27 ಜುಲೈ 2020

ಸಿಹಿಜೀವಿಯ ಹನಿ( ಮುಗೀತಾ?)


*ಮುಗೀತಾ?*

ನಾನು ತನ್ಮಯದಿಂದ
ಹಾಡಲು ಶುರುಮಾಡಿದೆ
ಸಂಗೀತ |
ಹಾಡಿ ಮುಗಿಸಿದಾಗ
ನಮ್ಮ ಮನೆಯವರು
ನಿಧಾನವಾಗಿ ಕಿವಿಯಿಂದ
ಹತ್ತಿಯ ತೆಗೆದು ಕೇಳಿದಳು
ಮುಗೀತಾ? ||

*ಸಿ ಜಿ ವೆಂಕಟೇಶ್ವರ*

26 ಜುಲೈ 2020

ನಡೆದಾಡುವ ದೇವರು


*ನಡೆದಾಡುವ ದೇವರು* 

ಸಿದ್ದರ ನಾಡಲಿ ಸಿದ್ದಿಯ
ಮಾರ್ಗವ ತೋರಿದ ದೇವ
ಗಂಗೆಯಂತೆ ನಮ್ಮ ಮಲಿನವ
ತೊಳೆದು ಮರೆಸಿದಿರಿ ನೋವ.

ಬಡವರ ಪಾಲಿಗೆ ಬದುಕುವ
ದಾರಿಯನು ತೋರಿದಿರಿ
ನರನ ಸೇವೆಯೇ ನಾರಾಯಣ
ಸೇವೆಯೆಂಬ ನೀತಿಯ ಸಾರಿದಿರಿ .

ನಡೆಯ ತಪ್ಪಿದವರಿಗೆ ಬುದ್ದಿ
ಕಲಿಸಿದ ನಡೆದಾಡುವ ದೇವರು
ಸಿದ್ದಗಂಗೆಯಾಯಿತು ಇಂದು
ಜ್ಞಾನ  ಅನ್ನ ,ವಿದ್ಯೆಯ ತವರು .

ಮಾನವ ರೂಪದಿ ಬಂದ
ಧರೆಗವತರುಸಿದ ಶಿವಪ್ಪನೇ ನೀವು
ಸಕಲರ ಮನದಲಿ ಎಂದಿಗೂ
ಇರುವಿರಿ ಮರೆಯುವುದಿಲ್ಲ ನಾವು .

*ಸಿ ಜಿ ವೆಂಕಟೇಶ್ವರ*
*ತುಮಕೂರು*
೯೯೦೦೯೨೫೫೨೯

ಸಿಹಿಜೀವಿಯ ಹಾಯ್ಕುಗಳು


*ಸಿಹಿಜೀವಿಯ ಹಾಯ್ಕುಗಳು*
(ಕಾರ್ಗಿಲ್ ವಿಜಯ ದಿನದ ನೆನಪಿಗಾಗಿ ಧೀರ ಯೋಧರಿಗೆ ಅರ್ಪಣೆ)
೮೨
ನಮ್ಮುಸಿರಿಗೆ
ತಮ್ಮುಸಿರನಿತ್ತರು
ಸಿಪಾಯಿಗಳು.
೮೩
ವೀರ ಯೋಧರು
ಜಯವ ತಂದಿತ್ತರು
ಕಾರ್ಗಿಲ್ ದಿನ
೮೪
ಯೋಧರ ಶಕ್ತಿ
ವಿಜಯದ ದಿವಸ
ಮಾತೆಗೆ ಜಯ .
೮೫
ಯೋಧರ ಬಲ
ಪಾಕಿಗಳಿಗೆ ಸೋಲು
ಜಯಭಾರತ .
*ಸಿ ಜಿ ವೆಂಕಟೇಶ್ವರ*

ಮಗಳಿಗೊಂದು ಪತ್ರ


*ಮಗಳಿಗೊಂದು ಪತ್ರ*
ನನ್ನ ಮುದ್ದಿನ ಮಗಳೆ ...
ನಾನಿಲ್ಲಿ‌ ಸುಖಿ. ನಿನ್ನ ಪತ್ರ ತಲುಪಿತು . ನಿನ್ನ ಮನದ ಬೇಗೆ , ಬೇಸರದ ಬಗ್ಗೆ ತಿಳಿಯಿತು. ಮಗಳೆ  , ಒಂದು ಸಣ್ಣ ಸೋಲಿನಿಂದ ನೀನು ಕಂಗೆಡಬೇಡ, ಸೋಲೇ ಗೆಲುವಿನ ಸೋಪಾನ, ಇಂದಿನ ಬಹುತೇಕ ಸಂಶೋಧನೆಗಳು ಒಂದೇ ದಿನ ನಡೆಯಲಿಲ್ಲ , ಹಲವಾರು ಸೋಲುಗಳ ನಂತರ ಪುಟಿದೆದ್ದವರು ಸಾಧಿಸಿದರು. ಸಾಧಕನಾಗಬೇಕೆಂದರೆ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು, ನೀನೂ ಖಂಡಿತವಾಗಿಯೂ ಮುಂದೊಂದು ದಿನ ಸಾಧಕಳಾಗೇ  ಆಗುವೆ  , ಅದಕ್ಕೆ ಎಡೆಬಿಡದೆ ನಿರಂತರ ಪ್ರಯತ್ನ ಜಾರಿಯಲ್ಲಿರಲಿ. ನಿನ್ನಲ್ಲಿ ಗೆಲ್ಲುವ ಛಲವಿದೆ, ಬಲವಿದೆ, ನೀನು ಅಮರ ಆತ್ಮಳು  ,ಅಮೃತಪುತ್ರಳು, ನಿನ್ನ ಕೀಳರಿಮೆಯ ಚಿಪ್ಪಿನಿಂದ ಹೊರಗಡೆ ಬಾ, ಅವರಿವರ ಕಂಡು ನೀನು ಕೀಳು‌,ನಿನ್ನಲಿ ಏನೂ ಸಾಧಿಸುವ ಶಕ್ತಿ ಇಲ್ಲವೆಂದು ಕೊರಗದಿರು, ನಿನ್ನ ಹಿಂದೆ ಮುಂದೆ ಇರುವ ಎಲ್ಲಾ ಶಕ್ತಿಗೆ ಹೋಲಿಸಿದರೆ ಅದು ನಗಣ್ಯ ನಿನ್ನಲಿ ಇನ್ನೂ ಅಧಿಕ ಬಲವಿದೆ ,ನೀ ಮನಸ್ಸು ಮಾಡಿ ,ಒಂದೇ ಚಿತ್ತದಲಿ ಕಾರ್ಯ ಕೈಗೊಂಡರೆ ನಿನಗ್ಯಾರೂ ಸಾಟಿ ಇಲ್ಲ , ನಿನಗೆ ನೀನೇ ಸಮ , ಅದೃಷ್ಟದ ಮೇಲೆ ನಂಬಿಕೆ ಇಡಬೇಡ. ಅದೃಷ್ಟವೆಂದಿಗೂ ಧೈರ್ಯವಂತರ ಕಡೆ ಇರುವುದು. ನಿನ್ನ ಭವಿಷ್ಯ ಸುಂದರವಾಗಿರಬೇಕು ಎಂದರೆ ನೀನು ವರ್ತಮಾನದಲ್ಲಿ ಶ್ರದ್ಧೆಯಿಂದ ಕೆಲಸ ಮಾಡು ,ಕಾಯಕವೇ ಕೈಲಾಸವೆಂಬ ಅಣ್ಣನ ನಿಯಮವನ್ನು ಪಾಲನೆ ಮಾಡು. ಸೋಮಾರಿಯ ತಲೆ ಸೈತಾನನ ನೆಲೆ ಎಂಬಂತೆ ಸುಮ್ಮನೆ ಕುಳಿತು ಏನೇನೋ ನಕಾರಾತ್ಮಕ ಅಂಶಗಳ ಬಗ್ಗೆ ಚಿಂತಿಸಿ ತಲೆಕೆಡಿಸಿಕೊಳ್ಳಬೇಡ, ಸಕಾರಾತ್ಮಕ ಭಾವವಿರುವವರ ಒಡನಾಟವಿರಲಿ ,ಯಾವುದೇ ಕಾರ್ಯವನ್ನು ಯೋಜಿಸಿ ಕೈಗೊಳ್ಳಬೇಕು, ಉತ್ತಮವಾಗಿ ಯೋಜಿಸಿದರೆ ಅರ್ಧ ಕಾರ್ಯ ಮುಗಿದಂತೆ, ಚಿಂತಿಸಿದರೆ ಫಲವಿಲ್ಲ, ಚಿಂತನೆಗೆ ಸೋಲಿಲ್ಲ. ಸನ್ಮಾರ್ಗದಲಿ ನಡೆಯಲು ಅಂಜಿಕೆ ಬೇಕಿಲ್ಲ , ಅನವಶ್ಯಕವಾಗಿ ಕಾಲೆಳೆವ ಜನರ ಗೊಡ್ಡು ಟೀಕೆಗಳಿಗೆ ಸೊಪ್ಪು ಹಾಕಬೇಡ. ಸಕಾರಾತ್ಮಕ ವಿಮರ್ಶೆಗಳನ್ನು ಆಲಿಸದೇ ಬಿಡಬೇಡ. ಜಗದೊಳಿತಿಗೆ ಚಿಂತಿಸಿ, ನಿನ್ನ ಆತ್ಮದ ಮಾತು ಕೇಳಿ, ಆತ್ಮವಿಶ್ವಾಸದಿಂದ. ಮುಂದಡಿ ಇಡು . ಸೋಲು ನಿನ್ನ ಬಳಿ ಸುಳಿಯದು‌. ಆಗ ನೀನು ಇತರರಿಗೆ ಮಾದರಿಯಾಗುವೆ. ನಾನು  ಮಾದರಿ ಸಮಾಜದ ಕನಸು ಕಾಣುತ್ತಿರುವೆ ಮಗಳೆ  ನೀನು ಗೆದ್ದೇ ಗೆಲ್ಲುವೆ ,ತನ್ಮೂಲಕ ನಾನೂ ನನ್ನ ಸಮಾಜ ನನ್ನ ದೇಶವೂ ಗೆಲ್ಲವುದು .ಆ ತಾಕತ್ತು ನನ್ನಲ್ಲಿ, ನಿನ್ನಲಿ ಮತ್ತು ಎಲ್ಲರಲ್ಲಿದೆ. ಬಾ ಉನ್ನತವಾಗಿರುವುದನ್ನು ಯೋಚಿಸೋಣ, ಯೋಜಿಸೋಣ, ಸಾಧಿಸೋಣ . ನಾವೇನೆಂದು ಜಗಕೆ ತೋರಿಸೋಣ .
ಇಂತಿ‌ ನಿನ್ನ ಬಗ್ಗೆ ವಿಶ್ವಾಸವಿರುವ ನಿನ್ನ ಅಪ್ಪ
*ಸಿ ಜಿ ವೆಂಕಟೇಶ್ವರ*
*ತುಮಕೂರು*
ದಿನಾಂಕ : ೨೫:೭:೨೦೨೦

25 ಜುಲೈ 2020

ಸಿಹಿಜೀವಿಯ ಮೂರು ಹನಿಗಳು


ಸಿಹಿಜೀವಿಯ ಹನಿಗಳು


ಸಿಹಿಜೀವಿಯ ‌ಹನಿಗಳು


*ಸುದರ್ಶನಾಸ್ತ್ರ*

ವಾಸು ದೇವ ಕೃಷ್ಣನ
ಭಕ್ತರು ನಾವು
ವೈರಿಗಳ ಮನಗೆಲ್ಲಲು
ನುಡಿಸಲು‌ ಗೊತ್ತು
ಮುರುಳಿಯ ಗಾನ|
ಬಗ್ಗದಿದ್ದರೆ ಪ್ರಯೋಗ
ಮಾಡಲು ಗೊತ್ತು
ಮಹಾ ಅಸ್ತ್ರ ಸುದರ್ಶನ ||



*ಏನೂ ಇಲ್ಲ*

ಕರೋನ  ಮಾಡುವ
ಅವಾಂತರಗಳ ನೋಡುವ
ಸಂಧರ್ಭದಲ್ಲಿ ನಮಗೆ
ಎಲ್ಲರಿಗೂ  ಸ್ಪಷ್ಟವಾಗಿ
ಅರ್ಥವಾಯಿತು ನಮ್ಮ
ಕೈಯಲ್ಲಿ ಏನೂ ಇಲ್ಲ|
ಅದೇ ತರ ಪದೇ ಪದೇ
ಕೈತೊಳೆಯದಿದ್ದರೂ
ಮುಂಜಾಗ್ರತೆ ವಹಿಸದೆ
ನಿರ್ಲಕ್ಷ್ಯ ಮಾಡಿದರೂ
ಏನೂ ಇಲ್ಲ.||


*ಸಿರಿವಂತರು*

ಕೆಲವರಿಗಂತೂ
ಎಲ್ಲಿಲ್ಲದ ಹೆಮ್ಮೆ
ಹೊಗಳಿಕೊಳ್ಳಲು
ತಮ್ಮದೇ ದೈಹಿಕ ರೂಪ|
ಅಂತರಂಗದ
ಸೌಂದರ್ಯದ
ಸಿರಿವಂತರ ಮುಂದೆ
ಅವರು ಬಡವರೆಂದು
ಗೊತ್ತಿರುವುದಿಲ್ಲ ಪಾಪ||

*ಸಿ ಜಿ ವೆಂಕಟೇಶ್ವರ*