11 ಸೆಪ್ಟೆಂಬರ್ 2023

ವಿಭಿನ್ನವಾಗಿ ಯೋಚಿಸಿ...

 ವಿಭಿನ್ನವಾಗಿ ಯೋಚಿಸಿ....


ವಿಭಿನ್ನವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗುವವರಿಗೆ ಎಂದಿಗೂ ಸೋಲಾಗುವುದಿಲ್ಲ ಎಂಬುದಕ್ಕೆ ದಿನಕ್ಕೊಂದು ಸ್ಟಾರ್ಟಪ್, ಯೂನಿಕಾರ್ನ್ ಕಂಪನಿಗಳು ಹುಟ್ಟಿ ಕೋಟಿಗಳ ಲೆಕ್ಕದಲ್ಲಿ ವ್ಯವಹಾರ ಮಾಡುತ್ತ ನೂರಾರು ಜನರಿಗೆ ಉದ್ಯೋಗವನ್ನು ನೀಡಿ ನವೋದ್ಯಮಿಗಳಿಗೆ ಲಾಭವನ್ನು ತಂದುಕೊಡುತ್ತಿವೆ. ಇದಕ್ಕೆ ಉದಾಹರಣೆಯಾಗಿ  ಅಮೇಜಾನ್ ,ಪ್ಲಿಪ್ ಕಾರ್ಟ್,  ಜೊಮ್ಯಾಟೊ, ರೆಡ್ ಬಸ್, ಇತ್ಯಾದಿ ನೂರಾರು ಹೇಳಬಹುದು. ಹೀಗೆ ವ್ಯವಹಾರದಲ್ಲಿ ಯಶಸ್ವಿಯಾಗಲು ಕೊಂಚ ವಿಭಿನ್ನವಾಗಿ ಆಲೋಚಿಸಿ ಧೈರ್ಯದಿಂದ ಮುನ್ನುಗ್ಗಿದವರೇ ಮುಂದೊಂದು ದಿನ ಯದ್ಯಮಿಗಳಾಗಿ ಹೊರಹೊಮ್ಮುತ್ತಾರೆ. 


ಬಹುಕಾಲದ ಹಿಂದೆ ಚೀನಾದಲ್ಲಿ ಒಬ್ಬ ಯಶಸ್ವೀ ಉದ್ಯಮಿ ಇದ್ದರು. ಅವರದ್ದು ಬಾಚಣಿಗೆ ಬ್ಯುಸಿನೆಸ್. ಅವರಿಗೆ ವಯಸ್ಸಾಗಿತ್ತು. 

ಇನ್ನೇನು ನಿವೃತ್ತಿ ಹತ್ತಿರವಾಗಿತ್ತು. 

ಅವರಿಗೆ ಮೂರು ಮಂದಿ ಗಂಡು ಮಕ್ಕಳಿದ್ದರು. ತನ್ನ ಉದ್ಯಮವನ್ನು ಸುರಕ್ಷಿತ ಕೈಗಳಲ್ಲಿ ಇಡಬೇಕು ಎಂಬ ಆಸೆಯಿಂದ ಅವರು ಮಕ್ಕಳಿಗೆ ಒಂದು ಸಣ್ಣ ಪರೀಕ್ಷೆಯನ್ನು ಒಡ್ಡಿದರು. 

"ನೀವು ಒಂದು ಬೌದ್ಧ ಆಶ್ರಮಕ್ಕೆ ಹೋಗಿ ಅಲ್ಲಿನ ಸನ್ಯಾಸಿಗಳಿಗೆ ಬಾಚಣಿಗೆ ಮಾರಿ ಬರಬೇಕು" ಎಂದರು ತಂದೆ. ಮೂರು ದಿನದ ಬಳಿಕ  ವರದಿ ನೀಡಬೇಕು ಎಂದರು.


ಮಕ್ಕಳಿಗೆ ಆಘಾತ. ಸನ್ಯಾಸಿಗಳಿಗೆ ತಲೆ ಕೂದಲೇ ಇರುವುದಿಲ್ಲ. ಅವರಿಗೆ ಬಾಚಣಿಗೆ ಯಾಕೆ? ಯಾಕಾದರೂ ಅವರು ತೆಗೆದುಕೊಂಡಾರು ಎಂದು ಯೋಚಿಸಿದರು. ಅಷ್ಟಾದರೂ ಅಪ್ಪನ ಮಾತು ಮೀರಲಾರದೆ ಆಶ್ರಮಕ್ಕೆ ತೆರಳಿದರು.ಮೂರು ದಿನಗಳ ಬಳಿಕ ಒಬ್ಬ ಮಗ ಬಂದ. "ನನಗೆ ಎರಡು ಬಾಚಣಿಗೆ ಮಾರಲು ಸಾಧ್ಯವಾಯಿತು ಅಪ್ಪ"ಅಂದ. ಅಪ್ಪ ಕುತೂಹಲದಿಂದ ಕೇಳಿದ" ಬಾಚಣಿಗೆ ತೆಗೆದುಕೊಳ್ಳುವಂತೆ ಹೇಗೆ ಅವರನ್ನು ಒಪ್ಪಿಸಿದೆ ಮಗನೇ?"ಮಗ ಹೇಳಿದ "ನಿಮಗೇನಾದರೂ ಬೆನ್ನು ತುರಿಸಿದರೆ ಆಗ ತುರಿಸಿಕೊಳ್ಳಲು ಅನುಕೂಲವಾಗುತ್ತದೆ" ಎಂದು 


ಅಷ್ಟು ಹೊತ್ತಿಗೆ ಎರಡನೇಯವನು ಬಂದ. ಅವನು 10 ಬಾಚಣಿಗೆ ಮಾರಿಬಂದಿದ್ದ.

ಅವನು ಹೇಳಿದ"ನೀವು ಈ ಬಾಚಣಿಗೆಗಳನ್ನು ಖರೀದಿ ಆಶ್ರಮದಲ್ಲಿ ಇಟ್ಟರೆ ಬರುವ ಪ್ರವಾಸಿಗರಿಗೆ ಅನುಕೂಲವಾದೀತು ಅಂದೆ. ಎಲ್ಲೋ ದೂರದಿಂದ ಬಂದಿರ್ತಾರೆ,  ಕೂದಲು ಕೆದರಿಕೊಂಡಿದ್ದರೆ ಇದರ ಮೂಲಕ ಬಾಚಿಕೊಳ್ಳಬಹುದು ಎಂದು ಅವರಿಗೆ ಹೇಳಿದೆ. ಒಮ್ಮೆ ನಿರಾಕರಿಸಿದರೂ ಕೊನೆಗೆ 10 ತೆಗೆದುಕೊಳ್ಳಲು ಒಪ್ಪಿದರು" ಅಂದ. 


ಅಷ್ಟು ಹೊತ್ತಿಗೆ ಮೂರನೇ ಮಗ ಬಂದ. "ಎಷ್ಟು ಬಾಚಣಿಗೆ ಮಾರಿದೆ ಮಗನೇ "ಅಂತ ಅಪ್ಪ ಕೇಳಿದ. "ಒಂದು ಸಾವಿರ ಬಾಚಣಿಗೆ ಸೇಲ್ ಆಯ್ತಪ್ಪ"ಅಂತ ಅವನು ಹೇಳುತ್ತಿದ್ದಂತೆಯೇ ಎಲ್ಲರಿಗೂ ಭಾರಿ ಅಚ್ಚರಿ!

ಇದು ಹೇಗೆ ಸಾಧ್ಯ ಎಂದು ಎಲ್ಲರೂ ಮುಖ ಮುಖ ನೋಡಿಕೊಂಡರು.

ಅಪ್ಪ ಕೇಳಿದರು"ಹೇಗಪ್ಪಾ ಇದು ಸಾಧ್ಯವಾಯಿತು, ಸ್ವಲ್ಪ ವಿವರಿಸಿ ಹೇಳು."


ಮಗ ವಿವರಿಸಿದ "ನಾನು ಆಶ್ರಮವಾಸಿ ಸನ್ಯಾಸಿಗಳ ಬಳಿಗೆ ಹೋಗಿ ಅವರಿಗೊಂದು ಐಡಿಯಾ ಕೊಟ್ಟೆ. ಅದೇನೆಂದರೆ, ಈ ಬಾಚಣಿಗೆಗಳಲ್ಲಿ ಬುದ್ಧನ ಸಂದೇಶವನ್ನು ಅಂಟಿಸಿದರೆ ಇಲ್ಲವೇ ಪ್ರಿಂಟ್ ಮಾಡಿದರೆ ಅದನ್ನು ಸಂದರ್ಶಕರು ಮತ್ತು ಭಕ್ತರಿಗೆ ಕಾಣಿಕೆಯಾಗಿ ಕೊಡಬಹುದು ಅಂದೆ. ಹಾಗೆ ಪಡೆದುಕೊಂಡವರು ಪ್ರತಿ ದಿನವೂ ತಲೆ ಬಾಚುವಾಗ ಬುದ್ಧನ ಬೋಧನೆಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾದೀತು ಎಂದು ಹೇಳಿದೆ. 

ಅವರಿಗೆ ಹೌದೆನಿಸಿತು.  ಕೇವಲ ಎರಡು ರೂಪಾಯಿಯ ಬಾಚಣಿಗೆ ಮೂಲಕ ಬುದ್ಧನ ಸಂದೇಶವನ್ನು ಮನೆ ಮನೆಗೆ ತಲುಪಿಸಬಹುದು ಎಂಬ ಐಡಿಯಾವೇ ರೋಚಕವಾಗಿದೆ ಅಂದರು. ಒಂದು ಸಾವಿರ ಬಾಚಣಿಗೆಗೆ ಆರ್ಡರ್ ಮಾಡಿದರು."

ಮಗ ಮುಂದುವರಿಸಿದ "ಅಷ್ಟೇ ಅಲ್ಲ ಅಪ್ಪ.  ಬುದ್ಧನ ಸಂದೇಶಗಳನ್ನು ನಾವೇ ಮುದ್ರಿಸಿ ಕೊಡುವುದಾದರೆ ಬೇರೆ ಆಶ್ರಮಗಳ ಆರ್ಡರ್ ಕೂಡಾ ಪಡೆಯಲು ಸಹಾಯ ಮಾಡುವುದಾಗಿ ಅಲ್ಲಿನ ಸನ್ಯಾಸಿಗಳು ಹೇಳಿದರು." 

ಈ ಮೇಲಿನ ಕಥೆಯನ್ನು ಓದಿದಾಗ ಅಸಾಧ್ಯವಾದದು ಯಾವುದೂ ಇಲ್ಲ ಸ್ವಲ್ಪ ನಮ್ಮ ಮೆದುಳಿಗೆ ಕೆಲಸ ಕೊಡಬೇಕು .ಪ್ರಾಮಣಿಕ ಪ್ರಯತ್ನ ಮಾಡಬೇಕು. ಥಿಂಕ್ ಔಟ್ ಆಪ್ ದಿ ಬಾಕ್ಸ್ ಎಂದರೆ ಇದೇ ಅಲ್ಲವೇ..? ಬೋಳು ತಲೆಯವರಿಗೂ ಬಾಚಣಿಗೆ ಮಾರುವುದಾದರೆ  ಇನ್ನೂ ಎಂತಹ ಅವಕಾಶಗಳು ಇರಬಹುದು? ನನಗೆ ಉದ್ಯೋಗವಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಬದಲು ವಿಭಿನ್ನವಾಗಿ ಆಲೋಚಿಸುವ ಮೂಲಕ ತಾನೇ ಉದ್ಯಮಿಯಾಗಿ ಬೆಳೆಬಹುದಲ್ಲವೆ...


ಸಿಹಿಜೀವಿ ವೆಂಕಟೇಶ್ವರ

ತುಮಕೂರು




07 ಸೆಪ್ಟೆಂಬರ್ 2023

ಗೋಮುಖ ವ್ಯಾಘ್ರರು...

 


*ಗೋಮುಖ ವ್ಯಾಗ್ರರು*


ಕಲಿತವರೂ ಗಾಢಾಂಧಕಾರದಲಿಹರು

ತೋರಿಕೆಯ ಬುದ್ದಿವಂತರು ಇವರು

ಸುಳ್ಳೇ ಇವರ ಮನೆ ದೇವರು 

ತಮ್ಮಲ್ಲೇ ಕಚ್ಚಾಡುತ್ತಲೇ ಇರುವರು 

ಬಾಯಲ್ಲಿ ಮಾತ್ರ ಶುಭಕೋರುವರು

ದುಷ್ಟಗುಣದ  ಗೋಮುಖವ್ಯಾಘ್ರರು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


01 ಸೆಪ್ಟೆಂಬರ್ 2023

ಉದ್ಯೋಗ ಮತ್ತು ಆತ್ಮ ತೃಪ್ತಿ..

 


ಉದ್ಯೋಗ ಮತ್ತು ಆತ್ಮ ತೃಪ್ತಿ..

ಈಗ ಉದ್ಯೋಗಂ ಪುರುಷ ಲಕ್ಷಣ ಎಂಬ ಮಾತು ಬದಲಾಗಿ ಉದ್ಯೋಗ ಮಾನವ ಲಕ್ಷಣ, ರೋಬಾಟ್ ಲಕ್ಷಣ ಮುಂದುವರೆದು ಯಾಂಬು (ಯಾಂತ್ರಿಕ ಬುದ್ದಿ ಮತ್ತೆ) ಲಕ್ಷಣವಾಗಿದೆ.ಉದ್ಯೋಗ ಗಳಿಸಿದ ಕೂಡಲೆ ತಾನು ಮಾಡುವ
ಉದ್ಯೋಗ ಕ್ಷೇತ್ರದಲ್ಲಿ ನಿಂತ ನೀರಾಗಿರಲು ಯಾರೂ ಇಷ್ಟಪಡುವುದಿಲ್ಲ. ಆದರೆ ಕೆಲವೊಂದು ಕಾರಣಗಳಿಂದ ಹಲವು ವರ್ಷಗಳಿಂದ ಉದ್ಯೋಗದಲ್ಲಿ ಒಂದೇ ಸ್ಥಿತಿಯಲ್ಲಿ ಬಹುತೇಕರು ಇರುತ್ತಾರೆ. ಕರಿಯರ್ನಲ್ಲಿ ಪ್ರಗತಿಯಾಗದೆ ಇರುವುದಕ್ಕೆ ಹಲವು ಕಾರಣಗಳು ಇರಬಹುದು. ಕಂಪನಿಯ ಸ್ಥಿತಿ ಕಾರಣ ಇರಬಹುದು, ಕಂಪನಿಯೊಳಗಿನ ಪೈಪೋಟಿ ಕಾರಣ ಇರಬಹುದು. ಆದರೆ ಕರಿಯರ್ ಯಶಸ್ಸಿಗೆ ನಾವು ಕೂಡ ಕಾರಣ. ನಮ್ಮೊಳಗಿನ ಕೆಲವೊಂದು  ಮನೋಧೋರಣೆಗಳು, ತೊಂದರೆಗಳು ನಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ ಎಂಬುದು ನಮ್ಮ ಅರಿವಿಗೆ ಬರುವ ಮುನ್ನ ನಮ್ಮ ಕೆರಿಯರ್ ಗ್ರಾಪ್ ಏರದೇ ಕೆಲವೊಮ್ಮೆ ವಿರುದ್ಧ ದಿಕ್ಕಿನಲ್ಲಿ ಪಯಣಿಸಿದ ಉದಾಹರಣೆಗಳಿವೆ.

ಉತ್ತಮವಾದ ಹಾಗೂ ಪ್ರಗತಿಶೀಲ ಜೀವನ ನನ್ನದಾಗಬೇಕೆಂಬುದು ಪ್ರತಿಯೊಬ್ಬರ ಆಸೆ. ಹೀಗಾಗಿ ಮಹತ್ವಾಕಾಂಕ್ಷೆಯ ಹಂಬಲವಿರುವುದು ಮಾನವಸಹಜ ಗುಣ. ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಇನ್ನಷ್ಟು ಬೆಳೆಯಬೇಕು ಎನ್ನುವುದು ಬಹುತೇಕರ ಆಸೆ. ನಮ್ಮನ್ನು ನಾವು ಸುಧಾರಿಸಿಕೊಳ್ಳುವ ಮೂಲಕ  ಚಿಕ್ಕ ಚಿಕ್ಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ  ನಿರೀಕ್ಷಿತ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ.

ಸ್ವಾಮಿ ವಿವೇಕಾನಂದರು ಹೇಳಿದಂತೆ ನಿನ್ನ ಮುಂದಿರುವ ಮತ್ತು ಹಿಂದಿರುವ ಶಕ್ತಿಗಿಂತ ನಿನ್ನೊಳಗಿನ ಶಕ್ತಿ ಅಧಿಕ ಆ ಶಕ್ತಿಯನ್ನು ಬಳಸಿಕೊಂಡು
ಸ್ವಯಂ ಬೆಳವಣಿಗೆಯ ಪಯಣ ಮುಂದುವರೆಸಬೇಕು.  ಹುಟ್ಟಿನಿಂದ ಚಟ್ಟದವರೆಗೆ  ಕಲಿಯುವುದು ಸಾಕಷ್ಟಿರುತ್ತದೆ.   ನಮ್ಮನ್ನು ನಾವು ಸುಧಾರಿಸುವ ಅವಕಾಶವೂ ಇರುತ್ತದೆ. ಆ ಅವಕಾಶ ಬಂದಾಗ ಸದುಪಯೋಗ ಪಡಿಸಿಕೊಳ್ಳಲು ಸದಾ ಕಾತರರಾಗಿರೋಣ.

ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪುಸ್ತಕಗಳು ಬುದ್ಧಿಮತ್ತೆಯನ್ನು ಹೆಚ್ಚಿಸುವ ಮೂಲಗಳಾಗಿವೆ. ಹೆಚ್ಚೆಚ್ಚು ಪುಸ್ತಕಗಳನ್ನು ಓದಿದಂತೆಲ್ಲ ಹೆಚ್ಚು ಬುದ್ಧಿವಂತರಾಗುತ್ತೇವೆ  ನಮ್ಮನ್ನು ನಾವು ಜ್ಞಾನಸಮೃದ್ಧಗೊಳಿಸಿಕೊಳ್ಳಲು ಪುಸ್ತಕಗಳನ್ನು ಓದಲು  ಪ್ರಾರಂಭಿಸೋಣ. ಪ್ರಾರಂಭದಲ್ಲಿ ಪುಸ್ತಕ ಓದುವುದಕ್ಕೆ ಆಸಕ್ತಿ ಇರುವುದಿಲ್ಲ.ಓದಲು ಆರಂಭಿಸಿದೊಡನೇ ಬೋರ್ ಆಗಿ ಅದನ್ನು ಮುಚ್ಚಿಡಬೇಕೆನ್ನಿಸುತ್ತದೆ. ಆದರೂ ಪುಸ್ತಕ ಓದುವುದನ್ನು ನಿಲ್ಲಿಸಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಪುಸ್ತಕ ಓದುವ ಹವ್ಯಾಸ ಒಮ್ಮೆ ರುಚಿಸಿದರೆ ಅದರ ಮಜವೇ ಬೇರೆ ಕಳೆದ ವರ್ಷ ನನ್ನ ಕೆಲಸದ ಒತ್ತಡದ ನಡುವೆಯೂ ಐವತ್ತು ಕನ್ನಡ ಪುಸ್ತಕ ಓದಿರುವುದನ್ನು ನಾನು ಹೆಮ್ಮೆಯಿಂದ ಹೇಳುವೆ.

ಇದರ ಜೊತೆಗೆ ಬಹು ಭಾಷೆಯ ಕಲಿಕೆ ನಮ್ಮ ಕೆರಿಯರ್ ಬೆಳವಣಿಗೆಗೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿದೆ. ನಮ್ಮ ಮಾತೃಭಾಷೆ ಹಾಗೂ ಇಂಗ್ಲಿಷ್ ಗೊತ್ತಿದ್ದರೆ ಮಾತ್ರ ಸಾಕು ಎಂದುಕೊಳ್ಳಬೇಡಿ. ಹೇಗಾದರೂ ಸರಿ, ಬೇರೆ ಭಾಷೆಗಳನ್ನು ಕಲಿಯೋಣ. ಸಾಧ್ಯವಾದರೆ ಭಾಷಾ ಕೋರ್ಸ್ಗಳ ಮೂಲಕ, ಒಂದಾದರೂ ವಿದೇಶಿ ಭಾಷೆಯನ್ನು ಕಲಿಯುವುದು ಉತ್ತಮ. ಅನ್ಯ ಭಾಷೆಯನ್ನು ಕಲಿಯುವುದರಿಂದ ಹೊಸ ಕೌಶಲ ಬೆಳೆಸಿಕೊಂಡಂತಾಗುತ್ತದೆ ಜೊತೆಗೆ ಅಲ್ಲಿನ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಈ ನಿಟ್ಟಿನಲ್ಲಿ ಈ ವರ್ಷದಿಂದ ನಾನು ಸಂಸ್ಕೃತ ಭಾಷೆಯನ್ನು ಕಲಿಯಲು ಆರಂಭಿಸಿರುವೆ.

ಇಂದಿನ ಆಧುನಿಕ ಜಗದಲ್ಲಿ ಇಂದು ಟ್ರೆಂಡಿಂಗ್ ನಾಳೆ ಹಳತಾಗುತ್ತದೆ.ಅದಕ್ಕೆ ತಕ್ಕಂತೆ ನಾವೂ ಅಪ್ಡೇಟ್ ಆಗುತ್ತಲೇ ಇರಬೇಕು ಇಲ್ಲದಿದ್ದರೆ ಔಟ್ಡೇಟ್ ಆಗುವ ಸಂಭವಿರುತ್ತದೆ. ನಾವು ಸೇರಬಹುದಾದ ಹೊಸ ಕೋರ್ಸ್ ಏನಾದರೂ ಇದೆಯೇ ಎಂಬುದನ್ನು ಪರಿಶೀಲಿಸಿ. ಹೊಸ ಜ್ಞಾನ ಮತ್ತು ಕೌಶಲಗಳನ್ನು ಗಳಿಸಲು ಕೋರ್ಸ್ಗಳು ಉಪಯುಕ್ತ. ಇದಕ್ಕಾಗಿ ದೀರ್ಘಾವಧಿಯ ಸೆಮಿನಾರ್  ವರ್ಕ್ಷಾಪ್ಗಳ ಅಗತ್ಯವಿಲ್ಲ. ಆನ್ಲೈನ್ ತರಬೇತಿಯಾದರೂ ಆದೀತು.  ಒಂದೆರಡು ವರ್ಕ್ಷಾಪ್ಗಳಿಂದಲೇ ಹೊಸ ಒಳದೃಷ್ಟಿಕೋನವನ್ನು ಪಡೆಯಬಹುದು.

ಕೆಲಸದ ಪರಿಸರ ಮತ್ತು ಮನೆಯ ಪರಿಸರ ನಮ್ಮ ಉದ್ಯೋಗದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.ನಮ್ಮ ಸುತ್ತಮುತ್ತಲಿನ ಪರಿಸರವೂ ನಮಗೊಂದು ಒಳ್ಳೆಯ ಮೂಡ್ ತಂದುಕೊಡಬಲ್ಲದು. ನಾವು ವಾಸಿಸುವ  ಮತ್ತು ಕಚೇರಿಯಲ್ಲಿನ ಸ್ಥಳವು ಸ್ಪೂರ್ತಿದಾಯಕ ಪರಿಸರದಲ್ಲಿದ್ದರೆ ಅದುವೇ ನಮಗೆ ಪ್ರತಿದಿನವೂ ಪ್ರೇರಣೆ ನೀಡಬಲ್ಲದು.

ಉತ್ತಮ ಹವ್ಯಾಸಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಪೂರಕ.ಕೆಲವೊಮ್ಮೆ ಈ ಹವ್ಯಾಸಗಳು ನಮ್ಮ ವೃತ್ತಿ ಜೀವನದ ಬೆಳವಣಿಗೆಗೂ ಸಹಕಾರಿಯಾಗುತ್ತವೆ.
ನಮಗಿಷ್ಟವಾದ ಕೆಲವು ಹವ್ಯಾಸಗಳ ಜೊತೆಯಲ್ಲಿ. ಅದಲ್ಲದೇ ನಾವು ಕಲಿಯಬೇಕಿರುವ ಯಾವುದಾದರೂ ಆಟ ಇದೆಯೆ?. ಗಾಲ್ಫ್, ಚಾರಣ, ಬೆಟ್ಟ ಹತ್ತುವುದು, ಡ್ಯಾನ್ಸ್ ಇತ್ಯಾದಿಗಳಿಗೆ ಪ್ರಯತ್ನಿಸಿ ನೋಡಬಹುದು. ಏನಾದರೂ ಹೊಸತನ್ನು ಕಲಿಯುವುದರಿಂದ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕ ಯಾವುದಾದರೂ ವಿಭಿನ್ನ ದೃಷ್ಟಿಕೋನಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮ ಕೆರಿಯರ್ ನಲ್ಲಿ ಮುಂದುವರೆಯಲು ಅನವಶ್ಯಕ ಹೆದರಿಕೆ ತ್ಯಜಿಸಬೇಕು.
ಹೆದರಿಕೆ ಎನ್ನುವುದು ಎಲ್ಲರಲ್ಲಿಯೂ ಇರುವಂಥಾದ್ದೇ. ಅನಿಶ್ಚಿತತೆಯ ಭೀತಿ, ಸಾರ್ವಜನಿಕವಾಗಿ ಮಾತನಾಡಲು ಅಂಜಿಕೆ, ರಿಸ್ಕ್ ತೆಗೆದುಕೊಳ್ಳುವಾಗಿನ ಗಾಬರಿ ಇವು ನಮ್ಮನ್ನು ನಾವಿರುವ ಸ್ಥಾನಕ್ಕೇ ಸೀಮಿತಗೊಳಿಸಿಬಿಡುತ್ತವೆ. ನಮ್ಮ ಬೆಳವಣಿಗೆಗೆ ಇವು ಅಡ್ಡಿಯಾಗಿಬಿಡುತ್ತವೆ. ಯಾವ ಕ್ಷೇತ್ರದಲ್ಲಿ ಬೆಳೆಯಬೇಕು ಎಂದುಕೊಳ್ಳುವಿರೋ ಅದರ ಮೇಲೆ ಹೆದರಿಕೆಯ ಛಾಯೆ ಬೀಳದಂತೆ ನೋಡಿಕೊಳ್ಳಬೇಕು.
ವಾಸ್ತವದಲ್ಲಿ ಜೀವಿಸುತ್ತಾ ಗತದಲ್ಲಿ ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಕಾಲಕಾಲಕ್ಕೆ ನಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ನಮ್ಮ ಕರ್ತವ್ಯ ನಿಭಾಹಿಸಿದರೆ ನಾವೊಬ್ಬ ಉತ್ತಮ ಕೆಲಸಗಾರರಾಗುವುದರಲ್ಲಿ ಸಂದೇಹವಿಲ್ಲ. ಒಟ್ಟಿನಲ್ಲಿ ಕೆಲಸ ಯಾವುದೇ ಇರಲಿ ಶ್ರದ್ಧೆಯಿಂದ ಬದ್ದತೆಯಿಂದ ಮಾಡಬೇಕು ಎಲ್ಲಕ್ಕಿಂತ ಮಿಗಿಲಾಗಿ ನಾವು ಮಾಡುವ ಕಾರ್ಯ ಆತ್ಮತೃಪ್ತಿ ನೀಡಬೇಕು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529


30 ಆಗಸ್ಟ್ 2023

ನೀ ಯಾವ ಮಲ್ಲಿಗೆ..?

 ಅನುಮಾನವಿಲ್ಲ...

ಗೆಳತಿ ನೀನೊಂದು ಮಲ್ಲಿಗೆ...

ಕೆಲವೊಮ್ಮೆ ಅನುಮಾನ..

 ನೀಕಾಡುಮಲ್ಲಿಗೆಯಾ? 

 ಸೂಜಿಮಲ್ಲಿಗೆಯಾ?ಜಾಜಿಮಲ್ಲಿಗೆಯಾ?ದುಂಡುಮಲ್ಲಿಗೆಯಾ?ಮೈಸೂರು ಮಲ್ಲಿಗೆಯಾ? ಮಂಗಳೂರು ಮಲ್ಲಿಗೆಯಾ?ಮುತ್ತುಮಲ್ಲಿಗೆಯಾ?

ಯಾವುದಾದರೇನಂತೆ...

ನೀನೇ ಸುಗಂಧ 

ನೀ ಜೊತೆಗಿದ್ದರೆ ಅದೇ ಚೆಂದ...


#ಸಿಹಿಜೀವಿ ವೆಂಕಟೇಶ್ವರ

ತುಮಕೂರು

29 ಆಗಸ್ಟ್ 2023

ಬಂಗಾರದ ಮನುಷ್ಯ...ನೀರಜ್


 #ಬಂಗಾರದ_ಮನುಷ್ಯ


#ಸಿಹಿಜೀವಿಯ_ಹನಿ*



 

ವಿಶ್ವ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ

ಭರ್ಜಿ ಎಸೆತದಲ್ಲಿ ಭಾರತಕ್ಕೆ ಬಂದಿದೆ

ಬಂಗಾರ| 

ಇನ್ನೇಕೆ ತಡ 

ಎಲ್ಲರೂ ಸೇರಿ

ಕುಣಿಯೋಣ ಬಾರ ||



ಭಾರತಕ್ಕೆ ಬಂಗಾರದ

ಪದಕ ತಂದಿದೆ

ನೀರಜ್ ಚೋಪ್ರ 

ರವರ ಭರ್ಜಿ ಎಸೆತ|

ಇಡೀ ಭಾರತ ಇಂದು

ಸಂತಸದಲ್ಲಿ ಹುಚ್ಚೆದ್ದು

ಕುಣಿಯುತ್ತಿದೆ ಸತತ||


ಸಿಹಿಜೀವಿ  ವೆಂಕಟೇಶ್ವರ

ತುಮಕೂರು.