This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
30 ಜನವರಿ 2022
29 ಜನವರಿ 2022
ಉದಕದೊಳಗಿನ ಕಿಚ್ಚು ಭಾಗ . ೧೬
ಜೀತ ಮುಕ್ತ
"ಏನ್ ರಂಗಮ್ಮ ಇಷ್ಟು ದೂರ ಬಂದ್ ಬಿಟ್ಟೆ ಹೇಳ್ಕಳಿಸಿದ್ದರೆ ನಾನೆ ಬರ್ತಿದ್ದೆ ನಿಮ್ಮ ಮನೆ ಹತ್ರ" ಸಿಟ್ಟು ಅಸಹನೆ ಮತ್ತು ವ್ಯಂಗ್ಯಭರಿತವಾಗಿ ಮುಕುಂದಯ್ಯ ಮಾತನಾಡಿದಾಗ
" ಏ ಬಿಡ್ತು ಅನ್ ಸ್ವಾಮಿ ಅದ್ಯಾಕೆ ಅಂಗ್ ಮಾತಾಡ್ತಿರಾ? ನೀವು ನಮ್ ಗೌಡ್ರು ನಾವು ನಿಮ್ಮ ಮನೆತಾಕ ಬರಬೇಕೆ ವಿನಾ ನಮ್ಮಂತ ಕೀಳು ಜನದ್ ಮನೆಗೆ ನೀವು ಬರಬಾರದು". ಅಂದರು ರಂಗಮ್ಮ
" ಇಲ್ಲ ರಂಗಮ್ಮ ನಿಮ್ಗೆ ದೊಡ್ ದೊಡ್ ಜನ ಗೊತ್ತು ನಾವು ಈ ಹಳ್ಳಿ ಚಿಕ್ಕ ಜನ ಕಣವ್ವ,ನಿಮಿಗೆ ಹಿರಿಯೂರು, ಡೆಲ್ಲಿ,ಜನ ಗೊತ್ತು ನಮಗ್ಯಾರು ಗೊತ್ತು " ಮುಕುಂದಯ್ಯ ಮಾತು ಮುಂದುವರೆಸಿದರು .
ರಂಗಮ್ಮನಿಗೆ ಈಗ ಎಲ್ಲಾ ಅರ್ಥವಾಗಿತ್ತು.
ಅಂದು ಒತ್ತಾರೆ ಹಟ್ಟಿಯಲ್ಲಿ ಊಟ ಮಾಡಿ ಅವರವರ ಪಾಡಿಗೆ ಮೇಲ್ವರ್ಗದ ಜನರ ಹೊಲಗಳಿಗೆ ಕೆಲಸಕ್ಕೆ ಹೊರಡುವ ವೇಳೆಗೆ ಮೂರ್ನಾಲ್ಕು ಜನ ಪ್ಯಾಂಟ್, ಶರ್ಟ್ದಾರಿಗಳು ಹಟ್ಟಿಗೆ ಬಂದರು. ಎಲ್ಲರೂ ಅವರನ್ನೇ ನೋಡುತ್ತಿದ್ದಂತೆ ಪಾತಲಿಂಗಪ್ಪನ ಹತ್ತಿರ ಬಂದು ಪರಿಚಯ ಮಾಡಿಕೊಂಡರು ನಾವು ಭೀಮಸೇನೆ ಕಡೆಯಿಂದ ಬಂದಿದ್ದೇವೆ .ನಮ್ಮದು ಹಿರಿಯೂರು .ನಾವು ಬಂದ ಉದ್ದೇಶ ನಿಮ್ಮ ಹಟ್ಟಿನಲ್ಲಿ ಮತ್ತು ನಿಮ್ಮ ಊರಲ್ಲಿ ನಮ್ಮ ಜನಕ್ಕೆ ಏನಾದರೂ ತೊಂದರೆ ಇದೆಯಾ ಅಂತ ಕೇಳೋಕೆ ಬಂದಿದೀವಿ .
ಅಂದರೆ ಜೀತ ,ಯಾರ ಮನೇಲಾದ್ರು ಸಂಬಳಕ್ಕೆ ಇರೋದು ,ನಿಮಗೆ ಬಾವಿ ನೀರು ಕೊಡದೆ ಇರೋದು ಇತ್ಯಾದಿ....
" ಅಂತದ್ದೇನೂ ಇಲ್ಲ ನಮ್ ಹಟ್ಟಿ ಹುಡುಗ್ರು ಒಂದು ಐದಾರು ಗೌಡರ ಮನೇಲಿ ಸಂಬಳಕ್ಕೆ ಅದವೆ ಅಷ್ಟೇ " ಬಾಯಿ ಬಿಟ್ಟ ಪಾತಲಿಂಗಪ್ಪ.
ಯಾರ ಮನೆಯಲ್ಲಿ ಯಾರು ಜೀತಕ್ಕೆ ಇದ್ದಾರೆ ? ಅವರ ವಿಳಾಸ ಪಡೆದು ಕೊಳ್ಳುವ ವೇಳೆಗೆ ಹಟ್ಟಿ ಜನ ಕುತೂಹಲದಿಂದ ಗುಂಪುಗೂಡಿದರು ಆಗ ಕೆಂಪು ಅಂಗಿ ಧರಿಸಿದ ಕಪ್ಪನೆಯ ದಪ್ಪನೆಯ ವ್ಯಕ್ತಿ ಮಾತನಾಡಲು ಶುರು ಮಾಡಿದರು .
"ನೋಡಿ ಬಂಧುಗಳೆ ಜೀತಪದ್ದತಿ ಅಮಾನವೀಯ ಪದ್ದತಿ ಇದನ್ನು ಕೇಂದ್ರ ಸರ್ಕಾರ ೧೯೭೬ ನೇ ಇಸವಿಯಲ್ಲಿ ನಿಷೇಧ ಮಾಡಿ ಕಾನೂನು ಮಾಡಿದೆ .ಯಾರಾದರೂ ನಮ್ಮ ಜನಾನಾ ಜೀತಕ್ಕೆ ಇಟ್ಟುಕೊಂಡರೆ ಅವರಿಗೆ ಭಾರತೀಯ ದಂಡಸಂಹಿತೆ
೩೭೦ ರ ಪ್ರಕಾರ ಶಿಕ್ಷೆ ಆಗುತ್ತದೆ. ಅವರನ್ನು ಜೈಲಿಗೆ ಕಳಿಸಬಹುದು."
ಜೈಲು ಅಂದ ತಕ್ಷಣ ಮೂರ್ನಾಕು ಜನ ಗುಂಪಿನಿಂದ ಮೆಲ್ಲಗೆ ನಡೆದು ಹೊರಟರು .
"ಜೀತಕ್ಕಿಟ್ಟುಕೊಂಡ ವ್ಯಕ್ತಿಗೆ ಗರಿಷ್ಠ ಮೂರುವರ್ಷ ಜೈಲು ಮತ್ತು ಎರಡು ಸಾವಿರ ದಂಡ ವಿಧಿಸಬಹುದು. ನೀವು ಈ ವಿಷಯ ತಿಳಿದು ಯಾರನ್ನು ಜೀತಕ್ಕೆ ಇಡಬಾರದು" .
ಹೀಗೆ ಆ ವ್ಯಕ್ತಿ ಮಾತು ಮುಗಿಸುವ ವೇಳೆಗೆ ಅವರ ಮುಂದೆ ಇದ್ದವನು ಪಾತಲಿಂಗಪ್ಪ ಮಾತ್ರ.
ಜೀತಕ್ಕೆ ಇಟ್ಟುಕೊಂಡು ಎಲ್ಲಾ ಮನೆಗೆ ಭೇಟಿ ನೀಡಿದಂತೆ ಮುಕುಂದಯ್ಯ ರವರ ಮನೆಗೂ ಆ ತಂಡ ಭೇಟಿ ನೀಡಿತು
" ಏನ್ ಸಾರ್ ನಮ್ಮ ಹುಡುಗುನ್ನ ಜೀತಕ್ಕೆ ಇಟ್ಟುಕೊಂಡಿದ್ದೀರಂತೆ ಇದು ಕಾನೂನು ಪ್ರಕಾರ ತಪ್ಪು ಅಲ್ವ ?" ಕೇಳಿದ ಹಿರಿಯೂರು ವ್ಯಕ್ತಿ.
" ನಾನೂ ಎಸ್ಸೆಲ್ಸಿ ಓದಿದಿನಿ .ನನಗೂ ಕಾನೂನು ಗೊತ್ತು ಈಗ ಏನ್ ಆಗ್ಬೇಕು ಹೇಳ್ರಿ?"
"ಅದೇ ನಮ್ಮ ಗುರುಸಿದ್ದನ ಜೀತ ಮುಕ್ತ ಮಾಡಿ".
"ನೋಡಿ ನಮಗೇನು ಅವನು ನಮ್ಮ ಮನೇಲಿ ಕೆಲಸ ಮಾಡ್ಲಿ ಅಂತ ಆಸೆ ಇಲ್ಲ. ಅವರಮ್ಮ ನಮ್ಮ ಹತ್ರ ಹದಿನೈದು ಸಾವ್ರ ದುಡ್ ಇಸ್ಕಂಡವ್ರೆ ಅದನ್ನು ಕೊಟ್ಟು ಅವನ್ ಕರ್ಕೊಂಡೋದರೆ ನಂದೇನು ತಕರಾರಿಲ್ಲ ,ಅವನ ಪರವಾಗಿ ಬಂದಿರೂ ನಿಮ್ಮಲ್ಲೆ ಯಾರಾದ್ರೂ ಕೊಟ್ಟರೂ ಒಕೆ " ಅನ್ನುತ್ತಿದ್ದಂತೆ ಅವರವರೆ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ,
" ಸರಿ ಸರ್ ಅದಷ್ಟು ಬೇಗ ಅವನನ್ನು ಜೀತ ಮುಕ್ತ ಮಾಡಿ' ಎಂದು ಹೊರಟು ಹೋದರು .
ಅಂದಿನಿಂದ ಮುಕುಂದಯ್ಯ ಕುದಿಯುತ್ತಿದ್ದರು ಇಂದು ರಂಗಮ್ಮ ಬಂದಾಗ ಸ್ವಲ್ಪ ಖಾರವಾಗೇ ಮಾತನಾಡಿದರು.
" ಸಅ್ವಾಮಿಂದರು... ಅವರಿಗೆ ನಾವೇನೂ ಹೇಳ್ಲಿಲ್ಲ ಆ ಪಾತಲಿಂಗನೆ ಹೇಳಿದ್ದು ಇದರಲ್ಲಿ ನಂದೇನು ತಪ್ಪಿಲ್ಲ ಗೌಡ, "
ಆತು ಆ ಪಾತಲಿಂಗ, ಮತ್ತು ಹಿರಿಯೂರು ಜನದತ್ರ ದುಡ್ ತಂದು ನಿನ್ ಮಗನ್ನ ಕರ್ಕೊಂಡು ಹೋಗವ್ವ ನಿಮ್ ಸಹವಾಸ ಸಾಕು ಬಡ್ಡಿ ಬ್ಯಾಡ ಬರಿ ಅಸಲು ಸಾಕು.
ನಿನ್ ಮಗ ಒಳ್ಳೆ ನರಪೇತಲ ನಾರಾಯಣ ಇದ್ದಂಗೈದಾನೆ ಅವ್ನು ಕೆಲ್ಸ ಮಾಡೋದು ಆಟ್ರಾಗೆ ಐತೆ ,ಯಾವಾಗಲೂ ಕೆಮ್ತಿರ್ತಾನೆ ಕರ್ಕೊಂಡು ಹೋಗು ನಿನ್ ಮಗನ್ನ" ರೇಗಿದರು ಮುಕುಂದಯ್ಯ.
"ನಾನ್ ಏನ್ ತಪ್ ಮಾಡ್ದೆ ಅಂತ ನನ್ ಮ್ಯಾಲೆ ರೇಗ್ತಿಯಾ ಗೌಡ "ಎಂದು ಕಣ್ಣಲ್ಲಿ ನೀರು ಹಾಕುತ್ತಾ ಅವನ್ ಕೆಮ್ಮು ಜಾಸ್ತಿ ಆಗೈತೆ ಒಂದ್ ತಿಂಗಳಿಂದ ಗೊರ ಗೊರ ಒಳ್ಳೆ ದನ ಕೆಮ್ಮಿದಂಗೆ ಕೆಮ್ತಾನೆ ,ಅವನ್ ಆಸ್ಪತ್ರೆಗೆ ತೋರ್ಸಿ ಗೌಡ"
"ಅವರ್ಯಾರೋ ಬಂದಿದ್ರಲ್ಲ ಅವರ ಜೊತಿಗ್ ಆಸ್ಪತ್ರೆಗೆ ಕಳಸ್ಬೇಕಾಗಿತ್ತು" ಮತ್ತೆ ಕುಟುಕಿದರು ಮುಕುಂದಯ್ಯ.
"ಸಾಕ್ ಬಿಡೋ ಮುಕುಂದ ಅವಳ್ಗೇನೂ ಗೊತ್ತಿಲ್ಲ ಅಂದ್ಳಲ್ಲ ಬಿಡು ,ನಾನು ನೋಡಿದಿನಿ ಆ ಹುಡುಗ ದಿನಾ ಕೆಮ್ಮುತ್ತೆ ಪಾಪ ....ನಾಳೆ ಅವುನ್ನ ಆಸ್ಪತ್ರೆಗೆ ತೋರ್ಸು ಅಷ್ಟೇ" ಆದೇಶ ಮಾಡಿದರು ಸರಸ್ವತಜ್ಜಿ.
ಮುಕುಂದಯ್ಯ ಮಾತನಾಡದೆ ಸುಮ್ಮನಾದರು ರಂಗಮ್ಮ ಕಣ್ಣಲ್ಲಿ ನೀರು ಹಾಕತ್ತ ಎದ್ದು ಹೊರಡಲು ಸಿದ್ದವಾಗುವಾಗ
"ಏ ರಂಗವ್ವ ತಟ್ಟೆ ತಗಾ ಅರ್ದಾಂಬ್ರ ಮುದ್ದೆ ಉಂಡೋಗು" ಅಂದರು ಯಜಮನಿ .
ತಟ್ಟೆಗೆ ಹುಡುಕಾಡಿದಳು ಈ ಹುಡ್ಗ ಅದೆಲ್ಲಿ ಇಕ್ಕೆದಾನೋ ತಟ್ಟೆನ,ಹಾ.. ಚೆಂಬು ಸಿಕ್ತು ಎಂದು ಮನದಲ್ಲೇ ಅಂದುಕೊಂಡು ಕೈತೊಳೆದುಕೊಂಡು ಊಟಕ್ಕೆ ಕುಂತರು ರಂಗಮ್ಮ
"ಅಂಗೆ ಕೈಯಾಕೆ ಕೊಡಮ್ಮ ಮುದ್ದೆನಾ"
"ಅಂಗೆ ಎಂಗ್ ಉಂಬ್ತಿಯ " ಕೇಳಿದರು ತಿಮ್ಮಕ್ಕ .
" ನೀನು ಕೊಡಮ್ಮ ಎಂದಾಗ ಮೇಲಿಂದ ತಿಮ್ಮಕ್ಕ ಮುದ್ದೆಯನ್ನು ಹಾಕಿದರು ,ರಂಗಮ್ಮ ಆ ಮುದ್ದೆಯ ಮೇಲೆ ಚಿಕ್ಕ ಗುಂಡಿ ಮಾಡಿಕೊಂಡು "ಹುಂ ...ಇದರಾಕೆ ಸಾರು ಹಾಕವ್ವ" ಎಂದಾಗ ಸ್ವಲ್ಪ ಸ್ವಲ್ಪ ಸಾರು ಹಾಕಿಸಿಕೊಂಡು ಮುದ್ದೆ ಸಾರು ತಿನ್ನಲು ಪ್ರಯತ್ನ ಪಟ್ಟರೂ ಮುದ್ದೆ ಹೊಟ್ಟೆಗೆ ಇಳಿಯಲು ಬಹು ಕಾಲ ಬೇಕಾಯಿತು.
****************************
ನೀನು ಸ್ವಲ್ಪ ಹೊತ್ತು ಹೊರಗೆ ಇರಪ್ಪ ಅಮೇಲೆ ಕರೀತೆನೆ ಎಂದು ಗುರುಸಿದ್ದನಿಗೆ ಹೇಳಿ
" ನೋಡಿ ಇವ್ರೆ ಈ ಹುಡುಗನ ಕಫ ಪರೀಕ್ಷೆ ಮಾಡಿದಾಗ ಇವನಿಗೆ ಟಿ. ಬಿ. ಅಂದರೆ ಟುಬಾರ್ಕುಲಾಸಿಸ್ ಕಾಯಿಲೆ ಇದೆ ಇದಕ್ಕೆ ಸರಿಯಾದ ಟ್ರೀಟ್ಮೆಂಟ್ ಕೊಟ್ಟರೆ ಜೀವಕ್ಕೆ ಅಪಯವಿಲ್ಲ .ಒಳ್ಳೆ ಪೌಷ್ಟಿಕಾಹಾರ ತಿಂದರೆ ಬೇಗ ಗುಣಮುಖ ಆಗಬಹುದು " ಡಾ. ಹರೀಶ್ ರವರು ಹೇಳುತ್ತಲೆ ಇದ್ದರು
" ಎಷ್ಟು ದಿನಕ್ಕೆ ಇದು ವಾಸಿಯಾಗುತ್ತೆ ಡಾಕ್ಟರ್ ? " ಪ್ರಶ್ನೆ ಮಾಡಿದರು ಮುಕುಂದಯ್ಯ.
" ನೋಡಿ ನೀವು ಸರಿಯಾದ ಸಮಯಕ್ಕೆ ಕರೆದುಕೊಂಡು ಬಂದಿದೀರಾ ಈಗ ಟ್ರೀಟ್ಮೆಂಟ್ ಶುರು ಮಾಡಿದರೆ ಮೊದಲನೇ ಕೋರ್ಸ್ ಮುಗಿಯೋದಕ್ಕೆ ೬ ರಿಂದ ೯ ತಿಂಗಳು ಆಗಬಹುದು .
ಬೇಗ ವಾಸಿಯಾಗಲಿಲ್ಲ ಅಂದರೆ ೧೮ ತಿಂಗಳ ತನಕ ಆಗಬಹುದು.ಕೆಲವೊಮ್ಮೆ ೨೪ ರಿಂದ ೨೭ ತಿಂಗಳಾದರೂ ಆಗಬಹುದು ಗುಣ ಅಗೋದಕ್ಕೆ.
" ಎಲ್ಲಾ ಎಷ್ಟು ಖರ್ಚಾಗುತ್ತದೆ ಡಾಕ್ಟರ್? "
"ಮಾತ್ರೆಗಳು ಸರ್ಕಾರದಿಂದ ಉಚಿತ ಚಿಕಿತ್ಸೆ ಉಚಿತ ಇದಕ್ಕೇನೂ ಖರ್ಚಾಗಲ್ಲ ಸರಿಯಾಗಿ ಮಾತ್ರೆ ನುಂಗಬೇಕು ನಾವ್ ಹೇಳಿದ್ದು ಮಾಡಬೇಕು ಅಷ್ಟೇ"
" ಇವನಿಂದ ಈ ಕಾಯಿಲೆ ಬೇರೆಯವರಿಗೆ ಹರಡುತ್ತಾ ಡಾಕ್ಟರ್ "
"ಇವನು ಕೆಮ್ಮುವಾಗ ಅಡ್ಡ ಬಟ್ಟೆ ಇಟ್ಟುಕೊಂಡರೆ, ತೊಂದರೆ ಇಲ್ಲ ಇಲ್ಲವಾದರೆ ಬೇರೆಯವರಿಗೆ ಹರಡಬಹುದು. ಬೇರೆ ಬಟ್ಟೆ , ಬೇರೆ ತಟ್ಟೆ ಲೋಟ ಬಳಸಿದರೆ ಒಳಿತು. ಹಾಗಾದರೆ ಟ್ರೀಟ್ಮೆಂಟ್ ಕೋರ್ಸ ಶುರು ಮಾಡಲೆ? ಎಂದು ಕೇಳಿದರು ಡಾಕ್ಟರ್ .
"ಆಗಲಿ ಮಾಡಿ ಡಾಕ್ಟರ್" ಎಂದರು ಮುಕುಂದಯ್ಯ.
ಒಂದು ಇಂಜೆಕ್ಷನ್ ಮಾಡಿ ಒಂದು ತಿಂಗಳಿಗಾಗುವಷ್ಟು ಎರಡು ಮೂರು ಬಣ್ಣದ ರಾಶಿ ಮಾತ್ರೆ ಕೊಟ್ಟರು .ಡಾಕ್ಟರ್ ಗೆ ಮುಕುಂದಯ್ಯ ಹತ್ತು ರೂ ಕೊಡಲು ಮುಂದಾದರು "ಯಾಕೆ ದುಡ್ ಕೊಡ್ತೀರಾ? ಇದು ಸರ್ಕಾರಿ ಆಸ್ಪತ್ರೆ ನನಗೆ ಸರ್ಕಾರ ಸಂಬಳ ಕೊಡುತ್ತೆ ಬೇಡ ನಡಿರಿ ಆ ಹುಡುಗನಿಗೆ ಬ್ರೆಡ್ ಅಥವಾ ಬಿಸ್ಕತ್ತು ಕೊಡಿಸಿ" ಎಂದು ಬೇರೆ ರೋಗಿಗಳ ತಪಾಸಣೆ ಮಾಡಲು ಡಾ.ಹರೀಶ್ ಹೊರಟರು.
ಇಂತಹ ಡಾಕ್ಟರ್ ಇರ್ತಾರಾ ಎಂದು ಮುಕುಂದಯ್ಯ ಮನದಲ್ಲೇ ಅವರಿಗೆ ವಂದಿಸಿ ಆಸ್ಪತ್ರೆಯಿಂದ ಮನೆಗೆ ಬರುವವರೆಗೆ ಏನೋನೋ ಯೋಜನೆ ಯೋಚನೆ ಹಾಕುತ್ತಿದ್ದು. ಗುರುಸಿದ್ದನಿಗೆ ಈಗ ಈ ಕಾಯಿಲೆ ಬಂದಿದೆ ಇವನು ನಮ್ಮನೇಲಿ ಇದ್ದರೆ ನಮಗೆ ರೋಗ ಬಂದರೆ? ಇವನು ಕೆಲಸ ಮಾಡೋದು ಅಷ್ಟಕ್ಕಷ್ಟೆ ಸುಮ್ಮನೆ ಅವರಮ್ಮನ ಬಳಿ ದುಡ್ ಇಸ್ಕಂಡು ಇವನ ಕಳಿಸಿಬಿಡೋಣ ಎಂದು ಮನದಲ್ಲೇ ಲೆಕ್ಕಾಚಾರ ಹಾಕಿದ .
ಬೆಳಿಗ್ಗೆ ಒಂಭತ್ತು ಗಂಟೆಗೆ ಹೋದವರು ಮಟ ಮಟ ಮಧ್ಯಾಹ್ನ ಹೊತ್ತಾದರೂ ಬರಲಿಲ್ಲ ಎಂದು ರಂಗಮ್ಮ ದೊಡ್ಡಪ್ಪಗಳ ಮನೆಯ ಚಪ್ಪರದ ಕೆಳಗೆ ಗೂನು ಬೆನ್ನು ಹೊತ್ತು ಅತ್ತಿಂದಿತ್ತ ಓಡಾಡುತ್ತಿದ್ದರು.
" ಏ ಕುತ್ಕ ಬಾರೆ ರಂಗವ್ವ ಅದ್ಯಾಕಂಗೆ ಯೋಚ್ನೆ ಮಾಡ್ತಿಯಾ ? ಏನ್ ನಿನ್ ಮಗ ಒಬ್ನೆ ಹೋಗೆದಾನಾ? ಮುಕುಂದ ಹೋಗಿಲ್ವ? ಅಲ್ಲೇನು ರಷ್ ಇತ್ತೇನೊ ಡಾಕ್ಟರ್ ಸಿಕ್ಕಿದರೊ ಇಲ್ವೋ ಬಾ ಕುತ್ಕ." ಎಂದು ಸರಸ್ವತಜ್ಜಿ ಗದರಿದರು.
ಮಗನನ್ನು ಕನ್ನಡಕದಲ್ಲೆ ದೂರದಿಂದ ಗುರ್ತಿಸಿದ ಹೆತ್ತ ಕರುಳು ಸ್ವಲ್ಪ ಸಮಾಧಾನಗೊಂಡಿತು ಹತ್ತಿರ ಬರುತ್ತಲೆ ಏನಂತೆ ಗೌಡ? ಡಾಕ್ಟರು ಏನ್ ಅಂದ್ರು ?ಮಗನ ಮೈದಡವುತ್ತಾ ಕೇಳಿದಳು ರಂಗಮ್ಮ
"ಇವನಿಗೆ ಟಿ ಬಿ ಅಂತೆ ಕಣಮ್ಮ " ಅಂದ ತಕ್ಷಣವೇ ರಂಗಮ್ಮ ಜೋರಾಗಿ ಅಳಲು ಶುರುಮಾಡಿದರು. "ಮೊನ್ನೆ ಹರ್ತಿಕೋಟ್ಯಾಗೆ ನಮ್ಮೋರು ಒಬ್ಬರು ಟಿ ಬಿ ಬಂದು ಸತ್ರು ನನ್ ಮಗ ಉಳಿಯಲ್ಲ ಅಯ್ಯೋ ದೇವ್ರೆ ಅವ್ರುನ್ನೂ ಕಿತ್ಗೊಂಡೆ .ಈಗ ಇವನು? ನಾನೇ ಮೊದ್ಲು ಹೋಗ್ಬೇಕಾಗಿತ್ತು ಇದನ್ನೆಲ್ಲಾ ನೊಡಕೆ ಉಳಿಸಿದ್ಯೇನಪ್ಪ ಶಿವ" ಎಂದು ಎದೆ ಬಡಿದುಕೊಂಡು ಅಳಲಾರಂಭಿಸಿದರು. ಅಮ್ಮ ಅಳುವುದ ಕಂಡು ಕೆಮ್ಮುತ್ತಲೆ ಅಳಲಾರಂಬಿಸಿದ ಗುರುಸಿದ್ದ ಇಡಿ ವಾತಾವರಣ ದುಃಖದಿಂದ ಕೂಡಿತ್ತು.
"ಯೋ ರಂಗವ್ವ ಸಾಕು ನಿಲ್ಸು ಅಳೋದನ್ನ
ಡಾಕ್ಟರ್ ಹೇಳಿದಾರೆ ಸರಿಯಾಗಿ ಮಾತ್ರೆ ತಗಂಡರೆ ಏನೂ ತೊಂದ್ರೆ ಇಲ್ವಂತೆ ತಕ ಈ ಮಾತ್ರೆ ಒಂದು ತಿಂಗಳಿಗೆ ಆಗುತ್ತೆ, ಎಂದು ಮಾತ್ರೆ ರಂಗಮ್ಮನ ಕೈಗೆ ಕೊಟ್ಟು
" ನೋಡು ರಂಗಮ್ಮ ನಿಮ್ ಕಡೇರು ಹಿರಿಯೂರುನಿಂದ ಬಂದು ಇವನ್ನ ಜೀತ ಬಿಡಿಸಿ ಅಂದರು ಅದೇ ಟೈಮ್ಗೆ ಇವನಿಗೆ ಆರೋಗ್ಯ ಬ್ಯಾರೆ ಸರಿ ಇಲ್ಲ .ಇಲ್ಲಿ ಇನ್ನೇನ್ ಕೆಲ್ಸ ಮಾಡ್ತಾನೆ ?ನಿನ್ ಮಗನ್ನ ನಿನ್ ಮನೆಗೆ ಕರ್ಕೊಂಡು ಹೋಗು. ಮುಂದಿನ ವಾರ ನಮ್ ದುಡ್ಡು ತಂದು ಕೊಡು "
ಮತ್ತೆ ಅಳುತ್ತಾ " ಎಲೈತೆ ಸಾಮಿ ದುಡ್ಡು "
" ನಿಮ್ ದರಖಾಸ್ತ್ ಜಮೀನು ನಾಕುಎಕರೆ ಸರ್ಕಾರದವರು ಕೊಟ್ಟ ಜಮೀನು ಮಾರು ಓದೋ ರಂಗಸ್ವಾಮಿ ಕೇಳ್ತಿದ್ದ ನೋಡು "
ಎಂದಾಗ ರಂಗಮ್ಮ ಮಗನ ಆರೋಗ್ಯಕ್ಕಿಂತ ನನಗೆ ಜಮೀನು ಮುಖ್ಯ ಅಲ್ಲ ಜಮೀನು ಮಾರುವೆ ಎಂದು ನಿಶ್ಚಯ ಮಾಡಿಕೊಂಡು ಮಾತ್ರೆ ತೆಗೆದುಕೊಂಡು ಮಗನ ಕರೆದುಕೊಂಡು ಹೊರಟಳು .
ಇದನ್ನು ಕೇಳಿಸಿಕೊಂಡ ಗುರುಸಿದ್ದ ಜೀತಮುಕ್ತನಾಗುತ್ತಿರುವುದಕ್ಕೆ ಮನದಲ್ಲೇ ಸ್ವಲ್ಪ ಸಂತಸವಾದರೂ ಇದ್ಯಾವುದೋ ಟಿ ಬಿ ಕಾಯಿಲೆ ನನಗೆ ಬರಬೇಕೆ ಎಂಬ ದುಃಖ ಆವರಿಸಿತು.
ಗುರುಸಿದ್ದ ಕಡೆಯ ಬಾರಿ ಎಂಬಂತೆ ದೊಡ್ಡಪ್ಪಗಳ ಮನೆ, ದನದ ಅಕ್ಕೆ, ಕಲ್ಲಿನ ಬಾನಿ,ಸಪ್ಪೆ ಕತ್ತರಿಸೋ ಕತ್ತರಿ ,ದನದ ಕಣ್ಣಿಗಳು,ಇಂಡಿ ಚೀಲ, ತೆಂಗಿನ ಗರಿ ಪೊರಕೆ, ಈಚಲ ತೊಟ್ಟಿ, ಗೋಣಿಚೀಲ ,ಇವುಗಳನ್ನು ಮತ್ತೊಮ್ಮೆ ನೋಡಿ ಅಮ್ಮನ ಜೊತೆ ಹೆಜ್ಜೆ ಹಾಕಿದ .
ರಾತ್ರಿ ಮಗನಿಗೆ ಮಾತ್ರೆ ನುಂಗಿಸಿ ಅಂಗಳದಲ್ಲಿ ಮಲಗಿ ನಕ್ಷತ್ರಗಳ ನೋಡುತ್ತಾ ರಂಗಮ್ಮನ ಮನದಲ್ಲಿ ಪ್ರಶ್ನೆಗಳು ಏಳುತ್ತಿದ್ದವು. ದೇವರು ನನ್ನ ಮಗನಿಗೆ ಜೀತ ಮುಕ್ತಿ ಮಾಡಲು ಈ ಕಾಯಿಲೆ ಕೊಟ್ಟನೆ ? ಅಥವಾ ನಮಗಿರುವ ನಾಕೆಕರೆ ಜಮೀನು ನಮ್ಮಿಂದ ಮುಕ್ತಿ ಮಾಡಲು ಈ ರೋಗ ಕೊಟ್ಟನೆ ? ಉತ್ತರ ಹೊಳೆಯದೆ ನಿದ್ರೆ ಬಾರದೆ ಕಣ್ಣು ಬಿಟ್ಟು ಶುಭ್ರವಾದ ಆಗಸವನ್ನು ರಾತ್ರಿ ಹನ್ನೆರಡರವರೆಗೆ ನೋಡುತ್ತಲೇ ಇದ್ದಳು . ನೋಡ ನೋಡುತ್ತಲೇ ಒಂದು ನಕ್ಷತ್ರ ಕಳಚಿಬಿತ್ತು....
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529
27 ಜನವರಿ 2022
ಆವುದು ಘನ ಆವುದು ಕಿರಿದು ಹೇಳಾ?. ವಿಮರ್ಶೆ
ಆವುದು ಘನ. ಆವುದು ಕಿರಿದು ಹೇಳಾ?
ಪುಸ್ತಕ ವಿಮರ್ಶೆ.
ಆತ್ಮೀಯರು ,ಪ್ರಕಾಶಕರು, ನೂರಕ್ಕೂ ಹೆಚ್ಚು ಪುಸ್ತಕಗಳ ಲೇಖಕರಾದ
ಎಂ.ವಿ.ಶಂಕರಾನಂದ ರವರ ಆವುದು ಘನ ಆವುದು ಕಿರಿದು ಹೇಳಾ ಪುಸ್ತಕದಲ್ಲಿ ನಮಗೆ ಐವತ್ತೊಂಭತ್ತು ಸೂಫಿ ಕಥೆಗಳಿವೆ .
ಆ ಎಲ್ಲಾ ಸೂಫಿ ಕಥೆಗಳು ಮಕ್ಕಳಿಂದ ಹಿಡಿದು ವೃದ್ಧ ರವರೆಗೂ ಎಲ್ಲರಿಗೂ ಇಷ್ಟವಾಗುತ್ತವೆ .
ಈ ಕೃತಿಯ ಡಾ.ರವಿಕುಮಾರ್ ನೀಹ ರವರು ಸುಧೀರ್ಘವಾದ ಮುನ್ನುಡಿಯಲ್ಲಿ ಉಲ್ಲೇಖ ಮಾಡಿದಂತೆ ಈ ಸೂಫಿ ಕಥೆಗಳನ್ನು ಓದಿದರೆ ನಮಗೊಂದು ಹೊಳಹು ಮೂಡಿ ಒಂದು ಚಿಂತನೆ ಮೊಳಕೆಯೊಡೆಯುವುದರಲ್ಲಿ ಸಂದೇಹವಿಲ್ಲ.
ಅವರ ಮಾತಿನಲ್ಲೇ ಹೇಳುವುದಾದರೆ ..
ಬದುಕಿನ ಅನಂತ ದರ್ಶನಗಳನ್ನು ಹುಡುಕ ಹೊರಟ ಕಾರಣದಿಂದ ಇಲ್ಲಿನ ಕತೆಗಳಲ್ಲಿ ಇಡೀ ಜೀವಮಂಡಲವೇ ಪಾತ್ರವಾಗಿ ನಿಂತಿವೆ. ಅವು ಪಾತ್ರಗಳು ಎನ್ನುವುದಕ್ಕಿಂತ ಈ ಲೋಕ ತಲುಪಬೇಕಾದ ಮಾನವೀಯ ದರ್ಶನದ ಕಡೆ ಈ ಕತೆಗಳು ಬೆರಳು ತೋರುತ್ತವೆ. ಆ ಕಾರಣದಿಂದ ಈ ಸಂಕಲನದ ತುಂಬಾ ನದಿ, ಮರಳುಭೂಮಿ, ನೆಲ-ಗಾಳಿ, ಮರಳುಗಾಡಿನ ನೀರು, ನೊಣ-ಆನೆ ಸಂಭಾಷಣೆ, ಪ್ರತಿಮೆ, ನಿಧಿ, ಸಾಹುಕಾರನ ಚಿನ್ನದ ನಾಣ್ಯ, ನಡುವಯಸ್ಸಿನ ಹೆಣ್ಣು, ಹಾದಿ ತಪ್ಪಿದ ಮಗ, ರಾಜ-ದರ್ವಸಿ, ಮೂರ್ಖರಾಜ, ಮಸೀದಿ-ಚಪ್ಪಲಿ, ಕಬ್ಬಿಣದ, ದೀಪದ ಕಂಭ, ಮಾಯಾಕನ್ನಡಿ, ಮಾಯಾಭಟ್ಟಲು, ಮಾರಿ ಮುಖವಾಡ, ಮಂತ್ರದಂಡ, ವಿದ್ಯೆ-ಆಹಾರ, ಕತ್ತೆಗಳು, ನಾಯಿ, ಉಡುಪು, ಮೂತ್ರ, ಮರಜೇನು, ನೆಲದೊಳಗಿನ ಮೊರೆತ ಇರುವೆ-ಚಿನ್ನದ ನಾಣ್ಯ, ಮೀನು-ವಜ್ರ, ಮೀನುಗಾರ ರೈತ, ವ್ಯಾಪಾರಿ, ಸನ್ಯಾಸಿ, ಹಕ್ಕಿ, ಬೆಕ್ಕು, ನಾಯಿ, ಹೀಗೆ ಬಹುಪಾತ್ರಗಳು ಇಲ್ಲಿಲ್ಲ ಹರಡಿಕೊಂಡಿವೆ. ಇವೆಲ್ಲವೂ ಜನಸಾಮಾನ್ಯರ ನಡುವಿನಲ್ಲೇ ಇರುವಂಥವು. ತಮ್ಮ ಸುತ್ತಲೇ ಇರುವ ಸಂಗತಿಗಳ ಜತೆಯೇ ಬದುಕಿನ ದರ್ಶನ ಮಾಡಿಸುವುದು ಈ ಕತೆಗಳ ವೈಶಿಷ್ಟ್ಯ ಆ ಕಾರಣದಿಂದ ಕೇವಲ ತಾತ್ವಿಕತೆಗಳೆಂಬ ಕಬ್ಬಿಣದ ಕಡಲೆಗಳು ಜನರನ್ನು ತಲುಪಲು ಏದುಸಿರುಬಿಡುತ್ತಿವೆ. ಜನರ ನಡುವಿನಿಂದಲೇ ಹುಟ್ಟಿದವು ಸಹಜ ಉಸಿರಾಟದಿಂದ ಓಡಾಡಿಕೊಂಡಿರುತ್ತವೆ ಎಂಬುದನ್ನು ಈ ಕತೆಗಳು ಅಂತರ್ಯದಲ್ಲಿ ಧರಿಸಿರುವ ನೆಲೆಗಳು.
ಶಂಕರಾನಂದ ರವರು ಇಡೀ ಸೂಫಿಯನ್ನು ನಮ್ಮ ಶರಣ ಪರಂಪರೆಗೆ ಅನ್ವಯಿಸಿರುವುದು ವಿಶೇಷವಾಗಿದೆ. ಮತ್ತು ಸರಿಯಾಗಿಯೇ ಇದೆ. ಇಲ್ಲಿನ ಪ್ರತಿ ಕತೆಗಳಿಗೂ ಶರಣರ ವಚನಗಳ ಸಾಲನ್ನೇ ಶೀರ್ಷಿಕೆಯನ್ನಾಗಿ ಇಟ್ಟಿರುವುದು ಅಧ್ಯಯನಕ್ಕೆ ಹೊಸ ತೋರುಗಲ್ಲಾಗಿದೆ ಎಂದರೆ ತಪ್ಪಾಗಲಾರದು.
ಈ ಕೃತಿಯ ಎಲ್ಲಾ ಕಥೆಗಳು ನನಗೆ ಇಷ್ಟವಾದರೂ ಕೆಲವು ನನ್ನನ್ನು ಬಹಳ ಕಾಡಿದವು ಇನ್ನೂ ಕೆಲವನ್ನು ಪುನಃ ಮನನ ಮಾಡಿಕೊಳ್ಳುತ್ತಿರುವೆ.
"ಅರ್ಥದ ಮೇಲಣ ಆಶೆ " ಎಂಬ ಕಥೆಯಲ್ಲಿ
ಕುರುಡರಾದವರು ಆನೆಯ ಆಕಾರದ ಬಗೆಗಾಗಲೀ ಗಾತ್ರದ ಬಗೆಗಾಗಲಿ
ಯಾವ ಕಲ್ಪನೆಯೂ ಇರದೇ ಆನೆಯನ್ನು ಸಮೀಪಿಸಿ ಕೈಗೆ ತಾಕಿದ ಅದರ ಬೃಹತ್ ದೇಹದ ಅಂಗಾಂಗಗಳ ಮೇಲೆ ಕೈ ಆಡಿಸುತ್ತಾ ಆನೆಯ ಬಗ್ಗೆ ಮಾಹಿತಿಯ ಪಡೆದುಕೊಳ್ಳುವ ಪ್ರಯತ್ನದಲ್ಲಿ ನಿರತರಾದ ಬಗ್ಗೆ ಹೇಳುತ್ತಾ
ತಾವು ಬಿಡಿಬಿಡಿಯಾಗಿ ಮುಟ್ಟಿದ ಅವಯವವೇ ಆನೆ ಎಂಬುದಾಗಿ ಕಲ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತೇ ಹೊರತು ಆ ಎಲ್ಲಾ ಅವಯವಗಳ ಸಮಗ್ರತೆಯಲ್ಲಿ ಮಾತ್ರವೇ ಆನೆ ಎಂಬ ಪರಿಕಲ್ಪನೆ ಇರಲು ಸಾಧ್ಯ ಎಂಬುದನ್ನು ಕಲ್ಪಿಸಿಕೊಳ್ಳುವುದೂ ಅವರಿಗೆ ಸಾಧ್ಯವಿರಲಿಲ್ಲ.
ಜ್ಞಾನವನ್ನು ಅದರ ಅಖಂಡತೆಯಲ್ಲಿ ಕಂಡುಕೊಳ್ಳಲಾರದವರು. ನಾವೂ ಸಹ ಕುರುಡರಂತೆಯೇ ಅಪೂರ್ಣತೆಯನ್ನೇ ಪೂರ್ಣತೆ ಎಂಬ ಭ್ರಮೆಯಲ್ಲಿ ಬದುಕುತ್ತೇವೆ .
ನಮ್ಮ ಅಭಿಪ್ರಾಯಗಳು ಬಿಡಿಯಾಗಿ ಸರಿ,ಒಟ್ಟಾಗಿ ತಪ್ಪು ಆದರೂ ಕೆಲವೊಮ್ಮೆ ನಮ್ಮದೇ ಸರಿ ಎಂದು ವಿತಂಡವಾದ ಮಾಡುವುದನ್ನು ನಿಲ್ಲಿಸುವುದಿಲ್ಲ.
"ಅವಧಿ ಅಳಿಯಿತ್ತು" ಎಂಬ ಕಥೆಯು ಚಿಕ್ಕದಾದರೂ ಬಹುದೊಡ್ಡ ಸಂದೇಶ ನೀಡಿದೆ.
ತನ್ನೆಲ್ಲ ಸಮಸ್ಯೆಗಳು ಬಗೆಹರಿದರೆ ಮನೆಯನ್ನು ಮಾರಿ ಅದರಿಂದ ಬರುವ ಹಣವನ್ನೆಲ್ಲಾ ಬಡಬಗ್ಗರಿಗೆ ದಾನಮಾಡುವುದಾಗಿ ಹರಕೆ ಹೊತ್ತುಕೊಂಡ.
ಸ್ವಲ್ಪ ದಿನಗಳು ಕಳೆಯುವಷ್ಟರಲ್ಲಿ ಅವನ ಸಮಸ್ಯೆಗಳು ಬಗೆಹರಿದವು. ಹರಕೆಯಂತೆ
ನಡೆದುಕೊಳ್ಳಲೇಬೇಕಾದ ವೇಳೆ ಬಂದೊದಗಿತು. ಆದರೆ ಮನೆಯ ಮಾರಾಟದಿಂದ
ಬರುವ ಅಪಾರ ಹಣವನ್ನು ದಾನಮಾಡುವುದೆಂದರೆ ಹೇಗೆ ಎಂಬ ಚಿಂತೆ ಕಾಡತೊಡಗಿತು.
ಒಂದು ಉಪಾಯವನ್ನು ಹುಡುಕಿ ತೆಗೆದ. ಮನೆಗೆ ಒಂದು ಬೆಳ್ಳಿ ನಾಣ್ಯದ ದರವನ್ನು ನಿಗದಿಪಡಿಸಿದ. ಆದರೆ ಮನೆಕೊಳ್ಳುವವನು ಅದರ ಜೊತೆಗೆ ಒಂದು ಬೆಕ್ಕನ್ನು ಕೊಳ್ಳಬೇಕೆಂಬ ಷರತ್ತು ಹಾಕಿದ. ಬೆಕ್ಕಿನ ಬೆಲೆ ಹತ್ತು
ಸಾವಿರ ಬೆಳ್ಳಿ ನಾಣ್ಯಗಳೆಂದು ನಿಗದಿಪಡಿಸಿದ. ಮನೆ ಮತ್ತು ಬೆಕ್ಕು ಷರತ್ತಿನಂತೆ ಜಂಟಿಯಾಗಿ ಮಾರಾಟವಾದುವು. ಆದರೆ ಹರಕೆ ಹೊತ್ತಿದ್ದ ವ್ಯಕ್ತಿಯು ಮನೆಯ ಲೆಕ್ಕದ ಒಂದು ಬೆಳ್ಳಿ ನಾಣ್ಯವನ್ನು ಬಡವನಿಗೆ ದಾನಮಾಡಿ ಬೆಕ್ಕಿನ ಲೆಕ್ಕದ ಹತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು ತಿಜೋರಿಗೆ ತುಂಬಿಕೊಂಡ. ಹರಕೆಯೇನೋ ತೀರಿದಂತಾಯಿತು. ಆದರೆ ಸ್ವಾರ್ಥದ ದೃಷ್ಟಿಯಲ್ಲಿ ಅದನ್ನು ವ್ಯಾಖ್ಯಾನಿಸಿಕೊಂಡು ಅದರಲ್ಲಿಯೂ ಲಾಭಮಾಡಿಕೊಂಡ. ಇಂತಹ ಮನೋಭಾವನೆ ಇರುವ ಜನರು ಸಂಕಟ ಬಂದಾಗ ವೆಂಕಟರಮಣ ಎಂಬುದನ್ನೇ ಮುಂದುವರೆಸುತ್ತಾರೆ.
"ಆವುದು ಘನ, ಆವುದು ಕಿರಿದು ಹೇಳಾ?"ಎಂಬ ಶೀರ್ಷಿಕಾ ಕಥೆಯಲ್ಲಿ ಬರುವ ನೀತಿಯು ಸಾರ್ವಕಾಲಿಕ .ಯಾರು ಭಗವಂತನ ಕರುಣೆಯನ್ನು ಉಪೇಕ್ಷಿಸಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಆಸೆ ಪಡುತ್ತಾರೋ ಅಂತವರಿಗೆ ದುರ್ಗತಿ ತಪ್ಪಿದ್ದಲ್ಲ .
ಇತಿಹಾಸ ಲೇಖಕರು ಆತ್ಮೀಯರೂ ಸಂಘಟಕರೂ ಆದ ಎಂ ಎಚ್ ನಾಗಾರಾಜು ರವರು ಬೆನ್ನುಡಿಯಲ್ಲಿ ಹೇಳಿದಂತೆ ಓದುಗರ ಮನಸ್ಸನ್ನು ಸಮೃದ್ಧಗೊಳಿಸಿರುವ ಶಂಕರಾನಂದ ರವರಿಗೆ ಸಾಹಿತ್ಯದ ರಚನೆ ಮತ್ತು ಭಾಷಾಂತರದ ಕಲೆ ಸಿದ್ಧಿಸಿದೆ. ಯಾವುದೇ ಅಡೆತಡೆ ಇಲ್ಲದೆ ನೀರು ಕುಡಿದಷ್ಟೇ ಸುಲಭವಾಗಿ ಲೀಲಾಜಾಲವಾಗಿ ಭಾಷೆ ಬಳಸುತ್ತಾರೆ. ಮಕ್ಕಳು ಮಾತ್ರವಲ್ಲ ಎಲ್ಲಾ ವಯೋಮಾನದ ಓದುಗರಿಗೂ ಇಲ್ಲಿನ ಕಥೆಗಳು ಋಷಿ ಕೊಡುತ್ತವೆ. ಮುದಗೊಳಿಸುತ್ತವೆ. ಅವರ ಜ್ಞಾನದ ದಿಗಂತವನ್ನು ವಿಸ್ತರಿಸುತ್ತವೆ.ಇದು ನಿಜವೂ ಹೌದು.
ಆದ್ದರಿಂದ ನೀವೂ ಸಹ ಒಮ್ಮೆ ಆವುದು ಘನ ಆವುದು ಕಿರಿದು ಹೇಳಾ? ಪುಸ್ತಕ ಓದಲೇಬೇಕು
ಪುಸ್ತಕ: ಆವುದು ಘನ ಆವುದು ಕಿರಿದು ಹೇಳಾ?
ಪ್ರಕಾಶನ: ಕಲ್ಪತರು ಪ್ರಕಾಶನ
ವರ್ಷ: 2021
ಬೆಲೆ: 165
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529.