14 ಮೇ 2020

ಸನ್ಮಾರ್ಗ ( ಭಾಗ ೩)

ಭಾಗ ೩

ಮುಖ್ಯ ರಸ್ತೆಯಿಂದ ಮಾರಮ್ಮನ ಗುಡಿಯ ಪೌಳಿಯ ಬಲಪಕ್ಕದ ರಸ್ತೆಯಲ್ಲದ ರಸ್ತೆಯಲ್ಲಿ ಮನೆಯಿಂದ ಬರುವ ಚರಂಡಿಯ ನೀರನ್ನು ದಾಟಿ ಮುನ್ನೂರ ನಾನ್ನೂರು ಹೆಜ್ಜೆ ನಡೆದು ಎಡಕಯ ತಿರುಗಿದರೆ ಅದೇ ದೊಡ್ಡಪ್ಪಗಳ ಮನೆ .
ದಕ್ಷಿಣಾಭಿಮುಖವಾಗಿ ರಂಗಪ್ಪನ ಗುಡಿಯ ಪೌಳಿಗೆ ಹೊಂದಿಕೊಂಡಿರುವ ಮನೆ ಬಾಗಿಲು ದಾಟಿ ಒಳನಡೆದರೆ ಮೊದಲು ನಮ್ಮ ಸ್ವಾಗತ ಮಾಡುವುದು ಮುಸುರೆ ಬಾನಿ( ಕಲ್ಲಿನಿಂದ ಮಾಡಿದ ಪ್ರಾಣಿಗಳಿಗೆ ನೀರ ಕುಡಿಯಲು ಮಾಡಿದ್ದು)  ಅಲ್ಲದೆ ದನಗಳ ಕಟ್ಟಲು ಜಾಗ ಎಡಕ್ಕೆ ತಿರುಗಿದರೆ ಅಸಲಿ ಮನೆ ಆರಂಭ , ಕಟ್ಟಿಗೆ ಮಾಡಿನಿಂದ ಮಾಡಿದ ಹಳೆಯ ಕಾಲದ ಜಂತೆಮನೆ  ಎಡಕ್ಕೆ ಅಡುಗೆ ಕೋಣೆ ಬಲಕ್ಕೆ ವರಾಂಡ ,ಇನ್ನೂ. ಒಳಕ್ಕೆ ಹೋದರೆ ವಿಶಾಲವಾದ ಕೊಣೆ ಗೋಡೆಗೆ ದೇವರ ಮತ್ತು ಮಾನವರ ಚಿತ್ರಪಟಗಳನ್ನು ನೇತು ಹಾಕಲಾಗಿದೆ. "ಮದುವೆಯಾ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು" ಎಂದು ಫಿಲಿಪ್ಸ್ ರೇಡಿಯೋದಲ್ಲಿ ಹಾಡು ಬರುತ್ತಿತ್ತು ಪಕ್ಕದ ಮನೆಗೆ ಕೇಳಲೆಂದೇ ಸೌಂಡ್ ಜಾಸ್ತಿಯೇ ಇತ್ತು ಅದೇ ಕೋಣೆಯಲ್ಲಿ ಹತ್ತಿ ,ಕಡಲೇಕಾಯಿ,ಸೂರ್ಯಕಾಂತಿ, ಚೀಲಗಳನ್ನು ತುಂಬಿದ್ದರಿಂದ ಗೋಣಿ ಚೀಲ ಮಣ್ಣಿನ, ಮತ್ತು ಹತ್ತಿಯ ಅಷ್ಟೇನೂ ಕೆಟ್ಟದ್ದು ಅಲ್ಲದ ಸುವಾಸನೆಯೂ ಅಲ್ಲದ ವಾಸನೆ ಮೂಗಿಗೆ ಅಡರುತ್ತಿತ್ತು .ಆ ಕೋಣೆಯ ಬಲಕ್ಕೆ ತಿರುಗಿದರೆ ಅದೇ ದೇವರ ಮನೆ ,ದೇವರ ಮನೆಯೆಂದರೆ ಮೂರುಇಂಟು ನಾಕು ಅಡಿ ಚಿಕ್ಕದಲ್ಲ ಬರೊಬ್ಬರಿ ಎಂಟು ಇಂಟು ಹತ್ತು ಅಡಿ ಉದ್ದದ ದೇವರ ಮನೆ ಮನೆಯ ವಾಸ್ತುಶಿಲ್ಪಿ ಮತ್ತು ಮನೆ ಕಟ್ಟಿಸಿದವರ ದೈವಭಕ್ತಿಗೆ ಆ ದೇವರ ಕೋಣೆಯೇ ಸಾಕ್ಷಿ
ಅದೇ ಕೋಣೆಯಲ್ಲಿ ಪೂರ್ವಾಭಿಮುಖವಾಗಿ ಇರುವ ಗೋಡೆಯಲ್ಲಿ ಒಂದು ಗೂಡು ಗೂಡಲ್ಲಿ ದೀಪ ,ಪೂಜೆಯ ಸಾಮನುಗಳು ಮತ್ತು ಶ್ರೀ ದೇವಿ ಮಹಾತ್ಮೆಯ ಪುಸ್ತಕಗಳು ಕಣ್ಣಿಗೆ ಬೀಳುತ್ತವೆ.

ಮನೆಯ ಮುಂಬಾಗದ ಅಂಗಳ ಬಲಗಡೆ ಜಗುಲಿ ,ಇನ್ನೂ ಮುಂದೆ ಎತ್ತು ಎಮ್ಮೆ ಕಟ್ಟಲು ಗ್ವಾಂದಿಗೆ ( ಪ್ರಾಣಿಗಳ ಮುಂದೆ ಹುಲ್ಲು ಹಾಕುವ ಸ್ಥಳ) ಇದ್ದವು.ಮನೆಯ ಬಾಗಿಲ ನೇರಕ್ಕೆ ಒಂದು ಜಾಲಿಯ ಮರ ಬೇಕಂತಲೇ ಕಡಿಯದೆ ಬಿಟ್ಟಿದ್ದರು ಕಾರಣ ಜಾನುವಾರುಗಳಿಗೆ ನೆರಳಿರಲಿ ಎಂದು.

ಏ ಗುರುಸಿದ್ದ ಇನ್ನೂ ಸಗಣಿ ತಗದಿಲ್ಲ ದನ ಹೊಡ್ಕಂಡು ಮೇಸಾಕ ಯಾವಾಗಿನ್ನ ನೀನು ಹೋಗಾದು? ಎಂದು  ಮುಕುಂದಯ್ಯ ಏರುಧ್ವನಿಯಲ್ಲಿ ಗದರಿದ್ದನ್ನು ಕಂಡು ಅಣ್ಣ ಹೊರಟೆ ಎಂದು ದನಗಳ ಕಣ್ಣುಗಳನ್ನು (ಹಗ್ಗ) ಬಿಚ್ಚಿ  ದಕ್ಷಿಣಾಭಿಮುಖವಾಗಿ ಹತ್ತಕ್ಕೂ ಹೆಚ್ಚಿನ ದನಗಳನ್ನು ಹೊಡೆದುಕೊಂಡು ಹೋರಟನು ಧೂಳು ಅವನನ್ನು ಹಿಂಬಾಲಿಸಿತು.

 ಮಾದರ  ಗುರುಸಿದ್ದನ ತಂದೆ ಮುಕುಂದಯ್ಯನ  ಹತ್ತಿರ ಐದು ವರ್ಷಗಳ ಹಿಂದೆ  ಹದಿನೈದು ಸಾವಿರ ಸಾಲ ಮಾಡಿ  ಮನೆಯಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ವಯಸ್ಸಾದ ಹೆಂಡತಿಯನ್ನು ಸಾಕಲು ಸ್ವಲ್ಪ ಭಾಗ ಕೊಟ್ಟು ಪ್ರತಿದಿನ  ಹೆಂಡದ ಅಂಗಡಿಗೆ ಪೀಸು ಕಟ್ಟುತ್ತಿದ್ದ .ಕಳೆದವರ್ಷ ಕರುಳು ತೂತು ಬಿದ್ದು ಮುದಿ ಹೆಂಡತಿ ಇನ್ನೂ ವಯಸ್ಸಿಗೆ ಬರದ ಮಕ್ಕಳ ಮೇಲೆ ಸಾಲ ಹೊರೆ ಹೊರಿಸಿ ಶಿವನ ಪಾದ ಸೇರಿದ . ಒಂದು ವರ್ಷದ ಹಿಂದೆ ಮುಕುಂದಯ್ಯ ಏನಮ್ಮ ಸಿದ್ದಮ್ಮ ನಿನ್ನ ಗಂಡ ನಮ್ಮತ್ರ ಸಾಲ ತಕಂಡಿರೋದು ಗೊತ್ತಾಲ್ಲ ಎಲ್ಲಿ ಕೊಡು ಅಂದು ಬಿಟ್ಟರು ." ನಮ್ಮತ್ರ ದುಡ್ಡು ಎಲ್ಲೈತೆ ಸಾಮಿ ನಿಮಗೆ ಗೊತ್ತು" ಎಂದು ಸಿದ್ದಮ್ಮ ಮಾತು ಮುಗಿಸಿರಲಿಲ್ಲ ಅಲ್ಲಮ್ಮ ಇದೊಳ್ಳೆ ಕಥೆ ಆತಲ್ಲ ನಾವೇನು ಕಲ್ಲಳ್ಳು ಕೊಟ್ಟಿಲ್ಲ ಬಡ್ಡಿ ಎನೂ ಬ್ಯಾಡ ಅಸಲು ಕೊಡ್ರಿ ಸಾಕು " ಅಂದರು ಮುಕುಂದಯ್ಯ. ನಮ್ಮತ್ರ ಹತ್ತು ಪೈಸಾನೂ ಇಲ್ಲ ಸಾಮಿ ಇಗ ಇವನು ನನ್ನ ಎರಡನೆ ಮಗ ಗುರುಸಿದ್ದ ಇವನ್ನ ನಿಮ್ ಮನ್ಯಾಗೆ ಸಂಬಳ ಇಕ್ಕಳಿ ವರ್ಸಕ್ಕೆ ಮೂರು ಸಾವಿರ ಮುರ್ಕಳಿ ತೀರಾವರ್ಗೂ ಇವನು ನಿಮ್ಮನೇಲೆ ಇರ್ಲಿ ಅಂದಳು ಅಜ್ಜಿ , ಮುಕುಂದಯ್ಯನಿಗೆ ಅದೇ ಸರಿ ಎನಿಸಿ ಮನೆಯ ದನಗಳನ್ನು ನೋಡಿಕೊಳ್ಳಲು ಇವನಿದ್ದರೆ ಸರಿ ಎಂದು ಆತು ನಾಳೆ ಬಾರೊ ಗುರುಸಿದ್ದ ಅಂದು ಹೊರಟರು ಮುಕುಂದಯ್ಯ.

ದೇವ್ರೇ ಈ ಕರ್ಮ ನೋಡೋಕೆ ನನ್ನ ಯಾಕೆ ಬಿಟ್ಟೆ ,ಅವರೇನೋ ಸಾಲ ಮಾಡಿ ಕುಡ್ದು ,ಕುಡ್ದು ಇಂಗೆ ನಡಾ ನೀರಾಗೆ ನಮ್ಮ ಬಿಟ್ಟು ಹೋದರು ಈಗ ಇವರು ಮಾಡಿದ ಸಾಲ ತೀರಸಲಾ? ಜೀವನ ಹ್ಯಾಂಗ ಮಾಡ್ಲಿ? ಗುರುಸಿದ್ದ ಇನ್ನೂ ಕೂಸು ರೆಟ್ಟೇಲಿ ಸಕುತಿ ಇಲ್ಲ , ದೊಡ್ಡಪ್ಪಗಳ ಮನೇಲಿ   ಎಂಗೆ ಕೆಲಸ ಮಾಡ್ತಾನೋ? ಅವ್ರು ಹೆಂಗೆ ನೋಡ್ಕೋತಾರೋ? ಯಾಕೆ ದೇವ್ರೇ ನಮಗೆ ಯಾಕೆ ಇಂತಹ ಕಷ್ಟ ? ಹೀಗೆ  ಒಬ್ಬಳೆ ಯೋಚಿಸುತ್ತಾ ಕುಳಿತಾಗ ಅಸ್ಥಿಪಂಜರದ ಮೇಲಿರುವ ಸುಕ್ಕುಗಟ್ಟಿದ ತೊಗಲಿನ ಮೂಲಕ ಕಣ್ಣಿನಿಂದ ಹನಿಗಳು ಜಿನುಗಲಾರಂಭಿಸಿದವು."ಅಮ್ಮೋ ಉಮ್ಮಕ್ಕೆ ಇಕ್ಕು ಬಾ " ಎಂದು ದೊಡ್ಡ ಮಗ ಪೂಜಾರಿ ಕರೆದಾಗ ಎರಡೂ ಕೈಗಳನ್ನು ನೆಲಕ್ಕೂರಿ ನಿಧಾನವಾಗಿ ಎದ್ದು ಅಡಿಗೆ ಮನೆಗೆ ಹೋದಳು ರಂಗಮ್ಮ. ಅವರ ಪಕ್ಕದ ಮನೆಯ ಮಾದೇವ ಹೆಂಡ ಕುಡಿದು ಬಂದು ಹೆಂಡತಿ ಮಕ್ಕಳನ್ನು ನಡೆಯುತ್ತಾ ಕೆಟ್ಟ ಪದಗಳಲ್ಲಿ ಬೈಯುತ್ತಾ ಅರಚಾಡುವುದು ಕಂಡರೂ ಇದೇ ಮಾಮೂಲು ಎಂದು ಮಗನಿಗೆ ಮುದ್ದೆ ಇಕ್ಕಿ ತಾನೂ ತಿನ್ನುವ ಶಾಸ್ತ್ರ ಮಾಡಿದ ಹರಿದ ದುಪ್ಪಡಿ ಹೊದ್ದು ಮೂಲೆಯಲ್ಲಿ ಮಲಗಿದಳು " ಬುಡ್ಡಿ ಕೆಡಸಪ್ಪ ಸೀಮೆಣ್ಣೆ ಮುಗುದೈತೆ ನಾಳೆ ಹೊಯ್ಸಕೊಂಡು ಬಾ ಇಲ್ಲ ಅಂದರೆ ಕತ್ತಲಾಗಿರಬೇಕು ಮಕ್ಕ " ಅಂದು ಮಲಗುವ ಶಾಸ್ತ್ರ ಮಾಡದಳು ನಿದ್ರೆ ಬರಬೇಕಲ್ಲ. ನಿದ್ರೆ ಇಲ್ಲದ ರಾತ್ರಿ ಕಳೆಯುವುದು ರಂಗಜ್ಜಿಗೆ ರೂಢಿಯಾಗಿತ್ತು.


ಶಾಲೆಯಲ್ಲಿ ತಾನಾಯಿತು ತನ್ನ ಓದಾಯಿತು ಎಂದು ಓದಿನಲ್ಲಿ ಮಗ್ನನಾಗಿದ್ದ ಸತೀಶ್ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಇಡೀ ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ಅಂಕ. ಪಡೆದು ಮಹೇಶ ನನ್ನು ಹಿಂದಿಕ್ಕಿದ್ದ ಅದಕ್ಕಿಂತ ಮೊದಲು ಎಂಟನೇ ತರಗತಿಯಿಂದ ಮಹೇಶ ಮೊದಲ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ ಉತ್ತರ ಕರ್ನಾಟಕದಿಂದ ಈ ಊರಿನ ಶಾಲೆಗೆ ವರ್ಗಾವಣೆ ಆಗಿ ಬಂದಿದ್ದ ಇಂಗ್ಲೀಷ್ ಮೇಷ್ಟ್ರು ಶಿವಪ್ಪ ಮಲ್ಲಪ್ಪ ಸಾರಂಗಿ ಮಕ್ಕಳು ಅವರನ್ನು ಶಾರ್ಟ್ ಆಗಿ ಎಸ್ ಎಮ್ ಎಸ್ ಎಂದು ಕರೆಯುತ್ತಿದ್ದರು ಮಕ್ಕಳೇ ಎಲ್ಲ್ರೂ  ಸತೀಶನಿಗೆ ಚಪ್ಪಾಳಿ ಹೊಡೀರಿ ಎಂದಾಗ ಎಲ್ಲರೂ ಚಪ್ಪಾಳೆ ಹೊಡೆಯೋದು ನೋಡಿ " ಏ ಮಂಗ್ಯಾನ ಮಕ್ಕಳ ಹಂಗೇನ್ರಲಾ ಚಪ್ಪಾಳಿ ಹೊಡೆಯೋದು ಅವ್ನನವುನ್ ನಿಮಗೊಂದು ಶಿಸ್ತ್ ಇಲ್ಲ ನೋಡ್ರಿ .ಒಂಟೂತ್ರೀ  ಚಪ್ಪಾಳಿ ಹೊಡಿರಲೇ ಅಂದಾಗ ಎಸ್ಸಮ್ಮೆಸ್ ಮಾಸ್ಟರ್ ಭಾಷೆ ಕೇಳಿ ಮಕ್ಕಳಿಗೆ ನಗು ತಡೆಯಲಾಗದೇ ನಗುತ್ತಲೇ ಒನ್ಟೂತ್ತೀ ಚಪ್ಪಾಳೆ ಹೊಡೆದರು ಚಪ್ಪಾಳೆ ಹೊಡೆಯುವಾಗ  ಮುಂದಿನ ಸಾಲಿನಲ್ಲಿ ಕುಳಿತಿದ್ದ  ಸತೀಶ್ ನಿಧಾನವಾಗಿ ಹಿಂತಿರುಗಿ ನೋಡಿದ ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟುತ್ತಿದ್ದರೆ ಮಹೇಶ್ ಮಾತ್ರ ವಿಚಿತ್ರ ಮುಖಭಾವದಿಂದ ತಟ್ಟಲೋ ಬೇಡವೋ ಎಂಬಂತೆ ತಟ್ಟುತ್ತಿದ್ದ.ಎಲ್ಲರೂ ಚಪ್ಪಾಳೆ ತಟ್ಟುವುದು ನಿಲ್ಲಿಸಿದರೂ ಅವಳು ಮಾತ್ರ ತಟ್ಟುತ್ತಲೇ ಇದ್ದಳು .ನಂತರ ಅರಿವಾಗಿ
ನಾಚಿಕೆಯಿಂದ ತಲೆತಗ್ಗಿಸಿದಳು ಸುಜಾತ
ಅವಳನ್ನು ನೋಡಿದ ಸತೀಶನಿಗೆ ಇಂದೇಕೋ ಅವಳು ಬಹಳ ಸುಂದರವಾಗಿ  ಕಾಣುತಿಹಳಲ್ಲ ದಿನಕ್ಕೊಂದು ಬಾರಿ ಬೇಕು ಅನ್ನದಿದ್ದರೂ ಸುಮ್ಮನೆ ನೋಡುವಾಗ ಸುಜಾತ ಈಗೆ ಕಂಡಿರಲಿಲ್ಲ ಅವಳು ಇಂದು ಮಹಾಚೆಲುವೆಯಂತೆ ಕಾಣುತಿಹಳಲ್ಲ ವಾವ್ ಎಂದು ಇನ್ನೂ ಎನೋ ಲಹರಿಯಲಿ ಮುಳುಗಿದ್ದ ಸತೀಶ " ನೋಡ್ಪ ಸತೀಶ ಇಂಗ ಓದು ನಿಂಗೆ ಒಳ್ಳೆ ಭವಿಷ್ಯ ಐತೆ " ಎಂದು ಎಸ್ಸೆಮ್ಮೆಸ್ ಮೇಷ್ಟು ಅಂದಾಗ ಎಚ್ಚರಗೊಂಡ ಸತೀಶ ಆತು ಸರ್ ಎಂದು ತೊದಲುತ್ತಲೆ ಹೇಳಿದ ಸತೀಶ.

ನೇಪಾಳ ಪ್ರವಾಸ ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮೂರು ವರ್ಷಗಳ ಹಿಂದೆ


ನೇಪಾಳ ಪ್ರವಾಸ ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮೂರು ವರ್ಷಗಳ ಹಿಂದೆ

13 ಮೇ 2020

ದ್ವಾಪರ ಕಾದಂಬರಿ ವಿಮರ್ಶೆ

ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ

ದ್ವಾಪರ

 ಕಾದಂಬರಿ

ಪುಸ್ತಕ ವಿಮರ್ಶೆ

ಕಂನಾಡಿಗ ನಾರಾಯಣ ರವರು ಬರೆದಿರುವ ದ್ವಾಪರ  ಪುಸ್ತಕ ಓದುತ್ತಾ ಹೋದಂತೆಲ್ಲಾ ನಮ್ಮಲ್ಲಿ ವೈಚಾರಿಕ ಚಿಂತನೆ ಜಾಗೃತವಾಗುತ್ತಾ ಹೋಗುತ್ತದೆ.
ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ  ಎಂಬ ತಲೆ ಬರಹ ಓದುತ್ತಲೆ ಓದುಗರಿಗೆ ಕುತೂಹಲ ಮೂಡಿರುತ್ತದೆ.ಕಾದಂಬರಿಯ ಒಳಪುಟಗಳಲ್ಲಿ ಕಣ್ಣಾಡಿಸಿದಂತೆ ಓದುಗರಿಗೆ ನಿರಾಶೆ ಎನಿಸದು.

ರಾಮಾಯಣ, ಮಹಾಭಾರತ ,ಭಗವದ್ಗೀತೆ  ಕೃತಿಗಳು ಭಾರತದ ಶ್ರೇಷ್ಠ ಮಾಹನ್ ಗ್ರಂಥಗಳು ಎಂಬುದರಲ್ಲಿ  ಸಂಶಯವಿಲ್ಲ ನಾವೆಲ್ಲರೂ ಈ ಗ್ರಂಥಗಳನ್ನು ದೈವಿಕ ಹಿನ್ನೆಲೆಯಲ್ಲಿ, ಪವಾಡಗಳ ಹಿನ್ನೆಲೆಯಲ್ಲಿ, ಧಾರ್ಮಿಕ, ಹಿನ್ನೆಲೆಯಲ್ಲಿ ಐತಿಹಾಸಿಕವಾದ ಹಿನ್ನೆಲೆಯಲ್ಲಿ ವಿವಿಧ ಲೇಖಕರು ,ಕವಿಗಳು ಬರೆದ ಮಹಾಭಾರತಗಳನ್ನು ಓದಿದ್ದೇವೆ ,ಪ್ರತಿ ಬಾರಿ ಮಹಾಭಾರತವನ್ನು ಓದುವಾಗ ರಸಸ್ವಾಧನೆ ,ಭಕ್ತಿ ರಸವನ್ನು ಸವಿದಿದ್ದೇವೆ .

ಪ್ರಸ್ತುತ ಕಾದಂಬರಿಯಲ್ಲಿ ಕಾದಂಬರಿಕಾರರು ಚಿತ್ತಿತವಾಗಿರುವ  ಮಾಹಭಾರತವನ್ನು  ನಾಸ್ತಿಕರು ಕೂಡ ಓದಿ ಮೆಚ್ಚುಗೆ ವ್ಯಕ್ತಪಡಿಸಿವರು. ಅಂದರೆ ಆಸ್ತಿಕರು ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗದು .

ಈಗಾಗಲೇ ಕಾಂಡ ಕಾದಂಬರಿಯ ಮೂಲಕ ರಾಮಾಯಣದ ಕೆಲವು ಮಿತ್ ಗಳನ್ನು ಒಡೆಯುವ ಪ್ರಯತ್ನ ಮಾಡಿದ್ದ ಕಂ ನಾಡಿಗ ನಾರಾಯಣ ರವರು ಅದರ ಮುಂದುವರೆದ ಭಾಗ ಎಂಬಂತೆ ಮಹಾಭಾರತದ ಕಾದಂಬರಿ ದ್ವಾಪರ ನಮ್ಮ ಕೈಗಿತ್ತಿದ್ದಾರೆ. ಇಲ್ಲಿ ಕೃಷ್ಣ ಅತೀಂದ್ರಿಯ ಶಕ್ತಿ ಇರುವ ದೇವರಲ್ಲ ಸಮಾನ್ಯವಾದ ಮಾನವ, ಅವನು ಮಾಡಿರುವ ಚಮತ್ಕಾರ, ಸಾಧನೆ ,ಅತೀಂದ್ರಿಯ ಶಕ್ತಿ,, ಇವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಕಾದಂಬರಿಕಾರರು ಮೊದಲ ಪುಟದಲ್ಲಿ ಹೇಳಿದಂತೆ " ಇಲ್ಲಿ ಯಾವುದು ಹೊಸತಲ್ಲ,ಯಾವುದು ಹಳೆಯದಲ್ಲ, ಇಲ್ಲಿ ಯಾವುದೂ ಆರಂಭವಲ್ಲ, ಯಾವುದೂ ಅಂತ್ಯವೂ ಅಲ್ಲ, ಇಲ್ಲಿ ಯಾವದೂ ಶಾಶ್ವತವಲ್ಲ, ಅಶಾಶ್ವತವೂ ಅಲ್ಲ,, ಆದರೆ ನಿರಂತರ ಬದಲಾವಣೆಯೊಂದೆ ಶಾಶ್ವತ "
ಎನ್ನುವ ಮಾತು ಕಾದಂಬರಿ ಓದಿದಂತೆ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಕೆಲವು ಲೇಖಕರು ಕೆಲವರನ್ನು ಮಾತ್ರ ವಿಲನ್ ಆಗಿ ಚಿತ್ರಿಸಿದ್ದಾರೆ. ಇವರು ಆಗಲ್ಲ ಸುಯೋಧನ ಸಹ ಕೆಲ ಗುಣಗಳಲ್ಲಿ ಇತರರಿಗಿಂತ ಮೇಲು ಎಂಬುದನ್ನು ಚೆನ್ನಾಗಿ ಚಿತ್ರಿಸಿದ್ದಾರೆ.

ಮಹಾಭಾರತದಲ್ಲಿ ಕಥೆ ಹೇಳುವ ಬದಲು
ಪಾತ್ರಗಳೆ ಸ್ವಗತದಲಿ ಮಾತನಾಡುವ ತಂತ್ರದ ಮೂಲಕ ಕಥೆಯು ನಿರಂತರವಾಗಿ ಮುಂದುವರೆಯುವ ಕೌಶಲ್ಯ ಗಮನಸೆಳೆಯಿತು
ಗರ್ಭ, ಪ್ರಜ್ಞೆ,  ಖಾಂಡವ, ದಾಳ ,ಅಕ್ಷಯ, ಅಜ್ಞಾತ, ಸಂಧಾನ, ಜಯ, ಎಂಬ ವಿಭಾಗದಲ್ಲಿ ಕಾದಂಬರಿಯು ಮುಂದುವರೆಯುವುದು. ವ್ಯಾಸರಿಂದ ಆರಂಭವಾಗುವ ಕಾದಂಬರಿ ಸತ್ಯವತಿ, ಕುಂತಿ,ಗಾಂಧಾರಿ, ಭೀಷ್ಮ, ಪಾಂಡವರು ಕೌರವರು, ಕೃಷ್ಣ, ದ್ರೌಪದಿ ಇನ್ನೂ ಮುಂತಾದ ಎಲ್ಲಾ ಪಾತ್ರಗಳು ತಮ್ಮ ಅಂತರಾವಲೋಕನ ಮಾಡಿಕೊಂಡಂತೆ ನಮಗೆ ಭಾಸವಾಗುತ್ತದೆ.
ಒಟ್ಟಿನಲ್ಲಿ ಕಾದಂಬರಿಯನ್ನು ಓದಿ ಮುಗಿಸಿದಾಗ ಮಹಾಭಾರತದ ಬಗ್ಗೆ ಅಲ್ಲಿಯ ಪಾತ್ರಗಳ ಬಗ್ಗೆ ನಮ್ಮಲ್ಲಿ ವಿಶ್ಲೇಷಣೆ ಆರಂಭವಾಗುವುದರಲ್ಲಿ ಸಂಶಯವಿಲ್ಲ.

ಕಾದಂಬರಿ: ದ್ವಾಪರ
ಲೇಖಕರು: ಕಂ ನಾಡಿಗ ನಾರಾಯಣ
ಪ್ರಕಾಶನ: ನವಕರ್ನಾಟಕ
ಬೆಲೆ: ೨೯೦

ಸಿ ಜಿ ವೆಂಕಟೇಶ್ವರ
ತುಮಕೂರು


12 ಮೇ 2020

ನಮನ ( ಇಂದು ವಿಶ್ವ ದಾದಿಯರ ದಿನ)


*ನಮನ*

(ಇಂದು ವಿಶ್ವ ಶುಶ್ರೂಷಾಧಿಕಾರಿ (nurses) ದಿನ)

ರೋಗಿಗಳ ಪಾಲಿಗೆಂದೂ  ಆಪ್ದ್ಭಾಂಧವರು
ಸೇವೆಗೆ ಮತ್ತೊಂದು ಹೆಸರೇ  ಶುಶ್ರೂಷಕರು
ಆಪ್ತವಾಗಿ ಆರೋಗ್ಯ ಕಾಪಾಡುವ ದಾದಿಯರು
ನಿಮಗಿದೋ ನಮ್ಮಗಳ ನಮನ ಸಾವಿರಾರು

ವಿಶ್ವ ಶುಶ್ರೂಷಾಧಿಕಾರಿ ದಿನದ ಶುಭಾಶಯಗಳು

*ಸಿ ಜಿ ವೆಂಕಟೇಶ್ವರ*

11 ಮೇ 2020

ಸನ್ಮಾರ್ಗ ಭಾಗ೨

ಹೆದ್ದಾರಿ ಭಾಗ ,೨

ರಸ್ತೆಯ ಪಶ್ಚಿಮಾಭಿಮುಖವಾಗಿ ಇರುವ ಕಟ್ಟಡದ ಮೇಲೆ ಸರ್ಕಾರಿ ಪದವಿಪೂರ್ವ ಕಾಲೇಜು ಯರಬಳ್ಳಿ  ಎಂಬ ದೊಡ್ಡದಾದ ಬೋರ್ಡ್ ರಸ್ತೆಗೆ  ಕಾಣುತ್ತಿತ್ತು.ರಸ್ತೆಯಲ್ಲಿ  ವಾಹನಗಳಲ್ಲಿ ಓಡಾಡುವ ಜನ ಪರವಾಗಿಲ್ಲ ಈ ಊರಲ್ಲು ಜೂನಿಯರ್ ಕಾಲೇಜಿದೆ ಎಂದು ಆಶ್ಚರ್ಯಕರ ಮತ್ತು ಮೆಚ್ಚುಗೆ ಮಾತನಾಡಿಕೊಳ್ಳುತ್ತಿದ್ದರು.

ಕಾಂಪೌಂಡ್ ಇಲ್ಲದ ವಿಶಾಲವಾದ ಶಾಲಾ ಆವರಣ ಪ್ರವೇಶಿಸಿದ ತರ್ಲೇ ಹುಡುಗರು ಒಬ್ಬರನ್ನು ಕಂಡೊಡನೆ  ಇದ್ದಕ್ಕಿದ್ದಂತೆ ನಿಶ್ಯಬ್ದವಾಗಿ  ಸಾಲಾಗಿ ಬಂದು ವೃತ್ತಾಕಾರವಾಗಿ ಕುಳಿತು ಶಾಲೆಯಲ್ಲಿ ನಿನ್ನೆ ಮಾತ್ರ ತೆಗೆದಿದ್ದ ಪುಸ್ತಕಗಳನ್ನು ಮನಸ್ಸಿಲ್ಲದಿದ್ರೂ ಅವರ ಭಯಕ್ಕೆ ಮನದಲ್ಲೇ ಶಪಿಸುತ್ತಾ , ಗೊಣಗುತ್ತಾ  ತೆರೆದು ಓದುವ ನಾಟಕ ಶುರುಮಾಡಿದರು
ಯಾವನೆಲೇ ಅದು ಗೊನ ಗೊನ ಶಬ್ದ. ಮುಚ್ಕೊಂಡು ಹೋದ್ರೋ ಓದ್ರೋ ಅಂದಿತು ಕರ್ಕಶ ಸದ್ದು "ಮುಚ್ಚಿದರೆ ಓದಕಾಗಲ್ಲ ಸರ್"  ಚಿದಾನಂದ್ ನ ಗುಂಪು ಸಣ್ಣಗೆ ನಕ್ಕಿತು. ಅವರಿಗದು ಕೇಳಿಸಲಿಲ್ಲ ಹುಡುಗರು ಬಚಾವ್.

 ಶಾಲೆಯ ಶಿಸ್ತು ಕಾಪಾಡುವ ಗುತ್ತಿಗೆ ಪಡೆದವರಂತೆ  ಆಗಾಗ ಕಿರುಚುವ, ತರಲೆಗಳ ಪಾಲಿನ ಸಿಂಹ ಸ್ವಪ್ನ , ಅನವಶ್ಯಕವಾಗಿ ಶಾಲೆಯಿಂದ ಮಕ್ಕಳು ಕಾಲಿಟ್ಟರೆ  ಪೀಪೀ ಊದುವ ಪೀಟಿ ಮಾಸ್ಟರ್‌ ಕಾಡಪ್ಪ  ಮಾತಷ್ಟೇ ಒರಟು ಮಕ್ಕಳ ಬಗ್ಗೆ ಕಾಳಜಿ ಅತಿ ಮತ್ತು ಒಳ್ಳೆಯ ಹೃದಯ ವ್ಯಕ್ತಿ ಮೊನ್ನೆ ರೂಪ ತಲೆ ಸುತ್ತಿ ಪ್ರಜ್ಞೆ ತಪ್ಪಿ ಬಿದ್ದಾಗ ಎಲ್ಲಾ ‌ಶಿಕ್ಷಕರು ಬರೀ ನೋಡಿ ಕನಿಕರ ತೋರುತ್ತಿದ್ದಾಗ   ಕಾಡಪ್ಪ ಸರ್ ತಮ್ಮ ಮಗಳಂತೆ  ‌ಶಾಲೆಯ ಪಕ್ಕವೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು ಆಗಿನಿಂದ ಮಕ್ಕಳಿಗೆ ಕಾಡಪ್ಪ ಮೇಷ್ಟ್ರು ಬಗ್ಗೆ ಸ್ವಲ್ಪ ಗೌರವ ಹೆಚ್ಚಾಯಿತು ಆದರೆ ಅವರು  ಕಿರುಚುವ ಮತ್ತು ಹೊಡೆಯುವ ಗುಣ ನೋಡಿ ಚಿದಾನಂದ್ "ಯಾರೋ ಈಯಪ್ಪನಿಗೆ ಸರಿಯಾದ ಹೆಸರು ಇಟ್ಟವ್ರೆ ಇವರು ಕಾಡಪ್ಪನೂ ಹೌದು.ಕಾಟಪ್ಪನೂ ಹೌದು " ಏಯ್ ಸುಮ್ನೆ ಇರೋ ಈ ಕಡೆ ಬತ್ತಾರೆ ಸತೀಶ್   ಗಾಬರಿಯಿಂದ ಅಂದಾಗ ಎಲ್ಲರೂ ನಿಶ್ಯಬ್ದ. ಒಮ್ಮೆ ಪೊಲೀಸರಂತೆ ಎಲ್ಲರನ್ನೂ ನೋಡಿ ಮುಂದೆ ಹೋದರು ಕಾಡಪ್ಪ ಮೇಷ್ಟು.
ಶಾಲೆಯ ಬೆಲ್ ಕೇಳಿ ಮಕ್ಕಳು ಬೆಳಗಿನ ಪ್ರೆಯರ್ಗೆ ಸಾಲಾಗಿ   ಹೊರಟರು.
 ಹತ್ತನೆಯ ತರಗತಿಗೆ ಗಣಿತ ವಿಷಯದ
ಮೊದಲ ಅವಧಿ ಮುಗಿದು‌ ಎರಡು‌ ನಿಮಿಷವಾಗಿರಲಿಲ್ಲ  ತರಗತಿಯಲ್ಲಿ ಮಕ್ಕಳ ಗಲಾಟೆ ತಾರಕಕ್ಕೇರಿ ರಸ್ತೆ ದಾಟಿ ಊರ ತಲುಪುವುದರಲ್ಲಿತ್ತು.ಇದ್ದಕ್ಕಿದ್ದಂತೆ ತರಗತಿ ಸ್ತಬ್ಧ ,ಕಿಟಕಿಯ ಬಳಿ ಯಾರೊ ಬಂದು ನಿಂತಂತಾಯಿತು.ಐವತ್ತಕ್ಕೂ ಹೆಚ್ಚಿನ ವಯಸ್ಸಿನ ಕನ್ನಡಕದಾರಿ ,ಮೀಸೆಇಲ್ಲ ,ಬಾಯ್ದೆಗೆದರೆ ಎರಡು ಹಲ್ಲು ಉದುರಿರುವುದು  ಕಾಣಬಹುದು, ಅವರ ಕಂಡರೆ ಇಡೀ ಶಾಲೆಯಲ್ಲಿ ಮತ್ತು ಮಕ್ಕಳಿಗೆ ಏನೋ  ಒಂದು ರೀತಿಯ ಭಯಮಿಶ್ರಿತ ಗೌರವ ಅವರೆ ಬಿ ಎಸ್ ಬಿ‌ ಪೂರ್ಣ ಹೆಸರು ಬಷೀರ್ ಆದರೂ ಮಕ್ಕಳು ಬಿ‌ಎಸ್ ಬಿ ಎಂದೆ ಕರೆಯುತ್ತಿದ್ದರು. ತರಗತಿಯಲ್ಲಿ ಸೊಗಸಾದ ವಿಜ್ಞಾನ ಶಿಕ್ಷಕರು ಕಾಡಪ್ಪ ಮೇಷ್ಟ್ರು ತರಹ ಕಿರಚಾಟ, ಅರಚಾಟ, ಹೊಡೆಯುವುದು ಮಾಡದಿದ್ದರೂ ಅವರನ್ನು ಕಂಡರೆ ಮಕ್ಕಳಿಗೆ ಗೌರವ ಅವರ ಅತೀ ದೊಡ್ಡ ಬೈಗುಳ ಎಂದರೆ " ಎಂಗುಟ್ಟಿದ್ರೋ ನೀವು".

ತರಗತಿಯ ಪ್ರವೇಶಿಸಿ ಬಿಎಸ್ಬಿ ಮೇಷ್ಟ್ರು ಮಕ್ಕಳಿಗೆ ಎ ಪ್ಲಸ್ ಬಿ ಹೋಲ್ ಸ್ಸ್ಕ್ವೇರ್ ಸೂತ್ರ ‌ಏನು? ಯಾರು‌ ಹೇಳ್ತಿರಾ? ಎಂದಾಗ .ತರಗತಿಯಲ್ಲಿ ಮೌನ ಯಾರೂ ಬಾಯಿಬಿಡಲೇ ಇಲ್ಲ .ಇನ್ನೇನು ಬೈಯಲು‌ಶುರು ಮಾಡಬೇಕು ಎಂದು ಕೊಂಡಾಗ ಒಬ್ಬ ಹುಡುಗ ಕೈ ಎತ್ತಿದ " ವೆರಿ ಗುಡ್ ಬಾರೋ ಸತೀಶ ಬೋರ್ಡ್ ಮೇಲೆ ಬರಿ" ಎಂದರು ಮೇಷ್ಟ್ರು. ಬೋರ್ಡ್ ಮೇಲೆ ಸೂತ್ರ ಬರೆದು ನಿಂತ ಸತೀಶನ ಕಂಡು ಹೀಗೆ  ಓದಬೇಕು ಸುಮ್ಮನೆ ಗಲಾಟೆ ಮಾಡೋದಲ್ಲ ಎಂದು ಎಲ್ಲಾ ಮಕ್ಕಳಿಗೆ ಹೇಳುತ್ತಿರುವಾಗ ಹಿಂದಿ ಮೇಡಂ ಬಂದಿದ್ದ ನ್ನು ನೋಡಿ ತರಗತಿಯಿಂದ ಹೊರಬಂದರು.
ಶಿಕ್ಷಕರ ಕೊಠಡಿಯಲ್ಲಿ ಮತ್ತು ತರಗತಿಯಲ್ಲಿ ಸತೀಶನ ಗುಣ, ಓದುವ ರೀತಿಯ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಆರಂಭವಾಗಿತ್ತು. ಯಾರು ಆ ಹುಡುಗ ಅಂದಾಗ ,ದೊಡ್ಡಪ್ಪಗಳ ಮನೆಯ ಹುಡುಗ ಪಡುವಲ ಸೀಮೆ ಹುಡುಗನಾದರೂ ಅವರ ಮಾವನ ಮನೆಯಲ್ಲಿ ಓದುತ್ತಿರುವ ಹುಡುಗ ಎಂದು ಅದೇ ಊರಿನ ಮೇಡಂ ಹೇಳಿದರು.

ಹಳ್ಳಿಯಲ್ಲಿ ಒಂದೆ ಹೆಸರಿನ ವ್ಯಕ್ತಿಗಳು ಬಹಳ ಇರುವಾಗ ಅವರ ಮನೆತನದ ಹೆಸರು ಸೇರಿಸಿ ವಿಳಾಸ ಹೇಳುವ ವಾಡಿಕೆ .ದೊಡ್ಡಪ್ಪಗಳ ಮನೆ ಮುಖ್ಯ ರಸ್ತೆಯ ಮಾರಮ್ಮನ ಗುಡಿಯ ಬಲಭಾಗದಲ್ಲಿ ಇನ್ನೂರು ಹೆಜ್ಜೆ ಹಾಕಿ ಎಡಕ್ಕೆ ತಿರುಗಿದರೆ ಸಿಗುವುದು. ಪಡುವಲ ಸೀಮೆಯ ಚೌಡಗೊಂಡನಹಳ್ಳಿಗೆ ಮದುವೆ ಮಾಡಿಕೊಟ್ಟಿದ್ದ ತಮ್ಮ ಅಕ್ಕನ ಮಗನನ್ನು ಇಲ್ಲೆ ಸಾಕಿ ಓದಿಸುತ್ತಿದ್ದರು ಸರಸ್ವತಜ್ಜಿ.

ದೊಡ್ಡಪ್ಪಗಳ ಮನೆಯಲ್ಲಿ ಸರಸ್ವತಜ್ಜಿ ಹಿರಿಯಳಾದರೂ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದುದು ಆ ಕಾಲಕ್ಕೆ ಎಸ್ಸೆಸ್ಸೆಲ್ಸಿ ಪಾಸದ ಬುದ್ದಿವಂತನಾದ ಮುಕುಂದಯ್ಯ,ಮದುವೆ ಆಗಿ ಕೆಲ ದಿನಗಳಲ್ಲಿ ಹೆಂಡತಿಯು ತೀರಿಕೊಂಡರು ಮತ್ತೊಂದು ಮದುವೆಗೆ ಬಲವಂತ ಮಾಡಿದರೂ ಆಗಲಿಲ್ಲ. ಎರಡನೇ ಮಗ ಮುರಾರಿಗೆ ಹಿರಿಯೂರಿನ  ವಾಣಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ದೂರದ ಮದಕರಿ ಪುರದಿಂದ ಮದುವೆ ಮಾಡಿಕೊಂಡು ಬರಲಾಗಿತ್ತು.ಹೆಸರು ತಿಮ್ಮಕ್ಕ ಮನೆಯ ಅಡಿಗೆಯಿಂದ ಹಿಡಿದು‌ ಎಲ್ಲಾ ಜವಾಬ್ದಾರಿ ಅವರದೆ .ಮೂರನೆಯ ಮಗ ಬಿಳಿಯಪ್ಪ ಹೆಸರಿಗೆ ಮಾತ್ರ ಬಿಳಿಯಪ್ಪ ಆದರೆ ನಿಜವಾಗಿ ಕಪ್ಪು ಬಣ್ಣದ ಅಷ್ಟಾಗಿ ಓದಲು ಬರೆಯಲು ಬರದವನು ಆದರೆ ಬುದ್ದಿವಂತ ಮನೆಯ ಬೇಸಾಯ ಜವಾಬ್ದಾರಿ ಅವನದೇ ಮದುವೆಯ ವಯಸ್ಸಿಗೆ ಬಂದಿದ್ದರೂ ಮದುವೆಯಾಗಿರಲಿಲ್ಲ. ದೊಡ್ಡ ‌ಮಗಳನ್ನು ಹೊಳಲ್ಕೆರೆ ತಾ ಚೌಡಗೊಂಡನಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು.

ಮದುವೆಯಾದ ಹದಿನಾರು ವರ್ಷಗಳ ಕಾಲ ಮಕ್ಕಳಾಗದ ಸರಸ್ವತಮ್ಮ ದೇವಿಯ ಪೂಜಿಸಲು ಆರಂಭಿಸಿದ ಫಲವಾಗಿ ಈ ಮೇಲಿನ ನಾಲ್ವರು ಮಕ್ಕಳನ್ನು ಪಡೆದ ಕಥೆಯನ್ನು ಆರಂಭದಲ್ಲಿ ಅವರು ಕೂಲಿ ಮಾಡಿದ ,ಕಷ್ಟ ಅನುಭವಿಸಿದ ರೀತಿಯನ್ನು ಸರಸ್ವತಜ್ಜಿ ಈಗ ಸ್ವಾರಸ್ಯಕರವಾಗಿ ಕತೆ ಹೇಳುವುದುಂಟು.

ಎರಡನೇ ಮಗನಿಗೆ ಇನ್ನೂ ಮಕ್ಕಳು ಆಗಿರಲಿಲ್ಲ ಅದಕ್ಕೆ ಚೌಡಗೊಂಡನಹಳ್ಳಿಯ ತನ್ನ ಅಕ್ಕನ ಮಗನಾದ ಸತೀಶನನ್ನು‌ ಕರೆದುಕೊಂಡು ಬಂದು ಇಲ್ಲೇ ಓದಿಸುತ್ತಿದ್ದರು. ಸತೀಶ ಚೆನ್ನಾಗಿ ಓದುವುದು ಅವನ ಗುಣ ನಡತೆಯನ್ನು ಇಡೀ ಶಾಲೆ ಮತ್ತು ಊರೇ ಮೆಚ್ಚಿತ್ತು. ಶಿಕ್ಷಕರ ಮೆಚ್ಚಿನ ಶಿಷ್ಯನಾಗಿದ್ದ ಸತೀಶ .

ಮುಂದುವರೆಯುವುದು.....

ಸಿ ಜಿ‌ ವೆಂಕಟೇಶ್ವರ