09 ಜನವರಿ 2022

ಕನ್ನಡಿಗರಿಗೆ ಮೊದಲು ಕನ್ನಡದ ಪ್ರಜ್ಞೆ ಇರಬೇಕು.


 



ಕನ್ನಡಿಗರಿಗೆ ಮೊದಲು ಕನ್ನಡದ ಪ್ರಜ್ಞೆ ಇರಬೇಕು.


"ಕನ್ನಡ ಪ್ರಜ್ಞೆಯ ಸುತ್ತಮುತ್ತ" ಎಂಬ ಪುಸ್ತಕದ ಅಡಿ ಬರಹದಲ್ಲಿ

ನಾಡು-ನುಡಿ-ಚಿಂತನೆ ಎಂಬ ಸಾಲು ಓದಿ ಪುಸ್ತಕ ಓದಲು ಶುರು ಮಾಡಿದರೆ ಅಜಮಾಸು 324 ಪುಟಗಳಲ್ಲಿ 72 ಲೇಖಕರು ತಮ್ಮ ಲೇಖನಗಳ ರಸಪಾಕ ಉಣಬಡಿಸಿದ್ದಾರೆ.ಪುಸ್ತಕ ಓದಿ ಮುಗಿಸಿದಾಗ ಎಪ್ಪತ್ತೆರಡು ಪುಸ್ತಕಗಳನ್ನು ಓದಿದ ಅನುಭವವಾಗುತ್ತದೆ. ಇಂತಹ ಪುಸ್ತಕ ಓದಲು ಕಳಿಸಿದ ಆತ್ಮೀಯರು ಗೆಳೆಯರು ಮತ್ತು ಸಾಹಿತಿಗಳೂ ಆದ ಕಿರಣ್ ಹಿರಿಸಾವೆ ರವರಿಗೆ ಮೊದಲಿಗೆ ನನ್ನ ನಮನಗಳ ಸಲ್ಲಿಸುವೆ .


ಡಾ. ಗೀತಾ ಡಿ .ಸಿ. ಮತ್ತು

ನಾಗರೇಖಾ ಗಾಂವಕರ ರವರು ಜಂಟಿಯಾಗಿ ಈ ಕೃತಿಯ ಸಂಪಾದನೆ ಮಾಡಿರುವರು.ಇದರಲ್ಲಿ ಬರುವ 

72 ಲೇಖನಗಳು ಒಂದೊಂದು ಮೌಲಿಕ ಮತ್ತು ಚಿಂತನಾರ್ಹ ಲೇಖನಗಳಾಗಿವೆ . ಸಂಪಾದಕರ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.


ಎಲ್ಲಾ ಲೇಖಕರ ಲೇಖನಗಳು ಅತ್ಯುತ್ತಮ ಆದರೂ ಕೆಲವರ ಚಿಂತನಾರ್ಹ ಅಭಿಪ್ರಾಯಗಳ ಮೆಲುಕು ಹಾಕುವ ಕಾರ್ಯ ಮಾಡುವುದಾದರೆ,

ಕುಸುಮಾ ಆಯರಹಳ್ಳಿ ರವರು ನಮ್ಮ ಕನ್ನಡದ ಪ್ರಾದೇಶಿಕ ಭಾಷಾ ಸೊಗಡು ಇಂದು ನಶಿಸುವ ಬಗ್ಗೆ ನಾವು ಚಿಂತಿಸಬೇಕಿದೆ ಎಂದಿರುವುದು ಮನನೀಯವಾಗಿದೆ .


ಮುಂಬಯಿ ಕನ್ನಡ ಸಂಘಟನೆಯವರು ನಿಘಂಟು ತಜ್ಞರಾದ ಜೀವಿರವರ ಸಂದರ್ಶನದಲ್ಲಿ  ಕೇಳಿದ ಪ್ರಶ್ನೆಗೆ ಅವರು   "ಕನ್ನಡದ ಅಳಿವು ಅಸಾಧ್ಯ. ಕನ್ನಡದ ತಾಕತ್ತು ಅನನ್ಯ ಎಂಬುದು ನಮಗೆ ಸಮಾಧಾನ ತರುತ್ತದೆ. 

ಅವರ ಮಾತುಗಳಲ್ಲೇ ಹೇಳುವುದಾದರೆ

"ಕನ್ನಡ ಅಳಿಯಲ್ಲ  ,ಅನ್ಯಭಾಷಾ ಪದಗಳು ಕನ್ನಡದಲ್ಲಿ ಬೆರೆತರೆ ತಪ್ಪಿಲ್ಲ , ಶಾಸ್ತ್ರೀಯ ಭಾಷೆ ಅನುದಾನ ಪಡೆಯಲು ಯೋಜನೆ ರೂಪಿಸಬೇಕು"


ಕಿರಣ್ ಹಿರಿಸಾವೆ ರವರು 

ಐಟಿ ಕಂಪನಿಗಳು  ಕನ್ನಡದ ಬೆಳವಣಿಗೆಗೆ ಪರೋಕ್ಷವಾಗಿ ಹೇಗೆ ಕೊಡುಗೆ  ನೀಡಿವೆ ಮತ್ತು ಪ್ರತ್ಯಕ್ಷವಾಗಿ ಕನ್ನಡ ಬೆಳೆಯಲು ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡ ಉಳಿಯಲು 

 ಹೆಚ್. ಆರ್ ರಿಸೆಪ್ಷನಿಸ್ಟ್, ಕಟ್ಟಡ ಕಾಮಗಾರಿಯವರು  ಇಂತಹ ಹುದ್ದೆಗಾದರೂ  ಕನ್ನಡದ ಜನರ ನೇಮಕಗೊಂಡರೆ ಅವರು ಆಡುವ ಕನ್ನಡ ಮಾತುಗಳು ಆಂಗ್ಲಮಯವಾದ ಐಟಿ ಕಂಪನಿಗಳಲ್ಲಿ ಸ್ವಲ್ಪಮಟ್ಟಿಗೆ ಕನ್ನಡ ನಲಿಯಲಿದೆ ಎಂಬ ಸಲಹೆ ಸ್ವಾಗತಾರ್ಹ.


ಈ ಪುಸ್ತಕದಲ್ಲಿ ಮಾತೃಭಾಷೆ ಬೇಕೇ ಬೇಕು ಎಂದು ಕೆಲವರು ವಾದ ಮಂಡಿಸಿದರೆ .ಅದಕ್ಕಾಗಿಯೇ ಅಷ್ಟೊಂದು ಚಿಂತೆ ಬೇಡ ಎಂಬುದು ಕೆಲವರ ವಾದವಾಗಿದೆ.

ವಾದಗಳು ಎರಡೂ ಕಡೆಯಿಂದಲೂ ಗಟ್ಟಿಯಾಗಿ ಕೇಳಿಸುತ್ತವೆ. ಸಮರ್ಥನೀಯವಾಗಿ ಕೇಳಿಸುತ್ತವೆ. ಈ ವಿದ್ಯಮಾನವನ್ನು ಸ್ವಾತಂತ್ರ್ಯ ಮತ್ತು ಸಮಾನತೆ ಎಂಬ ಪರಿಕಲ್ಪನೆಗಳಿಂದ ಅರ್ಥಮಾಡಿಕೊಳ್ಳುವ ಪ್ರಯತ್ನಗಳೂ ನಡೆದಿವೆ.


ಡಾ. ಬಿ .ಜನಾರ್ಧನ ಭಟ್ ರವರು ವಾಸ್ತವವಾಗಿ ವಿಷಯ ವಿಶ್ಲೇಷಣೆ ಮಾಡಿದ್ದಾರೆ .ಮಾತೃಭಾಷೆಯೇ ಬೇಕು ಎಂದು ಹೋರಾಡಿದ ನೇಪಾಳ, ಝಾರ್ಕಂಡ್ ರಾಜ್ಯದಲ್ಲಿ ಹೇಗೆ ಅದು ಹಳ್ಳ ಹಿಡಿದು ಪುನಃ ಇತರೆ ಭಾಷೆಯಲ್ಲಿ ಶಿಕ್ಷಣ ಮೇಲುಗೈ ಸಾಧಿಸಿದೆ ಎಂದು ವಿವರಗಳನ್ನು ನೀಡಿದ್ದಾರೆ.

ಮಾತೃಭಾಷೆಯೇ ಬೇಕು ಮತ್ತು ಬೇಡ ಎಂದು ವಾದ ಮಂಡಿಸುತ್ತಾ ಕೂತಿರುವ ಬದಲು ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವುದು ಮತ್ತು ಪರಿಣಾಮಕಾರಿಯಾಗಿ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವ ಕಡೆಗೆ ಗಮನ ಹರಿಸಬೇಕಾಗಿದೆ. ನಾವು ಕನ್ನಡವನ್ನು ಕಲಿಸಬೇಕು ಎನ್ನುವುದನ್ನು ಮಾತಾಡುತ್ತಿದ್ದೇವೆಯೇ ಹೊರತು ಹೇಗೆ ಅನ್ನುವುದನ್ನು ಯೋಚಿಸುತ್ತಿಲ್ಲ.


ಪ್ರತಿ ಸೀಮೆಗೂ ಒಂದು ಹೊಸ ಪದವಿದೆ, ಒಂದು ಅರ್ಥವಿದೆ, ಒಂದು ಭಾವುಕತೆ ಇದೆ  ಮತ್ತು ಅವೆಲ್ಲವುಗಳ ಸಂಗ್ರಹವೇ ಈ ಕನ್ನಡವಾಗಿ ಕಣ್ಣೆದುರಿಗಿದೆ. ಒಟ್ಟಾರೆಯಾಗಿ ನಮ್ಮ ತಾಯ್ತುಡಿಯ ಎದೆ ಹಾಲನ್ನು ಕುಡಿದಿದ್ದೇವೆ ನಮ್ಮ ಉಸಿರಿನ ಕೊನೆಯವರೆಗೂ ಋಣಕ್ಕಾದರೂ ಅವಳನ್ನು ಉಳಿಸಿ-ಬೆಳಸುವಲ್ಲಿ ಸಕ್ರಿಯವಾಗಬೇಕಿದೆ. ನಮ್ಮ ಈ ಲಿಪಿಗಳ ರಾಣಿ ಎಂದೂ ನೊಂದುಕೊಳ್ಳದಂತೆ ಜತನದಿಂದ ಕಾಯ್ದುಕೊಳ್ಳಬೇಕಾಗಿದೆ.ಎಂಬ ಮೌನೇಶ್ ಎಂ ವಿಶ್ವಕರ್ಮ ರವರ ಮಾತುಗಳು ಚಿಂತನಾಯೋಗ್ಯ. 


ಡಾ. ಎಚ್ .ಎಸ್. ರಾಘವೇಂದ್ರ ರಾವ್  ರವರು ಕನ್ನಡ ಪ್ರಜ್ಞೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಆಶಾದಾಯಕ ಅಭಿಪ್ರಾಯವನ್ನು ಮಂಡಿಸುತ್ತಾರೆ.ಅವರ ಮಾತುಗಳಲ್ಲಿ ಹೇಳುವುದಾದರೆ

"ಈಗಲೂ  ಪ್ರೀತಿಯಿಂದ ಕನ್ನಡ ಕಲಿಸುವ  ಕೆಲಸ ಮಾಡುತ್ತಿರುವ ಹಲವು ಮೇಷ್ಟ್ರುಗಳು ಮೇಡಮ್ಮುಗಳು ನನಗೆ ಗೊತ್ತು. ಅವರಲ್ಲಿ ಅನೇಕರು ಸರಕಾರೀ ಶಾಲೆಗಳಲ್ಲಿ ಇದ್ದಾರೆ. ಅಂತಹವರ ಸಂತತಿ ಸಾವಿರವಾಗಲಿ, ಅಂತಹವರಿಗೆ ಅಗತ್ಯವಾದ ಪರಿಸರವನ್ನು ರೂಪಿಸಿಕೊಡುವುದು ಸಮುದಾಯಗಳ ಹಾಗೂ ಸರ್ಕಾರದ ಕೆಲಸ. "


ವಾಸುದೇವ್ ನಾಡಿಗ್ ರವರು ಅನ್ಯ ಭಾಷೆಗಳು ಮನೆಯ ಕಿಟಕಿಗಳು ಇದ್ದ ಹಾಗೆ, ತಾಯ್ನುಡಿ ಹೆಬ್ಬಾಗಿಲು ಇದ್ದ ಹಾಗೆ ಎಂಬ ಭಾಷಣದ ಕೋಟ್ಗಳು ಕ್ಲೀಷೆಯಾದ ಈ ಹೊತ್ತಿನಲ್ಲಿ ಮಾತನ್ನು ಒಣಪಾಂಡಿತ್ಯದ ಪ್ರದರ್ಶನವನ್ನು ನಿಲ್ಲಿಸಿ ಅರಿವಿನ ಮೂಲಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಕಲಿಕೆ ಎನ್ನುವುದು ಇಬ್ಬದಿಯ ಪ್ರಕ್ರಿಯೆ . ಅರಿವು ಎನ್ನುವುದು ನಿಷ್ಟುರವಾಗಿ ಇಬ್ಬರ ಹೊಣೆ, ಸುರಿಯುವ ಶಿಕ್ಷಕ ತುಂಬಿಕೊಂಡು ನಿಲ್ಲಬೇಕು, ಬೊಗಸೆಯೊಡ್ಡುವ ಮಗು ಖಾಲಿಯಾಗುತ್ತಲೇ ಬರಬೇಕು.ಎಂಬ ಮಾತುಗಳಲ್ಲಿ ಅನಗತ್ಯವಾದ ವಾದ ವಿವಾದಗಳ ಮಾಡದೇ ಕನ್ನಡ ಕಟ್ಟುವ ಕೆಲಸವನ್ನು ಗಟ್ಟಿಯಾಗಿ ಮಾಡೋಣ ಎಂದಿರುವರು.

ರಾಷ್ಟ್ರೀಯ ನೆಲೆಯಲ್ಲಿ ಪ್ರತಿಯೊಂದು ಮಾತೃಭಾಷೆಯೂ ಅಭಿವ್ಯಕ್ತಿಯಲ್ಲಿ ಅಗತ್ಯವಿರುವ ಭಾಷಾ ಸಂಪತ್ತನ್ನು ಮೈಗೂಡಿಸಿಕೊಳ್ಳುವ ಅಗತ್ಯವೂ ಸಹ ಮಾತೃಭಾಷೆಯ ಯಷ್ಟೇ ಮುಖ್ಯವಾದದ್ದು. ಭಾಷಿಕ ಕೊಡು-ಕೊಳ್ಳುವಿಕೆಯಲ್ಲಿ ಮಡಿವಂತಿಕೆಯನ್ನು ಬಿಟ್ಟು ಪದಸಂಪತ್ತನ್ನು ಹೆಚ್ಚಿಸಿಕೊಂಡಾಗ ಬೇರೆ ಬೇರೆ ಕ್ಷೇತ್ರಗಳ ಜ್ಞಾನ ಸಂಪತ್ತನ್ನು ನವೀಕರಿಸಿ ಕೊಂಡು ನಮ್ಮದನ್ನಾಗಿ ಮಾಡಿಸಿಕೊಳ್ಳುವುದು ಸಾಧ್ಯವಾಗುತ್ತದೆ.ಆಗ  ಭಾಷೆಗಳ ನಡುವಿನ ಕೊಡುಕೊಳ್ಳುವಿಕೆ ಕೂಡ ಸುಲಭವಾಗುತ್ತದೆ.ಎಂದು ಬಾಗೇಪಲ್ಲಿಯಂತಹ ಗಡಿ ನಾಡಿನಲ್ಲಿ ಕಾರ್ಯ ನಿರ್ವಹಣೆ ಮಾಡಿದ ಆರ್ .ವಿಜಯರಾಘವನ್ ಅವರ ಮಾತುಗಳಲ್ಲಿ ಅನುಭವದ ಸಾರವಿದೆ.


ಮುಂಬೈನಲ್ಲಿ ನೆಲೆಸಿದ್ದರೂ ಕನ್ನಡದ ಬಗ್ಗೆ ಚಿಂತಿಸುವ ಶ್ರೀನಿವಾಸ ಜೋಕಟ್ಟೆ ರವರು ಕನ್ನಡ ಮಾಧ್ಯಮ  ಮಕ್ಕಳ ಅನ್ನದ ಭಾಷೆಯಾಗುವಂತೆ ನಮ್ಮಿಂದೇನಾದರೂ ಮಾಡಲು ಸಾಧ್ಯವೇ? ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗ ಸಿಗುವ ಸಾಧ್ಯತೆ ಎಷ್ಟಿದೆ? ಇದನ್ನೆಲ್ಲ ಗಮನಿಸಿ ಹೊಸ ಶಿಕ್ಷಣ ನೀತಿಯ ಚರ್ಚೆ ಆಗಬೇಕಾಗಿದೆ. ಅನ್ನ ನೀಡಲಾಗದೆ ಕೇವಲ ಸಂಸ್ಕೃತಿ, ಭಾಷೆ ಉಳಿಯಲಿ ಎನ್ನುವ ಭಾಷಾ ಮಾಧ್ಯಮ ಶಿಕ್ಷಣ ಮವೇ ವ್ಯರ್ಥ ಆದೀತು.

ಇವತ್ತು ಜಾಗತೀಕರಣವನ್ನು ಬಿಟ್ಟು ಮಾತಾಡುವಂತಿಲ್ಲ, ಬದುಕುವಂತಿಲ್ಲ. ನಮ್ಮ ಅನೇಕ ಸಾಹಿತಿಗಳು 'ಪ್ರಗತಿಪರ' ಎಂದು ಕಾಣಿಸಿಕೊಳ್ಳುವುದರಲ್ಲೇ ಬದುಕುವುದರ ಜೊತೆಗೆ ಇಂತಹ ಕನ್ನಡ ಮಾಧ್ಯಮದ ವಿಷಯಗಳ ಕುರಿತೂ ಅಷ್ಟೇ ಆದ್ಯತೆ ನೀಡಲಿ. ಅದು ಅನ್ನ ನೀಡುವ ಮಾಧ್ಯಮವಾಗಬೇಕಾದರೆ ಏನು ಮಾಡಬೇಕು? ಈ ಕುರಿತು ನಮ್ಮ ಗಮನ ಹರಿಯಬೇಕು. ಎಂದು ಖಡಕ್ಕಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.


"ಆಯಾ ಪಾಂತ್ಯಗಳಲ್ಲಿ ಆಯಾ ದೇಶ ಭಾಷೆಗಳೇ ಆಡಳಿತ ಭಾಷೆಗಳಾಗಿರಬೇಕು. ಅಲ್ಲಿಯ ಶಿಕ್ಷಣವಲ್ಲ. ಎಲ್ಲ ಮಟ್ಟಗಳಲ್ಲಿಯೂ ದೇಶ ಮಾಧ್ಯಮದಲ್ಲಿಯೇ ಸಾಗಬೇಕು, ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾದರೂ ಮಾನ್ಯ ಸ್ಥಾನ ದೊರೆಯಬೇಕಾದರೆ ಅದು ಇಲ್ಲಿ, ಕರ್ನಾಟಕದಲ್ಲಿ, ಇನ್ನೆಲ್ಲಿಯೂ ಅಲ್ಲ"ಎಂಬ ಕುವೆಂಪುರವರ ಮಾತುಗಳನ್ನು ನಾವು ಮನನ ಮಾಡಿಕೊಳ್ಳಬೇಕಿದೆ.


ದ ರಾ ಬೇಂದ್ರೆಯವರು ಭಾಷೆಯ ಪ್ರಾಮುಖ್ಯತೆ ಕುರಿತು ಹೀಗೆ ಹೇಳಿರುವರು.

“ಜನರಿಗೆ ಹಿರಿಯರಿಂದ ಬರುವ ಒಡವೆಗಳಲ್ಲಿ ಭಾಷೆ ಒಂದು, ಅದು ಚೆನ್ನಾಗಿದ್ದಷ್ಟೂ  ಭೂಷಣ. ಅದರಲ್ಲಿ ಎಲ್ಲರಿಗೂ ಪರಿಶ್ರಮವಿದ್ದು, ಪ್ರಮುಖರಾದವರಿಗೆ ಪೂರ್ಣ ಜ್ಞಾನವಿದ್ದರೆ, ಅವರಿಗೆ ಲಾಭವೂ ಇವರಿಗೆ ಉತ್ಸಾಹವೂ ಉಂಟಾಗಿ  ಭಾಷೆಯೂ ಉತ್ಕೃಷ್ಟವಾಗುತ್ತದೆ.


"ಭಾಷೆಯೆಂಬುದು ಕೇವಲ ಅಕ್ಷರಗಳ ಗುಂಪಲ್ಲವಷ್ಟೆ? ಅದು ಸಮಾಜ ವಿಜ್ಞಾನದ, ಭಾವಕೋಶದ, ಸಂಸ್ಕೃತಿ ಪರಂಪರೆಯ ಸಮ್ಯಕ್ ಜೀಗದ ಕೈ ಒಂದು ಹಂತದವರೆಗೆ ಮಕ್ಕಳು ಅವರವರ ಪ್ರದೇಶ ಭಾಷೆಯಲ್ಲೇ ಕಲಿಯುತ್ತ ಮುಂದಿನವನ್ನು ಬೇಕಾದರೆ ಅವರಿಗೆ ಬಿಡೋಣ, ಹೆತ್ತವರೆಂದ ಮಾತ್ರಕ್ಕೆ ಮಕ್ಕಳ ಕುರಿತು ಎಲ್ಲ ಹಕ್ಕೂ ನಮಗಿದೆ ಅಂತ ತಿಳಿಯುವುದೇ ಅಸಂಬದ್ಧ ಎಂಬ ವೈದೇಹಿಯವರ ಮಾತು ವಾಸ್ತವಕ್ಕೆ ಹಿಡಿದ ಕನ್ನಡಿ ಎನ್ನಬಹುದು.



ಮುಗಿಸುವ ಮುನ್ನ.....


ಈ ಪುಸ್ತಕದಲ್ಲಿ ಕೆಲವು ಲೇಖಕರು ತಮ್ಮ ಲೇಖನದಲ್ಲಿ ಹೆಚ್ಚು ಹಳಗನ್ನಡ ಪದಗಳು ಮತ್ತು ಆಡಂಬರದ ಪದಗಳನ್ನು ಬಳಸಿರುವುದು ಸಾಮಾನ್ಯ ಓದುಗರು ತಡವರಿಸಿದಂತಹ  ಅನುಭವವಾಗುತ್ತದೆ ಆದರೂ ಭಾಷಾ ದೃಷ್ಟಿಯಿಂದ ಆ ಲೇಖನಗಳು ಮೌಲ್ಯಯುತ ಎಂಬುದನ್ನು ಒಪ್ಪಲೇಬೇಕು .


ನಮ್ಮಲ್ಲಿ ಕನ್ನಡದ ಪ್ರಜ್ಞೆ ಇನ್ನೂ ಜಾಗೃತವಾಗದಿದ್ದರೆ ಈ ಪುಸ್ತಕದಲ್ಲಿ ಇರುವ ಸವಿತಾ ನಾಗಭೂಷಣ ಅವರ ಕವಿತೆ ಒಮ್ಮೆ ಜೋರಾಗಿ ಓದಿಕೊಳ್ಳಿ ಸಾಕು.


ಕನ್ನಡವೇ ಬೇಕು.

ಓದಿ ಬರೆದು ಮಾತಾಡಲು...


ಕನ್ನಡವೇ ಬೇಕು

ಬೀಸಿ ಕಾಸಿ ಕುದಿಸಿ

ಉಂಡು ತಣಿಯಲು...


ಕನ್ನಡವೇ ಸಾಕು

ಸಿಗಿದು ಬಗೆದು ಉಗಿದು ಉಪ್ಪು ಹಾಕಲು...


ಕನ್ನಡವೇ ಸಾಕು

ಶೋಧಿಸಿ ಸಾಧಿಸಿ

ಸಾರಿಸಿ ಗುಡಿಸಿ ಹಾಕಲು....


ಪುಸ್ತಕ:   ಕನ್ನಡ ಪ್ರಜ್ಞೆಯ ಸುತ್ತ ಮುತ್ತ

ಸಂಪಾದಕರು:ಡಾ. ಗೀತಾ ಡಿ ಸಿ.ಮತ್ತು ನಾಗರೇಖಾ ಗಾಂವಕರ

ಪ್ರಕಾಶನ: ಕ್ರಿಯಾ ಮಾದ್ಯಮ. ಬೆಂಗಳೂರು

ಬೆಲೆ: 400₹ 


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

ತುಮಕೂರು

9900925529


*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗಳು*


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಮತ್ತು ಹನಿಗಳು*

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಮತ್ತು 9/1.22


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಮತ್ತು ಹನಿಗಳು*

08 ಜನವರಿ 2022

ಅಮ್ಮ ಹೆಣೆದ ಈಸ್ಲ ಸ್ಯಾಪೆ .ಆತ್ಮಕಥೆ ೨೨


 


ಅಮ್ಮ ಹೆಣೆದ ಈಸ್ಲ ಸ್ಯಾಪೆ

ಅಂದು ಕೊಟಗೇಣಿ ಎಂದು ಕರೆಯುತ್ತಿದ್ದ ಇಂದು ಚೌಡಗೊಂಡನಹಳ್ಳಿ ಎಂದು ಕರೆಯುವ ಊರಿನವನಾದ ನನ್ನ ಬಾಲ್ಯದ ನೆನಪುಗಳು ನನ್ನ ಸ್ಮೃತಿ ಪಠಲದಲ್ಲಿ ಅಚ್ಚಳಿಯದೆ ಉಳಿದಿವೆ.

ಅಪ್ಪನ ಅಕಾಲಿಕ ಮರಣದಿಂದ ಸಂಸಾರದ ನೊಗ ಹೊತ್ತ ನನ್ನಮ್ಮ ಕೂಲಿನಾಲಿ ಮಾಡಿ ನಮ್ಮ ಸಾಕುವ ಜವಾಬ್ದಾರಿ ಹೊತ್ತರ .
ನಮ್ಮ ತಂದೆ ನಮಗೆ ಬಿಟ್ಟು ಹೋದ ಆಸ್ತಿಯೆಂದರೆ ನಾಲ್ಕೆಕರೆ ಜಮೀನು ಒಂದು ಮನೆ . ಕಡಪ ಕಲ್ಲಿನ ಮನೆಯು ನಾನು ಅಮ್ಮ ಇರಲು ಎಷ್ಟು ಬೇಕೋ ಅಷ್ಟು ಸಾಕಾಗಿತ್ತು. ಮನೆಯ ಮುಂಭಾಗದಲ್ಲಿ ಒಂದು ಬಾಗಿದ ಚಪ್ಪರ ಕೂಡಾ ಇತ್ತು .ಕಡಪ ಕಲ್ಲಿನ ಮನೆಗೆ ಮೇಲೆ ಪ್ರತಿ  ಬೇಸಿಗೆಯಲ್ಲಿ  ವರ್ಷಕ್ಕೊಮ್ಮೆ ಕರಲ ಮಣ್ಣು ಹಾಕಿ ಮಳೆಗಾಲದಲ್ಲಿ ಮನೆ ಸೋರದಂತೆ ಮಾಡುತ್ತಿದ್ದೆವು. ಮನೆಯ ಮುಂಭಾಗದ ಬಾಗಿದ ಚಪ್ಪರಕ್ಕೆ ಪ್ರತಿ ವರ್ಷವೂ ಬಾದೆ ಹುಲ್ಲು ಹಾಕಿ ಸೋರದಂತೆ ಬಂದೋಬಸ್ತ್ ಮಾಡಬೇಕಾಗಿತ್ತು.

ನಮ್ಮ ಮನೆಗೆ ಆಗ ಯಾರಾದರೂ ನೆಂಟರು, ಅತಿಥಿಗಳು, ಬಂದರೆ ಮತ್ತು
ರಾತ್ರಿ ನಾವು  ಮಲಗಲು ಈಚಲ ಚಾಪೆ ಬಳಕೆ ಮಾಡುತ್ತಿದ್ದೆವು .
ಈ ಈಚಲ ಚಾಪೆ ಅಂಗಡಿಗಳಲ್ಲಿ ಕೊಂಡು ತಂದದ್ದಲ್ಲ ಬದಲಾಗಿ ನಮ್ಮ ಅಮ್ಮನೇ ಖುದ್ದು ಮಾಡಿದ ಚಾಪೆಗಳು!
ನಮ್ಮ ಊರಿನಿಂದ ಪೂರ್ವಾಭಿಮುಖವಾಗಿ ಎಂಟು ಕಿಲೋಮೀಟರ್ ಇರುವ ಗೌನಳ್ಳಿ ಹಳ್ಳಕ್ಕೆ ನಮ್ಮ ಊರಿನ ಜನರು ಬೆಳಿಗ್ಗೆ ಗುಂಪಾಗಿ ಕಾಲ್ನಡಿಗೆಯಲ್ಲಿ ಹೊರಟು ಗೌನಳ್ಳಿ ಹಳ್ಳ ತಲುಪಿ ಅಲ್ಲಿ ಈಚಲ ಮರದಿಂದ ಈಚಲ ಗರಿ ಕಿತ್ತು ಸಂಜೆಯ ವೇಳೆಗೆ   ನಮ್ಮ ಮನೆಗೆ ಹಿಂತಿರುಗುತ್ತಿದ್ದರು .ಆಗ ನನಗೆ ಹನ್ನೆರಡು ವರ್ಷ ನಾನೂ ಬರುವೆ ಎಂದು ಕೆಲವೊಮ್ಮೆ ಹಠ ಮಾಡಿದಾಗ ಅಮ್ಮ ವಿಧಿ ಇಲ್ಲದೆ ನನ್ನ ಕರೆದುಕೊಂಡು ಹೋಗುತ್ತಿದ್ದರು. ಹೋಗುವಾಗ ಅಂಗೂ ಇಂಗು ನಡೆದುಕೊಂಡು ಹೋಗುತ್ತಿದ್ದೆ. ಬರುವಾಗ  ಕಾಲು ನೋವಿನಿಂದ ಅಮ್ಮನ ಕಡೆ ನೋಡುತ್ತಿದ್ದೆ .ಅಮ್ಮ ತಲೆಯ ಮೇಲೆ ಈಚಲ ಗರಿಯ ಹೊರೆ ಹೊತ್ತು ಸಿಟ್ಟಿನಿಂದ ಕಂಕುಳಲ್ಲಿ ನನ್ನ ಕೂರಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕುತ್ತಿದ್ದರು .ಅದನ್ನು ಈಗ ನೆನದು ಆಗ ಅಮ್ಮನಿಗೆ ತಿಳಿಯದೆ ಕಷ್ಟ ಕೊಟ್ಟಿದ್ದನ್ನು  ನೆನದು ಮರುಗುತ್ತೇನೆ.

ಹಾಗೆ ತಂದ ಈಚಲ ಗರಿಗಳಿಂದ ದಿಂಡನ್ನು ಬೇರ್ಪಡಿಸಿ ,ಚಿಕ್ಕ ಚಿಕ್ಕ  ಕಟ್ಟುಗಳಾಗಿ ವಿಭಾಗ ಮಾಡಿ ಬಿಸಿಲಿನಲ್ಲಿ ಒಣಗಿಸುತ್ತಿದ್ದರು ಹೊಲದ ಕೆಲಸ ಇಲ್ಲದ ದಿನಗಳಲ್ಲಿ ಅಂಗೈ ಅಗಲದ ಚಿಕ್ಕ ಚಿಕ್ಕ ಚಾಪೆಯನ್ನು ಹೆಣೆಯುತ್ತಿದ್ದರು. ನಾನೂ ಚಾಪೆ ಹೆಣೆಯುವುದು ಕಲಿತು ಕೆಲವೊಮ್ಮೆ ಹೆಣೆಯುತ್ತಿದ್ದೆ ಹೀಗ ಹೆಣೆದ ಅಂಗೈ ಅಗಲದ ಪಟ್ಟಿಯನ್ನು ದುಂಡಾಗಿ ಸುತ್ತಿ ಅದನ್ನು ಒಂದರ ಪಕ್ಕ ಒಂದು ಜೋಡಿಸಿ ನಾಜೂಕಾಗಿ ಮತ್ತೊಂದು ಚಿಕ್ಕ ಈಚಲ ಎಳೆಯಿಂದ ಜೋಡಿಸಿ ಮೇಲೆ ಕೆಳೆಗೆ ದಿಂಡು ಕಟ್ಟಿದರೆ ಹಳ್ಳಿಯ ಜನರ ಬಾಯಲ್ಲಿ ಹೇಳುವ  "ಈಸಲ ಸ್ಯಾಪೆ " ಸಿದ್ದವಾಗುತ್ತಿತ್ತು.
ಹಸಿರು ಬಣ್ಣದ ಈಚಲ ಚಾಪೆಯ ಮೇಲೆ ಮಲಗಿದಾಗ ಹೊಸದಾದ ಒಂದು ರೀತಿಯ ಪರಿಮಳ ಸವಿಯುತ್ತಾ ಮಲಗಿದರೆ ನಿದ್ರಾದೇವತೆಯ ಆಲಿಂಗನದಲ್ಲಿ ಕರಗಿ ಹೋಗುತ್ತಿದ್ದೆ .ಅಮ್ಮ ಬೆಳಿಗ್ಗೆ ಜೋರಾಗಿ ಗದರಿದಾಗಲೆ ಎಚ್ಚರವಾಗುತ್ತಿತ್ತು .ಆಗ ಸೂರ್ಯ ದೇವ ನಮ್ಮ ಮನೆಯಲ್ಲಿ ಇಣುಕುತ್ತಿದ್ದ.
ನಂತರ ಕ್ರಮೇಣವಾಗಿ ಈಚಲ ಚಾಪೆ ಕಡಿಮೆಯಾಗಿ ಹಾಪಿನ ಚಾಪೆ ಬಂದವು. ಈಗ ಪ್ಲಾಸ್ಟಿಕ್ ಚಾಪೆಗಳ ಕಾಲ .ಅಮ್ಮ ಮೊನ್ನೆ ತುಮಕೂರಿಗೆ ಬಂದಾಗ "ಒಂದು ದೊಡ್ ಸ್ಯಾಪೆ ಕೊಡ್ಸಪ್ಪ ಊರಲ್ಲಿ ನೆಂಟರು ಬಂದಾಗ ಇರ್ಲಿ"  ಎಂದರು .ಆಗ ನನಗೆ ಈಚಲ ಚಾಪೆ ನೆನಪಾಯಿತು .ಈಗ ಮಂಚವಿದೆ ,ಮೆತ್ತನೆಯ ಹಾಸಿಗೆ ಇದೆ, ಕೊಠಡಿಯಲ್ಲಿ ಕೃತಕವಾದ ಪರಿಮಳವಿದೆ ಆದರೂ ಬಾಲ್ಯದಲ್ಲಿ ಅಮ್ಮ ನೇಯ್ದ  ಈಚಲ ಚಾಪೆಯ ಮೇಲೆ ಸ್ವಾಭಾವಿಕವಾದ ಪರಿಮಳ ಆಘ್ರಾಣಿಸುತ್ತಾ ಮಾಡಿದ ನಿದ್ದೆಗೆ ಸಮವಿಲ್ಲ

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು


ಉದಕದೊಳಗಿನ ಕಿಚ್ಚು. ಭಾಗ ೧೩


 ಉದಕದೊಳಗಿನ ಕಿಚ್ಚು .೧೩


ಯರಬಳ್ಳಿ ಮಾರಮ್ಮನ ಜಾತ್ರೆಯ ಸಡಗರ 


ಭಾಗ ೧



"ಕೇಳ್ರಪ್ಪೋ ಕೇಳಿ ಇವತ್ತಿಗೆ ಎಂಟು ದಿನಕ್ಕೆ ಯರಬಳ್ಳಿ ಮಾರಮ್ಮನ ಜಾತ್ರೆ ಸುರುವಾಗುತ್ತೆ ಕೇಳ್ರಪ್ಪೋ ಕೇಳ್ರಿ" ಉದ್ದನೆಯ ಗಿರಿಜಾ ಮೀಸೆಗಳು ರಾತ್ರಿಯ ಮಬ್ಬುಗತ್ತಲಲ್ಲೂ ಕಾಣುವ ಅಜಾನುಭಾಹು ಸಿದ್ದಾನಾಯ್ಕ ಪ್ರಾಣಿಗಳ ಚರ್ಮದಿಂದ ಮಾಡಿದ ತಮಟೆ ಯನ್ನು ಎಡತೋಳಿಗೆ ಹಾಕಿಕೊಂಡು ಎಡಗೈಯಲ್ಲಿ ಎಡಬುಜಕ್ಕೆ ಆನಿಸಿಕೊಂಡು ,ಎಡಗೈಯ ಹೆಬ್ಬೆರಳು ,ತೋರ್ಬೆರಳು, ಮತ್ತು ಮದ್ಯದ ಬೆರಳಿನಿಂದ ತೆಂಗಿನ ಗರಿಯನ್ನು ಕೌಶಲ್ಯದಿಂದ ಹಿಡಿದು ಬಲಗೈಯಲ್ಲಿ ಒಂದೂವರೆ ಅಡಿ ಉದ್ದದ ಕೋಲಿನಿಂದ  ಡಂಕಣಕ ಡಂಕಣಕ ....ಎಂದು ತಮ್ಮಟೆ ಬಡಿಯುತ್ತಾ ಆಗಾಗ್ಗೆ ಕಂಚಿನ  ಕಂಠದೊಂದಿಗೆ ಈ ಮೇಲಿನಂತೆ ಕೂಗುತ್ತ ಪ್ರತಿ ಬೀದಿಯಲ್ಲಿ  ಜಾತ್ರೆ ‌ನಿಶ್ಚಯ ಆದ ಬಗ್ಗೆ ಅಧಿಕೃತ ಮಾಹಿತಿಯನ್ನು ಊರವರಿಗೆ ತಿಳಿಸುತ್ತಾ.


"ದೊಡ್ಡಮ್ಮ ಈ ವರ್ಸ ಜಾತ್ರೆ ಎಂಗಿರ್ಬೇಕು ಗೊತ್ತಾ. ಸೆನ್ನಾಗಿ ಮಾಡೋಣ " ಎಂದು ಅಂಗಳದಲ್ಲಿ ಮಲಗಿದ ಸರಸ್ವತಜ್ಜಿಗೆ ಹೇಳಿದ ಸಿದ್ದಾನಾಯ್ಕ " ಆತೇಳಪ್ಪ ಆ ತಾಯಿ ಎಂಗೆ ನಡೆಸ್ತಾಳೊ ಅಂಗೆ ಆಗುತ್ತೆ" 


ಜಾತಿಯಲ್ಲಿ ನಾಯಕರಾದರೂ ಗೌಡರ ಸರಸ್ವತಜ್ಜಿಯನ್ನು ದೊಡ್ಡಮ್ಮ ಎಂದೆ ಸಂಬೋಧನೆ ಮಾಡುತ್ತಿದ್ದ ಸಿದ್ದಾನಾಯ್ಕ ಅದೇ ರೀತಿಯಲ್ಲಿ ಉತ್ತಮ  ಭಾವನೆ ಮತ್ತು ಅನ್ಯೋನ್ಯತೆ ಎಲ್ಲಾ ಇತ್ತು ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸತೀಶನಿಗೆ ಇದೇ ಅನ್ಯೋನ್ಯತೆ ಗುರುಸಿದ್ದ ಮತ್ತು ಅವರ ಜನಾಂಗದ ಮೇಲೆ ಏಕಿಲ್ಲ ? ಎಂಬ ಯಕ್ಷ ಪ್ರಶ್ನೆ ಕಾಡುತ್ತಿತ್ತು.



ಮಾರಮ್ಮನ ಗುಡಿಯ ಮುಂದಿನ ಪೌಳಿಯ ಮುಂದೆಲ್ಲ ಎಲ್ಲಾ ಕಡೆ ಹಿರಿಯರು ಕಿರಿಯರು ,ಆ ಜಾತಿ ಈ ಜಾತಿಯ ಎಲ್ಲರೂ ನೆರೆದಿದ್ದರು ಯಾವುದೋ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲು ಸಭೆ ಸೇರಿದ್ದರು. ತಲೆ ಪೂರಾ ಬೆಳ್ಳಗಾಗಿರುವ ಸುಮಾರು ಎಪ್ಪತ್ತೈದು ವರ್ಷದ ವೃದ್ಧರು ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದರು.ಬಿಳಿಬಣ್ಣದ ಜಂಪರ್ ಪದೇ ಪದೆ ಒಗೆದು ಕೆಂಪು ಬಣ್ಣದ್ದಾಗಿದ್ದು,

ಹೊರಗಡೆ ಗಾಳಿ ಬರುತ್ತಿದ್ದರೂ ಗುಡಿಯ ಒಳಗೆ ಗಾಳಿ ಕಡಿಮೆ ಮತ್ತು ಜನ ಹೆಚ್ಚಾಗಿ ಸೇರಿದ್ದರಿಂದ ದಗೆಯಾಗಿ  .ಕೆಲವರು ತಮ್ಮ ವಲ್ಲಿಬಟ್ಟೆ(ಟವಲ್) ಯಿಂದ ಆಗಾಗ್ಗೆ ಮುಖದ ಬೆವರು ಒರೆಸಿಕೊಳ್ಳುತ್ತಿದ್ದರು.



"ಯಾರಪ್ಪ ಈ ವರ್ಸ ಗುಡಿ ಗೌಡರು ಹೋದ ವರ್ಸ ಸೀನಪ್ಪ ಸೆನ್ನಾಗಿ ಜಾತ್ರೆ ಕೆಲ್ಸ ಮಾಡಿದ್ದರು. ಈ ವರ್ಸ ಅವರೇ ಇರಲಿ ಅಂದರೆ ಇರ್ಲಿ ,ಇಲ್ಲಾ ಅಂದರೆ ಬ್ಯಾರೆ ಯಾರ್ನಾನ ಮಾಡನಾ " ನಿಶ್ಯಬ್ದ ವಾತಾವರಣದಲ್ಲಿ ಸೇರಿದ್ದ ಸಭಿಕರನ್ನು ಉದ್ದೇಶಿಸಿ ಊರ ಹಿರಿಯರಾದ ನಾಗಪ್ಪ ರವರು ಉದುರಿದ ಹಲ್ಲುಗಳ ಬೊಚ್ಚು ಬಾಯಲ್ಲಿ ಅಸ್ಪಷ್ಟವಾಗಿ ಹೇಳಿದ್ದು ಯಾರಿಗೂ ಕೇಳದಿರಲಿಲ್ಲ " ಈ ವರ್ಸ ನಮ್ಮ ಮನ್ತನಕ್ಕೆ ಕೊಡ್ರಿ ನಾವೂ ಒಂದ್ ಕೈ ನೋಡ್ತಿವಿ ನೀನಂತುನು" ಎಂದರು ಮೇಲಿನ ಮನೆ ಶಿವಸ್ವಾಮಿ  ಆಗಲೇಳಪ್ಪ ಮಾಡು  ಯಾರಾದರೂ ನಮಗೆ ಒಟ್ಟಿನಲ್ಲಿ ಅಮ್ಮನ ಕಾರ್ಯ ಆಗಬೇಕು   " ಎಂದು ಹಿರಿಯ ಜೀವ ಹೇಳುತ್ತಿದ್ದ ಹಾಗೆ ಬಹುತೇಕ ಒಕ್ಕಲಿಗರು, ನಾಯಕರು, ಇತರೆ ಎಲ್ಲಾ ಜಾತಿಗಳ ಪ್ರತಿನಿಧಿಗಳು ಇದ್ದರೂ ಯಾರೂ ನಾವು ಗುಡಿ ಗೌಡರು ಆಗಬೇಕು ಎಂದು ಆಸೆ ಪಡಲಿಲ್ಲ ಅಲಿಖಿತ ನಿಯಮದಂತೆ ಇದುವರೆಗೆ ಒಕ್ಕಲಿಗರು ಗೌಡಿಕೆ ಮಾಡಿರುವುದು ವಾಡಿಕೆ. ಎಲ್ಲರೂ ಮೌನವಾಗಿರುವುದು ಕಂಡು ಶಿವಸ್ವಾಮಿನೇ "ಎಲ್ಲ ಸುಮ್ಕಿದಾರೆ ಅಂದರೆ ನನ್ನ ಗುಡಿಗೌಡಿಕೆ ಒಪ್ಪಿದ್ದಾರೆ ಅಂತಾನೆ ನೀನಂತುನು, ಮಾಡನ ತಾಯಿ ಕಾರ್ಯ ನೀನಂತುನು" ಎಂದಾಗ ಆಗಲಿ ಈ ವರ್ಸ ಶಿವ ಸ್ವಾಮಿ ಗುಡಿಗೌಡ ನಾವೆಲ್ಲ ಅವನಿಗೆ ಬೆಂಬ್ಲ ಕೊಡನ ಅಮ್ಮನ ಜಾತ್ರೆನ ಸೆನ್ನಾಗಿ ಮಾಡಾನ ಎಂದರು 



"ಆತು ಎಂಟು ದಿನದ ಸಾರು  ಹಾಕ್ಸನೇನಪ್ಪ ಇನ್ನೇನು ಟೈಮಿಲ್ಲ ನೀನಂತುನು" ಎಂದು ಗುಡಿಗೌಡಿಕೆಯ ಮೊದಲ ಭಾಷಣವೆಂಬಂತೆ ಮಾತಾಡಿದರು ಎಲ್ಲರೂ ಸುಮ್ಮನಿದ್ದರು ," ಹೋದ ವರ್ಸ ನಂದು ನಮ್ಮ ಭೋಜಂದು ಸೇರಿ ಎಲ್ಡು ಉರ್ಮೆ ಜೊತೆಗೆ ನಗರಂಗೆರೆಯಿಂದ  ನಾಕು ಉರ್ಮೆ ಕರೆಸಿದ್ವಿ ಅವರಿಗೆ ಸರಿಯಾಗಿ ದುಡ್ಡು ಕೊಡಲಿಲ್ಲ ಈ  ವರ್ಸ ನಾನು ಯಾರನ್ನು ಕರೆಸಲ್ಲ ಸಿಟ್ಟಿನಿಂದ ಜೋರಾಗಿ ಮಾತನಾಡಿದ ರಾಜಪ್ಪ" ಅದ್ಯಾಕೆ ಕೊಟ್ಟಿಲ್ಲ ಇಂಗೆಲ್ಲ ಮಾತಾಡಬೇಡ ರಾಜ ನೀನು, ಒಂದ್ ಉರ್ಮೆಗೆ ನೂರು ರೂಪಾಯಂತೆ ಕೊಟ್ಟಿದಿನಿ" ಹಳೆ ಗುಡಿಗೌಡ ಜನಪ್ಪ ಆಕ್ಷೇಪಿಸಿದರು "ನೂರುಪಾಯಿ ಎತ್ಲಾಗಾಗುತ್ತೆ ಗೌಡರೆ " ಅವ್ರು ಗೊನ  ಗೊನ ಅಂತಿದ್ರು, " ಆತು ಹೇಳು ಈ ವರ್ಸ ಒಂದು ಉರ್ಮೆಗೆ ಐವತ್ತು ಜಾಸ್ತಿನೆ ಕೊಡ್ಸಾನ ಕರ್ಸು" ಉಮ್ಮಸ್ಸಿನಿಂದ  ಹೊಸ ಗುಡಿಗೌಡ್ರು ಘೋಷಿಸಿಯೇ ಬಿಟ್ಟರು.


" ಹೋದ ವರ್ಸ ನಮಗೆ ಹತ್ತು ಲೀಟರ್ ಹಳ್ಳೆಣ್ಣೆ ಕೊಡಿಸಿದ್ರಿ ನಾಕೈದು ಪಂಜಿಗೆ ಎಣ್ಣೆನೆ ಆಗಲಿಲ್ಲ ಈ ವರ್ಸ ಒಂದು ಹತ್ತು ಲೀಟರ್ ಕೊಡ್ಸಿ ಗೌಡರೆ " ಮಡಿವಾಳರ ಮಾರಣ್ಣ ಕೇಳಿದರು. ಆಗಲೆಂಬಂತೆ ತಲೆಯಾಡಿಸಿದರು ಗುಡಿಗೌಡ್ರು. " ಹಳೆ ಮಚ್ಚು ಸರಿಯಾಗ್ ಅರಿಯಲ್ಲ ಹೋದ ವರ್ಸ ಬಡ್ಕಲು ಕುರಿನ ಮೂರೇಟಿಗೆ ಕಡ್ದಿದ್ದ ನೋಡಿ ಕಿಳ್ಳುಡುಗ್ರು ನನ್ನ ನೋಡಿ ನಕ್ಕಿದ್ರು ,ಈ ವರ್ಸ ನನಗೆ ದೊಡ್ಡದೊಂದು ಒಳ್ಳೆಯ ಮಚ್ಚು ಕೊಡ್ಸಿ ಗೌಡ್ರೆ ಪಟ್ಟದ್ ಕೋಣನೂ ಒಂದೇ ಏಟಿಗ್ ಕಡಿಬೇಕು" ಬೇಡಿಕೆ ಇಟ್ಟರು ತಳವಾರ ಸಿದ್ದಾನಾಯ್ಕ. " ನೀನು ಎಣ್ಣೆ ಕುಡಿಯಾದ್ ಬಿಟ್ಟು ಕರೆಕ್ಟಾಗಿ ಕಡ್ದಿದ್ರೆ ಅದೇ ಮಚ್ ಸಾಕಪ್ಪ " ಗುಂಪಿನಿಂದ ಯಾರೋ ಅಂದಿದ್ದು ಕೇಳಿ " ಯಾವ್ ನನ್ ಮಗ ಅಂಗಂದಿದ್ದು ನೀನ್ ಕಡಿ ಕುರಿಯ ಗೊತ್ತಾಗುತ್ತೆ ಯಾವನೊ ಅವ್ನು? ಜೋರು ಧ್ವನಿಯಲ್ಲಿ ಕಿರುಚುತ್ತಲೇ ಇದ್ದ. ಯಾರಿಂದಲೂ ಸದ್ದಿಲ್ಲ.

 " ಆಗಲಿ ಬಿಡಪ್ಪ ಹೊಸ ಮಚ್ವು ಕೊಡ್ಸಾನ ,ಆದರೆ ಬ್ಯಾರೆ ಯಾರಿಗೂ ಮುಚ್ಚು ‌ಕೊಡಬಾರದು .ನೀನೊಬ್ಬನೆ ಕಡೀಬೇಕು ,ಹೋದ ವಾರ ಉಪ್ಪರಿಗೇನಹಳ್ಳಿ ಜಾತ್ರೆನಲ್ಲಿ ಯಾರಿಗೊ ಮಚ್ಚು ಕೊಟ್ಟು ಒಬ್ಬನ್ ಕೈ ತುಂಡಾಗಿ ಕಂಪ್ಲೇಂಟ್ ಆಗೈತೆ ಹುಸಾರು. ಇನ್ನ ಏನಾನ ಮಾತಡ್ಬೇಕೆನ್ರಪ್ಪ ಈಗಲೆ ಟೈಮ್ ಆಗೈತೆ ಸಾರು ಹಾಕಾಕ್ ಕಳ್ಸನಾ" ಎಂದರು ಗುಡಿಗೌಡರು.



 ವೈಶಾಖ ಶುಕ್ಲ ಹುಣ್ಣಿಮೆ ದಿನದಂದು ಜಲದಿ ಮಹೋತ್ಸವ ಆಚರಣೆ ಮಾಡುವ ಹಾಗೆ ಸಾರಲು ತೀರ್ಮಾನ ಕೈಗೊಂಡು ಮಾರಮ್ಮ ದೇವಿಗೆ ಕೈಮುಗಿದು ಎಲ್ಲರೂ ಅವರವರ ಮನೆಗಳ ಕಡೆ ನಡೆದರು .ಮೊದಲೇ ತಾಯಾರಾಗಿ ಬಂದಿದ್ದ ಸಿದ್ದಾನಾಯ್ಕ ತನ್ನ ತಪ್ಪಡೆ(ತಮಟೆ) ಯನ್ನು ಹೆಗಲಿಗೇರಿಸಿಕೊಂಡು ಡಂಕಣಕ..... ಡಂಕಣಕ .... ಎಂದು ಬಡಿಯುತ್ತಾ "ಕೇಳ್ರಪ್ಪೋ ......ಕೇಳ್ರಿ." ಎಂದು ಕೂಗುತ್ತಾ ಬೀದಿಗಳಲ್ಲಿ ಸಾಗಿದ.


******************************


ಜಾತ್ರೆಗೆ ಸಾರು ಹಾಕಿದ  ದಿನದಿಂದ ಇಡೀ ಊರಿಗೆ ಊರೇ ದಿಗ್ಗನೆ ಎದ್ದು ಸಡಗರದಿಂದ ಜಾತ್ರೆಯ ತಯಾರಿಯಲ್ಲಿ ತೊಡಗುತ್ತಿತ್ತು.ಮನೆಗೆ ಸುಣ್ಣ ಬಣ್ಣ ಬಳಿದು ಒಳಮನೆಯ ಸ್ವಚ್ಚತಾ ಕಾರ್ಯಗಳನ್ನು ಮಹಿಳೆಯರು ಮಾಡಿದರೆ ,ಮರಿ ತರುವುದು, ಅಡುಗೆಯ ಸೌದೆ ತಂದು ,ಸೌದೆ ಸೀಳುವುದು ಮನೆಗೆ ಬೇಕಾದ ಅಗತ್ಯ ಸಾಮಾನುಗಳನ್ನು ತರುವುದನ್ನು ಗಂಡಸರು ವಹಿಸಿಕೊಂಡು ಕೆಲಸ ಮಾಡುತ್ತಿದ್ದರು.



ರಸ್ತೆಯ ಅಕ್ಕ ಪಕ್ಕದಲ್ಲಿ ಇರುವ ಶೆಟ್ಟರಿಗೆ ಯಾಕೋ ಈ ವರ್ಷದ ಜಾತ್ರೆಯ ಬಗ್ಗೆ ಅಂತಹ ಆಸಕ್ತಿ ಇದ್ದಂತೆ ಕಾಣುತ್ತಿರಲಿಲ್ಲ ಅದಕ್ಕೆ ಟೇಪು ಹಿಡಿದು ಬಂದು ಅವರ ಮನೆಗಳ ಮೇಲೆ ಕೆಂಪು ಗುರುತು ಹಾಕಿ ಹೋದ ಅಧಿಕಾರಿಗಳು ಎಂದು ವಿಶೇಷವಾಗಿ ಹೇಳಬೇಕಾಗಿರಲಿಲ್ಲ .ಅವರ ಮುಖಗಳೆ ಎಲ್ಲವನ್ನೂ ಹೇಳುತ್ತಿದ್ದವು.



ಜಾತ್ರೆಗೆ ಸಾರಿದ ನಂತರದ ದಿನದಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಬೆಂಡು .ಬತ್ತಾಸು,ಕಾರ ಮಂಡಕ್ಕಿ, ಆಟಿಕೆ ಸಾಮಾನು ಮಾರಾಟದ ಅಂಗಡಿಗಳು, ಸರ ಬಳೆ ಅಂಗಡಿಗಳು,ಶರಭತ್ತು ,ಹಣ್ಣು,ಕಾಯಿ,ಅಂಗಡಿಗಳು, ಸಣ್ಣ ಪ್ರಮಾಣದ ಹೋಟೆಲ್ ಮಾಲೀಕರು ಬಂದು ಅಲ್ಲೊಂದು ಇಲ್ಲೊಂದು ಗೂಟ ನಿಲ್ಲಿಸಿ ಈ ಜಾಗ ನಮ್ಮದು ಎಂದು ಭದ್ರಪಡಿಸಿಕೊಳ್ಳುತ್ತಿದ್ದರು. 



ರಂಕಲ್ ರಾಟೆ ಯರಬಳ್ಳಿ ಮಾರಮ್ಮನ ಜಾತ್ರೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಎರಡು ದೊಡ್ಡ  ಮರದ ಹಲಗೆಗಳನ್ನು ನಿಲ್ಲಿಸಿ ಅದರ ಮೇಲೆ ಒಂದು ಗಟ್ಟಿಯಾದ ಕಬ್ಬಿಣದ ಸರಳನ್ನು ಬಂದಿಸಿ ನಾಲ್ಕು ಮರದ ತೊಟ್ಟಿಲುಗಳನ್ನು ಆ ಕಬ್ಬಿಣದ ಸರಳಿಗೆ ಜೋಡಿಸಿ ರಾಟೆಯ ಸಹಾಯದಿಂದ ತಿರುಗಿಸಿದರೆ ಅದೇ ರಂಕಲ್ ರಾಟೆ ಕೆಲ ಮಕ್ಕಳು  ಆಡಲು ಇಷ್ಟ ಪಡುತ್ತಾರೆ ಮತ್ತೆ ಕೆಲವರು ಆ ರಾಟೆ ತಿರುಗಿಸುವವನ ಕೈಚಳಕ ಅವನ ಹಾವಭಾವ ನೋಡಲು ಬರುವುದುಂಟು.



ಜಾತ್ರೆಗೆ ಸಾರಿದ ಐದು ದಿನಗಳಲ್ಲಿ  ಎಲ್ಲಾ ಮನೆಗಳು ಜಗಮಗಿಸುತ್ತಿದ್ದವು ಊರ ಮುಂದಿನ ರಸ್ತೆಯ ಇಕ್ಕೆಲಗಳು ವಿವಿಧ ಅಂಗಡಿಗಳಿಂದ ಅಲಂಕೃತವಾದ ಮಧುವಣಗಿತ್ತಿಯಂತೆ ಕಾಣುತ್ತಿದ್ದವು .ಊರ ಮುಂದಿನ ತೋಪಿನಲ್ಲಿ ,ಬೆಂಡು ಬತ್ತಾಸು,ಮಂಡಕ್ಕಿ, ಕಾರ,ಬಳೆಗಳ ಅಂಗಡಿಗಳು ರಾರಾಜಿಸುತ್ತಿದ್ದವು 


ಬುಧವಾರದ ಸಾರು ಹೊರಟು ಹೋಗುವ ಶಾಸ್ತ್ರ ಮಾಡುವಾಗ ಯರಬಳ್ಳಿ ಮಾರಮ್ಮನ ಅಧಿಕೃತ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆರಂಭವಾಯಿತು



ಗುರುವಾರ ಮುಂಜಾನೆ ಎಲ್ಲಾ ಮನೆಗಳಲ್ಲಿ ನಿಗದಿತ ಅವಧಿಗಿಂತ ಮೊದಲೆ ಎದ್ದು ಅವರವರ ಕೆಲಸ ಮಾಡುವ ಹೊತ್ತಿಗೆ ಸೂರ್ಯ ನಿಧಾನವಾಗಿ ಪೂರ್ವದಲ್ಲಿ ಮೇಲೇಳುತ್ತಿದ್ದ ಉರುಮೆಯ ಸದ್ದು ಕೇಳಿದ ಜನ ಗುಡಿಯ ಕಡೆ ನಡೆದರು ಕೆಲ ಹೆಂಗಳೆಯರ ಕಂಕುಳಲ್ಲಿ ಒಂದೊಂದು ಬಿಂದಿಗೆ ನೀರಿತ್ತು. 


ಉರುಮೆ ದೋಣುಗಳ(ಡೊಳ್ಳು) ಸದ್ದು ಸೂರ್ಯ ಮೇಲಿರಿದಂತೆ ಜೋರಾಗುತ್ತಿತ್ತು,, ಆಸಾದಿಗಳ ಹಾಡು ಕೇಳುತ್ತಿತ್ತು, ಸರಸ್ವತಜ್ಜಿ ಮತ್ತು ಇತರರು ಮಾರಮ್ಮನ ಕುರಿತಾದ ಜನಪದ ಹಾಡುಗಳನ್ನು ಹಾಡುತ್ತಿದ್ದರು. ಒಟ್ಟಿನಲ್ಲಿ ಅಂದು ಬೆಳಿಗ್ಗೆ ಮಾರಮ್ಮನ ಗುಡಿಯ ಮುಂದೆ ಭಕ್ತಿ ಪೂರ್ವಕ ಗದ್ದಲ ಮತ್ತು ಭಕ್ತಿ ಮೇಳೈಸಿತ್ತು.


ಅಮ್ಮನ ಉತ್ಸವ ಮೂರ್ತಿಯನ್ನು ಹೊತ್ತು ಬಸವಾಚಾರ್ ಹೊರಬಂದರು ಉರುಮೆ ಜಾಗಟೆ, ಪದಗಳ ಸದ್ದು ಮುಗಿಲು ಮುಟ್ಟಿತ್ತು.


" ಜಲ್ದು ನಡೀರಪ್ಪ ಬಿಸ್ಲಾಗುತ್ತೆ ಹೊಳೆ ಇರೋ  ಜಲ್ದಿ ಮರದತ್ರ ಹೋಗಾಕೆ  ಇನ್ನಾ ಒಂದು ಕಿಲೋಮೀಟರ್ ದೂರ ನಡಿರಿ ನೀನಂತುನು " ಎಂದು ಜೋರು ಧ್ವನಿಯಲ್ಲಿ ಕಿರುಚಿದರೂ ಕ್ಷೀಣವಾಗಿ ಕೇಳುತ್ತಿತ್ತು ಗುಡಿ ಗೌಡರ ಮಾತು.


ಹೆಂಗಳೆಯರು ತಾವೂ ಬಿಂದಿಗೆಯಲ್ಲಿ  ತಂದ ನೀರನ್ನು ಅಮ್ಮನ ಕಾಲಿಗೆ ಅರ್ಪಿಸಿ ದಾರಿಗೆ ತಳಿ ಹಾಕಲು ಪೈಪೋಟಿ ನಡೆಸುತ್ತಿದ್ದರು. ಊರ ಮುಂದೆ ಅಮ್ಮ ಮತ್ತು ಜನರು ಕ್ರಮೇಣವಾಗಿ ಜಲದಿ ಹೊಳೆಯೆಡೆಗೆ ಹೆಜ್ಜೆ ಹಾಕಿದರು.



"ಅಜ್ಜಿ ನಿನ್ನೆ ಆ ದೇವರು(ಉತ್ಸವ ಮೂರ್ತಿ) ಗುಡಿಯಲ್ಲಿ ಇರಲಿಲ್ಲ ಇವತ್ತು ಎಲ್ಲಿಂದ ಬಂತು? ಇದು ಎರಡನೆಯ ಮಾರಮ್ಮ ನಾ? ಅಥವಾ ಮಾರಮ್ಮನ ತಂಗಿಯ? " ಗುಡಿಯಿಂದ ಮನೆಗೆ ಹಿಂತಿರುಗುವಾಗ ಸತೀಶ ಸರಸ್ವತಜ್ಜಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಕೇಳುತ್ತಿದ್ದ 


ನಗುತ್ತಲೇ ಅಜ್ಜಿ ಉತ್ತರಿಸಿದರು


" ನಿನ್ನೆ ರಾತ್ರಿ ಕಲ್ಲು ನೀರು ಕರಗೋ ಟೈಮಲ್ಲಿ ಪೂಜಾರಪ್ಪ ಬಸವಾಚಾರಿ ಒಂದತ್ನಿಂದ, ಗುಡಿಯ ಬಲಕ್ಕೆ ಇರೋ ನೆಲಮಾಳಿಗೆ ಬೀಗ ತಗದು, ಭಕ್ತಿಯಿಂದ ಕಣ್ಮುಚ್ಚಿ ಬೇಡ್ಕಂತರಂತೆ ಆ ತಾಯಿ ಗಡಿಗೆ ರೂಪದಲ್ಲಿ ಬಂದು ಪೂಜಾರಪ್ಪನ ಕೈಯಲ್ಲಿ ಬಂದು ಕೂತ್ಕಂತಳಂತೆ, ಅದೇ ನೀನು‌ಈಗ ನೋಡಿದ ಮಾರಮ್ಮ "


"ಅಂಗೆ ದೇವರು  ಕೈಯಾಗ ಬರೋದ್ನ ನೀನು ನೋಡೊದಿಯ ಅಜ್ಜಿ "


"ಏ ನಾನಲ್ಲಪ್ಪ ಈ ಊರಾಗೆ ಯಾರೂ ನೋಡಿಲ್ಲ .ಅಂಗೇನಾರ ನೋಡಾಕ ಹೋದ್ರೆ ರಕ್ತಕಾರ್ಕೆಂಡು ಸಾಯ್ತಾರಂತೆ" ಅಜ್ಜಿ ಉತ್ತರ ಹೇಳುತ್ತಾ ಮನೆಯ ಹೊಸಲು ದಾಟಿ ಒಳ ನಡೆದರು ಸತೀಶನ ಮನಸ್ಸು ಇನ್ನೂ ಮಾರಮ್ಮನ ಉತ್ಸವ ಮೂರ್ತಿಯ ಬಗ್ಗೆ ಯೋಚಿಸುತ್ತಿತ್ತು.



ಮನೆಯಲ್ಲಿ ಎಲ್ಲರೂ ಸ್ನಾನ ಮಾಡಿ ಶುಭ್ರವಾದ ನಂತರ ಕೆಲವರು ಊಟ ಮಾಡಿದರೆ ಕೆಲವರು ಒಂದೊತ್ತು(ಉಪವಾಸ) ಇದ್ದರು

ಸೂರ್ಯ ನಿಧಾನವಾಗಿ ಮಗ್ಗುಲು ಬದಲಿಸುತ್ತಿದ್ದ


"ಅದೇಟೊತ್ತು ಹೊಳ್ಡಿತಿರಪ್ಪ ಜಲ್ದು  ಜಲ್ದು ನಡೀರಿ ನೀವ್ ಲೇಟು ಮಾಡಿದ್ರೆ ಅಮ್ಮ ಹೊಳೆಮೇಲಿದ್ದ ಎದ್ದು ಬತ್ತಾಳೆ ಅವಗೇನ್ ನೋಡ್ತಿರಾ? ನಿಂದು ಆತೇನಮ್ಮ ಅದೇನ್ ಬುಡಿಗ್ಯಾಡ್ತಿಯೋ ಅಡಿಗೆ ಮನೇಲಿ? ಎಂದು ತಿಮ್ಮಕ್ಕನಿಗೆ ಹೇಳಿದಾಗ " ಅಯ್ಯೊ ಅಡಿಗೇನೆ ಮಾಡದ್ ಬ್ಯಾಡವಾ? ಯಾವಾಗಲೂ ವಟ ವಟ ಅಂತೀಯಲ್ಲ ಅನ್ನಬೇಕು ಅನಿಸಿದರೂ ಒಮ್ಮೆ ಹಾಗೆ ಮಾತನಾಡಿ ಮುರಾರಿಯಿಂದ ಬೈಸಿಕೊಂಡಿದ್ದು‌ ನೆನಪಾಗಿ ಮನದಲ್ಲೇ ಈ ಮುದುಕಿ‌ ಯಾವಾಗ ಒರಗುವಳೋ ಎಂದು ಶಪಿಸುತ್ತಾ " ಆತು ಅತ್ತೆ ಈಗ‌‌ ರಡಿ ಆಗ್ತೀನಿ ಅಂತ ಒಳಗೆ ಹೋದಳು ತಿಮ್ಮಕ್ಕ.



ಯುಗಾದಿ ಹಬ್ಬದ ನಂತರ ಎಲ್ಲರ ಮನೆಯ ಜರಿ ಪಂಚೆಗಳು ,ಬಿಳಿ ಟವಲ್ಗಳು, ರೇಶ್ಮೆ ಸೀರೆಗಳು ಹೊರಬಂದಿದ್ದವು ಬಹುತೇಕರು ಅಂದು ಸ್ನಾನ ಮಾಡಿದ್ದರು ಮಾರಮ್ಮನ ಗುಡಿಯಿಂದ ಜಲದಿ ಹೊಳೆಯ ವರೆಗೆ ಎತ್ತ ನೋಡಿದರೂ ಜನ .ಇದರ ಜೊತೆಗೆ ಆಗೊಂದು ಈಗೊಂದು ಬರುವ ಖಾಸಗಿ ಬಸ್ಸು ಗಳಲ್ಲಿ ಒಳಗೆ ಇರೋದಕ್ಕಿಂತ ಹೆಚ್ಚು ಬಸ್ಸುಗಳ ಮೇಲೆ ಜನರು ಬಂದು ಈಗಿರುವ ಜನರೊಡನೆ ಸೇರಿ ಜಾತ್ರೆ ರಂಗೇರುತ್ತಿತ್ತು.


ಬಹಳ ದಿನಗಳ ನಂತರ ಸತೀಶ ಸುಜಾತಳನ್ನು ಜಲದಿ ದಾರಿಯಲ್ಲಿ ನೋಡಿದ ಹಸಿರು ರೇಷ್ಮೆ ಸೀರಿಗೆ ಕೆಂಪು ಕುಪ್ಪಸ ತೊಟ್ಟು , ಕೂದಲು ಇಳಿಬಿಟ್ಟಿದ್ದಳು ಅವು ಆಗಾಗ್ಗೆ  ಕಣ್ಣಮೇಲೆ ಬಿದ್ದಾಗ ಕಿರುಬೆರಳಿಂದ ಹಿಂದಕ್ಕೆ 

ತೀಡಿ ಕಿವಿಯ ಹಿಂದೆ ಸಿಕ್ಕಿಸಿ ಅಮ್ಮನ ಕಣ್ತಪ್ಪಿಸಿ ಸತೀಶನ ನೋಡಿದಳು . ಪರೀಕ್ಷೆ ಮುಗಿದ ಮೇಲೆ ಎರಡೋ ಮೂರು ಬಾರಿ ಬರಿ ನೋಡಿದ್ದು ಮಾತಿಲ್ಲ ಇಂದು ಮಾತನಾಡಿಸೋಣ ಎಂದರೆ ಅವರಮ್ಮ ಇದ್ದಾರೆ ಎಂದು ಮನದಲ್ಲೇ ಕೊರಗಿ ಕಣ್ಣಲ್ಲೆ ಅದೇನೋ ಮಾತಾಡಿಕೊಂಡರು, ಅವಳ ಅಂದಿನ ಅಲಂಕಾರ ಯಾವ ಮದುವೆ ಹೆಣ್ಣಿಗೂ ಕಡಿಮೆ ಇರಲಿಲ್ಲ ಮನದಲ್ಲೇ ಇಬ್ಬರೂ ಸಪ್ತಪದಿ ತುಳಿದರೆ ಹೇಗಿರುತ್ತದೆ ?ಎಂದು ಕಲ್ಪನೆಗೆ ಜಾರಿದ 


"ಸೂರು ಬೆಲ್ಲ ..... ಸೂರು ಬೆಲ......ಎಂದ ಚಿಕ್ಕ ಹುಡುಗ ಸತೀಶನ ಜಗ್ಗಿ " ಅಣ್ಣ ಸೂರು ಬೆಲ್ಲ ತಗಾಳಣ್ಣ  ಐವತ್ತು ಪೈಸಾ ಅಷ್ಟೇ " ಎಂದಾಗ ವಾಸ್ತವಕ್ಕೆ ಮರಳಿದ ಸತೀಶ, ನಾನೂ ಇವನಷ್ಟು ಇದ್ದಾಗ ಹೀಗೆಯೇ ಸೂರು ಬೆಲ್ಲ ಮಾಡಿ ಎರಡು ರೂ ಬಂಡವಾಳ ಹಾಕಿ ಹದಿನೈದು ರೂಪಾಯಿ ಲಾಭವನ್ನು ಪಡೆದದ್ದು ನೆನಪಾಯಿತು.


ಸೂರುಬೆಲ್ಲ ಕೊಳ್ಳಲು ಸತೀಶ ಆ ಹುಡಗನ ಕಡೆ ನೋಡುವ ಮೊದಲೇ ಅವರ ಅಮ್ಮನಿಗೆ ಗೊತ್ತಾಗದಂತೆ ಸತೀಶನಿಗೆ ಟಾಟಾ ಮಾಡಿದ್ದಳು ಸುಜಾತ.


ಎರಡು ಎಲೆಗಳಲ್ಲಿ ಒಂದಿಡಿ ಮಂಡಕ್ಕಿ, ಒಂದೆರಡು ಮೆಣಸು ಹಾಕಿ ಮುದುರಿ ಕೊಡುವುದೇ ಸೂರುಬೆಲ್ಲ .ಈ ಸೂರುಬೆಲ್ಲ ವನ್ನು ಅಮ್ಮನ ಮೇಲೆ ಸೂರಿದರೆ ಅಮ್ಮ ಸಂತಸಗೊಂಡು ನಮ್ಮ ಮನದ ಅಭೀಷ್ಟೆಗಳನ್ನು ಈಡೇರಿಸುವಳು ಎಂಬ ಪ್ರತೀತಿ.


"ಅಣ್ಣ ಐವತ್ತು ಪೈಸೆ ಚಿಲ್ರ ಇಲ್ಲಣ್ಣ " ಅಂದ ಆ ಹುಡುಗ " 


"ಇಟ್ಕ ಪರವಾಗಿಲ್ಲ " ತನ್ನ ಮನದ ದೇವತೆ ನೋಡಿದ ಖುಷಿಯಿಂದ ಹೇಳಿದ ಸತೀಶ"


"ಮ್ಯಾಗಳ ಮನೆ ರಂಗಸ್ವಾಮಿ" 


ಪಲ್ಲಕ್ಕಿ ರಾಮಣ್ಣ


ದೊಡ್ಡಪ್ಪಗಳ ಮುಕುಂದಯ್ಯ


ಹೀಗೆ ಹೆಸರು ಕೂಗುತ್ತಾ, ಅಮ್ಮನ ಪ್ರಸಾದ ಕೊಟ್ಟು ಜಲದಿ ಹೊಳೆಯಿಂದ ಅಮ್ಮನ ಪಯಣ ಊರ ಕಡೆ ಆರಂಭವಾಯಿತು. ಅಮ್ಮನ ಎದುರಿಗೆ ಬಲಗೈಯಲ್ಲಿ ದೊಡ್ಡ ಮಚ್ಚು ಹಿಡಿದು ಸಿದ್ದಾನಾಯ್ಕ ಹಿಮ್ಮುಖವಾಗಿ ಚಲಿಸುತ್ತಿದ್ದ .


ಭಕ್ತಾದಿಗಳು ಹರಕೆಯ ಉಳ್ಳಾಗಡ್ಡೆ ,ಮೆಣಸು, ಮತ್ತು ಕೋಳಿಗಳನ್ನು ಅಮ್ಮನ ಮೇಲೆ ಎಸೆಯುತ್ತಿದ್ದರು, ಯಾರೋ ಎಸೆದ ಕೋಳಿ  ಬಿಳಿಯಪ್ಪನ ಕೈಗೆ ಬಂದು ಸಿಕ್ಕಿತು.


ಅಮ್ಮನ ಪ್ರಸಾದ ಎಂದು ಗಟ್ಟಿಯಾಗಿ ಹಿಡಿದುಕೊಂಡು ಅಮ್ಮನ ಹಿಂದೆ ನಡೆದ. ಮಡಿವಾಳ ಮಾರಪ್ಪನ ಅಣ್ಣ ತಮ್ಮಂದಿರು ಮತ್ತು ನೆಂಟರು ದೇವಿಗೆ ನಡೆಮುಡಿ ಹಾಸಲು ಸೀರೆಗಳನ್ನು ಜೊಡಿಸುವ ಪರಿ ಬಲು ಕೈಚಳಕ ಮತ್ತು ಸಮನ್ವಯದಿಂದ ಕೂಡಿತ್ತು ,ದೇವಿ ಮುಂದೆ ಸಾಗಿದಂತೆ ಹಾಸಿದ ಸೀರೆಯನ್ನು ಮುಂದಕ್ಕೆ ಕೊಟ್ಟು ನೆಲದಲ್ಲಿ ಹಾಸುತ್ತಿದ್ದರು. ಎರಡು ಮೂರು ಕಡೆ ಹೊಳೆಮರಿ ಕಡಿದರು ,ಕೆಲವೊಮ್ಮೆ ಅಮ್ಮ ಜೋರಾಗಿ ಓಡುತ್ತಾ ಕುಣಿಯುತ್ತ ಬಂದರೆ ಕೆಲವೊಮ್ಮೆ ಮಕ್ಕಳು ಮೊಂಡುತನ ಮಾಡುವಂತೆ ನಿಂತಲ್ಲೇ ನಿಲ್ಲುತ್ತಿತ್ತು ,ಆಗ ಮಾರಮ್ಮನ ಮಕ್ಕಳಾದ ಅಸಾದಿಗಳು ಚೌಡಿಕೆ ಬಾರಿ ಸುತ್ತಾ  ಅದೇನೊ ಅವಾಚ್ಯ ಶಬ್ದಗಳನ್ನು ಬೈಯ್ದಾದ ಮೇಲೆ ಮುಂದೆ ಬರುತ್ತಿತ್ತು ಮಾರಮ್ಮ. ಪಶ್ಚಿಮ ದಿಕ್ಕಿನಲ್ಲಿ ಇನ್ನೇನು ಸೂರ್ಯ ಜಾರುವನು ಅನ್ನುವ ಕಾಲಕ್ಕೆ ತಾಯಿಯ ಊರ ಪ್ರವೇಶ. ಗುಡಿಯ ಪೌಳಿಯ ಎರಡೂ ಕಡೆ ಹೆಂಗಳೆಯರು ಮಾರಮ್ಮನಿಗಿಂತ ಒಂದು ಹೆಜ್ಜೆ ಮುಂದೆ ಅಲಂಕಾರ ಮಾಡಿಕೊಂಡು ಕೈಯಲ್ಲಿ ಸೂರುಬೆಲ್ಲ ಹಿಡಿದಿದ್ದರು. ಅಮ್ಮ ಹತ್ತಿರದ ಬಂದು ಗುಡಿಯನ್ನು ಪ್ರದಕ್ಷಿಣೆ ಹಾಕುವಾಗ ಎಲ್ಲರೂ ಸೂರುಬೆಲ್ಲ ಹಾಕಿ ಕೈಮುಗಿದರು .ಅಮ್ಮ ಗುಡಿಯ ಒಳಗೆ ಹೋಗಿ ಗುಡಿದುಂಬುವ ಕಾರ್ಯ ಸಂಪೂರ್ಣವಾಗಿ ಮಂಗಳಾರತಿ ಆಯಿತು .ನಾಳಿನ ಜಾತ್ರಾ  ಕಾರ್ಯಕ್ಕೆ ಗುಡಿಗೌಡ್ರು ಸಮಾಲೋಚನೆ ಮಾಡುತ್ತಿದ್ದರೆ ಬೆಳಿಗ್ಗೆಯಿಂದ ಉಪವಾಸವಿದ್ದ ಭಕ್ತಾದಿಗಳು ಅವರವರ ಮನೆಯಲ್ಲಿ ಒಂದೊತ್ತು ಬಿಡುವ ಶಾಸ್ತ್ರ ಮಾಡಿ ಊಟ ಮಾಡಿದರು.



ಮುಂದುವರೆಯುವುದು



ಸಿ ಜಿ ವೆಂಕಟೇಶ್ವರ