*ಅರ್ಥ*
ಒಂದೇ ದಿನ ಮಾಡಬಹುದು
ಮದುವೆ ಮತ್ತು ನಿಶ್ಚಿತಾರ್ಥ |
ಇದರಿಂದ ಹೆಣ್ಣು ಮತ್ತು
ಗಂಡಿನ ಕಡೆಯವರಿಗೂ
ಉಳಿಯುವುದು "ಅರ್ಥ" ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಒಂದೇ ದಿನ ಮಾಡಬಹುದು
ಮದುವೆ ಮತ್ತು ನಿಶ್ಚಿತಾರ್ಥ |
ಇದರಿಂದ ಹೆಣ್ಣು ಮತ್ತು
ಗಂಡಿನ ಕಡೆಯವರಿಗೂ
ಉಳಿಯುವುದು "ಅರ್ಥ" ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಉತ್ತಮ ಶಿಕ್ಷಕರು ಜೀವನ ಪರ್ಯಂತ ಕಲಿಯುವವರು..
ಭಾನುವಾರ ಸಂಜೆ ತುಮಕೂರಿನ ಬಾಯರ್ಸ್ ಕಾಫಿ ಹೌಸ್ ನಲ್ಲಿ ಟೀ ಕುಡಿಯುತ್ತಾ ಸಮಾನ ಮನಸ್ಕ ಗೆಳೆಯರ ಜೊತೆ ಕುಳಿತು ಟೀ ಕುಡಿಯುವಾಗ ಸಾಹಿತ್ಯ, ಸಮಾಜ ,ಶಿಕ್ಷಣ ಹೀಗೆ ನಮ್ಮ ಮಾತುಕತೆ ಸಾಗುವಾಗ ಓದುವ ಹವ್ಯಾಸ ಕ್ರಮೇಣ ಕಡಿಮೆಯಾಗಿರುವ ಬಗ್ಗೆ ಚರ್ಚೆ ನಡೆಯುವಾಗ ಸ್ಟೂಡೆಂಟ್ ಬುಕ್ ಹೌಸ್ ಮಾಲೀಕರು ಹಾಗೂ ಪ್ರಕಾಶಕರಾದ ಸದಾಶಿವ್ ರವರು ಒಂದು ಘಟನೆ ಹೇಳಿದರು .ಒಮ್ಮೆ ನನ್ನ ಪುಸ್ತಕದ ಅಂಗಡಿಗೆ ನಾಲ್ಕು ಜನ ಕಾರಿನಲ್ಲಿ ಬಂದು ಶಿಕ್ಷಕರು ಎಂದು ಪರಿಚಯ ಮಾಡಿಕೊಂಡು ಓರ್ವ ಶಿಕ್ಷಕರು ಸುಮಾರು ಎಂಟತ್ತು ಉತ್ತಮ ಅಭಿರುಚಿಯ ಪುಸ್ತಕಗಳನ್ನು ಕೊಂಡರು .ಅವರ ಜೊತೆಯಲ್ಲಿ ಇದ್ದ ಶಿಕ್ಷಕರೊಬ್ಬರು "ಸಾಕು ಬಾರಪ್ಪ ಅದೇನ್ ಪುಸ್ತಕ ಓದ್ತಿಯಾ ನೀನು " ಎಂದು ವ್ಯಂಗ್ಯವಾಗಿ ಹೇಳಿದರು. ಇದರಿಂದ ನನಗೆ ಬಹಳ ಬೇಸರ ವಾಯಿತು ಎಂದರು.. ಅವರು ಮುಂದುವರೆದು ನಾನು ಪುಸ್ತಕ ಅಂಗಡಿಯಿಟ್ಟು ಹದಿನೈದು ವರ್ಷಗಳಾದವು ಶಿಕ್ಷಕರು ಪುಸ್ತಕ ಕೊಳ್ಳುವುದು ಬಹಳ ಕಡಿಮೆ ಎಂದರು. ಅದಕ್ಕೆ ನಾನು ಆಕ್ಷೇಪಿಸಿ ನಾನು ಈ ವರ್ಷ ಹದಿನೈದು ಪುಸ್ತಕ ಕೊಂಡು ಓದಿರುವೆ ಎಂದೆ .ನೀವು ಹಾಗೂ ನಿಮ್ಮಂತವರು ಕೆಲವೇ ಮಂದಿ ಸರ್ ನಮ್ಮ ಮನೆಯ ಪಕ್ಕ ಎರಡು ಶಿಕ್ಷಕರ ಕುಟುಂಬ ಇವೆ ಅವರ ಮನೆಯಲ್ಲಿ ಒಂದು ನ್ಯೂಸ್ ಪೇಪರ್ ಸಹ ತರಿಸಲ್ಲ ಅವರು ನ್ಯೂಸ್ ಪೇಪರನ್ನೇ ಓದಲ್ಲ ಎಂದರೆ ಪುಸ್ತಕ ಓದುವ ಮಾತೆಲ್ಲಿ ಬಂತು? ಅಂದು ನನ್ನ ಬಾಯಿ ಮುಚ್ಚಿಸಿದರು.
ರವೀಂದ್ರನಾಥ ಟಾಗೋರ್ ರವರು ಒಂದು ದೀಪ ತಾನು ಉರಿಯದೇ ಮತ್ತೊಂದು ದೀಪ ಹಚ್ಚಲಾಗದು ಎಂದಂತೆ ಶಿಕ್ಷಕರಾದವರು ಮೊದಲು ತಾವು ಓದಿ ಜ್ಞಾನವನ್ನು ಪಡೆದರೆ ಮಾತ್ರ ಮಕ್ಕಳಿಗೆ ಜ್ಞಾನ ನೀಡಲು ಸಾದ್ಯ. ಸಾಧಾರಣ ಶಿಕ್ಷಕ ಪಾಠ ಮಾಡುತ್ತಾನೆ ಉತ್ತಮ ಶಿಕ್ಷಕ ಅರ್ಥ ಮಾಡಿಸುತ್ತಾನೆ ಅತ್ಯುತ್ತಮ ಶಿಕ್ಷಕ ಪ್ರೇರಣೆ ನೀಡುತ್ತಾನೆ ಅಂತಹ ಪ್ರೇರಣೆ ನೀಡುವ ಶಿಕ್ಷಕ ಮೊದಲು ಕಲಿಕಾರ್ಥಿಯಾಗಿ ಕಲಿತಿರಬೇಕು.ಬಹುತೇಕರು ನಂಬಿದಂತೆ ಶಿಕ್ಷಕ ವೃತ್ತಿ ಸಿಕ್ಕಿದ ಮೇಲೆ ಕಲಿಯಲು ಏನೂ ಇಲ್ಲ ಎಂಬುದು ಸುಳ್ಳು. ಕಲಿಕೆಯು ಗರ್ಭದಿಂದ ಗೋರಿಯವರೆಗೆ ನಡೆವ ನಿರಂತರ ಪ್ರಕ್ರಿಯೆಯಾಗಿದೆ. ಅದರಲ್ಲೂ ಈ ಇಪ್ಪತ್ತೊಂದನೇ ಶತಮಾನದ ರೋಬಾಟಿಕ್ ಮತ್ತು ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಮಕ್ಕಳು ಶಿಕ್ಷಕರಿಗಿಂತ ಒಂದು ಹೆಜ್ಜೆ ಮುಂದೆ ಇರುವುದು ನೋಡಬಹುದು. ಶಿಕ್ಷಕರಾದವರು ಅಪ್ಡೇಟ್ ಆಗುತ್ತ ಇರಬೇಕು ಹೊಸ ತಂತ್ರಜ್ಞಾನದ ತಿಳುವಳಿಕೆ, ಬೋಧನಾ ಕ್ಷೇತ್ರದಲ್ಲಿ ನಾವೀನ್ಯತೆಯ ಅಳವಡಿಸಿಕೊಂಡು ಬೋಧನೆ ಮಾಡಿದರೆ ಮಕ್ಕಳು ಶಿಕ್ಷಕರನ್ನು ಆರಾಧಿಸುತ್ತಾರೆ. ಆಗ ಶಿಕ್ಷಕರಿಗಾಗುವ ಆನಂದ ಅನುಭವಿಸಿಯೇ ತಿಳಿಯಬೇಕು ಆ ಅನುಭವ ನನಗಾಗಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಶಿಕ್ಷಕರಾದವರು ಅಪ್ಡೇಟ್ ಆಗಲಿಲ್ಲ ಎಂದರೆ ಔಟ್ ಡೇಟ್ ಆಗಿಬಿಡುತ್ತೇವೆ ನಮ್ಮ ನಮ್ಮ ಬೋಧನಾ ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆಯಲು ಸದಾ ನಾವು ಕಲಿಯುತ್ತಲೇ ಇರಬೇಕು.ಇದರ ಜೊತೆಯಲ್ಲಿ ಶಿಕ್ಷಕರಾದವರು "teachers must know something about everything and everything about something" ಎಂಬಂತೆ ನಮಗೆ ಇತರೆ ವಿಷಯಗಳ ಜ್ಞಾನವು ಅಗತ್ಯ . 2020 ರ ಹೊಸ ಶಿಕ್ಷಣ ನೀತಿಯು ಸಹ ಇದೇ ಆಧಾರದ ಮೇಲೆ ಶಿಕ್ಷಕರಾದವರು ಕಲಿಯುತ್ತಾ ಕಲಿಸಬೇಕು ಎಂಬುವ ಆಶಯ ಹೊಂದಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವು ಕಲಿಯುತ್ತಾ ಕಲಿಸೋಣ, ಕಲಿಸುತ್ತಾ ಕಲಿಯೋಣ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಪಟಾಕಿ ಹೊಡೆಯೋ ಮುನ್ನ...
ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡಯಬೇಡಿ ಎಂದರೆ ನಿಮ್ಮಲ್ಲಿ ಕೆಲವರು ನನ್ನನ್ನು ಕಣ್ಣು ಕೆಂಪಗೆ ಮಾಡಿಕೊಂಡು ಗುರಾಯಿಸೋದು ಗ್ಯಾರಂಟಿ. ಪರಿಸರ ಅದೂ ಇದು ಅಂದು ನಮ್ಮ ಸಂತೋಷಕ್ಕೆಅಡ್ಡಿ ಮಾಡಲು ನಿವ್ಯಾರು? ನಿವೇನ್ ದುಡ್ ಕೊಟ್ಟು ಪಟಾಕಿ ಕೊಡಿಸ್ತೀರಾ? ಯಾವ್ ಹಬ್ಬಕ್ಕೆ ಇಲ್ಲದ ನಿರ್ಬಂಧ ನಮಗ್ಯಾಕೆ ಹೀಗೆ ನೂರು ಪ್ರಶ್ನೆ ಕೇಳಿ ನನ್ ಬಾಯಿ ಮುಚ್ಚಿಸ್ತೀರಾ ಅಂತಾನೂ ಗೊತ್ತು..
ಅಂತೂ ಪಟಾಕಿ ಹೊಡಿಲೇ ಬೇಕು ಅಂತ ತೀರ್ಮಾನ ಮಾಡಿರೋರ್ನ ನಾನು ತಡೆಯೊಲ್ಲ ಪಟಾಕಿ ಹೊಡಿರಿ ಅದಕ್ಕೂ ಮುಂಚೆ ನಾ ಹೇಳೋ ಮಾತ್ ಕೇಳಿ...
ಮೊದಲನೆಯದಾಗಿ ಪಟಾಕಿ ಹೊಡೆಯಲು ಉತ್ತಮ ಸ್ಥಳ ಆರಿಸಿ. ವಿಶಾಲವಾದ ಪ್ರದೇಶ ಅಥವಾ ಮೈದಾನದಲ್ಲಿ ಪಟಾಕಿ ಹೊಡೆಯುವುದು ಒಳ್ಳೆಯದು. ಸ್ಥಳ ಕಡಿಮೆ ಇರುವವರು ಸಣ್ಣ-ಪುಟ್ಟ ಪಟಾಕಿಗಳನ್ನು ಮಾತ್ರ ಉಪಯೋಗಿಸಿ. ಇತರರಿಗೆ ತೊಂದರೆ ಆಗದಂತೆ ಜಾಗೃತೆ ವಹಿಸಿ.
* ಪಟಾಕಿ ಸಿಡಿಸುವಾಗ ಮಕ್ಕಳ ಕಡೆಗೂ ಗಮನ ಹರಿಸಿ, ಚಿಕ್ಕ ಮಕ್ಕಳು ಆ ಸ್ಥಳದಿಂದ ದೂರ ಇರುವುದೇ ಉತ್ತಮ.
* ಪಟಾಕಿ ಸಿಡಿಸುವಾಗ ಕಣ್ಣಿನ ಆರೋಗ್ಯದ ಬಗ್ಗೆಯೂ ಗಮನವಿರಲಿ. ಸಾಧ್ಯವಾದರೆ ನೇತ್ರ ಸುರಕ್ಷತಾ ಸಾಧನಗಳನ್ನು ಬಳಸಿ.
* ಪಟಾಕಿ ಹೊಡೆಯುವಾಗ ಆದಷ್ಟು ಕಾಟನ್ ಬಟ್ಟೆಗಳನ್ನೇ ಧರಿಸಿ. ಇದು ಬಟ್ಟೆಗೆ ಬೇಗನೆ ಬೆಂಕಿ ಹತ್ತಿಕೊಳ್ಳುವುದನ್ನು ತಪ್ಪಿಸುತ್ತದೆ.
* ಕಡಿಮೆ ಶಬ್ದ ಮತ್ತು ಕಡಿಮೆ ಹೊಗೆ ಬರುವ ಪಟಾಕಿಗಳಿಗೆ ಮೊದಲ ಆದ್ಯತೆ ನೀಡಿ. ಹಸಿರು ಪಟಾಕಿಗಳನ್ನು ಹೆಚ್ಚಾಗಿ ಬಳಸಿ.
* ಪಟಾಕಿ, ನಕ್ಷತ್ರ ಕಡ್ಡಿ ಉಪಯೋಗಿಸುವಾಗ ಎಚ್ಚರವಿರಲಿ. ಬೆಂಕಿಯ ಕಿಡಿ ಮುಖ, ಕಣ್ಣು, ಕೂದಲಿಗೆ ಬರದಂತೆ ಎಚ್ಚರ ವಹಿಸಿ.
* ಪಟಾಕಿ ಹೊಡೆಯುವಾಗ ಕಣ್ಣು ಮಾತ್ರವಲ್ಲದೇ ಕೈ-ಕಾಲು ಗಳಿಗೂ ತಗಲುವ ಅಪಾಯವಿರುವುದರಿಂದ ಆದಾಷ್ಟು ಎಚ್ಚರಿಕೆ ವಹಿಸುವುದು ಸೂಕ್ತ.
* ಅರ್ಧ ಸುಟ್ಟ ಅಥವಾ ಸಿಡಿಯದೇ ಬಾಕಿ ಉಳಿದಿರುವ ಪಟಾಕಿಗಳನ್ನು ಬಳಸುವುದು ಬೇಡ. ಕತ್ತಲಲ್ಲಿ ಪಟಾಕಿ ಹೊಡೆಯುವ ಸಹಾಯ ಬೇಡ.
* ಪಟಾಕಿ ಬಾಕ್ಸ್ ಪಕ್ಕದಲ್ಲಿ ಇಟ್ಟು ಪಟಾಕಿ ಹೊಡೆಯುವುದನ್ನು ತಪ್ಪಿಸಿ.
* ಪ್ರಥಮ ಚಿಕಿತ್ಸೆಯ ಕಿಟ್ ಜೊತೆಗಿರಲಿ.
ಸುಪ್ರೀಂ ಕೋರ್ಟ್ ಪರಿಸರಕ್ಕೆ ಹಾನಿಯಾಗುವ ಪಟಾಕಿಗಳನ್ನು ಹೊಡೆಯಬಾರದು ಎಂದು ಆದೇಶ ನೀಡಿದೆ. ಕಳೆದ ವರ್ಷದಿಂದ ಸರ್ಕಾರ ಹಸಿರು ಪಟಾಕಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಹಾಗಾಗಿ ಎಲ್ಲರೂ ಆದಷ್ಟು ಹಸಿರು ಪಟಾಕಿಗಳನ್ನೇ ಬಳಸಿ. ಪಟಾಕಿ ಹೊಡೆಯಲು ರಾತ್ರಿ 8-10 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಆ ಸಮಯದಲ್ಲೇ ಪಟಾಕಿ ಹೊಡೆಯುವುದು ಉತ್ತಮ. ಸಂಭ್ರಮ, ಸಡಗರದ ಜೊತೆಗೆ ಸುರಕ್ಷತೆ ಕಡೆಗೂ ಗಮನ ಹರಿಸುವುದು ಅಗತ್ಯ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಕ್ಯಾತನಮಕ್ಕಿ
"ಇದ್ಯಾವ ಸೀಮೆ ರೋಡ್ ರೀ ನಿಲ್ಸಿ ನಾನು ಇಳೀತೀನಿ" ಎಂದೆ "ಸಾರ್ ಈ ರಸ್ತೆ ಸಾವಿರ ಪಾಲು ಮೇಲು. ಮೊದಲು ಹೀಗಿರಲಿಲ್ಲ "ಎಂದ ಅಖಿಲ್ .ಎಲ್ಲಿದೆ ರಸ್ತೆ ಎಂದು ಹುಡುಕಿದೆ .ಅಲ್ಲಿ ರಸ್ತೆಯೇ ಇಲ್ಲ ಕಡಿದಾದ ಗುಡ್ಡ, ಕಲ್ಲು ಮಣ್ಣು ಅಲ್ಲಲ್ಲಿ ಗಿಡಗಂಟೆ .ನಾವು ಕುಳಿತಿದ್ದ ನಾಲ್ಕು ಇಂಟು ನಾಲ್ಕು ಜೀಪ್ ಚಾಲಕ ಸ್ಟೆರಿಂಗ್ ತಿರುಗಿಸಿದಾಗ ಎಡ ಸೀಟಿನ ತುದಿಯಿಂದ ಬಲ ಸೀಟಿಗೆ ಬಂದು ಬಿದ್ದಾಗ ಈ ಮೇಲಿನಂತೆ ಜೀಪ್ ಚಾಲಕನಿಗೆ ಬೈದಿದ್ದೆ.
ನಿಧಾನವಾಗಿ ಅಖಿಲ್ ಮಾತನಾಡುತ್ತಾ ಜೀಪ್ ಚಾಲನೆ ಮಾಡುತ್ತಿದ್ದ .ನನಗೆ ಅವನ ಚಾಲನೆ ಮತ್ತು ರಸ್ತೆ ನೋಡಿ ಜೀಪಿನಲ್ಲಿ ಕುಳಿತು ಪಕ್ಕಕ್ಕೆ ನೋಡಿದೆ . ಭಯವಾಯಿತು ಕೆಳಗಡೆ ದೊಡ್ಡ ಪ್ರಪಾತ! ಬೆಳಿಗ್ಗೆ ಆದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ ದರ್ಶನ ಪಡೆದು ಬಂದ ನಾನು ಮತ್ತೆ ತಾಯಿಗೆ ಬೇಡಿದೆ ಸುರಕ್ಷಿತವಾಗಿ ನಮ್ಮ ಸ್ಥಳ ತಲುಪಿಸಲು.
ನನ್ನ ಜೊತೆಯಲ್ಲಿ ಇದ್ದ ನನ್ನ ಸಹಪಾಠಿಗಳ ಕಥೆಯೂ ಅದೇ ಆಗಿತ್ತು .ನಮ್ಮ ನೋಡಿ ನಗುತ್ತಲೇ ಅಖಿಲ್ " ಸರ್ ಭಯ ಪಡಬೇಡಿ ಇನ್ನೂ ಕೆಲವೇ ನಿಮಿಷ ಗಟ್ಟಿಯಾಗಿ ಹಿಡಿದು ಕುಳಿತುಕೊಳ್ಳಿ ನಾನು ನಿಮ್ಮನ್ನು ಕ್ಯಾತನಮಕ್ಕಿಗೆ ಕರೆದುಕೊಂಡು ಹೋಗುವೆ" ಎಂದು ಧೈರ್ಯ ತುಂಬಿದ . ಅಖಿಲ್ ಮಾತನಾಡುತ್ತಾ ಗಾಡಿ ಚಲಾಯಿಸುತ್ತಿದ್ದ .ನಿನ್ನೆ ರಾತ್ರಿ ಹೊರನಾಡಿನಲ್ಲಿ ಬಿದ್ದ ಬಾರಿ ಮಳೆಯ ಬಗ್ಗೆ ,ತಾನು ಕೊಂಡು ತಂದ
ರೈನ್ ಗೇಜ್ ಉಪಕರಣದ ಬಗ್ಗೆ,ಅವರ ತೋಟಕ್ಕೆ ಬಿದ್ದ
ಅಡಿಕೆ ರೋಗದ ಬಗ್ಗೆ
ಕಳೆನಾಶಕದ ದುಷ್ಪರಿಣಾಮಗಳ ಬಗ್ಗೆ.ಏಲಕ್ಕಿ ಅಡಿಕೆ ಮೆಣಸು, ಕಾಫಿ , ಮುಂತಾದವುಗಳ ಕೃಷಿ ಮತ್ತು ಆ ಕೃಷಿಜೀವನದ ಏರು ಪೇರುಗಳ ಬಗ್ಗೆ ಮಾತನಾಡುತ್ತಾ ಜೀಪ್ ಅನ್ನು ಕಡಿದಾದ ಬೆಟ್ಟದ ಮೇಲೆ ಹತ್ತಿಸುತ್ತಿದ್ದ .ಕೆಲವೊಮ್ಮೆ ಹಿಂದಕ್ಕೆ ಚಲಿಸಿ ಪುನಃ ಮುಂದಕ್ಕೆ ಗೇರ್ ಹಾಕುತ್ತಿದ್ದ .
ಸ್ವಲ್ಪ ದೂರ ಚಲಿಸಿದ ಮೇಲೆ ಒಂದೆಡೆ ನಿಲ್ಲಿಸಿ ಟಿಕೆಟ್ ತೊಗೊಳ್ಳಿ ಸರ್ ಎಂದ ಒಬ್ಬರಿಗೆ ಐವತ್ತು ರೂಪಾಯಿಯಂತೆ ಇನ್ನೂರೈವತ್ತು ಕೊಟ್ಟು ಐದು ಟಿಕೆಟ್ ತೆಗೆದುಕೊಂಡೆವು .ಜೀಪ್ ಮುಂದೆ ಸಾಗಿತು...ಮತ್ತದೇ ಕೊರಕಲು ,ಗುಂಡಿ ಕಲ್ಲು ಮತ್ತು ರಸ್ತೆಯಲ್ಲದ ರಸ್ತೆ .ಎಂಟು ಕಿಲೋಮೀಟರ್ ಹಾದಿಗೆ ಅವನ್ಯಾಕೆ ಎರಡು ಸಾವಿರ ಕೇಳಿದ ಎಂಬುದು ಆಗ ನನಗೆ ಮನವರಿಕೆಯಾಯಿತು. ಸುಮಾರು ಅರ್ಧಗಂಟೆಯ ಪ್ರಯಾಸದ ಪ್ರಯಾಣದ ನಂತರ ಒಂದೆಡೆ ನಿಲ್ಲಿಸಿ " ಇಳೀರಿ ಸರ್ ಇದೇ ಕ್ಯಾತನಮಕ್ಕಿ, ಇಲ್ಲಿಂದ ಮುಂದೆ ನಡೆದುಕೊಂಡು ಹೋಗಿ ಐನೂರು ಮೀಟರ್ ನಲ್ಲಿ ಸ್ವರ್ಗ ಸಿಗುತ್ತೆ, ನಲವತ್ತೈದು ನಿಮಿಷ ಟೈಮ್ ಬೇಗ ಬನ್ನಿ " ಅಂದ ಸ್ವರ್ಗ ಸಿಕ್ಕರೆ ನಲವತ್ತೈದು ನಿಮಿಷಕ್ಕೆ ಯಾರು ಬರ್ತಾರೆ ಅಂದ್ಕೊಂಡ್ ಕ್ಯಾತನಮಕ್ಕಿ ಗುಡ್ಡದ ಕಡೆಗೆ ಹೆಜ್ಜೆ ಹಾಕಿದೆವು. ಬೆಳಗಿನ ಒಂಭತ್ತೂವರೆ ಗಂಟೆಯಾದ್ದರಿಂದ ಸೂರ್ಯನ ಶಾಖ ಕ್ರಮೇಣ ಏರುತ್ತಿತ್ತು ,ಏದುಸಿರು ಬಿಡುತ್ತಾ ಬೆಟ್ಟ ಹತ್ತುವಾಗ ಬೆವರು ಬರಲಾರಂಭಿಸಿತು ದೇವಸ್ಥಾನದಲ್ಲಿ ತಿಂದ ಪ್ರಸಾದದ ಅವಲಕ್ಕಿ ಯಾವಾಗಲೋ ಕರಗಿ ಹೋಗಿತ್ತು. ಎರಡು ಬಾರಿ ಕೇಳಿ ಹಾಕಿಸಿಕೊಂಡು ಕುಡಿದ ನನ್ನ ನೆಚ್ಚಿನ ಹೊರನಾಡ ಕಾಫಿ ಪ್ಲೇವರ್ ಮಾತ್ರ ಹಾಗೆಯೇ ಇತ್ತು.
ನಿಧಾನವಾಗಿ ಬೆಟ್ಟ ಹತ್ತಿ ಸಮತಟ್ಟಾದ ಜಾಗದ ಮೇಲೆ ನಿಂತ ನಮಗೆ ಕಂಡಿದ್ದು ನಿಜವಾಗಿಯೂ ಸ್ವರ್ಗ!
ಈ ಮನಮೋಹಕ ದೃಶ್ಯ ಕಂಡ ನಾನು
ಬೆಳಿಗ್ಗೆ ಸ್ನಾನ, ಧ್ಯಾನ,
ಅದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ
ಅಮ್ಮನವರ ದರ್ಶನ|
ಈಗ ಕ್ಯಾತನಮಕ್ಕಿಯಲ್ಲಿ
ಪ್ರಕೃತಿ ಮಾತೆಯ ಮಾಹಾ ದರ್ಶನ ||
ಎಂದೆ ನನ್ನ ಸ್ನೇಹಿತರು ನನ್ನ ಹನಿಗವನ ಮತ್ತು ನಿಸರ್ಗದ ಸೌಂದರ್ಯ ಕಂಡು ವಾವ್... ವಾವ್ .... ಎಂದು ಹೇಳುತ್ತಲೇ ಇದ್ದರೂ ನಾನು ಸಹ ಅವರ ಜೊತೆಯಲ್ಲಿ ನನಗರಿವಿಲ್ಲದೇ ವಾವ್ ... ಎಂದು ಬಿಟ್ಟೆ.
ತಂಪಾದ ಗಾಳಿ ಬೆಟ್ಟ ಹತ್ತಿ ದಣಿದ ದೇಹವನ್ನು ತಂಪು ಮಾಡಿದರೆ ಸುಂದರ ನಯನ ಮನೋಹರ ದೃಶ್ಯಗಳು ಮನಕ್ಕೆ ಸಂತಸ ನೀಡಿದವು. 360 ಡಿಗ್ರಿಯಲ್ಲಿ ಯಾವ ಕಡೆ ತಿರುಗಿದರೂ ಹಸಿರೊದ್ದ ಬೆಟ್ಟಗಳು , ಮಂಜಿನ ತೆರೆಗಳು, ನೀಲಿಗಗನ , ನಾವೆಲ್ಲಿದ್ದೇವೆ ಎಂದು ನಮಗೆ ಮರೆತೇಹೋಯಿತು. ಈ ದೃಶ್ಯ ನೋಡಿ ಒಂದು ಹನಿಗವನ ಹೇಳಿದೆ
"ಸುತ್ತ ಆಕಾಶ ನೀಲಿ
ಅಲ್ಲಲ್ಲಿ ಕಾಣುತ್ತಿವೆ ಮೋಡ ಬಿಳಿ
ಎತ್ತ ನೋಡಿದರೂ ಹಸಿರು|
ಈ ದೃಶ್ಯ ನೋಡಿದ ಮೇಲೆ
ಅನಿಸಿದ್ದೊಂದೇ ,ಸಾರ್ಥಕ ನಮ್ಮ ಉಸಿರು ||"
ಸಹೋದ್ಯೋಗಿಗಳಾದ ಹನುಮಂತರಾಯಪ್ಪ ಮತ್ತು ರಂಗಸ್ವಾಮಯ್ಯ ಚಪ್ಪಾಳೆ ತಟ್ಟಿದರು.
ದೂರದಲ್ಲಿ ಹರಿವ ಜುಳು ಜುಳು ಝರಿಯ ನಾದವು ಸಂಗೀತದಂತೆ ನಮಗೆ ಕೇಳಿಸುತ್ತಿತ್ತು ಅಲ್ಲೇ ಸ್ವಲ್ಪ ದೂರದಲ್ಲಿ ನೂರಾರು ಹಸುಗಳು, ಕರುಗಳು ತಮ್ಮ ಪಾಡಿಗೆ ಮೇಯುತ್ತಿದ್ದವು.ಕೆಲವು ಈಗಾಗಲೇ ಮೇಯ್ದು ಮೆಲುಕು ಹಾಕುತ್ತಾ ಮಲಗಿದ್ದವು.ನಾಡಿನ ಸಂಪರ್ಕವಿರದ ಕಾಡಿನಲ್ಲಿ ವಾಸಿಸುವ ದನ ಕರುಗಳ ಜೀವನ ಎಷ್ಟು ಸರಳ ಮತ್ತು ಸುಂದರ ಅಲ್ಲವೆ? ನಾವೇಕೆ ನಮ್ಮ ಜೀವನವನ್ನು ಇಷ್ಟು ಸಂಕೀರ್ಣ ಮಾಡಿಕೊಂಡಿದ್ದೇವೆ ಎಂಬ ಪ್ರಶ್ನೆಗಳು ನನ್ನ ಕಾಡಿದವು...
"ಇಲ್ಲಿ ನೋಡಿ ಸಾರ್ ಎಂತಹ ಸೀನರಿ" ಎಂಬ ಕಲಾವಿದರಾದ ಕೋಟೆ ಕುಮಾರ್ ರವರ ಮಾತಿನಿಂದ ವಾಸ್ತವಕ್ಕೆ ಬಂದು ನೋಡಿದರೆ ಪ್ರಕೃತಿ ಮಾತೆಯ ಸೌಂದರ್ಯದ ಮುಂದೆ ಮಾತುಗಳೆ ಬರದಾದವು.ಮತ್ತೆ ನಮ್ಮ ಮೊಬೈಲ್ ಗೆ ಕೆಲಸ ಪೋಟೋ ವೀಡಿಯೋ ಮಾಡಿಕೊಳ್ಳಲು ನಾ ಮುಂದು ತಾ ಮುಂದು ಎಂದು ಓಡಾಡುವಾಗ " ಹುಷಾರು ಮುಂದೆ ಸಾಗಬೇಡಿ ಪ್ರಪಾತ ಇದೆ" ಎಂಬ ನಮ್ಮ ತಂಡದ ಹಿರಿಯ ಸದಸ್ಯ ರಾದ ಚಂದ್ರಶೇಖರಯ್ಯ ನವರ ಮಾತು ನಮ್ಮನ್ನು ಎಚ್ಚರಿಸಿದವು.
ಹಿತವಾದ ಗಾಳಿ ಅಗಾಗ್ಗೆ ನಮ್ಮ ಮೈ ಸೋಕುತ್ತಿತ್ತು ಬಿಸಿಲಿದ್ದರೂ ಗಾಳಿಯು ಹಿತವಾಗಿ ಬೀಸುತ್ತಿತ್ತು.ಅದಕ್ಕೆ ಈ ಪ್ರದೇಶಕ್ಕೆ "ಗಾಳಿಗುಡ್ಡ " ಎಂಬ ಹೆಸರಿದೆ ಎಂದು ಸ್ಥಳೀಯರು ವಿವರಣೆ ನೀಡಿದರು. ಆ ಸುಂದರ ಪರಿಸರದಲ್ಲಿ ಓಡಾಡುತ್ತ ಸಮಯ ಕಳೆದದ್ದೆ ಗೊತ್ತಾಗಲಿಲ್ಲ.ಇನ್ನೂ ಸ್ವಲ್ಪ ಕಾಲ ಅಲ್ಲೆ ಕಾಲ ಕಳೆವ ಮನಸಾದರೂ ಅಖಿಲ್ ಹೇಳಿದ್ದ ನಲವತ್ತೈದು ನಿಮಿಷ ಕಳೆದು ಒಂದೂವರೆ ಗಂಟೆಯಾಗಿತ್ತು.ಒಲ್ಲದ ಮನಸ್ಸಿನಿಂದ ಗುಡ್ಡ ಇಳಿದು ಬರುವಾಗ ಮತ್ತೊಮ್ಮೆ ಈ ಸ್ವರ್ಗಕ್ಕೆ ಕುಟುಂಬದ ಸದಸ್ಯರೊಡಗೂಡಿ ಬರಬೇಕೆಂದು ಸಂಕಲ್ಪ ಮಾಡಿದೆವು.
ನಮ್ಮ ಪಿಕಪ್ ವಾಹನ ಏರಿ ಮತ್ತೆ ನಮ್ಮ ಮೈ ಕೈ ಕುಲುಕಿಸಿಕೊಂಡು ಹೊರನಾಡ ಕಡೆ ಹೊರಟೆವು.. ಅಕ್ಕಪಕ್ಕದ ಟೀ ಕಾಫಿ ಗಿಡದ ಸೌಂದರ್ಯವೂ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದವು... ಅಖಿಲ್ ಒಂದೆಡೆ ಜೀಪ್ ಸೈಡಿಗೆ ನಿಲ್ಲಿಸಿ ನಮ್ಮ ಅಪೇಕ್ಷೆಯ ಮೇರೆಗೆ ಏಲಕ್ಕಿ ಗಿಡ ಮತ್ತು ಬುಡದಲ್ಲಿ ಬಿಟ್ಟ ಏಲಕ್ಕಿ ಬುಡ್ಡು ತೋರಿಸಿದ .
ಹೊರನಾಡಿಗೆ ಬಂದು ತಾಯಿ ಅನ್ನಪೂರ್ಣೇಶ್ವರಿಯ ಪ್ರಸಾದ ಸ್ವೀಕರಿಸಿ ನಮ್ಮ ಕಾರಿನಲ್ಲಿ ಊರ ಕಡೆ ಹೊರಟಾಗ ಪದೇ ಪದೇ ಕ್ಯಾತನಮಕ್ಕಿಯ ಪ್ರಕೃತಿ ಮತ್ತು ಅಲ್ಲಿನ ದನ ಕರುಗಳು ಕಾಡಲಾರಂಬಿಸಿದವು.....
ಸ್ನೇಹಿತರೇ ನೀವೂ ಕ್ಯಾತನಮಕ್ಕಿ ಸೌಂದರ್ಯ ಸವಿಯಲು ಒಮ್ಮೆ ಬನ್ನಿ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕ್ಯಾತನಮಕ್ಕಿ. ಮೂಡಿಗೆರೆಯಿಂದ ಕ್ಯಾತನಮಕ್ಕಿ 72 ಕಿ.ಮೀ ದೂರದಲ್ಲಿದ್ದು ಮೊದಲು ಮೂಡಿಗೆರೆ ತಾಲೂಕಿನಲ್ಲಿದ್ದ ಈ ಸ್ಥಳ ಈಗ ನೂತನವಾಗಿ ಘೋಷಣೆಯಾದ ಕಳಸ ತಾಲೂಕಿಗೆ ಬರುತ್ತದೆ.
ಹೊರನಾಡು ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಮೀಪವಿರುವ ಈ ತಾಣಕ್ಕೆ ಶೃಂಗೇರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಾಗಬೇಕು. ಕಳಸದಿಂದ ಈ ಸುಂದರ ತಾಣ ತಲುಪಲು 20 ಕಿ.ಮೀ ಕ್ರಮಿಸಬೇಕು. ಬಲಿಗೆ ಜೈನ ಬಸದಿಯ ಸಮಿಪದಲ್ಲಿ ಈ ಕ್ಯಾತನಮಕ್ಕಿ ಸುಂದರ ಪ್ರಕೃತಿಯ ತಾಣ ಸಿಗುತ್ತದೆ.
ಅಲ್ಲಲ್ಲಿ ಹೋಂ ಸ್ಟೇ ಗಳು ಸಹ ಇವೆ. ಬೇಕೆಂದರೆ ಒಂದೆರಡು ದಿನ ಉಳಿದು ಕ್ಯಾತನಮಕ್ಕಿ ಜೊತೆಯಲ್ಲಿ ಇತರ ಸ್ಥಳಗಳಲ್ಲಿ ಟ್ರಕ್ಕಿಂಗ್ ಕೂಡಾ ಮಾಡಬಹುದು...
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ದೀವಣಿಗೆ ಹಬ್ಬ
ನಮ್ಮ ಹುಟ್ಟೂರು ಕೊಟಗೇಣಿಯಲ್ಲಿ ದೀಪಾವಳಿ ಆಚರಣೆಯ ಸಂಪ್ರದಾಯವಿರಲಿಲ್ಲ ು.ದಸರಾ ರಜೆಗೆಂದು ಮಾವನವರ ಊರಾದ ಯರಬಳ್ಳಿಗೆ ಹೋದರೆ ಕೆಲವೊಮ್ಮೆ ಶಾಲೆ ಶುರುವಾದರೂ ಅಮ್ಮ ಕರೆದರೂ ಬರುತ್ತಿರಲಿಲ್ಲ.ಕಾರಣ ದೀವಣಿಗೆ ಹಬ್ಬ! ದೀವಣಿಗೆ ಹಬ್ಬ ಮುಗಿಸಿಕೊಂಡೇ ಬರುವೆ ಎಂದು ಅಮ್ಮನಿಗೆ ಹೇಳುತ್ತಿದ್ದೆ. ದೀಪಾವಳಿ ಹಬ್ಬವನ್ನು ಯರಬಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ "ದೀವಣಿಗೆ " ಹಬ್ಬ ಎಂದೇ ಕರೆಯುತ್ತಿದ್ದರು. ಆಗ ನಮ್ಮ ಮಾವನವರ ಮನೆಯಲ್ಲಿ ಬಹಳ ಚೆನ್ನಾಗಿ ಸಾಕಿದ ಎರಡು ಬಿಳಿ ಎತ್ತುಗಳಿದ್ದವು .ನೋಡಲು ಚೆನ್ನಾಗಿದ್ದರೂ ಗುದ್ದುವುದರಲ್ಲಿ ಬಹಳ ಚಾಲಾಕಿಗಳಾಗಿದ್ದವು .ನಮ್ಮ ಚಿಕ್ಕಮಾಮ ಮಾತ್ರ ಅವುಗಳ ಕಟ್ಟುವುದು, ಮೇಯಿಸುವುದು , ಮೈತೊಳೆಯುವುದು ಮುಂತಾದ ಕೆಲಸ ಮಾಡುತ್ತಿದ್ದರು. ನಾನು ಅವರ ಜೊತೆಯಲ್ಲಿ ಭಯದಿಂದಲೇ ಎತ್ತುಗಳ ಬಳಿ ಸಾಗುತ್ತಿದ್ದೆ.
ದೀಪಾವಳಿ ಹಬ್ಬ ಹತ್ತಿರ ಬಂದಂತೆ ಎತ್ತುಗಳನ್ನು ಚೆನ್ನಾಗಿ ಮೇಯಿಸಲು ಹೊಲಗಳ ಬದುಗಳಲ್ಲಿ ಮತ್ತು ಹುಲ್ಲುಗಾವಲಿನ ಕಡೆ ಹೋಗುತ್ತಿದ್ದೆವು . ಬದುಗಳಲ್ಲಿ ಎತ್ತು ಮೇಯುವಾಗ ನಾವೂ ಆಗ ತಾನೆ ಎಳೆಕಾಯಿಯಾಗಿರುವ ಕಡ್ಲೇ ಕಾಯಿ, ಸಜ್ಜೆ ತೆನೆ, ಅವರೇ ಕಾಯಿ, ಅಲಸಂದೇ ಕಾಯಿ, ಹೆಸರು ಕಾಯಿ , ಮುಂತಾದವುದಳನ್ನು ಮೇಯುತ್ತಿದ್ದೆವು.
ದೀಪಾವಳಿ ಹಬ್ಬದ ದಿನ ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಎತ್ತು ಮೇಯಿಸಲು ಹೊಲಕ್ಕೆ ಹೋಗಿ ಮಧ್ಯಾಹ್ನದ ವೇಳೆಗೆ ದೊಡ್ಡಸೇತುವೆ ಹಳ್ಳದಲ್ಲಿ ಎತ್ತುಗಳ ಮೈತೊಳೆದುಕೊಂಡು ಮನೆಗೆ ಬರುತ್ತಿದ್ದೆವು .ನಮ್ಮ ಊಟದ ನಂತರ ಎತ್ತಿನ ಕೊಂಬು ಎರೆಯುವವರು ಬರುತ್ತಿಧ್ದರು . ಎತ್ತಿನ ಕೊಂಬುಗಳನ್ನು ಸೂಕ್ಷ್ಮವಾಗಿ ಎರೆದು ನೈಸ್ ಆಗಿ ಮಾಡಿ ನಾವು ಕೊಟ್ಟಷ್ಟು ಹಣ ಪಡೆದು ಅವರು ತೆರಳಿದ ಬಳಿಕ ಎತ್ತುಗಳಿಗೆ ಅಲಂಕಾರ ಮಾಡುವ ಕೆಲಸ ಶುರು.ಮೊದಲಿಗೆ ಎತ್ತಿನ ಕೊಂಬುಗಳಿಗೆ ಬಣ್ಣ ಬಳಿಯುವುದು. ನಂತರ. ಕೊಂಬಿನ ತುದಿಗೆ ಕಳಸದಂತಹ ಕೊಡಣಸು ಹಾಕುತ್ತಿದ್ದೆವು. ಕೆಲವೊಮ್ಮೆ ಗಗ್ಗರ ಸಹ ಹಾಕಿ . ಕಾಲಿಗೆ ಗೆಜ್ಜೆ ಕಟ್ಟುತ್ತಿದ್ದೆವು.ಎರಡು ಕೊಂಬುಗಳ ತುದಿಗೆ ಒಂದು ಕಡ್ಡಿ ಕಟ್ಟಿ ಎತ್ತಿನ ಮುಖಗಳಿಗೆ ಮುಖವಾಡ ಕಟ್ಟಿ ಅದಕ್ಕೆ ಚೆಂಡು ಹೂ ,ಕನಕಾಂಬರ ಹೂ, ಸೇವಂತಿಗೆ ಹೂಗಳ ಹಾರವನ್ನು ,ಬಲೂನ್ ಗಳನ್ನು, ಪೇಪರ್ ನಿಂದ ಮಾಡಿದ ಡಿಸೈನ್ ಗಳನ್ನು ಕಟ್ಟುತ್ತಿದ್ದೆವು . ಇದರ ಜೊತೆಗೆ ಎತ್ತುಗಳ ಮೈಮೇಲೆಲ್ಲ ಅದರ ಚರ್ಮ ಕಾಣದಂತೆ ಹೂಗಳನ್ನು ಹೊದಿಸುತ್ತಿದ್ದೆವು. ಅದು ಎಂಭತ್ತರ ದಶಕ ಆಗಿನ ಕಾಲಕ್ಕೆ ನೂರಾರು ರೂಪಾಯಿಗಳನ್ನು ಎತ್ತುಗಳ ಅಲಂಕಾರಕ್ಕಾಗಿ ನಮ್ಮ ಮಾವನವರು ಖರ್ಚು ಮಾಡುತ್ತಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಕೊಂಬು ಎರೆಯುವ ಪ್ರಕ್ರಿಯೆಯ ಮೂಲಕ ಅರಂಭವಾದ ನಮ್ಮ ಎತ್ತುಗಳ ಅಲಂಕಾರ ಮುಗಿದಾಗ ಸೂರ್ಯ ತನ್ನ ಗೂಡು ಸೇರಿದ್ದ.ಅಲಂಕಾರ ಮುಗಿದ ಮೇಲೆ ನಮ್ಮ ಎತ್ತುಗಳ ಅಂದ ಚೆಂದ ನೋಡಿ ನಮಗೇ ಗುರುತು ಹಿಡಿಯಲಾಗುತ್ತಿರಲಿಲ್ಲ. ಸಂಜೆಗೆ ಮನೆ ದೇವರ ಪೂಜೆ ಮಾಡಿ ಎಡೆ ಇಟ್ಟು ಎತ್ತುಗಳಿಗೂ ಎಡೆ ತಿನ್ನಿಸಿದರೆ ಅರ್ಧ ದೀಪಾವಳಿ ಹಬ್ಬ ಮುಗಿದಂತೆ. ಕ್ರಮೇಣ ನನ್ನ ಬೇಡಿಕೆಯ ಕಡೆ ಗಮನ ಹರಿಸಿದ ನನ್ನ ಮಾವನವರು ವಿರೂಪಾಕ್ಷಪ್ಪರ ಅಂಗಡಿಗೆ ಕರೆದುಕೊಂಡು ಹೋಗಿ ನನಗೂ ನನ್ನ ಅಣ್ಣನಿಗೂ ಕಲ್ಲಲ್ಲಿ ಕುಟ್ಟುವ ಪಟಾಕಿ, ತಂತಿ ಮತಾಪು, ಭೂಚಕ್ರ ಮುಂತಾದ ಶಬ್ದ ಬರದ ಪಟಾಕಿ ಕೊಡಿಸುತ್ತಿದ್ದರು.ಆ ಪಟಾಕಿ ಹೊಡೆವಾಗ ನಮಗೆ ಸ್ವರ್ಗ ಮೂರೇ ಗೇಣು.
ಅಲಂಕೃತವಾದ ಎತ್ತುಗಳನ್ನು ಉರುಮೆ ಬಾರಿಸಿಕೊಂಡು ಮೆರವಣಿಗೆ ಮಾಡಿಕೊಂಡು ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಬಯಲಿನಲ್ಲಿ ಒಣಗಿದ ಸೀಮೇಜಾಲಿ ಮತ್ತು ಇತರ ಕಟ್ಟಿಗೆಯನ್ನು ಒಂದೆಡೆ ದೊಡ್ಡದಾದ ಗುಡ್ಡೆ ಹಾಕಿರುವ" ಈಡು" ಎಂಬ ಕಡೆ ಎತ್ತುಗಳನ್ನು ಓಡಿಸಿಕೊಂಡು ಹೋಗುತ್ತಿದ್ದರು. ಊರಿನ ಎಲ್ಲಾ ಅಲಂಕೃತವಾದ ಎತ್ತುಗಳ ನೋಡುವುದೇ ಒಂದು ಸಂಭ್ರಮ ಕತ್ತಲಲ್ಲೂ ಎತ್ತುಗಳ ಸೌಂದರ್ಯ ಕಂಗೊಳಿಸುತ್ತಿತ್ತು. ಎಲ್ಲಾ ಎತ್ತುಗಳು ಈಡಿನ ಬಳಿ ಬಂದಾಗ ಈಡಿಗೆ ಬೆಂಕಿ ಹಚ್ಚುತ್ತಿದ್ದರು. ಎತ್ತು ಹಿಡಿದವರು ಜೋರಾಗಿ ಕೇಕೇ ಹಾಕುತ್ತಾ ,ಶಿಳ್ಳೆ ಹೊಡೆಯುತ್ತಾ ತಮ್ಮ ಎತ್ತುಗಳು ಜೊತೆ ಈಡು ಸುತ್ತಿ ಊರ ಕಡೆ ಎತ್ತುಗಳ ಜೊತೆಯಲ್ಲಿ ಓಡಿಬರುವ ದೃಶ್ಯಗಳನ್ನು ನೋಡುವುದೇ ಚೆಂದ.ಅಂತಹ ಸಂಧರ್ಭದಲ್ಲಿ ಕೆಲ ಎತ್ತುಗಳಿಗೆ ಮತ್ತು ಜನರಿಗೆ ಬೆಂಕಿಯಿಂದ ಸಣ್ಣ ಪುಟ್ಟ ಗಾಯಗಳಾದ ಉದಾಹರಣೆಗಳೂ ಉಂಟು. ಊರ ಬಳಿ ಬಂದ ಎತ್ತುಗಳನ್ನು ಹಿಡಿದ ರೈತರು ಮೊದಲಿಗೆ ಮಾರಮ್ಮನ ಗುಡಿ ಸುತ್ತಿಸಿ ಆಶೀರ್ವಾದ ಪಡೆದು ತೀರ್ಥ ಬಂಡಾರ ಹಾಕಿಸಿಕೊಂಡು ರಂಗಪ್ಪನವರ ಗುಡಿ ಸುತ್ತಿಸಿ ಮನೆಗೆ ತೆರಳಿ ಎತ್ತುಗಳಿಗೆ ಮೇವು ಹಾಕಿ ನಾವು ಕರಿಗಡುಬು ಊಟ ಮಾಡುತ್ತಿದ್ದೆವು . ಊಟದ ಬಳಿಕ ನಾನು ಮತ್ತು ಅಣ್ಣ ಈ ಮೊದಲೇ ತಂದ ಕಲ್ಲಲ್ಲಿ ಕುಟ್ಟುವ ಪಟಾಕಿಯ ಪುಟ್ಟ ಪೇಪರ್ ಡಬ್ಬಿ ಬಿಚ್ಚಿ ಚಟ್ ಎಂದು ಒಂದೊಂದೇ ಪಟಾಕಿ ಕುಟ್ಟಿ ಸಂತಸ ಪಡುವುದನ್ನು ನಮ್ಮಜ್ಜಿ ನೋಡಿ ಖುಷಿ ಪಡುತ್ತಾ ಹುಷಾರು ಕಣ್ರೋ ಎಂದು ಹೇಳುವುದು ಈಗಲೂ ಕಿವಿಯಲ್ಲಿ ಕೇಳಿಸಿದಂತಾಗುತ್ತದೆ. ಈಗ ಹಳ್ಳಿಗಳಲ್ಲೂ ಎತ್ತುಗಳು ಕಡಿಮೆಯಾಗಿ ಟ್ರಾಕ್ಟರ್ ಟಿಲ್ಲರ್ ಬಂದಿವೆ ಎತ್ತುಗಳ ಪೂಜೆಯೆಲ್ಲಿ ಬಂತು?
ನಿನ್ನೆ ನನ್ನ ಚಿಕ್ಕ ಮಗಳು ಅಪ್ಪಾ ನನಗೂ ದೀಪಾವಳಿ ಹಬ್ಬಕ್ಕೆ ಪಟಾಕಿ ಕೊಡಿಸು ಎಂದಾಗ ಮನುಷ್ಯ ಪ್ರಾಣಿಗಳ ಸಹಜೀವನದ ನನ್ನ ಬಾಲ್ಯದ ದೀಪಾವಳಿ ಬಹಳ ನೆನಪಾಯಿತು. ಬೈಕ್ ಹತ್ತಿ ಮಗಳಿಗೆ ಪಟಾಕಿ ಕೊಡಿಸಲು ತುಮಕೂರು ನಗರದಲ್ಲಿ ವಾಹನಗಳಿಂದ ಗಿಜಿಗುಡುವ ರಸ್ತೆಯಲ್ಲಿ ಹೊರಟಾಗ ಯಾಕೋ ಟ್ರಾಪಿಕ್ ನಲ್ಲಿ ಬಹಳ ಕಾಲ ರೆಡ್ ಸಿಗ್ನಲ್ ಕಂಡಂತಾಯ್ತು....
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು