19 ಮಾರ್ಚ್ 2021

ನಿದಿರೆ ( ಇಂದು ವಿಶ್ವ ನಿದಿರೆ ದಿನ)


 




*ನಿದಿರೆ*


ವೃಥಾ ಏಕೆ ಹಾಳು

ಮಾಡಿಕೊಳ್ಳುತಿರುವೆ

ನಿನ್ನ ಆರೋಗ್ಯವನ್ನು

ಸೇವಿಸುತ ಮದಿರೆ|

ಕಷ್ಟ ಪಟ್ಟು ದುಡಿದು

ಸ್ವಚ್ಛ ಮನಸ್ಸನ್ನು

ಹೊಂದಿದರೆ ರಾತ್ರಿಯಲ್ಲಿ

ಕಣ್ಮುಚ್ಚಿದರೆ ಸಾಕು

ಆವರಿಸುವುದು ನಿದಿರೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


18 ಮಾರ್ಚ್ 2021

ಪುಟ್ಟನ ಚಿತ್ರ ಶಿಶುಗೀತೆ


 



*ಪುಟ್ಟನ ಚಿತ್ರ* 


ಶಿಶುಗೀತೆ


ನಮ್ಮ ಪುಟ್ಟ ದುಡ್ಡು ಕೊಟ್ಟು

ಚಿತ್ರದ ಪುಸ್ತಕ ಕೊಂಡನು

ಚಿತ್ರಗಳನ್ನು ನೋಡಿ

ಅವನು ಖುಷಿಯಪಟ್ಟನು.


ತಾನೂ ಕೂಡ ಚಿತ್ರ

ಬರೆಯಲು ಸಿದ್ದನಾದನು

ಪೇಪರ್ ಪೆನ್ಸಿಲ್ ಹಿಡಿದು

ಚಿತ್ರ ಬರೆಯಲು ಕುಳಿತನು.


ಬೆಟ್ಟ ಗುಡ್ಡ ,ಗಿಡ ಮರ

ಬಿಳಿಹಾಳೆಯಲಿ ಮೂಡಿದವು

ಪ್ರಾಣಿ ಪಕ್ಷಿ, ಚಿಟ್ಟೆಗಳು 

ಅಲ್ಲಲ್ಲಿ ಕಂಡು ಬಂದವು.


ಬಣ್ಣದ ಬ್ರಷ್ ಹಿಡಿದು

ಬಣ್ಣವನ್ನು ತುಂಬಿದ

ಬರೆದ ಚಿತ್ರವನ್ನು ಅವನು

ಅಮ್ಮನಿಗೆ ತೋರಿಸಿದ.


ಮಗನ ಚಿತ್ರ ನೋಡಿ

ಅಮ್ಮ ಖುಷಿಯ ಪಟ್ಟರು

ಹಣೆಗೆ ಮುತ್ತನಿಟ್ಟು

ಕೈಗೆ ಲಾಡು ಕೊಟ್ಟರು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


17 ಮಾರ್ಚ್ 2021

ಆಟವನಾಡೋಣ (ಶಿಶುಗೀತೆ)


 


*ಆಟವನಾಡೋಣ* ಶಿಶುಗೀತೆ √

ಬಾರೋ ಗೆಳೆಯ ಎಲ್ಲಾ
ಸೇರಿ ಆಟವನಾಡೋಣ
ಗೆಳೆಯರ ಜೊತೆಯಲಿ ಸೇರಿ
ಎಲ್ಲರೂ ನಕ್ಕು  ನಲಿಯೋಣ.

ಚಿನ್ನಿದಾಂಡು ಕೋಲನು
ಹಿಡಿದು ಆಟವನಾಡೋಣ
ಬುಗುರಿ ,ಗಿರಗಿಟ್ಲೆ ಆಟದಿ
ಮಜವನು ಮಾಡೋಣ.

ಮರಕೋತಿ ಆಟವನಾಡಲು
ಈಗಲೆ ಮರವನು ಏರೋಣ
ಅಳಿಗುಣಿ ಆಟಕೆ ಹುಣಸೆ
ಬೀಜಗಳನ್ನು ಸೇರಿಸೋಣ.

ಕುಂಟೋ ಬಿಲ್ಲೆಯ ಆಟವ
ಆಡುತ ಕೌಶಲ್ಯ ತೋರಣ
ಕಬ್ಬಡ್ಡಿ ,ಕೊಕೊ,ಆಡುತ
ನಾವು ಗಟ್ಟಿಗರಾಗೋಣ .

ಪಾಠದ ಜೊತೆಗೆ ಆಟವು
ಇರಲಿ ಎಂಬುದು ತಿಳಿಯೋಣ
ಆಟದ ಮಹತ್ವವನ್ನು ನಾವು
ಜಗತ್ತಿಗೆ ತಿಳಿಸೋಣ .

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

16 ಮಾರ್ಚ್ 2021

ರಜ .ಮಜ ( ಶಿಶುಗೀತೆ)


 


ಶಿಶುಗೀತೆ
*ರಜ  ಮಜ*

ನಾನು ರಜೆಯ ಕಳೆಯುವೆ
ರಜದಿ ಮಜವ ಮಾಡುವೆ

ಅಜ್ಜಿ ಮನಗೆ ಹೋಗುವೆ
ಸಜ್ಜೆ ಬೆಲ್ಲ ತಿನ್ನವೆ

ಗೆಳೆಯರೊಡನೆ ಅಡುವೆ
ಒಳ್ಳೆಯ ಆಟ ಕಲಿವೆ

ಜಾತ್ರೆ ಗೆ ನಾ ಹೋಗುವೆ
ತುತ್ತೂರಿ ಊದುವೆ

ಮತ್ತೆ ಶಾಲೆಗೆ ಹಿಂತಿರುಗುವೆ
ಕಲಿಕೆಯಲ್ಲಿ ತೊಡಗುವೆ

*ಸಿ.ಜಿ ವೆಂಕಟೇಶ್ವರ*

15 ಮಾರ್ಚ್ 2021

ಚಿಟ್ಟೆಯಾಗುವಾಸೆ . ಶಿಶುಗೀತೆ

 

*ಚಿಟ್ಟೆಯಾಗುವಾಸೆ* 


ತೋಟದಿ ಕಂಡೆನು 

ವಿಧ ವಿಧ ಚಿಟ್ಟೆ

ಪಟ್ಟೆಯ ಚಿಟ್ಟೆಯ

ಕಂಡು ಕುಣಿದಾಡಿಬಿಟ್ಟೆ. 


ಒಂದೇ ಎರಡೇ ನೋಡು 

ನೂರಾರು ಬಣ್ಣ

ಈ ಪರಿ ಬಣ್ಣವ

ಬಳಿದವರಾರಣ್ಣ?


ರೆಕ್ಕೆಯ ಬಡಿಯುತ 

ಪಕ್ಕದಿ ನಲಿದವು

ನೋಡಲು ಕಣ್ಣಿಗೆ

ಏನೋ ಆನಂದವು.


ಲವಲವಿಕೆಯಲಿ 

ನಲಿವವು ಅನುದಿನದಿ

ಚಿಟ್ಟೆಯಾಗುವಾಸೆ 

ಮುಂದಿನ ಜನ್ಮದಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ