25 ಫೆಬ್ರವರಿ 2024

ತನ್ನಂತೆ ಪರರ ಬಗೆದೊಡೆ ಕೈಲಾಸ.

 


ತನ್ನಂತೆ ಪರರ ಬಗೆದೊಡೆ ಕೈಲಾಸ.


ಮಾನವ ಸಂಘಜೀವಿ. ನಮ್ಮ ನೆಮ್ಮದಿಗೆ  ಸಹಜೀವನ,ಸಹಕಾರ ಅಪೇಕ್ಷಣೀಯವಾದರೂ ಮಾನವ ಸಹಜ ಗುಣಗಳಾದ ಮತ್ಸರ, ಸ್ವಾರ್ಥ ಸದಾ ಇಣುಕಿ  ನಮ್ಮ ಮತ್ತು ಸಮಾಜದ ನೆಮ್ಮದಿ ಹಾಳು ಮಾಡಿಬಿಡುತ್ತವೆ.

ಒಂದು ದಿನ ಯಮಧರ್ಮರಾಯ ಒಂದು ವ್ಯಕ್ತಿಯ ಪ್ರಾಣವನ್ನು ಕೊಂಡೊಯ್ಯಲು ಭೂಮಿಗೆ ಬಂದ. ಆದರೆ ಪ್ರಾಣ ಕೊಂಡೊಯ್ಯಬೇಕಾಗಿದ್ದ ವ್ಯಕ್ತಿಯೇ ಯಮಧರ್ಮನಿಗೆ ಎದುರಾದ. ಯಮನಿಗೆ ಭೂಲೋಕ ಸುತ್ತಿ ಸುತ್ತಿ ದಾಹವಾಗಿತ್ತು. ಅವನಿಗೆ ಕುಡಿಯಲು ನೀರು ಕೇಳುತ್ತಾನೆ. ಸಾಯಬೇಕಾಗಿರುವ ವ್ಯಕ್ತಿಯೇ ನೀರು ಕೊಟ್ಟು ದಾಹ ತೀರಿಸುತ್ತಾನೆ.


           ಆದರೆ ಯಮ ಕೊಂಡೊಯ್ಯಬೇಕಾದ  ವ್ಯಕ್ತಿ ಅವನೇ ಎಂದು ತಿಳಿದು ಒಂದು ವರ ಕೊಡುತ್ತಾನೆ. ಏನೆಂದರೆ ಒಂದು ಹಣೆಬರಹದ ಪುಸ್ತಕ ಕೊಟ್ಟು ಇದರಲ್ಲಿ ನಿನಗೆ ಅಂತ ಒಂದು ಹಾಳೆ ಇದೆ. ನಿನಗೆ ಏನು ಬೇಕೋ ಅದನ್ನು ಬರೆದುಕೊ. ನೀನು ಏನು ಬರೆದುಕೊಂಡರೂ ನೆರವೇರುವುದು. ಇದರಲ್ಲಿ ಸಂಶಯವಿಲ್ಲ. ಆದರೆ ನೀನು ಬರೆದುಕೊಳ್ಳಲು ನಿನಗೆ ಐದು ನಿಮಿಷ ಮಾತ್ರ ಸಮಯ, ಆ ಐದು ನಿಮಿಷವೇ ನಿನಗೇ ಅತ್ಯಮೂಲ್ಯ. ಆ ಐದು ನಿಮಿಷ ದಾಟಿದ ನಂತರ ನಿನ್ನ ಹಣೆಬರಹ ಹೇಗಿರುತ್ತೋ ಹಾಗಾಗುವುದು ಎಂದು ಹೇಳಿ ಒಂದು ಪುಸ್ತಕ ಕೊಡುತ್ತಾನೆ. 


     ಆ ವ್ಯಕ್ತಿ ಪುಸ್ತಕ ತೆಗೆದ ತಕ್ಷಣ ಮೊದಲ ಪುಟ ಓದುತ್ತಾನೆ.ಅದರಲ್ಲಿ ನಿನ್ನ ಸ್ನೇಹಿತ ವಿದೇಶಕ್ಕೆ ಹೋಗುತ್ತಾನೆ ಎಂದಿರುತ್ತದೆ. ಅದಕ್ಕೆ ಅವನು ವಿದೇಶಕ್ಕೆ ಹೋಗಬಾರದೆಂದು ಬರೆದು ತಡೆಯುತ್ತಾನೆ.ಮತ್ತೊಂದು ಪುಟ ತೆರೆಯುತ್ತಾನೆ ಅದರಲ್ಲಿ ಮತ್ತೊಬ್ಬ ಸ್ನೇಹಿತ ಲಕ್ಷಗಟ್ಟಲೆ ಲಾಟರಿ ಗೆಲ್ಲುತ್ತಾನೆಂದಿರುತ್ತದೆ. ಅವನಿಗೆ ಲಾಟರಿ ಸಿಗಬಾರದು ಎಂದು ಬರೆಯುತ್ತಾನೆ. 

ಮತ್ತೊಂದು ಪುಟ ತೆರೆಯುತ್ತಾನೆ. ಅದರಲ್ಲಿ ಅವನ ಆಪ್ತ ಗೆಳತಿ ಆಗರ್ಭ ಶ್ರೀಮಂತನನ್ನು ಮದುವೆಯಾಗುತ್ತಾಳೆ ಎಂದಿರುತ್ತದೆ.ಆಪ್ತ ಗೆಳತಿ ಆಗರ್ಭ ಶ್ರೀಮಂತ ವ್ಯಕ್ತಿಯನ್ನು  ಮದುವೆಯಾಗಬಾರದೆಂದು ಬರೆಯುತ್ತಾನೆ. 

ಮತ್ತೊಂದು ಪುಟ ತೆರೆಯುತ್ತಾನೆ. ಪಕ್ಕದ ಮನೆಯ ರೈತ ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿ ಸಿರಿವಂತನಾಗುತ್ತಾನೆಂದು ಇರುತ್ತದೆ. ಅವನು ಸಿರಿವಂತ ನಾಗಬಾರದು ಎಂದು ಬರೆಯುತ್ತಾನೆ. ಕೊನೆಯ ಹಾಳೆ ತೆರೆಯುತ್ತಾನೆ. ಅದು ಖಾಲಿ ಹಾಳೆಯಾಗಿರುತ್ತದೆ. ಅದರಲ್ಲಿ ಬರೆಯಬೇಕೆನ್ನುವಷ್ಟರಲ್ಲಿ  ಯಮ ಆ ಪುಸ್ತಕವನ್ನು ಕಸಿದುಕೊಳ್ಳುತ್ತಾನೆ. ಏಕೆಂದರೆ ಅವನಿಗೆ ಕೊಟ್ಟ ಐದು ನಿಮಿಷದ ಗಡುವು  ಮುಗಿದು ಹೋಗಿರುತ್ತದೆ. ಆಗ ಯಮ ಹೇಳುತ್ತಾನೆ, "ನಿನ್ನ ಆಯಸ್ಸು ಮುಗಿದಿದೆ ನಡೆ" ಎಂದು. ಆಗ ಆ ವ್ಯಕ್ತಿ ಹೇಳುತ್ತಾನೆ ನನಗೆ ಅಂತ ನಾ ಏನು ಬರೆದುಕೊಳ್ಳಲಿಲ್ಲ ಎಂದು. ಆಗ ಯಮ ಹೇಳುತ್ತಾನೆ ನಿಮಗೆ ಅಂತ ಒಂದಷ್ಟು ವರ್ಷ ಆಯಸ್ಸು ಕೊಟ್ಟಿರುತ್ತೇವೆ. ಅದರಲ್ಲೂ ವರವೆಂದು ಒಂದೈದು ನಿಮಿಷ ಆಯಸ್ಸು ಕೊಟ್ಟರೂ ನಿಮ್ಮಬಗ್ಗೆ ಯೋಚಿಸದೆ ಪರರ ಅವನತಿಯ ಬಗ್ಗೆ ಯೋಚಿಸುತ್ತೀರಾ ಎಂದರೆ  ಏನು ಹೇಳೋಣ? 

ಜೀವನವಿಡೀ ಕೊಟ್ಟರು ನೀವೇನೆಂದು ತಿಳಿಯದೆ ಪರರ ಬಗ್ಗೆ ಆಲೋಚಿಸುವವರಿಗೆ ಇಲ್ಲಿಬದುಕುವ ಹಕ್ಕಿಲ್ಲವೆಂದು ಕರೆದೊಯ್ದುಬಿಡುತ್ತಾನೆ.

ನಮಗೆ ಅಂತ ಒಂದಷ್ಟು ಹಾಳೆಗಳಿವೆ.ನಮಗೆ ಅಂತ ಒಂದಷ್ಟು ದಿನಗಳಿವೆ.

ನಮಗೆ ಅಂತ ಒಂದು ಬದುಕಿದೆ.

ನಮಗೆ ಅಂತ ಒಂದು ದಾರಿಯಿದೆ.

ನಮಗೆ ಅಂತ ಏನಿದಿಯೋ ಅದು ಸನ್ಮಾರ್ಗದಲ್ಲಿರಲಿ ಅದು ಬಿಟ್ಟು  ಪರರ ಬಗ್ಗೆ ಅಸೂಯೆ ಪಡುವುದು ತರವಲ್ಲ. ಸರ್ವೇ ಜನಾಃ ಸುಖಿನೋಭವಂತು ಎಂಬ ಭಾವನೆ ನಮ್ಮದಾಗಲಿ.ತನ್ನಂತೆ ಪರರ ಬಗೆದೊಡೆ ಕೈಲಾಸ  ಬಿನ್ನಾಣವಕ್ಕು ಸರ್ವಜ್ಞ .ಅಲ್ಲವೇ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529




ಆರ್ಟಿಕಲ್ 370 #article370


 


ಆರ್ಟಿಕಲ್ 370 ...


ಪ್ರಕಾಶಕ ಮತ್ತು ಲೇಖಕರಾದ ಗೆಳೆಯ ಶಂಕರಾನಂದ್ ರವರ ಜೊತೆಯಲ್ಲಿ ಇತ್ತೀಚೆಗೆ ಐನಾಕ್ಸ್ ಥಿಯೇಟರ್ ನಲ್ಲಿ ಆರ್ಟಿಕಲ್ 370 ಚಿತ್ರ ವೀಕ್ಷಿಸಿದೆ.

ತುಮಕೂರಿನಲ್ಲಿ ಐನಾಕ್ಸ್ ಆರಂಭವಾದ ತರುವಾಯ ಕನ್ನಡ ಸೇರಿ ಹಿಂದಿ, ತೆಲುಗು,ಇಂಗ್ಲಿಷ್, ತಮಿಳು ಹೀಗೆ ವಿವಿಧ ಭಾಷೆಯ ಎಲ್ಲಾ ಜಾನರ್ ಸಿನಿಮಾ ನೋಡಿದ್ದರೂ ರಾಜಕೀಯ ಜ್ಞಾನ ನೀಡುವ ,ದೇಶದ ಭದ್ರತಾ ವಿಷಯ ಮತ್ತು ಏಕತೆಯ ಸಂದೇಶ ಸಾರುವ ಈ ಚಿತ್ರ ಗಮನಾರ್ಹವಾದದು ಎಂದು ನನಗನಿಸಿತು.


 2016 ರಿಂದ 2019 ರವರೆಗೆ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಹಿನ್ನೆಲೆಯಲ್ಲಿ ನಡೆದ ಅನೇಕ ಘಟನೆಗಳನ್ನು ಒಟ್ಟುಗೂಡಿಸಿ. ಉತ್ತಮ ಸ್ಕ್ರೀನ್ ಪ್ಲೇ ಮೂಲಕ ನಮಗೆ ಚಿತ್ರವನ್ನು ಸಮರ್ಪಕವಾಗಿ ತಲುಪಿಸಿದ ಚಿತ್ರತಂಡಕ್ಕೆ ಒಂದು ಮೆಚ್ಚುಗೆ ಹೇಳಲೇಬೇಕು.  

ಜೋನಿ ಹಕ್ಸರ್ ಎಂಬ ಗುಪ್ತಚರ ಅಧಿಕಾರಿಯ ಡಿ ಗ್ಲಾಮ್ ಪಾತ್ರದಲ್ಲಿ ಯಾಮಿ ಗೌತಮಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ತನ್ನ ತಂದೆಯ ಅಸಹಜ ಸಾವು ನೆನೆದು ಹಾಗೂ ಜೀವದ ಗೆಳೆಯ ಅಸುನೀಗಿದ ಸಮಯದಲ್ಲಿ ನೋವಿನಿಂದ ಬಳಲುವ ಅಭಿನಯ ಗಮನ ಸೆಳೆಯುತ್ತದೆ.  ತಮಿಳುನಾಡು ಮೂಲದ  ಗೃಹ ಕಾರ್ಯದರ್ಶಿಯಾಗಿ  ಪ್ರಿಯ ಮಣಿಯವರದು ಪ್ರಬುದ್ದ ಅಭಿನಯ.370ನೇ ವಿಧಿಯ  ರದ್ದತಿಗೆ ಕಾರಣವಾಗುವ ಘಟನೆಗಳನ್ನು ಬಹಳ ಚಾಕಚಕ್ಯತೆಯಿಂದ ನಿರ್ವಹಿಸುವಲ್ಲಿ ನಿರ್ದೇಶಕರಾದ 

ಆದಿತ್ಯ ಸುಹಾಸ್ ಜಂಬಳೆರವರು ಪ್ರಿಯಾಮಣಿ 

ಅವರಿಂದ ಉತ್ತಮ ಅಭಿನಯ ತೆಗೆದಿದ್ದಾರೆ. 

 ಒಂದೆಡೆ ಬಿಲ್ ಮಂಡನೆಯ  ಹಿನ್ನೆಲೆಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು, ಕಣಿವೆಯಲ್ಲಿ ನಡೆವ ಉಗ್ರ ಚಟುವಟಿಕೆಗಳು,  ಅವುಗಳನ್ನು ನಿಭಾಯಿಸಲು ಪಿ ಎಂ ಓ ಕಛೇರಿಯ ಕಾರ್ಯಾಚರಣೆ  ಇವುಗಳು ಕೆಲವೊಮ್ಮೆ ನಮಗೆ ಜ್ಞಾನದ ಜೊತೆಯಲ್ಲಿ ಆಕ್ಷನ್ ಥ್ರಿಲ್ಲರ್ ರೀತಿಯಲ್ಲಿ  ನಮ್ಮನ್ನು ನಮ್ಮ ಆಸನದ ತುದಿಯಲ್ಲಿ ಇರಿಸುತ್ತದೆ.


ಇನ್ನೂ ಚಿತ್ರದ ಸಂಕಲನ ಬಹಳ ಚುರುಕಾಗಿರುವುದರಿಂದ ಸಿನಿಮಾ ನಿಮೆಗೆಲ್ಲಿಯೂ ಬೋರ್ ಆಗುವುದಿಲ್ಲ 

ವಿಶೇಷವಾಗಿ 370 ನೇ ವಿಧಿಯ ಕಾನೂನು ಅಂಶಗಳ ಚರ್ಚೆಯ ಸಮಯದಲ್ಲಿ  ಕ್ಯಾಮರಾ ಕೆಲಸ ಮತ್ತು  ಹಿನ್ನೆಲೆಯ  ಸಂಗೀತವು ಶ್ಲಾಘನೀಯವಾಗಿದೆ. 


ಚಿತ್ರ ನೋಡಿ ಥಿಯೇಟರ್ ನಿಂದ   ಹೊರ ಬರುವಾಗ ಕಾಲೇಜು ವಿದ್ಯಾರ್ಥಿಗಳು ಬಿಲ್ ಅನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ ರೀತಿ, ಅಲ್ಲಿ ನಡೆದ ಚರ್ಚೆಯ ಪ್ರಮುಖಾಂಶಗಳ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡ ನನಗೆ ನಿಜಕ್ಕೂ ಇದೊಂದು ಕಾಡುವ ಸಿನಿಮಾ ಎಂದನಿಸಿತು. ಬಿಲ್ ಮಂಡನೆಯ ಹಿನ್ನೆಲೆ, ಕಾನೂನಿನ ಜ್ಞಾನ, ಭದ್ರತೆ ,ಮುಂತಾದ ವಿಷಯಗಳು ಎಷ್ಟು ಮುಖ್ಯ ಎಂಬುದನ್ನು ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮತ್ತು ರಾಜಕೀಯ ಆಸಕ್ತರು ಈ ಸಿನಿಮಾ ನೋಡಿದರೆ ಒಂದು ನಿರ್ದಿಷ್ಟ ಜ್ಞಾನ ಲಭಿಸುತ್ತದೆ.ಒಟ್ಟಾರೆ ಹೇಳುವುದಾದರೆ ನಮ್ಮ ದೇಶದ ಎಲ್ಲ ನಾಗರಿಕರು  ನೋಡಲೇಬೇಕಾದ ಚಿತ್ರ ಇದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಪ್ರೇಮ ಗೀತೆ

 ಬಾ

ನಲ್ಲೆ

ಸೇರೋಣ

ಸಂತಸದಿ 

ನಲಿದಾಡೋಣ

ಸಂಭ್ರಮಿಸುತಲಿ

ನಮ್ಮ ಪ್ರೀತಿಯನು 

ಜಗತ್ತಿಗೆ ತೋರಿಸೋಣ

ಪ್ರೇಮೋತ್ಸವ ಇದು

ನನ್ನ ನಿನ್ನ ಗೀತೆ

ಹಾಡೋಣ ಇಂದು

ಪ್ರೇಮಗೀತೆ

ಒಟ್ಟಾಗಿ 

ನಾನು

ನೀ


ಸಿಹಿಜೀವಿ ವೆಂಕಟೇಶ್ವರ






ಉತ್ಸವ

ಇದು 


22 ಫೆಬ್ರವರಿ 2024

ಮತ್ತೆ ಏರಿಸುವುದು.(ಹನಿಗವನ)

 


ಮತ್ತೆ ಏರಿಸುವುದು.


ಎಣ್ಣೆ ಬೆಲೆಯನ್ನು 

ಯಾಕೆ ಮತ್ತೆ ಏರಿಸುವುದು|

ಸಿಟ್ಟಿನಿಂದ ಕೇಳಿದ ಗುಂಡ

ಎಕೆಂದರೆ ಅದು "ಮತ್ತೇ" ಏರಿಸುವುದು||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 ಫೆಬ್ರವರಿ 2024

ಮಕ್ಕಳಲ್ಲಿ ಪೌರ ಪ್ರಜ್ಞೆ ಮೂಡಿಸುವ ಸಿ ಎಂ ಸಿ ಎ

 



ಮಕ್ಕಳಲ್ಲಿ  ಪೌರ ಪ್ರಜ್ಞೆ ಮೂಡಿಸುವ ಸಿ ಎಂ ಸಿ ಎ.



ಇಂದಿನ ಪೋಷಕರು ಮಕ್ಕಳಿಗೆ ಹೇಳುವ ಒಂದೇ ಮಾತು ಜಾಸ್ತಿ ಪರ್ಸೆಂಟೇಜ್ ತೆಗಿ, ಟೈಮ್ ವೇಸ್ಟ್ ಮಾಡಬೇಡ, ಕಲ್ಚರಲ್ ಆಕ್ಟಿವಿಟೀಸ್ ಏನೂ ಬೇಡ  ಬರೀ ಓದು ಸಾಕು.

ಹೀಗೆ ಬೆಳೆದ ಮಕ್ಕಳಿಗೆ 

ಪ್ರಜಾಪ್ರಭುತ್ವ, ಸರ್ಕಾರ, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಬಹುತ್ವ ಇವೆಲ್ಲವೂ ಹೇಗೆ ತಾನೆ ಅರ್ಥವಾಗಬೇಕು?  

ಕೆಲ ಶಾಲಾ ಕಾಲೇಜುಗಳಲ್ಲಿ ಈ ಕುರಿತಾದ ಪ್ರಯತ್ನಗಳಾಗಿರುವುದು ಸ್ವಾಗತಾರ್ಹ ಆದರೆ ಅಷ್ಟೊಂದು ವ್ಯಾಪಕವಾಗಿ ಆಗಿಲ್ಲದಿರುವುದು ಅಷ್ಟೇ ಸತ್ಯ. ಈ ನಿಟ್ಟಿನಲ್ಲಿ

ಬೆಂಗಳೂರಿನ ಚಿಲ್ಡ್ರನ್  ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನೆಸ್‌ ಸಂಸ್ಥೆಯು (ಸಿಎಂಸಿಎ) ಎರಡು ದಶಕಕ್ಕೂ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿದೆ.

ಐದು ವರ್ಷಗಳ ಹಿಂದೆ ನಾನು ಈ ಸಂಸ್ಥೆಗೆ ಭೇಟಿ ನೀಡಿದ್ದೆ  ಆ ಸಂಸ್ಥೆಯಲ್ಲಿ  ಸಹಾಯಕ ನಿರ್ದೇಶಕರಾಗಿ  ಕಾರ್ಯನಿರ್ವಹಿಸುವ ಮರಳಪ್ಪ ರವರು ಸಂಸ್ಥೆಯ ಕಾರ್ಯ ವಿಧಾನವನ್ನು ವಿವರಿಸಿದ್ದರು.


'ಪಬ್ಲಿಕ್ ಅಫೇರ್ಸ್ ಸೆಂಟರ್' ಸಂಸ್ಥೆಯ ಯೋಜನೆಯಾಗಿ 'ಚಿಲ್ಡ್ರನ್    ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನಸ್‌' ಹುಟ್ಟು ಪಡೆಯಿತು. ನಂತರದ ದಿನಗಳಲ್ಲಿ ಈ ಯೋಜನೆಯೇ ಸಂಸ್ಥೆಯ ರೂಪ ಪಡೆದುಕೊಂಡಿತು. ಮಂಜುನಾಥ ಸದಾಶಿವ, ವೃಂದಾ ಭಾಸ್ಕರ್ ಹಾಗೂ ಪ್ರಿಯಾ ಕೃಷ್ಣಮೂರ್ತಿ ಅವರು ಸೇರಿ ಈ ಸಂಸ್ಥೆಯನ್ನು 2000ನೇ ಇಸ್ವಿಯಲ್ಲಿ ಹುಟ್ಟುಹಾಕಿದರು.


ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಯಾಗಿಸಲು, ಅವರಲ್ಲಿ ಜೀವನ ಕೌಶಲಗಳನ್ನು ತುಂಬಲು ಈ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಂಸ್ಥೆಯ ಕಾರ್ಯಕರ್ತರು ಶಾಲೆ ಶಾಲೆಗಳಿಗೆ ತೆರಳಿ ಸಂಸ್ಥೆಯ ಕುರಿತು, ಅವರ ಯೋಜನೆಯ ಕುರಿತು ವಿವರಿಸುತ್ತಾರೆ. ಅದು, ಸರ್ಕಾರಿ ಶಾಲೆ ಇರಬಹುದು, ಖಾಸಗಿ ಶಾಲೆ ಇರಬಹುದು. ಶಾಲೆಯು ಒಪ್ಪಿಗೆ ನೀಡಿದರೆ, ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸುತ್ತದೆ. ಶಾಲೆಗಳೂ ಖುದ್ದಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.


6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳನ್ನು ಸಂಸ್ಥೆಯು ಮುಖ್ಯ ಗುರಿಯನ್ನಾಗಿಸಿಕೊಂಡಿದೆ. 6ನೇ ತರಗತಿಯ ಒಬ್ಬ ಮಗುವು ಈ ಯೋಜನೆಯ ಭಾಗವಾದರೆ, ಆ ಮಗುವು 10ನೇ ತರಗತಿಗೆ ಬರುವವರೆಗೂ ಸಂಸ್ಥೆಯ ಯೋಜನೆಗಳ ಭಾಗವಾಗಿಯೇ ಇರುತ್ತದೆ. ಶಾಲೆಯೊಂದರಲ್ಲಿ ವಾರಕ್ಕೆ ಒಂದು ತರಗತಿಯನ್ನು ಪ್ರತಿ ತರಗತಿಯ ಮಕ್ಕಳಿಗೆ ಸಂಸ್ಥೆಯು ನಡೆಸುತ್ತದೆ. ತಜ್ಞರ ಮೂಲಕ ಸಂಸ್ಥೆಯು ತನ್ನದೇ ಪಠ್ಯಕ್ರಮವನ್ನೂ ರೂಪಿಸಿಕೊಂಡಿದೆ. ಸಹಾನುಭೂತಿ, ಒಂದು ವಿಷಯದ ಕುರಿತು ವಿಮರ್ಶೆ ಮಾಡುವುದು, ಕ್ರಿಯಾಶೀಲ ವಿಚಾರವಂತಿಕೆಯನ್ನು ಬೆಳೆಸಿಕೊಳ್ಳುವುದು, ಉತ್ತಮ ಸಂವಹನ ಹೀಗೆ ಅನೇಕ ಜೀವನ ಕೌಶಲಗಳನ್ನೂ ಸಂಸ್ಥೆ ಕಲಿಸಿಕೊಡುತ್ತದೆ.


ಪ್ರಾಯೋಗಿಕ ಚಟುವಟಿಕೆಗಳೇ ಸಂಸ್ಥೆಯ ಪಠ್ಯಕ್ರಮ. ಕರ್ನಾಟಕವಲ್ಲದೆ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿಯೂ ತನ್ನ ಕಾರ್ಯ ಚಟುವಟಿಕೆಗಳನ್ನು ಸಂಸ್ಥೆ ವಿಸ್ತರಿಸಿ ಕೊಂಡಿದೆ. ತನ್ನೆಲ್ಲಾ ಕಾರ್ಯಚಟು ವಟಿಕೆಗಳನ್ನು ಸಂಸ್ಥೆ ಉಚಿತವಾಗಿ ಮಾಡುತ್ತದೆ. ದಾನಿಗಳ ದೇಣಿಗೆಯೇ ಸಂಸ್ಥೆಯ ಆರ್ಥಿಕ ಬೆನ್ನೆಲುಬು. 


ಹಾಗೂ ನಾಗರಿಕ ಸಮಸ್ಯೆಗಳ ಕುರಿತು ತಿಳಿಸಿಕೊಡಲು 'ಸಿಎಂಸಿಎ ಕ್ಲಬ್' ಯೋಜನೆಯನ್ನು ಸಂಸ್ಥೆ ರೂಪಿಸಿದೆ. ಜೊತೆಗೆ, ಸರ್ಕಾರದೊಂದಿಗೆ ಕೈಜೋಡಿಸಿ, ಮಕ್ಕಳ ಗ್ರಾಮ ಸಭೆಗಳನ್ನೂ ಸಂಸ್ಥೆ ಆಯೋಜಿಸುತ್ತದೆ. 'ನನ್ನ ಒಳಿತಿಗಾಗಿ ಗ್ರಂಥಾಲಯ' ಎನ್ನುವ ಯೋಜನೆಯಡಿ, ಗ್ರಾಮದಲ್ಲಿನ ಗ್ರಂಥಾಲಯಕ್ಕೆ ಬರುವಂತೆ ಮಕ್ಕಳನ್ನು ಹುರಿದುಂಬಿಸುತ್ತದೆ. ನಾಗರಿಕ ವಿಷಯಗಳ ಕುರಿತು ಜಾಗೃತಿ ಮೂಡಿಸಲು, ಮಕ್ಕಳಿಂದ ಹಲವು ಚಟುವಟಿಕೆಗಳನ್ನು ಮಾಡಿಸುತ್ತದೆ. ಕಾರ್ಯಚಟುವಟಿಕೆ: ಶಾಲೆಯಲ್ಲಿ ಶೌಚಾಲಯ ಇಲ್ಲದಿದ್ದರೆ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲದಿದ್ದರೆ, ತಮ್ಮ ಮನೆಯ ಎದುರು ಕಸ ಸುರಿಯುತ್ತಿದ್ದರೆ, ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿದ್ದರೆ... ಹೀಗೆ ಅನೇಕ ಸಾಮಾಜಿಕ ಸಮಸ್ಯೆಗಳ ಕುರಿತು, ಪರಿಸರ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 

ಹೀಗೆ ಸಿ ಎಮ್ ಸಿ‌ಎ  ಭವಿಷ್ಯದ ಜವಾಬ್ದಾರಿಯುತ ನಾಗರಿಕರ ನಿರ್ಮಾಣಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತವಾಗಿದೆ.ಇವರೊಂದಿಗೆ ಸಮುದಾಯವು ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರು ಸಹಕಾರ ನೀಡಿದರೆ ಜವಾಬ್ದಾರಿಯುತ ಸಮಾಜ ನಮ್ಮದಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.