24 ಅಕ್ಟೋಬರ್ 2023

ಸಾವಿರ ನೆನಪುಗಳು...

 



ಸಾವಿರ ನೆನಪುಗಳು...


ಕೆಲವು ನೆನಪುಗಳೇ ಹಾಗೆ ಪದೇ ಪದೇ ನಮ್ಮನ್ನು ಕಾಡುತ್ತವೆ. ಪುಳಕಗೊಳಿಸುತ್ತವೆ. ಪುನಃ ಪುನಃ ಬಂದು ಮನಕಾನಂದ ನೀಡುತ್ತವೆ. ಮೊನ್ನೆ ಯಾರೋ ಗೆಳೆಯರು ಅವರ ಬಾಲ್ಯ ಮತ್ತು ಯೌವನದ ಹೈಲೈಟ್ ಇರುವ ಮುನ್ನಾಯಿಸಿದ ಸಂದೇಶ ಕಳಿಸಿದ್ದರು. ಅದೇ ಸಮಯಕ್ಕೆ ಮಾರ್ನಾಮಿ ಹಬ್ಬಕ್ಕೆ ನಮ್ಮ ಊರಿಗೆ ಹೋಗಿದ್ದೆ. ಆಗ ನನ್ನ ಬಾಲ್ಯದ ನೆನಪುಗಳು ಒತ್ತರಿಸಿ ಬಂದವು.ಈ ಲೇಖನ ಓದಿ ನಿಮ್ಮ ಬಾಲ್ಯ ನೆನಪಾಗಬಹುದು.


ಆಗ ನಮ್ಮ ಊರ ಕೇರಿಯಲ್ಲಿ ಜುಂಜಪ್ಪಯ್ಯನವರ  ಮನೆಯಲ್ಲಿ ಮಾತ್ರ ರೇಡಿಯೋ ಇತ್ತು ಮಧ್ಯಾಹ್ನ ಒಂದೂವರೆಗೆ "ನಿಮ್ಮ ಮೆಚ್ಚಿನ ಚಿತ್ರಗೀತೆ "ಕೇಳಲು ನಾವು ಹಾಜರಾಗುತ್ತಿದ್ದೆವು.

 ಒಂದು  ಸಲ  ರೇಡಿಯೋನಲ್ಲಿ ಕೇಳಿದರೆ ಸಾಕು ಸಿನಿಮಾ ಹಾಡು  ಬಾಯಿಪಾಠ ಆಗ್ತಿತ್ತು. ಗೌರಿ ಮೊಗವು ಚಂದಿರನಂತೆ.... ನನ್ನ ನಿನ್ನ ಆಸೆ ನನ್ನ ಪ್ರೇಮು ಭಾಷೆ... ಹಸಿರು ಗಾಜಿನ ಬಳೆಗಳೆ... ಮುಂತಾದ ಹಾಡುಗಳು ಈಗಲೂ ನೆನಪಾಗುತ್ತವೆ.

ಪರ ಊರುಗಳಿಗೆ ಪಯಣಿಸಲು ಬಸ್ ಗಳಲ್ಲಿ ಕುಳಿತಿದ್ದರೆ ನಿಂಬಿ‌ಹುಳಿ ಪೇಪರ್ ಮೆಂಟ್ , ಬಿಸ್ಕೆಟ್ ಮಾರಲು ಬಂದು ನಮಗೆ ಮಾರಿ ಹೋಗುತ್ತಿದ್ದರು.

ಸೈಕಲ್ ಎಲ್ಲರ ಮನೆಯಲ್ಲಿ ಇರಲಿಲ್ಲ .ನಮ್ಮ ಬೀದಿಯ ಬಸವರಾಜನ ಮನೆಯಲ್ಲಿ ಮಾತ್ರ ಸೈಕಲ್ ಇತ್ತು ಅವನನ್ನು ಕಾಡಿ ಬೇಡಿ ಒಂದು ರೌಂಡ್ ಸೈಕಲ್ ಪಡೆದು ಓಡಿಸುತ್ತಿದ್ದೆ.


ಆಗ ‌ನಮ್ಮೂರಲಿ ಯಾರ ಮನೆಯಲ್ಲಿ ಮದುವೆಯಾದರೂ ನಮ್ಮ ಮದುವೆಯಂತೆ ಸಂಭ್ರಮಿಸುತ್ತಿದ್ದೆವು.ಮದುವೆ ಅಡುಗೆಗೆ ಕಾಡಿ‌ನಿಂದ ಎತ್ತಿನಗಾಡಿಯಲ್ಲಿ ಸೌದೆ ತರುವುದು, ಅಕ್ಕಿ, ದವಸ ಹಸನು ಮಾಡುವುದು, ಹಪ್ಪಳ ಸಂಡಿಗೆ ಮಾಡುವುದು ಚಪ್ಪರ ಹಾಕುವುದು ಊಟ ಬಡಿಸುವುದು ಮುಂತಾದ ಕೆಲಸಗಳನ್ನು ಹಂಚಿಕೊಂಡು ಮಾಡಿ ಸಂತಸ ಪಡುತ್ತಿದ್ದೆವು.


ಆಗ ತಾನೆ ಬಂದ ಟೇಪ್ ರೆಕಾರ್ಡರ್ ನ್ನು ನಮ್ಮ ದೊಡ್ಡಮ್ಮನ ಮಗ ಹೊರಕೇರಣ್ಣ ತಂದಿದ್ದರು. ಕರೆಂಟ್ ಇಲ್ಲದಿದ್ದರೂ ಸೆಲ್ ಹಾಕಿಕೊಂಡು ಒಂದಾಗಿ ಬಾಳು ಚಿತ್ರದ ಬಳೆಗಳು ಹಾಡುತಿವೆ...ಘಲ್ ಘಲ್ ಎನ್ನುತಿವೆ...ಎಂಬ ಹಾಡನ್ನು ತಿರುಗಿ ತಿರುಗಿಸಿ ಕೇಳಿ ಪುಳಕಗೊಂಡಿದ್ದೆ.


ಸಿನಿಮಾ ನೋಡಲು ಹೊರಕೇದೇಪುರ ಟೆಂಟ್ ಗೆ ನಮ್ಮೂರಿಂದ ಏಳು ಕಿಲೋಮೀಟರ್  ನಮ್ಮ ಗೆಳೆಯರ ಜೊತೆಯಲ್ಲಿ ನಡೆದುಕೊಂಡೇ ಹೋಗುತ್ತಿದ್ದೆವು. ಟೆಂಟ್ ನಲ್ಲಿ ಬೆಂಚ್ ಮತ್ತು ನೆಲದ ಮೇಲೆ ಕುಳಿತು ಸಿನಿಮಾ ನೋಡುವ ಅವಕಾಶದಲ್ಲಿ ನಾವು ನೆಲವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಪಸ್ಟ್ ಶೋ    ಸಿನಿಮಾ ಬಿಟ್ಟ ಮೇಲೆ 50 ಪೈಸೆ ಕೊಟ್ಟು ಕಾರ ಮಂಡಕ್ಕಿ ಮೆಣಸಿನ ಕಾಯಿ ಬೊಂಡ ತಿಂದು ಕತ್ತಲಲ್ಲಿ ಮತ್ತೆ ಏಳು ಕಿಲೋಮೀಟರ್ ನಡೆದೇ ಮನೆ ಸೇರುತ್ತಿದ್ದೆವು.

ಇನ್ನೂ ಇಂತಹ ಸಾವಿರ ನೆನಪುಗಳಿವೆ ಮುಂದೆ ಹಂಚಿಕೊಂಡು ಸಂತಸಪಡುವೆ.ನಿಮಗೂ ಇಂತಹ ನೆನಪುಗಳು ಮರುಕಳಿಸುತ್ತಿರಬಹುದಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ಚೌಡಗೊಂಡನಹಳ್ಳಿ 

9900925529 

23 ಅಕ್ಟೋಬರ್ 2023

ಕ್ರಿಕೆಟ್ ಹನಿಗಳು...

 




ಕ್ರಿಕೆಟ್ ಹನಿಗಳು ...



ಕರಾರುವಾಕ್ ಚೆಂಡೆಸತದಿಂದ

ನ್ಯೂಜಿಲೆಂಡ್ ದಾಂಡಿಗರ 

ಬೆವರಿಳಿಸಿದರು ನಮ್ಮ ಶಮಿ|

ಒಂದು ದಿನ ಮೊದಲೇ ಭಾರತೀಯರು ಹೆಮ್ಮೆಯಿಂದ

ಅಚರಿಸಿದೆವು ವಿಜಯದಶಮಿ ||



ಐದು ಓಟಗಳ ಕೊರತೆಯಿಂದ 

ವಿರಾಟ್ ಗೆ   ದೇವರ ದಾಖಲೆ

ಮುರಿಯುವ ಅವಕಾಶ ಮಿಸ್ಸಾಯ್ತು|

ಬೇಸರವಿಲ್ಲ.ದಾಖಲೆಯಾಗಲಿದೆ.

ಈಗ ಭಾರತವು ಅಂಕ ಪಟ್ಟಿಯಲ್ಲಿ

ಮೊದಲ ಸ್ಥಾನ ಪಡೆದಾಯ್ತು|| 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

22 ಅಕ್ಟೋಬರ್ 2023

ಬಿಲ್ಗವನ .



*ಅಂಬೆ*


(ಬಿಲ್ಗವನ)


ಓಂ

ದೇವಿ

ನಮನ

ನಿನ್ನಡಿಗೆ

ಹರಸೆಮ್ಮನು

ಕರುಣದಿಂದಲಿ 

ಭಜಿಸುವೆವು ನಿನ್ನ

ಸಹಸ್ರ ನಾಮದಿಂದಲಿ 

ಮನ್ನಿಸೆಮ್ಮ ತಪ್ಪನು 

ಸದ್ಬುದ್ದಿಯ ನೀಡು

ಒಳಿತು ಮಾಡಿಸು

ಸ್ವಾರ್ಥ ಬಿಡಿಸು

ಕೈಹಿಡಿದು

ಕಾಪಾಡು

ಅಂಬೆ 

ನೀ 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

19 ಅಕ್ಟೋಬರ್ 2023

ಅಂಡಮಾನ್ ನ ವೀರ್ ಸಾವರ್ಕರ್ ವಿಮಾನ ನಿಲ್ದಾಣ....

 


ಭಾಗ 7

ವೀರ ಸಾವರ್ಕರ್ ವಿಮಾನ ನಿಲ್ದಾಣ...

ಅಂದು ಬೆಳಿಗ್ಗೆ ನನ್ನ ಜೀವನದ ಎರಡನೇ ವಿಮಾನ ಯಾನಕ್ಕೆ ಸಿದ್ದತೆ ಮಾಡಿಕೊಂಡು ಬೆಳಿಗ್ಗೆ ಏಳಕ್ಕೆ ನಿಲ್ದಾಣ ಪ್ರವೇಶಿಸಿ , ಬೋರ್ಡಿಂಗ್ ಪಾಸ್ ತೆಗೆದುಕೊಂಡು ನಮ್ಮ ಲಗೇಜ್ ಗಳನ್ನು ಲಗೇಜ್ ಕೌಂಟರ್ ನಲ್ಲಿ ನೀಡಿ   ಚೆಕ್ ಇನ್ ಆಗಿ ಇನ್ನೂ ಸಮಯ ಇದ್ದದ್ದರಿಂದ ನಿಲ್ದಾಣದ ಪುಸ್ತಕದ ಅಂಗಡಿ, ಕಾಫಿ ಶಾಪ್, ಇತ್ಯಾದಿ ನೋಡಲು ಒಂದು ರೌಂಡ್ ಹಾಕಿದೆ.
ಚೆನ್ನೈ ನ ಅಣ್ಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8 .10 ಕ್ಕೆ ಹೊರಟ ನಾವು ವಿಮಾನದಲ್ಲಿ ಎರ್ ಇಂಡಿಯಾ ದವರು ನೀಡಿದ ಬೆಳಗಿನ ಉಪಹಾರ  ಸೇವಿಸಿದೆವು. ಉಪ್ಪಿಟ್ಟು ,ಇಡ್ಲಿ,  ಚಟ್ನಿ, ಸಾಂಬಾರ್, ಬನ್, ಬೆಣ್ಣೆ ಎಲ್ಲಾ ರುಚಿಕರವಾಗಿತ್ತು. ವಿಮಾನದಲ್ಲಿ ಅಂಡಮಾನ್ ನ ಟ್ರಾವೆಲ್ ಏಜೆಂಟ್ ಆದ ತಿರುಪತಿ ರವರ ಪರಿಚಯವಾಯಿತು. ಇಂಗ್ಲಿಷ್ ನಲ್ಲಿ ನಮ್ಮ ಸಂಭಾಷಣೆ ಸಾಗಿತ್ತು, ಅವರ ವೃತ್ತಿ, ಪ್ರವಾಸ, ಅಂಡಮಾನ್ ವಿಶೇಷತೆ ,ಕೃಷಿ ರಾಷ್ಟ್ರದ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ಮುಂದುವರೆಯಿತು. ಅಂಡಮಾನ್ ನಲ್ಲಿ ಸಹಾಯ ಬೇಕಾದರೆ ಕರೆ ಮಾಡಲು ಪೋನ್ ನಂಬರ್ ಸಹ ನೀಡಿದರು.
2 ಗಂಟೆಗಳ ವಿಮಾನ ಯಾನದ ಬಳಿಕ ವಿಮಾನ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ವಿಮಾನ ಇಳಿಯುವಾಗ 65 ವರ್ಷಗಳ ನನ್ನ ಸಹಯಾನಿ "ಎಲ್ಲಾ ಸರಿ ಈ ಏರ್ ಇಂಡಿಯಾ ದವರು ಗಗನ ಸಖಿ ಯವರ ಬದಲಾಗಿ ಗಗನ ಸಖರನ್ನು ಕಳಿಸಿದ್ದು ಯಾಕೋ ನನಗೆ ಇಷ್ಟ ಆಗಲಿಲ್ಲ " ಎಂದು ಗೊನಗಿದರು!
ವಿಮಾನ ಇಳಿದು ಟರ್ಮಿನಲ್ ತಲುಪುವಾಗ ಆ ವಿಮಾನ ನಿಲ್ದಾಣದ ಬಗ್ಗೆ ತಿರುಪತಿ ರವರು ಮಾಹಿತಿ ನೀಡಿದರು.

 ಪೋರ್ಟ್ ಬ್ಲೇರ್ನ ದಕ್ಷಿಣಕ್ಕೆ 2 ಕಿಮೀ  ದೂರದಲ್ಲಿರುವ ನಿಲ್ದಾಣವೇ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲು ಇದು ದೇಶೀಯ ವಿಮಾನ ನಿಲ್ದಾಣವಾಗಿದ್ದು   "ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣ" ಎಂದು ಕರೆಯಲ್ಪಡುತ್ತಿತ್ತು. ಇದನ್ನು 2002 ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 11 ವರ್ಷಗಳ ಕಾಲ ನಗರದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಲಾಗಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡಲಾಯಿತು.  

ಹಳೆಯ ಟರ್ಮಿನಲ್ 400 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಇದು 6,100 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಏರೋಬ್ರಿಡ್ಜ್‌ಗಳಿಲ್ಲದ ಎರಡು ಗೇಟ್‌ಗಳನ್ನು ಹೊಂದಿದೆ . ಟರ್ಮಿನಲ್‌ನಿಂದ ಏಪ್ರನ್‌ನಲ್ಲಿ ನಿಲುಗಡೆ ಮಾಡಿರುವ ವಿಮಾನಕ್ಕೆ ಸಾರಿಗೆಯನ್ನು ಒದಗಿಸಲು ಬಸ್‌ಗಳನ್ನು ಬಳಸಲಾಗುತ್ತದೆ.
ಎಡಭಾಗದಲ್ಲಿ ಹಳೆಯ ಟರ್ಮಿನಲ್ ಜೊತೆಗೆ ಟರ್ಮಿನಲ್ 2 ನಿರ್ಮಾಣ ಮಾಡಲಾಗಿದೆ.

ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ 40,837 ಚ.ಮೀ.  ವ್ಯಾಪ್ತಿಯಲ್ಲಿ   707 ಕೋಟಿ   ರೂಪಾಯಿ ವೆಚ್ಚದಲ್ಲಿ ಪ್ರಯಾಣಿಕರ ಟರ್ಮಿನಲ್ 2019 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿತು. ಇದು ಮೂರು ಮಹಡಿಗಳನ್ನು ಹೊಂದಿದೆ-ಒಂದು ಆಗಮನಕ್ಕೆ, ಎರಡನೆಯದು ನಿರ್ಗಮನಕ್ಕೆ ಮತ್ತು ಮೂರನೆಯದು ಕಾಯಲು. ಟರ್ಮಿನಲ್ ಒಳಗೆ, 28 ಚೆಕ್-ಇನ್ ಕೌಂಟರ್‌ಗಳು, ನಾಲ್ಕು ಕನ್ವೇಯರ್ ಬೆಲ್ಟ್‌ಗಳು ಮತ್ತು ಮೂರು ಏರೋಬ್ರಿಡ್ಜ್‌ಗಳಿವೆ. ಇದು ಪೀಕ್ ಅವರ್‌ಗಳಲ್ಲಿ 1,200  ಪ್ರಯಾಣಿಕರನ್ನು ,600 ದೇಶೀಯ ಮತ್ತು 600 ಅಂತರರಾಷ್ಟ್ರೀಯ  ನಿಭಾಯಿಸಲು ಸಾಧ್ಯವಾಗುತ್ತದೆ ಮತ್ತು ವರ್ಷಕ್ಕೆ 5 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.  ಇದು ಜೂನ್ 2023 ರಲ್ಲಿ ಪೂರ್ಣಗೊಂಡಿತು ಮತ್ತು 18 ಜುಲೈ 2023 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.
ಉದ್ಘಾಟನೆಯಾದ ಮೂರು ತಿಂಗಳ ಬಳಿಕ ನೋಡಿದ ಈ ನಿಲ್ದಾಣದ ವಿನ್ಯಾಸ ಮತ್ತು ನೋಟ ನಯನ ಮನೋಹರವಾಗಿದೆ. ಪೋಟೋ ತೆಗೆದುಕೊಳ್ಳಲು ಮನಸ್ಸಾದರೂ ಭದ್ರತಾ ಕಾರಣದಿಂದ ಅಧಿಕಾರಿಗಳ ಕಟ್ಟು ನಿಟ್ಟಿನ ನಿರಾಕರಣೆಯಿಂದ ಅವರ ಅಪ್ಪಣೆ ಪಡೆದು ಕೆಲ ಪೋಟೋ ತೆಗೆದುಕೊಂಡು ಹೊರಬಂದ ನಮ್ಮನ್ನು ಸಾವರ್ಕರ್ ರವರ ಕಂಚಿನ ಪುತ್ಥಳಿ ಸ್ವಾಗತಿಸಿತು ಅದರ ಮುಂದೆ ನಿಂತು ಪೋಟೋ ಕ್ಲಕ್ಕಿಸಿಕೊಂಡ ನಮ್ಮನ್ನು ನಮ್ಮ ಟ್ರಾವೆಲ್ ಏಜೆನ್ಸಿಯ ಪ್ರಕಾಶ್ ರವರು ಸ್ವಾಗತಿಸಿ ಎನ್ ಕೆ ಲಾಡ್ಜ್ ಗೆ ಕರೆದುಕೊಂಡುಹೋದರು...

ಮುಂದುವರೆಯುತ್ತದೆ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529





18 ಅಕ್ಟೋಬರ್ 2023

ಹಾಯ್ಕುಗಳು...

 



ಗತಕಾಲದಿ

ಚಾಪಶರ ಕಲಿಕೆ

ವೀರಲಕ್ಷಣ.




ದೇಶಭಕ್ತರ 

ಚಾಗವ ನೆನೆಯುತ 

ಗೌರವಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು