08 ಅಕ್ಟೋಬರ್ 2023

ಸೆಲ್ಯುಲಾರ್ ಜೈಲ್...ಅಂಡಮಾನ್..

 




ಪ್ರವಾಸ ೪.
ಅಂಡಮಾನ್ ನ  ಸೆಲ್ಯುಲಾರ್ ಜೈಲ್ 

"ಇದು ಬರೀ ಜೈಲಲ್ಲ ಸಾವಿರಾರು ದೇಶಭಕ್ತ ಆತ್ಮಗಳಿದ್ದ ಪುಣ್ಯ ತಾಣ. ಇದೊಂದು ದೇವಾಲಯಕ್ಕೂ ಮಿಗಿಲಾದ ಸ್ಥಳ.ಇದರ ಬಗ್ಗೆ ನಿಮಗೆ ಹೇಳುತ್ತಿರುವ ನಾನೇ ಧನ್ಯ. ಇಂತಹ ಸ್ಮಾರಕ ನೋಡಲು ಬಂದ ನೀವುಗಳೂ ಸಹ ಪುಣ್ಯವಂತರು" ಎಂದು ಆಂಗ್ಲ ಭಾಷೆಯಲ್ಲಿ ಗೈಡ್ ಹೇಳುವಾಗ ನಮ್ಮ ಸಹಯಾತ್ರಿಕರು ಭಾವುಕರಾದರು...
ನಿಜಕ್ಕೂ ಇಂತಹ ಸ್ಮಾರಕ ನೋಡಲು ಬಂದ ನಾವೇ  ಧನ್ಯರು ಎಂದರು.ನನ್ನ ಮನಸ್ಸೂ ಅದನ್ನೇ ಹೇಳಿತು.ಬ್ರಿಟಿಷರ ಕ್ರೌರ್ಯ, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿದ್ದ ಶಿಕ್ಷೆಗಳನ್ನು ಕೇಳಿದರೇನೇ ಭಯವಾಗುತ್ತದೆ. ನಮ್ಮ ದೇಶಭಕ್ತರು ಅದೆಷ್ಟು ಕ್ರೂರವಾದ  ಹಿಂಸೆ ಅನುಭವಿಸಿ ಜೀವ ತ್ಯಜಿಸಿರಬಹುದು ಎಂದು ಬೇಸರವಾಯಿತು.

ಭಾರತದಲ್ಲಿನ ವಸಾಹತುಶಾಹಿ ಆಡಳಿತದ ಕರಾಳ ಕುರುಹುವಾಗಿ ಈ ಸೆಲ್ಯುಲಾರ್ ಜೈಲು   ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 
  ಏಳು ದಿನಗಳ   ದ್ವೀಪ ಪ್ರವಾಸಕ್ಕೆ ಹೊರಟ ನಾವು ಮೊದಲು ನೋಡಿದ್ದು ಅಂಡಮಾನದ ಸೆಲ್ಯುಲಾರ್ ಜೈಲನ್ನು.ನಮಗೆ ನಿಗದಿತ ಗೈಡ್ ಈ ರಾಷ್ಟ್ರೀಯ ಸ್ಮಾರಕದ ಬಗ್ಗೆ ಮಾಹಿತಿ ನೀಡುತ್ತಾ ಸಾಗಿದರು.ನಾವು ಕೇಳುತ್ತಾ ಅಲ್ಲಲ್ಲಿ ನಿಂತು ಪೋಟೋಗಳ ತೆಗೆಸಿಕೊಳ್ಳುತ್ತಾ ನಡೆದೆವು.
ಈ ಸೆರೆಮನೆ ಸಂಕೀರ್ಣವನ್ನು 1896 ಮತ್ತು 1906 ರ ಮಧ್ಯ ನಿರ್ಮಿಸಲಾಗಿದೆ.ಬ್ರಿಟಿಷರು   ಅಂಡಮಾನ್ ನಿಕೋಬಾರ್   ದ್ವೀಪಗಳ ಜಾಗಯನ್ನು ಭಾರತದ ಪ್ರಥಮ ಸ್ವಾತಂತ್ರ್ಯದ  ನಂತರ ಸೆರೆಮನೆಯಾಗಿ ಉಪಯೋಗಿಸಲಾರಂಭಿಸಿದರು.
ಬ್ರಿಟಿಶರು  ಸಾವಿರಾರು ಜನರನ್ನು ಸಾವಿನ ಬಾಯಿಗೆ ನೂಕಿದರು‌.ಕೆಲವರನ್ನು ಸಿಕ್ಕ ಸಿಕ್ಕಲ್ಲಿ ಮರಗಳಿಗೆ ನೇಣು ಹಾಕಿದರು. ತೋಪುಗಳ ಬಾಯಿಗೆ ಕಟ್ಟಿ ಹಲವರನ್ನು ಉಡಾಯಿಸಿದರು. ಇನ್ನೂ ಕೆಲವರು ಈ  ದ್ವೀಪದಲ್ಲಿರುವ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವರು ತಮ್ಮ ಕುಟುಂಬದಿಂದ ದೂರಾಗಿ ದೇಶದಿಂದಲೂ ದೂರಾಗಿರುತ್ತಿದ್ದರು. ಸುಮಾರು 200 ದಂಗೆಕೋರರನ್ನು ಜೈಲರ್ ಡೇವಿಡ್ ಬ್ಯಾರಿ ಮತ್ತು ಜೇಮ್ಸ್ ಪ್ಯಾಟಿಸನ್ ವಾಕರ್ ಇವರ ವಶಕ್ಕೆ ನೀಡಿ ಇವರನ್ನೆಲ್ಲಾ ದ್ವೀಪಗಳಿಗೆ ಸಾಗಿಸಲಾಗಿತ್ತು. 
ಅವರನ್ನು ಪ್ರಮುಖ ಕೇಂದ್ರಸ್ಥಾನದಿಂದ ದೂರವಿಡುವುದಲ್ಲದೇ ಅವರನ್ನು ಸರಪಳಿಯಿಂದ ಬಂಧಿಸಿ ಕಟ್ಟಡ ರಚನೆ,ಸೆರೆಮನೆಗಳ ನಿರ್ಮಾಣ ಮತ್ತು ಬಂದರು ಸ್ಥಳದ ಕಾವಲಿಗೆ ಬಳಸಲಾಗುತ್ತಿತ್ತು. ಈ ಕಾರ್ಯಾಚರಣೆ ಅವಧಿಯಲ್ಲಿ ಹಲವರು ಮೃತಪಟ್ಟರು. ಎಂದು ನಮ್ಮ ಗೈಡ್ ಹೇಳುವಾಗ ನಮ್ಮ ಮನಸ್ಸು ಭಾರವಾಯಿತು.ಗೈಡ್ ಮುಂದುವರೆಸಿದನು.
 ಇದರ ಮೂಲ ಕಟ್ಟಡವು ಕಡುಗೆಂಪಿನ ಇಟ್ಟಿಗೆಯದ್ದಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ಬರ್ಮಾದಿಂದ ತರಲಾಗಿತ್ತು.
ಕಟ್ಟಡಕ್ಕೆ ಏಳು ರೆಕ್ಕೆಗಳಂತೆ ಕಮಾನುಗಳಿವೆ.ಮಧ್ಯದ ಗೋಪುರವು ಅದರ ಸಮತೋಲನ ಮಾಡಿದಂತೆ ಕಾಣಿಸುತ್ತದೆ.ಅಲ್ಲಿನ ಗೃಹರಕ್ಷಕ ದಳದವರು ಕೈದಿಗಳ ಮೇಲೆ ಸದಾ ಕಣ್ಣಿಡಲೂ ಸಹ ಇದು ನೆರವಾಗುತ್ತಿತ್ತು. ಈ ರೆಕ್ಕೆಗಳ ಆಕಾರದ ಅಂಚುಗಳು ಗೋಪುರದ ಮೇಲ್ಭಾಗದಲ್ಲಿ ಸಾಲಿನಂತೆ ಬೈಸಿಕಲ್ ಚಕ್ರಕ್ಕಿರುವ ಸ್ಪೋಕ್ಸ್ ನಂತೆ  ಕಾಣುತ್ತಿದ್ದವು. ದೊಡ್ಡದಾದ ಗಂಟೆಯೊಂದನ್ನು ಗೋಪುರದಲ್ಲಿಡಲಾಗಿತ್ತು,ಯಾವಾಗಲಾದರೂ ತುರ್ತು ಸಂದರ್ಭ ಬಂದಾಗ ಸಂಭಂಧಿಸಿದವರನ್ನು ಎಚ್ಚರಿಸಲು ಅನುಕೂಲವಾಗುತ್ತಿತ್ತು.
ಪ್ರತಿ ರೆಕ್ಕೆಯ ಅಂಚಿನಲ್ಲಿ ಪೂರ್ಣಗೊಂಡ ಭಾಗದಲ್ಲಿ ಮೂರು ಮಹಡಿಯ ಅಂಕಣಗಳಿದ್ದವು. ಒಟ್ಟು 698 ಸೆಲ್ಯುಲಾರ್ ಜೈಲ್ ಕೋಣೆಗಳ ರಚನೆಯಾಗಿದ್ದವು.  ಪ್ರತಿ ಸೆಲ್  15x8 ಅಡಿ ಉದ್ದದ ಈ ಕೊಠಡಿಗಳಿಗೆ ಮೂರು ಮೀಟರ್ ಎತ್ತರದಲ್ಲಿ ಗಾಳಿ ಬೆಳಕಿಗೊಂದು ಕಿಂಡಿಯಿತ್ತು. ಎಂದು ವಿವರಿಸುವಾಗ ನಾವೂ ಆ ಕೋಣೆಯ ಒಳ ಹೊಕ್ಕು ವೀಕ್ಷಿಸಿದೆವು.
 ಯಾವುದೇ ಕೈದಿಯು ಇನ್ನೊಬ್ಬನೊಂದಿಗೆ ಯಾವುದೇ ರೀತಿಯ ಸಂವಹನ ಅಥವಾ ಸಂಪರ್ಕ ಮಾಡಬಾರದೆಂಬ ಉದ್ದೇಶದಿಂದ ಇದನ್ನು ಸೆಲ್  ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಅವರೆಲ್ಲರನ್ನೂ ಒಂಟಿಯಾಗಿ ಏಕಾಂಗಿತನದಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು.

ಏಕಾಂಗಿತನದ ಬಂಧನದಿಂದ ಸ್ವಾತಂತ್ರ್ಯ ಹೋರಾಟಗಾರರು  ಮತ್ತು ರಾಜಕೀಯ ನಾಯಕರ ನಡುವೆ ಸಂಪರ್ಕ ಬೆಳೆಯಬಾರದೆಂದು ಈ ವ್ಯವಸ್ಥೆ ಮಾಡಲಾಗಿತ್ತು. ಅಂಡಮಾ ನ್ ದ್ವೀಪವು ಬ್ರಿಟಿಷ್ ಸರ್ಕಾರದ ಉದ್ದೇಶ ಸಾರ್ಥಕಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಿತ್ತು.
ಸೆಲ್ಯುಲರ್ ಜೈಲಿನಲ್ಲಿದ್ದ ಹೆಸರಾಂತ ಹೋರಾಟಗಾರರೆಂದರೆ ಡಾ. ದಿವಾನ್ ಸಿಂಗ್ ಕಾಲೆಪಾನಿ,ಮೌಲಾನಾ ಫಜ್ಲ್-ಇ-ಹಕ್ ಖೈರಾಬಾದಿ,ಯೋಗೇಂದ್ರ ಶುಕ್ಲಾ, ಬಟುಕೇಶ್ವರ್ ದತ್ತ್,ಮೌಲಾನಾ ಅಹ್ಮದುಲ್ಲಾ, ಮೊವ್ಲಿ ಅಬ್ದುಲ್ ರಹೀಮ್ ಸಾದಿಕ್ ಪುರಿ,ಬಾಬುರಾವ್ ಸಾವರ್ಕರ್,ವಿನಾಯಕ ದಾಮೋದರ ಸಾವರ್ಕರ್, ಭಾಯಿ ಪರ್ಮಾನಂದ,ವಿ.ಒ.ಚಿದಂಬರಮ್ ಪಿಳ್ಳೈ,ಸುಬ್ರಮಣ್ಯಂ ಶಿವ,ಸೋಹನ್ ಸಿಂಗ್,ವಾಮನ್ ರಾವ್ ಜೋಶಿ ಮತ್ತು ನಂದ್ ಗೋಪಾಲ್ ಪ್ರಮುಖರು.
ಎರಡನೇ ಮಹಾಯುದ್ಧದ ಕಾಲದಲ್ಲಿ ಈ ದ್ವೀಪ ಜಪಾನ್ ನ ವಶವಾಯಿತು.
ಸುಭಾಷ್ ಚಂದ್ರ ಬೋಸ್ ಅವರು ಕೂಡಾ ಈ  ದ್ವೀಪಕ್ಕೆ ಭೇಟಿ ನೀಡಿದ್ದರು 
ಜಪಾನಿಯರ ಕಾಲದಲ್ಲಿ  ಸೆಲ್ಯುಲಾರ್ ಜೈಲಿನ  ಏಳು ರೆಕ್ಕೆ ಗೋಪುರಗಳಲ್ಲಿ ಎರಡನ್ನು ನಾಶಗೊಳಿಸಲಾಯಿತು.
ಮತ್ತೆ 1945ರಲ್ಲಿ ಈ ದ್ವೀಪದ  ಬ್ರಿಟಿಷರು  ನಿಯಂತ್ರಣ ಪಡೆದರು.ಸ್ವಾತಂತ್ರಾ ನಂತರ ಎಲ್ಲಾ ಕೈದಿಗಳ ಬಿಡುಗಡೆಯಾಯಿತು. ಅದರೊಂದಿಗೆ ದೇಶಭಕ್ತರ ಹಿಂಸೆಗೆ ಸಾಕ್ಷಿಯಾಗಿದ್ದ  ಪ್ರತಿ ಸೆಲ್ಯುಲಾರ್ ಕೋಣೆಗಳು ನಿಟ್ಟುಸಿರು ಬಿಟ್ಟವು.ನಂತರ
ಗೋಬಿಂದ್ ವಲ್ಲಭ್ ಪಂತ್ ಆಸ್ಪತ್ರೆಯನ್ನು ಸೆಲ್ಯುಲರ್ ಜೈಲು ಆವರಣದಲ್ಲಿ 1963ರಲ್ಲಿ ಆರಂಭಿಸಲಾಯಿತು. ಸದ್ಯ ಇದೀಗ 500ಹಾಸಿಗೆಗಳುಳ್ಳ ಆಸ್ಪತ್ರೆಯಾಗಿದ್ದು ಸುಮಾರು 40 ವೈದ್ಯರು ಸ್ಥಳೀಯ ಜನರ ಆರೋಗ್ಯ ರಕ್ಷಣೆ ಮಾಡುವಲ್ಲಿ ನಿರತರಾಗಿದ್ದಾರೆ. 
 ಸೆಲ್ಯುಲಾರ್ ಜೈಲು ನಿರ್ಮಾಣದ ಶತಮಾನೋತ್ಸವವನ್ನು  2006 ರಲ್ಲಿ ಆಚರಿಸಲಾಯಿತು.ಮತ್ತು  ಸೆಲ್ಯುಲಾರ್ ಜೈಲನ್ನು ರಾಷ್ಟ್ರೀಯ ಸ್ಮಾರಕವಾಗಿ ಸರ್ಕಾರ ಘೋಷಿಸಿತು.ಅಂದು  ಹಲವು ಕೈದಿಗಳನ್ನು ಭಾರತ ಸರ್ಕಾರ ಸನ್ಮಾಸಿತು.ಎಂದು ಹೇಳುತ್ತಾ ಸಂಜೆ ಇಲ್ಲಿ ಸೌಂಡ್ ಅಂಡ್ ಲೈಟ್ ಶೋ ಇದೆ ನೋಡಲು ಮರೆಯದಿರಿ ಎಂದು ಹೇಳುತ್ತಾ ಗೈಡ್ ಹೊರಟರು. ನಾವೆಲ್ಲರೂ ಇಂತಹ ಭವ್ಯ ಸ್ಮಾರಕ ನೋಡಿದ ಸಾರ್ಥಕ ಭಾವದಿಂದ ಸೆಲ್ಯುಲಾರ್ ಜೈಲಿನಿಂದ ಹೊರನಡೆದೆವು.
ಕಾಲಾಪಾನಿ 
ಕರಿನೀರಿನ ಶಿಕ್ಷೆಯ ಜೈಲ್ ಎಂಬ ನಾಮಾಂಕಿತ ಈ ರಾಷ್ಟ್ರೀಯ ಸ್ಮಾರಕವನ್ನು ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕು....


*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529

06 ಅಕ್ಟೋಬರ್ 2023

ಸಿಹಿಜೀವಿ ಕಂಡ ಅಂಡಮಾನ್ ಭಾಗ ೨




ಭಾಗ ೨
ಕೆಂಪೇಗೌಡ ಏರ್ಪೋರ್ಟ್ ನಲ್ಲಿ..

ತುಮಕೂರಿನಿಂದ ಬಸ್ ನ ಮೂಲಕ ಹೊರಟ ನಾವು ದೇವನಹಳ್ಳಿ ತಲುಪಿದಾಗ ಕೆಂಪೇಗೌಡರ ಬೃಹತ್ ಕಂಚಿನ ವಿಗ್ರಹ ನಮ್ಮ ಎಡಭಾಗದಲ್ಲಿ ಗೋಚರಿಸಿತು.ಅದರ ಮುಂದೆ ಸಾಗಿದಾಗ ಸಿಕ್ಕಿದ್ದೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನಾವು ಅಂಡಮಾನ್ ತಲುಪಲು ಬೆಂಗಳೂರಿನಿಂದ ಚೆನ್ನೈ ಗೆ ವಿಮಾನದ ಮೂಲಕ ತೆರಳಿ ಅಲ್ಲಿಂದ ಪೋರ್ಟ್ ಬ್ಲೇರ್ ಗೆ ಪಯಣ ಮಾಡಲು ಟಿಕೆಟ್ ಬುಕ್ ಆಗಿತ್ತು.
ಬೋರ್ಡಿಂಗ್ ಪಾಸ್ ಪಡೆದು ಚೆಕ್ ಇನ್ ಆಗಲು ತೆರಳಿದ ನಮ್ಮ ಪ್ರವಾಸಿ ತಂಡಕ್ಕೆ  ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಡಿಜಿ ಯಾತ್ರಾ ಎಂಬ ಉಪಕ್ರಮದ ಮೂಲಕ ಸುಲಭವಾಗಿ ಚೆಕ್ ಇನ್ ಆಗಲು ಸಹಾಯ ಮಾಡಿದರು.  ಲಗೇಜ್ ಕೌಂಟರ್ ನಲ್ಲಿ ನಮ್ಮ ಲಗೇಜ್ ನೀಡಿ ವಿಮಾನ ಏರಲು 12 ನೇ ಕೌಂಟರ್ ನಲ್ಲಿ ಚೆಕ್ ಇನ್ ಆಗಿ ನಮ್ಮ ವಿಮಾನದತ್ತ ತರಳಿದೆವು. ಆಗ ನಮ್ಮ ಕಣ್ಣಿಗೆ ಕೆಂಪೇಗೌಡ ವಿಮಾನ ನಿಲ್ದಾಣದ ಕೆಲ ಸಂಗತಿಗಳು ಅಚ್ಚರಿ ಮತ್ತು  ಹೆಮ್ಮೆ ಮೂಡಿಸಿದವು.

ಈ ನಿಲ್ದಾಣವು   4700 ಎಕರೆಗಳಷ್ಟು ವಿಸ್ತಾರ ಹೊಂದಿದೆ.  ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು 4೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ 2005ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ 23, 2008ರಂದು ತನ್ನ ಕಾರ್ಯಾರಂಭ ಮಾಡಿತು. ಇತ್ತೀಚಿಗೆ ಟರ್ಮಿನಲ್ 2 ನಿರ್ಮಾಣವಾಗಿದೆ ಹಾಗೂ ಅದೀಗ ಕಾರ್ಯಾಚರಣೆಯಲ್ಲಿದೆ. ಇದು ಪ್ರಯಾಣಿಕರ ದಟ್ಟಣೆಯ ಆಧಾರದ ಮೇಲೆ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಮನ್ನಣೆ ಪಡೆದಿದೆ.ಹಾಗೂ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

'ಎಕ್ಸ್ಪ್ರೆಸ್ ವೇ' ಮತ್ತು 'ಹೈಸ್ಪೀಡ್ ರೈಲ್ವೆ' ಲೈನಿನ ಯೋಜನೆಯ 'ನೀಲನಕ್ಷೆ' ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆ. ಎಸ್. ಆರ್. ಟಿ. ಸಿ ಹವಾನಿಯಂತ್ರಿತ ಬಸ್‍ಗಳು ಪ್ರತಿ 15 ನಿಮಿಷಕ್ಕೆ ಒಂದರಂತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಯಾವ ಮೂಲೆಯಿಂದಲಾದರೂ ಹೊರಟು ವಿಮಾನ ನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಗಮನಾರ್ಹವಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ 'ಬಿ ಐ ಎ ಎಲ್ ಸಹಾಯವಾಣಿ' ಯ ಸೌಲಭ್ಯವಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾರ್ಗ, ಸಾರಿಗೆ ಸೌಲಭ್ಯಗಳ ವಿವರಗಳು, ಮತ್ತು ಸಾಮಾನ್ಯ ಮಾಹಿತಿಗಳನ್ನು ದೂರವಾಣಿಯ ಮೂಲಕ ಕೂಡಲೆ ಪಡೆಯ ಬಹುದು.  ವಿಮಾನವೇರುವ ಮೊದಲು ನಡೆಸುವ 'ಭದ್ರತಾ ತಪಾಸಣೆಯ ವಿಧಿ' ಯಲ್ಲಿ ಪ್ರಯಾಣಿಕರು 'ಹಲವು ಕ್ಯೂ' ಗಳಲ್ಲಿ ಕಾದು ಮುಂದುವರೆಯುವ ಬದಲು, 'ಒಂದೇ ಹಂತದ ತಪಾಸಣಾ ವ್ಯವಸ್ಥೆ 'ಯನ್ನು ನಿರೂಪಿಸಲಾಗಿದೆ. 53  'ಚೆಕ್-ಇನ್ ಕೌಂಟರ್' ಗಳು, ಹಾಗೂ 18  'ಸ್ವಯಂ ತಪಾಸಣಾಯಂತ್ರ' ಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಉಪಚಾರ ಹಾಗೂ  ಆರೋಗ್ಯ ಸೇವೆಗೆ ಔಷಧಾಲಯ, ಡಯಾಪರ್ ಬದಲಾವಣೆ, ಹಾಲುಕುಡಿಸುವಿಕೆ ಇತ್ಯಾದಿಗಳಿಗೆ  ಪ್ರತ್ಯೇಕ ಜಾಗವಿದೆ.
ನಿಲ್ದಾಣದ ಒಳಗಡೆ ಸ್ವದೇಶಿ ಮತ್ತು ವಿದೇಶಿ ಖಾದ್ಯಗಳನ್ನು ಒಳಗೊಂಡ ಹೋಟೆಲ್ ಗಳಿವೆ. ನಮ್ಮ ಅನುಭವ ಕ್ಕಾಗಿ ಒಂದು ಕಾಫಿ ಕುಡಿದೆವು .ಕಾಫಿ ಸಾದಾರಣಾಗಿತ್ತು ಬೆಲೆ ಮಾತ್ರ ತುಸು ದುಬಾರಿ  200 ರೂಪಾಯಿಗಳು! ಎಷ್ಟೇ ಆದರೂ  ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲವೇ? 

 

ಸಿಹಿಜೀವಿ ಕಂಡ ಅಂಡಮಾನ್



 


ಭಾಗ ೧ 


ಸಿಹಿಜೀವಿ ಕಂಡ ಅಂಡಮಾನ್ 

ಅಂಡಮಾನ್ ನಲ್ಲಿ ಸಿಹಿಜೀವಿಯ ಸಿಹಿ ನೆನಪುಗಳು..

ಅಂಡಮಾನ್ ನಲ್ಲಿ ಸಿಹಿಜೀವಿ 


ಏನಿವು ಒಂದೇ ವಾಕ್ಯವನ್ನು ಬೇರೆ ಬೇರೆ  ರೀತಿಯಲ್ಲಿ ಬರೆದಿರುವಿರಲ್ಲ ಎಂಬ ನಿಮ್ಮ ಪ್ರಶ್ನೆ ಅಹಜ. ಈ ವಾಕ್ಯಗಳು ನನ್ನ ಸಹೋದ್ಯೋಗಿ ಬಂಧುಗಳು ನಾನು ಅಂಡಮಾನ್  ಪ್ರವಾಸ  ಹೊರಟು ನಿಂತಾಗ ನನ್ನ ಮುಂಬರುವ ಪ್ರವಾಸ ಕುರಿತಾಗಿ ನಾನು ಪ್ರವಾಸ ಕಥನ  ಬರೆಯಲೇಬೇಕೆಂದು ಆಗ್ರಹಪೂರ್ವಕವಾಗಿ  ನೀಡಿದ ಆಕರ್ಷಕ ಶೀರ್ಷಿಕೆಗಳು! ನನ್ನೆಲ್ಲಾ ಸಹೋದ್ಯೋಗಿ ಬಂಧುಗಳಿಗೆ ನಮನಗಳು 

ಖಂಡಿತವಾಗಿಯೂ  ಅವರ ನಿರೀಕ್ಷೆ ಹುಸಿಗೊಳಿಸುವುದಿಲ್ಲ. 


ನನ್ನ ವಿದ್ಯಾರ್ಥಿಗಳಿಗೆ ಭಾರತದ ಭೂಪಟ ಬರೆಯಲು ಹೇಳಿದರೆ ಅಂಡಮಾನ್ ನಿಕೋಬಾರ್ ಲಕ್ಷ್ಯ ದ್ವೀಪಗಳನ್ನು ಬರೆಯದೇ ನಕ್ಷೆ ಬಿಡಿಸುತ್ತಿದ್ದರು. ಎಷ್ಟು ಬಾರಿ ಹೇಳಿದರೂ ಆ ದ್ವೀಪಗಳನ್ನು ಬರೆಯುತ್ತಿರಲಿಲ್ಲ.ನಾನು ಪದೇ ಪದೇ ದ್ವೀಪಗಳ ಬರೆಯಲು ತಾಕೀತು ಮಾಡಿದಾಗ ಒಬ್ಬ ವಿದ್ಯಾರ್ಥಿ ಕೇಳಿಯೇ ಬಿಟ್ಟ ಸಾರ್ ನೀವು ಅಂಡಮಾನ್ ದ್ವೀಪಗಳ ನೋಡಿದ್ದೀರಾ? ಇಲ್ಲ ಎಂದೆ. ಅಂದೆ ಅಂಡಮಾನ್ ನೋಡುವ ನನ್ನ ಬಯಕೆ ಚಿಗುರೊಡೆಯಿತು.


ಮೈಸೂರಿನ ಸಿ ಟಿ ಇ ನಲ್ಲಿ ಬಿ ಎಡ್ ಓದುವಾಗ ನನ್ನ ಸಹಪಾಠಿಗಳೊಂದಿಗೆ ಪ್ರವಾಸ ಹೋದಾಗ 

ನಮ್ಮ ಕರ್ನಾಟಕ ಸೇಂಟ್ ಮೇರೀಸ್ ಐಲ್ಯಾಂಡ್ ನೋಡಿ ಪುಳಕಗೊಂಡಿದ್ದೆ. ಈಗ  ಮೂರು ಲಕ್ಷ ಜನಸಂಖ್ಯೆಯಿರುವ ತುಮಕೂರಿನಿಂದ ಮೂರುವರೆ ಚಿಲ್ರೆ ಲಕ್ಷ  ಜನಸಂಖ್ಯೆ ಇರುವ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಹೊರಟಿರುವೆ..


ಹೆಚ್ಚಿನ ವಿವರಗಳನ್ನು  ನಂತರ ನೀಡುವೆ.

05 ಅಕ್ಟೋಬರ್ 2023

ವಿಶ್ವ ಕ್ರಿಕೆಟ್ ಹಬ್ಬ

 


ವಿಶ್ವ ಕ್ರಿಕೆಟ್ ಹಬ್ಬ 


ವಿಶ್ವ ಕ್ರಿಕೆಟ್ ಹಬ್ಬ ಶುರುವಾಗಿದೆ

ಕಾದು ಕುಳಿತಿಹೆವು ಕಣ್ತುಂಬಿಕೊಳ್ಳಲು

ದಾಂಡಿಗರ, ಎಸೆತಗಾರರ ,ಕ್ಷೇತ್ರ ರಕ್ಷಕರ ಚಮತ್ಕಾರ|

ಯಾರು ಗೆದ್ದರೂ ಸಂತೋಷ

ಪ್ರತಿ ಮನೆ ಮನದಲ್ಲೂ  ಮನರಂಜನೆಯ ಸಡಗರ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

01 ಅಕ್ಟೋಬರ್ 2023

ದಿಟ್ಟ ನೀರೆ ನೀರಾ ಆರ್ಯ...


 


ದಿಟ್ಟ ನೀರೆ ನೀರಾ ಆರ್ಯ.


ಸ್ವಾತಂತ್ರ್ಯ ಹೋರಾಟದಲ್ಲಿ ತಾಯ್ನಾಡಿನ ಸೇವೆಗೆ ಅಡ್ಡಿಯಾದ ಗಂಡನನ್ನೇ ಕೊಂದು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ  ಅಂಡಮಾನ್ ನ ಸೆಲ್ಯುಲಾರ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಗೆ ಗುರಿಯಾದ ಮಹಾನ್ ಹೋರಾಟಗಾರ್ತಿ ನೀರಾ ಆರ್ಯ!

ನೀರಾ ಆರ್ಯ ಅವರು ಮಾರ್ಚ್ 5 1902 ರಂದು ಖೇಕ್ರಾ ನಗರದಲ್ಲಿ ಜನಿಸಿದರು. ಅವರ ತಂದೆ ಶ್ರೀಮಂತ ಉದ್ಯಮಿಯಾಗಿದ್ದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಕಲ್ಕತ್ತಾದಲ್ಲಿ ಮುಗಿಸಿದರು.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದ ನೀರಾ ಸುಭಾಷ್ ಚಂದ್ರ ಬೋಸರ ಕಟ್ಟಾ ಅಭಿಮಾನಿ. ಅವರು ಭಾರತೀಯ ರಾಷ್ಟ್ರೀಯ ಸೇನೆಯನ್ನು  ಸೇರಿ.  INA ಯ ರಾಣಿ ಆಫ್ ಝಾನ್ಸಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು.

ನೀರಾ ಆರ್ಯ ಅವರು ಬ್ರಿಟಿಷ್ ಸಿಐಡಿ ಅಧಿಕಾರಿಯಾಗಿದ್ದ ಶ್ರೀಕಾಂತ್ ಜೈರಂಜನ್ ದಾಸ್ ಅವರನ್ನು ವಿವಾಹವಾಗಿದ್ದರು.  ನೀರಾರವರು ಭಾರತೀಯ ರಾಷ್ಟ್ರೀಯ ಸೇನೆಗೆ ಸೇರಿದ್ದಾರೆ ಎಂದು ಅರಿತ ಶ್ರೀಕಾಂತ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ನೀರಾ ಅವರು ಹತ್ಯೆ ಮಾಡಬೇಕೆಂದು ಬಯಸಿದ್ದರು. ನೀರಾರವರು ನಿರಾಕರಿಸಿದಾಗ, ನೇತಾಜಿಯನ್ನೇ ಹತ್ಯೆ ಮಾಡಲು ನೇತಾಜಿ ಇರುವ ಸ್ಥಳವನ್ನು ಬಹಿರಂಗಪಡಿಸಬೇಕೆಂದು ಶ್ರೀಕಾಂತ್ ಬಯಸಿದ್ದರು. ವಿಫಲವಾದ ಹತ್ಯೆಯ ಪ್ರಯತ್ನದ ಸಂದರ್ಭದಲ್ಲಿ, ಶ್ರೀಕಾಂತ್ ನೇತಾಜಿ ಕಡೆಗೆ ಗುಂಡು ಹಾರಿಸಿದ್ದರು. ನೇತಾಜಿ ಗುಂಡಿನ ದಾಳಿಯಿಂದ ಬದುಕುಳಿದರು. ಆದರೆ ಅವರ ಚಾಲಕ ಕೊಲ್ಲಲ್ಪಟ್ಟರು. ಇದನ್ನು ಕೇಳಿದ ನೀರಾರವರು ಶ್ರೀಕಾಂತ್ ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. 

ಶ್ರೀಕಾಂತ್‌ನನ್ನು ಕೊಂದಿದ್ದಕ್ಕಾಗಿ ನೀರಾರವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಯಾಗಿದ್ದರು ಮತ್ತು ಅಮಾನುಷವಾಗಿ ಚಿತ್ರಹಿಂಸೆ ನೀಡಲಾಯಿತು  ನೇತಾಜಿ ಇರುವ ತಾಣವನ್ನು ಬಹಿರಂಗಪಡಿಸಲು ಅಧಿಕಾರಿಗಳು  ನೇತಾಜಿ ಎಲ್ಲಿರುವರು ಹೇಳು ಎಂದು  ಕೇಳಿದಾಗ ಮೀರಾರವರು ಬ್ರಿಟೀಷರ ಮೇಲಿನ ಸಿಟ್ಟು ಮತ್ತು ಸುಭಾಷ್ ರವರ  ಮೇಲಿನ ಹೆಮ್ಮೆಯಿಂದ ನೇತಾಜಿ ನನ್ನ ಹೃದಯದಲ್ಲಿ ಇರುವರು ಎಂದಾಗ ದುರುಳ ಬ್ರಿಟಿಷ್ ಅಧಿಕಾರಿಗಳು ನಿರ್ದಯವಾಗಿ  ಅವರ ಸ್ತನಗಳನ್ನು  ಕತ್ತರಿಸಿದರು.  

ಸ್ವಾತಂತ್ರ್ಯಾನಂತರ ನೀರಾರವರ ಬಿಡುಗಡೆಯಾಯಿತು.  ತಮ್ಮ ಕೊನೆಯ ದಿನಗಳನ್ನು ಹೈದರಾಬಾದ್ ನಲ್ಲಿ ಕಳೆದರು.   ಜುಲೈ 26 1998 ರಂದು ಕೊನೆಯುಸಿರೆಳೆದರು.
ನಮ್ಮ ಇಂದಿನ ಸ್ವಾತಂತ್ರ್ಯದ ಹಿಂದೆ ಇಂತಹ ಮಹಾನ್ ಹೋರಾಟಗಾರರ ತ್ಯಾಗವಿದೆ ಅಂತಹ ಮಹಾನ್ ಆತ್ಮಗಳಿಗೆ ಗೌರವಪೂರ್ವಕವಾಗಿ ನಮಿಸೋಣ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529