್ ಸ್ಟಾಂಡ್ ತೆಗೆಯಲು ಹೇಳುತ್ತಾರೆ. ಮಾನವೀಯತೆಯ ಒರತೆ ಕಡಿಮೆಯಗಿರಬಹುದು ಆದರೆ  ನಮ್ಮಲ್ಲಿ ಈಗಲೂ ಹರಿಯುತ್ತಿದೆ.ಇದಕ್ಕೆ ಪೂಕವಾಗಿ ನಾನಿರುವ ಒಂದು ಗುಂಪಿನಲ್ಲಿ ಸಹೃದಯರೊಬ್ಬರು ಒಂದು ಸಂದೇಶ ಮುನ್ನಾಯಿಸಿದ್ದರು ಅದು ಹೀಗಿದೆ.


ಮನೆಗೆ ಹೊರಟಿದ್ದೆ ಎಲೆಕ್ರ್ಟಿಕ್ ಕಂಬಕ್ಕೆ ಯಾರೋ ಒಂದು ಬೋರ್ಡ್ ನೇತು ಹಾಕಿದ್ದರು. ಅದರಲ್ಲಿ ಏನು ಬರೆದಿರಬಹುದು ಎಂದು ಕುತೂಹಲ ಉಂಟಾಯಿತು ಹತ್ತಿರ ಹೋಗಿ ನೋಡಿದರೆ ಅದರಲ್ಲಿ ಬರೆದಿತ್ತು

ಈ ರಸ್ತೆಯಲ್ಲೆಲ್ಲೊ ಐವತ್ತು ರುಪಾಯಿಯನ್ನು ಕಳೆದುಕೊಂಡಿದ್ದೇನೆ ನಿಮಗೆ ಯಾರಿಗಾದರೂ ಸಿಕ್ಕರೆ, ಈ ವಿಳಾಸದಲ್ಲಿರುವ ನನಗೆ ತಲುಪಿಸಿ. ನನ್ನ ಕಣ್ಣಿನ ದೃಷ್ಟಿ ತುಸು ಮಂಜಾಗಿದೆ ದಯವಿಟ್ಟು ಸಹಾಯ ಮಾಡಿ.


ನಾನು ಆವಿಳಾಸವನ್ನು ಗಮನಿಸಿದೆ. ಅಲ್ಲಿರುವ ವ್ಯಕ್ತಿಯನ್ನು ನೋಡಬೇಕು ಎಂದು ಬಲವಾಗಿ ಅನಿಸಿತು. ಆ ವಿಳಾಸದ ಬಳಿ ಹೋದಾಗ ಗುಡಿಸಲಿನಂತ ಮನೆಯ ಮುಂದೆ ಮುದುಕಿಯೊಬ್ಬಳು ಕುಳಿತಿದ್ದಳು. ಆಕೆ ಬಸವಳಿದಿದ್ದಳು ನಾನು ಬರುತ್ತಿರುವ ಸದ್ದನ್ನು ಕೇಳಿ ಯಾರು? ಎಂದಳು ನಾನು ಅಜ್ಜಿ ,ಈ ದಾರಿಯಲ್ಲಿ ಬರುವಾಗ ಐವತ್ತು ರೂಪಾಯಿ ಸಿಕ್ಕಿತು. ಕರೆಂಟ್ ಕಂಬದ ಮೇಲೆ ಬರೆದ ಬೋರ್ಡ್ ನೋಡಿದೆ. ನಿಮಗೆ ಕೊಟ್ಟು ಹೋಗೋಣ ಎಂದು ಬಂದೆ ಅಂದೆ.


ನನ್ನ ಮಾತು ಕೇಳಿ ಅವಳ ಕಣ್ಣು ತೇವವಾದವು. ಈಗಾಗಲೆ 40-50 ಮಂದಿ ಬಂದು ದಾರಿಯಲ್ಲಿ ತಮಗೆ ಐವತ್ತು ರೂಪಾಯಿ ಸಿಕ್ಕಿತೆಂದು ಕೊಟ್ಟು ಹೋಗಿದ್ದಾರೆ. ಆಷ್ಟಕ್ಕೂ ಆ ಕರೆಂಟ್ ಕಂಬದ ಮೇಲೆ ನಾನು ಬೋರ್ಡ್ ನೇತು ಹಾಕಿಲ್ಲ ನನಗೆ ಓದಲು ಬರೆಯಲು ಬರುವುದಿಲ್ಲ, ಎಂದಳು . ಪರವಾಗಿಲ್ಲ ಐವತ್ತು ರುಪಾಯಿ ಇಟ್ಟುಕೊಳ್ಳಿ ಎಂದೆ.


ನೀವು ಇಲ್ಲಿಂದ ಹೋಗುವಾಗ ಆ ಕಂಬದ ಮೇಲೆ ಬರೆದ  ಬೋರ್ಡ್ ತೆಗೆದುಹಾಕಿ ಎಂದು ನನ್ನನ್ನು ವಿನಂತಿಸಿದಳು. ಸೋಜಿಗವೆಂದರೆ ತನ್ನನ್ನು ನೋಡಲು ಬಂದವರಿಗೆಲ್ಲ  ಬೋರ್ಡ್ ಅನ್ನು ತೆಗೆದು ಹಾಕುವಂತೆ ಹೇಳುತ್ತಿದ್ದಳು. ಆದರೆ ಯಾರೂ ಹಾಗೆ ಮಾಡಿರಲಿಲ್ಲ.

ನಾನು ವಾಪಸ್ ಬರುವಾಗ ಯೋಚಿಸಲಾರಂಬಿಸಿದೆ, ಕರೆಂಟ್ ಕಂಬದ ಮೇಲೆ ಯಾರು ಈ ಬೋರ್ಡ್ ತಗುಲಿ ಹಾಕಿರಬಹುದು? ತನ್ನನ್ನು ನೋಡಲು ಬಂದವರಿಗೆಲ್ಲ ಅದನ್ನು ತೆಗೆದು ಹಾಕಿ ಎಂದು ಹೇಳಿದರೂ ಯಾರೂ ತೆಗೆದು ಹಾಕಲಿಲ್ಲ?

ಯಾರೋ ಒಬ್ಬನಿಗೆ ಆ ಮುದುಕಿಗೆ ಸಹಾಯ ಮಾಡಬೇಕೇಂದು ಅನಿಸಿರಬೇಕು, ಆತ  ಬೋರ್ಡ್ ಅನ್ನು ಹಾಕಿರಬೇಕು.

ಒಬ್ಬರಿಗೆ ಸಹಾಯ ಮಾಡಬೇಕು ಅನಿಸಿದರೆ ಎಷ್ಟೋಂದು ದಾರಿಗಳಿವೆಯಲ್ಲ.


ಅಷ್ಟೊತ್ತಿಗೆ ಯಾರೋ ಕರೆದಂತಾಯಿತು. "ಸಾರ್ ಈ ಅಡ್ರೆಸ್ ನಲ್ಲಿರುವ ವ್ಯಕ್ತಿಯನ್ನು ಬೇಟಿ ಮಾಡುವುದು ಹೇಗೆ? ಅಲ್ಲಿಗೆ ಹೋಗುವುದು ಹೇಗೆ? ನನಗೆ ದಾರಿಯಲ್ಲಿ ಐವತ್ತು ರೂಪಾಯಿ ಸಿಕ್ಕಿತು ಅವರಿಗೆ ತಲುಪಿಸಬೇಕಾಗಿದೆ" ಎಂದು ದಾರಿಹೋಕನೊಬ್ಬ ಹೇಳಿದ 


ನಾನು ಗದ್ಗದಿತನಾದೆ...


ಕೆಟ್ಟತನವನ್ನೇ ವಿಜೃಂಬಿಸುವ ಅಹಿಂಸೆಯನ್ನು ದಿನಗಟ್ಟಲೇ ವೈಭವೀಕರಿಸುವ ಮಾಧ್ಯಮಗಳು ಬರೀ ಮಚ್ಚು ಕೊಚ್ಚು ಮಾತ್ರವೇ ಸಿನಿಮಾ ಎಂದು ರೀಲು ಸುತ್ತುವವರು ಇಂತಹ ಮಾನವೀಯ ಸಂಬಂಧಗಳು ಮೌಲ್ಯಗಳನ್ನು ಎತ್ತಿ ತೋರಿಸುವ ಮೂಲಕ ಪ್ರೀತಿ, ಕರುಣೆ, ಮಾನವೀಯತೆಯ ಒರತೆಗಳ ಹೆಚ್ಚಿಸುವ  ಕೆಲಸ ಮಾಡಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.    


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಶಿಕ್ಷಕರು

9900925529

ಆಕಾರ-ಅಹಂಕಾರ .ಹನಿಗವನ

 *ಆಕಾರ- ಅಹಂಕಾರ*


ಎಂತಹ ಕಗ್ಗಲ್ಲಾದರೂ

ತಿದ್ದಿ ತೀಡಿದರೆ ಆಗುವುದು

ವಿಗ್ರಹದ ಆಕಾರ|

ಏನೇ ತಿದ್ದಿ ತೀಡಿದರೂ

ನಾಶದತ್ತ ಸಾಗುವರು

ಸೇರಿದರೆ ಅಹಂಕಾರ||


*ಸಿಹಿಜೀವಿ ವೆಂಕಟೇಶ್ವರ*

27 ಮಾರ್ಚ್ 2024

ಯಶಸ್ಸಿನ ಶಿಖರ ಏರೋಣ.

 


ಯಶಸ್ಸಿನ ಶಿಖರ ಏರೋಣ.


ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ನಮಗೊಂದು ಸ್ಪಷ್ಟವಾದ ಗುರಿಯಿರಬೇಕು.ಜೊತೆಗೆ ಮಾರ್ಗದರ್ಶನ ಮಾಡಲು ಗುರುವಿರಬೇಕು.  "ಮಾರ್ನೇ ತೋ ಹಾತಿ ಮಾರೋ ಲೂಟ್ನೇ ತೊ ಭಂಡಾರ್ ಲೂಟೋ " ಎಂಬಂತೆ   ಚಿಕ್ಕ ಗುರಿಯನ್ನು ಹೊಂದದೆ ದೊಡ್ಡ ಗುರಿಯನ್ನು ಇಟ್ಟುಕೊಂಡು ಆ ಕಡೆ ಸಾಗಬೇಕು.

 ನಮ್ಮ ಗುರಿಯೆಡೆಗೆ ಸಾಗುವಾಗ ನಮಗೆ ಕೆಲ ಅಡೆತಡೆಗಳು ಬರುವುದು ಸಹಜ ಅವುಗಳ ಮೆಟ್ಟಿ ಮುಂದೆ ಸಾಗಬೇಕು. ಅದರಂತೆ ಅಲ್ಲಲ್ಲಿ ನಮಗೆ ಯಶಸ್ಸು ಕೂಡಾ ಸಿಗುತ್ತವೆ ಆ ಯಶಸ್ಸು ನಮ್ಮ ತಲೆಗೇರಬಾರದು.ಆ ಯಶಸ್ಸಿಗೆ ಸಂತಸಪಟ್ಟು ಮುಂದೆ ಸಾಗಬೇಕು. ಏಕೆಂದರೆ ಯಶಸ್ಸಿಗೆ ಪುಲ್ ಸ್ಟಾಪ್ ಇಲ್ಲ ಬರೀ ಕಾಮಾಗಳು ಮಾತ್ರ ಇರುತ್ತವೆ. ನಮ್ಮ ಯಶಸ್ಸಿನ ಪಯಣ ನಿರಂತರವಾಗಿರಬೇಕು.


 ಕಂಫರ್ಟ್ ಜೋನ್ ನಿಂದ ಹೊರಬಂದು ರಿಸ್ಕ್ ತೆಗೆದುಕೊಂಡ ಮಹನಿಯರು ಜೀವನದಲ್ಲಿ ಉನ್ನತವಾದದ್ದನ್ನು ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಯೋಚಿಸಬಹುದು ಫಾರ್ಚೂನ್ ಪೇವರ್ಸ್ ದ ಬ್ರೇವ್ ಎಂಬಂತೆ ಒಳ್ಳೆಯ ಕೆಲಸ ಮಾಡಲು ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಂಡು ಯಶಸ್ಸು ಪಡೆಯಲು ಪ್ರಯತ್ನ ಮಾಡಬಹುದು.


 ಯಶಸ್ಸಿನೆಡೆಗಿನ ನಮ್ಮ ಪಯಣದಲ್ಲಿ ಆಗಾಗ್ಗೆ ನಮ್ಮನ್ನು ಎದೆಗುಂದಿಸುವ ಟೀಕೆಗಳು ಎದುರಾಗಬಹುದು ಅವುಗಳ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದೇ ನಮ್ಮ ಕರ್ತವ್ಯಗಳಿಂದ ಅವರಿಗೆ ಉತ್ತರ ನೀಡಬೇಕು.ಉನ್ನತ ಸಾಧನೆಯ ಹಾದಿಯಲ್ಲಿ  ಕಲ್ಲು ಮುಳ್ಳುಗಳ ದಾಟಿದ ಮೇಲೆ ಯಶಸ್ಸಿನ ಶಿಖರ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಶಿಕ್ಷಣದಲ್ಲಿ ರಂಗಕಲೆ ಇಂದಿನ ಅಗತ್ಯ


  

ಶಿಕ್ಷಣದಲ್ಲಿ ರಂಗಕಲೆ ಇಂದಿನ ಅಗತ್ಯ


ವಿದ್ಯಾರ್ಥಿಗೆ ಕೇವಲ ಪರಿಕಲ್ಪನೆಯ ಬಗ್ಗೆ ತಿಳಿಸುವುದು ಸಾಕಾಗುವುದಿಲ್ಲ. ಉತ್ತಮ ಶಿಕ್ಷಕರು ವಿದ್ಯಾರ್ಥಿಯಲ್ಲಿ ವಿಮರ್ಶಾತ್ಮಕ ಚಿಂತನೆಯ ಸಾಮರ್ಥ್ಯವನ್ನು ಮತ್ತು ಮೌಲ್ಯ ಶಿಕ್ಷಣವನ್ನು ಪ್ರೇರೇಪಿಸಬೇಕು  ಅದಕ್ಕೆ ರಂಗಕಲೆಯು ಉಪಯುಕ್ತ ಎಂದು ಮಹಾನ್ ತತ್ವಜ್ಞಾನಿ ಪ್ಲೇಟೋ ತಾನು ಅಕಾಡೆಮಿಯನ್ನು ಆರಂಭಿಸಿದ ಕಾಲದಲ್ಲೇ ಹೇಳಿದ್ದರು.

ನಾಟಕಗಳನ್ನು  ಬೋಧನಾ ಸಾಧನವಾಗಿ ಬಳಸುವ ಮೂಲಕ ವಿದ್ಯಾರ್ಥಿಗಳು ಬೌದ್ಧಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಅಥವಾ ಭಾವನಾತ್ಮಕವಾಗಿ ಎಲ್ಲ ರೀತಿಯಲ್ಲೂ ಬೆಳವಣಿಗೆಗೆ ಹಾಗೂ   ಸಮಗ್ರ ಕಲಿಕೆಗೆ ಕಾರಣವಾಗುತ್ತದೆ.

ಇದರ ಜೊತೆಯಲ್ಲಿ  ಜೀವನ ಕೌಶಲ್ಯಗಳು, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು, ನಾಯಕತ್ವ, ಸಹಕಾರ ಮತ್ತು ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ನೀಡುತ್ತದೆ. 


 'ನಾಟಕ' ಪದವು ವಾಸ್ತವವಾಗಿ ಗ್ರೀಕ್ ಪದ 'ಡ್ರಾಮಾ'ಅಥವಾ'ಡ್ರಾವೋ' ನಿಂದ ತೆಗೆದುಕೊಳ್ಳಲಾಗಿದೆ, ಇದು 'ನಾನು ಮಾಡುತ್ತೇನೆ' ಅಥವಾ ಕ್ರಿಯೆಯನ್ನು ಸೂಚಿಸುತ್ತದೆ. ಹೀಗಾಗಿ, ನಾಟಕೀಯ, ರೇಡಿಯೋ, ಟಿವಿ ಅಥವಾ ಕಾಲ್ಪನಿಕ ಕಥೆಯ ನೇರ ಪ್ರದರ್ಶನಗಳ ಮೂಲಕ ನಟನೆ ಅಥವಾ ಪ್ರದರ್ಶನ ಕ್ರಿಯೆಯು ನಾಟಕದಲ್ಲಿ ಬರುತ್ತದೆ.


ಶಿಕ್ಷಣದಲ್ಲಿ ರಂಗಕಲೆಯ ಮಹತ್ವ


ಬರೀ ಸ್ಪೂನ್ ಫೀಡ್ ಮಾಡಿದ ಮಾಹಿತಿ ಮತ್ತು ವಿದ್ಯಾರ್ಥಿಗಳು ಉರುಹೊಡೆದು ಹಾಕುವುದು ಸಮಾಜಕ್ಕೆ ಹಾನಿಕಾರಕ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸ್ಮಾರ್ಟ್ ಕಲಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ತಾರ್ಕಿಕ ಚಿಂತನೆಯ  ಉತ್ತೇಜಿಸಲು , ನಾಟಕ ಮತ್ತು ಕಲೆಗಳು ಶಿಕ್ಷಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಿಯಂತ್ರಿತ ವಾತಾವರಣದಲ್ಲಿ, ಒಂದು ಐತಿಹಾಸಿಕ ದೃಶ್ಯವನ್ನು ಪುನರಾವರ್ತಿಸಲು ವಿದ್ಯಾರ್ಥಿಗಳ ಗುಂಪನ್ನು ಕೇಳಿದರೆ, ವಿದ್ಯಾರ್ಥಿಗಳು ಇತಿಹಾಸದಿಂದ ಹೆಸರುಗಳು ಮತ್ತು ದಿನಾಂಕಗಳ ಗುಂಪನ್ನು ಸಂಗ್ರಹಿಸದೆಯೇ ನೆನಪಿಟ್ಟುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಪರಿಣಾಮಕಾರಿ ಕಲಿಕೆಯನ್ನು ಉತ್ತೇಜಿಸಲು ಪ್ರಪಂಚದಾದ್ಯಂತದ ಅನೇಕ ಸಂಸ್ಥೆಗಳಲ್ಲಿ ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಗಳನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸಲಾಗಿದೆ.   ರೋಲ್-ಪ್ಲೇ ಮೂಲಕ  ವಿದ್ಯಾರ್ಥಿಗಳು ಪರಸ್ಪರ ಮತ್ತು ಗುಂಪು ಸಂವಹನ, ಮತ್ತು ಸಾರ್ವಜನಿಕ ಮಾತನಾಡುವ ಕೌಶಲ್ಯಗಳನ್ನು ಕಲಿಯುತ್ತಾರೆ ಮತ್ತು ಅವರಲ್ಲಿ ಪರಿಶೋಧನೆಯ ಕೌಶಲ್ಯವನ್ನು ಬೆಳೆಸಲು ಈ ವಿಧಾನವು ಸಹಾಯ ಮಾಡುತ್ತದೆ.


ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಗಳ ಪ್ರಾಮುಖ್ಯತೆಗೆ ಪ್ರಮುಖ ಕಾರಣಗಳು ಇಲ್ಲಿವೆ


ಸ್ವಯಂ ಅಭಿವ್ಯಕ್ತಿಯನ್ನು ಕಲಿಸುತ್ತದೆ


  ಮಕ್ಕಳು ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಗಳ ಬಳಕೆಯ ಮೂಲಕ ಮತ್ತು ಸೃಜನಶೀಲ ಅಭಿವ್ಯಕ್ತಿಯ ಮೂಲಕ ಸ್ವಯಂ ಅಭಿವ್ಯಕ್ತಿಯ ಪ್ರಾಮುಖ್ಯತೆಯ ಬಗ್ಗೆ ಕಲಿಯುತ್ತಾರೆ. ಅವರ ಗ್ರಹಿಕೆ ಮತ್ತು ವಿಶ್ವ ದೃಷ್ಟಿಕೋನವು ವಿಶಾಲವಾಗಿದೆ‌. ಇದು ಜೀವನದಲ್ಲಿ ಭವಿಷ್ಯದಲ್ಲಿ

 ಸಮಸ್ಯೆಗಳನ್ನು ಎದುರಿಸುವ ಕೌಶಲ್ಯಕ್ಕೆ ಅವರನ್ನು ಸಜ್ಜುಗೊಳಿಸುತ್ತದೆ.


ಲೈಪ್ ಸ್ಕಿಲ್ ಟ್ರೈನಿಂಗ್


ಇದು ಟೀಮ್ ವರ್ಕ್, ಸಹಾನುಭೂತಿ, ಸಹಕಾರ ಮತ್ತು ಸಹಯೋಗದಂತಹ ವಿವಿಧ ಜೀವನ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ.


ರಚನಾತ್ಮಕ ಟೀಕೆಗಳನ್ನು ಕಲಿಯುತ್ತಾರೆ

 

 ಮಕ್ಕಳು ಉತ್ತಮ ವ್ಯಕ್ತಿಗಳಾಗಲು ಸಹಾಯ ಮಾಡುವ ರೀತಿಯಲ್ಲಿ ರಚನಾತ್ಮಕ ಟೀಕೆ ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸುವ ಬಗ್ಗೆ ಕಲಿಯುತ್ತಾರೆ.


ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ


 ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಯ ಬಳಕೆಯು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವನ್ನು ವೇಗಗೊಳಿಸುತ್ತದೆ.



ಸಮಸ್ಯೆ ಪರಿಹರಿಸುವ ಕೌಶಲ ಬೆಳೆಸುತ್ತದೆ.


  ಸೃಜನಾತ್ಮಕ ಕಲಾ ಪ್ರಕಾರಗಳ ಮೂಲಕ ವಿದ್ಯಾರ್ಥಿಗಳು ಗುಂಪಿನಲ್ಲಿ ಕಲಿಯುವಾಗ ಪ್ರತಿ ಸನ್ನಿವೇಶದಲ್ಲಿ ಸಮಸ್ಯೆ ಪರಿಹರಿಸುವ ಮೌಲ್ಯದ ಬಗ್ಗೆ ಕಲಿಯುತ್ತಾರೆ.ತಂಡವಾಗಿ ಕೆಲಸ ಮಾಡುತ್ತಾ   ಸಮಸ್ಯೆ ಪರಿಹರಿಸುವಲ್ಲಿ ಅತ್ಯುತ್ತಮರಾಗುತ್ತಾರೆ.


ನಾಯಕತ್ವ ಗುಣ ಬೆಳೆಯುತ್ತದೆ.


 ಶಿಕ್ಷಣದಲ್ಲಿ ನಾಟಕ ಮತ್ತು ಕಲೆಯನ್ನು ಬಳಸುವುದು ವಿದ್ಯಾರ್ಥಿಗಳಿಗೆ ನಾಯಕನ ಟೋಪಿಯನ್ನು ಧರಿಸಲು ಮತ್ತು ನಾಯಕತ್ವ ಮತ್ತು ಟೀಮ್‌ವರ್ಕ್‌ಗೆ ಸಂಬಂಧಿಸಿದ ಕೇಂದ್ರ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಕಲಿಸುತ್ತದೆ.


ಹೀಗೆ ರಂಗಕಲೆಯು ಮಕ್ಕಳಿಗೆ ಬಹುಆಯಾಮದ ಉಪಯುಕ್ತತೆ ಒದಗಿಸುತ್ತದೆ ಅದರಲ್ಲೂ ಜೀವನದ ಕೌಶಲಗಳನ್ನು ಕಲಿಯಲು ಹಾಗೂ  ವೈಯಕ್ತಿಕವಾಗಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು ರಂಗಕಲೆ ಕಲಿಸುತ್ತದೆ. ಆದ್ದರಿಂದ ಶಿಕ್ಷಣದಲ್ಲಿ ರಂಗಕಲೆಯನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು




19 ಮಾರ್ಚ್ 2024

ಟಿಕೆಟ್

 


ಟಿಕೆಟ್ 


ಚುನಾವಣೆಗೆ ಟಿಕಟ್ ಕೊಟ್ಟರೆ

ನಾನು ನಮ್ಮ ಪಕ್ಷದ ತತ್ವ ಸಿದ್ದಾಂತಕ್ಕೆ ಸದಾ ಬದ್ದ|

ಟಿಕೆಟ್ ಕೈ ತಪ್ಪಿದರೆ ಮುಗಿಯಿತು ಶೀಘ್ರವಾಗಿ ಮತ್ತೊಂದು

ಪಕ್ಷದ ಕದ ತಟ್ಟಲು ಸಿದ್ದ|


ಸಿಹಿಜೀವಿ ವೆಂಕಟೇಶ್ವರ

ತುಮಕೂರು