22 ಜನವರಿ 2022

ಉದಕದೊಳಗಿನ ಕಿಚ್ಚು ಭಾಗ ೧೫


 


ಜಾತ್ರೆ ನಡೆದು ವಾರವಾಗಿತ್ತು ,ಗುಡಿಯ ಅಕ್ಕಪಕ್ಕದಲ್ಲಿ ನಡೆದಾಡಿದರೆ ಒಣಗಿದ ರಕ್ತದ ಕಮಟು ವಾಸನೆ, ಅಲ್ಲೊಂದು ಇಲ್ಲೊಂದು ರಸ್ತೆಯ ಪಕ್ಕದಲ್ಲಿ ಆಟಿಕೆ ಸಾಮಾನುಗಳ ಅಂಗಡಿಗಳು, ತೋಪಿನಲ್ಲಿ ಅಲ್ಲಲ್ಲಿ ಉಂಡು ಬಿಸಾಡಿರುವ ಅಡಿಕೆ ಪಟ್ಟೆಗಳು, ರಸ್ತೆಗಳ ಅಕ್ಕ ಪಕ್ಕದಲ್ಲಿ ಊದಗಡ್ಡಿ, ಕರ್ಪೂರ, ತೆಂಗಿನ ಕಾಯಿ ಕಸ, ಗಾಳಿಗೆ ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತಿದ್ದವು . ಇವುಗಳನ್ನು ಸ್ವಚ್ಛ ಮಾಡಲು ಗುಡಿಗೌಡ್ರು ಕೆಳವರ್ಗದ ಜನರಿಗೆ ಎರಡು ದಿನದಿಂದ ಹೇಳುತ್ತಿದ್ದರೂ  ಕಸದ ಬಾವುಟಗಳ ಹಾರಾಟ  ನಿಂತಿರಲಿಲ್ಲ . ಕೆಳವರ್ಗದ ಪಾತಲಿಂಗಪ್ಪ ದಾರಿಯಲ್ಲಿ ಬರುವುದ ಕಂಡು  " ಇನ್ನ ಏಸ್ ದಿನ ಬೇಕ್ರಲ ನಿಮಿಗೆ ಈ ರೋಡ್ ಕಸ ಗುಡಸಕೆ ನೀನಂತುನುನು ಅದಕ್ಕು ಒಂದ್ ಬೆಲೆ ಬ್ಯಾಡವೋ?  ಮೊದ್ಲೆ ನಮ್ಮೂರು ಮೇನ್ ರೋಡಾಗೈತೆ  ಈ ಗಬ್ಬು ನೋಡಿ ವೆಹಿಕಲ್ನಲ್ಲಿ ಹೋಗೋ  ಜನ ಯರಬಳ್ಳಿ ಜನ ಕೊಳಕರು ಅಂಬಲ್ವೇನಲೇ?" ಎಂದು ಸಿಟ್ಟಿನಿಂದ ಒಂದೇ ಸಮನೆ ಬೈಯಲಾರಂಬಿಸಿದರು ಗುಡಿ ಗೌಡರು.
" ಇವತ್ತು ಬಿಟ್ಟು ನಾಳೆ  ಕಸ ಹೊಡಿತಿವಿ‌ ಗೌಡ , ಕಳ್ಳೆ ಮ್ಯಾಲೆ ಒಣಗಾಕಿದ್ದ ಮಾಂಸ ಒಂಚೂರಿತ್ತು ,ಬ್ಯಾಡರಳ್ಳಿ ನೆಂಟರು ಇನ್ನೂ ಹೋಗಿಲ್ಲ ಇವತ್ತು ಮಾಡಿಕ್ಯಾಂಡು ಉಂಡು , ನಮ್ಮ ಹುಡುಗ್ರುನ್ನ  ನಾಳೆ ಕರ್ಕಂಬಂದು   ಇದನ್ನೆಲ್ಲ ಕ್ಲೀನ್ ಮಾಡ್ತೀನಿ ಗೌಡ " ಎಂದು ತಲೆ ಕರೆದುಕೊಂಡು , "ಜೋಬಲ್ಲಿ ಕೈಯಿಕ್ಕು ಗೌಡ" ಅಂದ ಪಾತಲಿಂಗಪ್ಪ .
" ಏನ್ ಜೋಬಲ್ಲಿ ಕೈ ಇಕ್ಕದು , ಏ ನಿನಗೇನ್ ಪ್ರಜ್ಞೆ ಐತಾ ಇಲ್ವ? ನಿನ್ನೆ ಮುನ್ನೂರು ರುಪಾಯಿ ನಿನ್ ಒಬ್ಬನಿಗೆ ಕೊಟ್ಟಿದಿನಿ , ಈಗ ಬಂದು ಮತ್ತೆ ಜೋಬಲ್ಲಿ ಕೈ ಇಕ್ಕು ಅಂದ್ರೆ  ನಿಮಗೇನು ಅಳತೆ ಇಲ್ಲ ಹೋಗಪ್ಪ ನೀನಂತುನುನು" ಎಂದರು ಗೌಡ್ರು
" ಜಾತ್ರೆ
ಬಿಟ್ಟು ಇನ್ಯಾವಾಗ ಕೊಡ್ತೀರಾ ಕೊಡು ಗೌಡ "
ಇವನ ಕಾಟ ತಡೆಯದೆ ಗೌಡರು ಬಿಳಿ ಪಂಚೆಯನ್ನು ಎಡಗೈಯಲ್ಲಿ ಸರಿಸಿ ಪಟಾಪಟಿ ನಿಕ್ಕರ್ ನಿಂದ ಐವತ್ತು ರೂಪಾಯಿ ತೆಗೆದು ಪಾತಲಿಂಗಪ್ಪ ನಿಗೆ ಕೊಟ್ಟರು .ಪಾತಲಿಂಗಪ್ಪ ದುಡ್ಡನ್ನು ಕಣ್ಣಿಗೊತ್ತಿಕೊಂಡು ಕಂಬಣ್ಣನ ಹೆಂಡದ ಅಂಗಡಿ ಕಡೆ ನಡೆದ.

***********************

"ಕರೆಂಟ್ ರೂಮಿನ ಮೇಲಿಂದ ಡೈ ಒಡಿತಿಯೇನ ಸೋಮ" ಕೇಳಿದ ಮಹೇಶ
"ಅದಕ್ಕಿಂತ ಮೇಲೆ ಹೇಳು ಒಡೆಯುವೆ "
ಮೈಮೇಲೆ ಕಾಚ ಮಾತ್ರ ಇತ್ತು ಆಗ ತಾನೆ ನೀರಿನಿಂದ ಮೇಲೆದ್ದ ಸೋಮ ಆತ್ಮವಿಶ್ವಾಸದಿಂದ ಹೇಳಿದ  ಮತ್ತು ಕರೆಂಟಿನ ಮನೆ ಹತ್ತಿ  , ತಲೆ ಕೆಳಗು ಮಾಡಿ ಮೂವತ್ತು ಅಡಿ ಆಳದ ನೀರಿಗೆ ಡೈ ಹೊಡೆದಾಗ ಉಳಿದ ಹುಡುಗರು ಉಸಿರು ಬಿಗಿಹಿಡಿದು ನೋಡುತ್ತಿದ್ದರು ದಬಾಲ್... ಎಂದು ನೀರಿಗೆ ಬಿದ್ದ ತಕ್ಷಣ ನೀರ್ಗುಳ್ಳೆಗಳು ಮೇಲೆದ್ದು ಇಡೀ ಬಾವಿಯು  ತುಳುಕುವಂತಿತ್ತು. ನೀರೊಳಗೆ ಹೋದ ಸೋಮ ಒಂದು ನಿಮಿಷವಾದರೂ ಮೇಲೆ ಬರದಿದ್ದಾಗ ಮತ್ತೆ ಹುಡುಗರ ಮುಖದಲ್ಲಿ ಆತಂಕ ನಾಲ್ಕು ಮಟ್ಟ( ೨೦ಅಡಿ) ಆಳವಾದ ಈ ಬಾವಿಯಲ್ಲಿ ಸೋಮ? ಎನೇನೋ ಯೋಚಿಸುತ್ತಾ ಹುಡುಗರು ಚಿಂತೆಗೆ ಬಿದ್ದಾಗ ಗುಳ್ಳೆಗಳೇಳುತ್ತಾ ಸೋಮ ಮೇಲೆ ಬರುವುದ ನೋಡಿ ಹುಡುಗರು ಶಿಳ್ಳೆ ಚಪ್ಪಾಳೆ ತಟ್ಟುತ್ತಾ ಹೀರೋ ತರ ಸ್ವಾಗತ ಮಾಡಿದರು.

" ಏ ಸತೀಶ , ನೀನು ಅಂಗೆ ಡೈ ಒಡಿತಿಯೇನ ಚಾಲೆಂಜ್ ಹತ್ತು ರುಪಾಯಿ " ಅಂದ ಚಿದಾನಂದ್
" ಅಪ್ಪ ನಾನು ಇನ್ನೂ ಈಗ ಈಜು ಕಲ್ತಿದಿನಿ ಅಷ್ಟು ಮೇಲಿಂದ ಆಗಲ್ಲಪ್ಪ ಅದೂ ಅಲ್ದೆ ನಾನು ಈಜಾಡಕೆ ಬಂದಿರೋದು ನಮ್ಮಜ್ಜಿ ನಮ್ಮಾವರಿಗೆ ಗೊತ್ತಿಲ್ಲ .ಗೊತ್ತಾದರೆ ಅಷ್ಟೇ" ಎನ್ನುತ್ತಾ ಬಾವಿಯ ದಡದ ಮೇಲೆ ಬಟ್ಟೆಗಳನ್ನು ಬಿಚ್ಚಿ ಬರೀ ಕಾಚಾ ಮಾತ್ರ ತೊಟ್ಟು  , ಕಲ್ಲು ಕಟ್ಟಡದ ಬಾವಿಯಲ್ಲಿ ನಿಧಾನವಾಗಿ ಇಳಿದು ಈಜಲು‌ ಶುರುಮಾಡಿದ .

" ಥು ನನ್ ಮಗ್ನೆ, ಮಾನ ಮರ್ಯಾದೆ ಇಲ್ವ ನಿನಗೆ ಗೊಮ್ಮಟೇಶ್ನಂಗೆ  ಎಲ್ಲಾರ್ಗೂ ತೋರಿಸ್ಕಂಡು ಓಡಾಡ್ತಿಯಾ? ಎಸ್ಸೆಲ್ಸಿ ನಾಕು ಸತಿ ಪೇಲಾಗಿದಿಯಾ,  ಮುಂದುಲ್ ವರ್ಸ ನಿಮ್ಮಪ್ಪ ಮದುವೆ ಮಾಡ್ತಾನಂತೆ ಇಂಗೆ ಬಿಚ್ಕೊಂಡು ಈಜಾಡಕೆ ಬರಕೆ ನಾಚ್ಕೆ ಆಗಲ್ವ ? "
ಎಂದು ರವಿವನ್ನು  ಮಧು ಹಿಗ್ಗಾಮುಗ್ಗಾ  ಬೈಯುವದನ್ನು ಇತರರು ನೋಡುತ್ತಾ ಕೇಳುತ್ತ ಈಜಾಡುತ್ತಿದ್ದರು.

" ಏ ಯಾಕಲ ಅಷ್ಟು ಎಗಾರಡ್ತಿಯಾ ? ಇಲ್ಲಿ ಎಲ್ಲಾ ಹುಡುಗ್ರೆ ಇರೋದು ಅದ್ಕ್ಯಾಕೆ ಬಟ್ಟೆ ಹಾಕೋದು ಅಂತ ಎಲ್ಲಾ ಬಿಚ್ಚಿದೆ ,ನನ್ ಮಗನೆ ಬಾ ಬಾವೀಲಿ ಅಮಿಕ್ಯಾಕಿ ಬಿಡ್ತಿನಿ " ಅಂದ ರವಿ.
ಸೂರ್ಯ ನೆತ್ತಿಯ ಮೇಲೆ ಬಂದಂತೆ ನೀರಲ್ಲಿ ಹುಡುಗರು ಹೆಚ್ಚಾದರು ,ಕೆಲವರು ಮನೆ ನೆನಪಾಗಿ ದಡಕ್ಕೆ ಬಂದು , ಬಿಸಿಲಿನ  ತಾಪ ನೋಡಿ ಪುನಃ ನೀರಿಗೆ ಬಿದ್ದು ಈಜಾಡುತ್ತಿದ್ದರು.
"ಏ ಸತೀಶ ನಾಳೆ ಪಾಸು ಪೇಲು ಹಾಕ್ತಾರಂತೆ , ರೇಡಿಯೋದಾಗೆ ಹೇಳಿದರು ಅಂತ  ನಮ್ಮಪ್ಪ  ಅಂದರು" ಮೋಟಪ್ಪರ ಬಾವಿಯಿಂದ ಈಜಾಡಿಕೊಂಡು ತಲೆ ಮೇಲೆ ಟವಲ್ ಹಾಕಿಕೊಂಡು ನಡೆದು ಬರುವಾಗ ಚಿದಾನಂದ್ ಹೇಳಿದ .
" ಹೌದಾ ನಾನು ರೇಡಿಯೋ ಕೇಳುತ್ತಿದ್ದೆ ಗೊತ್ತಾಗಲಿಲ್ಲ ಅಲ್ಲ?" ಎಂದ ಸತೀಶ

"ಏ ನೀನು ಯಾವಾಗಲೂ ಬರೀ ಹಾಡು ಕೇಳೋದು ನನಗೆ ಗೊತ್ತಿಲ್ವ ನ್ಯೂಸ್ ಎಲ್ಲಿ ಕೇಳ್ತಿಯಾ ಅದು ಲವ್ ಸಾಂಗ್ ಕೇಳೋದ್ರಲ್ಲಿ ನೀನು ಹೀರೋ.
ನಾಳೆ ನಾನು ಪಾಸಾಗ್ತಿನೋ ಪೇಲಾಗ್ತಿನೊ? ನೀನ್ ಬಿಡಪ್ಪ ಪಾಸು" ಎಂದು ಒಂದು ದಿನ ಮೊದಲೆ ರಿಸಲ್ಟ್ ಹೇಳಿಬಿಟ್ಟ ಚಿದಾನಂದ್.

****************************

ಅಂದು ಶನಿವಾರ. ಸ್ನಾನ ಮಾಡಿ  ತನ್ನ ಮನೆದೇವರಾದ ವೆಂಕಟರಮಣಸ್ವಾಮಿಗೆ
ಪೂಜೆ ಮಾಡಿ ಲಕ್ಷ್ಮಿ ರಮಣ  ಗೋವಿಂದ......  ಗೋವಿಂದ .... ಪ್ರಹ್ಲಾದ ವರದ ಗೋವಿಂದ...... ಗೋವಿಂದ... ತಿರುಪತಿ ತಿಮ್ಮಪ್ಪನ ಪಾದಕ್ಕೆ ಗೋವಿಂದ.... ಗೋವಿಂದ. ....
ಎಂದು ಮೂರು ಸಾರಿ ಹೇಳಿ  , ಸರಸ್ವತಜ್ಜಿಯ ಹತ್ತಿರ ಬಂದು ನಿಂತ. ಅಜ್ಜಿ ಕುಟ್ನಿಯಲ್ಲಿ ಎಲೆ ಅಡಿಕೆ ಹಾಕಿ ಕಬ್ಬಿಣದ ಗಟ್ಟಿ ಸರಳಿನಲ್ಲಿ ಲೊಟ ,,ಲೊಟ.. ಕುಟ್ಟುತ್ತಾ,  ಸುಣ್ಣದ ಡಬ್ಬಿಯಿಂದ ಉಗುರಲ್ಲಿ ಸ್ವಲ್ಪ ಸುಣ್ಣ ತೆಗೆದು ಕುಟ್ನಿಗೆ ಹಾಕಿ ಮತ್ತೆ ಕುಟ್ಟಲು ಶುರುಮಾಡಿದರು.
" ಅಜ್ಜಿ ಆಶೀರ್ವಾದ ಮಾಡು ಇವತ್ತು ನಮ್ ರಿಸಲ್ಟು" ಎಂದು ಅಜ್ಜಿಯ ಕಾಲಿಗೆ ಬೀಳಲು ಮುಂದಾದ ಸತೀಶ
"ರಿಜಲ್ಟು ಅಂದ್ರೆ" ಅಚ್ಚರಿಯಿಂದ ಕಾಲು ಮುಂದೆ ಮಾಡಿ ಕೇಳಿದರು ಅಜ್ಜಿ
" ಅಜ್ಜಿ ಅಂಗಂದ್ರೆ ಇವತ್ತು ನಂದು ಪಾಸು ಪೇಲು ಹೇಳ್ತಾರೆ" ಅಂದಾಗ
"ಹೋ ಒಳ್ಳೆದಾಗ್ಲಪ್ಪ ಹೋಗು" ಎಂದು ತಲೆ ಸವರಿದರು ಪ್ರೀತಿಯಿಂದ.
ಮತ್ತೊಮ್ಮೆ ಕನ್ನಡಿಯಲ್ಲಿ ಮುಖ  ನೋಡಿಕೊಂಡು ತಲೆ ಬಾಚಿಕೊಂಡು, ಸ್ಕೂಲ್ ಕಡೆ ಹೊರಟಾಗ ಗುರುಸಿದ್ದ ದನ ಮೇಯಿಸಲು ದನಗಳ ಕಣ್ಣಿ ಬಿಚ್ಚುತ್ತಿದ್ದ " ಏನ್ ಸತೀಶಣ್ಣ ಇವತ್ತು ನಿಂದು ಪಾಸು ಪೇಲಂತೆ ಸಾಯಿಂಕಾಲ ಬತ್ತಿನಿ ನನಿಗೆ ಸ್ವೀಟ್ ಕೊಡ್ಬೇಕು " ಎಂದ
" ಆತು ಬಾ ಕೊಡ್ತಿನಿ" ಎಂದ ಸತೀಶ.
ಗಂಟೆ ಹನ್ನೊಂದು ಆಗಿ ಬಹುತೇಕ ಹತ್ತನೆಯ ತರಗತಿಯ ಪರೀಕ್ಷೆ ಬರೆದ ಎಲ್ಲರೂ  ಸೇರಿದ್ದರು ಬರೀ ಮಕ್ಕಳು ಅಲ್ಲದೆ ಅವರ ಅಪ್ಪ, ಅಣ್ಣ, ತಮ್ಮ ,ದೊಡ್ಡಪ್ಪ, ಮಾವ ಹೀಗೆ ಅದೊಂದು ಸಣ್ಣ ಜಾತ್ರೆಯಂತೆ ಕಾಣುತ್ತಿತ್ತು, ಕೆಲವರು ಮೊದಲೆ ಸಿಹಿತಂದು ಹಂಚಲು ಕಾಯುತ್ತಿದ್ದರು.

"ಏನ್ ಹೆಡ್ ಮೇಷ್ಟ್ರು ಇವರು? ಹನ್ನೆರಡು ಗಂಟೆಯಾದರೂ ಪಾಸು ಪೇಲು ಹೇಳೋಕೇನ್ ದಾಡಿ" ಎಂದು ಬಸವರಾಜ್ ಕೂಗಾಡಿದಾಗ ದೂರದಿಂದಲೇ ಹೆಂಡದ ವಾಸನೆ ಕೆಲವರಿಗೆ ಬಡಿಯದೇ ಇರಲಿಲ್ಲ.
ಬಸವರಾಜನ ಗಲಾಟೆ ಕೇಳಿ ಮೀಸೆ ತಿರುವುತ್ತಲೆ ಬಂದ ಪ್ಯೂನ್ ಕಂ ತಳವಾರ ಸಿದ್ದಾನಾಯ್ಕ "ಏ ಬಸವ ಏನಲೆ ಅದು ಗಲಾಟೆ ನಾವು ಅವರೆ ಕಣಲಾ, ಬಾರಲ ಇಲ್ಲಿ ,  ಏಟು ಕುಡ್ದದಿಯೆಲಾ? ಬಾರ ಇಲ್ಲಿ." ಎಂದಾಗ ಬಸವರಾಜ್ ಗಪ್ ಚುಪ್ .

"ಮಾವ ಎಷ್ಟೋತ್ತಿಗಂತೆ ರಿಸಲ್ಟ್ ಹಾಕೋದು? " ಸಿದ್ದಾನಾಯ್ಕ ,ನಾಯಕರ ಜಾತಿಯಾದರೂ ಸತೀಶ ಯಾವಾಗಲೂ ಬಾಯಿ ತುಂಬಾ ಮಾವ ಅಂತಲೆ ಕರೆಯುತ್ತಿದ್ದ ಸಿದ್ದಾನಾಯ್ಕ ಗೆ ಸತೀಶ ಎಂದರೆ ಪ್ರೀತಿ
" ಅಳಿಯ ಹೆಡ್ ಮೇಷ್ಟ್ರು ರಿಸಲ್ಟ್ ತರಾಕೆ ಹಿರಿಯೂರಿಗೆ ಹೊಗೆದಾರೆ ಅವ್ರು ಬಂದ ಮ್ಯಾಲೆನೆ ರಿಸಲ್ಟ್ ಕಣಪ್ಪ" ಎಂದು ಸಿದ್ದಾನಾಯ್ಕ ಸತ್ಯ ಹೇಳಿದಾಗ ಎಲ್ಲರೂ ರಸ್ತೆಯ ಪಕ್ಕದಲ್ಲಿ ಇರುವ ಕಿಲಕಿಸ್ತರೆ ಮರದ ಕೆಳಗೆ , ಬಸ್ ಸ್ಟ್ಯಾಂಡ್ ಕಡೆ ನೋಡುತ್ತಾ ಕುಳಿತರು.

ಕೈಯಲ್ಲಿ ಒಂದು ಬಟ್ಟೆಯ ಚೀಲ ಹಿಡಿದುಕೊಂಡು ದೂರದ ಬಸ್ಟಾಂಡ್ ನಲ್ಲಿ ಜೈರಾಂ ಬಸ್ನಿಂದ  ಒಬ್ಬ ವ್ಯಕ್ತಿ ಇಳಿಯುವುದನ್ನು ಕಂಡ ಚಿದಾನಂದ್
" ಹಾ.. ಹೆಡ್ ಮಾಸ್ಟರ್ ಬಂದ್ರು " ಅಂದಾಗ ಸೂರ್ಯ ನೆತ್ತಿಯ ಮೇಲೆ ಬಂದು ಗಂಟೆ ಒಂದಾಗಿತ್ತು. ಶಾಲೆಯ ಹತ್ತಿರ ಹೆಡ್ ಮಾಸ್ಟರ್ ಬಂದಂತೆ ಮಕ್ಕಳು ಮತ್ತು ಪೋಷಕರು ಜೇನು ನೊಣ ಮುತ್ತಿಕೊಳ್ಳುವ ಹಾಗೆ ಅವರ ಸುತ್ತ ನಿಂತರು.

" ಹೇ ಜಾಗ ಬಿಡ್ರಪ್ಪ ಏನ್ ಜನಾನಪ್ಪ ನೀವು ಸ್ವಲ್ಪ ತಾಳ್ಮೆ ಇರಲಿ" ಅಂತ ಅವರ ಕೈಯಲ್ಲಿದ್ದ ಬಟ್ಟೆ ಚೀಲ ತೆಗೆದುಕೊಂಡ ಶಾಲಾ ಕಛೇರಿಯ ಒಳಗೆ ಮುಖ್ಯ ಶಿಕ್ಷಕರ ಹಿಂದೆ ನಡೆದ ಸಿದ್ದಾನಾಯ್ಕ.
ಮಧ್ಯಾಹ್ನದ ಒಂದೂವರೆ ,ಎರಡು ಗಂಟೆ ಇರಬಹುದು ಆಫೀಸ್ ರೂಂ ಪಕ್ಕದಲ್ಲಿ ಇರುವ ಕೋಣೆಯ ಕಿಟಕಿಗಳು ಒಳಭಾಗದಲ್ಲಿ ಒಂದೊಂದೇ ರಿಸಲ್ಟ್ ಶೀಟ್ ಅಂಟಿಸುತ್ತಿದ್ದರು ಸಿದ್ದಾನಾಯ್ಕ. ಕಿಟಕಿಗಳ ಹೊರಭಾಗದಲ್ಲಿ ಕಬ್ಬಿಣದ ಮೆಸ್ ಹಾಕಿಸಿದ್ದರಿಂದ ದೂರದಿಂದ ರಿಸಲ್ಟ್ ನೋಡಬಹುದಾಗಿತ್ತು ಆದರೆ ಮುಟ್ಟುವ ಹಾಗಿರಲಿಲ್ಲ ,ಮೊದಲು ರಿಸಲ್ಟ್ ಹೊರಗೆ ಹಾಕುತ್ತಿದ್ದರು. ಪೇಲ್ ಆದವರು ಒಡೀ ರಿಸಲ್ಟ್ ಶೀಟ್ ಹರಿದು ಬಿಸಾಕುತ್ತಿದ್ದರು ಅದಕ್ಕೆ ಈಗ ಒಳಗೆ ಹಾಕಿದ್ದಾರೆ.

"ಆ ....ನಂದು ಪಾಸಾಗಿದೆ "ಅವನ ಹೆಸರು ನೋಡಿ ಕುಣಿದಾಡಿದ ಚಿದಾನಂದ ಅವನ ಅಪ್ಪ ಅವನು ಪೇಲಾಗುವನು ಎಂದುಕೊಂಡಿದ್ದರು
" ಮಾರಮ್ಮನಿಗೆ ಮುಂದಲ್ ವರ್ಸ ಜಾತ್ರೆಗೆ ಜೋಡ್ ಕುರಿ ಕಡ್ಯಾದೆ ಬಾರ್ಲಾ ಹೋಗನಾ " ಎಂದು ಬೀಗುತ್ತಾ ನಡೆದ .
ಐದಾರು ಹುಡುಗರು ಬಿಟ್ಟು ಉಳಿದೆಲ್ಲರೂ ಪಾಸಾಗಿದ್ದರು ಅದಕ್ಕೆ ಪರೀಕ್ಷೆ ನಡೆಸಿದ ರೀತಿಯೂ ಕಾರಣ ಎಂದು ಕೆಲವರು ಮಾತನಾಡುತ್ತಿರುವುದು ಕಿವಿಯ ಮೇಲೆ ಬೀಳದೆ ಇರಲಿಲ್ಲ.

ಸತೀಶನ ಎಲ್ಲಾ ಸ್ನೇಹಿತರಿಗೆ ಸತೀಶನ ರಿಸಲ್ಟ್ ಬಗ್ಗೆ ಕಾತರ , ಮಹೇಶ್ ಸೆಕೆಂಡ್ ಕ್ಲಾಸಲ್ಲಿ ಪಾಸಾಗಿದ್ದ. ಸುಜಾತ ಸಹ ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದಳು. ಸತೀಶ ಅವಳಿಗೆ ನಗುತ್ತಾ ಅಭಿನಂದನೆಗಳ ಸಲ್ಲಿಸಿದ್ದ
" ಅಯ್ಯೋ ಬರಿ ಸೆಕೆಂಡ್ ಕ್ಲಾಸ್ ,ನಿಂದು ಜಾಸ್ತಿ ಇರುತ್ತೆ ಬಿಡು " ಎಂದು ನಕ್ಕಿದ್ದಳು ಸುಜಾತ .ಆದರೆ ಸತೀಶನಿಗೆ ಅಂತಹ ಸಂತಸ ಇರಲಿಲ್ಲ.
ಸತೀಶನ ಹೆಸರು ಎಲ್ಲಿಯೂ ಕಾಣಿಸಿರಲಿಲ್ಲ! ಇದರಿಂದ ಸತೀಶನಿಗೆ ಮತ್ತು ಅವನ ಸ್ನೇಹಿತರಿಗೆ ಆತಂಕ ,ಬೇಸರ ಶುರುವಾಗಿತ್ತು ಎಲ್ಲರ ಮುಖದಲ್ಲಿ ಅದು ಎದ್ದು ಕಾಣುತ್ತಿತ್ತು.
"ನಾನೇನಾದ್ರೂ ಪೇಲ್ ಆಗ್ಬಿಟ್ನಾ? ಅಕಸ್ಮಾತ್ತಾಗಿ ಪೇಲ್ ಆದರೆ ಮನೇಲಿ ಅಜ್ಜಿಗೆ, ಮಾವನಿಗೆ  ಹೇಗೆ ಮುಖ ತೋರಿಸಲಿ? ಇನ್ನೂ ನನ್ನ ಅಮ್ಮ ನನ್ನ ಮೇಲೆ ಪ್ರಾಣ ಇಟ್ಟುಕೊಂಡಿದ್ದಾಳೆ, ನಾನು ಓದಿ ಏನೋ ಸಾಧನೆ ಮಾಡುವೆ ಎಂದು ಕನಸು ಕಂಡಿದ್ದಾಳೆ ,ಈಗ ನಾನು ಪೇಲ್ ಆದರೆ ಅಮ್ಮ ಹೇಗೆ ಸಹಿಸಿಕೊಳ್ಳುತ್ತಾರೆ? ಈ ರೀತಿಯಾಗಿ ಹಲವಾರು ಪ್ರಶ್ನೆಗಳು ಸತೀಶನ ಮನದಲ್ಲಿ ಸುಳಿದವು.
ಅರ್ದಕ್ಕರ್ದ ವಿದ್ಯಾರ್ಥಿಗಳು ಮತ್ತವರ ಪೋಷಕರು ಶಾಲೆಯಿಂದ ಮನೆಕಡೆ ಹೋಗಿದ್ದರು, ಮಹೇಶಗೆ ಒಳಗೊಳಗೆ ಸತೀಶ ಪೇಲಾದರೆ ಅವನನ್ನು ರೇಗಿಸಬಹುದು ಎಂದು ಅಲ್ಲೇ ಇದ್ದ.
ಹೆಡ್ ಮಾಸ್ಟರ್ ಒಂದು ಹಾಳೆ ಹಿಡಿದು ಆಪೀಸ್ನಿಂದ ಹೊರ ಬಂದು ಸತೀಶ... ಅಂದರು.
ಅಯ್ಯೋ ನನ್ನ ಮೇಲೆ ಇವರೆಲ್ಲರೂ ಇಷ್ಟೊಂದು ಭರವಸೆ ಇಟ್ಟುಕೊಂಡು ಪ್ರೋತ್ಸಾಹ ಕೊಟ್ಟರು ನಾನೇನಾದರೂ ಪೇಲ್ ಆಗಿರುವುದು ಕಂಡು ಹೆಡ್ ಮಾಸ್ಟರ್ ನನ್ನ ಕರೆಯುತ್ತಿರಬಹುದು ಎಂದು ಅಳುಕಿನಿಂದಲೇ ಹೋದ ಸತೀಶ.

" ನೀನು ನಮ್ಮ ಶಾಲೆಯ ಹೆಮ್ಮೆ ಕಣಯ್ಯ" ಅಂತ ಬೆನ್ನು ಸವರುತ್ತ
  "ಏ ಬಾರೋ ಇಲ್ಲಿ ಅಂಗಡಿಗೋಗಿ ಸ್ವೀಟ್ ತಗೊಂಬಾರೊ ಇವತ್ತು ಸತೀಶನಿಗೆ ನಾನೇ ಸ್ವೀಟ್ ತಿನ್ನುಸ್ತೀನಿ " ಎಂದು ಹಣ ಕೊಟ್ಟರು .
ಸತೀಶನಿಗೆ ನಂಬಲಾಗಲಿಲ್ಲ  ಹೆಡ್ ಮಾಸ್ಟರ್ ಅವನ ಕೈಗೆ ಒಂದು ಬಿಳಿ ಚೀಟಿಯನ್ನು ಕೊಟ್ಟು "ನೋಡು ಇಡೀ ತಾಲೂಕಿಗೆ ಫಸ್ಟ್ ಬಂದಿದಿಯಾ ಕಣಯ್ಯ. ನಮಗೂ ನಮ್ಮ ಸ್ಕೂಲ್ ಗೆ ನಿಮ್ಮ ಅಪ್ಪ ಅಮ್ಮನಿಗೆ ಒಳ್ಳೆಯ ಹೆಸರು ತಂದೆ . ವೆರಿ ಗುಡ್ ಐ ಯಾಮ್ ವೆರಿ ಪ್ರೌಡ್ ಆಫ್ ಯು ಮೈ ಬಾಯ್" ಎಂದು ತಬ್ಬಿಕೊಂಡರು ಸತೀಶನಿಗೆ ಕಣ್ಣೀರು ತಡೆಯಲಾರದೆ ಉದುರಿದವು .

ಎಂದಿನಂತೆ ಮೊದಲು ಸುಜಾತ ಜೋರಾಗಿ ಚಪ್ಪಾಳೆ ತಟ್ಟಿದರೆ ಉಳಿದವರು ಚಪ್ಪಾಳೆ ತಟ್ಟದೆ ಇರಲಿಲ್ಲ.
ಮಹೇಶ ಮಾತ್ರ ಮುಖ ಸಿಂಡರಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ.

ಮುಂದುವರೆಯುವುದು

ಸಿ ಜಿ ವೆಂಕಟೇಶ್ವರ

21 ಜನವರಿ 2022

ಪರಿಮಳ .ಹನಿ


 


*ಪರಿಮಳ*



ತಳುಕು ಬಳುಕಿನ

ಬಾಹ್ಯ ಸೌಂದರ್ಯ

ಶೋಭಿಸಬಹುದೇ?

ಬೆಲೆ ಬಾಳುವ 

ಸ್ವರ್ಣ ಪುಷ್ಪವು

ಪರಿಮಳ ಸೂಸುವುದೇ?


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


20 ಜನವರಿ 2022

ನನ್ನ ಹೃದಯದಲಿ ಅವನಿಗೆ ಜಾಗವಿದೆ.


 


ಅವನ ಹೃದಯದಲ್ಲಿ ನನಗೆ ಜಾಗವಿದೆ .

ಅವನು ಮುಸ್ಲಿಂ,ನಾನು ಹಿಂದೂ .ಅವನು ನಗರದಲ್ಲಿ ಹುಟ್ಟಿ ಬೆಳೆದದ್ದು ನಾನು ಹಳ್ಳಿಯಲ್ಲಿ.ಅವನೀಗ ಆರಕ್ಷಕ, ನಾನು ಶಿಕ್ಷಕ . ನಮ್ಮಿಬ್ಬರದು ಈಗಲೂ ಒಳ್ಳೆಯ ಒಡನಾಟ. ಅಷ್ಟಕ್ಕೂ ನಮ್ಮಿಬ್ಬರನ್ನೂ ಒಂದುಗೂಡಿಸಿರುವ ಶಕ್ತಿ ಯಾವುದು? ಇನ್ನಾವುದು ಅದೇ ಗೆಳೆತನ!

ನಮಗೆ ನಮ್ಮ ಬಾಲ್ಯದ ಗೆಳೆಯರ ಒಡನಾಟವನ್ನು ಮರೆಯಲು ಸಾದ್ಯವಿಲ್ಲ ಆ ನೆನಪುಗಳೇ ಅಮರ .ನನಗೂ ನ್ನ ಲಬಾಲ್ಯವನ್ನು ಅವಿಸ್ಮರಣೀಯವಾಗಿಸಿದ  ಬಹಳ ಜನ ಚಡ್ಡಿ ದೋಸ್ತ್ಗಳಿದ್ದಾರೆ .ಅವರೆಲ್ಲರೂ ನನ್ನ ಜೀವನದಲ್ಲಿ ದೊರೆತ ಅಮೂಲ್ಯವಾದ ರತ್ನಗಳೆ ಸರಿ ಆ  ಗೆಳೆಯರ ಬಗ್ಗೆ ನಂತರ ಮಾತನಾಡುವೆ.

ನಾನೀಗ ಹೇಳಹೊರಟಿರುವುದು ನನ್ನ ಪ್ಯಾಂಟ್ ದೋಸ್ತ್ ಬಗ್ಗೆ ಅವನೇ ಇಸ್ಮಾಯಿಲ್ ಜಬೀವುಲ್ಲಾ . ಯರಬಳ್ಳಿಯಲ್ಲಿ ಪಿ. ಯು. ಮುಗಿಸಿ ಹಿರಿಯೂರಿನ ವಾಣಿ ಕಾಲೇಜ್ ಗೆ ಅಡ್ಮಿಷನ್ ಆದಾಗ ಇದ್ದವನೊಬ್ಬನೇ ಗೆಳೆಯ ಅವನು ಶಿವಕುಮಾರ .ಈಗ ಬೆಂಗಳೂರಿನಲ್ಲಿ ಲಾಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಕ್ರಮೇಣವಾಗಿ ಹಿರಿಯೂರಿನ ಟಿ. ಬಿ. ಸರ್ಕಲ್ ನಿಂದ ಮಾರಿಕಣಿವೆ ಸರ್ಕಲ್ ಮಧ್ಯ ಎರಡು ಕಿಲೋಮೀಟರ್ ಅಂತರ ನಡೆಯಲಾರದೆ ಆ ಮಾರ್ಗವಾಗಿ ಹೊಸದುರ್ಗದ ಕಡೆ ಹೋಗುವ ಬಸ್ ನ ಟಾಪ್ ಹತ್ತಿ ನಮ್ಮ ಕಾಲೇಜ್ ಗೆ ಪಯಣ ಬೆಳೆಸುವಾಗ ಪರಿಚಿತನಾದವನೇ ಜಬಿ!

ಈಗ ಚಿತ್ರದುರ್ಗದಲ್ಲಿ ಪೊಲಿಸ್ ಇಲಾಖೆಯಲ್ಲಿ ಸೇವೆ ಮಾಡುವ ಜಬಿಯ ಗೆಳೆತನ ಈಗಲೂ ಮುಂದುವರೆದಿದೆ ಮುಂದೆಯೂ ಇರುವುದು.
ನಮ್ಮಿಬ್ಬರಲ್ಲಿ ಈಗಲೂ ಯಾರಾದರೂ
ಸಣ್ಣ ಪೆನ್ ನಿಂದ ಹಿಡಿದು ಹೊಸ ಮೊಬೈಲ್, ಆಗಲಿ, ಬೈಕ್, ಆಗಲಿ, ಯೂ. ಪಿ. ಎಸ್. ಆಗಲಿ, ಕಾರ್ ಆಗಲಿ ಏನೇ ಕೊಳ್ಳಬೇಕಾದರೆ ಗಂಟೆಗಟ್ಟಲೆ ಪೋನ್ ನಲ್ಲಿ ಸಂಭಾಷಣೆ ಮಾಡಿ ಪರಸ್ಪರ ಸಲಹೆ ಪಡೆದು ಖರೀದಿಸುವುದಿದೆ. ಜಬಿ ಪೋನ್ ಮಾಡಿದ ಎಂದರೆ ನನ್ನ ಮೊದಲ ಮಗಳು "ಅಪ್ಪ ,ಮಿನಿಮಮ್ ಅಂದರೆ  ಇನ್ನರ್ದ ಗಂಟೆ ನಿಮ್ ಮಾತು ಮುಗಿಯಲ್ಲ "ಎಂದು ಜೋಕ್ ಮಾಡುತ್ತಾಳೆ . ನಮ್ಮ ಮಾತು ಬರೀ ಪೋನ್ ನಲ್ಲಿ ಮುಗಿಯಲ್ಲ ಮುಖತಃ ಮಾತನಾಡಬೇಕು ಎಂದರೆ ದಿಢೀರ್ ಭೇಟಿಯಾಗುವುದೂ ಉಂಟು. ಒಮ್ಮೆ ತಾನು ಕೊಂಡ ಹೊಸ ಮೊಬೈಲ್ ತೋರಿಸಲು ಚಿತ್ರದುರ್ಗದಿಂದ ನಾನು ಕೆಲಸ ಮಾಡುವ ಗೌರಿಬಿದನೂರಿಗೆ ಬಂದಿದ್ದ ಎಂದರೆ ನೀವು ನಂಬಲೇಬೇಕು.
ನಮ್ಮ ಸ್ನೇಹ ನಮಗೆ ಮಾತ್ರ ಸೀಮಿತವಾಗಿಲ್ಲ ಅದು ಕುಟುಂಬಕ್ಕೂ ವಿಸ್ತರಿಸಿದೆ. ನಾವು ಡಿಗ್ರಿ ಓದುವಾಗ ಅವರ ಅಮ್ಮ ಅವರ ಗುಡಿಸಲ ಮನೆಯಲ್ಲಿ ಸೀಮೇಎಣ್ಣೆ ಸ್ಟೌವ್  ಮೇಲೆ ಮಾಡಿಕೊಡುತ್ತಿದ್ದ ನೀರ್ ದೋಸೆ ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತದೆ.  ಆಗ ಅವರ ಮನೆಯಲ್ಲಿ ನೀರ್ ದೋಸೆ ತಿಂದು ಒಂದು ಸಿನಿಮಾ ನೋಡಿ ಸಂಜೆ ಅವರ ಮನೆಯಲ್ಲಿ ಟೀ ಕುಡಿದು ನಮ್ಮ ಮನೆಯ ಕಡೆ ಹೊರಡುತ್ತಿದ್ದೆ .ನಮ್ಮಿಬ್ಬರಲ್ಲಿ ಯಾರ ಬಳಿಯಾದರೂ ಆರು ರೂಪಾಯಿ ಇದ್ದರೆ ಅಂದು ಸಿನಿಮಾ ಫಿಕ್ಸ್ ಏಕೆಂದರೆ ಆಗ ಜಯಲಕ್ಷ್ಮಿ ಥಿಯೇಟರ್ ನಲ್ಲಿ ಬೆಂಚಿನ ಮೇಲೆ ಕುಳಿತು ಸಿನಿಮಾ ನೋಡಲು ಮೂರು ರೂಪಾಯಿ ಟಿಕೆಟ್! ಆದರೆ ಕಾಲೇಜ್ ಬಂಕ್ ಮಾಡಿ ಮನೆಯಲ್ಲಿ ಹೇಳದೆ ಎಂದೂ ಸಿನಿಮಾಕ್ಕೆ ಹೋಗುತ್ತಿರಲಿಲ್ಲ. ಆದರೂ ಜಬಿಯ ತಾಯಿ "ನೀವಿಬ್ಬ್ರೂ ಇಂಗೇ ಸಿನಿಮಾ ನೋಡಿದ್ರೆ ಡಿಗ್ರಿ ಮಾಡದೆಂಗೆ "ಎಂದು ಪ್ರೀತಿಯಿಂದ ಬೈಯುತ್ತಿದ್ದರು.ಅವರಿಗೂ ಗೊತ್ತಿತ್ತು ನಮಗೆ ಸಿನಿಮಾ ನೋಡುವುದು ಮತ್ತು ಹಾಡು ಕೇಳೊದು ಬಿಟ್ಟು ಇನ್ನಾವುದೇ ಚಟಗಳಿಲ್ಲ ಎಂಬುದು.

ಜಬಿ ಏನದರೂ ತಿಂಗಳಲ್ಲಿ  ನಮ್ಮ ಊರಿಗೆ ಬರಲಿಲ್ಲ ಎಂದರೆ ಯಾಕೋ ಜಬಿ ಬರಲಿಲ್ಲ ಕಣಪ್ಪ ಎಂದು ನಮ್ಮ ಅಮ್ಮ ಕೇಳುತ್ತಿದ್ದರು. ನಮ್ಮ ತೋಟದ ಎಳನೀರು, ಮಾವಿನ ಕಾಯಿ , ಅಡಿಕೆ , ಬಾಳೆ ಹಣ್ಣು ಎಂದರೆ ಅವನಿಗೆ ಬಲು ಇಷ್ಟ

ಒಮ್ಮೆ ಚಿತ್ರದುರ್ಗ ದ ಬಳಿ ನನಗೆ ಬೈಕ್ ನಲ್ಲಿ  ಅಪಘಾತವಾದಾಗ ಮೊದಲು ಓಡೋಡಿ ಬಂದು ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿ ನಮ್ಮ ಮನೆಯವರಿಗೆ ಸುದ್ದಿ ಮುಟ್ಟಿಸಿ ತಮ್ಮ ಮನೆಯಲ್ಲೇ ಹಾರೈಕೆ ಮಾಡಿದ ಗೆಳೆಯನ ಹೇಗೆ ಮರೆಯಲಿ? 

ನನ್ನ ಬರವಣಿಗೆಯ ದೊಡ್ಡ ಅಭಿಮಾನಿಯಾದ ಅವನು ನನ್ನ  ಮೊದಲ ಕವನ ಸಂಕಲನ ಸಾಲು ದೀಪಾವಳಿ ಬಿಡುಗಡೆಯಾದಾಗ ಆ ಪುಸ್ತಕದ ಬೆಲೆ ಎಪ್ಪತ್ತು ಇತ್ತು ಗೂಗಲ್ ಪೇ ನಲ್ಲಿ ಎಂಭತ್ತು ರೂ ಹಾಕಿದ .ಯಾಕೆ ಅಂತ ಪ್ರಶ್ನೆ ಮಾಡಿದ್ದಕ್ಕೆ ನನ್ನ ಗೆಳೆಯ ಕವಿಯಾಗಿದ್ದಾನೆ ,ಅವನ ಸಾಹಿತ್ಯಕ್ಕೆ ಬೆಲೆ ಕಟ್ಟಲಾಗದು ಆದರೂ ನಾನು ಹತ್ತು ರೂ ಅಷ್ಟೇ ಜಾಸ್ತಿ ಕೊಡುತ್ತಿರುವೆ  ಅದು ನನ್ನ ಸಂತೋಷ ನೀನು ಕೇಳಬಾರದು ಎಂದು ಬಾಯಿ ಮುಚ್ಚಿಸಿದ.ಮೊನ್ನೆ " ನನ್ನಮ್ಮ ನಮ್ಮೂರಿನ ಪ್ಲಾರೆನ್ಸ್ ನೈಟಿಂಗೇಲ್ " ಪುಸ್ತಕ ಪ್ರಕಟವಾದಾಗ ನೂರಿಪ್ಪತ್ತರ ಪುಸ್ತಕಕ್ಕೆ ನೂರೈವತ್ತು ಕೊಟ್ಟು ಖರೀದಿಸಿ ,ಪುಸ್ತಕದ ಮುಖಪುಟವನ್ನು ವಾಟ್ಸಪ್ ,ಪೇಸ್ ಬುಕ್ ಗಳಲ್ಲಿ ಶೇರ್ ಮಾಡಿ ತನ್ನದೇ ಪುಸ್ತಕ ಬಿಡುಗಡೆಯಾಗಿದೆಯೇನೋ ಎಂದು ಸಂಭ್ರಮಿಸಿದನು.
ನಾನೀಗ ಇರುವುದು ತುಮಕೂರು ಅವನು ಚಿತ್ರದುರ್ಗ ಆದರೂ
ನಮ್ಮ ಸ್ನೇಹ ಹೀಗೆಯೇ ಮುಂದುವರೆದಿದೆ .ಒಂದೇ ಕಡೆ ನಾವು ಸೇರಿ ಮನೆಕಟ್ಟಿಕೊಳ್ಳಬೇಕೆಂದು ಒಂದೇ ಬಡಾವಣೆಯಲ್ಲಿ ಸೈಟ್ ಕೊಂಡಿದ್ದೇವೆ ಅಲ್ಲಿ ಮನೆ ಕಟ್ಟುತ್ತೇವೋ ಇಲ್ಲವೋ ಗೊತ್ತಿಲ್ಲ. ಅವನ ಹೃದಯದಲ್ಲಿ ನನಗೆ ಬೇಕಾದಷ್ಟು, ಅವನ ಹೃದಯದಲ್ಲಿ ನನಗೆ ಬೇಕಾದಷ್ಟು ಜಾಗವಿರುವುದು ಮಾತ್ರ ಸತ್ಯ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

18 ಜನವರಿ 2022

ದಿನಕರ .ಹನಿ


 


*ದಿನಕರ*


ಅಲೆಗಳೇರಿ ಬಂದನು

ನೋಡಲ್ಲಿ  ದಿನಕರ|

ನಮಿಸೋಣ ನಾವು

ಮುಗಿಯುತ ಕರ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ