24 ಜುಲೈ 2023

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜೆ ಸಿ ಬಿ ಆಪರೇಟರ್...



 

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜೆ ಸಿ ಬಿ ಆಪರೇಟರ್ 

ಸಾಧಿಸಬೇಕೆಂಬ ಹಂಬಲ ಮತ್ತು ಸತತ ಪ್ರಯತ್ನ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವವರಿಗೆ ಸೋಲೆಂಬ ಮಾತೇ ಇಲ್ಲ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ತಾಜಾ ಉದಾಹರಣೆ ಕೇರಳದ ಕೆ ಅಖಿಲ್.

ರಾತ್ರಿ  ವೇಳೆ ಜೆಸಿಬಿ ಆಪರೇಟರ್ ಕೆಲಸಮಾಡಿಕೊಂಡು  ಬೆಳಿಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕಾಯಕ ಮಾಡುತ್ತಿದ್ದು  ಬಿಡುವಿನ ಸಮಯದಲ್ಲಿ ಬರವಣಿಗೆಯ ಗೀಳು ಹತ್ತಿಸಿಕೊಂಡು ಸಾಹಿತ್ಯ ರಚನೆ ಮಾಡುತ್ತಿದ್ದ ಅಖಲ್ ರವರ ಮೊದಲ ಕಥಾ ಸಂಕಲನಕ್ಕೆ   ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅಷ್ಟಕ್ಕೂ ಈ ಯಶಸ್ಸು ರಾತ್ರೋರಾತ್ರಿ ಬರಲಿಲ್ಲ ಅದರ ಹಿಂದೆ ಸತತ ಶ್ರಮ ಇರುವುದು ಸತ್ಯ.
ಎಂಟು ಬಾರಿ ಮರುಮುದ್ರಣ ಕಂಡಿರುವ "ನೀಲಚಡಯನ್ " ಕಥಾ ಸಂಕಲನದ ಒಂದೂ ಪ್ರತಿ ಖರ್ಚಾಗಿರಲಿಲ್ಲ. ಯಾರೂ ಓದಿರಲಿಲ್ಲ ಈಗ ಅದ್ಭುತ ಯಶಸ್ಸಿನ ಕೃತಿಯಾಗಿ ಪ್ರಶಸ್ತಿ ಚಾಚಿಕೊಂಡಿರುವ ವಿಷಯ ಹೇಳುವಾಗ  ಅಖಿಲ್ ಕಣ್ಣಲ್ಲಿ ನೀರಾಡುತ್ತವೆ! ಹೌದು ಅವು ಆನಂದ ಬಾಷ್ಪಗಳು!
ಬಡತನದಿಂದಾಗಿ  ಕುಟುಂಬವನ್ನು ಪೋಷಿಸುವ ಸಲುವಾಗಿ ಅರ್ಧದಲ್ಲೇ ಶಿಕ್ಷಣವನ್ನು  ಮೊಟಕುಗೊಳಿಸಿದ  ಅಖಿಲ್ ಪಿಯುಸಿ ಬಳಿಕ ಶಿಕ್ಷಣ ಮುಂದುವರಿಸಬೇಕೆಂಬ ಹಂಬಲವಿತ್ತು. ಆದರೆ ಅವರ ಕೌಟುಂಬಿಕ ಪರಿಸ್ಥಿತಿ ಬೇರೆಯೇ ಇತ್ತು. ತಂದೆ,ತಾಯಿ, ಅಜ್ಜಿ ಮತ್ತು ತಮ್ಮನನ್ನು ಸಲಹುವ ಜವಾಬ್ದಾರಿ ಅವರ ಹೆಗಲ ಮೇಲೇರಿತು.  ಅಖಿಲ್ ಅವರ ತಾಯಿ ಕೂಡ ದಿನಗೂಲಿ ನೌಕರಿ ಮಾಡುತ್ತಾ ಸಂಸಾರಕ್ಕೆ ಅಧಾರವಾದರು.    


ಾತ್ರಿ ವೇಳೆ ಬಿಡುವಿನ ಸಮಯದಲ್ಲಿ ಅವರ  ಕಲ್ಪನೆಗ


ಳಲ್ಲಿ ಮೂಡಿ ಬರುವ ಕಥೆಗಳನ್ನು ಬರೆಯಲಾರಂಭಿಸಿದರು ದಿನನಿತ್ಯದ ಬದುಕಿನ ಅನುಭವ ಗಳನ್ನೇ ಆಧಾರವಾಗಿಟ್ಟುಕೊಂಡು ಕಥೆಗಳನ್ನು ಬರೆದರು.ಇದರ ಪರಿಣಾಮವಾಗಿಯೇ  'ನೀಲಚಡಯನ್' ಕೃತಿ ಹೊರಬಂತು.



ಅದೂ ಕೂಡಾ ಅಷ್ಟು ಸುಲಭವಾಗಿರಲಿಲ್ಲ. ಕೇರಳದ
ಗಾಂಜಾ ತಳಿಯ ಗಿಡಕ್ಕೆ 'ನೀಲಚಡಯನ್' ಎನ್ನುತ್ತಾರೆ. ಈ ಹೆಸರನ್ನು ಕೃತಿಯ ಶೀರ್ಷಿಕೆಯಾಗಿಟ್ಟು ಪುಸ್ತಕ ಪ್ರಕಟಿಸಲು ಪ್ರಕಾಶಕರನ್ನು ಎಡತಾಕಿದಾಗ ಎಂದಿನಂತೆ ಪ್ರಕಾಶಕರು ನಿರಾಕರಿಸಿದಾಗ ತಾವೇ ಪುಸ್ತಕ ಪ್ರಕಾಶನ ಮಾಡಲು ಮುಂದೆ ಬಂದರು. 
20 ಸಾವಿರ ಪಾವತಿಸಿದರೆ ಪುಸ್ತಕ ಪ್ರಕಟಿಸುತ್ತೇವೆ ಎಂಬ ಜಾಹೀರಾತನ್ನು ಫೇಸ್ಬುಕ್ನಲ್ಲಿ ಗಮನಿಸಿದ ಅವರು  ಉಳಿತಾಯ ಮಾಡಿದ್ದ 10,000 ಹಾಗೂ ತಾಯಿ ನೀಡಿದ 10,000 ಪಾವತಿಸಿ ಈ ಪುಸ್ತಕ ಪ್ರಕಟಿಸಿದ್ದರು ಆಗ ಅದು ಆನ್ಲೈನ್ ಮೂಲಕ ಮಾತ್ರವೇ ಮಾರಾಟವಿತ್ತು .
ಆರಂಭದಲ್ಲಿ ಪುಸ್ತಕಗಳು ಮಾರಾಟವಾಗಲಿಲ್ಲ. ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಒಂದೂ ಪುಸ್ತಕ ಮಾರಾಟವಾಗದೇ ಕಷ್ಟ ಪಟ್ಟು ರಾತ್ರಿಹಗಲು ದುಡಿದ ಹಣ ವನ್ನು ಹೀಗೆ ವ್ಯಯ ಮಾಡಿದೆನಲ್ಲ ಎಂದು ಕೊರಗುವ ಸಮಯದಲ್ಲಿ ಕೇರಳದ  ಚಿತ್ರಕಥೆಗಾರ ಬಿಪಿನ್ ಚಂದ್ರನ್ ಅವರು ಪುಸ್ತಕದ ಕುರಿತು ಫೇಸ್ಬುಕ್ನಲ್ಲಿ ಬರೆದ ಬಳಿಕ ಜನರಿಂದ ಬೇಡಿಕೆ ಬಂತು. ಇದೀಗ ಈ ಪುಸ್ತಕದ ಎಂಟನೇ ಅವೃತ್ತಿ ಮುದ್ರಣಾಗಿ ಪ್ರತಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಅಖಿಲ್ ರವರಿಗೆ ಪ್ರಶಸ್ತಿಯ ಜೊತೆಯಲ್ಲಿ ಸಂಪಾದನೆ ಮತ್ತು ಹೆಸರು ಸಿಕ್ಕಿದೆ. ಅಭಿನಂದನೆಗಳು ಅಖಿಲ್.ನಿಮ್ಮಲ್ಲೂ ಒಬ್ಬ ಅಖಿಲ್ ಇರಬಹುದು ಹಿಡಿದ  ಕಾರ್ಯವನ್ನು ಸಾಧಿಸುವ ಗುಣ ನಿಮ್ಮದಾಗಲಿ ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

23 ಜುಲೈ 2023

ಸಿಹಿಜೀವಿಯ ಹನಿ

 


ವ್ಯತ್ಯಾಸ 


ಮೂಗಿ‌ನ ಮೇಲೆ

ಬೆರಳಿಟ್ಟುಕೊಂಡರೆ ಅಚ್ಚರಿ!

ಮೂಗಿನ ಒಳಗೆ ಇಟ್ಟರೆ

ಥೂ ಅಸಹ್ಯ ಮೊದಲು

ಹೊರಗೆ ತಗೀರಿ !!


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಯಾವ್ ಕಾಲೇಜು?....ನ್ಯಾನೋ ಕಥೆ

 



ಯಾವ್ ಕಾಲೇಜ್?


"ನಿನ್ನ ಮಗಳಿಗೆ ಇಲ್ಲೇ ಇರುವ ಲೋಕಲ್ ಕಾಲೇಜ್ ಬೆಟರ್ " ಆತ್ಮೀಯ ಸ್ನೇಹಿತ ಸಲಹೆ ನೀಡಿದ."ನೀಟ್, ಜೆ ಈ ಈ, ಸಿ ಈಟಿ ಈ ಟೌನ್ ನಲ್ಲಿ ಕೋಚಿಂಗ್ ಸರಿ ಇಲ್ಲ ಸುಮ್ನೇ ಬೆಂಗಳೂರಿಗೆ ಹಾಕು" ಹತ್ತಿರದ  ಸಂಬಂಧಿ ಸತೀಶ ತಾಕೀತು ಮಾಡಿದ. ಸಹೋದ್ಯೋಗಿ ಸುಮ ಸಲಹೆಯೇ ಬೇರೆ" ಸಾರ್ ನನಗೆ ಗೊತ್ತಿರೋ ಒಂದ್ಕಾಲೇಜು ಮಂಗ್ಳೂರಾಗೈತೆ ಸುಮ್ನೆ ಅಲ್ಗಾಕಿ ನಿಮ್ ಮಗ್ಳು ಗ್ಯಾರಂಟಿ ಡಾಕ್ಟ್ರು ".

ಮಗಳ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೊಂ ಭತ್ತೆಂಟು ಪರ್ಸೆಂಟೇಜ್ ಪಡೆದ ಖುಷಿಯಲ್ಲಿದ್ದ ರವಿಕುಮಾರ್ ಗೊಂದಲದ ಗೂಡಿನಲ್ಲಿ ಬಿದ್ದು ಚಿಂತಿಸುತ್ತಾ ಮನೆಗೆ ಬಂದು ಕಾಫಿ ಹೀರುವಾಗ .ಮಗಳು ಅಪ್ಪಾ ನಾನ್ ಯಾವ್ ಕಾಲೇಜ್ ಸೇರಲಿ ಎಂದಾಗ ಅಪ್ಪ ಮಗಳ ಮುಖವನ್ನೇ ನೋಡುತ್ತಿದ್ದ ಉತ್ತರ ಬರಲಿಲ್ಲ....


ಸಿಹಿಜೀವಿ ವೆಂಕಟೇಶ್ವರ

ತುಮಕೂರು

21 ಜುಲೈ 2023

ನಮ್ಮ ಮೆದುಳು ನಮ್ಮ ಆರೋಗ್ಯ...


 


ನಮ್ಮ ಮೆದಳು ನಮ್ಮ ಆರೋಗ್ಯ.

ಮಾನವ ಇತರೆ ಪ್ರಾಣಿಗಳಿಗಿಂತ ವಿಭಿನ್ನವಾಗಿರುವುದಕ್ಕೆ  ಅವನ ಮೆದುಳು ಕೂಡ ಒಂದು ಕಾರಣ
ಪ್ರಪಂಚದಾದ್ಯಂತ  ಪ್ರತಿ ವರ್ಷ ಜುಲೈ 22 ರಂದು ವಿಶ್ವ ಮೆದುಳಿನ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರಪಂಚದ ಅತ್ಯಂತ ಪ್ರಮುಖ ವಾರ್ಷಿಕ ಆಚರಣೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ನಮ್ಮ ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವ ಮಹತ್ವದ ಆರೋಗ್ಯ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. 
ಒಂದೂವರೆ ಕೇಜಿ ತೂಕದ ಮೆದುಳೇ ಒಂದು ಸಂಕೀರ್ಣವಾದ ಮತ್ತು ಅಚ್ಚರಿದಾಯಕ ಕೆಲಸ ಮಾಡುವ ಅದ್ಬುತ ಯಂತ್ರ ಎಂದರೆ ತಪ್ಪಾಗಲಾರದು.10000ಕೋಟಿ ನರಕೋಶಗಳನ್ನು ಹೊಂದಿರುವ ಇದು ನಮ್ಮ ಮಾನಸಿಕ ಆರೋಗ್ಯದ ಕೀಲಿ ಕೈ ಎಂದರೆ ತಪ್ಪಾಗಲಾರದು.
9 ನೇ ವಾರ್ಷಿಕ ವಿಶ್ವ ಮೆದುಳಿನ ದಿನವನ್ನು ವಿಶ್ವದಾದ್ಯಂತ ಆಚರಿಸುವ ಈ ಸಂದರ್ಭದಲ್ಲಿ  ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ ಪ್ರಮುಖವಾದ ಪಾತ್ರ ವಹಿಸುತ್ತಾ  ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.

ಈ ವರ್ಷದ ಮೆದುಳು ದಿನದ  ಥೀಮ್  "ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ, ಯಾರನ್ನೂ ಹಿಂದೆ ಬಿಡಬೇಡಿ"

 ಇಂದಿನ ಧಾವಂತದ ಗಡಿಬಿಡಿಯ ದಿನಗಳಲ್ಲಿ ಅಬಾಲರಾದಿಯಾಗಿ ವೃದ್ದರ ವರೆಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡ ಅನುಭವಿತ್ತಾ ಅದು ಮೆದುಳಿನ ಮೇಲೆ ಪ್ರಭಾವವನ್ನು ಮೀರಿ ನಾವು ಕೇಳಿರದ ಹೊಸ ಹೊಸ ಖಾಯಿಲೆಯಿಂದ ಬಳಲುವಂತೆ ಮಾಡುತ್ತಿದೆ.
ಈ ಮೆದುಳು ದಿನದ ಅಂಗವಾಗಿ ನಾವು ನಮ್ಮ ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ.
ಅಮೇರಿಕನ್ ಬ್ರೈನ್ ಫೌಂಡೇಶನ್ ಈ ದಿನದ ನೆನಪಿನಲ್ಲಿ  ನಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಸಲಹೆಗಳನ್ನು ನೀಡಿದೆ.ಅವುಗಳಲ್ಲಿ ಕೆಲವನ್ನಾದರೂ ಪಾಲಿಸೋಣ.

ಪಾರ್ಕಿನ್ಸನ್ ಮತ್ತು ಆಲ್ ಜಮೈನರ್ ನಂತಹ   ಮೆದುಳಿಗೆ ಸಂಬಂಧಪಟ್ಟ ನ್ಯೂರೋ ಡಿಜೆನೆರೇಟಿವ್ ಕಾಯಿಲೆಗಳಿಗೆ ಸರಿಯಾಗಿ ನಿದ್ರೆ ಮಾಡದಿರುವುದು ಪ್ರಮುಖವಾದ ಕಾರಣ. 41% ಜನರು ಸರಿಯಾದ ನಿದ್ರೆ ಮಾಡದೇ ಈ ರೋಗಕ್ಕೆ ತುತ್ತಾಗುತ್ತಾರೆ ಎಂದು ಸಂಶೋಧನೆಗಳು ದೃಢಪಡಿಸಿವೆ.  ಆದ್ದರಿಂದ ವಯಸ್ಕರು ದಿನಕ್ಕೆ ಕನಿಷ್ಟಪಕ್ ಏಳರಿಂದ ಎಂಟು ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡಿದರೆ ಅಲ್ ಜಮೈರ್ ರೋಗಕ್ಕೆ ಕಾರಣವಾದ ಪ್ರೋಟೀನ್ ಅಮಿಲಾಯ್ಡ್ ಪ್ಲೇಕ್ಗಳ ವಿಷಕಾರಿ ಸಂಗ್ರಹವನ್ನು ತಡೆಯಲು ನಮ್ಮ ಮಿದುಳುಗಳು ಸಾಧ್ಯವಾಗುತ್ತದೆ ಎಂದು ಸಂಶೋಧನೆಗಳು ತೋರಿಸುತ್ತವೆ.ಆದ್ದರಿಂದ ಇಂದೇ ನಾವೆಲ್ಲರೂ ಗುಣಮಟ್ಟದ ನಿದ್ರೆ ಮಾಡಲು ಪಣ ತೊಡೋಣ. 

ಮೆದುಳಿನ ಸಮಸ್ಯೆ ಬರಲು ಕಾರಣಗಳಲ್ಲಿ ತಲೆಗೆ ಬಲವಾದ ಪೆಟ್ಟು ಬೀಳುವುದು ಒಂದು ಕಾರಣ
ತಲೆ ಗಾಯಗಳು ಆಗದಂತೆ   ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ನಮ್ಮ ಮೆದುಳಿನ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಮಿದುಳಿನ ಗಾಯವನ್ನು ತಡೆಗಟ್ಟಲು ಸೀಟ್ ಬೆಲ್ಟ್ ಅಥವಾ ಹೆಲ್ಮೆಟ್ ಧರಿಸುವಂತಹ ಕ್ರಮಗಳು ಮುಖ್ಯ. ಕ್ರೀಡೆಗಳನ್ನು ಆಡುವಾಗ, ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸಿಕೊಂಡು ಆಟವಾಡೋಣ.

ನಿಯಮಿತ ವ್ಯಾಯಾಮವು   ಮೆದುಳಿನ ಆರೋಗ್ಯವನ್ನು ಉತ್ತೇಜಿಸಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಏರೋಬಿಕ್ಸ್ ನಂತಹ  ವ್ಯಾಯಾಮಗಳು  ಮೆದುಳಿನಲ್ಲಿ ಪ್ರಯೋಜನಕಾರಿ ಜೀನ್ಗಳನ್ನು ಸಕ್ರಿಯಗೊಳಿಸಬಹುದು ಮತ್ತು ಸ್ಮರಣೆಗೆ ಸಹಾಯ ಮಾಡುತ್ತದೆ.   ವ್ಯಾಯಾಮದ ಸಮಯದಲ್ಲಿ ಮೆದುಳಿಗೆ ಹೆಚ್ಚಿದ ರಕ್ತದ ಹರಿವಿನೊಂದಿಗೆ ನಮ್ಮ ಮೆದುಳಿನ ಆರೋಗ್ಯ ವೃದ್ಧಿಸಲು ಸಹಕಾರಿ.
ಆದ್ದರಿಂದ. ಈ ಮೆದುಳು ದಿನದಂದು ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡುವ ಸಂಕಲ್ಪ ಮಾಡೋಣ.
ಇದರ ಜೊತೆಯಲ್ಲಿ ನಮ್ಮ ಮನಸ್ಸನ್ನು ಸಂತೋಷವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಹಾಗೂ ನಾವು ಮಾನಸಿಕವಾಗಿ ಸಕ್ರಿಯವಾಗಿರುವುದು ಮುಖ್ಯ. ಹವ್ಯಾಸಗಳು ಮತ್ತು ವೈಯಕ್ತಿಕ ಆಸಕ್ತಿಗಳು, ಸಾಮಾಜಿಕ ತೊಡಗಿಸಿಕೊಳ್ಳುವಿಕೆ ಮತ್ತು ಹೊಸ ವಿಷಯಗಳನ್ನು ಕಲಿಯುವುದು ಇವೆಲ್ಲವೂ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. 

ನಮ್ಮ ಮಾನಸಿಕ ಆರೋಗ್ಯ ಮತ್ತು ಮೆದುಳಿನ ಆರೋಗ್ಯ ಪರಸ್ಪರ ಪೂರಕ ಸಂಬಂಧ ಹೊಂದಿದೆ. ವಾಸ್ತವವಾಗಿ, ಖಿನ್ನತೆ ಮತ್ತು ಒತ್ತಡವು ಮೆಮೊರಿ ನಷ್ಟಕ್ಕೆ ಕಾರಣವಾಗಬಹುದು. ನಿಯಮಿತ ಸಾಮಾಜಿಕ ಸಂವಹನವು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಒತ್ತಡವನ್ನು ನಿಭಾಯಿಸುವ ಆರೋಗ್ಯಕರ ವಿಧಾನಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಸಾಧ್ಯವಾದಾಗಲೆಲ್ಲಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಸಮಯ ಮಾಡಿಕೊಳ್ಳೋಣ.
ಖ್ಯಾತ ಮನೋವೈದ್ಯರಾದ ಸಿ ಆರ್ ಚಂದ್ರಶೇಖರ್ ರವರು ಮೆದುಳು ದಿನದ ಅಂಗವಾಗಿ ನಮಗೆ ಕೆಲ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ."ಮೆದುಳಿಗೆ ಹಾನಿಯಾಗುವ ಮದ್ಯಪಾನ ತ್ಯಜಿಸಿ, ಜಂಕ್ ಪುಡ್ ವರ್ಜಿಸಿ, ಓದು ಚರ್ಚೆ, ಸಂಗೀತದೊಂದಿಗೆ ಕಾಲ ಕಳೆಯಿರಿ ನಿಮ್ಮ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ"
ಮೆದುಳು ದಿನದಂದು ನಮ್ಮ  ದೈನಂದಿನ ದಿನಚರಿಯಲ್ಲಿ ಕೆಲ ಸಕಾರಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಂಡು ಕ್ ನಮ್ಮ ಮೆದುಳನ್ನು ಆರೋಗ್ಯಕರವಾಗಿ ಮತ್ತು ಕ್ರಿಯಾಶೀಲವಾಗಿಟ್ಟುಕೊಳ್ಳೋಣ.ಮತ್ತು ಮಾನಸಿಕ ಅರೋಗ್ಯ ಪಡೆಯೋಣ.

ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529

ತಿರುಮಲಾದ ಶಿಲಾತೋರಣ


 


ಶಿಲಾ ತೋರಣ

ಪ್ರತಿವರ್ಷ ಜುಲೈ ಹದಿಮೂರನ್ನು  ಅಂತರರಾಷ್ಟ್ರೀಯ ಶಿಲಾ ದಿನ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕುಟುಂಬ ಸಮೇತ ತಿರುಮಲೆ ಗೆ ಹೋದಾಗ ನೋಡಿದ ಶಿಲಾತೋರಣ ನೆನಪಾಯಿತು.ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ನಂತರ ತಿರುಮಲೆಯ ಇತರ ಸ್ಥಳಗಳನ್ನು ನೋಡಲು ಹೊರಟಾಗ ಮೊದಲು ಸಿಕ್ಕಿದ್ದೇ ಈ ಶಿಲಾತೋರಣ!

ತಿರುಮಲ ಬೆಟ್ಟಗಳಲ್ಲಿನ ನೈಸರ್ಗಿಕ ಕಮಾನು ಅಥವಾ ಶಿಲಾತೋರಣ ಒಂದು ಅಧಿಸೂಚಿತ  ರಾಷ್ಟ್ರೀಯ ಭೂ-ಪರಂಪರೆ ಸ್ಮಾರಕವಾಗಿದೆ. ಇದು  ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದ ಉತ್ತರಕ್ಕೆ 2ಕಿಲೊಮೀಟರ್ ದೂರದಲ್ಲಿದೆ. ಸ್ಥಳೀಯ ತೆಲುಗು  ಭಾಷೆಯಲ್ಲಿ ಕಮಾನುಗಳನ್ನು ಸಿಲಾ ತೋರಣಂ ಎಂದೂ ಕರೆಯುತ್ತಾರೆ ತೆಲುಗು ಭಾಷೆಯಲ್ಲಿ ಸಿಲಾ ಎಂದರೆ 'ಬಂಡೆ' ಮತ್ತು ತೋರಣಂ ಎಂದರೆ ಹೊಸ್ತಿಲ ಮೇಲೆ ಕಟ್ಟಲಾದ ಹಾರ.  ಈ ಅಪರೂಪದ ಭೂವೈಜ್ಞಾನಿಕ ಕಮಾನು 1,500 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಈ ಭವ್ಯವಾದ, ಸ್ವಾಭಾವಿಕವಾಗಿ ರೂಪುಗೊಂಡ ಕಮಾನು ಏಷ್ಯಾದಲ್ಲಿ ಕಂಡು ಬರುವುದು ಇದೊಂದು ಮಾತ್ರ.    ಮತ್ತು ಪ್ರಪಂಚದಲ್ಲಿ ಈ ರೀತಿಯ ಎರಡು  ರಚನೆಗಳಿವೆ   ಅಮೆರಿಕಾ ದ  ಉತಾಹ್ನ ರೈನ್ಬೋ ಆರ್ಚ್ ಮತ್ತು ಯುನೈಟೆಡ್ ಕಿಂಗ್ಡಮ್ ನಲ್ಲಿ ಕಟ್ ಥ್ರೂ ಆರ್ಚ್ ಇವೆ. 

ಒಂದು ನಂಬಿಕೆಯ ಪ್ರಕಾರ ವೆಂಕಟೇಶ್ವರ ಸ್ವಾಮಿಯು ಭುವಿಗೆ ಬಂದಾಗ ಮೊದಲು ಗಿರಿಯ ಮೇಲೆ ಒಂದು ಪಾದ ಇಟ್ಟ ಜಾಗವು ಇಂದಿನ
ಶ್ರೀವಾರಿ ಪದಾಲು ಅಥವಾ ಸ್ವಾಮೀ ಪಾದ  ಅಲ್ಲಿರುವ  ಪಾದಮುದ್ರೆಗಳನ್ನು ಭಕ್ತರು ಶ್ರಧ್ದಾ ಭಕ್ತಿಯಿಂದ ಪೂಜಿಸುತ್ತಾರೆ. ಇದು ತಿರುಮಲ ಬೆಟ್ಟಗಳ ಅತ್ಯುನ್ನತ ಸ್ಥಳವಾಗಿದೆ, ಕಮಾನಿನ ಸ್ಥಳವಾದ ಶಿಲಾತೋರಣದ ಬಳಿ ಸ್ವಾಮಿಯು ಎರಡನೇ ಹೆಜ್ಜೆ ಇಟ್ಟರು.   ನಂತರ ಮೂರನೇ ಹೆಜ್ಜೆಯನ್ನು  ತಿರುಮಲದಲ್ಲಿರುವ ದೇವಾಲಯದಲ್ಲಿ ಈಗ ಅವರ ವಿಗ್ರಹವನ್ನು ಪೂಜಿಸುವ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತದೆ.

1980 ರ ದಶಕದಲ್ಲಿ,   ತಿರುಮಲ ಬೆಟ್ಟಗಳಲ್ಲಿ ಭೂವೈಜ್ಞಾನಿಕ  ಉತ್ಖನನದ ಸಮಯದಲ್ಲಿ ಭೂವಿಜ್ಞಾನಿಗಳು  ಈ ಅಪರೂಪದ ಬಂಡೆಯ ಕಮಾನು ರಚನೆಯನ್ನು ಗಮನಿಸಿದರು. ಇದು ಸಂಪರ್ಕಿಸುವ ತೆಳುವಾದ ಕೊಂಡಿಯೊಂದಿಗೆ ಎರಡು ಭಿನ್ನವಾದ ಬಂಡೆಗಳನ್ನು ಹೊಂದಿದೆ. ಕಲ್ಲಿನ ಕಮಾನುಗಳ ಅಂದಾಜು ಭೂವೈಜ್ಞಾನಿಕ ವಯಸ್ಸು 2.5 ಮಿಲಿಯನ್ ವರ್ಷಗಳು. ಕಮಾನು ರಚನೆಯು ತೀವ್ರವಾದ ಹವಾಮಾನ ಮತ್ತು ಪ್ರಕೃತಿಯ ಟಾರ್ಕ್ ಅನ್ನು ತಡೆದುಕೊಳ್ಳುವ ಸ್ಟ್ರೀಮ್ ಕ್ರಿಯೆಯ ಸವೆತಕ್ಕೆ ಕಾರಣವಾಗಿದೆ. ಇದು ಅಪರೂಪದ ಭೂವೈಜ್ಞಾನಿಕ ದೋಷವಾಗಿದ್ದು, ಇದನ್ನು ತಾಂತ್ರಿಕವಾಗಿ ಭೂವೈಜ್ಞಾನಿಕ ಭಾಷಾವೈಶಿಷ್ಟ್ಯದಲ್ಲಿ ' ಎಪಾರ್ಚಿಯನ್ ಅಸಂಗತತೆ ' ಎಂದು ಕರೆಯಲಾಗುತ್ತದೆ.

ಈ ಶಿಲಾತೋರಣ ನೋಡಲು ಸ್ಥಳೀಯವಾಗಿ ಲಭ್ಯವಿರುವ ಟ್ಯಾಕ್ಸಿ ಜೀಪ್ ಲಭ್ಯವಿವೆ. ತಮ್ಮ ಖಾಸಗಿ ವಾಹನಗಳಲ್ಲೂ ಹೋಗಬಹುದು ಆದರೆ ಚಾಲಕರು ಘಟ್ಟದ ಪ್ರದೇಶದಲ್ಲಿ ವಾಹನ ಚಲಾಯಿಸುವ ಅನುಭವ ಇದ್ದರೆ ಉತ್ತಮ.
ಬೆಳಿಗ್ಗೆ ಆರರಿಂದ   ಎಂಟು ಗಂಟೆಗಳ ಸಮಯದಲ್ಲಿ ಈ ಪ್ರದೇಶದ ವೀಕ್ಷಿಸಲು ಸೂಕ್ತ  ಅಗಾಗ್ಗೆ ಬಂದು ಮಾಯವಾಗುವ ಮಂಜು, ದಟ್ಟವಾದ ಕಾಡಿನ ಹಿನ್ನೆಲೆಯಲ್ಲಿ ಶಿಲಾತೋರಣ ನೋಡುವುದೇ ಒಂದು ಸುಂದರ ಅನುಭವ. ಶಿಲಾತೋರಣದ ಮುಂಭಾಗದಲ್ಲಿ   ಉತ್ತಮವಾಗಿ ನಿರ್ವಹಿಸಲ್ಪಟ್ಟ ಉದ್ಯಾನವಿದೆ. ಸೂರ್ಯಾಸ್ತವು ಭೇಟಿ ನೀಡಲು ಉತ್ತಮ ಸಮಯವಾಗಿದೆ, ಏಕೆಂದರೆ ಕಮಾನು ಸೂರ್ಯಾಸ್ತದ  ಬೆಳಕಿನಲ್ಲಿ ಇನ್ನಷ್ಟು ಆಕರ್ಷಕವಾಗಿ ಮತ್ತು ನಿಗೂಢವಾಗಿ ಕಾಣುತ್ತದೆ.
ನೀವು ಮುಂದಿನ ಬಾರಿ ತಿರುಮಲೆಗೆ ಭೇಟಿ ನೀಡಿದಾಗ ವೆಂಕಟೇಶ್ವರ ಸ್ವಾಮಿಯ ದರ್ಶನದ ಬಳಿಕ ಈ ಪ್ರಾಕೃತಿಕ ಪರಂಪರೆಯನ್ನು ನೋಡಿ ಕಣ್ತುಂಬಿಕೊಳ್ಳಲು ಮರೆಯದಿರಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.