19 ಆಗಸ್ಟ್ 2023

ಶ್ರಾವಣ ಮತ್ತು ಸಣ್ಣಪ್ಪ...

 


ಶ್ರಾವಣ ಮತ್ತು ಸಣ್ಣಪ್ಪ...


ಶ್ರಾವಣ ಪದವೇ ಒಂದು ಸಂಭ್ರಮ. ಬೇಂದ್ರೆ ಅಜ್ಜ ಹೇಳಿದಂತೆ ಶ್ರಾವಣ ಬರೀ ನಾಡಿಗೆ ಬರದೇ ಕಾಡಿಗೆ ಸಕಲ ಜೀವಿಗಳಿಗೆ ಹೊಸ ಚೈತನ್ಯ ಮೂಡಿಸುತ್ತದೆ. ಶ್ರಾವಣವೆಂದರೆ ಹೊಲ ಗದ್ದೆಗಳು ಹಸಿರೊದ್ದು ನಲಿವ ಕಾಲ. ಹಬ್ಬಹರಿದಿನಗಳ ಶ್ರದ್ಧಾ ಭಕ್ತಿಯ ಆಚರಣೆಗಳ ಕಾಲ. ನಾಡಿನ ಬಹುತೇಕ ಕಡೆ ಶ್ರಾವಣ ಶನಿವಾರ ಮತ್ತು ಸೋಮವಾರಗಳನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಕೆಲವೆಡೆ ಧಾರ್ಮಿಕ ಪುರಾಣಗಳನ್ನು ಶ್ರದ್ಧಾ ಭಕ್ತಿಯಿಂದ ಪಾರಾಯಣ ಮಾಡುವರು ಜೊತೆಗೆ ಕೆಲ ವ್ರತಗಳನ್ನು ಆಚರಿಸುವರು.ಅದರಲ್ಲಿ ಪ್ರಮುಖವಾದ ವ್ರತವೆಂದರೆ ವರಮಹಾಲಕ್ಷಿ ವ್ರತ. ಮೊದಲು ಕೆಲವೇ ಜನರು ಆಚರಿಸುತ್ತಿದ್ದ ವರಮಹಾಲಕ್ಷ್ಮಿ ಹಬ್ಬ ಇಂದು ಹಳ್ಳಿಗಳಿಗೂ ವ್ಯಾಪಿಸಿ ಸಾಂಸ್ಕೃತಿಕ ಬದಲಾವಣೆ ಮತ್ತು ಸಾಮಾಜಿಕ ಬದಲಾವಣೆಗೂ ಸಾಕ್ಷಿಯಾಗಿದೆ. ಶ್ರಾವಣ ಮಾಸವು ನನ್ನ ಬಾಲ್ಯವನ್ನು  ಬಹು ಸಂತಸಗೊಳಿಸಿದೆ ಅದಕ್ಕೆ ಶ್ರವಣಕ್ಕೆ ಧನ್ಯವಾದಗಳನ್ನು ಹೇಳಲೇಬೇಕು. ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಊರ ಸುತ್ತ ಮುತ್ತಲಿನ ಊರುಗಳಲ್ಲಿ ಶನಿವಾರಗಳಂದು ಶನಿಮಹಾತ್ಮೆ ಓದುವ ಮತ್ತು ಓದಿಸುವ ಕಾರ್ಯ ಸಾಮಾನ್ಯವಾಗಿತ್ತು ಆಗ ಶನಿಮಹಾತ್ಮೆ ಕಥೆ ಓದಲು ಎಲ್ಲರಿಗೂ ಬರುತ್ತಿರಲಿಲ್ಲ ಕಾರಣವೆಂದರೆ ಆ ಪುಸ್ತಕದಲ್ಲಿ ಬರುವ ,ಜಂಪೆ ತ್ರಿಹುಡಿ, ಆದಿತಾಳ ಮುಂತಾದ ಸಂಗೀತ ತಾಳ ಲಯಬದ್ಧವಾಗಿ ಓದಬೇಕಿತ್ತು. ಇದರಿಂದಾಗಿ  ಸಾಮಾನ್ಯವಾಗಿ ಓದಲು ಬರುವ ಎಲ್ಲರಿಗೂ ಸುಲಭವಾಗಿ ಶನಿಮಹಾತ್ಮೆ ಓದಲಾಗುತ್ತಿರಲಿಲ್ಲ. ನಮ್ಮ ಬೀದಿಯಲ್ಲಿ ನಮ್ಮ ಮನೆಯ ಪಕ್ಕದಲ್ಲೇ ವಾಸವಿದ್ದ ಸಣ್ಣಪ್ಪ ಶನಿಮಹಾತ್ಮೆ ಓದಲು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಹಳ ಪ್ರಸಿದ್ಧರು. ಕೃಷ ದೇಹದ ಸಣ್ಣಪ್ಪ ನವರು ಅರವತ್ತು ದಾಟಿದ್ದರೂ ಅವರ  ಕಂಚಿನ ಕಂಠ ಇತರ ಬೀದಿಗೂ ಕೇಳಿಸುತ್ತಿತ್ತು. ಅವರು ಶನಿಮಹಾತ್ಮೆ ಓದಲು ನಮ್ಮ ಊರು ಮತ್ತು  ಬೇರೆ ಹಳ್ಳಿಗಳಿಗೆ ಹೊರಟರೆ ನನಗೆ ಖುಷಿಯೋ ಖುಷಿ ಯಾಕಂದರೆ ಮರುದಿನ ನನಗೆ ಮತ್ತು ಅವರ ಮಗ ಹಾಗೂ ನನ್ನ ಗೆಳೆಯ ಸೀನನಿಗೆ ಸಣ್ಣಪ್ಪರವರು ದೇವರ ಪ್ರಸಾದ ನೀಡುತ್ತಿದ್ದ  ತಂಬಿಟ್ಟು, ಮಂಡಕ್ಕಿ, ಬಾಳೆಹಣ್ಣು ಇತಹಣ್ಣುಗಳು ! ನಾವಿಬ್ಬರು ಬಾಲಕರು ಆ ಎಲ್ಲಾ ತಿನಿಸುಗಳನ್ನು ತಿಂದು ಮಿಕ್ಕಿದರೆ ಉಳಿದ ನಮ್ಮ ಸ್ನೇಹಿತರಿಗೆ ಕೊಡುತ್ತಿದ್ದೆವು.ಮುಂದಿನ ಶನಿವಾರ ಕಳೆದು ಭಾನುವಾರಕ್ಕೆ ಕಾಯುತ್ತಿದ್ದೆವು. ಹೆಂಡತಿ ತೀರಿಕೊಂಡ ಮೇಲೆ ಸಣ್ಣಪ್ಪನವರು  ಮಗನಿಗೆ ತಾಯಿಯ ಪ್ರೀತಿ ಕಡಿಮೆಯಾಗದಂತೆ  ಸಾಕುತ್ತಿದ್ದರು.  ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ  ಅವರೇ ತಮ್ಮ ಮಗನಿಗೆ ಊಟ ಮಾಡಿ ಬಡಿಸುತ್ತಿದ್ದರು. ಈಗ ಸಣ್ಣಪ್ಪನವರು ಇಲ್ಲ.ಅವರ ಮಗ ಸೀನ ಇದ್ದಾನೆ  ಮೊನ್ನೆ ಊರಿಗೆ ಹೋದಾಗ ಅವನನ್ನು ಮಾತಾಡಿಸಿ ಬಂದೆ.ಅವರ ಮನೆಯಲ್ಲಿ ಸಣ್ಣಪ್ಪ ನೆನಪಾದರು. ಶ್ರಾವಣ ಮಾಸ ಬಂದಾಗಲೆಲ್ಲ ಇಂತಹ ಸಾರ್ಥಕ ಹಿರಿಯ ಜೀವಿಗಳ ನೆನಪಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

14 ಆಗಸ್ಟ್ 2023

ಪೇಡಾ..

 



ಹಂಚಿಬಿಡು ಪೇಡಾ .


ಕೋಗಿಲೆಯು ಕಪ್ಪಾದರೂ ನೋಡಾ

ಸದಾ ಹಾಡುವುದು ಸುಂದರ ಹಾಡ|

ಕೊರತೆ ನೆನದು ಕೊರಗುವುದು ಬೇಡ

ಇರುವುದ ನೆನೆದು ಹಂಚಿಬಿಡು ಪೇಡ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು 


13 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _12 ನರಗುಂದದ ಬಾಬಾ ಸಾಹೇಬ್


 

ಆಗಸ್ಟ್ ಮಾಸದ ನೆನಪುಗಳು...

ಭಾಗ _12

ನರಗುಂದದ  ಬಾಬಾ ಸಾಹೇಬ್

ಬಾಬಾ ಸಾಹೇಬ್ ಎಂದರೆ ತಟ್ಟನೆ ನಮ್ಮ ನೆನೆಪಿಗೆ ಬರುವುದು ಡಾ.ಬಿ ಆರ್ ಅಂಬೇಡ್ಕರ್. ನಮ್ಮ ನಾಡಿನ ರಾಜವಂಶದ ಕುಡಿಯೊಂದು ಅದೇ ಹೆಸರಿನಿಂದ ಪ್ರಖ್ಯಾತಿ ಪಡೆದು ಬ್ರಿಟಿಷರ ದುರಾಡಳಿತದ ವಿರುದ್ಧ ತೊಡೆ ತಟ್ಟಿ ನಿಂತು ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಜನರನ್ನು ಹೋರಾಡಲು ಪ್ರೇರಣೆ ನೀಡಿದ ಧೀರನೇ ನರಗುಂದ ಬಾಬಾ ಸಾಹೇಬ್.

ಭಾಸ್ಕರ್ ರಾವ್ ಭಾವೆ ಹುಟ್ಟುತ್ತಲೇ ಐಶಾರಾಮಿ ಜೀವನದಲ್ಲಿ ಕಳೆದರೂ ಕ್ರಮೇಣ ಜನಾನುರಾಗಿಯಾಗಿ ಬಾಬಾ ಸಾಹೇಬ್ ಎಂದು ಕರೆಯಲ್ಪಟ್ಟರು.
ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತಕ್ಷಣ ಸಂಸ್ಥಾನದ ಚಿತ್ರಣವೇ ಬದಲಾಗಲಾರಂಭಿಸಿತು.  ಆಡಳಿತವನ್ನು ಪುನರ್‍ವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ. ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ.
ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದ  ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ 1846 ರಲ್ಲಿ ಕಂಪನಿ ಸರ್ಕಾರಕ್ಕೆ ಪತ್ರ ಬರೆದು  ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್‍ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. 

ಆ ಕಾಲದಲ್ಲಿ ಲಾರ್ಡ್ ಡಾಲ್‍ಹೌಸಿಯ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆ  ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು. ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರು ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. 

ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್‍ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು.

ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ.
ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್‍ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ  ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ ಕರ್ನಲ್ ಮಾಲ್ಕಮ್  ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ. ದುರದೃಷ್ಟವಶಾತ್ ಈ ಆಜ್ಞೆ ತಲುಪುವಷ್ಟರಲ್ಲಿ ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ. ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ.

ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ. ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ದ್ವಾರವೊಂದಕ್ಕೆ ನೇತುಹಾಕಲಾಯಿತು.

ಮ್ಯಾನ್ಸನ್ನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮೊದಲಾದ ದ್ರೋಹಿಗಳ ಮೂಲಕ ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ ಗೊತ್ತಿರುವ ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ.
ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು. ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು. ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ದುರ್ಗ ತೊರೆದು ಹೋದ.

ಬೆಳಗಾವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದ. ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರನನ್ನು ನೇಣುಹಾಕಲಾಯಿತು.1858ರ  ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷರು ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡರು.  ಬಾಬಾ ಸಾಹೇಬ್ ಕ್ರಾಂತಿಯ ಕಿಚ್ಚು ನಾಡಿನಾದ್ಯಂತ ಹೊತ್ತಿತು. ಸಾವಿರಾರು ದೇಶಭಕ್ತರಿಗೆ ಅವರ ಜೀವನ ಪ್ರೇರಣೆಯಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529



12 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _11 ಕಾರ್ನಾಡ್ ಸದಾಶಿವರಾವ್ .


 

ಆಗಸ್ಟ್ ಮಾಸದ ನೆನಪುಗಳು...

ಭಾಗ _11

ಕಾರ್ನಾಡ್ ಸದಾಶಿವರಾವ್ ..

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ, ನ್ಯಾಯವಾದಿ, ಸಮಾಜಸೇವಕರಾದ ಕಾರ್ನಾಡ್ ಸದಾಶಿವರಾವ್ ರವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

1881ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ ಕಾರ್ನಾಡು ರಾಮಚಂದ್ರರಾವ್ ಮಂಗಳೂರಿನ ಪ್ರಮುಖ ವಕೀಲರು.ಅವರು ಸದ್ಗುಣಿಯೆಂದೂ ಸ್ವತಂತ್ರ ಧೋರಣೆಯುಳ್ಳ ಸತ್ಯನಿಷ್ಠರೆಂದೂ ಪ್ರಸಿದ್ಧರಾಗಿದ್ದರು. ತಾಯಿ ರಾಧಾಬಾಯಿ.
ಸದಾಶಿವರಾಯರು ಮಂಗಳೂರಿನಲಿ ಪ್ರಾರಂಭಿಕ ಶಿಕ್ಷಣ ಪಡೆದರು. ಮುಂದೆ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಪದವೀಧರರಾದರು. ಮುಂಬಯಿಯಲ್ಲಿ ನ್ಯಾಯಶಾಸ್ತ್ರ ಪದವಿ ಗಳಿಸಿ ಮಂಗಳೂರಿನಲ್ಲಿ 1906ರಲ್ಲಿ ವಕೀಲಿ  ವೃತ್ತಿಯನ್ನಾರಂಭಿಸಿದರು

ಇವರು ಬಲು ಬೇಗ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಿದರಾದರೂ ಇವರ ಮನಸ್ಸು ದೇಶದ ಉನ್ನತಿಗಾಗಿ ಸದಾ ತುಡಿಯುತ್ತಿತ್ತು. ಸ್ತ್ರೀಯರ ಪ್ರಗತಿಗಾಗಿ ಮಹಿಳಾ ಸಭಾ ಎಂಬ ಸಂಸ್ಥೆಯೊಂದನ್ನು ಪ್ರಾರಂಭಿಸಿದರು.  ಇವರ ಪತ್ನಿ ಶಾಂತಾಬಾಯಿಯವರೂ ಈ ಸಂಸ್ಥೆಯ ಆಶ್ರಯದಲ್ಲಿ ಮಹಿಳೆಯರಿಗೆ ಉಪಯುಕ್ತ ಕಸಬುಗಳನ್ನು ಹೇಳಿಕೊಡುತ್ತಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರವಾದಾಗ ಯುವಕರಿಗೆ ರಾಷ್ಟ್ರೀಯ ಶಿಕ್ಷಣವನ್ನು ನೀಡುವತ್ತ ಇವರ ಮನಸ್ಸು ಹರಿಯಿತು.  ಇವರು "ತಿಲಕ್ ವಿದ್ಯಾಲಯ"  ಎಂಬ ರಾಷ್ಟ್ರೀಯ ವಿದ್ಯಾಶಾಲೆಯನ್ನ ಆರಂಭಿಸಿದರು. ಹಿಂದಿ ಭಾಷೆಯನ್ನು ಬೋಧಿಸುವುದರ ಜೊತೆಗೆ ಅಲ್ಲಿ ನೂಲುವುದು, ನೇಯುವುದು ಮುಂತಾದ ಉಪಯುಕ್ತ ಕೈಕಸಬುಗಳನ್ನೂ ಹೇಳಿಕೊಡಲಾಗುತ್ತಿತ್ತು. 

ಗಾಂಧೀಯವರು ಸತ್ಯಾಗ್ರಹ ಚಳವಳಿಯನ್ನಾರಂಭಿಸಿದಾಗ ಕರ್ನಾಟಕದಲ್ಲಿ ಅದರ ಪ್ರತಿಜ್ಞೆಗೆ ಸಹಿಹಾಕಿದವರಲ್ಲಿ ಇವರು ಮೊದಲಿಗರು.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಸು ಬಲಗೊಂಡಿತು. ದಕ್ಷ ಹಾಗೂ ನಿಷ್ಠಾವಂತ ಸತ್ಯಾಗ್ರಹಿಗಳ ತರಬೇತಿಗಾಗಿ ಇವರು ಧಾರಾಳವಾಗಿ ಹಣ ಸುರಿದರು. ಹಲವು ವರ್ಷಗಳ ಕಾಲ ಇವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರೂ ಆಗಿದ್ದರಲ್ಲದೆ ಅದರ ಅಧ್ಯಕ್ಷರಾಗಿ   ಅಖಿಲಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿಯೂ ಗುರುತಿಸಿಕೊಂಡು ಸ್ವಾತಂತ್ರ್ಯ ಚಳುವಳಿಯ ಉತ್ತಮ ಸಂಘಟಕ ಎಂಬುದಾಗಿ ಪ್ರಶಂಸೆಗೆ ಪಾತ್ರರಾದರು.

ಮಹಾತ್ಮ ಗಾಂಧೀಯವರ ಅಚ್ಚುಮೆಚ್ಚಿನ ಅನುಯಾಯಿಗಳಲ್ಲೊಬ್ಬರಾಗಿದ್ದ ಇವರು ಗಾಂಧೀಯವರು ಆರಂಭಿಸಿದ ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ವೈಯುಕ್ತಿಕ ಸತ್ಯಾಗ್ರಹಿಯಾಗಿ ದಸ್ತಗಿರಿಯಾಗಿ ಕಾರಾಗೃಹವಾಸ ಅನುಭವಿಸಿದರು. 
ಐಶ್ವರ್ಯವಂತರ ಮನೆತನದಲ್ಲಿ ಹುಟ್ಟಿ ಬೆಳೆದವರಾದರೂ ದೀನದಲಿತರ ಬಗ್ಗೆ ಸದಾ ಅನುಕಂಪಹೊಂದಿದ್ದರು ಹಾಗೂ ಅವರ ಉದ್ಧಾರಕ್ಕಾಗಿ  ಬಹಳ ಶ್ರಮಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜಸುಧಾರಕರ ದೊಡ್ಡ ಪಡೆಯನ್ನೇ ಕಟ್ಟಿದರು. ಮಹಿಳೆಯರ ಪ್ರಗತಿಗಾಗಿಯೂ ರಾಷ್ಟ್ರೀಯ ಶಿಕ್ಷಣಕ್ಕಾಗಿಯೂ ಇವರು ಕಟ್ಟಿದ ಸಂಸ್ಥೆಗಳು ಯಶಸ್ವಿಯಾಗಿ ಕೆಲಸ ಮಾಡಿದವು. ದಲಿತೋದ್ಧಾರ ಕಾರ್ಯದಲ್ಲಿ ಇವರು ಕೊನೆಯ ವರೆಗೂ ನಿರತರಾಗಿದ್ದರು. ಇವರು ಕೆನರಾ ಸಾರಸ್ವತ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸರಳ ಜೀವಿಯಾದ  ಮಹಾತ್ಮ ಗಾಂಧೀಯವರಿಗೆ ಇವರ ಬಗ್ಗೆ  ತುಂಬ ವಿಶ್ವಾಸವಿತ್ತು. ಬೆಂಗಳೂರಿನಲ್ಲಿ ಸೇರಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅರವತ್ತೈದನೆಯ ಅಧಿವೇಶನದ  ಸ್ಥಳಕ್ಕೆ ಸದಾಶಿವನಗರ ಎಂದು ಹೆಸರಿಡಲಾಗಿತ್ತು.

1937ರಲ್ಲಿ ಫೈಜ್‍ಪುರದಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಇವರ ಆರೋಗ್ಯ ಕೆಟ್ಟಿತು. 1937 ಜನವರಿ 9ರಂದು ಇವರು ಮುಂಬಯಿಯಲ್ಲಿ ನಿಧನರಾದರು. ಕಾರ್ನಾಡ್ ಸದಾಶಿವರಾವ್ ರವರ ದೇಶಭಕ್ತಿ ಮತ್ತು ಸೇವೆಯನ್ನು ಇಂದಿನ ಪೀಳಿಗೆ ನೆನೆದು ಅಳವಡಿಸಿಕೊಂಡರೆ ಅವರ ಬದುಕು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
990925529

10 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _10 ಉಮಾಬಾಯಿ ಕುಂದಾಪುರ.


 


ಆಗಸ್ಟ್ ಮಾಸದ ನೆನಪುಗಳು...

ಭಾಗ _10

ಉಮಾಬಾಯಿ ಕುಂದಾಪುರ.

ಭಾರತದ  ಸ್ವಾತಂತ್ರ್ಯ ಹೋರಾಟಗಾರ್ತಿಯರ ಗುಂಪು ಭಗಿನೀ ಮಂಡಲದ ಸ್ಥಾಪಕಿ, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ ಹಿಂದೂಸ್ತಾನಿ ಸೇವಾದಲದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದವರು, ತನಗೆ ಬರಬಹುದಾಗಿದ್ದ ಪ್ರಶಸ್ತಿಪುರಸ್ಕಾರ, ಸರಕಾರದ ಉನ್ನತ ಹುದ್ದೆಗಳು ಎಲ್ಲವನ್ನೂ ತಿರಸ್ಕರಿಸಿದ ಅಪರೂಪದ ಮಹಿಳೆ  ಉಮಾಬಾಯಿ ಕುಂದಾಪುರ.

ಉಮಾಬಾಯಿಯವರು ಹುಟ್ಟಿದ್ದು 25ನೇ ಮಾರ್ಚ್ 1892ನೇ ಇಸವಿಯಂದು, ಕುಂದಾಪುರದ ಬ್ರಾಹ್ಮಣ ಕುಟುಂಬದಲ್ಲಿ. ಬಾಲ್ಯದ ಹೆಸರು ಭವಾನಿ ಗೋಳಿಕೇರಿ. ತಂದೆ ಗೋಳಿಕೇರಿ ಕೃಷ್ಣರಾವ್ ತಾಯಿ ತುಂಗಾಬಾಯಿ. ಐವರು ಗಂಡುಮಕ್ಕಳೂ ಸೇರಿ ಒಟ್ಟು ಆರು ಮಂದಿ ಮಕ್ಕಳು. 1898ರಲ್ಲಿ ಸಹೋದರರ ಜೊತೆಗೆ ಉಮಾಬಾಯಿಯವರೂ ಸಹ ಮುಂಬಯಿ ಮಹಾನಗರವನ್ನು ಸೇರಿಕೊಂಡರು. 1905ರಲ್ಲಿ 13ನೇ ವಯಸ್ಸಿನಲ್ಲಿ ಸಂಜೀವರಾವ್ ಕುಂದಾಪುರ್ ಅವರನ್ನು ಮದುವೆಯಾದರು.

ಆಕೆಯ ಮಾವ ಆನಂದರಾವ್ ಕುಂದಾಪುರ ಸುಧಾರಣಾವಾದಿ ಮತ್ತು ಮಹಿಳಾ ಸಬಲೀಕರಣದ ಕುರಿತಾಗಿ ಅವರಿಗೆ ಹೆಚ್ಚಿನ ಒಲವಿತ್ತು. ಅವರ ಪ್ರೋತ್ಸಾಹದ ಮೇರೆಗೆ ಉಮಾಬಾಯಿ ಮದುವೆಯ ನಂತರ ಶಿಕ್ಷಣವನ್ನು ಮುಂದುವರೆಸಿದರು. ಆನಂದರಾಯರ ಒತ್ತಾಸೆಯಂತೆ ಉಮಾಬಾಯಿ, ಪೂನಾದ ಅಣ್ಣಾಸಾಹೇಬ್ ಕಾರ್ವೆ ಶಾಲೆಯಲ್ಲಿ ಸೇರಿದರು. ಸುಮಾರು 25  ವರ್ಷ ವಯಸ್ಸಿನ ತನಕ, ಆನಂದರಾಯರು ಸೊಸೆ ಉಮಾಬಾಯಿಗೆ ವಿದ್ಯಾಭ್ಯಾಸದ ವಿಷಯದಲ್ಲಿ ಹೆಚ್ಚಿನ ಸಹಾಯ ಮಾಡಿದರೂ ತನ್ನ ದುರ್ಬಲ ಆರೋಗ್ಯದ ಕಾರಣದಿಂದಾಗಿ, ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಹೀಗಾಗಿಯೇ ಅವರ ಕಲಿಕೆ ಆರಂಭವಾಗುವಾಗ ಹೆಚ್ಚೇ ವಯಸ್ಸಾಗಿತ್ತು. ಆದರೆ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಎರಡೇ ವರ್ಷದಲ್ಲಿ ಮುಗಿಸಿದರು.
ಅಂದಿನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಪಡೆಯುವುದು ದೊಡ್ಡ ಸಾಧನೆಯೇ ಆಗಿತ್ತು. ಹೀಗಾಗಿ ಉಮಾಬಾಯಿಯವರನ್ನು ಮುಂಬೈನ ಸಾರಸ್ವತ ಮಹಿಳಾ ಸಮಾಜವು ಅವರನ್ನು ಕರೆದು ಗೌರವಿಸಿತು.  

1920 ರ ಆಗಸ್ಟ್ ಒಂದರಂದು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಮೃತರಾದರು. ತಿಲಕರ ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿಯವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಪ್ರೇರಣೆಯಾಯಿತು. ಆ ದಿನಗಳಲ್ಲಿ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಾಗಿ ಕಾಲಿಡುವವರಿಗೆ ಕಾಂಗ್ರೆಸ್ ಸಂಘಟನೆ ಮತ್ತು ಅದರ ಸ್ವಯಂಪ್ರೇರಿತ ಸೇವೆ ಅನುಕರಣೀಯವಾಗಿತ್ತು. ಇವೆಲ್ಲವನ್ನು ಗಮನಿಸಿದ ಉಮಾಬಾಯಿಯವರು ಸ್ವಇಚ್ಛೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಪಾದಾರ್ಪಣೆ ಮಾಡಿದರು.

1920ರಲ್ಲಿ  ಮಹಾತ್ಮಾ ಗಾಂಧೀಜಿಯವರು  ಕರೆ ಕೊಟ್ಟ ಅಸಹಕಾರ ಚಳುವಳಿಯಲ್ಲಿ   ಉಮಾಬಾಯಿ ರವರು ತನ್ನ ಸಹೋದರ ರಘುರಾಮರಾವ್, ಪತಿ ಸಂಜೀವರಾವ್ ಜತೆ ಸೇರಿ  ಉತ್ಸಾಹದಿಂದ ಭಾಗವಹಿಸಿದರು. ಖಾದಿಯ ಬಗ್ಗೆ ಪ್ರಚಾರ ಮಾಡಲು ಆರಂಭಿಸಿದರು. ಮನೆಮನೆಗೆ ತೆರಳಿ ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ಚಳುವಳಿಗೆ ಸಂಬಂಧಿಸಿದಂತೆ ಹಲವಾರು ನಾಟಕಗಳನ್ನು ಬರೆದು ಪ್ರದರ್ಶಿಸಿದರು.
ಉಮಾಬಾಯಿಯವರಿಗೆ 28 ವರ್ಷವಾಗಿದ್ದಾಗ  ಅವರ ಪತಿ ಅಕಾಲಿಕವಾಗಿ ಮರಣಹೊಂದಿದರು. ಗಂಡನ ಮರಣಾನಂತರ, ಉಮಾಬಾಯಿಯವರು ಮಾವನೊಂದಿಗೆ ಹುಬ್ಬಳ್ಳಿಗೆ ಹಿಂತಿರುಗಿದರು. ಆನಂದರಾವ್ ಅವರು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರೆಸ್ ಅನ್ನು ಆರಂಭಿಸಿದರು.

ಡಾ. ನಾ. ಸು. ಹರ್ಡೀಕರ್ ಅವರು ಭಾರತೀಯ ಯುವಕರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಸಲುವಾಗಿ  1923 ರಲ್ಲಿ ಹಿಂದೂಸ್ತಾನಿ ಸೇವಾ ದಳವನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು. ಉಮಾಬಾಯಿಯವರು ಈ ಸಂಘದಲ್ಲಿ ಸೇರಿಕೊಂಡರಲ್ಲದೆ, ಮಹಿಳಾ ವಿಭಾಗದ ಮುಖ್ಯಸ್ತೆಯಾಗಿಯೂ ಆಯ್ಕೆಯಾದರು. ಉಮಾಬಾಯಿಯವರು, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ್ದ ತಿಲಕ್ ಕನ್ಯಾ ಶಾಲೆಯ ಉಸ್ತುವಾರಿವಹಿಸಿಕೊಂಡರು.

1924 ರಲ್ಲಿ ಕಾಂಗ್ರೆಸ್ ಸಂಘಟನೆಯ ರಾಷ್ಟ್ರೀಯ ಸಮ್ಮೇಳನವು ಬೆಳಗಾವಿಯಲ್ಲಿ ಜರುಗಿತು. ಅಲ್ಲಿಯವರೆಗೆ ಜರುಗಿದ ಅಖಿಲ ಭಾರತ ಸಮ್ಮೇಳನದಲ್ಲಿ ಮಹಾತ್ಮಾ ಗಾಂಧಿಯವರು ಅಧ್ಯಕ್ಷರಾಗಿ ಭಾಗವಹಿಸಿದ ಏಕೈಕ ಸಮ್ಮೇಳನವಾಗಿತ್ತು ಅದು. ಹರ್ಡೀಕರ್ ಅವರ ಜೊತೆ ಅತ್ಯುತ್ಸಾಹದಿಂದ ಉಮಾಬಾಯಿಯವರು ಈ ಸಮ್ಮೇಳನದಲ್ಲಿ ಭಾಗವಹಿಸಿದರು.   ರಾಜ್ಯದಾದ್ಯಂತ ತಿರುಗಿ ಸುಮಾರು 150ಕ್ಕಿಂತ ಹೆಚ್ಚು ಮಂದಿ ಮಹಿಳೆಯರನ್ನು, ಅದರಲ್ಲೂ ಮನೆಯಲ್ಲಿ ಕುಳಿತ ವಿಧವೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಮಾಡಿದರು. ಆನಂದರಾಯರ ಮನೆ, ಮುದ್ರಣಾ ಘಟಕಗಳು ಸಂಘಟನೆಯ ಚಟುವಟಿಕೆಯ ಕೇಂದ್ರವಾಯಿತು. ಇದರಿಂದಾಗಿ ಬ್ರಿಟೀಶ್ ಸರಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಉಮಾದೇವಿಯವರು ಹಲವಾರು ರಾಷ್ಟ್ರೀಯ ನಾಯಕರ ಸಂಪರ್ಕಕ್ಕೆ ಬರಲು ಈ ಸಮ್ಮೇಳನವು ಸಹಾಯಕವಾಯಿತು.  ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆಯ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ, ಉಮಾಬಾಯಿಯವರ ಹೆಸರು ಸಾಕಷ್ಟು ಪ್ರಸಿದ್ಧಿಯಾಗಿತ್ತು. ತಾನು ಮಾಡಿದ ಕೆಲಸಕಾರ್ಯಗಳಿಂದ, ಹಲವು ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದರು ಇದನ್ನು ಬಳಸಿಕೊಂಡು ರಾಜಕೀಯ ಪ್ರವೇಶಿಸುವ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಮಾಡುವ, ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರದ ಪಿಂಚಣಿಯನ್ನು ಮತ್ತು ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ತಾಮ್ರಪತ್ರ ಪ್ರಶಸ್ತಿಯನ್ನೂ ಸ್ವೀಕರಿಸಲು ಒಪ್ಪಲಿಲ್ಲ. ಅವರು ಸಾಮಾನ್ಯ ಸ್ವಯಂಸೇವಕಿಯಾಗಿಯೇ ಇರಲು ಬಯಸಿದರು.

ಇಂತಹ ದಿಟ್ಟ ನಿಸ್ವಾರ್ಥ ಮಹಿಳಾ ಸ್ವಾತಂತ್ರ್ಯ   ಹೋರಾಟಗಾರರಾದ ಉಮಾಬಾಯಿ ರವರು 1992 ರಲ್ಲಿ ವಿಧಿವಶರಾದರು. ಈ ಆಗಸ್ಟ್ ಮಾಸದಲ್ಲಿ ಅವರ ತ್ಯಾಗ ನಿಸ್ವಾರ್ಥ ಸೇವೆಯನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.