09 ನವೆಂಬರ್ 2023

ಕನ್ನಡ ದೀಪ ಹಚ್ಚಿದ ಡಿ ಎಸ್ ಕರ್ಕಿ..

 



ಕನ್ನಡ ದೀಪ ಹಚ್ಚಿದ ಡಿ ಎಸ್ ಕರ್ಕಿ..

ಹೆಚ್ಚೇವು ಕನ್ನಡ ದೀಪ.. ಕರುನಾಡ ದೀಪ...ಸಿರಿನುಡಿಯ ದೀಪ...
.ಎಂಬ ಗೀತೆಯನ್ನು ನಾಡಿಗೆ ನೀಡಿ
ಕನ್ನಡಿಗರ  ಮನೆ ಮನಗಳಲ್ಲಿ ಕನ್ನಡ ದೀವಿಗೆ ಬೆಳಗಿಸಿದ ಕವಿ ಯಾರಿಗೆ ಗೊತ್ತಿಲ್ಲ ಹೇಳಿ?  ಹೌದು ಅವರೇ ನಮ್ಮ ಹೆಮ್ಮೆಯ ಡಿ ಎಸ್ ಕರ್ಕಿ ರವರು.  ಅವರು ಸಹಜ ಮಾಧುರ್ಯ ದ ಸಂವೇದನಾಶೀಲ ಮತ್ತು  ರಮ್ಯ ಕವನಗಳ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಉನ್ನತಮೌಲ್ಯಗಳನ್ನು ಉದಾತ್ತ ಆದರ್ಶಗಳನ್ನು ಹೃದ್ಯವಾಗಿ ಹಾಡಿದ ಭಾವಗೀತೆಯ ಕವಿ ಎಂದೇ ಪ್ರಸಿದ್ಧರಾಗಿದ್ದರು ಪ್ರತಿ ವರ್ಷ ನವೆಂಬರ್ 15 ರಂದು ಅವರ ಜನ್ಮ ದಿನ ಆಚರಿಸುತ್ತೇವೆ.

ಡಿ.ಎಸ್.ಕರ್ಕಿಯವರು ಬೆಳಗಾವಿ ಜಿಲ್ಲೆಯ ಹಿರೇಕೊಪ್ಪ  ಗ್ರಾಮದಲ್ಲಿ 1907 ನವೆಂಬರ್ 15ರಂದು ಜನಿಸಿದರು. ಇವರ ತಾಯಿ ದುಂಡವ್ವ  ತಂದೆ ಸಿದ್ದಪ್ಪ.ದುಂಡಪ್ಪ ಸಿದ್ದಪ್ಪ ಕರ್ಕಿ ಎಂಬುದು ಇವರ ಪೂರ್ಣ ನಾಮ.ಚಿಕ್ಕಂದಿನಲ್ಲಿಯೆ ತಾಯಿಯನ್ನು ಕಳೆದುಕೊಂಡ ಇವರ ಪ್ರಾಥಮಿಕ ಶಿಕ್ಷಣ ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಆಯಿತು.  ಬೆಳಗಾವಿಯ ಗಿಲಗಂಜಿ ಅರಟಾಳ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಕರ್ಕಿಯವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಭ್ಯಾಸದ ನಂತರ 1935ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕೊಲ್ಲಾಪುರದ ರಾಜಾರಾಮ ಕಾಲೇಜು, ಪುಣೆಯ ಫರ್ಗ್ಯೂಸನ್ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಓದಿದರು.  ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1940ರಲ್ಲಿ ಬಿ.ಟಿ. ಪದವಿಯನ್ನು ಪಡೆದು ಗಿಲಗಂಜಿ ಅರಟಾಳ ಪ್ರೌಢಶಾಲೆಯಲ್ಲಿ  ಶಿಕ್ಷಕರಾದರು. 1949ರಲ್ಲಿ "ಕನ್ನಡ ಛಂದಸ್ಸಿನ ವಿಕಾಸ"   ಮಹಾಪ್ರಬಂಧಕ್ಕಾಗಿ ಪಿ.ಎಚ್‍ಡಿ. ಪಡೆದರು. ಕೆಲಕಾಲದಲ್ಲಿ ಕೆ.ಎಲ್.ಇ. ಸೊಸೈಟಿ ಸೇರಿದರು. ಜಿ.ಎ. ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾದರು. ಅನಂತರ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕೆ.ಎಲ್.ಇ. ಸೊಸೈಟಿಯ ಹುಬ್ಬಳ್ಳಿಯ ಕಲಾ  ಕಾಲೇಜಿನ ಉಪಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ, ಕೆಲಕಾಲ ನರೇಗಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ಹುಬ್ಬಳ್ಳಿಗೆ ಹಿಂದಿರುಗಿದರು. ದಕ್ಷ ಆಡಳಿತಗಾರರೆಂದೂ ಇವರು ಹೆಸರುಗಳಿಸಿದರು. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಾಣುತ್ತಿದ್ದರು. ನಿವೃತ್ತಿಯ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಅನೇಕ ವರ್ಷಗಳವರೆಗೆ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾದರು. 

ಕರ್ಕಿಯವರು ಭೂಮಿಯ ಸಂಗೀತದ ನಾದದೊಂದಿಗೆ ಭುವನದ ಭಾಗ್ಯರಾಗಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದವರು. ಅಧ್ಯಾತ್ಮಿಕತೆ, ಪ್ರಕೃತಿ ಪ್ರೀತಿ, ಸೌಂದರ್ಯದ ಒಲವು ಅವರ ಕಾವ್ಯದ ಜೀವಾಳಗಳಾಗಿವೆ. ಡಿ.ಎಸ್. ಕರ್ಕಿ ಅವರಿಗೆ ಕಾವ್ಯ ಕೃಷಿ ವಿಶೇಷ ಕ್ಷೇತ್ರವಾದರೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಜನಪರ ವಿಚಾರಗಳನ್ನು ನೀಡಿದ್ದಾರೆ. ನಾಡಗೀತೆಗಳನ್ನು ಬರೆದು ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದ ಅವರು ಬೆಳಗಾವಿಯಲ್ಲಿ ಎಸ್.ಡಿ. ಇಂಚಲ, ಬ.ಗಂ. ತುರಮರಿಯರೊಂದಿಗೆ ಸೇರಿ ಕನ್ನಡ ಜೀವಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಈ ಮೂವರೂ ಸೇರಿ 'ಕನ್ನಡದ ಕಿಟ್' ಎಂದೇ ಹೆಸರುವಾಸಿಯಾಗಿದ್ದರು” ಎಂದು ಪ್ರೊ. ಎಂ. ಎಸ್. ಇಂಚಲ ಅಭಿಪ್ರಾಯ ಪಡುತ್ತಾರೆ.

ಪ್ರಕೃತಿ ಮತ್ತು ಜೀವನದ ಸಾತ್ವಿಕ ಸತ್ವ ಸೌಂದರ್ಯದಿಂದ ಅಗಾಧವಾಗಿ ಪ್ರಭಾವಿತರಾದ ಇವರು ಗದ್ಯಪದ್ಯವೆರಡರಲ್ಲೂ ತಮ್ಮ ವ್ಯಕ್ತಿ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾವ್ಯ, ಪ್ರಬಂಧ, ಮಕ್ಕಳಸಾಹಿತ್ಯ ಮತ್ತು ಸಂಪಾದನೆ, ಸಂಶೋಧನೆಗೆ ಸಂಬಂಧಿಸಿದ ಒಟ್ಟು ಹನ್ನೊಂದು ಕೃತಿಗಳನ್ನು ಪ್ರಕಟಿಸಿದ್ದಾರೆ. ಆಧ್ಯಾತ್ಮಿಕ ಚಿಂತನೆಗಳನ್ನು ಸೌಂದರ್ಯಪ್ರಜ್ಞೆ ಮತ್ತು ಜೀವನಸಂಸ್ಕೃತಿ ಕುರಿತಾದ ಆರೋಗ್ಯಪೂರ್ಣ ವಿಚಾರಗಳನ್ನು ಬದುಕಿನ ಶುಚಿ ರುಚಿ ಮತ್ತು ಒಲವು ಚೆಲವನ್ನು ಕಲಾತ್ಮಕ ವಿನ್ಯಾಸದಲ್ಲಿ ಸುಕುಮಾರ ಶೈಲಿಯಲ್ಲಿ ಪಡಿಮೂಡಿಸಿರುವ ಇವರ ಕಾವ್ಯಪ್ರತಿಭೆ ಅನನ್ಯವಾದುದು. ನಕ್ಷತ್ರಗಾನ (1949), ಭಾವತೀರ್ಥ (1953), ಗೀತಗೌರವ (1968), ಕರಿಕೆ ಕಣಗಿಲು (1976), ನಮನ (1977)  ಇವು ಇವರ ಕವನ ಸಂಕಲನಗಳು. "ಹಚ್ಚೇವು ಕನ್ನಡದ ದೀಪ, ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವ ದೀಪ" ಎಂದು ಕನ್ನಡಿಗರ ಎದೆಯಾಳದ ಮಿಡಿತವನ್ನು ಕಾವ್ಯದ ಕೊರಳಲ್ಲಿ ಮಿಡಿದ ನಾಡಕವಿ ಇವರು. ಕವಿಯ ಜೀವನ ಪ್ರೀತಿ, ಪ್ರಕೃತಿ, ಕಲೆ ಮತ್ತು ಸಾಹಿತ್ಯ ಚಿಂತನೆಯ ಚತುರ್ಮುಖ ದರ್ಶನ ನೀಡುವ ಗದ್ಯಕೃತಿ ನಾಲ್ದೆಸೆಯನೋಟ (1952), ಸಾಹಿತ್ಯ ಸಂಸ್ಕೃತಿ ಶೃತಿ (1974) ಇವರ ಗದ್ಯಶೈಲಿಯ ಸೊಗಸು ಪ್ರಬಂಧ ಪ್ರತಿಭೆ ಮತ್ತು ಅನುವಾದ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆ. ಮಕ್ಕಳ ಶಿಕ್ಷಣ (1956) ಶಿಕ್ಷಣತಜ್ಞನೊಬ್ಬನ ಶೈಕ್ಷಣಿಕ ಕಾಳಜಿಗಳನ್ನು ಪ್ರಕಟಿಸಿರುವ ಕೃತಿ. ಬಣ್ಣದ ಚೆಂಡು, ತನನತೋಂನಂ ಶಿಶುಗೀತೆಗಳ ಸಂಕಲನಗಳು. ಕರ್ನಾಟಕದ ಅನುಭಾವಿ ಕವಿ ಶಿಶುನಾಳ ಶರೀಫರ ತತ್ವಪದಗಳ ಸಂಗ್ರಹ ಜನಪ್ರಿಯ ಪದಗಳು. ಇದು ಶರೀಫರ ಗೀತೆಗಳ ಆನುಭಾವಿಕ ಸಾಮಾಜಿಕ, ತಾತ್ತ್ವಿಕ ನೆಲೆಗಳ ಗಂಭೀರ ಪ್ರತಿಪಾದನೆ ಯನ್ನೊಳಗೊಂಡಿದೆ. ಕನ್ನಡ ಛಂದೋವಿಕಾಸ (1956) ಕನ್ನಡ ಛಂದಸ್ಸಿನ ಚರಿತ್ರೆ ಮತ್ತು ಸ್ವರೂಪವನ್ನು ಪ್ರಾಚೀನ ಮತ್ತು ಆಧುನಿಕ ಕಾವ್ಯ ಭಾಗಗಳ ಮೂಲಕ ವಿಶ್ಲೇಷಿಸುವ ಸಂಶೋಧನ ಮಹಾ ಪ್ರಬಂಧ. ಛಂದಶ್ಶಾಸ್ತ್ರದ ಗಂಭೀರ ಅಧ್ಯಯನಗಳು ವಿರಳವಾಗಿದ್ದ ಸಂದರ್ಭದಲ್ಲಿ ಛಂದಶ್ಶಾಸ್ತ್ರದ ಅಧ್ಯಯನಕ್ಕೆ ಅಧಿಕೃತ ಆಕರ ಗ್ರಂಥವಾಗಿದ್ದ ಕನ್ನಡ ಛಂದೋವಿಕಾಸ ಅಚ್ಚಗನ್ನಡದ ದೇಸಿ ಛಂದಸ್ಸನ್ನು ಕುರಿತು ನಡೆಸಿರುವ ವಿವೇಚನೆ ಮೌಲಿಕವಾದುದಾಗಿದೆ. ತ್ರಿಪದಿ, ಕಂದ, ರಗಳೆ, ಸಾಂಗತ್ಯ, ಷಟ್ಪದಿ, ಅಕ್ಕರ, ಚೌಪದಿ, ಏಳೆ ಇತ್ಯಾದಿ ಅಚ್ಚಗನ್ನಡ ಛಂದೋಲಯಗಳ, ಚಾರಿತ್ರಿಕ ಮತ್ತು ಕಲಾತ್ಮಕ ನೆಲೆಯ ಚರ್ಚೆ ಕರ್ಕಿಯವರ ವಿದ್ವತ್ ಪರಿಶ್ರಮ ಮತ್ತು ಸದಭಿರುಚಿಯ ಪ್ರತೀಕವಾಗಿದೆ.
ಪ್ರೊ. ಕರ್ಕಿ ಅವರ ಕೃತಿ 'ಗೀತ ಗೌರವ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರ ಸಾಹಿತ್ಯಕ ಸಾಧನೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ (1972). ಕಾವ್ಯಗೌರವ ಎಂಬ ಸಂಭಾವನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ (1991)
ಕರ್ಕಿಯವರು ಏಳು ಕವನಸಂಕಲನಗಳನ್ನು, ಎರಡು ಮಕ್ಕಳ ಕವನಸಂಕಲನಗಳನ್ನು ಹಾಗು ಎರಡು ಪ್ರಬಂಧಸಂಕಲನಗಳನ್ನು ನೀಡಿದ್ದಾರೆ. ಕನ್ನಡ ‌ದೀಪ ಹಚ್ಚಿದ  ಕರ್ಕಿಯವರು 1984 ಜನೆವರಿ 16ರಂದು  ಆರಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529


ಸಾಮಾನ್ಯ ಜ್ಞಾನ ಭಾಗ ೧

 


ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು. ಭಾಗ 1 



1.ಆಸ್ಕರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ವಿತರಿಸಲಾಗುತ್ತದೆ?


2. ಪ್ರಪಂಚದ ಅತಿ ದೊಡ್ಡ ಮರುಭೂಮಿ ಯಾವುದು?


3.ತಾಪಮಾನವು ವಾಯುಗೋಳದ ಯಾವ ವಲಯದಲ್ಲಿ  ವೇಗವಾಗಿ ಹೆಚ್ಚಾಗುತ್ತದೆ ?


4. ಭಾರತದ ರಾಷ್ಟ್ರೀಯ ಹಣ್ಣು ಯಾವುದು?


5. ಟೈಫಾಯಿಡ್ ಜ್ವರವು _____ ನಿಂದ ಉಂಟಾಗುತ್ತದೆ.


6. ಯಾವ ಸಂವಿಧಾನದ ತಿದ್ದುಪಡಿಗಳು ಪಂಚಾಯತ್ ರಾಜ್ ಸಂಸ್ಥೆಯನ್ನು ಸ್ಥಾಪಿಸಿವೆ?


7. ಸೋಡಿಯಂ ಕಾರ್ಬೋನೇಟ್ ಅನ್ನು ಸಾಮಾನ್ಯವಾಗಿ ಕರೆಯಲಾಗುತ್ತದೆ?


8 .ಎರಡು ಪರಮಾಣುಗಳ ನಡುವೆ ಬಂಧವು ರೂಪುಗೊಂಡಾಗ, ವ್ಯವಸ್ಥೆಯ ಶಕ್ತಿಯು ______.ಆಗುತ್ತದೆ


9 .ನೀರು _____ ಉಷ್ಣತೆಯಲ್ಲಿ  ಗರಿಷ್ಠ ಸಾಂದ್ರತೆಯನ್ನು ಹೊಂದಿದೆ.


10. ನೀಪ್ ಟೈಡ್ಸ್ ಎಂದರೆ._________


11. ಅತಿ ದೊಡ್ಡ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಸಾಗರವು_______ ಆಗಿದೆ.


12.ದೂರವಾಣಿಯನ್ನು ಕಂಡುಹಿಡಿದವರು ಯಾರು?


13.ಏಷ್ಯನ್ ಗೇಮ್ಸ್ ಅನ್ನು ಮೊದಲು ಆಯೋಜಿಸಿದ ದೇಶ ಯಾವುದು?


14."ಪಂಚತಂತ್ರ" ಕಥೆಗಳನ್ನು ಸಂಕಲಿಸಿದವರು ಯಾರು?


15.ಯಾವ ರಾಜವಂಶದ ಅವಧಿಯಲ್ಲಿ ಅಜಂತಾ ಗುಹೆಗಳನ್ನು ನಿರ್ಮಿಸಲಾಯಿತು?


16.'ಭಾರತಮಾತಾ' ಎಂಬ ಪ್ರಸಿದ್ಧ ವರ್ಣಚಿತ್ರದ ವರ್ಣಚಿತ್ರಕಾರ ಯಾರು?


17.ಫ್ರಾನ್ಸ್ನ ರಾಜಧಾನಿ ಯಾವುದು?


18."ಟು ಕಿಲ್ ಎ ಮೋಕಿಂಗ್ ಬರ್ಡ್" ಕಾದಂಬರಿಯನ್ನು ಬರೆದವರು ಯಾರು?


19.ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು?


20. "ದಿ ಮೋನಾಲಿಸಾ" ಎಂಬ ಪ್ರಸಿದ್ಧ ಕಲಾಕೃತಿಯನ್ನು ಚಿತ್ರಿಸಿದವರು ಯಾರು?




ಸರಿ ಉತ್ತರಗಳು ...


1ಸಿನಿಮಾ

2 ಸಹರಾ

3ಆಯಾನುಗೋಳ

4 ಮಾವು 

5 ಬ್ಯಾಕ್ಟೀರಿಯಾ

6 73 ನೇ ತಿದ್ದುಪಡಿ

7 ವಾಶಿಂಗ್ ಸೋಡಾ 

8 ಇಳಿಕೆ 

9 4 ಡಿಗ್ರಿ ಸೆಲ್ಸಿಯಸ್

10 ದುರ್ಬಲ ಅಲೆಗಳು 

11 ಪೆಸಿಫಿಕ್ ಸಾಗರ

12 ಅಲೆಕ್ಸಾಂಡರ್ ಗ್ರಹಾಂಬೆಲ್ 

13 ಭಾರತ

14 ವಿಷ್ಣು ಶರ್ಮ

15 ಗುಪ್ತರು 

16 ಅಬನೀಂದ್ರ ನಾಥ್ ಟ್ಯಾಗೋರ್

17 ಪ್ಯಾರಿಸ್

18 ಹಾರ್ಪರ್ ಲೀ 

19 ಗುರು 

20 ಲಿಯೋನಾರ್ಡೋ ಡಾ ವಿಂಚಿ 



ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು

9900925529

30 ಅಕ್ಟೋಬರ್ 2023

ಸಿಕ್ಸರ್...

 



ಸಿಕ್ಸರ್...

ಆಡಿದ ಆರೂ ಪಂದ್ಯಗಳಲ್ಲಿ
ಗೆದ್ದು ಬಾರಿಸಿದೆ ಭಾರತ ಸಿಕ್ಸರು|
ಸರಣಿ ಸೋಲಿನಿಂದ ತವರಿನೆಡೆಗೆ
ಮುಖ ಮಾಡಿಹರು ಆಂಗ್ಲರು ||

ಸಿಹಿಜೀವಿ ವೆಂಕಟೇಶ್ವರ

ತುಮಕೂರು

ವಿಶ್ವ ಮಿತವ್ಯಯ ದಿನ

 



ವಿಶ್ವ ಮಿತ ವ್ಯಯ ದಿನ.


ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧವಾಗಿ ಜಾಗೃತಿ ಮೂಡಿಸಲು ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು, ಉಳಿತಾಯಕ್ಕೆ ಪ್ರೋತ್ಸಾಹ ನೀಡಲು ಜಗತ್ತಿನಾದ್ಯಂತ

ಪ್ರತಿವರ್ಷ ಅಕ್ಟೋಬರ್ 31 ರಂದು ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಒಂದು ದಿನ ಮೊದಲು ಅಂದರೆ, ಅಕ್ಟೋಬರ್ 30ರಂದು ಮಿತವ್ಯಯ ದಿನ ಆಚರಿಸಲಾಗುತ್ತದೆ. ಹೀಗಾಗಿ ಭಾರತದ ಇಂದು ಮತ್ತು ನಾಳೆ ಮಿತವ್ಯಯ ದಿನ ಎನ್ನಬಹುದು. ತಿಂಗಳ ಕೊನೆ ದಿನವಾಗಿರುವುದರಿಂದ ಸ್ಯಾಲರಿ ಆಗದೆ ಅನಿವಾರ್ಯವಾಗಿ ಈ ಎರಡು ದಿನ ಬಹುತೇಕರು ಮಿತವ್ಯಯ ಮಾಡಬಹುದು. ಆದರೆ, ಜೀವನಪೂರ್ತಿ ಮಿತವ್ಯಯ ರೀತಿ ಅನುಸರಿಸಿದರೆ ಸುಖವುಂಟು ಎನ್ನಬಹುದು.  

ಅದಕ್ಕೆ ಕವಿವಾಣಿ 

"ತಿಂಗಳ ಮೊದಲ ದಿನ ಸ್ಯಾಲರಿ

ತಿಂಗಳ ಕೊನೆಯಲ್ಲಿ ಸಾಲಾ ರಿ "

ಎಂದಿರುವುದು. 


ಹಣ ಉಳಿತಾಯ ಮಾಡುವುದು ಮತ್ತು ಹಣಕಾಸು ಭದ್ರತೆ ಹೆಚ್ಚಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಇದು ಕೇವಲ ವೈಯಕ್ತಿಕ ಹಂತದಲ್ಲಿ ಮಾತ್ರವಲ್ಲ ದೇಶಗಳೂ ಹಣ ಮಿತವ್ಯಯ ಮಾಡಬೇಕು ಎನ್ನುವುದನ್ನು ಈ ದಿನ ತಿಳಿಸುತ್ತದೆ. ವಿಶ್ವ ಯುದ್ಧದ ಬಳಿಕ ಇಂತಹ ಮಿತವ್ಯಯಗಳನ್ನು ಸೂಚಿಸಲಾಗಿದೆ. ರಷ್ಯಾ-ಉಕ್ರೇನ್ ಯುದ್ದ, ಇಸ್ರೇಲ್ ಹಮಾಸ್   ಸಂಘರ್ಷದ  ಈ ಸಂದರ್ಭದಲ್ಲಿಯೂ ಹಣದ ತೊಂದರೆಗಳನ್ನು ಜಗತ್ತು ಗಮನಿಸುತ್ತಿದೆ. ಅದಕ್ಕೆ ತಕ್ಕಂತೆ ನಾವೂ ಜಾಗರೂಕತೆಯಿಂದ ಹಣವನ್ನು ಖರ್ಚು ಮಾಡಿ ಉಳಿತಾಯ ಮಾಡಬೇಕಿದೆ.  


1924ರಲ್ಲಿ  ಇಂಟರ್ನ್ಯಾಷನಲ್ ಥ್ರಿಫ್ಟ್ ಕಾಂಗ್ರೆಸ್ ಮೊದಲ ಬಾರಿಗೆ ವಿಶ್ವ ಮಿತವ್ಯಯ ದಿನ ಘೋಷಿಸಿತ್ತು. ಇಟಲಿಯ ಮಿಲನ್ನಲ್ಲಿ ಈ ದಿನವನ್ನು ಮೊದಲ ಬಾರಿಗೆ ಘೋಷಿಸಲಾಯಿತು. ಇಟಲಿಯ ಪ್ರೊಫೆಸರ್ ಫಿಲಿಪ್ಪೊ ರವಿಝಾ ಅವರು ಅಕ್ಟೋಬರ್ 31 ಅನ್ನು ವಿಶ್ವ ಮಿತವ್ಯಯ ದಿನವೆಂದು ಘೋಷಿಸಿದರು. ಜನರು ಹಣ ಉಳಿತಾಯ ಮಾಡುವಂತೆ ಮತ್ತು ಬ್ಯಾಂಕ್ಗಳ ಕುರಿತು ತಮ್ಮ ಭರವಸೆ ಹೆಚ್ಚಿಸಿಕೊಳ್ಳುವಂತೆ ಮಾಡುವ ಉದ್ದೇಶ ಈ ದಿನದ್ದಾಗಿದೆ. ವಿಶ್ವ ಯುದ್ಧದ ಬಳಿಕ ಜನರಲ್ಲಿ ಹಣ ಉಳಿತಾಯದ ಅರಿವು ಹೆಚ್ಚಿಸುವ ಸಲುವಾಗಿ ಈ ದಿನಾಚರಣೆ ಆರಂಭಿಲಾಯಿತು. ಶಾಲೆಗಳಲ್ಲಿ, ಆಫೀಸ್ಗಳಲ್ಲಿ, ಅಸೋಸಿಯೇಷನ್ಗಳಲ್ಲಿ ಜನರು ಹಣ ಉಳಿತಾಯದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.


1984ರಲ್ಲಿ ಭಾರತದಲ್ಲಿ ಇಂದಿರಾ ಗಾಂಧಿಯವರ ಹತ್ಯೆ ಬಳಿಕ ವಿಶ್ವ ಮಿತವ್ಯಯ ದಿನವನ್ನು ಅಕ್ಟೋಬರ್ 31ರ ಬದಲು ಅಕ್ಟೋಬರ್ 30ಕ್ಕೆ ಆಚರಿಸಲಾಗುತ್ತಿದೆ.  


ವಿಶ್ವ ಮಿತವ್ಯಯ ದಿನದ ಪ್ರಮುಖ ಉದ್ದೇಶ  ಬ್ಯಾಂಕ್ನಲ್ಲಿ ಹಣ ಉಳಿತಾಯ ಮಾಡುವುದು. ಈ ಮೂಲಕ ದೇಶದಲ್ಲಿ ಹಣಕಾಸು ವ್ಯವಸ್ಥೆ ಸರಿಯಾಗಿ ಇರುವಂತೆ ನೋಡಿಕೊಳ್ಳುವುದು. ಹಣವನ್ನು ಮನೆಯಲ್ಲಿ ಉಳಿತಾಯ ಮಾಡಿದರೆ ಅದು ಚಲಾವಣೆಗೊಳ್ಳುವುದಿಲ್ಲ. ಬ್ಯಾಂಕ್ನಲ್ಲಿ ಉಳಿತಾಯ ಮಾಡಿದರೆ ಆ ಹಣದ ಸರಿಯಾದ ಬಳಕೆಯಾಗುತ್ತದೆ.ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳಲ್ಲಿ ನಿರಂತರವಾಗಿ ಬಡ್ಡಿಯ ಪ್ರಮಾಣ ಕಡಿಮೆಯಾಗುತ್ತಿರುವುದು ಹಾಗೂ ಬ್ಯಾಂಕುಗಳು ಅನವಶ್ಯಕ ಮತ್ತು ಹೆಚ್ಚು ಶುಲ್ಕಗಳನ್ನು ವಿಧಿಸುವ ಕ್ರಮಗಳಿಂದ ಬೇಸತ್ತು  ಜನರು ಉಳಿತಾಯದ ಕಡೆಗೆ ಮುಖ ಮಾಡದಿರುವುದು ಕಂಡು ಬಂದಿದೆ. ಇದಕ್ಕೊಂದು ಪರಿಹಾರವನ್ನು ತುರ್ತಾಗಿ ಕೈಗೊಳ್ಳಬೇಕಿದೆ. 


2023ರ  ಮಿತ ವ್ಯಯ ದಿನದ ಘೋಷಣೆ 

"ಉಳಿತಾಯದ ಮೂಲಕ ನಿಮ್ಮ ನಾಳೆಗಳನ್ನು  ಜಯಿಸಿ "

 (conquer your tomorrow by savings)  ಭವಿಷ್ಯದಲ್ಲಿ ಏನೇ ಕಷ್ಟ ಬಂದರೂ ನಮ್ಮಲ್ಲಿ ಹಣಕಾಸು ಉಳಿತಾಯವಿದ್ದರೆ ಭಯ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಕಾಯಿಲೆಗಳು, ಆರ್ಥಿಕ ಸಂಕಷ್ಟಗಳು ಉಂಟಾದರೆ ಬ್ಯಾಂಕ್ನಲ್ಲಿರುವ ನಮ್ಮ ಉಳಿತಾಯದ ಹಣವು ನೆರವಿಗೆ ಬರುತ್ತದೆ. ಹೀಗಾಗಿ, ಉಳಿತಾಯದ ಅಭ್ಯಾಸ ಇಲ್ಲದವರು ಇಂದಿನಿಂದಲೇ ಹಣ ಉಳಿತಾಯ ಆರಂಭಿಸಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

29 ಅಕ್ಟೋಬರ್ 2023

ಆತ್ಮ ವಿಶ್ವಾಸ ಮೂಡಿಸೋಣ...

 




ಆತ್ಮವಿಶ್ವಾಸ ಮೂಡಿಸೋಣ 


ಒಬ್ಬ ವಿದ್ಯಾರ್ಥಿ ಒಂದು ಟೆಸ್ಟ್ ನಲ್ಲಿ ಕಡಿಮೆ ಅಂಕ ಪಡೆದರೆ, ಒಬ್ಬ ನೌಕರ ಒಂದು ಟಾಸ್ಕ್ ನಲ್ಲಿ ಕಡಿಮೆ ದಕ್ಷತೆ ತೋರಿದರೆ ಸಾಮಾನ್ಯವಾಗಿ ಅವನು ಅಷ್ಟೇ ಎಂದು ಷರಾ ಬರೆದು  ಅವನ ಕೆಳಮಟ್ಟದ  ಪರ್ಪಾರ್ಮೆನ್ಸ್  ಮಾಡುವವನೆಂದು ಷರಾ ಬರೆದು ಅವನ ಹಣೆಗೆ ಕಟ್ಟಿಬಿಡುತ್ತೇವೆ.

ಎಲ್ಲಾ ವ್ಯಕ್ತಿಗಳು ಎಲ್ಲಾ ಕಾಲದಲ್ಲೂ ಒಂದೇ ರೀತಿಯ ಕೆಲಸ ಮಾಡುತ್ತಾರೆ ಎಂದರೆ ಮೂರ್ಖತನವಾದೀತು.

ಸಮಯ, ಸಂದರ್ಭ, ಒತ್ತಡ, ಪರಿಸರ, ಪ್ರೇರಣೆ ಹೀಗೆ ನಾನಾ ಅಂಶಗಳು ನಮ್ಮ ಕಾರ್ಯ ವೈಖರಿಯನ್ನು ನಿರ್ಧಾರ ಮಾಡುತ್ತವೆ.


ವರ್ಷಗಟ್ಟಲೆ ಶ್ರಮಿಸಿ ಬಲ್ಬ್ ಕಂಡುಹಿಡಿದಿದ್ದ ಥಾಮಸ್ ಅಲ್ವಾ ಎಡಿಸನ್. ಅದನ್ನು ಹೋಲ್ಡರ್ ಗೆ ಸಿಕ್ಕಿಸಬೇಕಿತ್ತು. ಹೋಲ್ಡರ್ ಇದ್ದುದು ಮಹಡಿಯ ಮೇಲೆ. "ಹೋಗಿ ಅದಕ್ಕೆ ಸಿಕ್ಕಿಸಿ ಬಾ" ಎಂದು ತನ್ನ ಸಹಾಯಕನೊಬ್ಬನಿಗೆ ಹೇಳಿದ ಎಡಿಸನ್. ಹುಡುಗ ಎಷ್ಟು ನರ್ವಸ್ ಆಗಿದ್ದನೆಂದರೆ ಮೆಟ್ಟಿಲು ಹತ್ತುವುದರೊಳಗಾಗಿ ಅವನ ಕೈ ನಡುಗಿ ಆಗಷ್ಟೇ ಕಷ್ಟಪಟ್ಟು ತಯಾರಿಸಿದ ಬಲ್ಬ್ ಬಿದ್ದು ಒಡೆದುಹೋಯಿತು.

ಎಡಿಸನ್ ಸಿಟ್ಟಾಗಲಿಲ್ಲ. ಮತ್ತೊಂದು ಬಲ್ಬ್ ತಯಾರಿಸಿದ. ಅದಕ್ಕೆ ಪೂರ್ತಿ ಇಪ್ಪತ್ನಾಲ್ಕು ತಾಸು ಹಿಡಿದವು. ಅವನ ಟೀಮಿನ ಅಷ್ಟೂ ಸಹಾಯಕರು ಅದಕ್ಕಾಗಿ ದುಡಿದಿದ್ದರು. ಎಲ್ಲಾ ಆದ ಮೇಲೆ ಮತ್ತೆ ಅದೇ ಹುಡುಗನನ್ನು ಕರೆದು "ಈ ಸಲವೂ ನೀನೇ ಸಿಕ್ಕಿಸಿ ಬಾ" ಎಂದ. ಉಳಿದ ಸಹಾಯಕರು ಇರಸು ಮುರಿಸಿಗೆ ಒಳಗಾದರು. ಈ ಹುಡುಗ ಮತ್ತೆ ಬಲ್ಬ್ ಒಡೆದರೆ, ಅದನ್ನು ತಯಾರಿಸಲು ಮತ್ತೆ ಇಪ್ಪತ್ನಾಲ್ಕು ಗಂಟೆ ಬೇಕು. ಎಡಿಸನ್ ಯಾಕಿಂತ ರಿಸ್ಕು ತೆಗೆದುಕೊಳ್ಳುತ್ತಿದ್ದಾನೆ?

ಅದಕ್ಕೆ ಎಡಿಸನ್ ಹೇಳಿದ " ನೋಡ್ರೋ, ಅಂಥ ಸಾವಿರ ಬಲ್ಬ್ ಗಳನ್ನು ಸಾವಿರ ದಿನ ಕೆಲಸ ಮಾಡಿ ತಯಾರಿಸಿ ಬಿಡಬಹುದು. ಆದರೆ ಆ ಹುಡುಗನ ಆತ್ಮವಿಶ್ವಾಸ ನಾಶವಾಗಿ ಬಿಟ್ಟರೆ ಅದನ್ನು ಮತ್ತೆ ತುಂಬಿ ಕೊಡುವುದು ಸುಲಭವಲ್ಲ!"

ನಾವೂ ಕೂಡಾ ದಿನನಿತ್ಯದ ಜೀವನದಲ್ಲಿ ಎಡಿಸನ್ ಶಿಷ್ಯ ನಂತಹ ಸಾವಿರಾರು ಜನರನ್ನು ನೋಡುತ್ತೇವೆ.ತಪ್ಪೆಸಗಿದರೆ ಮುಗಿಯಿತು ಆಳಿಗೊಂದು ಕಲ್ಲು ಬೀಸಿ ಸಹಸ್ರ ನಾಮಾರ್ಚನೆ ಮಾಡಿ ಮುಂದೆ ಆ ವ್ಯಕ್ತಿ ಆ ಕೆಲಸಕ್ಕೆ ಕೈ ಹಾಕದಂತೆ ಮಾಡಿಬಿಡುತ್ತೇವೆ. ಯಾರಿಗೆ ಆಗಲಿ ಯಶಸ್ಸಿನಲ್ಲಿ ಅವರ ಜೊತೆಗಿರದಿದ್ದರೂ  ತಪ್ಪು ಮಾಡಿದಾಗ ಮತ್ತು ಜೀವನದಲ್ಲಿ ಸೋತಾಗ ಅವರ ಬೆನ್ನಿಗೆ ನಿಲ್ಲೋಣ ನಾಲ್ಕು ಆತ್ಮವಿಶ್ವಾಸವನ್ನು ವೃದ್ಧಿಸುವ ಮಾತುಗಳನ್ನಾಡೋಣ ಯಾರಿಗೆ ಗೊತ್ತು ಆ ವ್ಯಕ್ತಿ ಮುಂದೆ ಅದ್ಭುತವಾದ ಸಾಧನೆ ಮಾಡಬಹುದು! 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925429