26 ಜನವರಿ 2022

ಆಡಿನ ಆಟ.ಶಿಶುಗೀತೆ.


 #ಚಿತ್ರಕವನ


#ಮಕ್ಕಳಕವನ



#ಆಡಿನ_ಆಟ




ಆಡುತ ಬಂದು ಮೋಟಾರು

ಮೇಲೆ ಕುಳಿತಿದೆ ನೋಡು ಆಡೊಂದು

ಹಾಡುತ ಬಂದ ಬಾಲಕ ನೋಡಿ

ಅಚ್ಚರಿ ಪಟ್ಟನು ಕೇಳಿಂದು .


ಕೇಳಿದ  ಬಾಲಕ ಇದು

ನಮ್ಮಯ ವಾಹನ ಮೇಲೇಳು 

ಒಂದಿನ ಕುಳಿತಿಹೆ ಸುಮ್ಮನಿದ್ದು ಬಿಡು

ನೋಯುತಿವೆ ನನ್ನ ಕಾಲ್ಗಳು.


ಅಪ್ಪನ ಜೊತೆಗೆ ಶಾಲೆಗೆ ಹೋಗುವೆ

ಜಾಗ ಬಿಡು ಈಗಲೆ

ನಮ್ಮಮ್ಮ ಬರೋವರೆಗೂ ಏಳಲ್ಲ

ಸುಮ್ಮನೆ ನೀನು ಕಾಯಲೆ.


ಉಪಾಯ ಮಾಡಿ ಸೊಪ್ಪನು 

ತಂದು ಹಿಡಿದನು  ಬಾಲಕನು

ಸ್ಕೂಟರ್ ಇಳಿದೇ ಬಿಟ್ಟಿತು

ಆಡು ತಿನ್ನಲು ಸೊಪ್ಪನ್ನು .


ಹೊಟ್ಟೆಗೆ ಇಂಧನ ಬೀಳಲು

ಆಡು ಹೊರಟಿತು ಹೊಲದ ಕಡೆ 

ಅಪ್ಪನ ಕರೆದ ಬಾಲಕ ಸ್ಕೂಟರ್ 

ಏರಿ ಹೊರಟ ಶಾಲೆ ಕಡೆ .



#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು

ನಮ್ಮ ಗಣ ತಂತ್ರ ವ್ಯವಸ್ಥೆಯನ್ನು ಬಲಪಡಿಸೋಣ. ಲೇಖನ


 *ಭಾರತದ ೭೪ ನೇ ಗಣರಾಜ್ಯೋತ್ಸವದ ಶುಭಾಶಯಗಳು*💐🌹🌷.


ಆತ್ಮೀಯರೇ...


ನಮ್ಮದು ಪ್ರಪಂಚದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಗಣತಂತ್ರ ಎಂಬುದಕ್ಕೆ ಭಾರತೀಯರಾದ ನಾವು ಹೆಮ್ಮೆ ಪಡೋಣ. 

ವಿವಿಧ ಭಾಷೆ , ಧರ್ಮ ,ಸಂಸ್ಕೃತಿ ಪರಂಪರೆಗಳನ್ನು ಪ್ರೊತ್ಸಾಹಿಸುತ್ತಾ ಬೆಳೆಸುತ್ತಾ ,ಬೆಳೆಯುತ್ತಾ ಬಂದಿರುವ ನಮ್ಮ ಗಣತಂತ್ರವನ್ನು  ನೋಡಿ ಜಗತ್ತು ಬೆರಗಾಗಿದೆ. 


ಫೆಡರಲ್ ಮತ್ತು ಯುನಿಟರಿ ಎರಡೂ ಸರ್ಕಾರಗಳ ಒಳ್ಳೆಯ ಅಂಶಗಳನ್ನು ಹದವಾಗಿ ಬೆರೆಸಿ ಆಡಳಿತಕ್ಕೆ ಸಜ್ಜುಗೊಳಿಸಿದ ಸಂವಿಧಾನಕಾರರ ಚಾಕಚಕ್ಯತೆ ಮೆಚ್ಚಲೇಬೇಕು. 

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಅಧಿಕಾರಗಳನ್ನು ಒಕ್ಕೂಟ ವ್ಯವಸ್ಥೆಯ ಮಾರ್ಗಸೂಚಿಯಾಗಿ ಹಂಚಲಾಗಿದೆ .ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ,ಸಮವರ್ತಿ ಪಟ್ಟಿ ಹೀಗೆ ಪಟ್ಟಿ ಮಾಡಿ ನಮ್ಮ ಆಡಳಿತಕ್ಕೆ ದಿಕ್ಸೂಚಿ ನೀಡಲಾಗಿದೆ. ಅದರೂ ಕೆಲವೊಮ್ಮೆ ವಿತಂಡವಾದ , ರಾಜಕೀಯ ಮೇಲಾಟ ಮುಂತಾದ ಕಾರಣದಿಂದಾಗಿ ಕೇಂದ್ರ ಮತ್ತು ಸ್ಥಳೀಯ ಸರ್ಕಾರಗಳ ನಡುವೆ ತಿಕ್ಕಾಟ ಉಂಟಾಗಿ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಸರಿಪಡಿಸಿರುವುದನ್ನು ಕಾಣುತ್ತೇವೆ.


ಇತ್ತೀಚಿನ ದಿನಗಳಲ್ಲಿ ಅನವಶ್ಯಕವಾಗಿ ಪ್ರತ್ಯೇಕವಾದ, ಸಂಕುಚಿತ ಮನೋಭಾವ ಬೆಳೆಸುವುದು, ಜನರಲ್ಲಿ ಪರಸ್ಪರ ದ್ವೇಷದ ಬಾವನೆಗಳ ಕೆರಳಿಸುವುದನ್ನು  ಅಲ್ಲಲ್ಲಿ ಕಾಣುತ್ತಿರುವುದು ದುರದೃಷ್ಟಕರ .ನಮ್ಮೆಲ್ಲ ವೈಯಕ್ತಿಕ ಹಿತಾಸಕ್ತಿಗಿಂತ" ಮಾತೆಯೇ ಮೇಲು" ಎಂಬ ಭಾವನಾತ್ಮಕ ಅಂಶ ನಮ್ಮನ್ನು ಬೆಸೆಯಬೇಕಿದೆ .ಇಲ್ಲದಿದ್ದರೆ ನಮ್ಮ ದೇಶ ಈಗ ಗಳಿಸಿರುವ ಹೆಸರಿಗೆ ಮಸಿ ಬಳಿಯಲು ವಿದೇಶಗಳಲ್ಲಿ ಕೆಲವು ಕಾದು ಕುಳಿತಿವೆ.  ಭಾರತೀಯರಾದ ನಾವು ಇದಕ್ಕೆ ಆಸ್ಪದ ನೀಡಬಾರದು  ೭೩ ನೇ ಗಣರಾಜ್ಯೋತ್ಸವ ಅಚರಿಸುವ ಈ ಶುಭಸಂದರ್ಭದಲ್ಲಿ ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬಂತೆ ನಮ್ಮ ಭರತಖಂಡ ನಮಗೆ ಸ್ವರ್ಗಕ್ಕಿಂತಲೂ ಮಿಗಿಲು ಭಾರತಮಾತೆಗೆ ಸದಾ ನಮಿಸುತ್ತಾ ಒಗ್ಗಟ್ಟಾಗಿ ಬಾಳೋಣ. ನಮ್ಮ ಗಣತಂತ್ರವನ್ನು ಬಲಪಡಿಸೋಣ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.

25 ಜನವರಿ 2022

ಮೀನಾಕ್ಷಿಯ ಸೌಗಂಧ. ಪುಸ್ತಕ ವಿಮರ್ಶೆ.


 




ಮೀನಾಕ್ಷಿಯ ಸೌಗಂಧ.

ವಿಮರ್ಶೆ 


ಬಿ .ಜಿ.ಎಲ್. ಸ್ವಾಮಿ ಶತಮಾನೋತ್ಸವ ವಿಶೇಷವಾದ  ಮೀನಾಕ್ಷಿಯ ಸೌಗಂಧ ಎಂಬ   ಬಿಡಿ ಲೇಖನಗಳು ಓದುಗರಿಗೆ ರಸದೌತಣ ನೀಡುತ್ತವೆ.


ಸ್ವಾಮಿ ಎಂದೇ ಹೆಚ್ಚು ಪರಿಚಿತರಾದ ಡಾ. ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ರವರು ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯವಿಜ್ಞಾನಿ, ಹೆಸರಾಂತ ಲೇಖಕರಾದ ಡಿ ವಿ ಜಿ ರವರ  ಸುಪುತ್ರರು. ೧೯೧೮ರ ಫೆಬ್ರವರಿ ಜನಿಸಿದ ಸ್ವಾಮಿಯವರು ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ೧೯೫೩ರಿಂದ ಚೆನ್ನೈನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಕೆಲವಾರು ಸಸ್ಯಗುಂಪುಗಳನ್ನು ಅನ್ವೇಷಿಸಿದ್ದು, ಅವುಗಳಲ್ಲಿ ಮಹೇಶ್ವರಿ, ಸರ್ಕಂಡ್ರಾ ಇರಿಂಗ್‌ವೈಲಿಯ್ಯ ಸೇರಿವೆ. ಗುರುಗಳ ಹೆಸರುಗಳನ್ನೇ ಗುಂಪುಗಳಿಗೆ ಇರಿಸಿದ್ದಾರೆ. ತಿರುಚರಾಪಳ್ಳಿಯಲ್ಲಿನ ಭಾರತಿದಾಸನ್ ವಿಶ್ವವಿದ್ಯಾಲಯದಲ್ಲಿ ಡಾ. ಸ್ವಾಮಿಯವರ ಹೆಸರಿನ ಗೌರವಾರ್ಥ ಸ್ವಾಮಿ ಬಟಾನಿಕಲ್ ಗಾರ್ಡನ್  ಸ್ಥಾಪಿತಗೊಂಡಿದೆ.


ಸ್ವಾಮಿಯವರ ಬರವಣಿಗೆಯ ವೈವಿಧ್ಯಮಯವಾದುದು. ಅವರ ವಿಷಯ ನಿರೂಪಣೆಯಂತೂ ಮಗ್ಗುಲುಗಳನ್ನು ಒಟ್ಟಿಗೆ ಕಾಣಿಸಿ ಆಸಕ್ತಿ ಹುಟ್ಟಿಸುವಂತಹುದು. ಸೊಗಸಾದ ಹಾಸ್ಯದೊಂದಿಗೆ ಜನಸಾಮಾನ್ಯರಿಗೂ ಅರ್ಥವಾಗುವಂತೆ ಕುರಿತು ತಿಳಿಸಿಕೊಡುವ ಪ್ರತಿಭೆ ಜೊತೆ ಜೊತೆಗೆ ಕಾವ್ಯಗಳಿಂದ ಉಲ್ಲೇಖಗಳನ್ನು ನೀಡುವುದು ಇನ್ನೊಂದು ಸೊಬಗು.


ಬಿ.ಜಿ.ಎಲ್. ಸ್ವಾಮಿಯವರ ಲೇಖನಿಯಿಂದ ಹರಿದುಬಂದಿರುವ ಕೃತಿಗಳಲ್ಲಿ ಕೆಲವೆಂದರೆ: ಹೊನ್ನು, ಕಾಲೇಜು ರಂಗ, ಕಾಲೇಜು ತರಂಗ, ಪ್ರಾಧ್ಯಾಪಕನ ಪೀಠದಲ್ಲಿ, ತಮಿಳು ತಲೆಗಳ ನಡುವೆ , ದಕ್ಷಿಣ ಅಮೆರಿಕ, ಅಮೆರಿಕದಲ್ಲಿ ಬೃಹದಾರಣ್ಯಕ, ಮೊದಲಾದವು. ಅವರು ತಮಿಳಿನಿಂದಲೂ ಕನ್ನಡಕ್ಕೆ ಕೃತಿಗಳನ್ನು ತಂದಿದ್ದಾರೆ.


ಅವರ 'ಹಸುರು ಹೊನ್ನು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.


ಪ್ರಸ್ತುತ ಪುಸ್ತಕದ

ಆರ್ಜಿತ ಗುಣಗಳೂ ಅನುವಂಶೀಯತೆಯೂ ಎಂಬ ಲೇಖನದಲ್ಲಿ ನಮ್ಮ ಅನುವಂಶೀಯತೆ ಮತ್ತು ಪರಿಸರ ಹೇಗೆ ನಮ್ಮ ವ್ಯಕ್ತಿತ್ವ ರೂಪಿಸಬಹುದು ಎಂಬುದನ್ನು ಸಾಧಾರವಾಗಿ ವಿಶ್ಲೇಷಣೆ ಮಾಡಿರುವರು.


 ಲಿಂಗಜಾತಿಗಳ ಪರಸ್ಪರ ಪರಿಮಾಣ,ಜೀವವಿಜ್ಞಾನದ ತಿಲೋತ್ತಮೆ,ಆದರ್ಶ ಗೆಳೆತನ,ಒಡಲೆರಡು ಆಸುವೊಂದು

,ಅಂತರ ಬುಡಕಟ್ಟಿನವರ ಮದುವೆಗಳಾದಾಗ,“ಕಾಮದಿಂ ಕಡು ಕುರುಡರಾದವರು...",ಪ್ರಣಯ ಪ್ರಸಂಗ,ಪ್ಲಾಟಿಪಸ್,ಜೇಡನ ಚರಕ ,ಹಸಿವಿನ ಬಳ್ಳಿ,ಕದಂಬ, ಪಂಚಾವತಾರ,ಈ ಪರಿಯ ಪ್ರಭೆ ಮುಂತಾದ ಲೇಖನಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.


ಚರಿತ್ರೆಗೆ ಸಂಬಂಧಿಸಿದ ಲೇಖನಗಳಾದ 

ಕೊಂಗುದೇಶದ ರಾಜರು,

ಕೊಡುಂದಾಳೂರಿನಲ್ಲಿ ಕನ್ನಡ, ಎಂಬ ಬರೆಹಗಳು ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತವೆ.


ಸಾಹಿತ್ಯ ಸಂಬಂಧಿತ ಲೇಖನಗಳಾದ 

ರಾಯರ ಆದ್ಯಂಜನ,ಮೀನಾಕ್ಷಿಯ ಸೌಗಂಧ, ಜೇಡರ ದಾಸಿಮಯ್ಯನ ಮತ ವಿಚಾರ,ಕಲಾವಿದ ಕೆ. ವೆಂಕಟಪ್ಪ ಮತ್ತು ವೆಂಕಟಪ್ಪ ಚಿತ್ರಶಾಲೆ, ಪುರಂದರದಾಸರು ಮತ್ತು ಬಿ.ವಿ. ಕಾರಂತರು ಮುಂತದವುಗಳಲ್ಲಿ ಸ್ಚಾಮಿ ರವರು ಬಳಸಿದ ಭಾಷೆ ಉತ್ಕೃಷ್ಟವಾದುದು.ನಿಮಗೆ ಆ ಅನುಭವವಾಗಬೇಕಾದರೆ ನೀವು ಒಮ್ಮೆ ಮೀನಾಕ್ಷಿಯ ಸೌಗಂಧ ಆಘ್ರಾಣಿಸಲೇಬೇಕು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


23 ಜನವರಿ 2022

ಸೆಲೆಬ್ರಿಟಿಗಳೊಂದಿಗೆ ಸಿಹಿಜೀವಿ.ಲೇಖನ ಆತ್ಮ ಕಥೆ ೨೬


 


ಸೆಲೆಬ್ರಿಟಿಗಳೊಂದಿಗೆ ಸಿಹಿಜೀವಿ

ನಾನು ಮೈಸೂರಿನಲ್ಲಿ ಬಿ ಎಡ್ ಮಾಡುವಾಗ ನನ್ನ ಅಣ್ಣನ ಜೊತೆ ದಸರಾ ವಸ್ತು ಪ್ರದರ್ಶನ ವೀಕ್ಷಿಸಲು ಹೋದಾಗ ನಟ ರಮೇಶ್ ಅವರನ್ನು ನೋಡಿದ್ದೆ ಬಹಳ ಸರಳ ನಡೆ ನುಡಿಯ ರಮೇಶ್ ರವರು ನಮ್ಮನ್ನು ಚೆನ್ನಾಗಿ ಮಾತನಾಡಿಸಿದರು. ಆದರೆ ಅಂದು ನಮ್ಮ ಬಳಿ ಕ್ಯಾಮರಾ ಇರಲಿಲ್ಲ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಆಗಲಿಲ್ಲ .

ಗೌರಿಬಿದನೂರಿನ SSEA ಸರ್ಕಾರಿ ಪ್ರೌಢಶಾಲೆಯಲ್ಲಿ ನಾನು ಕೆಲಸ ಮಾಡುವಾಗ ಮಕ್ಕಳನ್ನು ಮೂರು ದಿನದ ಪ್ರವಾಸಕ್ಕೆ ಕರೆದುಕೊಂಡು ಹೋದಾಗ ಕೊಲ್ಲೂರಿನಲ್ಲಿ ಅಚಾನಕ್ ಆಗಿ ದರ್ಶನ್ ಅವರ ಭೇಟಿ ಮಾಡಿದೆ.ಅವರು ನಗುತ್ತಲೆ ನನ್ನ ಕೈ ಕುಲುಕಿದರು .ಆದರೆ ಅವರ ಬೌನ್ಸರ್ ಗಳು ಅನವಶ್ಯಕವಾಗಿ ಅಭಿಮಾನಿಗಳನ್ನು ತಳ್ಳುತ್ತಿದ್ದುದು ಯಾಕೋ ನನಗೆ ಇಷ್ಟ ಆಗಲಿಲ್ಲ.

ಅಂತರರಾಷ್ಟ್ರೀಯ ಛಾಯಾಗ್ರಾಹಕರಾದ
ನಮ್ಮ ತಿಪ್ಪೇಸ್ವಾಮಣ್ಣ  ರವರ ಮಗನಾದ ಅರುಣ್ ರವರ ಮದುವೆಗೆ ಹೋದಾಗ ಬೆಂಗಳೂರಿನಲ್ಲಿ ಪ್ರಣಯರಾಜ ಶ್ರೀನಾಥ್ ರವರನ್ನು ನಮ್ಮ ಕುಟುಂಬ ಸಮೇತ ಭೇಟಿ ಮಾಡಿ ಬಹಳ ಹೊತ್ತು  ಮಾತನಾಡಿದೆವು .ನಮ್ಮ ತಿಪ್ಪೇಸ್ವಾಮಣ್ಣ ಶ್ರೀನಾಥ್ ರವರಿಗೆ " ನಮ್ಮ ಹುಡುಗ ಕಥೆ ಕವನ ಬರೀತಾನೆ ಎಂದು ಪರಿಚಯ ಮಾಡಿಸಿದಾಗ ಶ್ರೀನಾಥ್ ರವರು ಮೆಚ್ಚುಗೆ ವ್ಯಕ್ತಪಡಿಸಿ ಗುಡ್ , ಬರೀತಾ ಇರಿ ಎಂದಾಗ ಸ್ವರ್ಗಕ್ಕೆ ಮೂರೇ ಗೇಣು.

ಗೌರಿಬಿದನೂರಿನ ಒಂದು ಫಾರ್ಮ್ ಹೌಸ್ ನಲ್ಲಿ ಶಿವರಾಜ್ ಕುಮಾರ್ ಅಭಿನಯದ ಒಂದು ಚಿತ್ರದ ಶೂಟಿಂಗ್ ಸಮಯದಲ್ಲಿ ಗೆಳೆಯ ಅಂಜನಪ್ಪ ಮತ್ತು ನಾನು ಹೋಗಿ ಶಿವರಾಜ್ ಕುಮಾರ್ ರವರನ್ನು ಭೇಟಿ ಮಾಡಿ ಪೋಟೋ ತೆಗೆಸಿಕೊಂಡೆವು ಶಿವಣ್ಣನ ಸರಳತೆ ಇಷ್ಟವಾಯಿತು.

ಇನ್ನೂ ಕವಿಗಳಾದ ದೊಡ್ಡರಂಗೇಗೌಡ ರವರು, ದಿವಂಗತ ಸಿದ್ದಲಿಂಗಯ್ಯ ಅವರು, ಬಿ ಆರ್ ಲಕ್ಷ್ಮಣ ರಾವ್ ರವರು, ಚಂಪಾರವರು ಜರಗನಳ್ಳಿ ಶಿವಶಂಕರ್ ರವರು ಡಾ. ಹೆಚ್ ಎಲ್ ಪುಷ್ಷ ರವರು, ಗೋರೂರು ಚನ್ನಬಸಪ್ಪ ರವರು ಮುಂತಾದ ಕವಿಗಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿರುವುದು ನನ್ನ ಸೌಭಾಗ್ಯ.

ನನ್ನ ನೆಚ್ಚಿನ ನಟರಾದ ರೆಬೆಲ್ ಸ್ಟಾರ್ ಅಂಬರೀಶ್ ರವರನ್ನು ಭೇಟಿ ಮಾಡಲು ಆಗಲಿಲ್ಲ ಎಂಬ ಕೊರಗು ಇದ್ದೇ ಇದೆ.ಆದರೂ ಅವರ ಚಿತ್ರಗಳನ್ನು ನೋಡಿದಾಗ ಅಣ್ಣನವರ ಭೇಟಿಯಾದಷ್ಟೇ ಪುಳಕವಾಗುತ್ತೇನೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

ಏಕಲವ್ಯ .ಶಿಶುಗೀತೆ .


 



ಏಕಲವ್ಯ .



ಬಿಲ್ಲು ವಿದ್ಯೆ ಕಲಿವ ಆಸೆಯಿಂದ

ಏಕಲವ್ಯ ಬಂದನು 

ದ್ರೋಣರನ್ನು ಕಂಡು ತನ್ನ

ಮನದ ಬಯಕೆ ಹೇಳಿದನು.


ನಿರಾಕರಿಸಿ ದ್ರೋಣರೆಂದರು ನನ್ನ ವಿದ್ಯೆ  ಕ್ಷತ್ರಿಯರಿಗೆ ಮಾತ್ರ ಮೀಸಲು 

ಬೇಸರದಿ ಹಿಂದೆ ತಿರುಗಿ ಹೊರಟ

ಅವನು ಸ್ವಯಂ ವಿದ್ಯೆ ಕಲಿಯಲು .


ದ್ರೋಣರ ವಿಗ್ರಹವನು ಪ್ರತಿಷ್ಠಾಪಿಸಿ

ಬಿಲ್ವಿದ್ಯೆ ಕಲಿಯಲಾರಂಭಿಸಿದ

ಶಬ್ಧವೇದಿ ವಿದ್ಯೆ ಕಲಿತು ಬಿಲ್ಲಿನಿಂದ 

ಪ್ರಾಣಿಯನ್ನು ವಧಿಸಿದ .


ಅರ್ಜುನನಿಗೆ ವಿಷಯ ತಿಳಿದು

ಹೊಟ್ಟೆಯುರಿಯಲಿ ಬೆಂದನು

ದ್ರೋಣರಿಗೆ ಚಾಡಿ ಹೇಳಿ 

ಏಕಲವ್ಯನ ಹೆಬ್ಬೆಟ್ಟನು ಪಡೆದನು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ