04 ಫೆಬ್ರವರಿ 2023

ಗುಂಡಿನ ಸೇವೆ...

 

ಲಕ್ಷ್ಮೀ ನರಸಿಂಹಸ್ವಾಮಿಯ ಗುಂಡಿನ ಸೇವೆ ಮತ್ತು ಅನ್ನದ ಕೋಟೆ ಉತ್ಸ  

ಹೊರಕೇದೇಪುರ ! ನಮ್ಮೂರು  ಕೊಟಗೇಣಿಯಿಂದ ಐದು ಕಿಲೋಮೀಟರ್ ಪಶ್ಚಿಮಕ್ಕೆ ಇರುವ ಐತಿಹಾಸಿಕ, ಪೌರಾಣಿಕ ಮತ್ತು ಭಕ್ತಿ ಪ್ರಧಾನವಾದ ದೇಗುಲದ ಊರು.ದಾಖಲೆಗಳಲ್ಲಿ ಹೊರ ಕೆರೆ ದೇವರಪುರ ಎಂದು ಇದ್ದರೂ ನಾವು ಈಗಲೂ ಕರೆಯುವುದೇ  ಹೊರಕೇದೇಪುರ. ನನ್ನ ಬಾಲ್ಯಕ್ಕೂ ಹೊರಕೇದೇಪುರಕ್ಕೂ ಅವಿನಾಭಾವ ಸಂಬಂಧವಿದೆ. ಅಲ್ಲಿನ ರಂಗಪ್ಪ ದೇವಾಲಯಕ್ಕೆ ಆಗಾಗ ಹೋಗಿ ಆಶೀರ್ವಾದ ಪಡೆಯುವುದು, ಶನಿವಾರದ ಸಂತೆಯಲ್ಲಿ ಅಮ್ಮನ ಜೊತೆಯಲ್ಲಿ ಹೋಗಿ ಕಾರಮಂಡಕ್ಕಿ ತಿಂದದ್ದು ಗೆಳೆಯರ ಜೊತೆಯಲ್ಲಿ ರಾತ್ರಿ ಟೆಂಟ್ ನಲ್ಲಿ ಸಿನೆಮಾ ನೋಡಿ ಐದು ಕಿಲೋಮೀಟರ್ ನಡೆದುಕೊಂಡು ಮನೆ ಸೇರಿದ ನೆನಪುಗಳು ಒಂದೇ  ಎರಡೇ ಹೊರಕೆದೇಪುರ ಎಂದರೆ ನನ್ನ ಬಾಲ್ಯದ ನೂರಾರು ನೆನಪುಗಳು ಒತ್ತರಿಸಿಕೊಂಡು ಬರುತ್ತವೆ .ಈಗಲೂ ನಾನು ಊರಿಗೆ ಹೋದಾಗ ಹೊರಕೆದೇಪುರಕ್ಕೆ ಹೋಗಿಯೇ ಬರುವೆ .ಮೊನ್ನೆ ಊರಿಗೆ ಹೋದಾಗ ಹೊರಕೆದೇಪುರ ವಿಶೇಷವಾದ ಅಲಂಕಾರಕ್ಕೆ ಸಿದ್ಧವಾಗುತ್ತಿತ್ತು .ದೊಡ್ಡ ದೊಡ್ಡ ಪ್ಲೆಕ್ಸ್ ನಮ್ಮನ್ನು ಸ್ವಾಗತಿಸಿದವು ಅದರ ಮಾಹಿತಿ ಓದಿದಾಗ "ಗುಂಡಿನ ಸೇವೆ ಮತ್ತು ಅನ್ನದ ಕೋಟೆ" ನನ್ನ ಗಮನ ಸೆಳೆಯಿತು. ಮತ್ತು ಬಾಲ್ಯದಲ್ಲಿ ನಮ್ಮ ರಂಗಜ್ಜಿ ಮತ್ತು ಅಮ್ಮ ಗುಂಡಿನ ಸೇವೆಗೆ ಕರೆದುಕೊಂಡು ಹೋದ ಘಟನೆ ಮತ್ತು ಗುಂಡಿನ ಸೇವೆ ಮತ್ತು ಅನ್ನದ ಕೋಟೆಯ ಬಗ್ಗೆ ನಮ್ಮಜ್ಜಿ ಹೇಳಿದ ಕಥೆ ನೆನಪಆಗಿದೆ .

ದೇವರು ನೀಡಿದ ಶಿಕ್ಷೆಯನ್ನೇ ಇಲ್ಲಿ ಉತ್ಸವವಾಗಿ ಆಚರಿಸಲಾಗುತ್ತದೆ. ನಂದರಾಜ ಪಟ್ಟಣ ಈಗ ಅದು  ನಂದನಹೊಸೂರು ಆಗಿದೆ ಅದು ಬೆಂಕಿಯಿಂದ ಭಸ್ಮವಾದಾಗ ಕೃಷ್ಣಾಚಲ ಬೆಟ್ಟದಲ್ಲಿ ದನ ಕಾಯುತ್ತಿದ್ದ ಹುಡುಗರು ಭಯಭೀತರಾಗಿ ಮುಂದೇನಾಗುವುದೋ ಎಂದು ಕಂಗಾಲಾಗಿರುತ್ತಾರೆ. ಆಗ ಸ್ವಾಮಿಯು ಸಾಧು ವೇಷದಲ್ಲಿ ಬಂದು ದನ ಕಾಯುವ ಹುಡುಗರಲ್ಲಿ ಒಬ್ಬನನ್ನು ಕರೆದು "ನಿಮ್ಮ ಪಟ್ಟಣವು ಸುಟ್ಟು ಹೋಗಿದೆ. ಈಗ ನೀವು ಎಲ್ಲಿಗೆ ಹೋಗುತ್ತೀರಿ? ಊಟಕ್ಕೆ ಏನು ಮಾಡುತ್ತೀರಿ? ನಿಮ್ಮ ಜತೆ ನನಗೂ ಊಟ ಸಿಗಬಹುದೇ?" ಎಂದು ಕೇಳುತ್ತಾರೆ. 

ಆಗ ಆ ಹುಡುಗನಿಗೆ ಸಿಟ್ಟು ಬಂದು "ಇದೇ ಬೆಟ್ಟದ ಹಿಂದೆ ಇರುವ ತಾಳ್ಯದ ಆಂಜನೇಯಸ್ವಾಮಿ ದೇವರಿಗೆ ನೂರೊಂದೆಡೆ ಹಾಕಿದ್ದಾರೆ. ನೀನು ಅಲ್ಲಿಗೆ ಹೋದರೆ ಊಟ ಸಿಗುತ್ತದೆ" ಎಂದು ಹೇಳುತ್ತಾನೆ. ಆಗ ಸ್ವಾಮಿಗೆ ಈ ಹುಡುಗ ಸುಳ್ಳು ಹೇಳುತ್ತಿದ್ದಾನೆ   ಎಂದು ಗೊತ್ತಾಗುತ್ತದೆ.

"ಹಸಿವಿನ ವಿಚಾರದಲ್ಲಿ ಸುಳ್ಳು ಹೇಳಬಾರದು. ನಿನ್ನ ಸುಳ್ಳಿಗೆ ಶಿಕ್ಷೆ ಆಗಲೇಬೇಕು. ನೀನು ಹೇಳಿದ ಜಾಗದಲ್ಲೇ ನಾನು ನೂರೊಂದೆಡೆ ಹಾಕಿಸಿಕೊಳ್ಳುತ್ತೇನೆ. ನಿನ್ನ ಸುಳ್ಳಿಗೆ ಶಿಕ್ಷೆಯಾಗಿ ನಿನ್ನ ಎದೆಯ ಮೇಲೆ ಮೂರು ಗುಂಡುಗಳನ್ನು ಇರಿಸಿ ತಾಳ್ಯದ ಆಂಜನೇಯ ಸ್ವಾಮಿಯ ಎದುರಿನಲ್ಲಿ ಚಮಟಿಗೆಯಿಂದ ನಿಮ್ಮವರಿಂದಲೇ ಹೊಡೆಸಿ, ನಿನ್ನನ್ನು ನನ್ನ ದಾಸಯ್ಯನನ್ನಾಗಿ ಮಾಡಿಕೊಳ್ಳುತ್ತೇನೆ. ಸುತ್ತಲಿನ ಹತ್ತಾರು ಗ್ರಾಮಗಳ ದೇವರುಗಳ ಸಮ್ಮುಖದಲ್ಲಿ ಅನ್ನದ ಕೋಟೆ ಮಾಡಿಸಿ ಅನ್ನ ಹಾಕಿಸುತ್ತೇನೆ" ಎಂದು ಹೇಳುತ್ತಾರೆ. ಇದರಂತೆ ಪ್ರತಿ 12 ವರ್ಷಗಳಿಗೆ ಒಮ್ಮೆ ಗುಂಡಿನ ಸೇವೆ ಹಾಗೂ ಅನ್ನ ಕೋಟೆ ಉತ್ಸವ ನಡೆಯುತ್ತದೆ.
ಹಿಂದಿನಿಂದಲೂ ನಂದನಹೊಸೂರಿನ ದಾಸಯ್ಯನ ವಂಶಸ್ಥರು ಗುಂಡಿನ ದಾಸಯ್ಯನಾಗಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಗುಂಡಿನ ಸೇವೆ ಧಾರ್ಮಿಕ ಕಾರ್ಯಕ್ಕೆ ನೇಮಿಸುವ ದಾಸಯ್ಯನು ತಮ್ಮ ಮನೆದೈವ ಆಂಜನೇಯಸ್ವಾಮಿಗೆ ಮೊದಲ ಪೂಜೆ ಸಲ್ಲಿಸಿ 9 ದಿನ ಹಾಲು, ಹಣ್ಣು ಸೇವನೆ ಮಾಡಿ ನೇಮದಿಂದ ಇದ್ದು ಗುಂಡಿನ ಸೇವೆ ಆಚರಣೆಯಲ್ಲಿ ತೊಡಗುತ್ತಾರೆ .
ನಮ್ಮೂರಿನ ಚೌಡಮ್ಮ ಮತ್ತು ಪಾತೇದೇವರು ಸೇರಿ ಸುತ್ತ ಮುತ್ತಲಿನ ಮೂವತ್ಮೂರು ಹಳ್ಳಿಗಳ ಗ್ರಾಮ ದೇವ ದೇವತೆಗಳನ್ನು ಗುಂಡಿನ ಸೇವೆ ಮತ್ತು ಅನ್ನದ ಕೋಟೆಯ ದಿನದಂದು ಒಂದೆಡೆ ನೋಡಿ  ಕಣ್ತುಂಬಿಕೊಳ್ಳುವುದೇ ಒಂದು ಅದೃಷ್ಟ.
ಇದೇ ತಿಂಗಳ ಆರು ಮತ್ತು ಏಳರಂದು  ಗುಂಡಿನ ಸೇವೆ ಮತ್ತು ಅನ್ನದ ಕೋಟೆ ಉತ್ಸವ ನಡೆಯುತ್ತಿದೆ.ಮತ್ತೆ ಈ ಉತ್ಸವ ನಡೆಯುವುದು ಹನ್ನೆರಡು ವರ್ಷಗಳ ನಂತರ ಸಾಧ್ಯವಾದರೆ ಈ ಉತ್ಸವದಲ್ಲಿ ನೀವೂ ಪಾಲ್ಗೊಳ್ಳಿ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


03 ಫೆಬ್ರವರಿ 2023

ಮಿತಿ ಏಕೆ?


 


ಕಲ್ಪನೆ .


ಒಮ್ಮೆ ಚಂದಿರನ ಚುಂಬಿಸಿ ಬರುವ,

ಮತ್ತಮ್ಮೆ ಹಿಮಾಲಯವನೇರಿ ಹಾಕೋಣ ಕೇಕೆ |

ಅದಕೇನು  ದುಡ್ಡ ಕೊಡಬೇಕೆ ? 

ಕಲ್ಪನೆಗೆ ಮಿತಿ ಏಕೆ ?||


ಸಿಹಿಜೀವಿ


01 ಫೆಬ್ರವರಿ 2023

ಜೋಡಿ...

 


ಜೋಡಿಗಳು...


ನಾವಿಬ್ಬರೂ ಅಪೂರ್ವ ಗೆಳೆಯರು

ಒಬ್ಬರನ್ನೊಬ್ವರು ಅಗಲದವರು

ಜೊತೆಯಲ್ಲಿಯೇ ಪಯಣ

ಜೊತೆಯಲ್ಲಿಯೇ ನಿಲುಗಡೆಯು.


ಕಲ್ಲು ಮುಳ್ಳಿನ ಭಯವಿಲ್ಲದೇ 

ಎಲ್ಲೆಡೆ ಸುತ್ತಿದ್ದೆವು 

ಯಾವಾಗಲಾದರೊಮ್ಮೆ ಬೇರಾದಾಗ 

ಸತ್ತು ಬದುಕಿದ ಭಾವ ಅನುಭವಿಸಿದ್ದೆವು.


ಕೆಲವರ ಮನೆಯೊಳಗೆಲ್ಲ ಓಡಾಡಿ ಬಂದೆವು

ಹಲವರ ಮನೆಯ ಹೊಸಿಲ ಹೊರಗಡೆಯೇ ನಿಂತಿದ್ದೆವು ಆಗಲೂ ಜೊತೆಯಾಗಿಯೇ ಇದ್ದೆವು.


ನಮಗೆ ನೋವಾದರೂ ನಮ್ಮ ಜೊತೆಗಿರುವವರ ಹಿತ ಕಾಪಾಡಿ

ಪರೋಪಕಾರಿಗಳಾದೆವು.

ನಮ್ಮನ್ನು ಕೀಳಾಗಿ ಕಂಡರೂ 

ಪರರ ರಕ್ಷಣೆಗೆ ಮುಂದಾದೆವು.


ಇಂದೇಕೋ ಮನಕೆ ಬೇಸರವಾಗಿದೆ

 ಜೋಡಿಯನಗಲಿದ ಜೋಡು   ಎಲ್ಲಿದೆ? 

ಯಾರು ಸಂತೈಸುವರು ನನ್ನನೀಗ 

ನಾನೊಂದು ಅನಾಥ ಚಪ್ಪಲಿ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




31 ಜನವರಿ 2023

ದೇವ ಪೂಜೆ...

 



ದೇವ ಪೂಜೆ.


ಸೂರ್ಯ ,ಚಂದ್ರ‌ರು 

ಸದಾ ಕರ್ತವ್ಯದಲ್ಲಿರುವರು 

ಜಗದ ಒಳಿತಿಗೆ 

ಒಂದು ದಿನವೂ ಹಾಕದೆ ರಜೆ|

ನಾವೂ ಕರ್ತವ್ಯ ಮಾಡಬೇಕಿದೆ

ಸರ್ವರ ಒಳಿತಿಗೆ ಜಗದ ಹಿತಕೆ

ಇಷ್ಟು ಮಾಡಿದರೆ ಸಾಕು 

ಮಾಡಲೇಬೇಕಿಲ್ಲ ದೇವಪೂಜೆ ||

ಚಾಟ್ ಜಿ ಪಿ ಟಿ ಮತ್ತು ಶಿಕ್ಷಣ...

 


ಚಾಟ್ ಜಿ ಪಿ ಟಿ ಮತ್ತು ಶಿಕ್ಷಣ ವ್ಯವಸ್ಥೆ...


ಮೊನ್ನೆ ಒಬ್ಬರು ಪೋಷಕರು ಪೋನ್ ಮಾಡಿ ಸಾರ್ ನನ್ನ ಮಗ ಯಾವಾಗಲೂ ಮೊಬೈಲ್ ಫೋನ್ ನೋಡ್ತಾನೆ ಅವನಿಗೆ ಸ್ವಲ್ಪ ಬುದ್ದಿ ಹೇಳಿ ಎಂದಾಗ ಅವರ ಮಗನ ಮಾತಾಡಿಸಿದಾಗ ಸಾರ್ ನಾನು ಪಾಠಕ್ಕೆ ಸಂಬಂಧಿಸಿದಂತೆ ಗೂಗಲ್ ನಲ್ಲಿ ನೋಡಿ ತಿಳಿಯುತ್ತಿದ್ದೆ ಎಂದ.

ಅವನಿಗೆ ಗೂಗಲ್ ನೋಡಲೇಬೇಡ ಎಂದು ಹೇಳುವ ಸ್ಥಿತಿಯಲ್ಲಿ ಇಂದು ನಾವಿಲ್ಲ ಗೂಗಲ್ ನಮ್ಮ ಜೀವನದ ಅವಿಭಾಜ್ಯ ಅಂಗವೇನೋ ಎಂಬ ಭಾವನೆ ಬಂದು ಬಿಟ್ಟಿದೆ. ಆ ಹುಡುಗನಿಗೆ ಗೂಗಲ್ ಬಳಕೆ ಕಡಿಮೆ ಮಾಡಿ ಪುಸ್ತಕ ,ಪತ್ರಿಕೆಗಳಲ್ಲಿ ವಿಷಯ ಸಂಗ್ರಹಿಸಲು ಸಲಹೆ ನೀಡಿ ಪೋನ್ ಕಟ್ ಮಾಡಿದೆ .


ಈ ಗೂಗಲ್ ನಿಂದ ಇನ್ನೂ ಏನೇನು ಅನುಕೂಲ ಮತ್ತು ಅನಾನುಕೂಲ ಇವೆ ಎಂದು ಯೋಚಿಸುವಾಗ ಜಗತ್ತಿನಲ್ಲಿ ಇಂದು ಬಹುಚರ್ಚೆಯ ಚಾಟ್ ಜಿ ಪಿ ಟಿ ನೆನಪಾಯಿತು.

ಗೂಗಲ್ ಗೆ ಟಕ್ಕರ್ ನೀಡುವ ಈ ಕೃತಕ ಬುದ್ದಿ ಮತ್ತೆಯ ತಾಣವು ನಾವು ಕೇಳಿದ ಮಾಹಿತಿಯನ್ನು ನೇರವಾಗಿ ನೀಡುತ್ತದೆ.ಒಮ್ಮೆ ವೆಬ್ ಸೈಟ್ ಗೆ ಹೋಗಿ ನೊಂದಾಯಿಸಿದರೆ ನಿಮಗೆ ಬೇಕಾದ ಮಾಹಿತಿಯನ್ನು ಕೇಳಲು ಟೈಪ್ ಮಾಡಿದರೆ ಅದು ಉತ್ತರ ಬರೆಯುತ್ತಾ ಸಾಗುತ್ತದೆ.


ಚಾಟ್ ಜಿ ಪಿ ಟಿ    ನವೆಂಬರ್ 2022 ರಲ್ಲಿ ಓಪನ್‌‍ಎಐ ನಿಂದ ಪ್ರಾರಂಭಿಸಲಾದ ಚಾಟ್‌ಬಾಟ್ ಆಗಿದೆ. ಇದು ಓಪನ್‌‍ಎಐ ನ  ಕುಟುಂಬದ ದೊಡ್ಡ ಭಾಷಾ ಮಾದರಿಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಮೇಲ್ವಿಚಾರಣೆಯ ಮತ್ತು ಬಲವರ್ಧನೆಯ ಕಲಿಕೆಯ ತಂತ್ರಗಳೆರಡರ ಜೊತೆಗೆ ಉತ್ತಮವಾಗಿ ಟ್ಯೂನ್ ಮಾಡಲಾಗಿದೆ. 


ಚಾಟ್‌ಜಿಪಿಟಿ ಅನ್ನು ನವೆಂಬರ್ 30 2022 ರಂದು ಮೂಲ ಮಾದರಿಯಾಗಿ ಪ್ರಾರಂಭಿಸಲಾಯಿತು.  ಅಂದರೆ ಅದಕ್ಕೆ ಕೇವಲ ಮೂರು ತಿಂಗಳ ಪ್ರಾಯ!  ಅದರ  ಕಾರ್ಯ ವಿಧಾನದಿಂದ ಜಗತ್ತಿನಲ್ಲಿ ಮನೆಮಾತಾಗಿದೆ.ಎಲ್ಲರ ಮನ ಗೆದ್ದು  ಗೂಗಲ್ ನಂತಹ ದೈತ್ಯ ಕಂಪನಿಯೇ ಚಿಂತಿಸುವಂತೆ ಮಾಡಿದೆ. 

ನಮಗೆ ಬೇಕಾದ ಮಾಹಿತಿಯನ್ನು ಕೇವಲ ಕರ್ಸರ್ ಬ್ಲಿಂಕ್ ಮಾಡುತ್ತಲೇ ನೀಡುವ ಈ ಚಾಟ್ ಬಾಟ್ ಮೊದಲೇ ಫೀಡ್ ಮಾಡಿದ ಮಾಹಿತಿಯನ್ನು ನಮಗೆ ಸಂಸ್ಕರಿಸಿ ಕೊಡುತ್ತದೆ. ಇದು ಕೆಲವೊಮ್ಮೆ ನಿಖರತೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.



ಬರವಣಿಗೆಯ ವಿಷಯದಲ್ಲಿ ಸದ್ಯಕ್ಕೆ ಪರೀಕ್ಷೆಯಲ್ಲಿ ಅಚ್ಚುಕಟ್ಟಾಗಿ ಪುಟ ತುಂಬಿಸುವ ಚಾಲಾಕಿಗಳ ಹಂತದಲ್ಲಿದೆ ಈ Chat GPT, ಆದರೆ, ಪುಟ ತುಂಬಿಸಿರುವುದರಲ್ಲಿ ಸತ್ವವೇನಾದರೂ ಇದೆಯೇ ಎಂದು ಹುಡುಕಿದರೆ ಸಂಪೂರ್ಣವಾಗಿ ಹೌದು ಎಂದು ಹೇಳಲಾಗುವುದಿಲ್ಲ.ಇದು ಚಾಟ್ ಜಿ ಪಿ ಟಿ ಯ ಮಿತಿಯೂ ಹೌದು ಎಂದರೆ ತಪ್ಪಾಗಲಾರದು. 


ಇದು ನೂರಾರು ಪದಗಳನ್ನು ಚಕಚಕನೆ ಬರೆದುಕೊಡಬಹುದು. ಆದರೆ, ಸತ್ವದ ವಿಚಾರದಲ್ಲಿ ಚಾಟ್  GPT ವಿಶ್ವಾಸ ಗಳಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ.  

ಇದು ಹೇಗೆ ಕಾರ್ಯನಿರ್ವಹಣೆ ಮಾಡುತ್ತದೆ ಎಂದು 

ಪರೀಕ್ಷೆ ಮಾಡಲು  

ನಾನು ಬೋಧನೆ ಮಾಡುವ ಸಮಾಜ ವಿಜ್ಞಾನ ವಿಷಯದ ಸುಭಾಷ್ ಚಂದ್ರ ಬೋಸ್ ಬಗ್ಗೆ ಕೇಳಿದಾಗ ಈ ಜಿ ಪಿ.ಟಿ  ತನ್ನ ಕರ್ಸರ್ ಬ್ಲಿಂಕ್ ಬ್ಲಿಂಕಿಸಿ ಶೇಕಡಾ ಐವತ್ತು ಸರಿ ಉತ್ತರ ನೀಡಿತು . 

 ಇದರ ಕಂಟೆಂಟ್ ಅನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್' (NLP) ಇನ್ನೂ ಅ ಹಂತ ತಲುಪಿಲ್ಲ.

ಮನುಷ್ಯ ಭಾಷೆಯನ್ನು ಯಂತ್ರಗಳಿಗೆ ಸಹಜವಾಗಿ ಅರ್ಥ ಮಾಡಿಸುವ ಪ್ರಕ್ರಿಯೆ ಈ NLP. ಧ್ವನಿ ಅಥವಾ ಬರಹದ ಮೂಲಕ ನೀಡುವ ಕಮಾಂಡ್ ಅನ್ನು ಯಂತ್ರಗಳು ಮನುಷ್ಯರಂತೆಯೇ ಅರ್ಥ ಮಾಡಿಕೊಳ್ಳಲು ಈ ಪ್ರಕ್ರಿಯೆ ನೆರವಾಗುತ್ತದೆ. ಚಾಟ್  GPTಯಲ್ಲಿ ಇದರ ಮುಂದುವರಿದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದೇ ಕಾರಣಕ್ಕೆ ನಾವು ಕೊಡುವ ಕಮಾಂಡ್ ಅನ್ನು ಅದು ಕ್ಷಣಮಾತ್ರದಲ್ಲೇ ಬರೆದು ಮುಗಿಸುತ್ತದೆ. ಯಾವುದೇ ಭಾಷೆಯಿಂದ ಇನ್ಯಾವುದೇ ಭಾಷೆಗೆ ಬರಹವನ್ನು ಭಾಷಾಂತರಿಸುವ, ಧ್ವನಿಯ ಮೂಲಕ ನೀಡುವ ಕಮಾಂಡ್ಗಳಿಗೆ ಪ್ರತಿಕ್ರಿಯಿಸುವ ಹಾಗೂ ಬರಹವನ್ನು ಸಂಸ್ಕರಿಸಿ ಸಂಕ್ಷಿಪ್ತಗೊಳಿಸುವ AIನ ಕೆಲಸವನ್ನು NLP ಸುಲಭವಾಗಿಸುತ್ತದೆ. ಮಾಹಿತಿ ಸಂಗ್ರಹ ಮತ್ತು ಬರಹದ ಸಂಸ್ಕರಣೆ ಎರಡೂ ಕೆಲಸಗಳು ಚಾಟ್  GPTಯ ಮೂಲಕ ಅಗುತ್ತಿರುವುದರಿಂದ ಇದರ ಕೆಲಸ ಅಚ್ಚರಿಯ ಹಾಗೆ ಕಾಣುತ್ತಿದೆಯಷ್ಟೆ.


ಶಿಕ್ಷಣ ತಜ್ಞರ ಅತಂಕವೇನು... 


ಕರೋನಾ ಪೂರ್ವ ಹಾಗೂ ಕರೋನೋತ್ತರ ಅವದಿಯಲ್ಲಿ 

ರಾಷ್ಟ್ರೀಯ ಸರ್ವೇಗಳು ಹೊರ ಹಾಕಿದ ಮಾಹಿತಿಯ ಆಧಾರದ ಮೇಲೆ ದೇಶದ ಬಹುತೇಕ ಮಕ್ಕಳು  ಓದು ಬರಹ ಮತ್ತು ಲೆಕ್ಕಾಚಾರ (F L N )  ದಲ್ಲಿ ಹಿಂದುಳಿದಿದೆ  . ಇಂತಹ ವಿದ್ಯಾರ್ಥಿಗಳು ಶಿಕ್ಷಕರು ನೀಡಿದ ಭಾಷೆಗೆ ಸಂಬಂಧಿಸಿದ ಗೃಹಪಾಠಗಳನ್ನು ಮಾಡಿಕೊಡಲು ಜಿ ಪಿ ಟಿ ಮೊರೆ ಹೋದರೆ ಅದು  ಕ್ಷಣಗಳಲ್ಲಿ ಮಾಡಿಕೊಡುತ್ತದೆ. ಲೆಕ್ಕಗಳನ್ನು ಹಂತ ಹಂತವಾಗಿ ಮಾಡಿ ತೋರಿಸುತ್ತದೆ ಅದನ್ನು ನಕಲು ಮಾಡಿ ಶಾಲೆಗೆ ತಂದರೆ ಶಿಕ್ಷಕರು ಅದನ್ನು ನೋಡಿ ಮಗು F L N ಸಾಧಿಸಿದೆ ಎಂಬ ತೀರ್ಮಾನಕ್ಕೆ ಬರಬಹುದು.

ನಮ್ಮ ದೇಶದಲ್ಲಿ ಇದು ಈಗೀಗ ಚರ್ಚೆಯ ವಿಷಯವಾಗಿದೆ ಆದರೆ  ಅಮೆರಿಕದ ಕೆಲ ವಿಶ್ವವಿದ್ಯಾಲಯಗಳು ಚಾಟ್ ಜಿ ಪಿ ಟಿ ಯನ್ನು ನಿಷೇಧಿಸಿವೆ. ಭಾರತದ ಕೆಲ ಕಾಲೇಜುಗಳು ಸಹ ಇದೇ ಹಾದಿ ತುಳಿದಿವೆ. ಚಾಟ್ ಜಿ ಪಿ ಟಿ  ಹಾವಳಿ ನಿಯಂತ್ರಣ ಮಾಡಲು ಕಾಲೇಜುಗಳಲ್ಲಿ ಗೃಹಪಾಠ ನೀಡದೇ  ತಾವೇ ಹಾಳೆಗಳನ್ನು ನೀಡಿ ಉತ್ತರ ಬರೆಸಲು ಚಿಂತನೆ ಮಾಡುತ್ತಿದ್ದಾರೆ. 

ಮೌಲ್ಯಮಾಪನ ಪ್ರಕ್ರಿಯೆಯು ಮೇಲೂ ಇದು ದುಷ್ಪರಿಣಾಮ ಬೀರುವ ಆತಂಕವಿದೆ  .

ಈಗಾಗಲೇ ಎಷ್ಟೇ ಬಿಗಿ ಮಾಡಿದರೂ ಶಾಲಾ ಕಾಲೇಜುಗಳಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಹಾವಳಿ ಪಿಡುಗಾಗಿ ಪರಿಣಮಿಸಿ ಅದು ಭ್ರಷ್ಟಾಚಾರಕ್ಕೆ ದಾರಿಯಾಗಿ  ಶಿಕ್ಷಣ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಈ ಜಿ ಪಿ ಟಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಕ್ಕಿ ಕೋತಿ ಕೈಯಲ್ಲಿ ಸಿಕ್ಕ ಗುಲಗಂಜಿಯಾಗುವುದೇನೋ ಎಂಬ ಅತಂಕ ಮೂಡುತ್ತದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು