17 ಅಕ್ಟೋಬರ್ 2022

ಕನಸಿ‌ನ ಲೋಕದಲೊಂದು ಪಯಣ...

 


ಕನಸಿನ ಲೋಕದಲೊಂದು ಪಯಣ..





ಕಣ್ಣಾಡಿಸಿದರೆ  ಎಲ್ಲಾ ಕಡೆ   ಹಚ್ಚ ಹಸಿರು.ನಮ್ಮ ಉಸಿರು ಹೊರ ಬಂದರೆ ಬಾಯಿ ಮೂಗಿನಿಂದ  ಹೊಗೆ ಬಂದಂತಹ  ಅನುಭವ . ತಂಪಾದ ತಂಗಾಳಿಯು ಬಂದು ನಮ್ಮ ದೇಹ ಸೋಕಿದಾಗ ಆದ ಪರಮಾನಂದ ವರ್ಣಿಸಲಸದಳ ಅದನ್ನು ಅನುಭವಿಸಿಯೇ ತೀರಬೇಕು. ದೂರದಲ್ಲಿರುವ ಬೆಟ್ಟಗಳ ಸಾಲು ನಮ್ಮನ್ನೇ ಕೈ ಬೀಸಿ ಕರೆಯುತ್ತಿದ್ದವು. ಇನ್ನೂ ಸ್ವಲ್ಪ ದೂರದಲ್ಲಿ ಇರುವ  ಕಾನನವು ."ನೀನೇನು ಮಹಾ ?ನಾನೇ ಸುಂದರ. ಕಣ್ತುಂಬಿಸಿಕೊಳ್ಳಲು  ಸಾಲದು ನಿನ್ನ ನಯನ .' ಎಂದು ಕೂಗಿ ಹೇಳಿದಂತಿತ್ತು.  ಸಾಲು ಸಾಲಾದ ಗುರಿಶಿಖರಗಳು ನಾವೇನು ಕಮ್ಮಿ ನಮ್ಮನ್ನು ಸ್ವಲ್ಪ ನೋಡಿ ಎಂದು ಪಿಸುಗುಡುತ್ತಿದ್ದವು.  ಆ ಗಿರಿಶಿಖರಗಳಿಗೆ ಯಾರೋ ಹತ್ತಿಯನ್ನು ಪೋಣಿಸಿದ್ದರು. ಅದರ ಜೊತೆಗೆ ಹಾಗೊಮ್ಮೆ ಈಗೊಮ್ಮೆ ಮಂಜಿನ ತೆರೆಗಳು ಬಂದು ನಮಗೂ ಬೆಟ್ಟಗಳಿಗೂ ಮುತ್ತಿಟ್ಟು ನಿಧಾನವಾಗಿ ಮಾಯವಾಗುತ್ತಿದ್ದವು.ಕ್ಷಣಕಾಲ ಮುಂದಿನ ಎಲ್ಲಾ ದೃಶ್ಯಗಳು ಅದೃಶ್ಯ ನಮ್ಮ ಮುಂದೆ ಬರೀ ಬಿಳಿ ಪರದೆ . ಈಗ ಕಂಡ ಅದ್ಬುತ ದೃಶ್ಯಗಳು ಮಾಯವೇ? ಮಂತ್ರವೇ ?ಎಂಬ ಅನುಮಾನ ವ್ಯಕ್ತಪಡಿಸುತ್ತಾ ಇರುವಾಗ ನಾನೇ ಮಾಯಕಾರ ಎಂದು ರವಿಯು ಇಣುಕಿದ .ಬಿಳಿ ಪರದೆ ಮಾಯವಾಗಿ  ಮತ್ತೆ ಸೌಂದರ್ಯ ಲೋಕದ ಅನಾವರಣ....





ಇಂತಹ ಅದ್ಭುತವಾದ ದೃಶ್ಯಗಳನ್ನು ನೋಡಿದ ನಾವು ಇದು ಕನಸು ಎಂದು ತಿಳಿದೆವು.ಇಲ್ಲ.. ಇದು ಕನಸಲ್ಲ ನಿಜ ನಮ್ಮ ಮುಂದೆ ಕೆಲವರು ತಮ್ಮ ಕ್ಯಾಮೆರಾಗಳಲ್ಲಿ ಪೋಟೋ ತೆಗೆದುಕೊಳ್ಳುತ್ತಿದ್ದರು , ವೀಡಿಯೋ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದರು .ಆಗ ನಾವು ವಾಸ್ತವಕ್ಕೆ ಬಂದೆವು ನಿಜವಾಗಿಯೂ ಇದು ಸ್ವರ್ಗ ಸದೃಶ ಚಿತ್ರ! ದೇವರಿಂದ ಈ ತಾಣ ನಿರ್ಮಿಸಲು ಸಾದ್ಯ. ಅದಕ್ಕೆ ಆ ಸ್ಥಳಕ್ಕೆ " ದೇವರ ಮನೆ ಕಾಡು" ಎಂಬ ಅನ್ವರ್ಥನಾಮ ಸಾರ್ಥಕ ಎನಿಸಿತು. 

ಇಂತಹ ಸ್ವರ್ಗ ಸದೃಶವಾದ ತಾಣವನ್ನು ಮೊದಲೇ ಕಣ್ತುಂಬಿಕೊಂಡು ನಮಗೂ ತೋರಿಸಲು ನಮ್ಮ ಸಹೋದ್ಯೋಗಿಗಳು ಹಾಗೂ ಕಲಾವಿದರಾದ ಕೋಟೆ ಕುಮಾರ್ ರವರು ನಮ್ಮನ್ನು ಅವರ ಕಾರಿನಲ್ಲಿ ಕರೆದುಕೊಂಡು ಬಂದರು .ನಮ್ಮೊಂದಿಗೆ ಸಹೋದ್ಯೋಗಿಗಳು ಮತ್ತು ಆತ್ಮೀಯರಾದ  ಚಂದ್ರಶೇಖರಯ್ಯ, ರಂಗಸ್ವಾಮಯ್ಯ ಮತ್ತು ಎಂ ಎಚ್ ಹನುಮಂತರಾಯ ರವರು ಜೊತೆಯಾಗಿ ಈ ಸುಂದರ ತಾಣದ ಸೌಂದರ್ಯ ಸವಿದೆವು. 



ತುಮಕೂರಿನಿಂದ ಹೊರಟ ನಮ್ಮ ತಂಡವು ಕುಣಿಗಲ್ ನ ಪರಿಮಳ ಹೋಟೆಲ್ ನಲ್ಲಿ ಇಡ್ಲಿ ವಡೆ ಮತ್ತು ಟೀ ಯ ಪರಿಮಳ ಸವಿದೆವು.ಅದು ನನ್ನ ಮೊದಲ ಪರಿಮಳ ಸ್ವಾದ .ಉತ್ತಮ ರುಚಿ ಶುಚಿ ನೋಡಿದ ಮೇಲೆ ಮತ್ತೊಮ್ಮೆ ಆ ಹೋಟೆಲ್ ಗೆ ಹೋಗುವ ಮನಸು ಮಾಡಿ...ನಮ್ಮ ಕಾರ್ ಹತ್ತಿ ಪಯಣ ಮುಂದುವರೆಸಿ, ಹಾಸನದ ಮೂಲಕ ಬೇಲೂರು ದಾಟಿ , ಮೂಡಿಗೆರೆಯಲ್ಲೊಂದು ಸ್ಟ್ರಾಂಗ್ ಟೀ ಕುಡಿದು ,ನಮ್ಮ ಕಲಾವಿದರು ದೇವರ ಮನೆ ಕಡೆ ಸ್ಟೇರಿಂಗ್ ತಿರುಗಿಸಿದರು...




ದೇವರ ಮನೆಯ ಸೌಂದರ್ಯವನ್ನು ನಾವು ಸವಿದಾದ ಬಳಿಕ ನಮ್ಮ ಮಧುರ ನೆನಪಿಗೆ ಮತ್ತು ನಮ್ಮವರಿಗೆ ತೋರಿಸಲು ವೀಡಿಯೋ ಮತ್ತು ಚಿತ್ರಗಳ ಸೆರೆಹಿಡಿಯಲು ನಮ್ಮ ಮೊಬೈಲ್ ಮತ್ತು ಸೆಲ್ಪಿ ಸ್ಟಿಕ್ ಗಳನ್ನು ಹೊರತೆಗೆದೆವು . ಮನಬಂದಂತೆ ಪೋಟೋ ತೆಗೆದುಕೊಂಡೆವು .ನಾವು ಸ್ವಲ್ಪ ಹೆಚ್ಚಾಗಿಯೇ   ಪೋಟೋ ತೆಗೆದುಕೊಂಡೆವು ಇದನ್ನು ಗಮನಿಸಿದ ಆಂದ್ರ ಪ್ರದೇಶ ರಾಜ್ಯದ ಪ್ತವಾಸಿಗರೊಬ್ಬರು " "ವೀಳ್ಳಿಕೆ ಪೋಟೋ ಪಿಚ್ಚಿ ಎಕ್ಕುವಾ" ಎಂದದ್ದು ನನಗೆ ಕೇಳಿತು. ಹೌದು ಅಣ್ಣ ಪೋಟೋಗಳಿರಬೇಕಲ್ಲ ನೆನಪಿಗೆ ಎಂದಾಗ ನನಗೆ ತೆಲುಗು ಅರ್ಥ ವಾಗಿದ್ದು ಅವರಿಗೆ ತಿಳಿದು ನಗುತ್ತಾ... ಎಂಜಾಯ್ ಸರ್ ಎಂದು ಹೊರಟರು.. ನಾವು ಬೆಟ್ಟದಿಂದ ಕೆಳಗಿಳಿದು ಬಂದು ಶ್ರೀ ಕಾಲಬೈರವೇಶ್ವರ ದೇವರ ಆಶೀರ್ವಾದ ಪಡೆದೆವು...





 ಶ್ರೀ ಕಾಲಭೈರವೇಶ್ವರ  ದೇವಸ್ಥಾನವನ್ನು ಚೋಳರ ಕಾಲದಲ್ಲಿ ವೆಂಕಣ್ಣನೆಂಬ ಶಿಲ್ಪಿಯು ನಿರ್ಮಿಸಿದನೆಂಬ ಪ್ರತೀತಿ ಇದೆ.ನೋಡಲು ಸುಂದರವಾಗಿರುವ ಈ ದೇವಸ್ಥಾನವು ಗುಡ್ಡ ಗಾಡಿನ ತಪ್ಪಲಿನಲ್ಲಿ ನಿರ್ಮಿಸಲಾಗಿದೆ. ಇತ್ತೀಚೆಗೆ ರಾಜ್ಯದ ವಿವಿದೆಡೆಗಳಿಂದ  ಪ್ರವಾಸಿಗರು  ಈ ಸ್ಥಳ ನೋಡಲು ಬರುತ್ತಿದ್ದಾರೆ.

ನೀವು  ಈ ಸುಂದರ ತಾಣ ನೋಡಲು ಒಮ್ಮೆ ಬನ್ನಿ

ಮೂಡಿಗೆರೆಯಿಂದ ೨೦ ಕಿ.ಮಿ ಒಳಗೆ ಅಂದರೆ ಸಬ್ಬೇನಹಳ್ಳಿ ಗುತ್ತಿ ಹೀಗೆ ಪ್ರಯಾಣಿಸಿದರೆ ಸಿಗುವುದೇ ದೇವರಮನೆ. ಧರ್ಮಸ್ಥಳ ಕಡೆಯಿಂದ ಬರುವುದಾದರೆ ಕೊಟ್ಟಿಗೆಹಾರ ದ ಬಳಿ ಬಲಕ್ಕೆ ಚಲಿಸಿದರೆ ದೇವರಮನೆಗೆ ತಲುಪಬಹುದು. 



ರಸ್ತೆ ಅಷ್ಟೇನೂ ಸರಿಯಿಲ್ಲದಿದ್ದರೂ ಅಡ್ಡಿಯಿಲ್ಲ. ಪ್ರವಾಸೋದ್ಯಮ ಇಲಾಖೆಯವರು ಇನ್ನೂ ಹೆಚ್ಚಿನ ಸೌಕರ್ಯಗಳನ್ನು ನೀಡಿದರೆ ಇದೊಂದು  ಹೆಸರಾಂತ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




16 ಅಕ್ಟೋಬರ್ 2022

ಮಕ್ಕಳ ಆಹಾರ ಪದ್ದತಿ.

 

ವಿದ್ಯಾರ್ಥಿಗಳಿಗಾಗಿ ಉತ್ತಮ ಆಹಾರಾಭ್ಯಾಸಕ್ಕೆ ಕೆಲ ಸಲಹೆಗಳು. 



ಅಮೇರಿಕಾದ ಒಂದು ವಿಶ್ವ ವಿದ್ಯಾಲಯದ ಸಂಶೋಧನೆಯ ಪ್ರಕಾರ ಜಗತ್ತಿನಲ್ಲಿ ಬಹಳ ಜನ ಸ್ಥೂಲಕಾಯತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದರಲ್ಲೂ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.  

ವಿಪರೀತವಾಗಿ ಹೆಚ್ಚಾದ ದೇಹದ ಕೊಬ್ಬಿನಂಶವು ಮಕ್ಕಳ ಆರೋಗ್ಯ ಅಥವಾ ಆರೋಗ್ಯಕರ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸ್ಥಿತಿಯನ್ನು ಬಾಲ್ಯದ ಸ್ಥೂಲಕಾಯತೆ ಎಂದು ಕರೆಯುತ್ತಾರೆ. ಮಕ್ಕಳಲ್ಲಿರುವ ಈ ಸಮಸ್ಯೆಗೆ ಸ್ಥೂಲ ಕಾಯತೆ ಅನ್ನುವುದಕ್ಕಿಂತ ಹೆಚ್ಚಾಗಿ ’ಹೆಚ್ಚಿನ ತೂಕ’ ಎನ್ನುವುದನ್ನು ಬಳಸುತ್ತಿದ್ದಾರೆ. ಮಕ್ಕಳ ವ್ಯಕ್ತಿತ್ವದ ಮೇಲೆ ಸ್ಥೂಲ ಕಾಯತೆ ಅನ್ನುವ ಶಬ್ಧ ಪ್ರಭಾವ ಬೀರುವುದನ್ನು ತಪ್ಪಿಸಲು ಇದನ್ನು ಬಳಸಲಾಗುತ್ತದೆ. 


ಮಕ್ಕಳ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆಹಾರ ದಿನದ ಪ್ರಯುಕ್ತ (ಅಕ್ಟೋಬರ್ ೧೬) ಮಕ್ಕಳಿಗೆ ಈ ಕೆಳಕಂಡ ಸಲಹೆಗಳನ್ನು ನೀಡಲು ಬಯಸುವೆ.

ಆತ್ಮೀಯ ಮಕ್ಕಳೆ...

ನಿಮ್ಮ ದೇಹ ಎಂಬ ವಾಹನದ ಚಲನವಲನಗಳು ಆಹಾರ ಎಂಬ ಇಂಧನವನ್ನು ಆಧರಿಸಿದೆ. ಆಹಾರದ ರುಚಿಗಿಂತ ಅದು ಆರೋಗ್ಯಕ್ಕೆ ಪೂರಕವೇ ಅಲ್ಲವೇ ಎಂಬುದು ಮುಖ್ಯ. ನಾಲಿಗೆಯ ಚಾಪಲ್ಯದ  ನಿಯಂತ್ರಣದೆಡೆಗೆ ಎಳೆವಯಸ್ಸಿನಿಂದಲೇ ಗಮನ ಹರಿಸಿದರೆ ಮಾತ್ರ ಭವಿಷ್ಯತ್ತಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲಾದೀತು.


  ಒಂದು ವೇಳೆ ನಿಮ್ಮ ಮನೆಯಲ್ಲಿ ಎಣ್ಣೆಯನ್ನು ಹೆಚ್ಚೆಚ್ಚಾಗಿ ಬಳಸುವ ಪದ್ಧತಿ ಇದ್ದರೆ ಕಡಿಮೆ ಸೇವಿಸುವುದು ಒಳಿತು ಮಧ್ಯಾಹ್ನ ಅನ್ನ ಕಡಿಮೆ ಇರಲಿ, ರಾಗಿಮುದ್ದೆ, ಚಪಾತಿ ಮತ್ತು ತರಕಾರಿಗಳು ಹೆಚ್ಚಾಗಿರಲಿ.  ಮೊಸರಿನ  ಬದಲು ಮಜ್ಜಿಗೆಯೇ ಒಳ್ಳೆಯದು, ಹಪ್ಪಳ, ಸಂಡಿಗೆಗಳ ಬದಲಿಗೆ ಈರುಳ್ಳಿಯನ್ನು ದುಂಡಾಗಿ ಬಿಲ್ಲೆಗಳಂತೆ ಕತ್ತರಿಸಿಕೊಂಡು ಸೇವಿಸಿರಿ.  ಕಣ್ಣುಗಳ ಆರೋಗ್ಯ, ಕಾಂತಿವರ್ಧನೆಗೆ ಕ್ಯಾರೆಟ್ ಮತ್ತು ಹಸಿರು ತರಕಾರಿಗಳನ್ನು ಹೆಚ್ಚೆಚ್ಚು ತಿನ್ನಿರಿ.ರಾತ್ರಿ ಊಟ ಸರಳವಾಗಿ ಮಿತವಾಗಿರಲಿ.

ಬಾಲ್ಯದಲ್ಲಿ ನಿಮಗೆ ತುಂಬಾ ಇಷ್ಟವಾಗಿದ್ದ ಚಾಕೊಲೇಟ್, ಐಸ್ಕ್ರೀಂಗಳ ಆಕರ್ಷಣೆ ಹದಿಹರೆಯದಲ್ಲೂ ನಿಮ್ಮನ್ನು ಬಿಡುತ್ತಿಲ್ಲ ಅಲ್ಲವೇ? ದೇಹದ ತೂಕ ಹೆಚ್ಚಿಸುವುದು ಪರ್ಸಿನ ತೂಕ ಕಡಿಮೆ ಮಾಡುವುದು ಇವೆರಡೇ ಈ ತಿಂಡಿಗಳಿಂದ ಆಗುವ ಸಾಧನೆಗಳು. ಬೇಕರಿ ತಿಂಡಿಗಳಾದರೂ ಅಷ್ಟೇ.

 ನೀರು ಕಾಯಿಸಿ ಕುಡಿಯುವುದು ಉತ್ತಮ. ಸ್ವಲ್ಪ ದೂರ ಹೋಗಿ ಒಳ್ಳೆಯ ನೀರು ತರಬೇಕಾದಲ್ಲಿ ಆ ಶ್ರಮಕ್ಕೆ ಹಿಂಜರಿಯಬೇಡಿ. 

ಜಂಕ್ ಪುಡ್ ತಿನ್ನುವುದನ್ನು 

ಮಕ್ಕಳಿಂದ ಹಿಡಿದು ಮುದಕರ

ವರೆಗೂ ಇಷ್ಟ ಪಡುವುದು ಅತಿ 

ರುಚಿ ಅನಿಸುವುದರಿಂದ ಮತ್ತು 

ವಿವಿಧ ಅಂಗಡಿಗಳಲ್ಲಿ ಸುಲಭ

ವಾಗಿ ದೂರೆಯುವುದರಿಂದ

ಮತ್ತು ಪ್ರಿಯಕರವಾಗಿರುವುದ-

ರಿಂದ ಇವುಗಳನ್ನು ಉಪಯೋಗಿಸುತ್ತಾರೆ.

ಇವುಗಳು  ಆರೋಗ್ಯದ

ಮೇಲೆ ತೀವ್ರ ದುಷ್ಪರಿಣಾಮ 

ಬೀರುವದಲ್ಲದೆ ಕಾಲಾಂತರದಲ್ಲಿ 

ಚಟವಾಗುತ್ತದೆ.ಇದನ್ನೇ ಮುಂದುವರಿಸಿದರೆ ಸರಿಪಡಿಸ-

ಲಾಗದ ಸನ್ನಿವೇಶಕ್ಕೆ ಬರುವುದು 

ಖಂಡಿತ. 

ಹೆಚ್ಚಿನ ಎಣ್ಣೆಯನ್ನು ರುಚಿಗಾಗಿ 

ಉಪಯೋಗಿಸುವುದರಿಂದ

ಇದು ಜಂಕ್ ಪುಡ್ ಆಗಿ,ಅತಿ 

ಹೆಚ್ಚು ಉಪ್ಪು, ಸಕ್ಕರೆ ಮತ್ತು 

ಕೊಬ್ಬು ಹೆಚ್ಚಾಗಿ ಬೊಜ್ಜಿಗೆ 

ಅವಕಾಶ ನೀಡುತ್ತದೆ.  ಮುಂದೆ 

ಇವು ಕಾಲು ನೋವು, ಕೀಲು

ನೋವು ಮತ್ತು ಇತರ  ಅಂಗಾಂಗಳು ನೋವಾಗಲು 

ಆರಂಭಗೊಳ್ಳುತ್ತದೆ.ಕ್ರಮೇಣ 

ಸಕ್ಕರೆ ಖಾಯಿಲೆ, ರಕ್ತದೊತ್ತಡ, 

ಆಲಸ್ಯ ಮುಂತಾದ ರೋಗಗಳಿಗೆ  ನಾವಾಗಿಯೇ 

ಆಹ್ವಾನಿಸಿದಂತಾಗುತ್ತದೆ.ಖಿನ್ನ

ತೆಗೆ ಒಳಗಾಗುವ ಪರಿಸ್ಥಿತಿಗೆ 

ತಲಪುತ್ತೇವೆ.

 ಜಂಕ್ ಪುಡ್ ಸೇವನೆ ಚಟವಾದರೆ ಇದರಿಂದ ಮುಕ್ತಿ ಪಡೆಯವುದು ಮುಂದಿನ ದಿನಗಳಲ್ಲಿ 

ಬಹು ಕಷ್ಟ. ಆದ್ದರಿಂದ ಬಾಲ್ಯದಲ್ಲಿ

ಆದಷ್ಟೂ ಜಂಕ್ ಪುಡ್ ಗಳಿಂದ ದೂರವಿರಿ .ಅತಿಯಾದ ಚಾಕೊಲೆಟ್ ಮತ್ತು ಅತಿಯಾದ ಸಿಹಿ ಸೇವನೆಯು ನಿಮ್ಮ ಹಲ್ಲುಗಳ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಯಾವುದೇ ಆಗಲಿ ಮಿತಿಯಲ್ಲಿ ಇರಲಿ. 


 ಆಲೂ , ಬೀಟ್ರೂಟ್ನಂಥ ತರಕಾರಿಗಳು, ಮಾವು, ಬಾಳೆ, ಸಪೋಟಾ, ದ್ರಾಕ್ಷಿ, ಖರ್ಜೂರ, ಒಣದ್ರಾಕ್ಷಿ, ಗೋಡಂಬಿಗಳಿಂದ ವಿಮುಖರಾಗಬೇಡಿ. ಸೊಪ್ಪುಗಳು ಬದನೆ, ಹಾಗಲಗಳೂ ಸ್ವಾದಿಷ್ಟವೇ. ಮಾಂಸಾಹಾರಿಯಾಗಿದ್ದಲ್ಲಿ ಮೀನು ತಿನ್ನಿ, ಮೊಟ್ಟೆಗಳನ್ನು ಸೇವಿಸಿ. ಒಟ್ಟಾರೆ ನೀವು ತಿನ್ನುವ ಆಹಾರ ಪೌಷ್ಟಿಕಾಹಾರ ಆಗಿರಲಿ ಮತ್ತು ಸಮತೋಲನದ ಆಹಾರವಾಗಿರಲಿ.  ಅಸಮತೋಲನ ಮತ್ತು ಅವೈಜ್ಞಾನಿಕ ಪದ್ದತಿಯಂತೆ  ಆಹಾರ ಸೇವಿಸಿದರೆ ಔಷಧವೇ ಆಹಾರವಾಗುತ್ತದೆ.ಅದರ ಬದಲಿಗೆ   ಆಹಾರವೇ ಔಷಧವಾಗಲಿ . ಆರೋಗ್ಯಕರ ಕಾಯ ನಮ್ಮದಾಗಲಿ ಸ್ವಸ್ಥ ಸಮಾಜ ಸುಂದರ ಸಮಾಜ ಎಂಬುದು ನಮ್ಮ ಧ್ಯೇಯವಾಗಲಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


15 ಅಕ್ಟೋಬರ್ 2022

ಜನ ,ಮನ

 


ಜನ, ಮನ 


ಒಪ್ಪದಿದ್ದರೂ ಪರವಾಗಿಲ್ಲ

ಜಗದ ಜನ |

ಒಪ್ಪಬೇಕು ಬದುಕುವುದ

ನಮ್ಮ ಮನ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

12 ಅಕ್ಟೋಬರ್ 2022

ಎರಡು ಹಾಯ್ಕುಗಳು...

 


ಸಿಹಿಜೀವಿಯ ಹಾಯ್ಕುಗಳು.



ಶತ್ರುತ್ವವೇಕೆ?

ಮಿತ್ರತ್ವ ಮರಿಬೇಡ

ನಾವೆಲ್ಲಾ ಒಂದೆ .




 ಭಯವೇತಕೆ ? 

ಶತ್ರುಗಳಲ್ಲೂ  ಉಂಟು

 ಒಂದು  ಹೃದಯ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಎರಡು ಹನಿಗಳು .

 




ನರಸಮ್ಮ ಗುಂಡನಿಗೆ

ಹೇಳಿದರು ಇಂಜೆಕ್ಷನ್

ನೀಡಿದ ಮೇಲೆ ಸ್ವಲ್ಪ ಹೊತ್ತು

ಉಜ್ಜಬೇಕು ಸೊಂಟ |

ಇದಕ್ಕೆ ಬೇರೆಯವರ ಇಟ್ಟುಕೊಳ್ಳಿ 

ನಾನು ಅಂತವನಲ್ಲ ಎಂದು

ಸಿಟ್ಟಾಗಿ ಜೋರಾಗಿ ಹೊಂಟ ||



ನಾವು ಯಾವಾಗಲೂ

ಏನಾದರೊಂದು ಪ್ರಯತ್ನ

ಮಾಡುತ್ತಲೇ ಇರೋಣ 

ಅದರಲ್ಲಿ ಯಶಸ್ವಿಯಾದರೆ

ಖುಷಿ ಪಡುತ್ತಾರೆ ನಮ್ಮನೆಯವರು |

ವಿಫಲವಾದಾಗಲೂ ಬೇಸರ ಬೇಡ

ಖುಷಿ ಪಡುತ್ತಾರೆ ಪಕ್ಕದ ಮನೆಯವರು ||



ಸಿಹಿಜೀವಿ