08 ಏಪ್ರಿಲ್ 2023

ರಚನಾತ್ಮಕ ಟೀಕೆಗಳನ್ನು ಸ್ವೀಕರಿಸೊಣ...

 


ರಚನಾತ್ಮಕ ಟೀಕೆಗಳನ್ನು ಸ್ವೀಕರಿಸೋಣ.


ಒಂದು ದಿನ ಬುದ್ಧನು   ಭಿಕ್ಷಾಟನೆ ಮಾಡುತ್ತಾ ಮನೆಯೊಂದರ ಮುಂದೆ ನಿಲ್ಲುತ್ತಾನೆ. ಮೊದಲೇ ಸಿಡಿಮಿಡಿಗೊಳ್ಳುತ್ತಾ ಮನೆಯಿಂದ ಹೊರಗೆ ಬಂದ ಮನೆಯೊಡತಿ ಎದುರಲ್ಲಿ ನಿಂತಿದ್ದ ಬುದ್ಧನನ್ನು ನೋಡಿ ಕೆಂಡಾಮಂಡಲವಾದಳು. "ನೋಡೋದಕ್ಕೆ ಒಳ್ಳೆ ಗೂಳಿ ತರಹ ಇದ್ದೀಯಾ, ಏನಾದರೂ ಕೆಲಸ ಮಾಡಿಕೊಂಡು ಬದುಕುಬಹುದಲ್ಲಾ…ನೀನು ಸೋಮಾರಿಯಾಗುವುದಲ್ಲದೆ ನಿನ್ನ ಶಿಷ್ಯರು ಎಂದು ಹೇಳಿಕೊಳ್ಳುತ್ತಿರುವ ಇವರನ್ನೂ ಸೋಮಾರಿಗಳನ್ನಾಗಿ ಮಾಡುತ್ತಿದ್ದೀಯಾ" ಎಂದು ಬಾಯಿಗೆ ಬಂದಂತೆ ಬೈಯುತ್ತಾಳೆ.


ಆದರೆ ಬುದ್ಧನು ಆಕೆಯ ಕೋಪದ,ತಾಪದ, ಅವಹೇಳನದ ಮಾತುಗಳನ್ನು ಕೇಳುತ್ತಾ ಕಿರುನಗೆ ಬೀರಿದನೇ ಹೊರತು ಮರು ಮಾತನಾಡಲಿಲ್ಲ. ಆದರೆ ಅವರ ಶಿಷ್ಯರು ಮಾತ್ರ ಕೋಪದಿಂದ ಬುಸುಗುಡುತ್ತಿದ್ದರು. ಆಗ  ಬುದ್ಧ ಅವರಿಗೆ ಸಮಾಧಾನ ಹೇಳಿದ,ನಂತರ

ಆಕೆಯನ್ನು ಉದ್ದೇಶಿಸಿ ಪ್ರಸನ್ನ ವದನನಾಗಿ…" ಮಾತೆ! ನನ್ನ ಸಣ್ಣ ಸಂದೇಹವೊಂದನ್ನು ನಿವಾರಿಸುತ್ತೀರಾ? " ಎಂದು ಕೇಳಿದ. ಅದಕ್ಕೆ ಆಕೆ "ಅವಶ್ಯವಾಗಿ ನಿನ್ನ ಸಂದೇಹ ತೀರಿಸುತ್ತೇನೆ" ಎಂದಳು. ಬುದ್ಧನು ತನ್ನ ಕೈಯಲ್ಲಿನ ಭಿಕ್ಷಾಪಾತ್ರೆಯನ್ನು ತೋರುತ್ತಾ… "ತಾಯಿ! ನಾನು ನಿನಗೆ ಒಂದು ವಸ್ತುವನ್ನು ಕೊಟ್ಟಾಗ ಅದನ್ನು ತಿರಸ್ಕರಿಸಿದರೆ ಅದು ಯಾರಿಗೆ ಸೇರುತ್ತದೆ? "ಎಂದು ಕೇಳಿದ. ಅದಕ್ಕೆ ಆಕೆ "ನಾನು ತೆಗೆದುಕೊಳ್ಳದೆ ತಿರಸ್ಕರಿಸಿದೆನಾದ್ದರಿಂದ ಆ ವಸ್ತು ನಿನಗೇ ಸೇರುತ್ತದೆ" ಉತ್ತರ ಕೊಟ್ಟಳು.


"ಹಾಗೆಯೇ…ತಾಯಿ! ನಾನು ನಿನ್ನ ಬೈಗುಳ ಸ್ವೀಕರಿಸುತ್ತಿಲ್ಲ" ಎನ್ನುತ್ತಿದ್ದಂತೆ ಆಕೆ ತನ್ನ ತಪ್ಪಿನ ಅರಿವಾಗಿ ನಾಚಿಕೆಯಿಂದ ತಲೆತಗ್ಗಿಸಿದಳು. 


ಕೆಲವೊಮ್ಮೆ ಅನವಶ್ಯಕವಾಗಿ  ಕೆಲವರು  ನಮ್ಮನ್ನು ಅವಹೇಳನ ಮಾಡುವವರು, ಆಡಿಕೊಳ್ಳುವವರು. ಕೆಲವರು ಬಹಿರಂಗವಾಗಿ ಟೀಕಿಸಿದರೆ, ಇನ್ನೂ ಕೆಲವರು ಹಿಂದೆ ಆಡಿಕೊಳ್ಳುತ್ತಾರೆ. ಒಟ್ಟಾರೆ ಬೇರೆಯವರ ಬಗ್ಗೆ ಆಡಿಕೊಳ್ಳದಿದ್ದರೆ  ಪಾಪ.. ಅವರು ತಿಂದ ಅನ್ನ ಜೀರ್ಣವಾಗುವುದಿಲ್ಲ. ಅಂತಹ ವಿಘ್ನ ಸಂತೋಷಿಗಳ ಬಗ್ಗೆ ನಾವು ತಲೆಕೆಡಿಸೊಕೊಳ್ಳಬೇಕಿಲ್ಲ. ನಮ್ಮ ಹಿಂದೆ ನಮ್ಮ ಬಗ್ಗೆ ಮಾತನಾಡಲು ಜನ ಶುರುಮಾಡಿದ್ಧಾರೆ ಎಂದರೆ ಅವರಿಗಿಂತ ನಾವು ಅಷ್ಟರಮಟ್ಟಿಗೆ ಮುಂದಿದ್ದೇವೆ ಎಂದರ್ಥ. ನಿಂದಕರಿರಬೇಕು ಹಂದಿಯ ಹಾಗೆ ಎಂಬ ಮಾತಿನಂತೆ ಸಕಾರಣ, ಸಕಾರಾತ್ಮಕ, ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಿ ನಡೆಯೋಣ .ಕಾಲೆಳೆಯುತ್ತಾ ಇತರರ ಬಗ್ಗೆ ಕಾಲಹರಣ ಮಾಡುವವರ ನಿರ್ಲಕ್ಷಿಸೋಣ. ಹೊಟ್ಟೆ ಕಿಚ್ಚಿನ ಟೀಕೆಗಳನ್ನು ಮೆಟ್ಟಿ ನಿಂತು ಸಾಧಿಸಿ ತೋರಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಶಿಕ್ಷಕರು.



07 ಏಪ್ರಿಲ್ 2023

ಮಾನವರಾಗೋಣ...

 


ಮಾನವರಾಗೋಣ ೬ 


ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

ಮೊದಲನೇಯದು,   ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

ಎರಡು,  ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

ಮೂರು, ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಪ್ರಶ್ನಿಸಿದ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

ಪ್ರಪಂಚದಲ್ಲಿಯೇ  ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು. ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ವಜ್ರ, ಬಂಗಾರ ಮುಂತಾದ ಸಂಪತ್ತನ್ನು ಭೂಮಿಗೆ  ಎಸಯಲಿಕ್ಕೆ ಹೇಳಿದೆ.

ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶವೆಂದರೆ 

ಪ್ರಪಂಚವನ್ನು ಗೆದ್ದ ಅಲೆಕ್ಸಾಂಡರ್ ಸತ್ತಾಗ ಅವನ ಕೈಯಲ್ಲಿ ಏನೂ ಇರಲಿಲ್ಲ ಎಂಬುದು ಪ್ರಜೆಗಳಿಗೆ ತಿಳಿಯಲಿ ಎಂದು.

ಈ ಉತ್ತರಗಳು ನಾವು ಪ್ರತಿಯೊಬ್ಬರೂ ಪ್ರತಿದಿನ ಚಿಂತನ ಮಂಥನ ಮಾಡಬೇಕಾದ ಅಂಶಗಳು.

ಕಾಲಾಯ ತಸ್ಮೈನಮಃ ಎಂಬಂತೆ ನಮ್ಮ ಕೈಯಲ್ಲಿ ಏನೂ ಇಲ್ಲ. ಜಾತಸ್ಯ ಮರಣಂ  ಧ್ರುವಂ ಎಂಬಂತೆ  ಹುಟ್ಟು ಆಕಸ್ಮಿಕ ಮರಣ ಖಚಿತ . ನಮ್ಮ ಸರದಿ ಬಂದಾಗ ನಾವು ಹೋಗಲೇಬೇಕು ಆ ಸಮಯದಲ್ಲಿ ನಾವು ಜೀವಿಸಿದ ಪರಿಯನ್ನು ನಾವು ಆತ್ಮಾವಲೋಕನ ಮಾಡಿಕೊಂಡು ಒಳಿತೆನೆಡೆಗೆ ಸಾಗಬೇಕಿದೆ. 


ಅಲೆಕ್ಸಾಂಡರ್ ನ ಎರಡನೇ ಮತ್ತು ಮೂರನೇ ಉತ್ತರ ಪರಸ್ಪರ ಸಂಬಂಧವನ್ನು ಹೊಂದಿವೆ .ಅನಾದಿ ಕಾಲದಿಂದಲೂ ಜನ ಹೆಣ್ಣು, ಮಣ್ಣು, ಹೊನ್ನಿಗಾಗಿ ಹಾತೊರೆದು ತೊಳಲಾಡಿ ,ಬಡಿದಾಡಿ ಬರಿಗೈಯಲಿ  ಅಳಿದುಹೋಗಿರುವುದು ನಮಗೇ ತಿಳಿದೇ ಇದೆ.ಆದರೂ ನಾವು ಈಗಲೂ 

ಭೌತಿಕ ಸಂಪತ್ತಿನ ಹಿಂದೆ ಓಡುತ್ತಾ, ಅನೈತಿಕವಾಗಿ ಆಸ್ತಿ ಮಾಡುವುದನ್ನು ನಿಲ್ಲಿಸುವುದೇ ಇಲ್ಲ. ಆಗಾಗ್ಗೆ ಸ್ಮಶಾನ ವೈರಾಗ್ಯದಂತೆ ಆಸೆಗೆ ಮಿತಿ ಹೇರಿಕೊಂಡರೂ ಮತ್ತೆ ಅತಿಯಾಸೆಯಿಂದ ಅಕ್ರಮದಲ್ಲಿ ತೊಡಗಿ ಬೆಂಕಿಯ ಕಡೆ ಪತಂಗದ ಪಯಣ ಮಾಡುವಂತೆ ಓಡುತ್ತೇವೆ.

ಪ್ರತಿದಿನವೂ ಅಲೆಕ್ಸಾಂಡರ್ ನ ಮಾತುಗಳನ್ನು ಮೆಲುಕು ಹಾಕೋಣ .

ನಿಜವಾದ ಶಾಂತಿ ನೆಮ್ಮದಿ ಹಣ ಐಶ್ವರ್ಯದಲ್ಲಿ ಇಲ್ಲ ಅದು ನಮ್ಮ ಒಳಗೆ ಇದೆ ಅದನ್ನು ಹುಡುಕುವ ಪ್ರಯತ್ನ ಮಾಡೋಣ.ಮಾನವರಾಗೋಣ .


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು.

05 ಏಪ್ರಿಲ್ 2023

ದರ್ಪಣ ಸುಂದರಿ...

 

ಪದೇ ಪದೇ ತಲೆ ಬಾಚುವಳು 

ಅಲಂಕಾರ ಮಾಡಿಕೊಳ್ಳುವಳು 

ಮತ್ತೊಮ್ಮೆ ಕನ್ನಡಿಯಲ್ಲಿ 

ನೋಡಿಕೊಳ್ಳುವಳು 

ಅಂದು ಕೊಳ್ಳುವಳು

 ನಾನೇ ಸುಂದರಿ|

ಕನ್ನಡಿಯ ಮುಂದೆ

ಅತಿ ಹೆಚ್ಚು ಕಾಲ ಕಳೆವ

ಇವಳು ನಿಜಕ್ಕೂ ದರ್ಪಣ ಸುಂದರಿ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


01 ಏಪ್ರಿಲ್ 2023

ಒಳಿತು ಮಾಡೋಣ...

 


*ಒಳಿತು ಮಾಡಿ ಬಿಡೋಣ*


ಅವನಿಗೆ ಬಿಟ್ಟು 

ಯಾರಿಗೂ ತಿಳಿದಿಲ್ಲ 

ಎಂದು ನಮ್ಮ ಅಂತಿಮ ಯಾನ |

ನಾಲ್ಕು ಜನಕ್ಕಾದರೂ 

ಒಳಿತು ಮಾಡಿಬಿಡೋಣ

ಅಪೇಕ್ಷಿಸದೇ  ಮಾನ ಸಮ್ಮಾನ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ



30 ಮಾರ್ಚ್ 2023

SSLC ಮಕ್ಕಳ ಪರೀಕ್ಷೆಗೆ ಆಲ್ ದ ಬೆಸ್ಟ್ ....

 


ಎಸ್ ಎಸ್ ಎಲ್ ಸಿ ಮಕ್ಕಳ ‌ಪರೀಕ್ಷೆಗೆ
ಆಲ್ ದ ಬೆಸ್ಟ್

ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಎಸ್ ಎಸ್ ಎಲ್ ಸಿ ಒಂದು ಪ್ರಮುಖ ಘಟ್ಟ ಮನೆಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿದ್ದರೆ ವರ್ಷದ ಆರಂಭದಿಂದ ಮಕ್ಕಳು ಮತ್ತು ಪೋಷಕರಲ್ಲಿ ಒಂದು ರೀತಿಯ ಅವ್ಯಕ್ತ ಆತಂಕ ಮನೆ ಮಾಡಿರುತ್ತದೆ ಇದು


ಅಪೇಕ್ಷಿತ ಅಲ್ಲದಿದ್ದರೂ ಅನಿವಾರ್ಯ ಎಂಬಂತಾಗಿ ಬಿಟ್ಟಿದೆ ಕ್ರಮಬದ್ಧವಾಗಿ ಅದ್ಯಯನ ಮಾಡಿದರೆ ಈ ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.  ಈ ವರ್ಷದ ಹತ್ತನೇ ತರಗತಿಯ ಪರೀಕ್ಷೆ   ಮಾರ್ಚ್ 31 ರಿಂದ ಆರಂಭವಾಗಲಿದೆ.
  ಎಸ್ ಎಸ್ ಎಲ್ ಸಿ‌ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಎದುರಿಸಲು ಸಿದ್ದ ಆಗಬೇಕು ಈ ದಿಸೆಯಲ್ಲಿ.  ಪಾಲಕರ ಮತ್ತು ವಿದ್ಯಾರ್ಥಿಗಳ ಜವಾಭ‍್ದಾರಿ ಮತ್ತು ಪಾತ್ರ ಮಹತ್ತರವಾದುದು.  ಈ ಕೆಳಕಂಡ ಕ್ರಮಗಳನ್ನು ಅಳವಡಿಸಿಕೊಂಡರೆ ಎಸ್ ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಸುಲಭವಾಗಿ ಯಶಸ್ಸು ಗಳಿಸಬಹುದು.

 ವಿದ್ಯಾರ್ಥಿಗಳೇನುಮಾಡಬೇಕು?

 1  ಪ್ರತಿದಿನವೂ ಸಂತೋಷದಿಂದಿರಿ     2  ಅವಸರ ಮತ್ತು ಆತುರದ ನಿರ್ಧಾರಗಳಿಂದ ನೀವು ಕಲಿತದ್ದು ಮರೆತು ಹೋಗಬಹುದು ಆದ್ದರಿಂಧ ಯಾವಾಗಲೂ ಶಾಂತತೆಯನ್ನು ಕಾಪಾಡಿಕೊಳ‍್ಳಿ.              
3  ಪ್ರತಿ ದಿನ ಯೋಗ ಧ‍್ಯಾನ,ಪ್ರಾರ್ಥನೆಮಾಡಿ ಏಕಾಗ್ರತೆಯನ್ನು ಸಾಧಿಸಬಹುದು.    
4 ಮನೆಯವರು ಸಿನಿಮಾ ಮಾರ್ಕೇಟ್ ,ಜಾತ್ರೆಗಳಿಗೆ ಹೋದರೆ ನೀವು ಅವರನ್ನು ಹಿಂಬಾಲಿಸಬೇಡಿ      

5 ರಿಲ್ಯಾಕ್ಸ್ ಬೇಕೆಂದು ಹೆಚ್ಚು ಹೊತ್ತು ಹೊರಗೆ ಸುತ್ತ ಬೇಡಿ                       

  6 ಎಲ್ಲೇ ಹೋದರೂ ಸಮಯದ ಅರಿವಿರಲಿ

7 ನಿಮ್ಮ ಸಹನೆ ಪರೀಕ್ಷೆಯಾಗುವುದು ಪರೀಕ್ಷೆಯಕಾಲದಲ್ಲಿ ಅದಕ್ಕೆ ತಾಳ‍್ಮೆಯಿಂದಿರಿ 

  8 ವಿದ್ಯಾರ್ಥಿಗಳೆ ನಿಮ್ಮ ಭವಿಷ್ಯ ಹಾಳು ಮಾಡಿಕೊಳ‍್ಳದಿರಿ      

                              
ಪಾಲಕರು ಮಾಡಬೇಕಾದುದು   


 1 ಸಮಯಕ್ಕೆ ಸರಿಯಾಗಿ ಮಕ್ಕಳಿಗೆ  ಪೌಷ್ಟಿಕ ಆಹಾರ ನೀಡಿ.                     

  2. ಓದಲು ಶಾಂತವಾದ ವಾತಾವರಣ ಕಲ್ಪಿಸಿ ಕೊಡಿ                  

 3ಎಲ್ಲಾ ಭಾವನೆಗಳನ್ನು ಹಂಚಿಕೊಳ‍್ಳಲು ನಾನಿದ್ದೇನೆಂದು ಭರವಸೆ ಕೊಡಿ.                
4 ಓದಿದ ಮನಸಿಗೆ ವಿರಾಮ ನಿದ್ರೆ ಅವಶ್ಕಕ ಅದಕ್ಕೆ ಅವಕಾಶ ಮಾಡಿಕೊಡಿ.  
5 ಎಲ್ಲಾ ಸಮಯದಲ್ಲಿ ಓದು ಓದು ಎಂದು “ಕಿರಿ ಕಿರಿ “ಮಾಡದಿರಿ           

   6ಮತ್ತೆ ಮತ್ತೆ “ಪರೀಕ್ಷೆ ಹತ್ತಿರ ಬರುತ್ತಿದೆ “ಎಂದು ಭಯಪಡಿಸಬೇಡಿ .                
7 ಮಕ್ಕಳು ಪ್ರತಿನಿತ್ಯ ಇಷ್ಟಪಟ್ಟು ಓದುವಂತೆಪ್ರೇರೇಪಿಸಿ .      


 ಪರೀಕ್ಷೆಯ ಹಿಂದಿನ ದಿನದ  ಸಿದ್ದತೆ

 1 ತುಂಬಾನಿದ್ದೆಗೆಟ್ಟು ಓದಬೇಡಿ ಮೆದುಳು ವಿಪರೀತ ದಣಿದರೆ ನೆನಪಿನ ಶಕ್ತಿ ಕುಂಟಿತವಾಗುತ್ತದೆ                     

   2 ಕಡ್ಡಾಯವಾಗಿ ಆರು ಗಂಟೆ ನಿದ್ರೆ ಮಾಡಿ.                                 3ಪೆನ್ನು .ಪೆನ್ಸಿಲ್.ಇರೇಸರ್.ಜಾಮಿಟ್ರಿ ಬಾಕ್ಸ್,ಇತ್ಯಾದಿ ಲೇಖನ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಳ‍್ಳಿ,ಜೊತೆಗೆ ಹಾಲ್ ಟಿಕೆಟ್,ಗುರುತಿನ ಚೀಟಿ ಇರಲಿ            4 ಮತ್ತೊಮ್ಮೆ ವೇಳಾಪಟ್ಟಿ ಪರೀಕ್ಷಿಸಿ .       
5 ನಾಳೆ ನಾನು ಪರೀಕ್ಷೆ ಖಂಡಿತವಾಗಿ ಚೆನ್ನಾಗಿ ಬರೆಯುತ್ತೇನೆಂದು ಸಂಕಲ್ಪ ಮಾಡಿಕೊಂಡು ಮಲಗಿ.                    
6ಬೇಗಮಲಗಿಬೇಗಏಳಿ.                                                                                                            ಪರೀಕ್ಷೆಯದಿನ

1 ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮ ಮುಗಿಸಿ  ಹತ್ತು ನಿಮಿಷ ಧ್ಯಾನ ಮಾಡಿ ನಾನು ಪರೀಕ್ಷೆಯಲ್ಲಿ ಉತ್ತಮವಾಗಿ ಉತ್ತರಿಸಬಲ್ಲೆ ಎಂದು ಸಂಕಲ್ಪ ಮಾಡಿ
2 ಹಿಂದಿನ  ದಿನ ಹೊಂದಿಸಿಟ್ಟುಕೊಂಡಿದ್ದ ಲೇಖನಸಾಮಗ್ರಿಗಳನ್ನು ನೋಡಿಕೊಳ‍್ಳಿ.               
3‌ ಬೆಳಿಗ್ಗೆ ತಿಂಡಿ ತಿನ್ನುವುದನ್ನು ಮರೆಯಬೇಡಿನಿಮ್ಮ ಜೊತೆಗೆ ಪರೀಕ್ಷೆಗೆ ನೀರಿನ ಬಾಟಲ್ ತೆಗೆದುಕೊಂಡುಹೋಗಿ                  
4 ಮನೆ ಬಿಡುವ ಹೊತ್ತಿನಲ್ಲಿ ಓದುತ್ತಾ ಕುಳಿತುಕೊಳ‍್ಳಬೇಡಿ ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಿ ಮೆದುಳು ವಿಶ್ರಾಂತ ಸ್ತಿತಿಯಲ್ಲಿರಬೇಕು.    
5 ಪರೀಕ್ಷಾ ಕೇಂದ್ರಕ್ಕೆ ಅರ್ದ ಗಂಟೆ ಮೊದಲೇ ತಲುಪಿ ನಿಮ್ಮ ರಿಜಿಸ್ಟರ್ ನಂಬರ್ ,ಕೊಠಡಿ ಆಸನ ವ್ಯವಸ್ಥೆ ನೋಡಿಕೊಳ‍್ಳಿ.        
6 ಪರೀಕ್ಷಾ ಕೇಂದ್ರದ ಬಳಿನಿಮ್ಮ ಸ್ನೇಹಿತರ ಜೊತೆ ಅಂದಿನ ವಿಷಯದ ಬಗ್ಗೆ ಚರ್ಚೆ ಬೇಡ.           

ಪರೀಕ್ಷಾ  ಕೊಠಡಿಯಲ್ಲಿ    

1 .15 ನಿಮಿಷ ಮೊದಲೇ ಪರೀಕ್ಷಾ ಕೊಠಡಿಯಲ್ಲಿ ಕುಳಿತುಕೊಳ‍್ಳಿ.           

   2. ಕೆಲ ಕಾಲ ಧೀರ್ಘ ಉಸಿರೆಳೆದು ಕೊಂಡು ಶಾಂತವಾಗಿ ಕುಳಿತುಕೊಳ್ಳಿ.                          
3ಪ್ರಶ‍್ನೆ ಪತ್ರಿಕೆ ಮತ್ತು  ಉತ್ತರ ಪತ್ರಿಕೆ ಪಡೆದ ಬಳಿಕ ಎಲ್ಲಾ ಪುಟಗಳು ಮುದ್ರಿತವಾಗಿವೆಯೇ ಎಂದು ಪರೀಕ್ಷಿಸಿಕೊಳ‍್ಳಿ.                               

 4ಪ್ರಶ್ನೆ ಪತ್ರಿಕೆಯನ್ನು ತಾಳ‍್ಮೆಯಿಂದ ಸಂಪೂರ್ಣವಾಗಿ ಒಮ್ಮೆ ಓದಿ ಅರ್ಥೈಸಿಕೊಳ‍್ಳಿ.              5 ಪರೀಕ್ಷೆ ಕೊಠಡಿಯಲ್ಲಿ ಯಾರೊಂದಿಗೂ ಮಾತನಾಡಬೇಡಿ.   

  6 ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವಾಗ ಎಚ್ಚರವಾಗಿರಿ          
7 ಉತ್ತರಗಳನ್ನು ನೇರವಾಗಿ , ಮತ್ತು  ಸ್ಪಷ್ಟವಾಗಿ ಬರೆಯಿರಿ                
8 ಮುಖ್ಯವಾದ  ಅಂಶಗಳಿಗೆ ಅಂಡರ್ ಲೈನ್ ಮಾಡಿ.                   

   9 ಚಿತ್ರಗಳು.ಭೂಪಟಗಳು .ಮತ್ತು ರೇಖಾಚಿತ್ರಗಳನ್ನು ಸ್ಪಷ್ಟವಾಗಿ ಬರೆದು ಭಾಗಗಳನ್ನು ಗುರ್ತಿಸಿ.            

          10 ಹೆಚ್ಚಿನ  ಉತ್ತರ ಹಾಳೆಗಳನ್ನು ತೆಗೆದುಕೊಂಡಿದ್ದರೆ ಅವುಗಳಿಗೆ ನಿಮ್ಮ ರಿಜಿಸ್ಟರ್ ನಂಬರ್ ಸರಿಯಾಗಿ ನಮೂದಿಸಿ ಸರಿಯಾಗಿ ಕಟ್ಟಿ  ಕೊನೆಯ 15 ನಿಮಿಷದಲ್ಲಿ ಬರೆದಿರುವ ಎಲ್ಲಾ ಪ್ರಶ್ನೆಗಳು ಮತ್ತು ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ಕೊನೆಯಲ್ಲಿ ಕೊಠಡಿ ಮೇಲ್ವಿಚಾರಕರಿಗೆ ನೀಡಿ.      

                                                                     ನಿಮಗೆ ಶುಭವಾಗಲಿ                                                                               ನಿಮಗೆಲ್ಲಾ ಯಶಸ್ಸು ದೊರೆಯಲಿ                                                                                    ಸಿ.ಜಿ.ವೆಂಕಟೇಶ್ವರ.ಶಿಕ್ಷಕರು .                 


ಸರ್ಕಾರಿ ಪ್ರೌಢಶಾಲೆ  ಕ್ಯಾತ್ಸಂದ್ರ

ತುಮಕೂರು.
9900925529