12 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _11 ಕಾರ್ನಾಡ್ ಸದಾಶಿವರಾವ್ .


 

ಆಗಸ್ಟ್ ಮಾಸದ ನೆನಪುಗಳು...

ಭಾಗ _11

ಕಾರ್ನಾಡ್ ಸದಾಶಿವರಾವ್ ..

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ, ನ್ಯಾಯವಾದಿ, ಸಮಾಜಸೇವಕರಾದ ಕಾರ್ನಾಡ್ ಸದಾಶಿವರಾವ್ ರವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

1881ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ ಕಾರ್ನಾಡು ರಾಮಚಂದ್ರರಾವ್ ಮಂಗಳೂರಿನ ಪ್ರಮುಖ ವಕೀಲರು.ಅವರು ಸದ್ಗುಣಿಯೆಂದೂ ಸ್ವತಂತ್ರ ಧೋರಣೆಯುಳ್ಳ ಸತ್ಯನಿಷ್ಠರೆಂದೂ ಪ್ರಸಿದ್ಧರಾಗಿದ್ದರು. ತಾಯಿ ರಾಧಾಬಾಯಿ.
ಸದಾಶಿವರಾಯರು ಮಂಗಳೂರಿನಲಿ ಪ್ರಾರಂಭಿಕ ಶಿಕ್ಷಣ ಪಡೆದರು. ಮುಂದೆ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಪದವೀಧರರಾದರು. ಮುಂಬಯಿಯಲ್ಲಿ ನ್ಯಾಯಶಾಸ್ತ್ರ ಪದವಿ ಗಳಿಸಿ ಮಂಗಳೂರಿನಲ್ಲಿ 1906ರಲ್ಲಿ ವಕೀಲಿ  ವೃತ್ತಿಯನ್ನಾರಂಭಿಸಿದರು

ಇವರು ಬಲು ಬೇಗ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಿದರಾದರೂ ಇವರ ಮನಸ್ಸು ದೇಶದ ಉನ್ನತಿಗಾಗಿ ಸದಾ ತುಡಿಯುತ್ತಿತ್ತು. ಸ್ತ್ರೀಯರ ಪ್ರಗತಿಗಾಗಿ ಮಹಿಳಾ ಸಭಾ ಎಂಬ ಸಂಸ್ಥೆಯೊಂದನ್ನು ಪ್ರಾರಂಭಿಸಿದರು.  ಇವರ ಪತ್ನಿ ಶಾಂತಾಬಾಯಿಯವರೂ ಈ ಸಂಸ್ಥೆಯ ಆಶ್ರಯದಲ್ಲಿ ಮಹಿಳೆಯರಿಗೆ ಉಪಯುಕ್ತ ಕಸಬುಗಳನ್ನು ಹೇಳಿಕೊಡುತ್ತಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರವಾದಾಗ ಯುವಕರಿಗೆ ರಾಷ್ಟ್ರೀಯ ಶಿಕ್ಷಣವನ್ನು ನೀಡುವತ್ತ ಇವರ ಮನಸ್ಸು ಹರಿಯಿತು.  ಇವರು "ತಿಲಕ್ ವಿದ್ಯಾಲಯ"  ಎಂಬ ರಾಷ್ಟ್ರೀಯ ವಿದ್ಯಾಶಾಲೆಯನ್ನ ಆರಂಭಿಸಿದರು. ಹಿಂದಿ ಭಾಷೆಯನ್ನು ಬೋಧಿಸುವುದರ ಜೊತೆಗೆ ಅಲ್ಲಿ ನೂಲುವುದು, ನೇಯುವುದು ಮುಂತಾದ ಉಪಯುಕ್ತ ಕೈಕಸಬುಗಳನ್ನೂ ಹೇಳಿಕೊಡಲಾಗುತ್ತಿತ್ತು. 

ಗಾಂಧೀಯವರು ಸತ್ಯಾಗ್ರಹ ಚಳವಳಿಯನ್ನಾರಂಭಿಸಿದಾಗ ಕರ್ನಾಟಕದಲ್ಲಿ ಅದರ ಪ್ರತಿಜ್ಞೆಗೆ ಸಹಿಹಾಕಿದವರಲ್ಲಿ ಇವರು ಮೊದಲಿಗರು.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಸು ಬಲಗೊಂಡಿತು. ದಕ್ಷ ಹಾಗೂ ನಿಷ್ಠಾವಂತ ಸತ್ಯಾಗ್ರಹಿಗಳ ತರಬೇತಿಗಾಗಿ ಇವರು ಧಾರಾಳವಾಗಿ ಹಣ ಸುರಿದರು. ಹಲವು ವರ್ಷಗಳ ಕಾಲ ಇವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರೂ ಆಗಿದ್ದರಲ್ಲದೆ ಅದರ ಅಧ್ಯಕ್ಷರಾಗಿ   ಅಖಿಲಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿಯೂ ಗುರುತಿಸಿಕೊಂಡು ಸ್ವಾತಂತ್ರ್ಯ ಚಳುವಳಿಯ ಉತ್ತಮ ಸಂಘಟಕ ಎಂಬುದಾಗಿ ಪ್ರಶಂಸೆಗೆ ಪಾತ್ರರಾದರು.

ಮಹಾತ್ಮ ಗಾಂಧೀಯವರ ಅಚ್ಚುಮೆಚ್ಚಿನ ಅನುಯಾಯಿಗಳಲ್ಲೊಬ್ಬರಾಗಿದ್ದ ಇವರು ಗಾಂಧೀಯವರು ಆರಂಭಿಸಿದ ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ವೈಯುಕ್ತಿಕ ಸತ್ಯಾಗ್ರಹಿಯಾಗಿ ದಸ್ತಗಿರಿಯಾಗಿ ಕಾರಾಗೃಹವಾಸ ಅನುಭವಿಸಿದರು. 
ಐಶ್ವರ್ಯವಂತರ ಮನೆತನದಲ್ಲಿ ಹುಟ್ಟಿ ಬೆಳೆದವರಾದರೂ ದೀನದಲಿತರ ಬಗ್ಗೆ ಸದಾ ಅನುಕಂಪಹೊಂದಿದ್ದರು ಹಾಗೂ ಅವರ ಉದ್ಧಾರಕ್ಕಾಗಿ  ಬಹಳ ಶ್ರಮಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜಸುಧಾರಕರ ದೊಡ್ಡ ಪಡೆಯನ್ನೇ ಕಟ್ಟಿದರು. ಮಹಿಳೆಯರ ಪ್ರಗತಿಗಾಗಿಯೂ ರಾಷ್ಟ್ರೀಯ ಶಿಕ್ಷಣಕ್ಕಾಗಿಯೂ ಇವರು ಕಟ್ಟಿದ ಸಂಸ್ಥೆಗಳು ಯಶಸ್ವಿಯಾಗಿ ಕೆಲಸ ಮಾಡಿದವು. ದಲಿತೋದ್ಧಾರ ಕಾರ್ಯದಲ್ಲಿ ಇವರು ಕೊನೆಯ ವರೆಗೂ ನಿರತರಾಗಿದ್ದರು. ಇವರು ಕೆನರಾ ಸಾರಸ್ವತ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸರಳ ಜೀವಿಯಾದ  ಮಹಾತ್ಮ ಗಾಂಧೀಯವರಿಗೆ ಇವರ ಬಗ್ಗೆ  ತುಂಬ ವಿಶ್ವಾಸವಿತ್ತು. ಬೆಂಗಳೂರಿನಲ್ಲಿ ಸೇರಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅರವತ್ತೈದನೆಯ ಅಧಿವೇಶನದ  ಸ್ಥಳಕ್ಕೆ ಸದಾಶಿವನಗರ ಎಂದು ಹೆಸರಿಡಲಾಗಿತ್ತು.

1937ರಲ್ಲಿ ಫೈಜ್‍ಪುರದಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಇವರ ಆರೋಗ್ಯ ಕೆಟ್ಟಿತು. 1937 ಜನವರಿ 9ರಂದು ಇವರು ಮುಂಬಯಿಯಲ್ಲಿ ನಿಧನರಾದರು. ಕಾರ್ನಾಡ್ ಸದಾಶಿವರಾವ್ ರವರ ದೇಶಭಕ್ತಿ ಮತ್ತು ಸೇವೆಯನ್ನು ಇಂದಿನ ಪೀಳಿಗೆ ನೆನೆದು ಅಳವಡಿಸಿಕೊಂಡರೆ ಅವರ ಬದುಕು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
990925529

10 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _10 ಉಮಾಬಾಯಿ ಕುಂದಾಪುರ.


 


ಆಗಸ್ಟ್ ಮಾಸದ ನೆನಪುಗಳು...

ಭಾಗ _10

ಉಮಾಬಾಯಿ ಕುಂದಾಪುರ.

ಭಾರತದ  ಸ್ವಾತಂತ್ರ್ಯ ಹೋರಾಟಗಾರ್ತಿಯರ ಗುಂಪು ಭಗಿನೀ ಮಂಡಲದ ಸ್ಥಾಪಕಿ, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ ಹಿಂದೂಸ್ತಾನಿ ಸೇವಾದಲದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದವರು, ತನಗೆ ಬರಬಹುದಾಗಿದ್ದ ಪ್ರಶಸ್ತಿಪುರಸ್ಕಾರ, ಸರಕಾರದ ಉನ್ನತ ಹುದ್ದೆಗಳು ಎಲ್ಲವನ್ನೂ ತಿರಸ್ಕರಿಸಿದ ಅಪರೂಪದ ಮಹಿಳೆ  ಉಮಾಬಾಯಿ ಕುಂದಾಪುರ.

ಉಮಾಬಾಯಿಯವರು ಹುಟ್ಟಿದ್ದು 25ನೇ ಮಾರ್ಚ್ 1892ನೇ ಇಸವಿಯಂದು, ಕುಂದಾಪುರದ ಬ್ರಾಹ್ಮಣ ಕುಟುಂಬದಲ್ಲಿ. ಬಾಲ್ಯದ ಹೆಸರು ಭವಾನಿ ಗೋಳಿಕೇರಿ. ತಂದೆ ಗೋಳಿಕೇರಿ ಕೃಷ್ಣರಾವ್ ತಾಯಿ ತುಂಗಾಬಾಯಿ. ಐವರು ಗಂಡುಮಕ್ಕಳೂ ಸೇರಿ ಒಟ್ಟು ಆರು ಮಂದಿ ಮಕ್ಕಳು. 1898ರಲ್ಲಿ ಸಹೋದರರ ಜೊತೆಗೆ ಉಮಾಬಾಯಿಯವರೂ ಸಹ ಮುಂಬಯಿ ಮಹಾನಗರವನ್ನು ಸೇರಿಕೊಂಡರು. 1905ರಲ್ಲಿ 13ನೇ ವಯಸ್ಸಿನಲ್ಲಿ ಸಂಜೀವರಾವ್ ಕುಂದಾಪುರ್ ಅವರನ್ನು ಮದುವೆಯಾದರು.

ಆಕೆಯ ಮಾವ ಆನಂದರಾವ್ ಕುಂದಾಪುರ ಸುಧಾರಣಾವಾದಿ ಮತ್ತು ಮಹಿಳಾ ಸಬಲೀಕರಣದ ಕುರಿತಾಗಿ ಅವರಿಗೆ ಹೆಚ್ಚಿನ ಒಲವಿತ್ತು. ಅವರ ಪ್ರೋತ್ಸಾಹದ ಮೇರೆಗೆ ಉಮಾಬಾಯಿ ಮದುವೆಯ ನಂತರ ಶಿಕ್ಷಣವನ್ನು ಮುಂದುವರೆಸಿದರು. ಆನಂದರಾಯರ ಒತ್ತಾಸೆಯಂತೆ ಉಮಾಬಾಯಿ, ಪೂನಾದ ಅಣ್ಣಾಸಾಹೇಬ್ ಕಾರ್ವೆ ಶಾಲೆಯಲ್ಲಿ ಸೇರಿದರು. ಸುಮಾರು 25  ವರ್ಷ ವಯಸ್ಸಿನ ತನಕ, ಆನಂದರಾಯರು ಸೊಸೆ ಉಮಾಬಾಯಿಗೆ ವಿದ್ಯಾಭ್ಯಾಸದ ವಿಷಯದಲ್ಲಿ ಹೆಚ್ಚಿನ ಸಹಾಯ ಮಾಡಿದರೂ ತನ್ನ ದುರ್ಬಲ ಆರೋಗ್ಯದ ಕಾರಣದಿಂದಾಗಿ, ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಹೀಗಾಗಿಯೇ ಅವರ ಕಲಿಕೆ ಆರಂಭವಾಗುವಾಗ ಹೆಚ್ಚೇ ವಯಸ್ಸಾಗಿತ್ತು. ಆದರೆ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಎರಡೇ ವರ್ಷದಲ್ಲಿ ಮುಗಿಸಿದರು.
ಅಂದಿನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಪಡೆಯುವುದು ದೊಡ್ಡ ಸಾಧನೆಯೇ ಆಗಿತ್ತು. ಹೀಗಾಗಿ ಉಮಾಬಾಯಿಯವರನ್ನು ಮುಂಬೈನ ಸಾರಸ್ವತ ಮಹಿಳಾ ಸಮಾಜವು ಅವರನ್ನು ಕರೆದು ಗೌರವಿಸಿತು.  

1920 ರ ಆಗಸ್ಟ್ ಒಂದರಂದು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಮೃತರಾದರು. ತಿಲಕರ ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿಯವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಪ್ರೇರಣೆಯಾಯಿತು. ಆ ದಿನಗಳಲ್ಲಿ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಾಗಿ ಕಾಲಿಡುವವರಿಗೆ ಕಾಂಗ್ರೆಸ್ ಸಂಘಟನೆ ಮತ್ತು ಅದರ ಸ್ವಯಂಪ್ರೇರಿತ ಸೇವೆ ಅನುಕರಣೀಯವಾಗಿತ್ತು. ಇವೆಲ್ಲವನ್ನು ಗಮನಿಸಿದ ಉಮಾಬಾಯಿಯವರು ಸ್ವಇಚ್ಛೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಪಾದಾರ್ಪಣೆ ಮಾಡಿದರು.

1920ರಲ್ಲಿ  ಮಹಾತ್ಮಾ ಗಾಂಧೀಜಿಯವರು  ಕರೆ ಕೊಟ್ಟ ಅಸಹಕಾರ ಚಳುವಳಿಯಲ್ಲಿ   ಉಮಾಬಾಯಿ ರವರು ತನ್ನ ಸಹೋದರ ರಘುರಾಮರಾವ್, ಪತಿ ಸಂಜೀವರಾವ್ ಜತೆ ಸೇರಿ  ಉತ್ಸಾಹದಿಂದ ಭಾಗವಹಿಸಿದರು. ಖಾದಿಯ ಬಗ್ಗೆ ಪ್ರಚಾರ ಮಾಡಲು ಆರಂಭಿಸಿದರು. ಮನೆಮನೆಗೆ ತೆರಳಿ ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ಚಳುವಳಿಗೆ ಸಂಬಂಧಿಸಿದಂತೆ ಹಲವಾರು ನಾಟಕಗಳನ್ನು ಬರೆದು ಪ್ರದರ್ಶಿಸಿದರು.
ಉಮಾಬಾಯಿಯವರಿಗೆ 28 ವರ್ಷವಾಗಿದ್ದಾಗ  ಅವರ ಪತಿ ಅಕಾಲಿಕವಾಗಿ ಮರಣಹೊಂದಿದರು. ಗಂಡನ ಮರಣಾನಂತರ, ಉಮಾಬಾಯಿಯವರು ಮಾವನೊಂದಿಗೆ ಹುಬ್ಬಳ್ಳಿಗೆ ಹಿಂತಿರುಗಿದರು. ಆನಂದರಾವ್ ಅವರು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರೆಸ್ ಅನ್ನು ಆರಂಭಿಸಿದರು.

ಡಾ. ನಾ. ಸು. ಹರ್ಡೀಕರ್ ಅವರು ಭಾರತೀಯ ಯುವಕರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಸಲುವಾಗಿ  1923 ರಲ್ಲಿ ಹಿಂದೂಸ್ತಾನಿ ಸೇವಾ ದಳವನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು. ಉಮಾಬಾಯಿಯವರು ಈ ಸಂಘದಲ್ಲಿ ಸೇರಿಕೊಂಡರಲ್ಲದೆ, ಮಹಿಳಾ ವಿಭಾಗದ ಮುಖ್ಯಸ್ತೆಯಾಗಿಯೂ ಆಯ್ಕೆಯಾದರು. ಉಮಾಬಾಯಿಯವರು, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ್ದ ತಿಲಕ್ ಕನ್ಯಾ ಶಾಲೆಯ ಉಸ್ತುವಾರಿವಹಿಸಿಕೊಂಡರು.

1924 ರಲ್ಲಿ ಕಾಂಗ್ರೆಸ್ ಸಂಘಟನೆಯ ರಾಷ್ಟ್ರೀಯ ಸಮ್ಮೇಳನವು ಬೆಳಗಾವಿಯಲ್ಲಿ ಜರುಗಿತು. ಅಲ್ಲಿಯವರೆಗೆ ಜರುಗಿದ ಅಖಿಲ ಭಾರತ ಸಮ್ಮೇಳನದಲ್ಲಿ ಮಹಾತ್ಮಾ ಗಾಂಧಿಯವರು ಅಧ್ಯಕ್ಷರಾಗಿ ಭಾಗವಹಿಸಿದ ಏಕೈಕ ಸಮ್ಮೇಳನವಾಗಿತ್ತು ಅದು. ಹರ್ಡೀಕರ್ ಅವರ ಜೊತೆ ಅತ್ಯುತ್ಸಾಹದಿಂದ ಉಮಾಬಾಯಿಯವರು ಈ ಸಮ್ಮೇಳನದಲ್ಲಿ ಭಾಗವಹಿಸಿದರು.   ರಾಜ್ಯದಾದ್ಯಂತ ತಿರುಗಿ ಸುಮಾರು 150ಕ್ಕಿಂತ ಹೆಚ್ಚು ಮಂದಿ ಮಹಿಳೆಯರನ್ನು, ಅದರಲ್ಲೂ ಮನೆಯಲ್ಲಿ ಕುಳಿತ ವಿಧವೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಮಾಡಿದರು. ಆನಂದರಾಯರ ಮನೆ, ಮುದ್ರಣಾ ಘಟಕಗಳು ಸಂಘಟನೆಯ ಚಟುವಟಿಕೆಯ ಕೇಂದ್ರವಾಯಿತು. ಇದರಿಂದಾಗಿ ಬ್ರಿಟೀಶ್ ಸರಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಉಮಾದೇವಿಯವರು ಹಲವಾರು ರಾಷ್ಟ್ರೀಯ ನಾಯಕರ ಸಂಪರ್ಕಕ್ಕೆ ಬರಲು ಈ ಸಮ್ಮೇಳನವು ಸಹಾಯಕವಾಯಿತು.  ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆಯ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ, ಉಮಾಬಾಯಿಯವರ ಹೆಸರು ಸಾಕಷ್ಟು ಪ್ರಸಿದ್ಧಿಯಾಗಿತ್ತು. ತಾನು ಮಾಡಿದ ಕೆಲಸಕಾರ್ಯಗಳಿಂದ, ಹಲವು ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದರು ಇದನ್ನು ಬಳಸಿಕೊಂಡು ರಾಜಕೀಯ ಪ್ರವೇಶಿಸುವ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಮಾಡುವ, ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರದ ಪಿಂಚಣಿಯನ್ನು ಮತ್ತು ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ತಾಮ್ರಪತ್ರ ಪ್ರಶಸ್ತಿಯನ್ನೂ ಸ್ವೀಕರಿಸಲು ಒಪ್ಪಲಿಲ್ಲ. ಅವರು ಸಾಮಾನ್ಯ ಸ್ವಯಂಸೇವಕಿಯಾಗಿಯೇ ಇರಲು ಬಯಸಿದರು.

ಇಂತಹ ದಿಟ್ಟ ನಿಸ್ವಾರ್ಥ ಮಹಿಳಾ ಸ್ವಾತಂತ್ರ್ಯ   ಹೋರಾಟಗಾರರಾದ ಉಮಾಬಾಯಿ ರವರು 1992 ರಲ್ಲಿ ವಿಧಿವಶರಾದರು. ಈ ಆಗಸ್ಟ್ ಮಾಸದಲ್ಲಿ ಅವರ ತ್ಯಾಗ ನಿಸ್ವಾರ್ಥ ಸೇವೆಯನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.

09 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _9 ಕ್ವಿಟ್ ಇಂಡಿಯಾ ಚಳುವಳಿ...

 

ಆಗಸ್ಟ್ ಮಾಸದ ನೆನಪುಗಳು...

ಭಾಗ _9
ಕ್ವಿಟ್ ಇಂಡಿಯಾ ಚಳುವಳಿ...

ನೂರಾರು ವರ್ಷಗಳ ಕಾಲದ
ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ
ದೊರಕಿತು ಸರಿಯಾದ ಹಳಿ|
ಅದುವೆ ಮಾಡು ಇಲ್ಲವೇ ಮಡಿ
ಎಂಬ ಘೋಷಣೆ ಮೊಳಗಿಸಿದ
ಕ್ವಿಟ್ ಇಂಡಿಯಾ ಚಳುವಳಿ||

ಅಹಿಂಸಾ ತತ್ವಗಳನ್ನು ಪಾಲಿಸುವ ಶಾಂತಿದೂತನಿಗೆ ಸಿಟ್ಟು ಬಂದಾಗ ಏನಾಗುತ್ತದೆ ಎಂಬುದಕ್ಕೆ ಉದಾಹರಣೆ  ಕ್ವಿಟ್ ಇಂಡಿಯಾ ಚಳುವಳಿ!  ಗುಲಾಮಗಿರಿಯ ಸಂಕೋಲೆ ಬಿಡಿಸಲು  ಮೊದಲಿನಿಂದಲೂ ಶಾಂತಿಯುತ ಪ್ರತಿಭಟನೆಗಳನ್ನು ಹಮ್ಮಿಕೊಂಡು ಬ್ರಿಟಿಷರ ಗಮನ ಸೆಳೆದ ಮಹಾತ್ಮ ಗಾಂಧೀಜಿಯವರು ಆಗಸ್ಟ್ 9 ರಂದು "ಮಾಡು ಇಲ್ಲವೇ ಮಡಿ" ಕರೋ ಯಾ ಮರೋ" ಎಂದು ಘರ್ಜಿಸಿ "ಬ್ರಿಟಿಷರೆ ಭಾರತ ಬಿಟ್ಟು ತೊಲಗಿ "ಎಂಬ  ನೇರ ಸಂದೇಶ ರವಾನಿಸಿದರು. ಆ ದಿನದ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 9 ರ ದಿನವನ್ನು "ಕ್ವಿಟ್ ಇಂಡಿಯಾ ದಿನ " ವಾಗಿ ದೇಶಾದ್ಯಂತ ಆಚರಿಸುತ್ತೇವೆ.

1600 ರಲ್ಲಿ ವ್ಯಾಪಾರಕ್ಕೆ ಬಂದ ಆಂಗ್ಲರು ಕ್ರಮೇಣ ನಮ್ಮನ್ನು ಆಳಲು ಶುರು ಮಾಡಿದಾಗ ಅಲ್ಲಲ್ಲಿ ನಡೆದ ಕೆಲ  ಪ್ರತಿರೋಧಗಳು 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪ ಪಡೆದ ಬ್ರಿಟಿಷರನ್ನು ನಡುಗಿಸಿದ್ದು ಸುಳ್ಳಲ್ಲ.ಇದರಿಂದ ಪ್ರೇರಣೆಗೊಂಡ ಭಾರತೀಯರು ಅಸಹಕಾರ ಚಳವಳಿ, ಕಾನೂನು ಭಂಗ ಚಳುವಳಿಗಳನ್ನು ಸಂಘಟಿಸಿದರು. ಆದರೂ ಬಗ್ಗದ ಆಂಗ್ಲರಿಗೆ 1948 ರ ಜುಲೈ 14 ರಂದು
ಖಡಕ್ ಸಂದೇಶ ಹೊರಡಿಸಿದ ಕಾಂಗ್ರೆಸ್ ಪಕ್ಷವು ಬ್ರಿಟನ್ನಿನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಗೊತ್ತುವಳಿ ಹೊರಡಿಸಿತು. ಈ ಬೇಡಿಕೆ ನೆರವೇರದಿದ್ದರೆ, ಅಸಹಕಾರ ಚಳುವಳಿಯನ್ನು ನಡೆಸುವುದಾಗಿಯೂ ಘೋಷಿಸಲಾಯಿತು. ಆದರೆ ಪಕ್ಷದಲ್ಲಿಯೇ ಹಲವಾರು ನಾಯಕರು ಇದನ್ನು ವಿರೋಧಿಸಿದರು. ಚಕ್ರವರ್ತಿ ರಾಜಗೋಪಾಲಾಚಾರಿಯವರು ಈ ಕಾರಣದಿಂದ ಹಲವಾರು ಪ್ರಾದೇಶಿಕ ನಾಯಕರುಗಳೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದರು. ಜವಾಹರಲಾಲ್ ನೆಹರು ಮತ್ತು ಮೌಲಾನಾ ಆಜಾದ್ ಈ ಗೊತ್ತುವಳಿಯನ್ನು ಟೀಕಿಸದರೂ ಕೂಡ ತಮ್ಮ ಬೆಂಬಲ ಸೂಚಿಸಿ ಗಾಂಧೀಜಿಯ ನಾಯಕತ್ವದಲ್ಲಿ ವಿಶ್ವಾಸ ಸೂಚಿಸಿದರು. ಸರ್ದಾರ್ ಪಟೇಲ್ ಮತ್ತು ಡಾ. ರಾಜೇಂದ್ರ ಪ್ರಸಾದ್ ಈ ನಿಲುವಳಿಯನ್ನು ಬಹಿರಂಗವಾಗಿ ಬೆಂಬಲಿಸಿದರು.

ಆದರೆ ಬೇರೆ ಪಕ್ಷಗಳು ಇದಕ್ಕೆ ಸಹಮತ ಸೂಚಿಸಲಿಲ್ಲ. ಭಾರತೀಯ ಕಮ್ಯೂನಿಸ್ಟ್ ಪಕ್ಷ ಮತ್ತು ಹಿಂದೂ ಮಹಾಸಭಾ ಇದನ್ನು ವಿರೋಧಿಸಿದವು. ಮೊಹಮ್ಮದ್ ಅಲಿ ಜಿನ್ನಾರ ವಿರೋಧದ ಕಾರಣ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಬ್ರಿಟಿಷರ ಪರವಾಗಿ ನಿಂತರು. ಇದರಿಂದ ಮುಸ್ಲಿಂ ಲೀಗ್ ಪಕ್ಷಕ್ಕೆ ಪ್ರಾಂತೀಯ ಸರ್ಕಾರಗಳಲ್ಲಿ ಅಧಿಕಾರ ದೊರೆಯಿತು.

  1942ರ  ಆಗಸ್ಟ್ 8   ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಂಬಯಿ ಅಧಿವೇಶನದಲ್ಲಿ ಭಾರತ ಬಿಟ್ಟು ತೊಲಗಿ  ಎಂಬ ಗೊತ್ತುವಳಿಯನ್ನು ಹೊರಡಿಸಲಾಯಿತು. ಗಾಂಧೀಜಿಯವರು ಮುಂಬಯಿಯ ಗೊವಾಲಿಯ ಮೈದಾನದಲ್ಲಿ ಭಾರತೀಯರಿಗೆ ಅಹಿಂಸಾತ್ಮಕ ಅಸಹಾಕಾರ ಮಾಡುವಂತೆ ಕರೆ ಕೊಟ್ಟರು. ಜನರಿಗೆ ಬ್ರಿಟಿಷ್ ಸರ್ಕಾರವನ್ನು ಅನುಸರಿಸದೇ ಸ್ವತಂತ್ರರಾಗಿ ಬಾಳುವುದಕ್ಕೆ ಕರೆಕೊಟ್ಟರು. ಗಾಂಧೀಜಿಯವರ ಈ ಕರೆಗೆ ಭಾರತೀಯರು ಬೃಹತ್ ಸಂಖ್ಯೆಯಲ್ಲಿ ಓಗೊಟ್ಟರು. ಬೆಂಬಲ ಸೂಚಿಸಿದವರಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ತತ್ವದ ವಿರೋಧಿಗಳಾದ ಕ್ರಾಂತಿಕಾರಿಗಳೂ ಸೇರಿದ್ದರು.  

ಬ್ರಿಟಿಷರು ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿಯವರನ್ನು ಬಂಧಿಸಿದರು. ಕಾಂಗ್ರೆಸ್ಸಿನ ಎಲ್ಲ ರಾಷ್ಟ್ರೀಯ ನಾಯಕರನ್ನೂ ಬಂಧಿಸಲಾಯಿತು. ನಂತರ ಕಾಂಗ್ರೆಸ್ ಪಕ್ಷವನ್ನು ನಿಷೇಧಿಸಲಾಯಿತು. ಇದರಿಂದ ಜನರಲ್ಲಿ ವಿರೋಧಿ ಭಾವನೆ ಇನ್ನೂ ಹೆಚ್ಚಾಯಿತು.  ಪಕ್ಷ ನಾಯಕತ್ವದ ಅಭಾವದ ಹೊರತಾಗಿಯೂ ಬೃಹತ್ ಪ್ರಮಾಣದಲ್ಲಿ ವಿರೋಧಿ ಪ್ರದರ್ಶನ ಮತ್ತು ಧರಣಿಗಳು ನಡೆದವು. ಆದರೆ ಎಲ್ಲ ವಿರೋಧಗಳು ಅಹಿಂಸಾತ್ಮಕವಾಗೇನೂ ಉಳಿಯಲಿಲ್ಲ. ಬಾಂಬುಗಳನ್ನು ಸ್ಫೋಟಿಸಲಾಯಿತು, ಸರ್ಕಾರೀ ಕಟ್ಟಡಗಳನ್ನು ಸುಡಲಾಯಿತು, ವಿದ್ಯುತ್ತನ್ನು ನಿಲ್ಲಿಸಲಾಯಿತು, ಮತ್ತು ಸಾರಿಗೆ ಮತ್ತು ಸಂಪರ್ಕಗಳನ್ನು ಸ್ಥಗಿತಗೊಳಿಸಲಾಯಿತು.

ಆದರೆ ಬ್ರಿಟಿಷರು ತ್ವರಿತವಾಗಿ ಪ್ರದರ್ಶನಕಾರರನ್ನು ಬಂಧಿಸಿದರು. ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಲಾಯಿತು, ಬೃಹತ್ ಪ್ರಮಾಣದಲ್ಲಿ ದಂಡಗಳನ್ನು ವಿಧಿಸಲಾಯಿತು, ಬಾಂಬುಗಳನ್ನು ವಿರೋಧಿಗಳ ಮೇಲೆ ಬಳಸಲಾಯಿತು, ಮತ್ತು ಪ್ರದರ್ಶನಾಕಾರರನ್ನು ಸಾರ್ವಜನಿಕವಾಗಿ ದಂಡಿಸಲಾಯಿತು. ಬಹಳಷ್ಟು ರಾಷ್ಟ್ರೀಯ ನಾಯಕರು ಭೂಗತರಾಗಿ ರೇಡಿಯೋ ಸ್ಟೇಷನ್ ಗಳಿಂದ ಜನರಿಗೆ ಸಂದೇಶ ಕೊಡುತ್ತಿದ್ದರು. ಬ್ರಿಟಿಷರು ಇದರಿಂದ ಎಷ್ಟು ಕಂಗಾಲಾಗಿದ್ದರೆಂದರೆ, ಗಾಂಧೀಜಿ ಮತ್ತು ಇತರ ನಾಯಕರನ್ನು ಬಂಧಿಸಿ ದಕ್ಷಿಣ ಆಫ್ರಿಕಾ ಅಥವಾ ಯೆಮೆನ್ ದೇಶಕ್ಕೆ ಕೊಂಡೊಯ್ಯಲು ಯುದ್ಧನೌಕೆಯನ್ನು ಕರೆಸುವ ಏರ್ಪಾಡು ಮಾಡಲಾಯಿತು. ಆದರೆ ಇದರಿಂದ ಸಂಘರ್ಷಣೆ ಇನ್ನೂ ತೀವ್ರವಾಗುವುದೆಂಬ ಭಯದಿಂದ ಹೀಗೆ ಮಾಡದಿರಲು ನಿರ್ಧಾರ ಮಾಡಲಾಯಿತು. 

ಕಾಂಗ್ರೆಸ್ ಪಕ್ಷದ ನಾಯಕರು ಇಡೀ ಪ್ರಪಂಚದಿಂದ ಮೂರು ವರ್ಷಗಳ ಕಾಲ ಸಂಪರ್ಕ ಕಳೆದುಕೊಂಡರು. ಗಾಂಧೀಜಿಯವರ ಪತ್ನಿ ಕಸ್ತೂರ್ ಬಾ ಗಾಂಧಿ ಮತ್ತು ಕಾರ್ಯದರ್ಶಿ ಮಹಾದೇವ ದೇಸಾಯಿ ಮರಣದ ನಂತರ ಗಾಂಧಿಯವರ ಆರೋಗ್ಯ ಹದಗೆಟ್ಟಿತು. ಇದರ ಹೊರತಾಗಿಯೂ, ಮಹಾತ್ಮಾ ಗಾಂಧಿಯವರು 21 ದಿನಗಳ ಉಪವಾಸವನ್ನು ಕೈಗೊಂಡು ಚಳುವಳಿಯನ್ನು ಮುಂದುವರೆಸಿದರು ಅವರ ಆರೋಗ್ಯ ಇನ್ನೂ ಹದಗೆಟ್ಟ ಕಾರಣ ಬ್ರಿಟಿಷರು ಗಾಂಧಿಯವರನ್ನು ಬಿಡುಗಡೆಗೊಳಿಸಿದರೂ ಕೂಡ, ಅವರು ಕಾಂಗ್ರೆಸ್ ನಾಯಕರ ಬಿಡುಗಡೆಗೆ ಒತ್ತಾಯಿಸಿ ಧರಣಿಯನ್ನು ಮುಂದುವರೆಸಿದರು.

ಕೆಲವು ಚರಿತ್ರೆಕಾರರ ಪ್ರಕಾರ ಈ ಚಳುವಳಿಗೆ ಸೋಲುಂಟಾಯಿತು. ಕಾಂಗ್ರೆಸ್ ಪಕ್ಷವೂ ಕೂಡ ಆಗ ಇದೇ ನಿಲುವನ್ನು ಹೊಂದಿತ್ತು. ಸರ್ಕಾರದ ಕಾರ್ಯವನ್ನು ನಿಲ್ಲಿಸುವ ಇರಾದೆಯಲ್ಲಿ ಸೋಲುಂಟಾದರೂ, ಸರ್ಕಾರಕ್ಕೆ ಇದರಿಂದ ಸಾಕಷ್ಟು ಮುಜುಗರ ಮತ್ತು ಆತಂಕ ಉಂಟಾದವು. ಶೀಘ್ರವಾಗಿ ಸ್ವಾತಂತ್ರ್ಯ ಪಡೆಯುವುದರಲ್ಲಿ ಇದು ವಿಫಲವಾಯಿತು. ಆರಂಭದ ಐದು ತಿಂಗಳಲ್ಲಿಯೇ ಬಹುತೇಕವಾಗಿ ಸ್ತಬ್ಧವಾಯಿತು. ಇದಕ್ಕಿದ್ದ ಒಂದೇ ಕಾರಣವೆಂದರೆ ಸರ್ಕಾರದ ಪರವಾಗಿ ಸೇನೆಗಿದ್ದ ಸ್ವಾಮಿತ್ವ. ಬ್ರಿಟಿಷ್ ಪ್ರಧಾನಮಂತ್ರಿ ಕ್ಲೆಮೆಂಟ್ ಅಟ್ಲೀ ಪ್ರಕಾರ ಈ ಚಳುವಳಿಯ ಕಾಣಿಕೆ ಅತೀ ಕಡಿಮೆಯದ್ದಾಗಿತ್ತು. ಆದರೆ ಭಾರತೀಯ ವಾಯುಪಡೆಯ ಅತೃಪ್ತಿಯನ್ನು ಮುಖ್ಯವಾಗಿ ಉದಾಹರಿಸುತ್ತಾರೆ.

ರಾಷ್ಟ್ರೀಯ ಮಟ್ಟದಲ್ಲಿ ಚಳುವಳಿಗೆ ಯಶಸ್ಸು   ಸಿಗದಿದ್ದರೂ ಸತಾರಾ, ತಲಚೇರ್, ಮತ್ತು ಮಿಡ್ನಾಪುರಗಳಲ್ಲಿ ಬಹು ಯಶಸ್ವಿಯಾಯಿತು. ಮಿಡ್ನಾಪುರದಲ್ಲಿ ಜನರು ಪರ್ಯಾಯ ಸರ್ಕಾರವನ್ನೂ ಸ್ಥಾಪಿಸಿದರು. ನಂತರ ಗಾಂಧೀಜಿಯ ಕರೆಗೆ ಓಗೊಟ್ಟು ಇದನ್ನು ಬಿಟ್ಟುಕೊಟ್ಟರು.

ಕಲ್ಕತ್ತಾ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಪಿ.ವಿ. ಚಕ್ರಬರ್ತಿಯವರ ಒಂದು ಲೇಖನದ ಪ್ರಕಾರ, "ನಾನು ಪಶ್ಚಿಮ ಬಂಗಾಳದ ರಾಜ್ಯಪಾಲನಾಗಿ 1956ರಲ್ಲಿ ನಿಯುಕ್ತನಾಗಿದ್ದಾಗ ಕ್ಲೆಮೆಂಟ್ ಅಟ್ಲೀಯವರನ್ನು ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಪ್ರಮುಖ ಕಾರಣವೇನೆಂದು ಕೇಳಿದಾಗ ದೊರೆತ ಉತ್ತರ: 'ಭಾರತ ಬಿಟ್ಟು ತೊಲಗಿ ಚಳುವಳಿ' ಎಂಬ ಉತ್ತರ ಬಂದಿದ್ದು ಈ ಚಳುವಳಿಯ ಯಶಸ್ಸು ತೋರಿಸುತ್ತದೆ"

ಭಾರತದ ಸ್ವಾತಂತ್ರ್ಯದ ನಿಜವಾದ ಕಾರಣ ಭಾರತೀಯರ ವಿರೋಧವೇ ಅಥವಾ ಸೈನಿಕರ ಬಂಡಾಯವೇ ಎಂಬುದು ವಿವಾದಾತ್ಮಕವಾಗಿದ್ದರೂ ನಿಸ್ಸಂಶಯವಾಗಿ ಹೇಳಬಹುದಾದ ಸಂಗತಿಯೆಂದರೆ ಲಕ್ಷಾಂತರ ಜನರು ಪ್ರೇರಿತರಾಗಿ ಸ್ವಾತಂತ್ರಕ್ಕಾಗಿ  ಹೋರಾಡಿದರೆಂಬುದು. ಬ್ರಿಟಿಷರ ಪ್ರತಿಯೊಂದು ನಡೆಯೂ ಇದನ್ನು ಮತ್ತಷ್ಟು ಪ್ರೇರೇಪಿಸಿತು.  ಸುಭಾಷ್ ಚಂದ್ರ ಬೋಸ್ ರ ಭಾರತೀಯ ರಾಷ್ಟ್ರೀಯ ಸೇನೆ ಮತ್ತು ಮುಂಬಯಿ ದಂಗೆ ಬ್ರಿಟಿಷ್ ಆಡಳಿತದ ಬುಡವನ್ನು ಅಲುಗಾಡಿಸಿದವು.  1946ರ ವೇಳೆಗೆ ಎಲ್ಲ ಬಂಧಿತ ರಾಜಕೀಯ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟಕೊಡುವ   ಬಗ್ಗೆ ಸಾರ್ವಜನಿಕವಾಗಿ ಮಾತುಕತೆಗಳು ನಡೆದವು. 1947 ರ ಆಗಸ್ಟ್‌ 15 ರಂದು ಭಾರತವನ್ನು ಸ್ವತಂತ್ರ ದೇಶವೆಂದು ಘೋಷಿಸಲಾಯಿತು.

ಒಂದು ಹೊಸ ಯುವ ಪೀಳಿಗೆಯು ಗಾಂಧೀಜಿಯವರ ಕರೆಗೆ ಓಗೊಟ್ಟಿತ್ತು. ಈ ಚಳುವಳಿಯಲ್ಲಿ ಹೋರಾಡಿದ ಭಾರತೀಯರು ಸ್ವತಂತ್ರ ಭಾರತದ ಪ್ರಥಮ ಪೀಳಿಗೆಯವರಾಗಿ ವಸಾಹತುಶಾಹಿ ಕಾಲದ ನಂತರ ಪ್ರಪಂಚದ ಅತಿ ಗಟ್ಟಿಯಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಇದನ್ನು ಮಾನವಕುಲದ ದೂರದರ್ಶಿತ್ವದ ಮಹತ್ತರ ಉದಾಹರಣೆಯೆಂದು ಹೇಳಬಹುದು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.


ಸಿಹಿಜೀವಿಯ ಹಾಯ್ಕುಗಳು...

 


ಸಿಹಿಜೀವಿಯ ಹಾಯ್ಕುಗಳು..



ಅರ್ಥ ಮಾಡಿಕೋ 

ಕೌತುಕವು ಈ ಜಗ 

ಸರ್ವವೂ ಭಿನ್ನ .


ಅಜ್ಞಾನ ತೊರೆ 

ಕೌಶಲಗಳ  ಪಡೆ 

ಜೀವನ ಧನ್ಯ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

08 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _8 ಲಾಲಾ ಲಜಪತ ರಾಯ್...


 

ಆಗಸ್ಟ್ ಮಾಸದ ನೆನಪುಗಳು...

ಭಾಗ _8

ಲಾಲಾ ಲಜಪತ ರಾಯ್...

ಲಾಲ್ ಬಾಲ್ ಪಾಲ್ ತ್ರಿಮೂರ್ತಿಗಳು ಆಂಗ್ಲರ ನಿದ್ದೆಗೆಡಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು. ಈ ತ್ರಿಮೂರ್ತಿಗಳಲ್ಲಿ ಒಬ್ಬರು ಬ್ರಿಟಿಷರ ದುರಾಡಳಿತ ವಿರುದ್ಧವಾಗಿ ಸ್ವಾತಂತ್ರ್ಯ ಪಡೆಯುವ ಅದಮ್ಯ ಬಯಕೆಯೊಂದಿಗೆ  ಹೋರಾಟ ಮಾಡುವಾಗ ಬ್ರಿಟಿಷ್ ಅಧಿಕಾರಿಯ   ಲಾಟಿ ಏಟಿನಿಂದ  ಅಸುನೀಗಿದರು. ಆ  ಹಾನ್ ಚೇತನವೇ  ಲಾಲಾ ಲಜಪತ ರಾಯ್. 

ಲಾಲಾ ಲಜಪತ ರಾಯ್ ಅವರು ಪಂಜಾಬಿನ ಮೋಗಾ ಜಿಲ್ಲೆಗೆ ಸೇರಿದ ಧುಡಿಕೆ ಎಂಬ ಗ್ರಾಮದಲ್ಲಿ ಜನವರಿ 28, 1865ರಲ್ಲಿ  ಜನಿಸಿದರು. ‘ಲಾಲಾ’ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ಮನೆತನದಿಂದ ಬಂದವರಿಗೆ ಸಲ್ಲುತ್ತಿದ್ದ ಗೌರವಯುತ ಸಂಬೋಧನೆ. ರಾಯ್ ಅವರ ಪ್ರಾರಂಭಿಕ ಶಿಕ್ಷಣ ಪ್ರಸಕ್ತದಲ್ಲಿ ಹರ್ಯಾಣದಲ್ಲಿರುವ ರೆವಾರಿ ಎಂಬ ಊರಿನಲ್ಲಾಯಿತು. ಲಜಪತ ರಾಯ್ ಅವರ ತಂದೆ ರಾಧಾ ಕೃಷ್ಣನ್ ಅವರು ಅಂದಿನ ದಿನಗಳಲ್ಲಿ ಉರ್ದು ಶಿಕ್ಷಕರಾಗಿದ್ದರು.
ಹಿಂದೂ ಧರ್ಮ ಮತ್ತು ಮನುಸ್ಮೃತಿಗಳಿಂದ ತೀವ್ರ ಪ್ರಭಾವಿತರಾದ ಲಾಲಾ ಲಜಪತ ರಾಯ್ ಅವರು ರಾಜಕೀಯ ಹೋರಾಟ ಮತ್ತು ಬರವಣಿಗೆಗಳ ಕಡೆಗೆ ಅಪಾರ ಒಲವು ಬೆಳೆಸಿಕೊಂಡರು. ಹಿಂದೂ ಮಹಾಸಭಾದ ಕಾರ್ಯಕರ್ತರಾಗಿದ್ದ ಅವರು, ಹಿಂದೂ ಧರ್ಮದಲ್ಲಿ ಶಾಂತಿಯುತ ಹೋರಾಟಕ್ಕೆ ಮಹತ್ವವಿದೆ ಎಂದು ನಂಬಿದ್ದರು. ಇದೇ ಆಧಾರದ ಮೇಲೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಶಾಂತಿಯುತ ಚಳುವಳಿಗಳನ್ನು ಆಯೋಜಿಸತೊಡಗಿದರು.

ಆರ್ಯ ಸಮಾಜದಲ್ಲಿ ನಿಷ್ಠೆ ಹೊಂದಿದ್ದ ಅವರು ತಾವು ವಿದ್ಯಾರ್ಥಿಯಾಗಿದ್ದಾಗ  ‘ಆರ್ಯ ಗೆಜೆಟ್’ನ ಸಂಪಾದಕರಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಮೇಲೆ ಅವರು ಪಂಜಾಬಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಇದರಿಂದಾಗಿ ಬ್ರಿಟಿಷ್ ಆಡಳಿತ ಅವರನ್ನು ಬರ್ಮಾದ ಮಂಡಾಲೈ ಎಂಬಲ್ಲಿಗೆ ಗಡೀಪಾರು ಮಾಡಿತ್ತು. ಕೆಲವು ತಿಂಗಳ ನಂತರದಲ್ಲಿ ಲಾರ್ಡ್ ಮಿಂಟೋ ಅವರಿಗೆ ಲಾಲಾ ಲಜಪತ ರಾಯ್ ಅವರ ವಿರುದ್ಧ ಇರುವ ಆರೋಪಗಳಿಗೆ ಸರಿಯಾದ ಸಾಕ್ಷಾಧಾರಗಳಿಲ್ಲ ಎನಿಸಿ ಭಾರತಕ್ಕೆ ಹಿಂದಿರುಗಲು ಪರವಾನಗಿ ನೀಡಿದರು. 

1907ರಲ್ಲಿ ಅಮೆರಿಕಕ್ಕೆ ತೆರಳಿದ್ದ ಲಾಲಾ ಲಜಪತ್ ರಾಯ್ ಅವರು 1919ರಲ್ಲಿ ಭಾರತಕ್ಕೆ ಹಿಂದಿರುಗಿದರು. ಅವರು ರಚಿಸಿರುವ ಪ್ರವಾಸಿ ಕಥನದಲ್ಲಿ ಪ್ರಸಿದ್ಧ ಬರಹಗಾರರಾದ ಡಬ್ಲ್ಯೂ. ಇ. ಬಿ. ಡುಬೋಯಿಸ್ ಮತ್ತು ಫ್ರೆಡ್ರಿಕ್ ಡೌಗ್ಲಾಸ್ ಮುಂತಾದವರ ಅನೇಕ ಉಕ್ತಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ. ಲಜಪತ ರಾಯ್ ಅವರು ಲಾಹೋರಿನಲ್ಲಿ ಬ್ರಿಟಿಷ್ ವಿದ್ಯಾಸಂಸ್ಥೆಗಳಿಗೆ ಪರ್ಯಾಯವಾಗಿ ನ್ಯಾಷನಲ್ ಕಾಲೇಜು  ಪ್ರಾರಂಭಿಸಿದಾಗ ಅದರಲ್ಲಿ ಭಗತ್ ಸಿಂಗ್ ಅವರೂ ವಿದಾರ್ಥಿಯಾಗಿದ್ದರು.  1920ರಲ್ಲಿ  ಕಲ್ಕತ್ತಾದಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಲಾಲಾ ಲಜಪತ ರಾಯ್ ಆ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಅನುಸಾರವಾಗಿ ಅಸಹಕಾರ ಚಳುವಳಿಯನ್ನು ಕೈಗೊಂಡಾಗ 1921ರಿಂದ 1923ರ ಅವಧಿಯವರೆಗೆ ಅವರು ಕಾರಾಗೃಹ ವಾಸವನ್ನು ಅನುಭವಿಸಿದರು. ಬಿಡುಗಡೆಯಾದ ಸಂದರ್ಭದಲ್ಲಿ ಅವರು ಲೆಜಿಸ್ಲೇಟಿವ್ ಅಸೆಂಬ್ಲಿಗೆ ಚುನಾಯಿತರಾದರು. ಪಂಜಾಬಿನ ವಿಭಜನೆಗೆ ಅವರು ಮಾತುಕತೆಗಳನ್ನು ಆಯೋಜಿಸಿದರು. ಈ ಕುರಿತು ಅವರು 1924ರ ವರ್ಷದಲ್ಲಿ ‘ದಿ ಟ್ರಿಬ್ಯೂನ್ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯನ್ನು ಆಧರಿಸಿ ಪಂಜಾಬನ್ನು ಪೂರ್ವ ಮತ್ತು ಪಶ್ಚಿಮ ಪಂಜಾಬುಗಳಾಗಿ ವಿಂಗಡಿಸಬೇಕೆಂಬ ವಾದವನ್ನು ಮಂಡಿಸಿದರು. ಅದೇ ರೀತಿಯಲ್ಲಿ ಅವರು ವಾಯವ್ಯ ಸೀಮಾ ಪ್ರದೇಶ, ಸಿಂದ್ ಮತ್ತು ಪೂರ್ವ ಬಂಗಾಳಗಳಲ್ಲಿ ಮುಸ್ಲಿಂ ರಾಜ್ಯಗಳನ್ನು ಪ್ರತ್ಯೇಕಿಸಬೇಕೆಂದು ಪ್ರತಿಪಾದಿಸಿದ್ದರು.

1928ರಲ್ಲಿ  ಭಾರತದಲ್ಲಿನ ಪರಿಸ್ಥಿತಿಯನ್ನು ವರದಿ ಮಾಡಲು ನಿಯೋಜನೆಗೊಂಡಿದ್ದ  ಸರ್ ಜಾನ್ ಸೈಮನ್ ನೇತೃತ್ವದ ಆಯೋಗದಲ್ಲಿ ಒಬ್ಬರೇ ಒಬ್ಬರೂ ಭಾರತೀಯ ಪ್ರತಿನಿಧಿಗಳು ಇರಲಿಲ್ಲ ಎಂಬ ನಿಟ್ಟಿನಲ್ಲಿ ಭಾರತೀಯ ಸಂಘಟನೆಗಳು ಅದನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಂಡು ದೇಶದಾದ್ಯಂತ ಚಳುವಳಿಯನ್ನು ನಡೆಸಿದವು. ಅಕ್ಟೋಬರ್ 30, 1928ರಂದು ಸೈಮನ್ ಆಯೋಗವು ಲಾಹೋರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಲಾಲಾ ಲಜಪತರಾಯ್ ಅವರು ಶಾಂತಿಯುತ ಮೆರವಣಿಗೆಯ ನೇತೃತ್ವ ವಹಿಸಿದರು. ಆ ಸಂದರ್ಭದಲ್ಲಿ ಪೋಲಿಸ್ ಸೂಪರಿಂಟೆಂಡೆಂಟ್ ಜೇಮ್ಸ್ ಎ. ಸ್ಕಾಟ್ ಎಂಬ ದುರಹಂಕಾರಿಯು ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡುವ ಆದೇಶವಿತ್ತದ್ದೇ ಅಲ್ಲದೆ ಲಾಲಾ ಲಜಪತ ರಾಯ್ ಅವರ ಮೇಲೆ ಸ್ವಯಂ ಆಕ್ರಮಣ ನಡೆಸಿ ಅವರು ತೀವ್ರವಾಗಿ ಗಾಯಗೊಳ್ಳುವುದಕ್ಕೆ ಕಾರಣನಾದನು. ಈ ತೀವ್ರ ಪೆಟ್ಟುಗಳಿಂದ ಹೊರಬರಲಾಗದ ಲಾಲಾ ಲಜಪತ ರಾಯ್ ಅವರು ನವೆಂಬರ್ 17, 1928ರಂದು ಹೃದಯಾಘಾತದಿಂದ ನಿಧನರಾದರು. ಸ್ಕಾಟನ ಈ ದುಷ್ಕೃತ್ಯ ಮಹಾನ್ ದೇಶಭಕ್ತ, ವಿದ್ವಾಂಸ, ಅಹಿಂಸಾ ಪ್ರವೃತ್ತಿಯ ಶಾಂತಿದೂತರೆನಿಸಿದ್ದ ಲಾಲಾ ಲಜಪತ ರಾಯ್ ಅವರ ಮರಣಕ್ಕೆ ಕಾರಣವಾಯಿತು. ಇದರಿಂದ ತೀವ್ರವಾಗಿ ನೊಂದ ಭಗತ್ ಸಿಂಗ್, ರಾಜ ಗುರು, ಸುಖದೇವ್ ಥಾಪರ್, ಚಂದ್ರಶೇಖರ್ ಆಜಾದ್ ಅಂತಹ ವೀರರು ತೀವ್ರ ಹೋರಾಟಕ್ಕಿಳಿದು ರಾಷ್ಟ್ರ ಸ್ವಾತಂತ್ರ್ಯ ಪಡೆಯಲು ಕಾರಣವಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529