04 ನವೆಂಬರ್ 2022

ರಂಗಜ್ಜಿ ಮತ್ತು ಕೆಂಚಜ್ಜಿ....ಆತ್ಮಕಥೆ ೪೩

 



ರಂಗಜ್ಜಿ ಮತ್ತು ಕೆಂಚಜ್ಜಿ 


ಆಗ ನಮ್ಮೂರಿಂದ ತಾಲ್ಲೂಕು ಮತ್ತು ಜಿಲ್ಲಾ  ಕೇಂದ್ರ ಸಂಪರ್ಕ ಮಾಡಲು ಇದ್ದ ಬಸ್ ಎರಡೇ ಒಂದು ವಾಣಿ ಬಸ್ ಇನ್ನೊಂದು ಶಾಯಿನ್ ಬಸ್ . ಒಂದು ಬೆಳಿಗ್ಗೆ ಒಂದು ಸಂಜೆ...  ನಮ್ಮೂರ ಗೇಟ್ ನಿಂದ ಇತ್ತ ಚಿತ್ರಳ್ಳಿ ವರೆಗೂ ಅತ್ತ ಐಮಂಗಲ ವರೆಗೂ  ಮಣ್ಣಿನ ರಸ್ತೆ  .ಒಮ್ಮೆ ಬಸ್ಸಿನಲ್ಲಿ ಹತ್ತಿ ಕೂತರೆ ಅದೇ ನಮಗೆಲ್ಲ ಉಚಿತವಾಗಿ ಪೌಡರ್ ಹಾಕುತ್ತಿತ್ತು. ರಸ್ತೆಯ ಗುಂಡಿಗಳ ನಡುವೆ ಧೂಳಿನ ರಸ್ತೆಯಲ್ಲಿ ಡ್ರೈವರ್ ಹರಸಾಹಸ ಪಟ್ಟು ಬಸ್ ಓಡಿಸುವುದನ್ನು ನೋಡಲು ನಾನು ಸೀದಾ ಡ್ರೈವರ್ ಬಳಿ ಹೋಗಿ ನಿಂತುಬಿಡುತ್ತಿದ್ದೆ. ಅದರಲ್ಲೂ ಆಗಿನ ಕಾಲದಲ್ಲಿ ರಿವರ್ಸ್ ಹೊಡೆಯುವ ಮತ್ತು ತಿರುವಿನಲ್ಲಿ ಅವನು ಸ್ಟೇರಿಂಗ್ ತಿರುಗಿಸುವ ರೀತಿ ನೋಡುತ್ತಾ ನಾನು ಮುಂದೆ ಡ್ರೈವರ್ ಆಗಿಬಿಡಬೇಕು ಎಂದು ಕೊಂಡಿದ್ದೆ.


ನಮ್ಮೂರು ಕೊಟಗೇಣಿಯಿಂದ ನಮ್ಮ ಮಾವನವರ ಊರು ಯರಬಳ್ಳಿಗೆ ಹೋಗಲು ನಮಗೆ  ಇದೇ ಬಸ್ ಗಳು ಆಧಾರ. ಸಾಮಾನ್ಯವಾಗಿ ಸಾಯಂಕಾಲದ ನಾಲ್ಕು ವರೆಗೆ ನಮ್ಮ ಗೇಟ್ ಗೆ ಬರುತ್ತಿದ್ದ ವಾಣಿ ಬಸ್ ನಲವತ್ತು ಕಿಲೋಮೀಟರ್ ದೂರದ ಯರಬಳ್ಳಿ ಸೇರುತ್ತಿದ್ದದ್ದು  ರಾತ್ರಿಯ ಏಳುಗಂಟೆಗೆ ಕೆಲವೊಮ್ಮೆ ಇನ್ನೂ ಲೇಟಾಗಿ ತಲುಪಿದ ಉದಾಹರಣೆ ಇದೆ.


ಒಮ್ಮೆ  ಎಂಭತ್ತು ವರ್ಷಕ್ಕೂ ಹೆಚ್ಚು ವಯಸ್ಸಾದ  ನಮ್ಮ ರಂಗಜ್ಜಿಯ ಜೊತೆಯಲ್ಲಿ ಯರಬಳ್ಳಿಗೆ ಹೋಗಲು ನಮ್ಮೂರ ಗೇಟ್ ಗೆ ಒಂದು ಕಿಲೋ ಮೀಟರ್ ನಡೆದುಕೊಂಡು ಬಂದು   ಬಸ್ ಹತ್ತಿದೆವು . ಬಸ್ ಹತ್ತಿದ ತಕ್ಷಣ ಯಾರೋ ಅಜ್ಜಿಗೆ ಸೀಟ್ ಬಿಟ್ಟು ಕೊಟ್ಟರು. ನಾನು ಎಂದಿನಂತೆ ಡ್ರೈವರ್ ಪಕ್ಕದಲ್ಲಿ ನಿಂತೆ.  

ಬಸ್ ಕೆರೆಯಾಗಳ ಹಳ್ಳಿ ಬಿಟ್ಟು, ತೇಕಲವಟ್ಟಿ ಗೊಲ್ಲರಹಟ್ಟಿ ದಾಟಿ ತೇಕಲವಟ್ಟಿಯಲ್ಲಿ ಎಲೆಪೆಂಡಿ ಮತ್ತು ಜನರ ಹತ್ತಿಸಿಕೊಂಡು ಕೊಳಾಳು ಕಡೆ ಧೂಳೆಬ್ಬಿಸುತ್ತಾ ಸಾಗಿತ್ತು.  ಯಲಕೂರನಹಳ್ಳಿಯ ಬಳಿ ಬಂದಾಗ ಸೂರ್ಯ ನನ್ನ ಡ್ಯೂಟಿ ಮುಗೀತು ಎಂದು ಹೊರಟೇಬಿಟ್ಟ. ನಮ್ಮ ಬಸ್ ಕಣಿಮೆಕೆರೆಯ ಪಕ್ಕ ಚಲಿಸುವಾಗ ಕೆರೆಯ ನೀರು ಮಬ್ಬಾಗಿ ಕಪ್ಪಾಗಿ ಕಾಣುತ್ತಿತ್ತು. ಕೆರೆಯ ಏರಿಯ ಬಳಿ ಬಂದಾಗ ಡ್ರೈವರ್ ಬಸ್ ಇಂಜಿನ್ ಆಪ್ ಮಾಡಿ ಎಡಕ್ಕೆ ಬಾಗಿ ಕೈಮುಗಿದ ದೂರದಲ್ಲಿ ಕುಳಿತಿದ್ದ ಅಜ್ಜಿ ಭೂತಪ್ಪಗೆ ಕೈ ಮುಗಿಯೋ ಎಂದು ಸನ್ನೆ ಮಾಡಿ ಅವರು ಕೈಮುಗಿದರು.ಪಯಣದ ತೊಂದರೆಗಳನ್ನು ನಿವಾರಿಸಲು ಎಲ್ಲರೂ ಭೂತಪ್ಪನ ಕೈಮುಗಿದು ಆಶೀರ್ವಾದ ಪಡೆಯುವುದು ನಮ್ಮ ಸಂಪ್ರದಾಯವಾಗಿತ್ತು.ಅಂದು ಭೂತಪ್ಪನ ಆಶೀರ್ವಾದ ಪಡೆದರೂ ಅನಾಹುತ ಸಂಭವಿಸಿಯೇ ಬಿಟ್ಟಿತು. ಕೋವೇರಹಟ್ಟಿ ಗೇಟ್ ದಾಟಿ , ದಾಸಣ್ಣನ ಮಾಳಿಗೆ ಮೂಲಕ ಐಮಂಗಲ ತಲುಪಿದಾಗ ರಾತ್ರಿ ಏಳುಗಂಟೆಯಾಗಿತ್ತು. ಇಂಜಿನ್ ಪ್ರಾಬ್ಲಮ್ ಇದೆ ಬಸ್ ಮುಂದೆ ಹೋಗಲ್ಲ ಎಲ್ಲಾ ಇಳಿರಿ ಅಂದ ಡ್ರೈವರ್. ರಂಗಜ್ಜಿ ಮತ್ತು ನನಗೂ ಭಯ ಆತಂಕ ಶುರುವಾಯಿತು. ನಾವು ತಲುಪಬೇಕಾದ ಯರಬಳ್ಳಿ ಇನ್ನೂ ಹತ್ತು ಕಿಲೋಮೀಟರ್ "  ಕತ್ಲಲ್ಲಿ ಕಾಮದೂರಾಗ್ ನಾವ್ ಎಲ್ಲಿಗ್ ಹೋಗಾನ ಸಾಮಿ, ನೀವೇನೋ ಬಸ್ ಹೋಗಲ್ಲ ಅಮ್ತಾ ಒಂದೆ ಸಲ ಅಂದ್ ಬಿಟ್ರಿ , ಈಗ ನಾವ್ ಏನ್ ಮಾಡಾನಾ " ಎಂದು ಕಂಡಕ್ಟರ್ ಮತ್ತು ಡ್ರೈವರ್ ನನ್ನ ಸ್ವಲ್ಪ ಜೋರಾಗಿಯೇ ತರಾಟೆಗೆ ತೆಗೆದುಕೊಂಡರು ನಮ್ಮ ರಂಗಜ್ಜಿ.  ಅಜ್ಜಿಯ ಬಾಯಿ ಕೇಳಿ ಅಲ್ಲಿಗೆ   ಬಂದ ಓರ್ವ ವ್ಯಕ್ತಿಯು ತನ್ನನ್ನು ಪೊಲೀಸ್ ಎಂದು ಪರಿಚಯ ಮಾಡಿಕೊಂಡು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು  ಇಂದು ರಾತ್ರಿ ನಮ್ಮ ಮನೆಯಲ್ಲಿ ಊಟ ಮಾಡಿ, ಮಲಗಿಕೊಂಡು ನಾಳೆ ಬೆಳಿಗ್ಗೆ ನಿಮ್ಮ ಊರಿಗೆ ಹೋಗಬಹುದು ಅಂದರು. ನಾವು ಅಂದು ರಾತ್ರಿ ಅವರ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡು ಬೆಳಿಗ್ಗೆ ಎದ್ದು ಅವರಿಗೆ ಧನ್ಯವಾದಗಳನ್ನು ಹೇಳಿ ಹೊರಟೆವು. ದೇವರ ಆಗಿ ನಮ್ಮ ಕಷ್ಟ ಕಾಲದಲ್ಲಿ ಬಂದು ಸಹಾಯ ಮಾಡಿದ ಆ ಪೋಲಿಸಪ್ಪ ಎಲ್ಲಿರುವರೋ ತಿಳಿಯದು   ಅವರು  ಮತ್ತು ಅವರ ಕುಟುಂಬ ಎಲ್ಲೇ ಇರಲಿ    ಸುಖಕರವಾಗಿರಲಿ .   


ನಲವತ್ತು ವರ್ಷಗಳ ಕಾಲ ಉರುಳಿದಂತೆ...

ಮೊನ್ನೆ ಆತ್ಮೀಯರಾದ ಶಂಕರಾನಂದ ರವರ ಜೊತೆಯಲ್ಲಿ ನನ್ನ ಕಾರಿನಲ್ಲಿ ನಮ್ಮ ಊರಿಗೆ ಹೋಗಿದ್ದೆ .ಎಂದಿನಂತೆ ಊರಿಗೆ ಹೋದಾಗ ನಮ್ಮ ಅಣ್ಣ ತೆಂಗಿನ ಕಾಯಿ, ಬಾಳೆ ಗೊನೆ ಎಳನೀರು ಅದೂ ಇದೂ ಎಂದು ಡಿಕ್ಕಿ ತುಂಬಿದ ಮೇಲೆ ಹಿಂದಿನ ಎರಡು ಸೀಟಿನ ಮೇಲೂ ವಸ್ತುಗಳ ಹಾಕಿದ್ದರು. ಮುಂದೆ ಡ್ರೈವರ್ ಸೀಟಲ್ಲಿ ನಾನು ಪಕ್ಕದಲ್ಲಿ ಶಂಕರಾನಂದರ ರವರು ಇದ್ರು.  ಊರಿಂದ ತುಮಕೂರಿನ ಕಡೆ ನಮ್ಮ ಕಾರು ಸಾಗುವಾಗ  ತೇಕಲವಟ್ಟಿ  ದಾಟಿದ ಬಳಿಕ ದಾರಿಯಲ್ಲಿ  ಒಂದು  ಅಜ್ಜಿ ಕೈಯಲ್ಲಿ  ಚೀಲ ಹಿಡಿದುಕೊಂಡು ಕಾರಿಗೆ ಕೈ ಅಡ್ಡ ಹಾಕಿತು ಕಾರ್ ಸ್ಲೋ ಮಾಡಿ ನಿಲ್ಲಿಸಿ ಏನಜ್ಜಿ ಅಂದೆ . "ಕೊಳಾಳ್ ಗೆ ಹೋಗ್ ಬೇಕು ಬಸ್ ಇಲ್ಲ ತೇಕಲವಟ್ಟಿಯಿಂದ ನೆಡೆಕಂಡು ಬಂದೆ ಕಣಪ್ಪ ,ಕತ್ಲಾಕ್ತಾ ಐತೆ .ನನ್ನ ಕೊಳಾಳಿಗೆ ಬಿಡ್ರಪ್ಪ" ಅಂತು ಆ ಪರಿಸ್ಥಿತಿಯಲ್ಲಿ ಅಜ್ಜಿಯನ್ನು ಬಿಟ್ಟು ಬರಲು ಮನಸ್ಸಾಗಲಿಲ್ಲ. ಹಿಂದಿನ ಸೀಟಲ್ಲಿ ಜಾಗ ಇರಲಿಲ್ಲ ಮುಂದೆ ಒಬ್ಬರು ಕೂರುವ ಜಾಗದಲ್ಲಿ ಅಜ್ಜಿಯ ಲಗೇಜ್ ಸಮೇತ ಇಬ್ಬರು ಕುಳಿತರು .ಐದಾರು ಕಿಲೋಮೀಟರ್ ಸಾಗಿದ ಮೇಲೆ ಕೊಳಾಳು ಬಂತು.ನಿಧಾನವಾಗಿ ಅಜ್ಜಿ  ಕಾರಿಂದ  ಇಳಿಯಿತು .ನಿಮಗೆ ಒಳ್ಳೆಯದಾಗ್ಲಿ ಕಣಪ್ಪ ಎಂದು ಹರಸಿತು . ಕುತೂಹಲಕ್ಕೆ ಅಜ್ಜಿ ನಿನ್ನ ಹೆಸರೇನು? ಕೇಳಿದೆ ಕೆಂಚವ್ವ ಕಣಪ್ಪ ಅಂತು ಯಾಕೆ ಕೊಳಾಳು ಗೆ ಹೊರಟಿರೋದೆಂದು ಕೇಳಿದೆ ಕೆಂಚಪ್ಪನ್ ಗುಡಿಗೆ ಕಣಪ್ಪ ಅಂತು ತಗ ಅಜ್ಜಿ ಹುಂಡಿಗೆ ಐವತ್ತು ರುಪಾಯಿ ಹಾಕು ಎಂದೆ ಆಗ್ಲಪ್ಪ ನಂದು ಹತ್ತು ಸೇರಿಸಿ ಹಾಕ್ತೀನಿ ಎಂದು ಗಂಟನ್ನು ಹಿಡಿದು ಕತ್ತಲಲ್ಲಿ ಗುಡಿಯ ಕಡೆ ಹೊರಟಿತು...  ನನ್ನ ಕಾರ್ ಮುಂದೆ ಸಾಗಿದಂತೆ  ಯಾಕೋ ನಮ್ಮ  ರಂಗಜ್ಜಿ  ಮತ್ತು ಆ ಪೋಲಿಸಪ್ಪ  ಪದೇ ಪದೇ ನೆನಪಾದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


02 ನವೆಂಬರ್ 2022

ಅರ್ಥ


 *ಅರ್ಥ*


ಒಂದೇ ದಿನ ಮಾಡಬಹುದು

ಮದುವೆ ಮತ್ತು ನಿಶ್ಚಿತಾರ್ಥ |

ಇದರಿಂದ ಹೆಣ್ಣು ಮತ್ತು

ಗಂಡಿನ ಕಡೆಯವರಿಗೂ 

ಉಳಿಯುವುದು "ಅರ್ಥ" ||


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ


26 ಅಕ್ಟೋಬರ್ 2022

ಕಲಿಸುತ್ತಾ ಕಲಿಯೋಣ


 



ಉತ್ತಮ ಶಿಕ್ಷಕರು ಜೀವನ ಪರ್ಯಂತ ಕಲಿಯುವವರು.. 


ಭಾನುವಾರ ಸಂಜೆ ತುಮಕೂರಿನ ಬಾಯರ್ಸ್ ಕಾಫಿ ಹೌಸ್ ನಲ್ಲಿ ಟೀ ಕುಡಿಯುತ್ತಾ  ಸಮಾನ ಮನಸ್ಕ ಗೆಳೆಯರ ಜೊತೆ ಕುಳಿತು ಟೀ ಕುಡಿಯುವಾಗ ಸಾಹಿತ್ಯ, ಸಮಾಜ ,ಶಿಕ್ಷಣ ಹೀಗೆ ನಮ್ಮ ಮಾತುಕತೆ ಸಾಗುವಾಗ ಓದುವ ಹವ್ಯಾಸ ಕ್ರಮೇಣ ಕಡಿಮೆಯಾಗಿರುವ ಬಗ್ಗೆ ಚರ್ಚೆ ನಡೆಯುವಾಗ   ಸ್ಟೂಡೆಂಟ್ ಬುಕ್ ಹೌಸ್ ಮಾಲೀಕರು ಹಾಗೂ ಪ್ರಕಾಶಕರಾದ ಸದಾಶಿವ್ ರವರು ಒಂದು ಘಟನೆ ಹೇಳಿದರು .ಒಮ್ಮೆ ನನ್ನ ಪುಸ್ತಕದ ಅಂಗಡಿಗೆ ನಾಲ್ಕು ಜನ ಕಾರಿನಲ್ಲಿ ಬಂದು ಶಿಕ್ಷಕರು ಎಂದು ಪರಿಚಯ ಮಾಡಿಕೊಂಡು ಓರ್ವ ಶಿಕ್ಷಕರು ಸುಮಾರು ಎಂಟತ್ತು ಉತ್ತಮ ಅಭಿರುಚಿಯ ಪುಸ್ತಕಗಳನ್ನು ಕೊಂಡರು .ಅವರ ಜೊತೆಯಲ್ಲಿ ಇದ್ದ ಶಿಕ್ಷಕರೊಬ್ಬರು "ಸಾಕು ಬಾರಪ್ಪ ಅದೇನ್ ಪುಸ್ತಕ ಓದ್ತಿಯಾ ನೀನು " ಎಂದು ವ್ಯಂಗ್ಯವಾಗಿ ಹೇಳಿದರು. ಇದರಿಂದ ನನಗೆ ಬಹಳ ಬೇಸರ ವಾಯಿತು ಎಂದರು.. ಅವರು ಮುಂದುವರೆದು ನಾನು ಪುಸ್ತಕ ಅಂಗಡಿಯಿಟ್ಟು ಹದಿನೈದು ವರ್ಷಗಳಾದವು ಶಿಕ್ಷಕರು ಪುಸ್ತಕ ಕೊಳ್ಳುವುದು ಬಹಳ ಕಡಿಮೆ ಎಂದರು. ಅದಕ್ಕೆ ನಾನು ಆಕ್ಷೇಪಿಸಿ ನಾನು ಈ ವರ್ಷ ಹದಿನೈದು ಪುಸ್ತಕ ಕೊಂಡು ಓದಿರುವೆ ಎಂದೆ .ನೀವು ಹಾಗೂ ನಿಮ್ಮಂತವರು ಕೆಲವೇ ಮಂದಿ ಸರ್ ನಮ್ಮ ಮನೆಯ ಪಕ್ಕ ಎರಡು ಶಿಕ್ಷಕರ ಕುಟುಂಬ ಇವೆ ಅವರ ಮನೆಯಲ್ಲಿ ಒಂದು ನ್ಯೂಸ್ ಪೇಪರ್ ಸಹ ತರಿಸಲ್ಲ   ಅವರು ನ್ಯೂಸ್ ಪೇಪರನ್ನೇ  ಓದಲ್ಲ ಎಂದರೆ  ಪುಸ್ತಕ ಓದುವ ಮಾತೆಲ್ಲಿ ಬಂತು?     ಅಂದು ನನ್ನ ಬಾಯಿ ಮುಚ್ಚಿಸಿದರು. 

ರವೀಂದ್ರನಾಥ ಟಾಗೋರ್ ರವರು ಒಂದು ದೀಪ ತಾನು ಉರಿಯದೇ ಮತ್ತೊಂದು ದೀಪ ಹಚ್ಚಲಾಗದು ಎಂದಂತೆ ಶಿಕ್ಷಕರಾದವರು ಮೊದಲು ತಾವು  ಓದಿ ಜ್ಞಾನವನ್ನು ಪಡೆದರೆ ಮಾತ್ರ ಮಕ್ಕಳಿಗೆ ಜ್ಞಾನ ನೀಡಲು ಸಾದ್ಯ. ಸಾಧಾರಣ ಶಿಕ್ಷಕ ಪಾಠ ಮಾಡುತ್ತಾನೆ ಉತ್ತಮ ಶಿಕ್ಷಕ ಅರ್ಥ ಮಾಡಿಸುತ್ತಾನೆ ಅತ್ಯುತ್ತಮ ಶಿಕ್ಷಕ ಪ್ರೇರಣೆ ನೀಡುತ್ತಾನೆ ಅಂತಹ ಪ್ರೇರಣೆ ನೀಡುವ ಶಿಕ್ಷಕ ಮೊದಲು ಕಲಿಕಾರ್ಥಿಯಾಗಿ ಕಲಿತಿರಬೇಕು.ಬಹುತೇಕರು  ನಂಬಿದಂತೆ ಶಿಕ್ಷಕ ವೃತ್ತಿ ಸಿಕ್ಕಿದ ಮೇಲೆ ಕಲಿಯಲು ಏನೂ ಇಲ್ಲ ಎಂಬುದು ಸುಳ್ಳು. ಕಲಿಕೆಯು ಗರ್ಭದಿಂದ  ಗೋರಿಯವರೆಗೆ ನಡೆವ ನಿರಂತರ ಪ್ರಕ್ರಿಯೆಯಾಗಿದೆ. ಅದರಲ್ಲೂ ಈ ಇಪ್ಪತ್ತೊಂದನೇ ಶತಮಾನದ  ರೋಬಾಟಿಕ್ ಮತ್ತು  ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಮಕ್ಕಳು ಶಿಕ್ಷಕರಿಗಿಂತ ಒಂದು ಹೆಜ್ಜೆ ಮುಂದೆ ಇರುವುದು ನೋಡಬಹುದು. ಶಿಕ್ಷಕರಾದವರು ಅಪ್ಡೇಟ್ ಆಗುತ್ತ ಇರಬೇಕು ಹೊಸ ತಂತ್ರಜ್ಞಾನದ ತಿಳುವಳಿಕೆ, ಬೋಧನಾ ಕ್ಷೇತ್ರದಲ್ಲಿ ನಾವೀನ್ಯತೆಯ ಅಳವಡಿಸಿಕೊಂಡು ಬೋಧನೆ ಮಾಡಿದರೆ ಮಕ್ಕಳು ಶಿಕ್ಷಕರನ್ನು ಆರಾಧಿಸುತ್ತಾರೆ. ಆಗ ಶಿಕ್ಷಕರಿಗಾಗುವ ಆನಂದ ಅನುಭವಿಸಿಯೇ ತಿಳಿಯಬೇಕು ಆ ಅನುಭವ ನನಗಾಗಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ.  ಶಿಕ್ಷಕರಾದವರು ಅಪ್ಡೇಟ್ ಆಗಲಿಲ್ಲ ಎಂದರೆ ಔಟ್ ಡೇಟ್ ಆಗಿಬಿಡುತ್ತೇವೆ ನಮ್ಮ ನಮ್ಮ ಬೋಧನಾ   ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆಯಲು ಸದಾ ನಾವು ಕಲಿಯುತ್ತಲೇ ಇರಬೇಕು.ಇದರ ಜೊತೆಯಲ್ಲಿ ಶಿಕ್ಷಕರಾದವರು  "teachers must know something about everything and everything about something" ಎಂಬಂತೆ ನಮಗೆ ಇತರೆ ವಿಷಯಗಳ ಜ್ಞಾನವು ಅಗತ್ಯ . 2020 ರ ಹೊಸ ಶಿಕ್ಷಣ ನೀತಿಯು ಸಹ ಇದೇ ಆಧಾರದ ಮೇಲೆ ಶಿಕ್ಷಕರಾದವರು ಕಲಿಯುತ್ತಾ ಕಲಿಸಬೇಕು ಎಂಬುವ ಆಶಯ ಹೊಂದಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವು ಕಲಿಯುತ್ತಾ ಕಲಿಸೋಣ, ಕಲಿಸುತ್ತಾ ಕಲಿಯೋಣ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಪಟಾಕಿ ಹೊಡೆಯೋ ಮುನ್ನ.....

 




ಪಟಾಕಿ ಹೊಡೆಯೋ ಮುನ್ನ...


ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡಯಬೇಡಿ ಎಂದರೆ ನಿಮ್ಮಲ್ಲಿ ಕೆಲವರು ನನ್ನನ್ನು ಕಣ್ಣು ಕೆಂಪಗೆ ಮಾಡಿಕೊಂಡು ಗುರಾಯಿಸೋದು ಗ್ಯಾರಂಟಿ. ಪರಿಸರ ಅದೂ ಇದು ಅಂದು ನಮ್ಮ ಸಂತೋಷಕ್ಕೆಅಡ್ಡಿ ಮಾಡಲು ನಿವ್ಯಾರು? ನಿವೇನ್ ದುಡ್ ಕೊಟ್ಟು ಪಟಾಕಿ ಕೊಡಿಸ್ತೀರಾ? ಯಾವ್ ಹಬ್ಬಕ್ಕೆ ಇಲ್ಲದ ನಿರ್ಬಂಧ ನಮಗ್ಯಾಕೆ ಹೀಗೆ ನೂರು ಪ್ರಶ್ನೆ ಕೇಳಿ ನನ್ ಬಾಯಿ ಮುಚ್ಚಿಸ್ತೀರಾ ಅಂತಾನೂ ಗೊತ್ತು..

ಅಂತೂ ಪಟಾಕಿ ಹೊಡಿಲೇ ಬೇಕು ಅಂತ ತೀರ್ಮಾನ ಮಾಡಿರೋರ್ನ ನಾನು ತಡೆಯೊಲ್ಲ ಪಟಾಕಿ ಹೊಡಿರಿ ಅದಕ್ಕೂ ಮುಂಚೆ ನಾ ಹೇಳೋ ಮಾತ್ ಕೇಳಿ...

ಮೊದಲನೆಯದಾಗಿ ಪಟಾಕಿ ಹೊಡೆಯಲು ಉತ್ತಮ ಸ್ಥಳ ಆರಿಸಿ. ವಿಶಾಲವಾದ ಪ್ರದೇಶ ಅಥವಾ ಮೈದಾನದಲ್ಲಿ ಪಟಾಕಿ ಹೊಡೆಯುವುದು ಒಳ್ಳೆಯದು. ಸ್ಥಳ ಕಡಿಮೆ ಇರುವವರು ಸಣ್ಣ-ಪುಟ್ಟ ಪಟಾಕಿಗಳನ್ನು ಮಾತ್ರ ಉಪಯೋಗಿಸಿ. ಇತರರಿಗೆ ತೊಂದರೆ ಆಗದಂತೆ ಜಾಗೃತೆ ವಹಿಸಿ.

*  ಪಟಾಕಿ ಸಿಡಿಸುವಾಗ ಮಕ್ಕಳ ಕಡೆಗೂ ಗಮನ ಹರಿಸಿ, ಚಿಕ್ಕ ಮಕ್ಕಳು ಆ ಸ್ಥಳದಿಂದ ದೂರ ಇರುವುದೇ ಉತ್ತಮ.

*  ಪಟಾಕಿ ಸಿಡಿಸುವಾಗ ಕಣ್ಣಿನ ಆರೋಗ್ಯದ ಬಗ್ಗೆಯೂ ಗಮನವಿರಲಿ. ಸಾಧ್ಯವಾದರೆ ನೇತ್ರ ಸುರಕ್ಷತಾ ಸಾಧನಗಳನ್ನು ಬಳಸಿ.

*  ಪಟಾಕಿ ಹೊಡೆಯುವಾಗ ಆದಷ್ಟು ಕಾಟನ್ ಬಟ್ಟೆಗಳನ್ನೇ ಧರಿಸಿ. ಇದು ಬಟ್ಟೆಗೆ ಬೇಗನೆ ಬೆಂಕಿ ಹತ್ತಿಕೊಳ್ಳುವುದನ್ನು ತಪ್ಪಿಸುತ್ತದೆ.

*  ಕಡಿಮೆ ಶಬ್ದ ಮತ್ತು ಕಡಿಮೆ ಹೊಗೆ ಬರುವ ಪಟಾಕಿಗಳಿಗೆ ಮೊದಲ ಆದ್ಯತೆ ನೀಡಿ. ಹಸಿರು ಪಟಾಕಿಗಳನ್ನು ಹೆಚ್ಚಾಗಿ ಬಳಸಿ.

*  ಪಟಾಕಿ, ನಕ್ಷತ್ರ ಕಡ್ಡಿ ಉಪಯೋಗಿಸುವಾಗ ಎಚ್ಚರವಿರಲಿ. ಬೆಂಕಿಯ ಕಿಡಿ ಮುಖ, ಕಣ್ಣು, ಕೂದಲಿಗೆ ಬರದಂತೆ ಎಚ್ಚರ ವಹಿಸಿ.

*  ಪಟಾಕಿ ಹೊಡೆಯುವಾಗ ಕಣ್ಣು ಮಾತ್ರವಲ್ಲದೇ ಕೈ-ಕಾಲು ಗಳಿಗೂ ತಗಲುವ ಅಪಾಯವಿರುವುದರಿಂದ ಆದಾಷ್ಟು ಎಚ್ಚರಿಕೆ ವಹಿಸುವುದು ಸೂಕ್ತ.

*  ಅರ್ಧ ಸುಟ್ಟ ಅಥವಾ ಸಿಡಿಯದೇ ಬಾಕಿ ಉಳಿದಿರುವ ಪಟಾಕಿಗಳನ್ನು ಬಳಸುವುದು ಬೇಡ. ಕತ್ತಲಲ್ಲಿ ಪಟಾಕಿ ಹೊಡೆಯುವ ಸಹಾಯ ಬೇಡ.

*  ಪಟಾಕಿ ಬಾಕ್ಸ್ ಪಕ್ಕದಲ್ಲಿ ಇಟ್ಟು ಪಟಾಕಿ ಹೊಡೆಯುವುದನ್ನು ತಪ್ಪಿಸಿ.

*  ಪ್ರಥಮ ಚಿಕಿತ್ಸೆಯ ಕಿಟ್ ಜೊತೆಗಿರಲಿ.

ಸುಪ್ರೀಂ ಕೋರ್ಟ್ ಪರಿಸರಕ್ಕೆ ಹಾನಿಯಾಗುವ ಪಟಾಕಿಗಳನ್ನು ಹೊಡೆಯಬಾರದು ಎಂದು ಆದೇಶ ನೀಡಿದೆ. ಕಳೆದ ವರ್ಷದಿಂದ ಸರ್ಕಾರ ಹಸಿರು ಪಟಾಕಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಹಾಗಾಗಿ ಎಲ್ಲರೂ ಆದಷ್ಟು ಹಸಿರು ಪಟಾಕಿಗಳನ್ನೇ ಬಳಸಿ. ಪಟಾಕಿ ಹೊಡೆಯಲು ರಾತ್ರಿ 8-10 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಆ ಸಮಯದಲ್ಲೇ ಪಟಾಕಿ ಹೊಡೆಯುವುದು ಉತ್ತಮ. ಸಂಭ್ರಮ, ಸಡಗರದ ಜೊತೆಗೆ ಸುರಕ್ಷತೆ ಕಡೆಗೂ ಗಮನ ಹರಿಸುವುದು ಅಗತ್ಯ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ


 



ಕ್ಯಾತನಮಕ್ಕಿ 



"ಇದ್ಯಾವ ಸೀಮೆ ರೋಡ್ ರೀ ನಿಲ್ಸಿ ನಾನು ಇಳೀತೀನಿ" ಎಂದೆ "ಸಾರ್ ಈ ರಸ್ತೆ ಸಾವಿರ ಪಾಲು ಮೇಲು. ಮೊದಲು ಹೀಗಿರಲಿಲ್ಲ "ಎಂದ ಅಖಿಲ್ .ಎಲ್ಲಿದೆ ರಸ್ತೆ ಎಂದು ಹುಡುಕಿದೆ .ಅಲ್ಲಿ ರಸ್ತೆಯೇ ಇಲ್ಲ  ಕಡಿದಾದ ಗುಡ್ಡ, ಕಲ್ಲು ಮಣ್ಣು ಅಲ್ಲಲ್ಲಿ ಗಿಡಗಂಟೆ .ನಾವು ಕುಳಿತಿದ್ದ ನಾಲ್ಕು ಇಂಟು ನಾಲ್ಕು ಜೀಪ್ ಚಾಲಕ ಸ್ಟೆರಿಂಗ್ ತಿರುಗಿಸಿದಾಗ ಎಡ ಸೀಟಿನ ತುದಿಯಿಂದ ಬಲ ಸೀಟಿಗೆ ಬಂದು ಬಿದ್ದಾಗ ಈ ಮೇಲಿನಂತೆ ಜೀಪ್ ಚಾಲಕನಿಗೆ ಬೈದಿದ್ದೆ. 

ನಿಧಾನವಾಗಿ ಅಖಿಲ್ ಮಾತನಾಡುತ್ತಾ ಜೀಪ್ ಚಾಲನೆ ಮಾಡುತ್ತಿದ್ದ .ನನಗೆ ಅವನ ಚಾಲನೆ ಮತ್ತು ರಸ್ತೆ ನೋಡಿ ಜೀಪಿನಲ್ಲಿ ಕುಳಿತು ಪಕ್ಕಕ್ಕೆ ನೋಡಿದೆ . ಭಯವಾಯಿತು ಕೆಳಗಡೆ ದೊಡ್ಡ ಪ್ರಪಾತ! ಬೆಳಿಗ್ಗೆ ಆದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ ದರ್ಶನ ಪಡೆದು ಬಂದ ನಾನು ಮತ್ತೆ ತಾಯಿಗೆ ಬೇಡಿದೆ ಸುರಕ್ಷಿತವಾಗಿ ನಮ್ಮ ಸ್ಥಳ ತಲುಪಿಸಲು.

ನನ್ನ ಜೊತೆಯಲ್ಲಿ ಇದ್ದ ನನ್ನ ಸಹಪಾಠಿಗಳ ಕಥೆಯೂ ಅದೇ ಆಗಿತ್ತು .ನಮ್ಮ ನೋಡಿ ನಗುತ್ತಲೇ ಅಖಿಲ್ " ಸರ್  ಭಯ ಪಡಬೇಡಿ ಇನ್ನೂ ಕೆಲವೇ ನಿಮಿಷ ಗಟ್ಟಿಯಾಗಿ ಹಿಡಿದು ಕುಳಿತುಕೊಳ್ಳಿ ನಾನು ನಿಮ್ಮನ್ನು ಕ್ಯಾತನಮಕ್ಕಿಗೆ ಕರೆದುಕೊಂಡು ಹೋಗುವೆ"  ಎಂದು ಧೈರ್ಯ ತುಂಬಿದ . ಅಖಿಲ್ ಮಾತನಾಡುತ್ತಾ ಗಾಡಿ ಚಲಾಯಿಸುತ್ತಿದ್ದ .ನಿನ್ನೆ ರಾತ್ರಿ ಹೊರನಾಡಿನಲ್ಲಿ ಬಿದ್ದ ಬಾರಿ ಮಳೆಯ ಬಗ್ಗೆ ,ತಾನು ಕೊಂಡು ತಂದ 

ರೈನ್ ಗೇಜ್ ಉಪಕರಣದ ಬಗ್ಗೆ,ಅವರ ತೋಟಕ್ಕೆ ಬಿದ್ದ 

ಅಡಿಕೆ ರೋಗದ ಬಗ್ಗೆ

ಕಳೆನಾಶಕದ ದುಷ್ಪರಿಣಾಮಗಳ ಬಗ್ಗೆ.ಏಲಕ್ಕಿ ಅಡಿಕೆ ಮೆಣಸು, ಕಾಫಿ , ಮುಂತಾದವುಗಳ ಕೃಷಿ ಮತ್ತು ಆ ಕೃಷಿಜೀವನದ ಏರು ಪೇರುಗಳ ಬಗ್ಗೆ ಮಾತನಾಡುತ್ತಾ ಜೀಪ್ ಅನ್ನು ಕಡಿದಾದ  ಬೆಟ್ಟದ ಮೇಲೆ ಹತ್ತಿಸುತ್ತಿದ್ದ .ಕೆಲವೊಮ್ಮೆ ಹಿಂದಕ್ಕೆ ಚಲಿಸಿ ಪುನಃ ಮುಂದಕ್ಕೆ ಗೇರ್ ಹಾಕುತ್ತಿದ್ದ .






ಸ್ವಲ್ಪ ದೂರ ಚಲಿಸಿದ ಮೇಲೆ ಒಂದೆಡೆ ನಿಲ್ಲಿಸಿ ಟಿಕೆಟ್ ತೊಗೊಳ್ಳಿ  ಸರ್ ಎಂದ ಒಬ್ಬರಿಗೆ ಐವತ್ತು ರೂಪಾಯಿಯಂತೆ ಇನ್ನೂರೈವತ್ತು ಕೊಟ್ಟು ಐದು ಟಿಕೆಟ್ ತೆಗೆದುಕೊಂಡೆವು  .ಜೀಪ್ ಮುಂದೆ ಸಾಗಿತು...ಮತ್ತದೇ ಕೊರಕಲು ,ಗುಂಡಿ ಕಲ್ಲು ಮತ್ತು ರಸ್ತೆಯಲ್ಲದ ರಸ್ತೆ .ಎಂಟು ಕಿಲೋಮೀಟರ್ ಹಾದಿಗೆ ಅವನ್ಯಾಕೆ ಎರಡು ಸಾವಿರ ಕೇಳಿದ ಎಂಬುದು ಆಗ ನನಗೆ ಮನವರಿಕೆಯಾಯಿತು. ಸುಮಾರು ಅರ್ಧಗಂಟೆಯ ಪ್ರಯಾಸದ ಪ್ರಯಾಣದ ನಂತರ ಒಂದೆಡೆ ನಿಲ್ಲಿಸಿ " ಇಳೀರಿ ಸರ್ ಇದೇ ಕ್ಯಾತನಮಕ್ಕಿ, ಇಲ್ಲಿಂದ ಮುಂದೆ ನಡೆದುಕೊಂಡು ಹೋಗಿ ಐನೂರು ಮೀಟರ್ ನಲ್ಲಿ ಸ್ವರ್ಗ ಸಿಗುತ್ತೆ, ನಲವತ್ತೈದು ನಿಮಿಷ ಟೈಮ್ ಬೇಗ ಬನ್ನಿ " ಅಂದ  ಸ್ವರ್ಗ ಸಿಕ್ಕರೆ ನಲವತ್ತೈದು ನಿಮಿಷಕ್ಕೆ ಯಾರು ಬರ್ತಾರೆ ಅಂದ್ಕೊಂಡ್ ಕ್ಯಾತನಮಕ್ಕಿ ಗುಡ್ಡದ ಕಡೆಗೆ ಹೆಜ್ಜೆ ಹಾಕಿದೆವು. ಬೆಳಗಿನ ಒಂಭತ್ತೂವರೆ ಗಂಟೆಯಾದ್ದರಿಂದ ಸೂರ್ಯನ ಶಾಖ ಕ್ರಮೇಣ ಏರುತ್ತಿತ್ತು ,ಏದುಸಿರು ಬಿಡುತ್ತಾ ಬೆಟ್ಟ ಹತ್ತುವಾಗ ಬೆವರು ಬರಲಾರಂಭಿಸಿತು ದೇವಸ್ಥಾನದಲ್ಲಿ ತಿಂದ ಪ್ರಸಾದದ ಅವಲಕ್ಕಿ ಯಾವಾಗಲೋ ಕರಗಿ ಹೋಗಿತ್ತು. ಎರಡು ಬಾರಿ ಕೇಳಿ   ಹಾಕಿಸಿಕೊಂಡು ಕುಡಿದ ನನ್ನ ನೆಚ್ಚಿನ ಹೊರನಾಡ ಕಾಫಿ ಪ್ಲೇವರ್ ಮಾತ್ರ ಹಾಗೆಯೇ ಇತ್ತು.




ನಿಧಾನವಾಗಿ ಬೆಟ್ಟ ಹತ್ತಿ ಸಮತಟ್ಟಾದ ಜಾಗದ ಮೇಲೆ ನಿಂತ ನಮಗೆ ಕಂಡಿದ್ದು ನಿಜವಾಗಿಯೂ ಸ್ವರ್ಗ!


ಈ ಮನಮೋಹಕ ದೃಶ್ಯ ಕಂಡ ನಾನು 


ಬೆಳಿಗ್ಗೆ  ಸ್ನಾನ, ಧ್ಯಾನ,

ಅದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ

ಅಮ್ಮನವರ ದರ್ಶನ| 

ಈಗ ಕ್ಯಾತನಮಕ್ಕಿಯಲ್ಲಿ

ಪ್ರಕೃತಿ ಮಾತೆಯ ಮಾಹಾ ದರ್ಶನ ||


ಎಂದೆ ನನ್ನ ಸ್ನೇಹಿತರು ನನ್ನ ಹನಿಗವನ ಮತ್ತು ನಿಸರ್ಗದ ಸೌಂದರ್ಯ ಕಂಡು ವಾವ್... ವಾವ್ .... ಎಂದು ಹೇಳುತ್ತಲೇ ಇದ್ದರೂ ನಾನು ಸಹ ಅವರ ಜೊತೆಯಲ್ಲಿ ನನಗರಿವಿಲ್ಲದೇ ವಾವ್ ... ಎಂದು ಬಿಟ್ಟೆ.




 ತಂಪಾದ ಗಾಳಿ ಬೆಟ್ಟ ಹತ್ತಿ   ದಣಿದ ದೇಹವನ್ನು ತಂಪು ಮಾಡಿದರೆ ಸುಂದರ ನಯನ ಮನೋಹರ ದೃಶ್ಯಗಳು ಮನಕ್ಕೆ ಸಂತಸ ನೀಡಿದವು. 360 ಡಿಗ್ರಿಯಲ್ಲಿ ಯಾವ ಕಡೆ ತಿರುಗಿದರೂ ಹಸಿರೊದ್ದ ಬೆಟ್ಟಗಳು , ಮಂಜಿನ ತೆರೆಗಳು, ನೀಲಿಗಗನ , ನಾವೆಲ್ಲಿದ್ದೇವೆ ಎಂದು ನಮಗೆ ಮರೆತೇಹೋಯಿತು.  ಈ ದೃಶ್ಯ ನೋಡಿ ಒಂದು ಹನಿಗವನ ಹೇಳಿದೆ

"ಸುತ್ತ ಆಕಾಶ   ನೀಲಿ

ಅಲ್ಲಲ್ಲಿ ಕಾಣುತ್ತಿವೆ ಮೋಡ ಬಿಳಿ

ಎತ್ತ ನೋಡಿದರೂ ಹಸಿರು|

ಈ ದೃಶ್ಯ ನೋಡಿದ ಮೇಲೆ 

ಅನಿಸಿದ್ದೊಂದೇ ,ಸಾರ್ಥಕ ನಮ್ಮ ಉಸಿರು ||" 


ಸಹೋದ್ಯೋಗಿಗಳಾದ ಹನುಮಂತರಾಯಪ್ಪ ಮತ್ತು ರಂಗಸ್ವಾಮಯ್ಯ ಚಪ್ಪಾಳೆ ತಟ್ಟಿದರು.

 ದೂರದಲ್ಲಿ ಹರಿವ ಜುಳು ಜುಳು ಝರಿಯ ನಾದವು ಸಂಗೀತದಂತೆ ನಮಗೆ ಕೇಳಿಸುತ್ತಿತ್ತು ಅಲ್ಲೇ ಸ್ವಲ್ಪ ದೂರದಲ್ಲಿ ನೂರಾರು ಹಸುಗಳು, ಕರುಗಳು  ತಮ್ಮ ಪಾಡಿಗೆ ಮೇಯುತ್ತಿದ್ದವು.ಕೆಲವು ಈಗಾಗಲೇ ಮೇಯ್ದು ಮೆಲುಕು ಹಾಕುತ್ತಾ  ಮಲಗಿದ್ದವು.ನಾಡಿನ ಸಂಪರ್ಕವಿರದ ಕಾಡಿನಲ್ಲಿ ವಾಸಿಸುವ  ದನ ಕರುಗಳ ಜೀವನ ಎಷ್ಟು ಸರಳ ಮತ್ತು ಸುಂದರ ಅಲ್ಲವೆ? ನಾವೇಕೆ ನಮ್ಮ ಜೀವನವನ್ನು ಇಷ್ಟು ಸಂಕೀರ್ಣ ಮಾಡಿಕೊಂಡಿದ್ದೇವೆ ಎಂಬ ಪ್ರಶ್ನೆಗಳು ನನ್ನ ಕಾಡಿದವು...

"ಇಲ್ಲಿ ನೋಡಿ ಸಾರ್ ಎಂತಹ ಸೀನರಿ" ಎಂಬ ಕಲಾವಿದರಾದ ಕೋಟೆ ಕುಮಾರ್ ರವರ ಮಾತಿನಿಂದ ವಾಸ್ತವಕ್ಕೆ ಬಂದು ನೋಡಿದರೆ ಪ್ರಕೃತಿ ಮಾತೆಯ ಸೌಂದರ್ಯದ ಮುಂದೆ ಮಾತುಗಳೆ ಬರದಾದವು.ಮತ್ತೆ ನಮ್ಮ ಮೊಬೈಲ್ ಗೆ ಕೆಲಸ ಪೋಟೋ ವೀಡಿಯೋ ಮಾಡಿಕೊಳ್ಳಲು ನಾ ಮುಂದು ತಾ ಮುಂದು ಎಂದು ಓಡಾಡುವಾಗ " ಹುಷಾರು ಮುಂದೆ ಸಾಗಬೇಡಿ ಪ್ರಪಾತ ಇದೆ"  ಎಂಬ  ನಮ್ಮ ತಂಡದ ಹಿರಿಯ ಸದಸ್ಯ ರಾದ  ಚಂದ್ರಶೇಖರಯ್ಯ ನವರ ಮಾತು ನಮ್ಮನ್ನು ಎಚ್ಚರಿಸಿದವು. 

ಹಿತವಾದ ಗಾಳಿ ಅಗಾಗ್ಗೆ ನಮ್ಮ ಮೈ ಸೋಕುತ್ತಿತ್ತು ಬಿಸಿಲಿದ್ದರೂ ಗಾಳಿಯು ಹಿತವಾಗಿ ಬೀಸುತ್ತಿತ್ತು.ಅದಕ್ಕೆ ಈ ಪ್ರದೇಶಕ್ಕೆ "ಗಾಳಿಗುಡ್ಡ " ಎಂಬ ಹೆಸರಿದೆ ಎಂದು ಸ್ಥಳೀಯರು ವಿವರಣೆ ನೀಡಿದರು. ಆ ಸುಂದರ ಪರಿಸರದಲ್ಲಿ ಓಡಾಡುತ್ತ ಸಮಯ ಕಳೆದದ್ದೆ ಗೊತ್ತಾಗಲಿಲ್ಲ.ಇನ್ನೂ ಸ್ವಲ್ಪ ಕಾಲ ಅಲ್ಲೆ ಕಾಲ ಕಳೆವ ಮನಸಾದರೂ ಅಖಿಲ್ ಹೇಳಿದ್ದ ನಲವತ್ತೈದು ನಿಮಿಷ ಕಳೆದು ಒಂದೂವರೆ ಗಂಟೆಯಾಗಿತ್ತು.ಒಲ್ಲದ ಮನಸ್ಸಿನಿಂದ ಗುಡ್ಡ ಇಳಿದು ಬರುವಾಗ ಮತ್ತೊಮ್ಮೆ ಈ ಸ್ವರ್ಗಕ್ಕೆ ಕುಟುಂಬದ ಸದಸ್ಯರೊಡಗೂಡಿ ಬರಬೇಕೆಂದು ಸಂಕಲ್ಪ ಮಾಡಿದೆವು.

ನಮ್ಮ ಪಿಕಪ್ ವಾಹನ ಏರಿ ಮತ್ತೆ ನಮ್ಮ ಮೈ ಕೈ ಕುಲುಕಿಸಿಕೊಂಡು ಹೊರನಾಡ ಕಡೆ ಹೊರಟೆವು.. ಅಕ್ಕಪಕ್ಕದ ಟೀ ಕಾಫಿ ಗಿಡದ ಸೌಂದರ್ಯವೂ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದವು... ಅಖಿಲ್ ಒಂದೆಡೆ  ಜೀಪ್ ಸೈಡಿಗೆ ನಿಲ್ಲಿಸಿ ನಮ್ಮ ಅಪೇಕ್ಷೆಯ ಮೇರೆಗೆ ಏಲಕ್ಕಿ ಗಿಡ ಮತ್ತು ಬುಡದಲ್ಲಿ ಬಿಟ್ಟ ಏಲಕ್ಕಿ ಬುಡ್ಡು ತೋರಿಸಿದ .

ಹೊರನಾಡಿಗೆ ಬಂದು ತಾಯಿ ಅನ್ನಪೂರ್ಣೇಶ್ವರಿಯ ಪ್ರಸಾದ ಸ್ವೀಕರಿಸಿ ನಮ್ಮ ಕಾರಿನಲ್ಲಿ ಊರ ಕಡೆ ಹೊರಟಾಗ ಪದೇ ಪದೇ ಕ್ಯಾತನಮಕ್ಕಿಯ ಪ್ರಕೃತಿ ಮತ್ತು ಅಲ್ಲಿನ ದನ ಕರುಗಳು ಕಾಡಲಾರಂಬಿಸಿದವು.....


ಸ್ನೇಹಿತರೇ ನೀವೂ ಕ್ಯಾತನಮಕ್ಕಿ ಸೌಂದರ್ಯ ಸವಿಯಲು ಒಮ್ಮೆ ಬನ್ನಿ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕ್ಯಾತನಮಕ್ಕಿ. ಮೂಡಿಗೆರೆಯಿಂದ ಕ್ಯಾತನಮಕ್ಕಿ 72 ಕಿ.ಮೀ ದೂರದಲ್ಲಿದ್ದು ಮೊದಲು ಮೂಡಿಗೆರೆ ತಾಲೂಕಿನಲ್ಲಿದ್ದ ಈ ಸ್ಥಳ ಈಗ ನೂತನವಾಗಿ ಘೋಷಣೆಯಾದ ಕಳಸ ತಾಲೂಕಿಗೆ ಬರುತ್ತದೆ.

ಹೊರನಾಡು ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಮೀಪವಿರುವ ಈ ತಾಣಕ್ಕೆ  ಶೃಂಗೇರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಾಗಬೇಕು. ಕಳಸದಿಂದ ಈ ಸುಂದರ ತಾಣ ತಲುಪಲು 20 ಕಿ.ಮೀ ಕ್ರಮಿಸಬೇಕು. ಬಲಿಗೆ ಜೈನ ಬಸದಿಯ ಸಮಿಪದಲ್ಲಿ ಈ ಕ್ಯಾತನಮಕ್ಕಿ ಸುಂದರ ಪ್ರಕೃತಿಯ ತಾಣ ಸಿಗುತ್ತದೆ.

ಅಲ್ಲಲ್ಲಿ ಹೋಂ ಸ್ಟೇ ಗಳು ಸಹ ಇವೆ. ಬೇಕೆಂದರೆ ಒಂದೆರಡು ದಿನ ಉಳಿದು ಕ್ಯಾತನಮಕ್ಕಿ ಜೊತೆಯಲ್ಲಿ ಇತರ ಸ್ಥಳಗಳಲ್ಲಿ ಟ್ರಕ್ಕಿಂಗ್ ಕೂಡಾ ಮಾಡಬಹುದು...


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.