22 ಮೇ 2022

ಆಕೆ ಉಲಿದ ಹಾಡು .


 


ಆಕೆ ಉಲಿದ ಹಾಡು.


ಹಾಡೆಂದರೆ ನನಗೆ ಪಂಚಪ್ರಾಣ ಬಾಲ್ಯದಿಂದಲೂ ಶಿಕ್ಷಕರ ಮತ್ತು ಸ್ನೇಹಿತರ ಒತ್ತಾಯದ ಮೇರೆಗೆ ಆಗಾಗ ಹಾಡುತ್ತಿದ್ದೆ. ನಾನು ಬೇರೆಯವರ ಹಾಡು ಕೇಳಿ ಖುಷಿ ಪಡುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ. ನಾನು ಯರಬಳ್ಳಿಯಲ್ಲಿ ಪಿ ಯು ಸಿ ಓದುವಾಗ ನಮ್ಮ ಸಹಪಾಠಿಯಾಗಿದ್ದ ಹರ್ತಿಕೋಟೆಯ ರೂಪ ಎಂಬ ವಿದ್ಯಾರ್ಥಿನಿ ಶಬರಿ ಮಲೆ ಸ್ವಾಮಿ ಅಯ್ಯಪ್ಪ ಚಿತ್ರದ "ಗಣಪತಿಯೇ..... ಬುದ್ದಿದಾತನೆ.... ಸಲಹು ಗಣೇಶನೇ ....ನೀ ನಮ್ಮ ಗೆಲುವಾಗಿ ಬಾ....." ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು .ಅವರು ಹಾಡಿದ ಹಾಡು ಕ್ಯಾಸೆಟ್ ನಲ್ಲಿ ಹಾಡಿದ ರೀತಿಯೇ ಇತ್ತು. ಈಗಲೂ ಆ ಭಕ್ತಿ ಗೀತೆ ಕೇಳಿದಾಗ ರೂಪ ನೆನಪಾಗುತ್ತಾರೆ. 

ಟಿ ಸಿ ಹೆಚ್ ಓದುವಾಗ ಗಾಯಕಿಯರ ದಂಡೇ ಇತ್ತು. ಭಾರತಿ ಎಂಬ ಪ್ರಶಿಕ್ಷಣಾರ್ಥಿ " ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ " ಎಂಬ ಹಾಡನ್ನು ಭಾವ ತುಂಬಿ ಹಾಡುತ್ತಿದ್ದರು. ಹದಿನೈದು ದಿನಕ್ಕೆ ಒಂದು ಸಮಾರಂಭದಲ್ಲಿ ಇವರ ಹಾಡನ್ನು ಕೇಳಲು ನಾವು ಕಾತುರರಾಗಿದ್ದೆವು. ಅದೇ ಸಮಯದಲ್ಲಿ ಶೈಲಜಾ ಎಂಬ ನಮ್ಮ ಸಹಪಾಠಿ" ಹಸಿರು ಗಾಜಿನ ಬಳೆದಳೆ.... ಸ್ತ್ರೀ ಕುಲದ ಶುಭ ಕರಗಳೆ" ಎಂಬ ಗೀತೆಯನ್ನು ಬಹಳ ಸೊಗಸಾಗಿ ಹಾಡುತ್ತಿದ್ದರು. ನೋಡಲು ಸ್ವಲ್ಪ ಕಪ್ಪಾಗಿದ್ದರೂ ಇವರ ಸ್ವರಕ್ಕೆ ಮಾರುಹೋಗದ ಹುಡಗರಿರಲಿಲ್ಲ. ಆ ಪೈಕಿ ಸ್ವಲ್ಪ ಹೆಚ್ಚಾಗಿ ಮಾರುಹೋದ ನಮ್ಮ ಗೆಳೆಯ ಲೋಕೇಶ್ ಶೈಲಾಜಾಳನ್ನೇ ಮದುವೆಯಾಗಿ ಈಗ ಸುಖ ಸಂಸಾರ ನಡೆಸುತ್ತಿದ್ದಾರೆ. ಇವರಿಬ್ಬರೂ ಈಗಲೂ ಸಂಪರ್ಕದಲ್ಲಿ ಇದ್ದು ಸ್ನೇಹವನ್ನು ಮುಂದುವರೆಸಿದ್ದೇವೆ. ಭಾರತಿ ಮತ್ತು ರೂಪರವರು ಈಗ ಎಲ್ಲಿವರೋ ತಿಳಿದಿಲ್ಲ. ಆದರೂ ಅವರು ಹಾಡಿದ ಹಾಡುಗಳ ಕೇಳಿದಾಗ ಅವರ ನೆನಪಾಗುತ್ತದೆ. ಮತ್ತು ಕಾಲೇಜಿನ ದಿನಗಳು ಮರುಕಳಿಸುತ್ತವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

12 ಮೇ 2022

ಬೆಲ್ಲಂ ಪುಲ್ಲಕ್ಕ .ಪುಸ್ತಕ ವಿಮರ್ಶೆ


 ವಿಮರ್ಶೆ 35.


ಬೆಲ್ಲಂ ಪುಲ್ಲಕ್ಕ 



ತುಮಕೂರು ಮೂಲದ ಲೇಖಕರಾದ

ಮಲ್ಲಿಕಾರ್ಜುನ ಹೊಸಪಾಳ್ಯರ ಬೆಲ್ಲಂಪುಲ್ಲಕ್ಕ  ಶೀರ್ಷಿಕೆಯ ಆಕರ್ಷಕ ಪುಸ್ತಕದ  ಹದಿನೈದು ಅಧ್ಯಾಯಗಳಲ್ಲಿ ಪ್ರತಿ ಅಧ್ಯಾಯವೂ ಓದಿಸಿಕೊಂಡು ಹೋಗುತ್ತವೆ. ಈ ಸಂಕಲನದಲ್ಲಿ ಕೃಷಿಯನ್ನು ನಂಬಿದ ರೈತರ ದಿನನಿತ್ಯದ ಬದುಕಿನ ತವಕ ತಲ್ಲಣ, ನೋವು ನಲಿವು, ಸಂಭ್ರಮ ಸಡಗರ, ಜಗಳ-ಮುನಿಸು ಎಲ್ಲವೂ ಇವೆ. ಓದುಗರಿಗೆ ಅಪರೂಪಕ್ಕೆ ಸಿಗುವ ಹಳ್ಳಿಗಾಡಿನ ಒಳನೋಟಗಳನ್ನು ಅವರು ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ.


ನಗರಗಳಿಗೆ ಹೋಲಿಸಿ ಗ್ರಾಮಗಳಲ್ಲಿ ಅದಿಲ್ಲ ಇದಿಲ್ಲ ಎಂಬ 'ಇಲ್ಲವುಗಳ ಪಟ್ಟಿಯನ್ನೇ ಎಲ್ಲರೂ ಮುಂದಿಡುತ್ತಾರೆ. ಆದರೆ ಒಳಹೊಕ್ಕು ನೋಡಿದರೆ ಅಲ್ಲಿನ ಸೀಮಿತ ಅವಕಾಶಗಳನ್ನು ಹಿಗ್ಗಿಸಬಲ್ಲ ನಾನಾ ಬಗೆಯ ಸಾಧ್ಯತೆಗಳನ್ನು ಶೋಧಿಸುವವರ ಎಷ್ಟೊಂದು ಕಥನಗಳು ಕಾಣುತ್ತವೆ. ಅಲ್ಲಿನ ಬದುಕಿನಲ್ಲಿ ಎಷ್ಟೊಂದು ಬಣ್ಣಗಳು ಕಾಣುತ್ತವೆ. ದುಡಿಮೆಗೆ ಎಷ್ಟೊಂದು ಪರ್ಯಾಯಗಳಿಗೆ ಮನರಂಜನೆಗೆ ಏನೆಲ್ಲ ಅವಕಾಶಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಜನರಾಡುವ ಭಾಷೆಯಲ್ಲಿ ಎಷ್ಟೊಂದು ವೈವಿಧ್ಯ ಕಾಣುತ್ತದೆ.


ಮಲ್ಲಿಕಾರ್ಜುನ ಹೊಸಪಾಳ್ಯರವರ 

ಹುಟ್ಟೂರು, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹೊಸಪಾಳ್ಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಟಿ.ಪಿ.ಕೈಲಾಸಂ ಚಿನ್ನದ ಪದಕ ಪಡೆದ ಇವರು ಮೂರು ದಶಕಗಳಿಂದ ದೇಸಿ ಬೀಜಗಳ ಸಂರಕ್ಷಣೆ, ಜಲಮೂಲ ದಾಖಲಾತಿ, ಸುಸ್ಥಿರ ಕೃಷಿ, ಸಿರಿಧಾನ್ಯ ಉತ್ತೇಜನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ, ವಿವಿಧ ಸಂಸ್ಥೆ ಹಾಗೂ ಸರ್ಕಾರಿ ಯೋಜನೆಗಳಲ್ಲಿ ದಾಖಲಾತಿ ಸಮಾಲೋಚಕ ವೃತ್ತಿ ಹವ್ಯಾಸಿ ಬರಹಗಾರರಾದ ಇವರ ರಚನೆಗಳು  ಕನ್ನಡ ಪ್ರಭ, ವಿಜಯಕರ್ನಾಟಕ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಕೃಷಿ ವಿಚಾರಗಳ ಅಂಕಣ ಬರವಣಿಗೆ, ಪ್ರಬಂಧ ಹಾಗೂ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.


ಕೃಷಿ ಮಾಧ್ಯಮ ಕೇಂದ್ರದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ: ಸಿಡಿಎಲ್ ಸಂಸ್ಥೆಯ 'ಚರಕ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 'ಮುರುಘಾಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಸುಕೃತ ಕೃಷಿ ಬರಹಗಾರ ಪ್ರಶಸ್ತಿ ಪುರಸ್ಕೃತ, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿದೆ.


'ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ' ಪ್ರಬಂಧಗಳ ಸಂಕಲನವೂ ಸೇರಿದಂತೆ, ಕೃಷಿ ಮತ್ತು ನೀರಿಗೆ ಸಂಬಂಧಪಟ್ಟ 'ನೆಟ್ಟಿರಾಗಿ', 'ಕೃಷಿ ಆಚರಣೆ', 'ಪೈರುಪಚ್ಚೆ. 'ಕೊರಲೆ', 'ಚೌಳು ನೆಲದ ಬಂಗಾರ', 'ಸಿರಿಧಾನ್ಯ ಪರಂಪರೆ', 'ನಶಿಸುತ್ತಿರುವ ನೀರಿನ ಜ್ಞಾನ', 'ತಲಪರಿಗೆ' ಇತ್ಯಾದಿ 13 ಪುಸ್ತಕಗಳ ಪ್ರಕಟಣೆ ಆಗಿವೆ.

 

ಗದ್ದಲದ ಸಂಭ್ರಮದ ಗದ್ದೆ ಕಣಗಾಲ ನನ್ನ ಬಾಲ್ಯ ನೆನಪಿಸಿತು. ರಾಜ್ ಕುಮಾರ್ ಮತ್ತು ರಾಗಿ ರೊಟ್ಟಿ ಪ್ರಬಂಧ ನನ್ನ ತಾಯಿಯ ನೆನಪು ಮಾಡಿಸಿತು. ಮಲ್ಲಿಕಾರ್ಜುನ್ ರವರಿಗೆ ರೊಟ್ಟಿ ಇಷ್ಟ ಇರಲಿಲ್ಲ .ಆದರೆ ನನಗೆ ನನ್ನಮ್ಮ ಮಾಡಿದ ರಾಗಿ ರೊಟ್ಟಿ ಈಗಲೂ ಇಷ್ಟ. ಗಂಧಸಾಲೆಯ ಘಮಲಿನಲ್ಲಿ ಬರುವ  ಭತ್ತದ ತಳಿಗಳಂತಹ ತಳಿಗಳ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಆಗಬೇಕು. ಪೊರಕೆಗಳ ಬಗ್ಗೆ ಬರೆದ ಪ್ರಬಂಧವು ನಾನೂ ಒಮ್ಮೆ ಪ್ರಬಂಧ ಬರೆದಿದ್ದನ್ನು ನೆನಪಿಗೆ ತಂದಿತು.

ಪ್ರತಿಯೊಂದು ಪ್ರಬಂಧಕ್ಕೆ ಹೊಂದುವ ರೇಖಾಚಿತ್ರಗಳ ಉಲ್ಲೇಖ ಮಾಡಲೇಬೇಕು .ಜೊತೆಗೆ ಆಕರ್ಷಕ ಶೀರ್ಷಿಕೆಗೆ ತಕ್ಕಂತೆ ಮುಖಪುಟವಿದೆ.

ಒಟ್ಟಾರೆ ಹಳ್ಳಿಗಾಡಿನ ಸುತ್ತಾಟದ ಕಥೆಗಳನ್ನು ಓದಿ ಬೆಲ್ಲಂಪುಲ್ಲಕ್ಕರ ಚಾಕಚಕ್ಯತೆ, ಲೇಖಕರ ತಂದೆಯವರ ಬೈಯ್ಗಳವನ್ನು ಸವಿಯಲು ನೀವು ಬೆಲ್ಲಂ ಪುಲ್ಲಕ್ಕ ಓದಲೇಬೇಕು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


11 ಮೇ 2022

ಆರ್ಯ ವೀರ್ಯ .ಪುಸ್ತಕ ವಿಮರ್ಶೆ.


 


ವಿಮರ್ಶೆ ೩೪

ಆರ್ಯ ವೀರ್ಯ 


ಆರ್ಯ ವೀರ್ಯ ಪುಸ್ತಕದ ಲೇಖಕರಾದ ಕೆ ಎನ್ ಗಣೇಶಯ್ಯ ರವರು ಓದುಗರನ್ನು ಚಿಂತನೆಗೆ ಹಚ್ಚುವ ಕೃತಿಗಳನ್ನು ಬರೆಯುವುದರಲ್ಲಿ ಎತ್ತಿದ ಕೈ. 

ವೃತ್ತಿಯಿಂದ ಕೃಷಿ ವಿಜ್ಞಾನಿ, ಕೋಲಾರ ಜಿಲ್ಲೆಯವರು. 30 ವರ್ಷ ತಳಿ ಅಭಿವೃದ್ಧಿಯಲ್ಲಿ ತೊಡಗಿದ್ದವರು, ಪ್ರಾಣಿ, ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ, ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ, ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಆರು ವೈಜ್ಞಾನಿಕ ಪುಸ್ತಕಗಳ ಪ್ರಕಟಣೆ ಮಾಡಿರುವರು.


'ಶಾಲಭಂಜಿಕೆ' ಸಣ್ಣಕಥೆ ಮೊದಲ ಸೃಜನಶೀಲ ಬರವಣಿಗೆ, ಅದೇ ಹೆಸರಿನ ಸಂಕಲನವೂ ಪ್ರಕಟವಾಗಿದೆ. ವಿವಿಧ ಪತ್ರಿಕೆಗಳಲ್ಲಿ ಹಲವಾರು ಕಥೆಗಳು ಪ್ರಕಟವಾಗಿವೆ. 'ಕನಕ ಮುಸುಕು', 'ಕರಿಸಿರಿಯಾನ', 'ಕಪಿಲಿಪಿಸಾರ', 'ಚಿತಾದಂತ', 'ಏಳು ರೊಟ್ಟಿಗಳು', 'ಮೂಕ ಧಾತು', 'ಶಿಲಾಕುಲ ವಲಸೆ', 'ಬಳ್ಳಿಕಾಳ ಬಳ್ಳಿ' ಮತ್ತು 'ರಕ್ತ ಸಿಕ್ತ ರತ್ನ' ಇವು ಅವರ ಕಾದಂಬರಿಗಳು. 'ಶಾಲಭಂಜಿಕೆ', 'ಪದ್ಮಪಾಣಿ, 'ನೇಹಲ', 'ಸಿಗೀರಿಯಾ', 'ಕಲ್ಪವಸಿ', 'ಮಿಹಿರಾಕುಲ', 'ಪಂನಿ ತಾಂಡವ' ಮತ್ತು 'ಆರ್ಯ ವೀರ್ಯ' ಕಥಾಸಂಕಲನಗಳು: 'ಭಿನ್ನೋಟ', 'ವಿ-ಚಾರಣ', 'ಭಿನ್ನಬಿಂಬ' ಮತ್ತು 'ತಾರುಮಾರು' ಇವು ಅವರ ಲೇಖನಗಳ ಸಂಗ್ರಹ.

ಕರ್ನಾಟಕ ಸರಕಾರದ ಪರಿಸರ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ : ದತ್ತಿ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.


ಪ್ರಸ್ತುತ ಕಥಾ ಸಂಕಲನದಲ್ಲಿ ಇರುವ 

ಚಿಂತನಾ ಬೊಗುಣಿ ಎಂಬ ಕಥೆಯಲ್ಲಿ

ಮಾಧವ ರಾವ್ ಮಗ ಮುರುಳಿ ಉತ್ತರ ಪ್ರದೇಶದ ಪ್ರವಾಸ ಹೋಗಿ ಬಂದಾಗಿನಿಂದ ಆದ ಅನಪೇಕ್ಷಿತ ವರ್ತನೆಗಳನ್ನು ಹಾಗೂ  ಬದಲಾವಣೆಗಳನ್ನು  ಗಮನಿಸುವ ತಂದೆ ಹಾಗೂ ತಂದೆಯ ಗೆಳೆಯರಾದ  ಶ್ರೀಧರ್ ರವರು  ಸಮಸ್ಯೆಯನ್ನು ಬಗೆಹರಿಸುವರೇ ಅಥವಾ ಸಮಸ್ಯೆಗಳನ್ನು ಸೃಷ್ಟಿ ಮಾಡಿದರೇ ಎಂಬುದೇ ಕಥೆಯ ಕುತೂಹಲಕರ ಅಂಶ .

ಈ ಕಥೆಯಲ್ಲಿ ಬರುವ ಕೆಲ ಸಂಭಾಷಣೆಗಳಲ್ಲಿ ಕೆಲವು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ.

'ಯಾವುದೇ ಒಂದು ಚಿಂತನೆ ಮಾತ್ರವೇ ಪ್ರಬಲವಾದ ವ್ಯಕ್ತಿಯಾಗಿ ಬೆಳೆದು ನೆಲೆಯಾಗಲು  ಅದರ ನೆರಳಿನಲ್ಲಿ ಆಶ್ರಯ ಪಡೆಯುವ ಬುದ್ಧಿಜೀವಿಗಳನ್ನು ಹೊರಗೆಳೆಯದಿದ್ದರೆ ಸಮಾಜಕ್ಕೆ ಉಪಯುಕ್ತವಾಗಬಹುದಾದ ಇತರೆ ಜ್ಞಾನ ಸಸ್ಯಗಳ ಬೆಳವಣಿಗೆ ಕುಂಠಿತ ವಾಗುತ್ತದೆ ಎಂಬ ಸಂಶಯಾಸ್ಪದ ಕಾರಣಕ್ಕಾಗಿ ನಾವು ಅಂತಹ ಅಪಾಯಕಾರಿ ಬೆಳವಣಿಗೆಗಳನ್ನು ವಿರೋಧಿಸಬೇಕು ಎನ್ನುವುದು ನಮ್ಮ ಸಂಘದ ಗುರಿಯಾಗಿದ್ದಲ್ಲಿ ಅಂತಹ ಎಲ್ಲ ಬೆಳವಣಿಗೆಗಳನ್ನೂ ವಿರೋಧಿಸಬೇಕು ಅಲ್ಲವೇ? 'ದಾಸ ಕ್ಯಾಪಿಟಲ್' ಆಗಲಿ, ಲೋಹಿಯಾರ ತತ್ವಗಳಾಗಲಿ, ವಿವೇಕಾನಂದರ ಬೋಧನೆ ಗಳಾಗಲಿ, ಮಹಾತ್ಮ ಗಾಂಧಿಯವರ ತತ್ವಗಳಾಗಲಿ, ಹೀಗೆ ಯಾವುದೇ ವಿಚಾರ ಪ್ರಬಲ ಶಕ್ತಿಯಾಗಿ ಬೆಳೆದು ಆ ಕಾಲಘಟ್ಟದ ವೈಚಾರಿಕ ಮನಸ್ಸುಗಳನ್ನು ತಮ್ಮ ದಾಸರನ್ನಾಗಿಸಿಕೊಂಡಲ್ಲಿ ಆಗ ಸರ್ವತೋಮುಖ ಜ್ಞಾನವೃದ್ಧಿಗೆ ಅಡ್ಡಿಯಾಗುತ್ತದೆ. ಎನ್ನುವ ಅಂಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.


 ರುಂಡಗಂಡ ಎಂಬ ಕಥೆಯಲ್ಲಿ 

ನಂದನ್ ಅವರ ಮಗಳು ಸಂದ್ಯಾ ರಾಘವ್ ನನ್ನು ಮದುವೆಯಾಗಿ ,ನಂತರ ಸಂದ್ಯಾಳ ಕಾಲೇಜಿನ ಗೆಳೆಯ ಸಂತೋಷ್ ದೇಹಕ್ಕೆ ರಾಘವ್ ಮುಖ ಸೇರಿದ ಬಗ್ಗೆ ಸಂಧ್ಯಾ ತನಿಖಾದಿಕಾರಿಯಾಗಿ ,ಹಣ ವರ್ಗಾವಣೆಯಾದ ಬಗ್ಗೆ ಹಾಗೂ ರಾಘವ್ ನ ಮೋಸವನ್ನು , ಆಧಾರ್ ಕಾರ್ಡ್ ನ  ಅಧಾರದ ಮೇಲೆ ಚಾಕಚಕ್ಯತೆಯಿಂದ ಕಂಡುಹಿಡಿಯುವ ಕಥನ ಕುತೂಹಲಕಾರಿಯಾಗಿದೆ.

ಕಥೆಯ ಪಾತ್ರಧಾರಿ ಸಂಧ್ಯಾ ಹೇಳುವಂತೆ ,ಇಟಲಿಯ ಸೆರ್ಗಿಯೋ ಕನವರೋ ಎಂಬ ವೈದ್ಯ ವಿಜ್ಞಾನಿ ಹತ್ತು ವರ್ಷದ ಹಿಂದೆ, ಅಂದರೆ ಸುಮಾರು 2015 ರಿಂದ 2017ರ ಸಮಯದಲ್ಲಿ ಒಬ್ಬ ಚೀನೀ ವೈದ್ಯನೊಡನೆ ಸೇರಿ ಒಬ್ಬರ ಶಿರವನ್ನು ಮತ್ತೊಬ್ಬರ ದೇಹಕ್ಕೆ ಕಸಿಮಾಡುವ ತಮ್ಮ ಪ್ರಯತ್ನ ಫಲಕಾರಿಯಾಗಿದೆ ಎಂದು ಘೋಷಿಸಿದ್ದ. ಅದೇ ಸಮಯದಲ್ಲಿ ದೇಹವೆಲ್ಲ ಊನವಾಗಿದ್ದ, ಆದರೆ ಎಲ್ಲ ರೀತಿಯಲ್ಲೂ ಆರೋಗ್ಯಕರ ಶಿರವನ್ನು ಹೊಂದಿದ್ದ, ಅತ್ಯಂತ ಬುದ್ಧಿಶಾಲಿಯೂ ಆದ ಚೀನೀ ವ್ಯಕ್ತಿಯೊಬ್ಬ ಅಂತಹ ಶಸ್ತ್ರಚಿಕಿತ್ಸೆ ಸಾಧ್ಯವಾಗುವ ಹಾಗಿದ್ದರೆ ತಾನು ಒಂದು ದೇಹ ಪಡೆಯಲು ಸಿದ್ಧವೆಂದು ಹೇಳಿಕೊಂಡಿದ್ದ. ಅದಕ್ಕೆ, 'ಬೈನ್ ಡೆಡ್' ಆಗಿದ್ದ ರೋಗಿಗಳು ಸಿಕ್ಕಿದಲ್ಲಿ ತಾನು ಆ 29 ಶಸ್ತ್ರಚಿಕಿತ್ಸೆ ಮಾಡುವುದಾಗಿ ಇಟಲಿಯ ಈ ವೈದ್ಯ ಒಪ್ಪಿದ್ದ ಕೂಡಾ. ಇದರ ಬಗ್ಗೆ ಹಲವಾರು ವಿಜ್ಞಾನಿಗಳು ಮತ್ತು ವೈದ್ಯರು ಸಂಶಯ ವ್ಯಕ್ತಪಡಿಸಿದ್ದರೂ, ಇಲಿಗಳಲ್ಲಿ ಇದು ಸಾಧ್ಯ ಎಂದು ಈಗಾಗಲೇ ತೋರಿಸಲಾಗಿತ್ತು. ಪಲ್ಲವ್ ಭಾಗ ಅವರು ಕೊಟ್ಟ ವರದಿಯ ಪ್ರಕಾರ ಈ ಶಸ್ತ್ರಕ್ರಿಯೆ ಮಾನವರಲ್ಲಿಯೂ ನಡೆಯುತ್ತಿದ್ದು, ಹಲವಾರು ಅಂತಹ ವ್ಯಕ್ತಿಗಳು ಈಗಾಗಲೇ  ಶಸ್ತ್ರಚಿಕಿತ್ಸೆ ಗೆ ಒಳಗಾಗಿರುವ ಸಾಧ್ಯತೆಗಳ ಬೆನ್ನಟ್ಟುವ ಮೂಲಕ ಪತ್ತೇದಾರಿ ಕೆಲಸ ಮಾಡಿ ಅಪರಾಧಿಗಳ ಹಿಡಿಯುವ ಕಾರ್ಯ ಮಾಡಿದರು.


ಮತ್ತೊಂದು ಕಥೆ ಆರ್ಯ ವೀರ್ಯ ಓದಿದಾಗ ಮಾನವನ ವಂಶಧಾತುಗಳನ್ನು ಸಂಸ್ಕರಣಗೊಳಿಸಿ, ತಿದ್ದಿ, ಬದಲಾವಣೆ ಮೂಲಕ 'ಬುದ್ಧಿವಂತಿಕೆಯನ್ನು ಹೆಚ್ಚಿಸುವತ್ತ ಅಥವಾ ಆರೋಗ್ಯವನ್ನು ಉತ್ತಮ ಗೊಳಿಸುವತ್ತ ಅಥವಾ ಜೀವನವನ್ನು ಸುಗಮಗೊಳಿಸುವತ್ತ ನಡೆಯುತ್ತಿರುವ ಪ್ರಯತ್ನಗಳು ಇಂದು ನಿನ್ನೆಯವಲ್ಲ. ಈ ನಿಟ್ಟಿನಲ್ಲಿ ಒಂದು ಅಪರೂಪದ, ರಹಸ್ಯ ಯೋಜನೆಯನ್ನು ನಾಜಿ ಪ್ರಮುಖರು ಕೈಗೊಂಡಿದ್ದರೆಂಬ ಬಗ್ಗೆ ಹಲವು ಮೂಲಗಳಿಂದ ದೃಢಪಟ್ಟಿದೆ. ಅಂತಹ ಒಂದು ಯೋಜನೆಯ ಸುತ್ತ ಬೆಳೆದ ಕತೆಯೂ ಈ ಸಂಕಲನದಲ್ಲಿದೆ. ಈ ಕಾರ್ಯ ಸಾಧಿಸಲು ನಾಜಿಗಳು ಯಾವ ಮಟ್ಟಕ್ಕೂ ಇಳಿಯಬಲ್ಲರು ಎಂಬುದನ್ನು ಈ ಕಥೆಯಲ್ಲಿ ಚಿತ್ರ ಸಹಿತ ದಾಖಲೆ ಸಹಿತ ನೀಡಿದ್ದಾರೆ.

ಎಂದಿನಂತೆ ಕೆ ಎನ್ ಗಣೇಶಯ್ಯ ರವರ ಶೈಲಿಯಾಗಿ ಆಧಾರಗಳ ಉಲ್ಲೇಖ,ಪೂರಕ ಚಿತ್ರಗಳು ಸಂಶೋಧನಾ ಗುಣ ಹಾಗೂ

ಘಟನೆಗಳು ನಿರೂಪಣೆಯ ಚಾಕಚಕ್ಯತೆ ಈ ಕಥಾ ಸಂಕಲನದಲ್ಲಿಯೂ ಇದೆ .ಒಮ್ಮೆ ಓದಿ  ನಿಮಗೆ ವಿಶ್ವ ಪರ್ಯಟನೆ ಮಾಡಿದ, ವಿಜ್ಞಾನದ ಸಂಶೋಧನೆ ಮಾಡಿದ ಅನುಭವವಾಗುವುದರಲ್ಲಿ ಸಂದೇಹವಿಲ್ಲ..


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ


10 ಮೇ 2022

ಜಾಲಾರ ಹೂ ಪುಸ್ತಕ .ವಿಮರ್ಶೆ


 ವಿಮರ್ಶೆ ೩೩

ಜಾಲಾರ ಹೂ .


ಜಿ ವಿ ಆನಂದ ಮೂರ್ತಿ ರವರ ಜಾಲಾರ ಪ್ರಬಂಧಗಳನ್ನು ಓದಿದಾಗ ನಮ್ಮ ಹಳ್ಳಿಯ ಜೀವನ ನೆನಪುಗಳನ್ನು ಇವರ ಎಲ್ಲಾ ಪ್ರಬಂಧಗಳು ಕುತೂಹಲಕಾರಿ  ಹಾಗೂ ಓದಲು ಆಸಕ್ತಿಕರವಾಗಿವೆ.

ಜಾಲಾರ ಹೂವು,ಕೆರೆ ಕಟ್ಟೆ ಬಯಲಾಗಿ ಹೋಗುವಾಗ,

ಮಾಗಿಯ ದಿನಗಳು, ಪೂವಮ್ಮನ ಹೂತೋಟ,ನಾನ್ಯಾರಿಗಲ್ಲದವಳು,

ಅವ್ವ ಮತ್ತು ರಾಗಿರೊಟ್ಟಿ,ಕೇರಿಗೆ ಬಂದ ಯುಗಾದಿ,ಕವಿಯ ತೋಟದಲ್ಲಿ ಒಂದು ಯುಗಾದಿ,ಬೆಟ್ಟದ ದಾರಿಯಲ್ಲಿ,ತೊಗಲುಗೊಂಬೆಗಳೊಡನೆ ಒಂದು ದಿನ,ಮುಂತಾದ ಪ್ರಬಂಧಗಳು ನನಗೆ ಬಹಳ ಹಿಡಿಸಿದವು.

ಕನ್ನಡದಲ್ಲಿ ಅಪರೂಪವಾಗುತ್ತಿರುವ ಲಲಿತ ಪ್ರಬಂಧಗಳೆಂಬ ಪ್ರಕಾರಕ್ಕೆ ಉತ್ತಮ ಸೇರ್ಪಡೆಯಾಗಿ ರೂಪುಗೊಂಡಿವೆ. ಬೌದ್ಧಿಕತೆಯ ಭಾರವಿಲ್ಲದೆಯೂ ಚಿಂತನೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿರುವ ಆನಂದಮೂರ್ತಿಯವರ ಬರವಣಿಗೆ ಓದುಗರ ನೆನಪನ್ನು ಉದ್ದೀಪಿಸಿ ಜೀವನೋತ್ಸಾಹವನ್ನು ಮೂಡಿಸುತ್ತದೆ. ಇಲ್ಲಿನ ಎಲ್ಲ ಪ್ರಬಂಧಗಳಲ್ಲಿ ಆತ್ಮಕಥೆಯ ಆಪ್ತತೆ ಇದೆ. ಕೇವಲ ವ್ಯಕ್ತಿಗಳ ಕಥನವಾಗದೆ ಬದಲಾಗಿರುವ ಜೀವನಕ್ರಮದ ಬಗ್ಗೆ, ಕಳೆದು ಹೋಗುತ್ತಿರುವ ಹಳ್ಳಿಯ ಬದುಕಿನ ಒಟ್ಟಂದದ ಬಗ್ಗೆ ವಿಷಾದದ ಅಲೆಯನ್ನು ಎಬ್ಬಿಸುವಷ್ಟು ಶಕ್ತವಾಗಿಯೂ ಇದೆ. ಅನಂದಮೂರ್ತಿಯವರ ಬರವಣಿಗೆಯಲ್ಲಿ ಬೌದ್ಧಿಕತೆಯ ಸೋಗು ಇಲ್ಲ, ಬದಲಾಗುತ್ತಿರುವ ಜಗತ್ತಿನ ಬಗ್ಗೆ, ಕಳೆದು ಹೋಗುತ್ತಿರುವ ಬದುಕಿನ ಚೆಲುವಿನ ಬಗ್ಗೆ ನೆನಪಗಳು ಉದ್ದೀಪಿಸುವ 'ಇದು ಸರಿಯಲ್ಲ' ಎಂಬ ಭಾವವನ್ನು ಓದುಗರಿಗೆ ಆಪ್ತವಾಗಿ ಧಾಟಿಸುವ ಗೆಳೆಯರ ಮಾತಿನ ಗುಣ ಇದೆ. ನಮ್ಮನ್ನೆಲ್ಲ ಆವರಿಸಿಕೊಂಡಿರುವ ಆಧುನಿಕತೆಯಿಂದ ನಾವು ಪಡೆದದ್ದೆಷ್ಟು, ಕಳಕೊಂಡದ್ದೆಷ್ಟು ಅನ್ನುವ ಪರಿಶೀಲನೆಗೆ ತೊಡಗಿಸುವಂತಿದೆ.


ಈ ಪುಸ್ತಕಕ್ಕೆ ಸುಂದರವಾದ ಮುನ್ನುಡಿ ಬರೆದ ಓ ಎಲ್ ನಾಗಭೂಷಣ ಸ್ವಾಮಿ ರವರು ಪ್ರಬಂಧ ಸಂಕಲನದ ಬಗ್ಗೆ ಸಕಾರಾತ್ಮಕವಾಗಿ ಬರೆದಿರುವರು.

ಇಲ್ಲಿನ ಒಂದೊಂದು ಪ್ರಬಂಧದಲ್ಲೂ ಲೇಖಕರು ಮಾತ್ರವಲ್ಲದೆ ಅವರು ತಮ್ಮ ಬಾಲ್ಯದಲ್ಲಿ ಕಂಡ, ಅವರ ಮನಸ್ಸಿನಲ್ಲಿ ಉಳಿದ ಒಬ್ಬಿಬ್ಬರು ವ್ಯಕ್ತಿಗಳ ಚಿತ್ರಣವೂ ಬೆರೆತಿದೆ. 'ಜಾಲಾರ ಹೂವು' ಪ್ರಬಂಧದಲ್ಲಿ ಬರುವ ದಾಸಿ, ಸುಕಾಲಿಗರು, 'ಜಾತ್ರೆ'ಯಲ್ಲಿ ಸೇರುವ ಜನಸಂದಣಿಯ ಚಿತ್ರಣ, ಕೆರೆ ಕಟ್ಟೆ ಬಯಲಾಗಿ' ಪ್ರಬಂಧದಲ್ಲಿ ಬರುವ ಗಂಗಣ್ಣಮ್ಮ, 'ಅವ್ವ ಮತ್ತು ರಾಗಿರೊಟ್ಟಿ'ಯ ಆವ್ವ ಹೀಗೆ, ಹಾಗಾಗಿ ಇಲ್ಲಿನ ಬರವಣಿಗೆ ಕೇವಲ ಖಾಸಗಿ ನೆನಪಷ್ಟೇ ಆಗಿ ಉಳಿಯದೆ ಇಡೀ ಊರಿನ ಕಥೆಯಾಗುವ ಗುಣ ಪಡೆದುಕೊಂಡಿವೆ,

ಆನಂದಮೂರ್ತಿಯವರು 'ನನ್ನ ಬಾಲ್ಯದ ದಿನಗಳಲ್ಲಿ ಅರಿವಿಗೆ ಹಾಕಿದ ಲೌಕಿಕದ ಎಲ್ಲ ಅನುಭವಗಳ ಕೈಸೆರೆಯಾಗಿದ್ದೇನೆ. ಅವುಗಳಿಂದ ಬಿಡುಗಡೆ ಹೊಂದುವುದೆಂದರೆ, ಮತ್ತೊಮ್ಮೆ ತಾಯಿಕರುಳಿನ ಸಂಬಂಧವನ್ನು ಹರಿದುಕೊಂಡು ಬಂದಂತೆ, ಇಂದಿನ ಯಾವ ಅನುಭವಗಳೂ ನನ್ನ ಎಳವೆಯ ದಿನಗಳ ಮುಗ್ಧ ಸೌಂದರ್ಯವನ್ನು, ಅದು ಕಲಿಸಿದ ಜೀವನದ ಪಾಠಗಳನ್ನು ಕಸಿದುಕೊಳ್ಳಲಾರವು. ಅಷ್ಟರಮಟ್ಟಿಗೆ ನಾನು ಇಂದಿನ ಅನುಭವಗಳ

ಮೇಲೆ ಜಯ ಸಾಧಿಸಿದ್ದೇನೆ' ಎನ್ನುತ್ತಾರೆ ಅವ್ರ ಮತ್ತು ರಾಗಿರೊಟ್ಟಿ, ಪ್ರಬಂಧದಲ್ಲಿ 'ತರ್ಕವಿಲ್ಲದ ಎಳವೆಯ ದಿನಗಳಲ್ಲಿ ನನ್ನ ತಿಳಿವಿಗೆ ಬಂದ ಸರಳ ವಿಚಾರಗಳಿವು! ನಮ್ಮ ಕುಟುಂಬವು ದಶಕಗಳಷ್ಟು ಕಾಲ ಸವೆಸಿದ ಹಾದಿಯನ್ನು ಹಿಂದಿರುಗಿ ನೋಡುತ್ತಾ, ಕಳೆದ ದಿನಗಳ ಅನುಭವಗಳನ್ನೆಲ್ಲ ಹೀಗೆ ಕವಳಿಗೆಯಂತೆ ಜೋಡಿಸಿಕೊಂಡು ನಿಮ್ಮ ಮುಂದಿಟ್ಟಿದ್ದೇನೆ. ಎನ್ನುತ್ತಾರೆ 'ನಾನ್ಯಾರಿಗಲ್ಲದವಳು' ಪ್ರಬಂಧದಲ್ಲಿ, ಈ ಎರಡು ಮಾತುಗಳು ಅವರ ಬರವಣಿಗೆಯ ಸ್ವರೂಪವನ್ನು ಸಮರ್ಪಕವಾಗಿ ವಿವರಿಸುತ್ತವೆ.

'ಹೂ ಪೇಟೆ' ಎಂಬಂಥ ಪದಗಳ ಪ್ರಯೋಗದಿಂದ ಹಿಡಿದು ಕೆರೆಯ ಅಲೆಗಳ ವರ್ಣನೆ 'ಮಾಗಿಯ ದಿನಗಳಲ್ಲಿ ನಮ್ಮ ಮುಖ, ತುಟಿ, ಅಂಗಾಲು ಇವುಗಳೆಲ್ಲ ಬಿರಿದು, ಉಂಡಿಗೆ ಹಾಕಿದ ಕಲ್ಲಂಗಡಿ ಹಣ್ಣಿನಂತೆ ಕಾಣುತ್ತಿದ್ದವು. ವತ್ತಿನಂಟೆ ಎದ್ದು ಮುಖಕ್ಕೆ ತಣ್ಣೀರು ಸೋಕಿಸಿದ. ಪ್ರಾಣವೇ ಹೋದಂತಾಗುತ್ತಿತ್ತು' ಅನ್ನುವ ಚಿತ್ರಣ, 'ಮಳೆ ಮತ್ತು ಬಿಸಿಲು ಪರಸ್ಪರ ಕೈ ಹಿಡಿದು ಬರುತ್ತಾ, ಹೋಗುತ್ತಾ ಆಟವಾಡುತ್ತಿದ್ದವು' 'ಎತ್ತ ನೋಡಿದರೂ ಸುತ್ತುವರೆದಿರುವ ಹೆಸರು ಕೋಟೆಯಂತಹ ಕಾಡು' ಅನ್ನುವಂಥ ನಿರೂಪಣೆಗಳು, ಸಂತೆಯ ವಿವರಗಳನ್ನು ಅವರು ಕಟ್ಟಿಕೊಡುವ ರೀತಿ ಇವೆಲ್ಲ ಆನಂದಮೂರ್ತಿಯವರಲ್ಲಿರುವ ಕವಿ ವ್ಯಕ್ತಿತ್ವದ ನಿದರ್ಶನಗಳಂತಿವೆ. ಶೇರು ಹರಿದ ನಂತರ ಜಾತ್ರೆಯು "ಕುಯಿಲು ಮಾಡಿದ ಹೊಲದಂತೆ ಬಣಗುಡುತ್ತಿರುತ್ತದೆ' ಎಂದು ಪುಟ್ಟ ವಾಕ್ಯದಲ್ಲಿ ಭಾವಪೂರ್ಣವಾಗಿ ವಿವರಿಸುವ ಆನಂದಮೂರ್ತಿಯವರು ಸಂತೆಯನ್ನು ವಿವರವಾಗಿ ವರ್ಣಿಸಲೂ ಬಲ್ಲರು, ಅವರ ಸಮತೆಯ ವರ್ಣನೆ, ಮನಸ್ಸನ್ನು ಸೆಳೆಯುತ್ತದೆ:

'ಸಂತೆಯೊಳಗೆ ನೀವೊಂದು ಸುತ್ತು ಕಣ್ಣಾಡಿಸುತ್ತಾ ಹೊರಟರೆ ಕಾಣುವ ಒಂದೊಂದೂ ಚಿತ್ರಗಳೂ ಒಂದೊಂದು ಪುಟ್ಟ ದ್ವೀಪಗಳಂತೆ ಆಕರ್ಷಿಸುತ್ತವೆ. ಒಂದೊಂದೂ ಒಂದು ಬಣ್ಣ ವಿನ್ಯಾಸ ಅಪರಿಮಿತ ಪರಿಮಳದ, ಬಿಡಿ ಬಿಡಿಯಾದ ಜೀವ ಇರುವ ತುಣುಕುಗಳೇ! ಇವುಗಳ ನಡುವೆ ಕಂಡೂ ಕಾಣದಂತಹ ಒಂದು ಒಳಹೆಣ್ಣಿಗೆ ಇತ್ತು. ಇವೆಲ್ಲವೂ ಕಲಾತ್ಮಕವಾಗಿ ಹೆಣೆದ ಕೌದಿಯಂತೆ ಕಣ್ಣಿಗೆ ಕಟ್ಟುತ್ತದೆ.

'ಸಂತ ಮೈದಾನದ ಒಂದು ಮೋಟುಮರದ ಕೆಳಗೆ ಚೌರ ಮಾಡುತ್ತಾ ಕುಳಿತಿರುವ ರಂಗಪ್ಪ, ಅದೇ ಸಾಲಿನಲ್ಲಿ ಕೋಳಿ ಮಾರುವ ಪೈಕಿಯವರು, ಅಲ್ಲಿನ ರಣಬಿಸಿಲಿಗೆ ಹೇಗೋ ತಲೆಮರೆಸಿಕೊಂಡು ಉಳಿದಿದ್ದ ತುಸು ನೆರಳಿನಲ್ಲಿ ಕುರಿ-ಮೇಕೆಗಳನ್ನು ಬಿಟ್ಟುಕೊಂಡು, ಕೈಯಲ್ಲಿ ಆಗಸ ಸೊಪ್ಪನ್ನು ಹಿಡಿದುಕೊಂಡು ನಿಂತಿರುತ್ತಿದ್ದ ಗೊಲ್ಲರು, ಅವರ ಕುರಿ ಪಟ್ಟಿಗಳನ್ನು ಎಳೆದಾಡುತ್ತಾ ಚೌಕಾಸಿ ಮಾಡುತ್ತಿದ್ದ ಕಟುಕರು, ಇತ್ತ ಇನ್ನೊಂದು ಸಾಲಿನಲ್ಲಿ ಸೀಗಡಿ-ಕರಿಮೀನು ಮಾರುವ ಜಮಾಲ್ ಸಾಬರು, ಅವರಿಂದ ತುಸು ದೂರಕ್ಕೆ ಮಡಕೆ ಕುಡಿಕೆ, ಬೋಗಣಿ, ಹರಿವೆ, ಮಗೆ, ಬಾಧ(ಗವಾಕ್ಷಿ), ಬಾನಿ, ಎಲೆ ಅಂಬುಗಳಿಗೆ ನೀರು ಹುಯ್ಯಲು ಬಳಸುವ ಗುಂಬಗಳು ಮತ್ತು ಮುಸುರಕೂನಿಗಳನ್ನು ತಮ್ಮ ಒಂಟೆತ್ತಿನ ಗಾಡಿಗಳ ಮುಂದೆ ಹರಡಿಕೊಂಡು ಕುಳಿತಿರುತ್ತಿದ್ದ ಕುಂಬಾರರು, ಸೀಗಡಿ-ಕರಿಮೀನು ಮಾರುವವರ ಹಿಂಭಾಗದಲ್ಲಿ ಎತ್ತುಗಳಿಗೆ ಲಯಬದ್ಧವಾಗಿ ಲಾಳ ಕಟ್ಟುತ್ತಿದ್ದ ಸಾಬರು, ಅವರ ಒತ್ತಿನಲ್ಲೇ

ದನಗಳಿಗೆ ಕೊಂದರೆಯುತ್ತಿದ್ದ. ದಕ್ಕೇರು. ಇವರುಗಳ ಆಜುಬಾಜಿನಲ್ಲಿ ಹಳೆ ಕೆರಗಳಿಗೆ ಉಂಗುಷ್ಟ ಹಾಕುತ್ತಲೋ ಅಥವಾ ಅಟ್ಟೆಗೆ ಮಳೆಹೊಡೆಯುವಲ್ಲಿ ಧ್ಯಾನಾಸಕ್ತರಾಗಿರುತ್ತಿದ್ದ ಮೆಟ್ಟು ಹೊಲೆಯುವವರು. ಇಡೀ ಸಮಾಜವನ್ನೇ ಮೊರೆಯುವ ನೂರೆಂಟು ಜಾತಿಯಿಂದ ಬಂದ

ಹೋಗುತ್ತದೆ.' ಈ ವರ್ಣನೆಯನ್ನು ಓದುತ್ತಾ ಮಾಸ್ತಿಯವರ ಕಥೆಯೊಂದರಲ್ಲಿ ಸಂತೆ ಮುಗಿದ ಮೇಲೆ ಮನಸ್ಸಿನಲ್ಲಿ ಮೂಡಿಕೊಳ್ಳುವ ವರ್ಣನೆ ಬಂದಿರುವುದು

ಕೇವಲ ಚಲುವಾದ: ನೆನಪಿನ ಚಿತ್ರಗಳಷ್ಟೇ ಆಗಿದ್ದಿದ್ದರೆ, ಈ ಪ್ರಬಂಧಗಳು ಯಶಸ್ಸು ಸೀಮಿತವಾಗುತ್ತಿತ್ತು. ಚಾಲಾರದಂಥ ಹೂವು ಜಾನಪದದಲ್ಲಿ ಉಳಿದಿರುವ ಹೇಳುತ್ತಾರೆ. ಹಳ್ಳಿಯ ಮಗು ಪಾಡಿಗೆ ಸಂತೆಯಲ್ಲಿ ಸೊಪ್ಪು ಮಾರಲು ಹೋಗಲೇಬೇಕಾದ ಶಾಲೆಯ ಗೆಳೆಯರನ್ನು, ಮೇಷ್ಟರನ್ನು ಕಂಡು ಅವಮಾನ, ನಾಚಿಕೆಗಳಿಂದ ಕುಗ್ಗಿ ಹೋಗುವುದನ್ನು ಹೇಳುತ್ತ, ಆಧುನಿಕತೆಯನ್ನು ತರುವ ಶಿಕ್ಷಣ ಬೇರು ಬಿಟ್ಟಿರುವ ಮಗುವಿನಲ್ಲಿ ಸೃಷ್ಟಿಸುವ ಭಾವಗಳನ್ನು ಬಯಲಾಗಿರುವುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತ ಆಧುನೀಕರಣಗಳು ನಮ್ಮ ಮೇಲೆ ಪ್ರಭಾವಗಳ ಬಗ್ಗೆ ವಿಷಾದ ಮೂಡುವಂತೆ ಮಾಡುತ್ತಾರೆ. ಮಾಗಿಯ ಕಾಲದಲ್ಲಿ ರೊಪ್ಪದ ಸಣ್ಣತಿಮ್ಮಕ್ಕ ಆಗಸಗಿತ್ತಿಯು ಕುಲವನ್ನು ಉಳಿಸಿದ ಕಥೆಯಂಥ ಪ್ರಸಂಗಗಳಲ್ಲಿ ವರ್ಗವೈಷಮ್ಯ, ಜಾತಿಗಳ ಕಟ್ಟುಪಾಡುಗಳ ಬಾಳುವಿಕೆಯ ಗಟ್ಟಿ ನಮ್ಮ ಗ್ರಾಮಗಳ ಇಂದಿಗೂ ಉಸಿರಾಡುತ್ತಿದೆ' ಎನ್ನುತ್ತಾರೆ. ಇವೆಲ್ಲವೂ ನೆನಪಿನಿಂದ ಮೂಡುವ ಆಪ್ತವಾಗುತ್ತವೆ.

“ಕೇರಿಗೆ ಬಂದ 'ಯುಗಾದಿ' ಪ್ರಬಂಧದ ಕೊನೆಯಲ್ಲಿ ಎಲ್ಲಿ ಹೋದವೋ ಆ ಕಾಲ ಎಂಬ ಬರುತ್ತದೆ. ಇದು ನೆನಪಿನ ಹಳಹಳಿಕೆಯಾಗಿ ಕಾಣುವುದಷ್ಟೇ ಅಲ್ಲದೆ ನಾವೆಲ್ಲ ಒಪ್ಪಿಕೊಂಡಿರುವ ಮರುಕವಿಲ್ಲದ ಅಭಿವೃದ್ಧಿಯ ಕಲ್ಪನೆ ಬದುಕಿನ ಕ್ರಮಗಳನ್ನೆಲ್ಲ ನಿರ್ದಯವಾಗಿ ಅಳಿಸಿಬಿಡುತ್ತಿರುವುದರ ವ್ಯಾಖ್ಯಾನದಂತೆಯೂ ಕೇಳುತ್ತದೆ. ಅಭಿವೃದ್ಧಿಯನ್ನು ಮಾತ್ರ ಮುಖ್ಯವೆಂದು ಭ್ರಮಿಸುವುದಕ್ಕಿಂತ ವೈವಿಧ್ಯಮಯವಾದ ಬದುಕಿನಲ್ಲಿ ಸಂತೋಷವನ್ನೂ ಹೇಗೆ ಅನ್ನುವ, ಅದು ಎಂಬ ಆತಂಕವನ್ನೂ ಓದುಗರಲ್ಲಿ ಮೂಡಿಸುತ್ತದೆ.

ಕಥೆಗಳಾಗಿ ಹಿಗ್ಗಬಹುದಾದ, ಕಾದಂಬರಿಯಾಗಿ ವಿಸ್ತರಿಸಿಕೊಳ್ಳಬಹುದಾದ ಬೀಜಗಳು ಪ್ರಬಂಧಗಳಲ್ಲಿವೆ. ಆನಂದಮೂರ್ತಿಯವರು ಮತ್ತಷ್ಟು ಬರೆಯಲಿ ಎಂಬ ಆಸೆಯನ್ನು ಹುಟ್ಟಿಸುವಂತಿವೆ.

ಬನ್ನಿ ಜಾಲಾರ ಪುಸ್ತಕ ಓದುತ್ತಾ ಜಾಲಾರಾ ಸುಮದ ಘಮವನ್ನು ಆಘ್ರಾಣಿಸುತ್ತಾ ನಮ್ಮ ಬಾಲ್ಯ ಮತ್ತು ಹಳ್ಳಿಯ ಜೀವನದ ನೆನಪುಗಳೊಂದಿಗೆ ಮತ್ತೊಮ್ಮೆ ವಿಹರಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



09 ಮೇ 2022

ನನ್ನ ಪರಿಚಯ.ಅಗ್ರಹಾರ ಪ್ರಶಾಂತ್ ರವರಿಂದ


 


ಪರಿಚಯ ಶುದ್ಧ ಸಾಹಿತ್ಯ ಬಳಗ

ದಿನಾಂಕ ೦೯/೦೫/೨೦೨೨ ಸೋಮವಾರ

*ನಾವು - ನಮ್ಮವರು* ಪರಿಚಯ ಮಾಲಿಕೆ ೧

ಬಹುಮುಖ ಪ್ರತಿಭೆ - ಸಿ ಜಿ ವೆಂಕಟೇಶ್ವರ್

ನಾವು ಇಂದಿನ ಶುಭ ಸೋಮವಾರದಂದು *ನಾವು - ನಮ್ಮವರು* ಮಾಲಿಕೆಯಲ್ಲಿ  *ಸಿಹಿಜೀವಿ* ಯೆಂದೇ ಮನೆಮಾತಾಗಿರುವ ಬಹುಮುಖ ಪ್ರತಿಭೆಯ ಶಿಕ್ಷಕರೂ, ಕವಿಗಳೂ ಮತ್ತು ಕಲಾವಿದರಾಗಿರುವ ಸಿ ಜಿ ವೆಂಕಟೇಶ್ವರ್ ರವರನ್ನು ಪರಿಚಯ ಮಾಡಿಕೊಡುತ್ತಿದ್ದೇವೆ.
   *ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ಸಿಹಿ ಜೀವಿಯಿರದ ಕ್ಷೇತ್ರವಿಲ್ಲ ಎಂಬ ನುಡಿಗೆ ಸರಿಹೊಂದುವಂತಿರುವ ಶ್ರೀಯುತರು ಕೀರ್ತಿಶೇಷ ಗೋವಿಂದಪ್ಪ ಮತ್ತು ಶ್ರೀದೇವಮ್ಮರವರ ಸುಪುತ್ರರಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿಯಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸವು ಚೌಡಗೊಂಡನಹಳ್ಳಿ, ಉಪ್ಪರಿಗೇನಹಳ್ಳಿ, ಯರಬಳ್ಳಿ, ಹಿರಿಯೂರು, ಮೈಸೂರುಗಳಲ್ಲಿ ನಡೆಯಿತು. ರಾಜ್ಯಶಾಸ್ತ್ರದಲ್ಲಿ ಮತ್ತು ಅರ್ಥಶಾಸ್ತ್ರದಲ್ಲಿ ಎಂ ಎ ಪದವಿಯನ್ನು ಪಡೆದಿರುವ ಶ್ರೀಯುತರು ಕಥೆ, ಗಜಲ್, ಹನಿಗವನ, ಶಾಯರಿ, ಪರ್ದ್ ಬರೆಯುವುದನ್ನೇ ಮುಖ್ಯ ಹವ್ಯಾಸವಾಗಿ ಬೆಳಿಸಿಕೊಂಡು ಸುಮಾರು ಹತ್ತಕ್ಕೂ ಅಧಿಕ ಕವನ ಮತ್ತು ಲೇಖನಗಳನ್ನು ಒಳಗೊಂಡ ಪುಸ್ತಕಗಳು ಲೋಕಾರ್ಪಣೆಯಾಗಿರುವುದು ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಲೇಖನಗಳು  ನಾಡಿನ ಎಲ್ಲಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿಯನ್ನು ಹೊಂದಿರುವ ಇವರು ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುತ್ತಾರೆ. ಜೊತೆಗೆ ವೃತ್ತಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಾಜವಿಜ್ಞಾನ ಶಿಕ್ಷಕರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಾ ಪರಿಸರಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ಸಿಹಿಜೀವಿಯವರು ಎಲ್ಲದಕ್ಕಿಂತ ಹೆಚ್ಚಾಗಿ ಹವ್ಯಾಸಿ ಹಾಡುಗಾರ ಮಾತ್ರವಲ್ಲ, ಉತ್ತಮ ಛಾಯಾಚಿತ್ರಗಾರ ಮತ್ತು ಬ್ಲಾಗ್ ಸಹ ಆಗಿರುವುದು ಹೆಮ್ಮೆಯ ವಿಚಾರವಾಗಿದೆ. ಇವರ ಬ್ಲಾಗ್ ನ್ನು ಜಗತ್ತಿನಾದ್ಯಂತ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಜನರು ಓದುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
        ಶ್ರೀಯುತರ *ಸಾಲು ದೀಪಾವಳಿ, ಸಿಹಿಜೀವಿಯ ಗಜಲ್, ಶಾಲಾ ಪ್ರಬಂಧ ಮತ್ತು ಪತ್ರ ಲೇಖನ, ನನ್ನಮ್ಮ ನಮ್ಮೂರಿನ ಫ್ಲಾರೆನ್ಸ ನೈಟಿಂಗೇಲ್ ಲಲಿತ ಪ್ರಬಂಧ, ರಂಗಣ್ಣನ ಗುಡಿಸಲು ಇವಿಷ್ಟು ಕೃತಿಗಳು ಲೋಕಾರ್ಪಣೆ ಗೊಂಡು ಓದುಗರ ಕೈ ಸೇರಿ ಪ್ರಶಂಸೆಗೆ ಪಾತ್ರವಾಗಿವೆ.
    ಇನ್ನು ಹೊರಬರಲು ಕಾಯ್ದು ಕುಳಿತಿರುವ ಕೃತಿಗಳೆಂದರೆ *ಉದಕದೊಳಗಿನ ಕಿಚ್ಚು*, *ಶಿಕ್ಷಣವೇ ಶಕ್ತಿ* , *ವಿದ್ಯಾರ್ಥಿಗಳಿಗಾಗಿ* *ಸಿಹಿಜೀವಿಯ ಹನಿಗಳು*, *ಬಹುಮುಖ*
   ಸಿ. ಜಿ. ವೆಂ ರವರು *ತಾಲ್ಲೂಕು ಮಟ್ಟದ ಕವಿಗೋಷ್ಠಿ,*, ಕವಿಬಳಗ, ಹನಿ ಹನಿ ಇಬ್ಬನಿ ಬಳಗ, ಸಾಧನಕೇರಿ ಬಳಗ, ಸಾಹಿತ್ಯ ಬಳಗ ಚಿಂತಾಮಣಿ, ಮುಂತಾದವರು ಆಯೋಜಿಸಿದ್ದ  *ರಾಜ್ಯ ಮಟ್ಟದ ಕವಿಗೋಷ್ಠಿ*, ತಾಲ್ಲೂಕು ಸಾಹಿತ್ಯ ಪರಿಷತ್ ಗೌರಿಬಿದನೂರು ಮುಂತಾದ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿ ಅಪಾರ ಜನಮನ್ನಣೆಯನ್ನು ಗಳಿಸಿಕೊಂಡಿದ್ದಾರೆ.
     ಈ ಸಾಧಕರಿಗೆ ರಾಜ್ಯ ಮಟ್ಟದ *ಕಾವ್ಯ ಚಿಂತಾಮಣಿ*, ಜಿಲ್ಲಾ ಮಟ್ಟದ *ಅತ್ಯುತ್ತಮ ಶಿಕ್ಷಕ ಪ್ರಶಸ್ತಿ*, ಕೇಂದ್ರ ಸಾಹಿತ್ಯ ವೇದಿಕೆಯಿಂದ ರಾಜ್ಯ ಮಟ್ಟದ ಸಂಘಟನಾ ಚತುರ*, ರೋಟರಿ ಕ್ಲಬ್ ನಿಂದ ನೇಷನ್ ಬಿಲ್ಡರ್*  ಪ್ರಶಸ್ತಿ ಮುಂತಾದವು ಸಂದಿವೆ.

ಇನ್ನು ಸನ್ಮಾನದ ವಿಚಾರಕ್ಕೆ ಬಂದರಂತೂ ಅಪಾರ ಸಂಖ್ಯೆಯ ಗೌರವ ಸನ್ಮಾನಗಳು ಶ್ರೀಯುತರನ್ನು ಅರಸಿ ಬಂದಿವೆ, ಪ್ರಮುಖವಾದವುಗಳೆಂದರೆ *ಬಿ ಎಂ ಕೆ ಸಿ ಕಬ್ಬಡಿ ಕ್ಲಬ್* ಗೌರೀಬಿದನೂರು, *ಸಾಹಿತ್ಯ ಪರಿಷತ್* ಗೌರಿಬಿದನೂರು, *ಲಯನ್ಸ್ ಕ್ಲಬ್* ಗೌರಿಬಿದನೂರು, *ಶಾರದಾ ದೇವಿ ರಾಮಕೃಷ್ಣ ಶಾಲೆ* ಗೌರಿಬಿದನೂರು, *ಬಿಜಿಎಸ್ ಶಾಲೆ ಅಲೀಪುರ*, *ಪಾಂಚಜನ್ಯ ಟ್ರಸ್ಟ್ ಗೌರಿಬಿದನೂರು*, ಸಿದ್ಧ ಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರಿಂದ ಶ್ರೀಯುತರ ಸಾಧನೆಗೆ ಗೌರವ ಸನ್ಮಾನಗಳು ಸಂದಿವೆ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ.
     ಶ್ರೀಯುತರ ಶೈಕ್ಷಣಿಕ ಸಾಧನೆಯ ಕಡೆಗೆ ಗಮನ ಹರಿಸಿದಾಗ  ಮೇಲೆ ತಿಳಿಸಿದಂತೆ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿ, ದೀಕ್ಷಾ ಪೋರ್ಟಲ್ ನಲ್ಲಿ ೨೧ ಡಿಜಿಟಲ್ ಸಂಪನ್ಮೂಲ ರಚಿಸಿದ್ದಾರೆ. ಇದು ದೇಶದಾದ್ಯಂತ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ‌. ಶಾಲೆಯಲ್ಲಿ ಕಂಪ್ಯೂಟರ್ ಪ್ರೊಜೆಕ್ಟರ್ ಆಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
  ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿಕ್ಕ ಚಿಕ್ಕ ವೀಡಿಯೋಗಳನ್ನು ಮಾಡಿ ಮಕ್ಕಳಿಗೆ ಹಂಚಿ ಕಲಿಕೆ ನಿರಂತರವಾಗಿ ನಡೆಯುವತ್ತ ಕಾಳಜಿ ವಹಿಸಿರುತ್ತಾರೆ.
ಇದೆಲ್ಲಕಿಂತ ಹೆಚ್ಚಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಸಂದೇಹಗಳನ್ನು  ನಿವಾರಿಸಲು  ಜಿಲ್ಲಾ ಹಂತದ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿಯಾಗಿರುತ್ತಾರೆ. ಅದಕ್ಕಾಗಿ ಸಿ ಜಿ ವೆಂ ರವರಿಗೆ ಹೃನ್ಮನದ ಅಭಿನಂದನೆಗಳು. ಜೊತೆಗೆ ದೂರದರ್ಶನದ ನೇರಪ್ರಸಾರದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.
     ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಹುದುಗಿರುವ ಅದಮ್ಯ ಪ್ರತಿಭೆಗಳನ್ನು ಹೆಕ್ಕಿ ಹೊರತರುವ ನಿಟ್ಟಿನಲ್ಲಿ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ತಮ್ಮ ಶಾಲೆಯಲ್ಲಿ *ಭಿತ್ತಿ ಪತ್ರಿಕೆ*ಯನ್ನು ಪ್ರಾರಂಭಿಸಿ ಮಕ್ಕಳಿಂದಲೇ *ಕಥೆ, ಕವನ, ಹನಿಗವನ* ಬರೆಯಿಸಿ ತಿದ್ದಿ ಪ್ರೇರೇಪಿಸುವ ಮಹತ್ಕಾರ್ಯ ಮಾಡುತ್ತಾ ಬರುತ್ತಿದ್ದಾರೆ.

    ಇಂತಹ ಸಾಧಕರು ನಮ್ಮ ಶುದ್ಧ ಸಾಹಿತ್ಯ ಬಳಗದಲ್ಲಿ ಇರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯ ವಿಚಾರವಾಗಿದೆ. ಇಂತಹ ಮಹನೀಯರನ್ನು *ನಾವು- ನಮ್ಮವರು* ಮಾಲಿಕೆಯಲ್ಲಿ ಅವರ ಸಾಧನೆಯನ್ನು ಪರಿಚಯ ಮಾಡಿಕೊಡುತ್ತಿರುವುದು ನಮಗೆ ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಸಾಧನೆ ಜಗದೆತ್ತರಕ್ಕೆ ಏರಿ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಲಿ ಎಂಬ ಹಾರೈಕೆಯೊಂದಿಗೆ ಇಂದಿಗೆ ಮಾಲಿಕೆಗೆ  ವಿರಾಮ ಹಾಕುತ್ತಿದ್ದೇನೆ.

ನಾಳೆ ಮತ್ತೊಬ್ಬ ಸಾಧಕರ ವಿವರದೊಂದಿಗೆ ನಿಮ್ಮ ಮುಂದೆ ಬರುವೆ

ಇಂತಿ

ಅಗ್ರಹಾರಪ್ರಶಾಂತ್