02 ಆಗಸ್ಟ್ 2023

ಹಾಯ್ಕುಗಳು..

 ಸ್ಪರ್ಧೆಗೆ...


*ಹಾಯ್ಕುಗಳು*



ನೀನು ಮಾನವ

ಕೃತಜ್ಞತೆಯಿರಲಿ 

ಜೀವಿಗಳಿಗೆ 



ಪರಿಸರಕೆ 

ಕೃತಘ್ನನಾಗಬೇಡ 

ನೀನಳಿಯುವೆ 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

01 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು....ಖುದಿರಾಮ್ ಬೋಸ್..



ಆಗಸ್ಟ್ ಮಾಸದ ನೆನಪುಗಳು...

೨ ಖುದಿರಾಮ್ ಬೋಸ್...

  ಟೀನೇಜ್ ನಲ್ಲಿ ಹುಡುಗರು ತಮ್ಮದೇ ಲೋಕದಲ್ಲಿ ಮುಳುಗಿ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹಾತೊರೆಯುತ್ತಾರೆ. ಇದಕ್ಕೆ ವಿರುದ್ಧವಾಗಿ ಹದಿನೆಂಟರ ಹರೆಯದಲ್ಲೇ ಬ್ರಿಟಿಷರ ವಿರುದ್ಧ ಕ್ರಾಂತಿಯ  ಕಿಡಿಯೆಬ್ಬಿಸಿ  ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡ  ಮಹಾನ್ ಚೇತನವೇ ಖುದಿರಾಮ್ ಬೋಸ್.

1889 ರ  ಡಿಸೆಂಬರ್ ಮೂರರಂದು ಮಿಡ್ನಾಪುರ ಜಿಲ್ಲೆಯ ಅಬೀಬ್ ಪುರದಲ್ಲಿ  ಜನ್ಮತಾಳಿದ ಖುದಿರಾಮ್ ಬೋಸ್ ರವರು  ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಅವರ ಅಕ್ಕ ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಂಡರು. ಬಂಕಿಮಚಂದ್ರರು ಬರೆದ ‘ಆನಂದ ಮಠ’ ಮತ್ತು ‘ಆನಂದದಾತ’ ಕಾದಂಬರಿಗಳೂ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದವು. `ವಂದೇ ಮಾತರಂ’ ಗೀತೆಯಂತೂ ಇವರ ನರನಾಡಿಗಳಲ್ಲಿ ದೇಶ ಭಕ್ತಿ ಉಕ್ಕಿ ಹರಿಯುವಂತೆ ಮಾಡಿತ್ತು. ಹೀಗಾಗಿ ಸುಮಾರು ಹದಿನೈದರ ಹರೆಯದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡ ಬೋಸ್ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟುಕೊಂಡುದೇ ಅಲ್ಲದೇ ಅದರ ಪ್ರಚಾರ ಕಾರ್ಯಕ್ಕೆ ತೊಡಗಿ ಕರಪತ್ರಗಳನ್ನು ಹಂಚುತ್ತಿದ್ದಾಗ ಸಿಕ್ಕಿಬಿದ್ದು ಪುನಃ ಬಿಡುಗಡೆಗೊಂಡರು.

 ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆದ್ದ ಕಾಲವದು. ಇದಕ್ಕೆ ಹಲವಾರು ಪತ್ರಿಕೆಗಳು ಕುಮ್ಮಕ್ಕು ನೀಡುತ್ತಿದ್ದವು. ಹೀಗಾಗಿ ಬ್ರಿಟಿಷರ ವಿರುದ್ಧವಾಗಿ ಬರೆದ ಪತ್ರಿಕೆಗಳ ಮೇಲೆ ಮೊಕದ್ದಮೆ ಹೂಡಲಾಗುತ್ತಿತ್ತು. ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ‘ವಂದೇ ಮಾತರಂ’ ಪತ್ರಿಕೆಯೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡನು ಆ ಯುವಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿ ಮೆರೆದನು.

ಸುಶೀಲ್ ಕುಮಾರರೇನೋ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿದರು. ಆದರೆ ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನನ್ನು ಮುಗಿಸಲು ತೀರ್ಮಾನಿಸಿದರು. ಇದರ ಸುಳಿವು ಹತ್ತಿದ ಬ್ರಿಟಿಷ್ ಸರ್ಕಾರ ಕಿಂಗ್ಸ್ ಫೋರ್ಡನನ್ನು ಮುಜಾಫರಪುರಕ್ಕೆ ವರ್ಗ ಮಾಡಿತು.

ಹೇಗಾದರಾಗಲಿ ಕಿಂಗ್ಸ್ ಫೋರ್ಡನನ್ನು ಕೊಲ್ಲಲೇಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದ ಕ್ರಾಂತಿಕಾರಿಗಳು, ಈ ಕಾರ್ಯವನ್ನು `ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ಚಾಕಿಗೆ ವಹಿಸಿದರು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನ ಚಲನವಲನಗಳನ್ನು ಗಮನಿಸತೊಡಗಿದರು.

ಕಿಂಗ್ಸ್ ಫೋರ್ಡನು ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾರಿನ ಮೇಲೆ ಬಾಂಬ್ ಹಾಕಲು ನಿರ್ಧರಿಸಲಾಗಿತ್ತು. ಎಂದಿನಂತೆ ಕಾರು ಹೊರಟು ಬಂದಿತು. ಅದರೊಳಗೆ ಯಾರಿದ್ದಾರೆಂದು ಗಮನಿಸದೆ ಬೋಸ್ ಮತ್ತು ಚಾಕಿ ಬಾಂಬ್ ಎಸೆದರು. ಕಿಂಗ್ಸ್ ಫೋರ್ಡ್ ಬದಲಾಗಿ ಅದರಲ್ಲಿದ್ದ ಇಬ್ಬರು ಮಹಿಳೆಯರು ಅಸುನೀಗಿದರು. ಇತ್ತ ಕಿಂಗ್ಸ್ ಫೋರ್ಡನನ್ನು ಕೊಂದೆವೆಂದುಕೊಂಡ ಈ ಹುಡುಗರು ಒಂದೊಂದು ದಿಕ್ಕಿಗೊಬ್ಬರು ಓಡಿದರು.

ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡನನ್ನು ಕೊಲ್ಲಲಿಲ್ಲವಾದರೂ, ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ಮೊದಲ ನಡುಕ ಹುಟ್ಟಿಸಿಬಿಟ್ಟಿತ್ತು. ಈ ಹುಡುಗರು ಎಸೆದ ಬಾಂಬು ಕೇವಲ ಕಿಂಗ್ಸ್ ಫೋರ್ಡನ ವಾಹನ ಚೂರು ಚೂರು ಮಾಡಿದ್ದಲ್ಲದೆ ಬ್ರಿಟಿಷ್ ಸಾಮ್ರಾಜ್ಯದ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರು ಮಾಡಿತ್ತು.ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಖುದಿರಾಮ್ ಬೋಸ್ ಮತ್ತು ಸಂಗಡಿಗರನ್ನು ಸೆರೆಹಿಡಿಯಲು ಸತತವಾಗಿ ಪ್ರಯತ್ನಿಸಿದರು.ಭೂಗತರಾದ ಅವರು ಅಷ್ಟು ಸುಲಭವಾಗಿ ಸಿಗಲಿಲ್ಲ. ಕೊನೆಗೆ
ಮುಜಾಫುರದಿಂದ ಸುಮಾರು ,25  ಮೈಲುಗಳಾಚೆ ಯುವಕ ಖುದಿರಾಮ್ ಬೋಸರನ್ನು ಸೆರೆಹಿಡಿಯಲಾಯಿತು. ತಪ್ಪಿಸಿಕೊಳ್ಳಲು ಆತ ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ಅವರ ಮೇಲೆ ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು. 1908ರ  ಆಗಸ್ಟ್ 11ರಂದು ಅವರನ್ನು  ಗಲ್ಲಿಗೇರಿಸಲಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು.
9900925529

 

31 ಜುಲೈ 2023

ಬಯಕೆ

 


ಬಯಕೆ..


ಅವನಿಗೂ ತನ್ನ ಪ್ರೇಯಸಿಯ

ಎತ್ತಿ ಮುದ್ದಾಡಬೇಕೆಂಬ ಬಯಕೆ|

ದೂರದಲ್ಲೇ ನಿಂತು ಪ್ಲೈಯಿಂಗ್ ಕಿಸ್

ನೀಡುವನು ಅವಳ ತೂಕದ ಭಯಕೆ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಆಗಸ್ಟ್ ಮಾಸದ ನೆನಪುಗಳು ಭಾಗ ೧ .#ಚಂದ್ರಶೇಖರ್ ಆಜಾದ್


 


ಸ್ವಾತಂತ್ರ್ಯದ ಹಣತೆಗಳು ..

ಭಾಗ ೧
ಚಂದ್ರಶೇಖರ ಆಜಾದ್.

ಚಂದ್ರಶೇಖರ ಸೀತಾರಾಮ ತಿವಾರಿಯವರು ಭಾರತದ
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಾಗರಿಕ ಶಾಸನಭಂಗದ ಆಧಾರದ ಮೊಕದ್ದಮೆಯಲ್ಲಿ   ಬಂಧಿತರಾದಾಗ ,  ನ್ಯಾಯಾಧೀಶರು  ಅವರ ಹೆಸರೇನೆಂದು ಕೇಳಿದಾಗ, ಅವರು "ಆಜಾದ್ " ಎಂದು ಹೇಳಿದರು. ಈ ಉದ್ಧಟತನಕ್ಕಾಗಿ ಅವರಿಗೆ ಹದಿನೈದು ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು.ಆದರೂ ತಮ್ಮ ಹೆಸರು ಆಜಾದ್ ಎಂದೇ ಹೇಳಿದರು. ಅಂದಿನಿಂದ ಚಂದ್ರಶೇಖರ ಆಜಾದ್ ಆಗಿಯೇ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಪ್ರಮುಖವಾದ ಗುರುತು ಮೂಡಿಸಿದರು.
ಚಂದ್ರಶೇಖರ ಆಜಾದ್ರವರು 23 ಜುಲೈ 1906ರಂದು  ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿರುವ ಭವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು.ಅವರ ತಂದೆ ಪಂಡಿತ್ ಸೀತಾರಾಮ್ ತಿವಾರಿಯವರು  ಜಾಗ್ರಣೀ ದೇವಿಯವರು ಅವರ ತಾಯಿ. ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ ಮಹಾತ್ಮಾ ಗಾಂಧಿಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 





ಆಜಾದರು  ಆಕ್ರಮಣಶಾಲಿ ಹಾಗೂ ಉಗ್ರ ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದರು. ಯಾವುದೇ ಮಾರ್ಗದಿಂದಾದರೂ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮನ್ನೇ  ಮುಡಿಪಾಗಿಡಲು ನಿರ್ಧರಿಸಿದರು.
ಈ ನಿಟ್ಟಿನೆಡೆಗೆ ಮುಂದುವರೆಯುವ ಪ್ರಥಮ ಹೆಜ್ಜೆಯಾಗಿ ಅವರು ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ  ಆರಂಭಿಸಿದರಲ್ಲದೇ ಭಗತ್ ಸಿಂಗ್, ಸುಖ್ದೇವ್, ಬಟುಕೇಶ್ವರ ದತ್  ಮತ್ತು ರಾಜ್ಗುರುರಂತಹಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು.  
ಆಜಾದರು ಭಾರತದ ಭವಿಷ್ಯವು ಸಮಾಜವಾದದಲ್ಲಿಯೇ ಇದೆ ಎಂದು  ನಂಬಿದ್ದರು. ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಜ್ಯೋತಿ ಶ್ರೀವಾಸ್ತವ್ ರೊಂದಿಗೆ ಉತ್ತಮ ಸ್ನೇಹತ್ವ ಸಂಪಾದಿಸಿದ್ದರು.

1925 ರಲ್ಲಿ  ಕಾಕೊರಿ ರೈಲು ದರೋಡೆ , 1926ರಲ್ಲಿ  ವೈಸ್ರಾಯ್  ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನ , ಮತ್ತು ಲಾಲಾ ಲಜಪತ್ ರಾಯ್ರನ್ನು ಕೊಂದುದರ ಪ್ರತೀಕಾರವಾಗಿ ಲಾಹೋರ್ನಲ್ಲಿ 1928 ರಲ್ಲಿ  ಜಾನ್ ಪಾಯಂಟ್ಜ್ ಸಾಂಡರ್ಸ್ನನ್ನು ಗುಂಡು ಹಾರಿಸಿ ಕೊಂದಂತಹಾ ಅನೇಕ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅವರು ಭಾಗಿಯಾಗಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾದರು.
24 ವರ್ಷಗಳ ಅಲ್ಪಾವಧಿಯ ಜೀವಿತದಲ್ಲಿ, ಚಂದ್ರಶೇಖರ ಆಜಾದ್ರವರು ಗಮನಾರ್ಹ ಅವಧಿಯವರೆಗೆ ಝಾನ್ಸಿಯನ್ನು ತಮ್ಮ ಸಂಘಟನೆಯ ಕೇಂದ್ರಸ್ಥಳವನ್ನಾಗಿ ಮಾಡಿಕೊಂಡಿದ್ದರು. ಇದರ ಸಮೀಪವಿರುವ ಅರಣ್ಯವನ್ನು ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಲು ಆಯ್ಕೆ ಮಾಡಿಕೊಂಡಿದ್ದರು.

ಅವರು ಗುಂಡು ಹಾರಿಸುವುದರಲ್ಲಿ ಅದ್ಭುತ ಗುರಿಕಾರರಾಗಿದ್ದರು ಹಾಗೂ ತಮ್ಮ ತಂಡದ ಇತರೆ ಸದಸ್ಯರಿಗೆ ಈ ಸ್ಥಳದಲ್ಲಿಯೇ ಅವರು ತರಬೇತಿ ನೀಡುತ್ತಿದ್ದರು. ಅರಣ್ಯದ ಸಮೀಪ ಸಾತಾರ್ ಎಂದು ಕರೆಯಲ್ಪಡುತ್ತಿದ್ದ ಸಣ್ಣ ನದಿಯ ತೀರದಲ್ಲಿರುವ ಹನುಮಾನ್ ದೇವರ ದೇವಸ್ಥಾನದ ಬಳಿ, ಆಜಾದರು ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡಿದ್ದರು. ಅವರು ಅಲ್ಲಿ ಪಂಡಿತ್ ಹರಿಶಂಕರ್ ಬ್ರಹ್ಮಚಾರಿ ಎಂಬ ಹೆಸರಿನಿಂದ ಮಾರುವೇಷದಲ್ಲಿ ವಾಸಿಸಲು  ಆರಂಭಿಸಿದರು.  
ಸಮೀಪದ ಧಿಮಾರ್ಪುರ ಎಂಬ ಹಳ್ಳಿಯ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರಲ್ಲದೇ ಸ್ಥಳೀಯ ನಿವಾಸಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಧಿಮಾರ್ಪುರ ಎಂಬ ಆ ಹಳ್ಳಿಗೆ ಈಗ ಅವರದೇ ಹೆಸರಿಡಲಾಗಿದ್ದು, ಅದೀಗ ಆಜಾದ್ಪುರ ಎಂಬ ಹೆಸರನ್ನು ಹೊಂದಿದೆ. ಝಾನ್ಸಿಯಲ್ಲಿ ದಂಡುಪ್ರದೇಶದಲ್ಲಿರುವ ಸಾದರ್ ಬಜಾರ್ ಎಂಬಲ್ಲಿದ್ದ ಬುಂದೇಲ್ಖಂಡ್ ಮೋಟಾರ್ ಗ್ಯಾರೇಜಿನಲ್ಲಿ ಅವರು ಕಾರನ್ನು ಚಲಾಯಿಸಲು ಕಲಿತರು.
ಸದಾಶಿವರಾವ್ ಮಲ್ಕಾಪುರ್ಕರ್, ವಿಶ್ವನಾಥ್ ವೈಶಂಪಾಯನ್, ಭಗವಾನ್ ದಾಸ್ ಮಾಹೌರ್ರವರುಗಳನ್ನು ಝಾನ್ಸಿಯಲ್ಲಿಯೇ ಅವರು ಭೇಟಿಯಾಗಿದ್ದು, ತದನಂತರ ಇವರುಗಳೆಲ್ಲಾ ಅವರ ಕ್ರಾಂತಿಕಾರಿ ತಂಡದ ಅವಿಭಾಜ್ಯ ಅಂಗವಾದರು. ಝಾನ್ಸಿ ಮೂಲದ ಆಗಿನ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಪಂಡಿತ್ ರಘುನಾಥ್ ವಿನಾಯಕ್ ಧುಲೇಕರ್ ಮತ್ತು ಪಂಡಿತ್ ಸೀತಾರಾಮ್ ಭಾಸ್ಕರ್ ಭಾಗವತ್ರವರುಗಳು ಕೂಡಾ ಚಂದ್ರಶೇಖರ ಆಜಾದ್ರ ನಿಕಟ ಸಹಾಯಕರಾಗಿದ್ದರು.
1931ರ ವೇಳೆಗೆ ಆಜಾದರು ಅಲಹಾಬಾದ್ನಲ್ಲಿ ವಾಸಿಸುತ್ತಿದ್ದರು. 27 ಫೆಬ್ರವರಿ 1931ರಂದು, ಪೊಲೀಸ್ ಮಾಹಿತಿದಾರರು ಆಜಾದ್ ಮತ್ತು ಸುಖ್ದೇವ್ ರವರು ಆಲ್ಫ್ರೆಡ್ ಉದ್ಯಾನದಲ್ಲಿ ಕೆಲ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದುದನ್ನು ಗಮನಿಸಿ ಬ್ರಿಟಿಷ್ ಆಡಳಿತದ ಗಮನಕ್ಕೆ ತಂದರು.
ಕೆಲವೇ ನಿಮಿಷಗಳಲ್ಲಿ ನೂರಾರು ಪೊಲೀಸರು  ಇಡೀ ಉದ್ಯಾನವನ್ನು ಸುತ್ತುವರೆದು ಅವರನ್ನು ಸೆರೆ ಹಿಡಿಯಲು ಮುಂದಾದರು.
ಜಾಗೃತರಾದ ಇಬ್ಬರೂ  ಪ್ರತಿರೋಧ ತೋರಿದರು.
ಹೋರಾಟದ ಆರಂಭದಲ್ಲಿಯೇ, ಆಜಾದರ ತೊಡೆಗೆ ಗುಂಡು ತಗುಲಿ ಗಾಯವಾಯಿತಾದ್ದರಿಂದ ಅವರಿಗೆ ತಪ್ಪಿಸಿಕೊಳ್ಳಲು ಕಷ್ಟಸಾಧ್ಯವಾಗಿತ್ತು. ಆದರೆ ಅವರು ಸುಖ್ದೇವ್ ರವರು ತಪ್ಪಿಸಿಕೊಳ್ಳಲು ಅವಕಾಶವಾಗುವಂತೆ ಅವರಿಗೆ ರಕ್ಷಣೆಯನ್ನು ಒದಗುವಂತೆ ಗುಂಡುಹಾರಿಸತೊಡಗಿದರು. ಸುಖ್ದೇವ್ರವರು ತಪ್ಪಿಸಿಕೊಂಡ ನಂತರ ಆಜಾದರು ಸಾಕಷ್ಟು ಹೊತ್ತಿನವರೆಗೆ ಪೊಲೀಸರು ಮೇಲೆರಗದಂತೆ ಹೋರಾಟ ಮಾಡಿದರು.  
ಅಂತಿಮವಾಗಿ, ಸಂಪೂರ್ಣವಾಗಿ ಸುತ್ತುವರೆಯಲ್ಪಟ್ಟು ಪೋಲೀಸರ ಸಂಖ್ಯಾಬಲವು ಹೆಚ್ಚುತ್ತಲೇ ಇತ್ತು.
ಏಕಾಂಗಿ ಹೋರಾಟ ವ್ಯರ್ಥ ಎಂಬ ಅರಿವು ಆಜಾದ್ ರವರಿಗೆ ಆಗಿತ್ತು. ಅವರ ಪಿಸ್ತೂಲಿನಲ್ಲಿ ಒಂದೇ ಒಂದು ಗುಂಡು ಉಳಿದಿರುವುದು ಗಮನಕ್ಕೆ ಬಂದು  ಬ್ರಿಟಿಷರಿಗೆ ಶರಣಾಗುವ ಬದಲಿಗೆ ತಮ್ಮ ಮೇಲೆಯೇ ಗುಂಡು ಹಾರಿಸಿಕೊಂಡು ಪ್ರಾಣಾರ್ಪಣೆ ಮಾಡಿಕೊಂಡು ತಮ್ಮನ್ನು ಜೀವಂತವಾಗಿ ಯಾರೂ ಸೆರೆಹಿಡಿಯಲಾರರೆಂಬ ತಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರು.

ಸಿಹಿಜೀವಿ ಸಿ ಜಿ ವೆಂಕಟೇಶ್ವರ
ತುಮಕೂರು.
9900925529

ಪಿ ಎಚ್ ಡಿ ಪಡೆದ ಕೃಷಿ ಕಾರ್ಮಿಕ ಮಹಿಳೆ..


 


ಪಿಹೆಚ್ಡಿ ಪಡೆದ ಕೃಷಿ ಕಾರ್ಮಿಕ ಮಹಿಳೆ.


ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ,ಎಷ್ಟೇ ಜನಜಾಗೃತಿ ಮೂಡಿಸಿದರೂ ಸಮಾಜದಲ್ಲಿ ಬಾಲ್ಯ ವಿವಾಹಗಳು ಇಂದಿಗೂ ನಡೆಯುತ್ತಲೇ ಇವೆ. ತನ್ಮೂಲಕ ಏನೇನೂ ಆಸೆ ಆಕಾಂಕ್ಷೆಗಳನ್ನು ಹೊತ್ತ  ಮಹಿಳೆಯರು ಪ್ರತಿಭೆಯಿದ್ದರೂ ಅವನ್ನು ಹೊರಗೆ ಹಾಕಲು ಅವಕಾಶ ಸಿಗದೆ ಸಂಸಾರದಲ್ಲಿ ಬಂಧಿಯಾಗಿ ಜೀವನ ಸಾಗಿಸುವುದು ಸಾಮಾನ್ಯವಾಗಿಬಿಟ್ಟಿದೆ.
ಆದರೆ ಇಲ್ಲೊಬ್ಬ ಶಾಲೆ ಬಿಟ್ಟ ವಿದ್ಯಾರ್ಥಿನಿ ಬಾಲ್ಯವಿವಾಹವಾದರೂ ತನ್ನ ಗುರಿಸಾಧಿಸುವ ಹಂಬಲ, ನಿರಂತರ ಪ್ರಯತ್ನ, ಕುಟುಂಬದ ಸಹಕಾರದಿಂದ ಪಿ ಎಚ್ಡಿ ಪದವಿ ಪಡೆದು ಸಹಾಯಕ ಪ್ರೊಫೆಸರ್ ಆಗುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಅನಂತಪುರ ಜಿಲ್ಲೆಯ ನಾಗುಲಗುಡ್ಡೆ ಗ್ರಾಮದ ಯುವತಿ ಸಾಕೆ ಭಾರತಿಯವರು ಯಶಸ್ಸು ಬೇರೆಲ್ಲೂ ಇಲ್ಲ ನಮ್ಮ ಕೈಯಲ್ಲೇ ಇದೆ ಎಂದು ತೋರಿದ ದಿಟ್ಟ ಮಹಿಳೆ.
ಬಡತನದ ಹಿನ್ನೆಲೆಯಿಂದ ಬಂದ
ಭಾರತಿಯವರು ಬಾಲ್ಯದಿಂದಲೇ ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತರಾದರು. ಮೂರು ಮಕ್ಕಳಲ್ಲಿ ಹಿರಿಯಳಾದ ಆಕೆ ಹನ್ನೆರಡನೇ ತರಗತಿಯವರೆಗೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಓದಿದ್ದಳು.

ಆಕೆಯ ಕುಟುಂಬದ ಆರ್ಥಿಕ ಅಡಚಣೆಗಳಿಂದಾಗಿ ಆಕೆಯು ತನ್ನ ಪಿ ಯು ಸಿ  ಮುಗಿಸಿದ ನಂತರ ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯ ಸಂಬಂಧಿಯೊಬ್ಬರನ್ನು  ವಿವಾಹವಾದರು. ಮತ್ತು ಶೀಘ್ರದಲ್ಲೇ ಅವರು ಮಗುವಿನ ತಾಯಿಯಾದರು. ಇಷ್ಟೆಲ್ಲ ಅಡಚಣೆಗಳ ಮಧ್ಯೆ ಭಾರತಿಯವರ ಶಿಕ್ಷಣದ ಬಗ್ಗೆ ತುಡಿತ ಕಡಿಮೆಯಾಗಿರಲಿಲ್ಲ.

ಕೂಲಿ ಕೆಲಸ ಮಾಡುತ್ತಲೇ ತನ್ನೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ
ಅನಂತಪುರದ ಎಸ್ ಎಸ್ ಬಿ ಎನ್ ಪದವಿ ಮತ್ತು ಪಿಜಿ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. 

ಪ್ರತಿದಿನ ಮುಂಜಾನೆ ಬೇಗ ಎದ್ದು  ತನ್ನ ಮನೆಕೆಲಸಗಳನ್ನು ಮುಗಿಸಿದ ನಂತರ  ತನ್ನ ಹಳ್ಳಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತನ್ನ ಕಾಲೇಜಿಗೆ ಬಸ್ ಹಿಡಿಯಲು ಅವಳು ಹಲವಾರು ಮೈಲುಗಳಷ್ಟು ನಡೆಯಬೇಕಾಗಿತ್ತು.  ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿ ಸ್ನಾತಕೋತ್ತರ ಪದವಿ ಪಡೆದ ಭಾರತಿಯ ಇಚ್ಛಾಶಕ್ತಿ ಗಮನಿಸಿದ ಪ್ರೊಫೆಸರ್ ಒಬ್ಬರು ಪಿ ಎಚ್ ಡಿ  ಪದವಿ ಪಡೆಯಲು ಸಲಹೆ  ನೀಡಿದರು. ಅದರಂತೆ  ಶ್ರೀ ಕೃಷ್ಣ ದೇವರಾಯ  ವಿಶ್ವವಿದ್ಯಾನಿಲಯದಲ್ಲಿ ಪಿ ಎಚ್ಡಿ ಕೋರ್ಸ್ ಗೆ   ದಾಖಲಾಗಿ ಇತ್ತೀಚಿಗೆ ಡಾಕ್ಟರೇಟ್ ಪಡೆದರು. ಭಾರತಿಯವರ ಈ ಸಾಧನೆಯ ಹಿಂದೆ  ಭೂರಹಿತ ಕೃಷಿ ಕಾರ್ಮಿಕರಾಗಿರುವ ಅವರ ಪತಿ ಶಿವಪ್ರಸಾದ್ ರವರ ಬೆಂಬಲವನ್ನು ಮರೆಯುವಂತಿಲ್ಲ.
ಪ್ರೊಫೆಸರ್ ಆಗುವ ಭಾರತಿಯವರ ಕನಸಿಗೆ ನಿಮ್ಮ ಹಾರೈಕೆಯಿರಲಿ ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು