31 ಡಿಸೆಂಬರ್ 2021

ವಿದಾಯ , ಸ್ವಾಗತ


 



*ವಿದಾಯ*


ನಿಧಾನವಾಗಿ ಸರಿಯುತಿದೆ

ಎರಡು ಸಾವಿರದ ಇಪ್ಪತ್ತೊಂದು|

ಸರ್ವರಿಗೆ  ನಲಿವಿಗಿಂತ

ನೋವುಗಳನೇ ನೀಡಿತು 

ಒಂದರ ಮೇಲೊಂದು| |


*ಸ್ವಾಗತ*


ಸ್ವಾಗತಿಸೋಣ ಬರುವ

ಎರಡು ಸಾವಿರದ ಇಪ್ಪತ್ತೆರಡು|

ಆಶಾವಾದವಿಟ್ಟುಕೊಳ್ಳೊಣ

ಈ ವರ್ಷ ಚಿಗುರಲಿದೆ

ಬರಡಾದ ಕೊರಡು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.


ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು .



30 ಡಿಸೆಂಬರ್ 2021

ಮುಂಬರುವ ವರ್ಷದಲ್ಲಿ ಸಾರ್ಥಕ ಜೀವನ ನಮ್ಮದಾಗಲಿ


 

ಮುಂಬರುವ ವರ್ಷದಲ್ಲಿ ಸಾರ್ಥಕ ಜೀವನ ನಮ್ಮದಾಗಲಿ.

ಹಾಗೆ ನೋಡಿದರೆ ಉಗಾದಿ ನಮ್ಮ ಹೊಸ ವರ್ಷ ಆಗಲೂ ನಮಗೆ ಬೆಲ್ಲಕ್ಕಿಂತ ಬೇವೇ ಹೆಚ್ಚಾಗಿ ಕಂಡುಬಂತು . ಕ್ಯಾಲೆಂಡರ್ ಪ್ರಕಾರದ  ಹೊಸ ವರ್ಷವಾದರೂ ನಮ್ಮ ಬಾಳಲ್ಲಿ ನಿಜವಾದ ಹೊಸತನ ತರಲಿ ಎಂದು ಆಶಾವಾದ ಹೊಂದಿರುವವನು ನಾನು.

ಇದಮಿತ್ತಂ ,ಹೀಗೇ ಜೀವನವಿರುವಿದು. ಹೀಗೇ ಮುಂಬರಲಿರುವ ವರ್ಷ ಇರುವುದು ಎಂಬುದನ್ನು ಊಹೆ ಮಾಡಿದರೆ ನಮ್ಮಂತಹ ಮೂರ್ಖರು ಬೇರೊಬ್ಬರಿಲ್ಲ.
ಬರುವ ಹೊಸ ವರ್ಷಗಳಲ್ಲಿ ನಮಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಖಚಿತ ಅದಕ್ಕೆ ನಾವೆಲ್ಲರೂ ಮಾನಸಿಕವಾಗಿ ಸಿದ್ದರಿರಬೇಕು.

ಕೋವಿಡ್ ಕಾಲದಲ್ಲಿ ಮಾನವನ ಆರ್ಥಿಕ ,ಸಾಮಾಜಿಕ, ಶೈಕ್ಷಣಿಕ, ಮಾನಸಿಕ ಮುಂತಾದ ಎಲ್ಲಾ ರಂಗಗಳಲ್ಲಿ ಮಾನವನಿಗೆ ನೋವೇ  ಅಧಿಕವಾಗಿದೆ.ಈ ವರ್ಷ ಕೂಡಾ ಕೋವಿಡ್ ತನಯ ಅಟ್ಟಹಾಸ ಮೆರೆಯಲು ಕಾದು ಕುಳಿತಂತಿದೆ.  ಇದರ ಜೊತೆಯಲ್ಲಿ ನಾವೇ ಸೃಷ್ಟಿಸಿದ ಪರಿಸರ ಅಸಮತೋಲನ ಮತ್ತು ಪರಿಸರದ ಮೇಲೆ ನಾವು ಮಾಡಿರುವ ಅನಾಚಾರಗಳ ಪರಿಣಾಮವಾಗಿ ಅಕಾಲಿಕವಾದ ಮಳೆ ,ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಭೂಕುಸಿತಗಳು ನಮ್ಮಯ ಬದುಕನ್ನು ನುಂಗಲು ಬಾಯಿ ತೆರೆದು‌ಕುಳಿತಿರಬಹುದು. ಅಂತಹ ಪರಿಸ್ಥಿತಿ ಬಂದರೆ ನಾವು ಸಿದ್ದರಿರಬೇಕು. ಏಕೆಂದರೆ ಮಾಡಿದ್ದುಣ್ಣೋ ಮಹರಾಯ.

ಜೀವನದಲ್ಲಿ ನಾವು ಯೋಜನೆ ಮಾಡಿ ಜೀವಿಸುವೆವವು ಎಂದರೆ ಪ್ರಕೃತಿ ಮತ್ತು ಭಗವಂತ ಅದನ್ನು ಉಲ್ಟಾ ಮಾಡಿ ಈಗ ಹೇಗಿದೆ ನೋಡು ಆಟ? ಎಂದು  ನಗುವನು ಆದ್ದರಿಂದ ನಾವು ಮುಂಬರುವ ವರ್ಷದಲ್ಲಿ ಅತಿಯಾಗಿ ಪ್ಲಾನ್ ಮಾಡದೆ ಬಂದದ್ದೆಲ್ಲಾ ಬರಲಿ ಅವನ ದಯವೊಂದಿರಲಿ ಎಂದು ಆಶಾವಾದದ ಮೂಲಕ ಹೊಸ ವರ್ಷ ಸ್ವಾಗತಿಸೋಣ. ಎಲ್ಲಾ ವರ್ಷದಂತೆ ಮುಂಬರುವ 2022 ಸಹ ನಮ್ಮ ಬದುಕಲ್ಲಿ ಒಂದು ನಂಬರ್ ಆ ನಂಬರ್ ದಾಟಲೇಬೇಕು ದಾಟುತ್ತೇವೆ. ಆದರೆ ಆ ವರ್ಷದಲ್ಲಿ ನಾನು ಸವಾಲುಗಳು ಎದುರಿಸಿ ನನ್ನ ಜೀವನದಲ್ಲಿ ಮರೆಯಲಾಗದ ಎಷ್ಟು ಅವಿಸ್ಮರಣೀಯ ಘಟನೆಗಳನ್ನು ಸೃಷ್ಟಿ ಮಾಡಿಕೊಂಡೆ? ನನ್ನಿಂದ ಎಷ್ಟು ಜನರ ಮೊಗದಲ್ಲಿ ನಗುವರಳಿತು? ನಾನು ಎಷ್ಟು ಜನರಿಗೆ ಸಣ್ಣ ಪುಟ್ಟ ಸಹಾಯ ಮಾಡಿದೆ? ಎಂಬುವ ಅಂಶಗಳು ನಮ್ಮ ಜೀವನದ ಸಾರ್ಥಕತೆಯನ್ನು ಪ್ರತಿಬಿಂಬಿಸುತ್ತವೆ.

ಇಂತಹ ಸಾರ್ಥಕ ಜೀವನವು ಮುಂಬರುವ ವರ್ಷದಲ್ಲಿ ನಮ್ಮದಾಗಲಿ ಎಂದು ಆಶಿಸುವ

ನಿಮ್ಮ ಸಿಹಿಜೀವಿ.

ಸಿ ಜಿ ವೆಂಕಟೇಶ್ವರ
ತುಮಕೂರು.

29 ಡಿಸೆಂಬರ್ 2021

ರಕ್ತಸಿಕ್ತ ರತ್ನ .ಕಾದಂಬರಿ ವಿಮರ್ಶೆ


 



ರಕ್ತ ಸಿಕ್ತ ರತ್ನ .

ವಿಮರ್ಶೆ 


ಕೆ ಎನ್ ಗಣೇಶಯ್ಯರವರು ಬರೆದ 

ರೋಚಕ ಕಾದಂಬರಿ ರಕ್ತಸಿಕ್ತ ರತ್ನ ಒಂದು ರೋಚಕ ಮತ್ತು ಕುತೂಹಲಕಾರಿ ಐತಿಹಾಸಿಕ ಕಾದಂಬರಿ  ಈ ವರ್ಷ ನಾನು   ಓದಿದ ಕಾದಂಬರಿಗಳಲ್ಲಿ ಇದೂ ಕೂಡ ನೆಚ್ಚಿನ ಕಾದಂಬರಿ.  


ಬರ್ಮಾ ದೇಶದ ಚಾರಿತ್ರಿಕ ನಗರವಾದ ಭಾಗನ್ನಲ್ಲಿನ ಸಾವಿರಾರು ಪಗೋಡಗಳ ನಡುವೆ ತನ್ನ ಕುಟುಂಬಕ್ಕೆ ಸಂಬಂಧಿಸಿದ ರಹಸ್ಯ ವಸ್ತುವನ್ನು ಹುಡುಕಲೆಂದು ಲಂಡನ್ ಪತ್ರಕರ್ತೆ ಮೇರಿ ಒಂದು ರಾತ್ರಿ ಕದ್ದು ಡ್ರೋನ್ ಹಾರಿಸಿ ಪರಿಶೀಲಿಸುತ್ತಾಳೆ. ನಂತರ, ತನ್ನ ಮೇಲೆ ನಡೆದ ಗುಂಡಿನ ದಾಳಿಯಿಂದ ಹೆದರಿ ಬರ್ಮ ತೊರೆದು ಭಾರತದ ಪಶ್ಚಿಮ ಕರಾವಳಿಯಲ್ಲಿನ ರತ್ನಗಿರಿಗೆ ಬಂದಾಗ ಆಕೆಯ ಮೇಲೆ ಮತ್ತೆ ಕೊಲೆ ಪ್ರಯತ್ನ ನಡೆಯುತ್ತದೆ. ಮೇರಿ ನಡೆಸುತ್ತಿದ್ದ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮ ದೇಶದ ಬೌದ್ಧ ಗುರು, ತನ್ನ ಸಹಾಯಕನನ್ನು ಆಕೆಯ ಬಳಿ ಅಟ್ಟುತ್ತಿದ್ದಂತೆ, ಆಕೆಗೆ ಸಹಾಯ ಮಾಡಿದ್ದ ಟೂರಿಸ್ಟ್ ಗೈಡ್ ಅನ್ನು ಭೂಗತ ಗುಂಪೊಂದು ಸಂಪರ್ಕಿಸಿ ಚರಿತ್ರೆಯ ರಹಸ್ಯವೊಂದರ ಬೆನ್ನತ್ತಿ ಹೋಗಲು ಪ್ರಚೋದಿಸುತ್ತದೆ.


ಇತ್ತ ಭಾರತದಲ್ಲಿ ಸಿಬಿಐ ಸಿಬ್ಬಂದಿ, ಚರಿತ್ರೆಯ ಪ್ರಾಧ್ಯಾಪಕಿ ಡಾ ಸುನಿತಾ ಅವರ ಜೊತೆಗೂಡಿ ಕೈಗೊಂಡ ಶೋಧದಿಂದಾಗಿ ಲಂಡನ್ನಿನ ಪತ್ರಕರ್ತೆ ನಡೆಸುತ್ತಿದ್ದ ಹುಡುಕಾಟಕ್ಕೂ, ಭಾರತದ ಸೈನ್ಯ ನಡೆಸಿದ ಸರ್ಜಿಕಲ್ ದಾಳಿಗೂ ಸಂಬಂಧ ಇರುವ ಬಗ್ಗೆ ಅರಿವಾಗುತ್ತದೆ. ಡಾ ಸುನಿತಾ ಅವರ ಸಂಶೋಧನೆಯ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತಿದ್ದಂತೆ, ಮರೆತುಹೋಗಿದ್ದ ದಾರುಣ ಚರಿತ್ರೆಯ ತುಣುಕೊಂದು ಅನಾವರಣವಾಗುವುದರ ಜೊತೆಗೆ, ಅತ್ಯಂತ ಬೆಲೆ ಬಾಳುವ ರತ್ನವೊಂದರ ರಕ್ತಸಿಕ್ತ ರಹಸ್ಯ ಬಯಲಾಗತೊಡಗುತ್ತದೆ. ಅದನ್ನು ನೀವು ಓದಿಯೇ ಸವಿಯಬೇಕು.


ಕಾದಂಬರಿ ಕಾರರು ಹೇಳುವಂತೆ 

ಪ್ರಸಿದ್ಧ  ಬರ್ಮಾದ   ಪಗೋಡಗಳನ್ನು ಆವರಿಸಿರುವ ಚಿನ್ನದ ಮುಸುಕುಗಳಲ್ಲಿ ಪ್ರತಿಫಲಿಸುತ್ತಿದೆ. ಅಲ್ಲದೆ ಜನರ ನಡೆನುಡಿಗಳಲ್ಲಿ ನುಸುಳಿಕೊಂಡಿದೆ: ಹಬ್ಬ ಹರಿದಿನಗಳ ಆಚರಣೆಯಲ್ಲಿ ವರ್ಣಮಯವಾಗಿ ಎದ್ದು ನರ್ತಿಸುತ್ತಿದೆ. ಈ ದೇಶದಲ್ಲಿ ಸುತ್ತಾಡುತ್ತಿದ್ದಂತೆ ನನಗೆ ತೈವಾನ್ನಲ್ಲಿ ಮೂಡಿದ ಭಾವನೆ ಮತ್ತೆ ಮರುಕಳಿಸಿತ್ತು. 'ಇದು ನಮ್ಮ ಧರ್ಮ, ನಾವು ಸ್ವೀಕರಿಸದೆ ಕೈಬಿಟ್ಟ ಧರ್ಮ, ಒಂದು ರೀತಿಯಲ್ಲಿ ನಾವು ಆಸರೆ ಕೊಡದೆ ಗಡೀಪಾರು ಮಾಡಿದ ಧರ್ಮ' ಎನಿಸಿತ್ತು. ಆದರೆ ಅದರ ಬೆನ್ನಲ್ಲಿಯೇ ಮೂಡಿದ ಮತ್ತೊಂದು ಸಮಜಾಯಿಷಿಯ ಭಾವನೆ ಮೂಡಿತ್ತು: 'ಚಾರಿತ್ರಿಕವಾಗಿ ಬರ್ಮಾ ದೇಶ ನಮ್ಮ ಭಾರತವೆ ಅಲ್ಲವೆ? ಸುಭಾಷ್ಚಂದ್ರ ಬೋಸ್ ಅವರು ತಮ್ಮ ಸ್ವಾತಂತ್ರದ ಯುದ್ಧವನ್ನು ಪ್ರಾರಂಭಿಸಿದ್ದು ಇಲ್ಲಿಂದಲೆ ಅಲ್ಲವೆ? ಆ ದಿನಗಳಲ್ಲಿ 'ಭಾರತ' ಎಂದರೆ ಇದೆಲ್ಲವೂ ಸೇರಿತಲ್ಲವೆ? ಈ ಬ್ರಿಟಿಷರಿಂದಾಗಿ ಬರ್ಮಾ ಭಾರತದಿಂದ ಬೇರೆಯಾಯಿತೆ? ಹಾಗಿದ್ದರೆ ನಾನು ಹಳೆಯ 'ಭಾರತ'ದಲ್ಲಿಯೇ ಇದ್ದೇನೆ ಎಂದಲ್ಲವೆ? ಹಾಗಾಗಿ ಇಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರೆ, ಆದು ಆಗಿನ ನಮ್ಮ ಭಾರತದ ಒಂದು ಭಾಗದಲ್ಲಿಯೇ ಬೌದ್ಧ ಧರ್ಮವನ್ನು ಸ್ವೀಕರಿಸಿದಂತಲ್ಲವೆ?" ಎಂಬ ಸಮಾಧಾನದ ಭಾವನೆ, ಇದರಿಂದಾಗಿ ನನಗೆ ಬರ್ಮಾ ಎಂದರೆ 'ಭಾರತ' ದೇಶದ ಪರಿಕಲ್ಪನೆಯ ಭಾಗವಾಗಿ ಹೋಗಿತ್ತು. ಆದಕಾರಣ, ನಾನು ತೀಬಾ ರಾಜನನ್ನು ಭಾರತದ ಹೊರಗಿನ ರಾಜ ಎಂದು ಭಾವಿಸಲಿಲ್ಲ. ಜೊತೆಗೆ ಆತ ಇಂದಿನ 'ಇಂಡಿಯಾ'ದಲ್ಲಿಯೇ ಸತ್ತಿದ್ದರಿಂದಲೂ, ಈ ಕಥೆ ಮತ್ತೊಬ್ಬ ಭಾರತದ ರಾಜನ ಕಥೆಯಾಗಿಯೇ ನನ್ನಲ್ಲಿ ಬೆಳೆಯಿತು. ಎಂದಿರುವರು.


ಕಾದಂಬರಿ ಹುಟ್ಟಿದ ಬಗೆಯನ್ನು ವಿವರಿಸಿರುವ ಕಾದಂಬರಿಕಾರರು ರತ ಗಿರಿಗೆ ಪ್ರವಾಸ ಬರುತ್ತಾರೆ. ರತ್ನಗಿರಿಗೆ ಬಂದಿದ್ದು ಯಾವುದೇ ಉದ್ದೇಶವಿಲ್ಲದೆ, ಕೇವಲ ಪ್ರಯಾಣದ ಹಾದಿಯಲ್ಲಿನ ಮತ್ತೂ ಒಂದು ತಂಗುದಾಣವಾಗಿ ಅಷ್ಟೆ. ಆದರೆ ಅಲ್ಲಿ ತಂಗಿದ್ರೆ ರಾತ್ರಿ ಸುತ್ತ ಮುತ್ತ ಏನಾದರೂ ನೋಡಲು ಕುತೂಹಲಕರವಾದದ್ದು ಇರಬಹುದೆಂದು ಎಂದು ಹುಡುಕುತ್ತಿದ್ದಾಗ ತಿಳಿದದ್ದು. ಬರ್ಮಾ ದೇಶದ ರಾಜ ತೀಬಾರಾಜನ ಅರಮನೆ ಇದೆ ಎಂದು.


ರತ್ನಗಿರಿಯ ಅರಮನೆಯ ಆವರಣದಲ್ಲಿದ್ದಷ್ಟು ಹೊತ್ತು ಅವರಿಗೆ ಹುಚ್ಚು ಹಿಡಿಯುವುದರ ಜೊತೆಗೆ ದುಃಖವೂ ಆವರಿಸಿತ್ತು-ಅಲ್ಲಿನ ಸಂಗ್ರಹಾಲಯದ ಸಿಬ್ಬಂದಿಯೊಬ್ಬರ ಮೂಲಕ ತಿಳಿದ ವಿವರಗಳಿಂದಾಗಿ: ತೀಬಾ  ರಾಜ ಬೌದ್ಧ ಧರ್ಮದ ವಿದ್ಯೆಯಲ್ಲಿ ಅತ್ಯುನ್ನತ ಪದವಿ ಪಡೆದದ್ದು, ನಂತರ ಬ್ರಿಟಿಷರಿಗೆ ಸೋತು ಸೆರೆಯಾಗಿ ದುರಂತ ಜೀವನ ನಡೆಸಿದ್ದು, ರತ್ನಗಿರಿಗೆ ಬಂದ ಮೇಲೆ ತೀಬಾ, ಆತನ ರಾಣಿ ಮತ್ತು ಹೆಣ್ಣು ಮಕ್ಕಳು ಅರಮನೆಯ ರಚನೆಯಲ್ಲಿ ತಾವಾಗಿ ತೊಡಗಿಸಿಕೊಂಡದ್ದು, ಅರಮನೆಯಿಂದ ಅನತಿದೂರದಲ್ಲಿದ್ದ ಅವರ ಅಡುಗೆ ಮನೆಯಲ್ಲಿ ಬರ್ಮಾದ ಆಡುಗೆ ಮಾಡಲು ಅವರು ಕಷ್ಟಪಡುತ್ತಿದ್ದದ್ದು, ರಾಜನ ಹೆಣ್ಣುಮಕ್ಕಳು ಅಡುಗೆ ಮನೆಯಿಂದ ಆರಮನೆಗೆ ಊಟವನ್ನು ತಂದು ತಂದೆ ತಾಯಿಗೆ ಬಡಿಸಲು ಬಯಸಿದರೂ ರಾಜ ಅದನ್ನು ವಿರೋಧಿಸುತ್ತಿದ್ದದ್ದು, ಆತ ಸತ್ತ ನಂತರ ರತ್ನಗಿರಿಯಲ್ಲಿಯೇ ಅಂತ್ಯಕ್ರಿಯೆ ನಡೆದದ್ದು, ಸುಫಾಯಾಲಾತ್ಳ ಕಳೇಬರವನ್ನು ಮಂಡಲೆಗೆ ಹೊತ್ತೊಯ್ಯಲು ಬ್ರಿಟಿಷ್ ಸರಕಾರ ಅಡ್ಡಿ ಒಡ್ಡಿದ್ದು, ಅವರ ಕೆಲವು ಮಕ್ಕಳ ಶೋಚನೀಯ ಜೀವನ.. ಹೀಗೆ ಎಲ್ಲವನ್ನೂ ಕೇಳುತ್ತ ಒಂದೆಡೆ ತೀಬಾ ರಾಜನ ಬಗ್ಗೆ ಮತ್ತಷ್ಟು ತಿಳಿಯುವ ಹುಚ್ಚು ಹಿಡಿದು  ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆದ ಆರಮನೆಯನ್ನು ಇಂದು ಸಂಪೂರ್ಣ ಆಗೆದು, ಕಿತ್ತು. ಜೀರ್ಣೋದ್ಧಾರ ಮಾಡುತ್ತಿದ್ದ ರೀತಿ ಕಂಡು ನೋವು ಉಮ್ಮಳಿಸಿತ್ತು. ನೂರು ವರ್ಷಗಳ ಹಿಂದೆ ಆ ಅರಮನೆಗೆ ಉಪಯೋಗಿಸಿದ್ದ ಸೂರಿನ ಹೆಂಚುಗಳನ್ನೆಲ್ಲ ಕಿತ್ತು ಸುತ್ತಲೂ ದಿಕ್ಕಾಪಾಲಾಗಿ ಎಸೆಯಲಾಗಿತ್ತು, ಅವುಗಳ ಮೇಲೆ ಕಣ್ಣಾಡಿಸಿ ಓಡಾಡುತ್ತಿದ್ದಾಗ ಒಂದು ಹೆಂಚಿನ ಮೇಲೆ ದೊರಕಿದ ವಿಶಿಷ್ಟ ಚಿತ್ರ ನಮ್ಮನ್ನು ಆಕರ್ಷಿಸಿ .ಸಂಶೋಧನೆ ಮಾಡಿ ಇಂತಹ ಸುಂದರ ಕಾದಂಬರಿಯನ್ನು ನಮ್ಮ ಕೈಗಿತ್ತಿದ್ದಾರೆ ಶ್ರೀಯುತ ಕೆ ಎನ್ ಗಣೇಶಯ್ಯ ರವರು.


ಈ ಕಾದಂಬರಿಯ ಪಾತ್ರ ಪೋ಼ಷಣೆ ಅಷ್ಟೇ ಅದ್ಭುತ

 ಟುನ್   ಎಂಬ ಪ್ರವಾಸಿ ಗೈಡ್ ಸಾಮಾನ್ಯ ಪ್ರವಾಸಿ ಗೈಡ್ ಆಗಿರದೇ ಓರ್ವ ದೇಶಭಕ್ತ ,ತನ ದೇಶದ ಇತಿಹಾಸ ದ ಬಗ್ಗೆ ಅಪಾರ ಗೌರವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಓರ್ವ ನಾಯಕನಾಗಿ ಗಮನ ಸೆಳೆಯುತ್ತಾನೆ.

ಮೇರಿ ಪತ್ರಕರ್ತೆ ಎಂಬ ಪತ್ರಕರ್ತೆ ತನ್ನ ಜನನ ರಹಸ್ಯ ತಿಳಿಯಲು ಮತ್ತು ಬರ್ಮಾದ ಸಂಪತ್ತಿನ ರಹಸ್ಯ ತಿಳಿಯಲು ಎಷ್ಟೇ ಧೈರ್ಯ ಮತ್ತು ಬುದ್ದಿವಂತಿಕೆ ಪ್ರದರ್ಶಿಸಿದರೂ ದುರಂತ ನಾಯಕಿಯಾಗಿ ಅಂತ್ಯ ಕಾಣುವುದು ಬೇಸರ ತರಿಸುತ್ತದೆ. ಬರ್ಮಾದ ಧರ್ಮ ಗುರು ತಮ್ಮ ದೇಶದ ಸಂಪತ್ತಿನ ಇತಿಹಾಸ ಮತ್ತು ರಹಸ್ಯ ತಿಳಿಯುವ ಆಸಕ್ತಿ ಗಮನ ಸೆಳೆಯುತ್ತದೆ.ಅದಕ್ಕೆ ಪುರಕವಾಗಿ

ಭುವನ್ ಗುರುಗಳಿಗೆ ಸಹಾಯ ಮಾಡುತ್ತಾನೆ .ಇನ್ನೂ ಭಾರತದ 

ಸುನಿತಾ ಸಂಶೋಧನಾ ಅಧಿಕಾರಿಗಳಾಗಿ 

ಅಭಿಜಿತ್  ಎಂಬ ಸಿ .ಬಿ .ಐ .ಅಧಿಕಾರಿ ಗೆ ಬರ್ಮಾದ ಸಂಪತ್ತಿನ ಬಗ್ಗೆ ನೀಡುವ ಪ್ರತಿಯೊಂದು ಮಾಹಿತಿಯು ಕುತೂಹಲ ಕೆರಳಿಸುತ್ತದೆ.

ಬರ್ಮಾದ ತೀಬಾ ರಾಜ ಬೌದ್ಧ ಬಿಕ್ಕುವಾಗಿ ನಂತರ  ರಾಜನಾಗಿ ಹೇಗೆ 

ರಾಣಿ ಸುಫಾಯಾಲಾತ್ ಳ ಕೈಗೊಂಬೆ ಯಾಗುತ್ತಾನೆ ಎಂಬುದನ್ನು ಕಾದಂಬರಿಯಲ್ಲಿ ಓದಿಯೇ ತಿಳಿಯಬೇಕು.


ಇನ್ನೂ ಬರ್ಮಾದ ಸಂಪತ್ತಿನ ಮೇಲೆ ಕಣ್ಣಿಟ್ಟ ಡೇವಿಡ್ ಮತ್ತು ಶ್ವೇ ಟುನ್ ಅಂತರಾಷ್ಟ್ರೀಯ ಮಾಫಿಯಾ ದವರು ಹೇಗೆ ಸಂಚು ಹೂಡಿದರು ಮತ್ತು ಆ ಸಂಚಿಗೆ ತಾವೇ ಬಲಿಯಾದದ್ದನ್ನು ಲೇಖಕರು ಚೆನ್ನಾಗಿ ವಿವರಿಸಿರುವರು.

ಬರ್ಮಾದ ಅಪೂರ್ವ ಸಂಪತ್ತಿನ ರಕ್ಷಣೆ ಕಾರ್ಯ ಸುಸೂತ್ರವಾಗಿ ನಿರ್ವಹಣೆ ಮಾಡಿದ 

ಮೆಡಾವ್ ಪುಷ್ಪ ಅವಳ  ನಾಗಪಂಥ,

ನಾಗ ಗುಹೆ  , ಚಿತ್ರಣಗಳು ಕಾದಂಬರಿಯಲ್ಲಿ ಸೊಗಸಾಗಿ ಮೂಡಿಬಂದಿವೆ .


ನಾವು ಈ ಕಾದಂಬರಿಯನ್ನು ಓದುತ್ತಾ  ಟೂರ್ ಮಾಡಿದ ಅನುಭವವಾಗುತ್ತದೆ.

 ಗೋವಾ ಮುಂಬಯಿ,

ಪೂನಾ ,ಬರ್ಮಾದಾಮರಾಪುರ, ಮಂಡಲೆ ,ಬಾಗನ್ ,ಈ ಸ್ಥಳಗಳ ಪರಿಚಯ ಆಗುತ್ತದೆ.

ಲಂಡನ್ ಕಥೆ ಆರಂಭವಾಗಿ

ಬರ್ಮಾ ದಲ್ಲಿ ಮುಕ್ತಾಯವಾಗುತ್ತದೆ.

ಈ ಕಾದಂಬರಿಯನ್ನು ಓದುವಾಗ 

ಸಿಗಾರ್ ,ರಹಸ್ಯತೊಗಲಿನ ಚೀಲ ,

ಕರ್ಚಿಪ್ ಮುಂತಾದವುಗಳು ಸಹ ಪಾತ್ರಗಳಾಗ ಗಮನ ಸೆಳೆಯುತ್ತವೆ .

ಒಂದು ವಿಶಿಷ್ಟವಾದ ಐತಿಹಾಸಿಕ ಜ್ಞಾನ ಪಡೆಯಲು ರೋಚಕತೆಯನ್ನು ಅನುಭವಿಸಲು   ನೀವು ರಕ್ತ ಸಿಕ್ತ ರತ್ನ ಓದಲೇಬೇಕು.



 ಕಾದಂಬರಿ:   ರಕ್ತಸಿಕ್ತ ರತ್ನ 

ಲೇಖಕರು: ಕೆ ಎನ್ ಗಣೇಶಯ್ಯ 

ಬೆಲೆ: ರೂ.350/


 ಪ್ರಕಾಶನ:  ಅಂಕಿತ ಪ್ರಕಾಶನ 



ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು.

28 ಡಿಸೆಂಬರ್ 2021

ಸಿಂಹ ಧ್ವನಿ .೨೮/೧೨/೨೧


 

ದೂರ ಸರಿದರು .ಕಾದಂಬರಿ ವಿಮರ್ಶೆ

 


ದೂರ ಸರಿದರು 

ವಿಮರ್ಶೆ


  ಎಸ್ .ಎಲ್ . ಬೈರಪ್ಪ ರವರ ಕಾದಂರಿಗಳೇ ಹಾಗೆ ಪ್ರತಿ ಬಾರಿ ಓದಿದಂತೆ ನಮ್ಮಲ್ಲಿ ಏನೋ ಒಂದು ಹೊಸ ಜ್ಞಾನ ಬೆಳೆಯುತ್ತದೆ ,ಹೊಸ ಚಿಂತನೆಗಳು ಮೊಳಕೆಯೊಡೆಯುತ್ತವೆ.

1962 ರಲ್ಲಿ ಬರೆದ ಕಾದಂಬರಿ 

ಹಲವಾರು ಬಾರಿ ಮರು ಮುದ್ರಣ ಕಂಡು ಅಪಾರ ಓದುಗ ಬಳಗ ಮೆಚ್ಚಿದ ಕಾದಂಬರಿ "ದೂರ ಸರಿದರು " ನನಗೆ ಬಹಳ ಇಷ್ಟವಾದ ಕಾದಂಬರಿ.


ಈ ಕಾದಂಬರಿಯಲ್ಲಿ ಎರಡು ಜೋಡಿಗಳು ದೂರ ಸರಿಯುವುದನ್ನು ನಾವು ಕಾಣಬಹುದು.

ಪ್ರಮುಖ ಪಾತ್ರದಲ್ಲಿ ಅನಂದ ಮತ್ತು ವಿನತೆ ಪ್ರೀತಿ ದಾಂಪತ್ಯ ದ ಬಗ್ಗೆ ಏಕ ಅಭಿಪ್ರಾಯವಿದ್ದರೂ ಒಂದೇ ರೀತಿಯ ಚಿಂತನೆಗಳ ಒಪ್ಪಿಕೊಂಡರೂ  ವಿನತೆಯ ತಾಯಿಯ ವಿರೋದ ಹಾಗೂ ಕೆಲವು ಬಾಹ್ಯ ಪರಿಸ್ಥಿತಿಯಿಂದ ಅವರು "ದೂರ ಸರಿದರು"

ಮತ್ತೊಂದು ಜೋಡಿ ಉಮೆ ಮತ್ತು ವಸಂತ ಇವರಿಬ್ಬರೂ ಸೌಂದರ್ಯಕ್ಕಿಂತ ಹೆಚ್ಚು ವೈಚಾರಿಕತೆಯ ಸಾಮ್ಯತೆ ಇವರನ್ನು ಬಂಧಿಸಿತ್ತು .ಮೊದಲು ಉಮೆಯ ಪ್ರೋತ್ಸಾಹ ಮಾಡಿದ ವಸಂತ ಕ್ರಮೇಣ ಅವಳ  ವೈಚಾರಿಕತೆ ಮತ್ತು ಚಿಂತನೆಗಳು ಅವನ ನಂಬಿಕೆಯನ್ನು ಪ್ರಶ್ನಿಸುವ ಮಟ್ಟ ತಲಪಿದಾಗ ವಸಂತ ಉಮೆಯಿಂದ "ದೂರ ಸರಿದನು".

ತತ್ವ ಶಾಸ್ತ್ರದ ಹಿನ್ನೆಲೆಯಲ್ಲಿ ಬಂದ ಬೈರಪ್ಪನವರ ಸಂಭಾಷಣೆ ನಮ್ಮಲ್ಲಿ ಚಿಂತನ ಮಂಥನ ನಡೆಸಲು ಪ್ರೇರಣೆ ನೀಡುತ್ತದೆ.

ವಿನತೆಗೆ ತನ್ನ ಪ್ರೀತಿಗಿಂತ ತಾಯಿ, ಮತ್ತು ತಮ್ಮಂದಿರ ಶಿಕ್ಷಣ ಅವಳನ್ನು ಕಟ್ಟಿ ಹಾಕಿತ್ತು .ಅವಳ ಗೆಳತಿ ಅವಳ ಪ್ರೇಮಕ್ಕೆ ಸಹಾಯ ಮಾಡಿದರೂ ಅಮ್ಮನ ಬ್ಲಾಕ್ ಮೇಲ್ ಅಳು ಮುಂತಾದವು ವಿನತೆಯನ್ನು ಹಿಂದೆ ಎಳೆದವು .


ಪ್ರೀತಿ ಕುರುಡು ಎಂದು ಕೆಲವರು ಹೇಳಿದರೂ ಇಂದಿನ ಮಾಧ್ಯಮ  ಮತ್ತು ಬಹುತೇಕ ಸಾಹಿತ್ಯ ಹೆಣ್ಣು ಮತ್ತು ಗಂಡಿನ ಸೌಂದರ್ಯ ನೋಡಿ ಪ್ರೀತಿ ಹುಟ್ಟುವ ಬಗ್ಗೆ ವಿವರ ನೀಡುವರು. ಈ ಕಾದಂಬರಿಯ ಲ್ಲಿ ಪ್ರೇಮ ಉದಯವಾಗಲು ಬಾಹ್ಯ ಸೌಂದರ್ಯಕ್ಕೆ ಮಿಗಿಲಾಗಿ ಆಂತರಿಕ ಸೌಂದರ್ಯ ಭೌದ್ಧಿಕ ಸೌಂದರ್ಯ ಮುಖ್ಯ ಎಂಬುದನ್ನು ಬೈರಪ್ಪರವರು ಈ ಕಾದಂಬರಿ ಮೂಲಕ ಎತ್ತಿ ಹಿಡಿದದ್ದು ಸಾರ್ವಕಾಲಿಕ ಮೌಲ್ಯವನ್ನು ಎತ್ತಿಹಿಡಿದಂತಾಗಿದೆ.

ಕಾದಂಬರಿ ಬರೆದು ಅರವತ್ತು ವರ್ಷಗಳ ನಂತರ ವೂ ಸಹ ಇಂದಿಗೂ ಕೌಟುಂಬಿಕ ,ಜಾತಿ ಅಂತಸ್ತು ಧರ್ಮದ ಕಾರಣದಿಂದಾಗಿ ಹಲವಾರು ಪ್ರೇಮಿಗಳು ದೂರ ಸರಿಯುತ್ತಿರುವುದನ್ನು ನಾವು ಕಾಣುತ್ತೇವೆ. ಅದಕ್ಕೆ ಈ ಕೃತಿಯು ಇಂದಿಗೂ ಪ್ರಸ್ತುತ ಮುಂದೆ ಕೂಡಾ.

ಒಟ್ಟಾರೆ ಬೈರಪ್ಪನವರ ಈ ಕಾದಂಬರಿ ಓದಿದ ಕನಿಷ್ಠ ಹದಿನೈದು ದಿನಗಳಾದರೂ ಆ ಪಾತ್ರಗಳ ಗುಂಗು ನಮ್ಮನ್ನು ಆವರಿಸುತ್ತದೆ.ಇಲ್ಲಿ ದೂರ ಸರಿಯಲು ಯಾರು ಕಾರಣ ಎಂಬ ವಿಮರ್ಶೆ ನಮ್ಮಲ್ಲಿ ಮೊಳೆಯುತ್ತದೆ. ನಮ್ಮ ಜೀವನದಲ್ಲಿ ಕೆಲವೊಮ್ಮೆ ನಮ್ಮಿಂದ ಕೆಲವರು ಅಥವಾ ಕೆಲವರ ಜೀವನದಿಂದ ನಾವು ದೂರ ಸರಿದ ಕಾರಣವನ್ನು ಹುಡುಕುತ್ತೇವೆ .ಕೆಲವೊಮ್ಮೆ ನಾವೇ ಪಶ್ಚಾತ್ತಾಪ ಪಟ್ಟುಕೊಳ್ಳುತ್ತೇವೆ.ಈ ಕಾದಂಬರಿಯನ್ನು ನೀವು ಓದಿಲ್ಲವಾದರೆ ಖಂಡಿತವಾಗಿಯೂ ಓದಿ.ಈಗಾಗಲೇ ಓದಿದ್ದರೆ ಪುನಃ ಓದಿ ಹೊಸ ಯೋಚನೆಗಳು ನಿಮ್ಮಲ್ಲಿ ಪುಟಿದೇಳುವುದರಲ್ಲಿ ಸಂಶಯವಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ