01 ಜನವರಿ 2023

ಟೂ ಟೂ...ಸೆ ಸೆ...


 ಮೂರು ಮೂರು ಮಟ  ಟೂ ಟೂ ಟೂ

ಅನ್ಕೋತಾ  ಶೆಟ್ಗೊಂಡು ಆ 

ವರ್ಸ ಹೊಂಟು  ಹೊಯ್ತ್ರಿ |

ಸ್ವಾಗತ ಮಾಡೋನ್ರಿ ನಾವ್ 

ಎರಡು ಮಟ ಟೂ ಅಂದು ಒಂದ್ ಮಟ ಸೇ ಅನ್ನೋ  ಟ್ವೆಂಟಿ ಟ್ಬೆಂಟಿತ್ರಿ |

31 ಡಿಸೆಂಬರ್ 2022

ಶುಭತರಲಿ.

 



*ಶುಭತರಲಿ*


ನಮ್ಮ ಪ್ರಯತ್ನಗಳು ನಿರಂತರವಾಗಿರಲಿ 

ಕಷ್ಟಗಳಿದ್ದರೂ  ನೂರಾರು |

ಸರ್ವರಿಗೂ ಶುಭ ತರಲಿ

ಬರುವ ಎರಡು ಸಾವಿರದ ಇಪ್ಪತ್ಮೂರು ||


ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು💐🌹🌷


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಬರಲಿದೆ ೨೦೨೩

 

2022 ಕಳೆದು ಹೋಗಲಿದೆ
ಎಂಬ ಬೇಸರವೇಕೆ|
ಬಂದೇ ಬರಲಿದೆ 2023
ಇರಲಿ ಬಾಳಿಗೊಂದು ನಂಬಿಕೆ ||

#ಸಿಹಿಜೀವಿ



30 ಡಿಸೆಂಬರ್ 2022

2022 ರ ನೆನಪುಗಳು....ಮತ್ತು 2023ಕ್ಜೆ ಸಂಕಲ್ಪಗಳು...


 


2023 ಕ್ಕೆ ನನ್ನ ಸಂಕಲ್ಪಗಳು...


ಹೊಸ ವರ್ಷ ಅಂತ ಅಲ್ಲದಿದ್ದರೂ ಒಂದು ಕ್ಯಾಲೆಂಡರ್ ಇಯರ್ ಲೆಕ್ಕದಲ್ಲಿ ನಾವು ಮಾಡಲೇಬೇಕಾದ ಕೆಲಸಗಳ ಪಟ್ಟಿ ಮಾಡಲು ಮತ್ತು ಪುನಃ ಜ್ಞಾಪಿಸಿಕೊಂಡು ಮೈ ಕೊಡವಿಕೊಂಡು ಕಾರ್ಯ ಪ್ರವೃತ್ತವಾಗಲು ಈ ಸಂಕಲ್ಪಗಳು ನಮಗೆ ಬೇಕು. ಕಳೆದ ನಾಲ್ಕಾರು ವರ್ಷಗಳ ಈ ಹವ್ಯಾಸ ಈಗ ಅಭ್ಯಾಸವಾಗಿ ವರ್ಕೌಟ್ ಆಗ್ತಾಯಿದೆ ಅನಸ್ತಾಇದೆ.


2022 ರಲ್ಲಿ  ನನ್ನ ಸಂಕಲ್ಪಗಳು ಹೀಗಿದ್ದವು.

 ನನ್ನ ತರಗತಿಯನ್ನು ಇನ್ನೂ ಆಕರ್ಷಕವಾಗಿ ಮಾಡಿ ಮಕ್ಕಳಿಗೆ ಇನ್ನೂ ಉತ್ತಮ ಕಲಿಕೆ ಮಾಡಿಸುವುದು.ಕನಿಷ್ಟಪಕ್ಷ ೫ ಹೊಸ ಪುಸ್ತಕಗಳನ್ನು ಬರೆದು ಪ್ರಕಟ ಮಾಡುವುದು.ಕಡಿಮೆಯೆಂದರೂ  ೨೫  ಪುಸ್ತಕಗಳನ್ನು ಓದುವುದು.ಐತಿಹಾಸಿಕ ಸ್ಥಳಗಳಿಗೆ  ಪ್ರವಾಸ ಮಾಡುವುದು .


ಹಿಂತಿರುಗಿ ನೋಡಿದಾಗ ಬಹುತೇಕ ಸಂಕಲ್ಪಗಳು ಈಡೇರಿವೆ ಕೆಲವು ಗುರಿಮೀರಿದ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳಬಹುದು. ಮೊದಲನೆಯದಾಗಿ ಶಿಕ್ಷಕನಾದ ನಾನು    ನನ್ನ ತರಗತಿಯನ್ನು ಹೆಚ್ಚು ಆಸಕ್ತಿಕರವಾಗಿ ಮಾಡಲು ಪಣ ತೊಟ್ಟಿದ್ದೆ ಆ ನಿಟ್ಟಿನಲ್ಲಿ ಸಾಗಿ ಮಕ್ಕಳಿಗೆ ಉತ್ತಮ ಕಲಿಕೆ ಉಂಟಾಗಲು ಒಬ್ಬ ಅನುಕೂಲಕಾರನಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ನನಗಿದೆ.ಈ ಕಾರ್ಯದಲ್ಲಿ ನಮ್ಮ ಶಾಲೆಯ ಮುಖ್ಯ ಶಿಕ್ಷಕರು, ಸಹೋದ್ಯೋಗಿ ಮಿತ್ರರು, ಇಲಾಖೆಯ ಅಧಿಕಾರಿ ಬಂಧುಗಳ ಸಲಹೆ ಮಾರ್ಗದರ್ಶನ ಮರೆಯಲಾಗುವುದಿಲ್ಲ.ಇದೆಲ್ಲದರ ಪರಿಣಾಮವಾಗಿ ನಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಬಂದಿದೆ! ನನ್ನ ಸಮಾಜ ವಿಜ್ಞಾನ ವಿಷಯದಲ್ಲಿ ಗುಣಮಟ್ಟದ ಫಲಿತಾಂಶದೊಂದಿಗೆ ಒಂಭತ್ತು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದದ್ದು ಒಂದು ಅವಿಸ್ಮರಣೀಯ ಘಟನೆ. 

ನಮ್ಮ ಶಾಲೆಯ ಎಲ್ಲರ ಸಹಕಾರದಿಂದ ನಮ್ಮ ಶಾಲೆಯ ಮಕ್ಕಳು ಜಿಲ್ಲಾ ಮತ್ತು ತಾಲ್ಲೂಕು ಹಂತದ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಉತ್ತಮ ಬಹುಮಾನ ಪಡೆದದ್ದು   ಮತ್ತೊಂದು ಸಂತಸದ ಸಂಗತಿ.

ಇನ್ನೂ ನನ್ನ ಎರಡನೇ ಸಂಕಲ್ಪವಾದ ಕನಿಷ್ಟ ಐದು ಪುಸ್ತಕ ಬರೆದು ಪ್ರಕಟಿಸಬೇಕು ಎಂಬ ವಿಚಾರಕ್ಕೆ ಬಂದರೆ ಇದರಲ್ಲಿ ಗುರಿಮೀರಿದ ಸಾಧನೆ ಮಾಡಿರುವುದು ತೃಪ್ತಿ ಇದೆ. ಈ ವರ್ಷ 

ರಂಗಣ್ಣನ ಗುಡಿಸಲು ಎಂಬ ಕಥಾಸಂಕಲನ ,

ಉದಕದೊಳಗಿನ ಕಿಚ್ಚು ಎಂಬ  ಕಾದಂಬರಿ ,ಶಿಕ್ಷಣವೇ ಶಕ್ತಿ ಎಂಬ  ಶೈಕ್ಷಣಿಕ ಲೇಖನಗಳ ಸಂಕಲನ,

ಬಾರೋ ಬಾರೋ ಗುಬ್ಬಚ್ಚಿ ಎಂಬ  ಶಿಶುಗೀತೆಗಳ ಸಂಕಲನ,

ಭಾಷಣ ಕಲೆ ಎಂಬ ಮಕ್ಕಳ ಪುಸ್ತಕ

ಬಹುಮುಖಿ ಎಂಬ ವಿಮರ್ಶೆ ಕೃತಿ ಸೇರಿ   ಒಟ್ಟು ಆರು ಪುಸ್ತಕಗಳನ್ನು ಸಹೃದಯ ಗೆಳೆಯರ ಸಹಾಯದಿಂದ ಪ್ರಕಟಿಸಲು ಸಾದ್ಯವಾಗಿರುವುದು ಬಹಳ ಸಂತಸ ತಂದಿದೆ. ಈ ಪುಸ್ತಕಗಳು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರ ಮತ್ತು ಕವಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಗೊಂಡಾಗ ಸಾರ್ಥಕ ಭಾವ ಮೂಡಿತು.

ದೇಶ ಸುತ್ತುವುದು ಹಾಗೂ ಕೋಶ ಓದುವುದು ನನ್ನ ಸಂಕಲ್ಪದಲ್ಲಿ ಸೇರಿದ್ದವು ಕನಿಷ್ಟ25 ಪುಸ್ತಕ ಓದಲು ಸಂಕಲ್ಪ ಮಾಡಿದ್ದೆ ಅದರಲ್ಲೂ ಗುರಿ ಮೀರಿದ ಸಾಧನೆ ಮಾಡಿ 52 ಪುಸ್ತಕಗಳ ಓದಿ ಆ ಪುಸ್ತಕಗಳ ವಿಮರ್ಶೆ ಮಾಡಿ "ಬಹುಮುಖಿ "ಎಂಬ ವಿಮರ್ಶಾ ಕೃತಿ ಹೊರತಂದಿರುವೆ.  

ಇನ್ನೂ ದೇಶ ಸುತ್ತುವ ವಿಚಾರದಲ್ಲಿ ಕೆಲ ಐತಿಹಾಸಿಕ ಕೆಲ ಪಾರಂಪರಿಕ ತಾಣಗಳಲ್ಲಿ ಸಮಾನ ಮನಸ್ಕರೊಂದಿಗೆ ಅಲೆದಾಡಿ ಆ ಅನುಭವ ಕುರಿತಾದ ಲೇಖನಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆಯನ್ನು ಪಡೆದ ಖುಷಿ ಮರೆಯಲಾಗದು.

ಇದರ ಜೊತೆಯಲ್ಲಿ ವಿವಿಧ ವಿಷಯಗಳ ಲೇಖನ ,ಕಥೆ, ಕವಿತೆ ಹನಿಗವನ ಮುಂತಾದ80 ಕ್ಕೂ ಹೆಚ್ಚು ಬರೆಹಗಳು ರಾಜ್ಯದ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದಾಗ ಆನಂದ ಪಟ್ಟಿದ್ದೇನೆ.

ಅದರಲ್ಲೂ ಈ ವರ್ಷ ಪ್ರಜಾ ಪ್ರಗತಿ ಪತ್ರಿಕೆಯ  ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪುರಸ್ಕಾರಕ್ಕೆ ಪಾತ್ರವಾದ ಖುಷಿಯನ್ನು ಆಗಾಗ್ಗೆ ಮೆಲುಕು ಹಾಕುತ್ತೇನೆ.

ಈ ವರ್ಷದಲ್ಲಿ ಕೆಲ ಸಂಘ ಸಂಸ್ಥೆಗಳು ನನ್ನ ಕಿರು ಸಾಧನೆಯನ್ನು ಗುರ್ತಿಸಿ  ಸನ್ಮಾನಿಸಿವೆ ತೆಲುಗು ಜಂಗಮ ಅಭಿವೃದ್ಧಿ ಟ್ರಸ್ಟ್ ನವರು ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರೆ, ವಿಶ್ವ ಮಾನವ ಟ್ರಸ್ಟ್ ನವರು ಬೆಸ್ಟ್ ಟೀಚರ್ ಎಂದು ಗುರ್ತಿಸಿ ಬಹುಮಾನ ನೀಡಿವೆ ಆ ಸಂಸ್ಥೆಗೆ ನನ್ನ ಧನ್ಯವಾದಗಳು .ನನ್ನೆಲ್ಲ ಈ ಕಿರು ಸಾಧನೆಗೆ ನನ್ನ ಕುಟುಂಬದ ಎಲ್ಲಾ ಸದಸ್ಯರ ಬೆಂಬಲ ಸಹಕಾರ ನೆನೆಯದೇ ಇರುವುದಾದರೂ  ಹೇಗೆ ? 


ಅನೇಕ ಏಳು ಬೀಳುಗಳ ನಡುವೆ 2022 ಸಮಾಧಾನ ತಂದ ವರ್ಷ ಬಹುತೇಕ ಸಂಕಲ್ಪಗಳು ಈಡೇರಿದ ವರ್ಷ ಇದೇ ಜೋಷ್ ನಲ್ಲಿ ಮುಂಬರುವ 2023 ರಲ್ಲಿ ನನ್ನ ಸಂಕಲ್ಪಗಳು ಹೀಗಿವೆ... 


ನನ್ನ ತರಗತಿಯನ್ನು ಇನ್ನೂ ಆಕರ್ಷಕವಾಗಿ ಮಾಡಿ ಮಕ್ಕಳಿಗೆ ಇನ್ನೂ ಉತ್ತಮ ಕಲಿಕೆ ಮಾಡಿಸುವುದು ಮತ್ತು ನಮ್ಮ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು.

 ಕನಿಷ್ಟಪಕ್ಷ ೫ ಹೊಸ ಪುಸ್ತಕಗಳನ್ನು ಬರೆದು ಪ್ರಕಟ ಮಾಡುವುದು.

ಕಡಿಮೆಯೆಂದರೆ 50  ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳುವುದು.

ಸಾಧ್ಯವಾದಷ್ಟು  ಪ್ರವಾಸ ಮಾಡುತ್ತಾ ಹೊಸ ಸ್ಥಳಗಳ ಪರಿಚಯ ಮಾಡಿಕೊಳ್ಳುವುದು. ಕುಟುಂಬದೊಂದಿಗೆ ಗುಣಾತ್ಮಕ ಸಮಯ ಕಳೆಯುತ್ತಾ ಮಕ್ಕಳಿಗೆ ಸಲಹೆ ಮಾರ್ಗದರ್ಶನ ನೀಡುವುದು. ಯೋಗ ,ಧ್ಯಾನ ,ಪ್ರಾಣಾಯಾಮ ಮತ್ತು ಪ್ರಾರ್ಥನೆ ಮುಂತಾದವುಗಳನ್ನು ಮಾಡುವುದನ್ನು ಮುಂದುವರೆಸಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಈ ಸಂಕಲ್ಪಗಳೊಂದಿಗೆ ಹೊಸ ಕ್ಯಾಲೆಂಡರ್ ವರ್ಷ 2023 ಸ್ವಾಗತಿಸುತ್ತಿದ್ದೇನೆ ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು




ಮೋಕ್ಷಪಥ.

 


ಅವನ ಮರೆತು ಅವನಿಯಲಿ

ಅವರಿವರ ಹಿಂದೆ ತಿರುಗಬೇಡ ಶತಪಥ|

ಅವನೊಲಿಯುವ ಕಾಯಕವ ಮಾಡು

ಅವಶ್ಯವಾಗಿ ಗೋಚರಿಸುವುದು ಮೋಕ್ಷಪಥ |