13 ಮೇ 2020

ದ್ವಾಪರ ಕಾದಂಬರಿ ವಿಮರ್ಶೆ

ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ

ದ್ವಾಪರ

 ಕಾದಂಬರಿ

ಪುಸ್ತಕ ವಿಮರ್ಶೆ

ಕಂನಾಡಿಗ ನಾರಾಯಣ ರವರು ಬರೆದಿರುವ ದ್ವಾಪರ  ಪುಸ್ತಕ ಓದುತ್ತಾ ಹೋದಂತೆಲ್ಲಾ ನಮ್ಮಲ್ಲಿ ವೈಚಾರಿಕ ಚಿಂತನೆ ಜಾಗೃತವಾಗುತ್ತಾ ಹೋಗುತ್ತದೆ.
ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ  ಎಂಬ ತಲೆ ಬರಹ ಓದುತ್ತಲೆ ಓದುಗರಿಗೆ ಕುತೂಹಲ ಮೂಡಿರುತ್ತದೆ.ಕಾದಂಬರಿಯ ಒಳಪುಟಗಳಲ್ಲಿ ಕಣ್ಣಾಡಿಸಿದಂತೆ ಓದುಗರಿಗೆ ನಿರಾಶೆ ಎನಿಸದು.

ರಾಮಾಯಣ, ಮಹಾಭಾರತ ,ಭಗವದ್ಗೀತೆ  ಕೃತಿಗಳು ಭಾರತದ ಶ್ರೇಷ್ಠ ಮಾಹನ್ ಗ್ರಂಥಗಳು ಎಂಬುದರಲ್ಲಿ  ಸಂಶಯವಿಲ್ಲ ನಾವೆಲ್ಲರೂ ಈ ಗ್ರಂಥಗಳನ್ನು ದೈವಿಕ ಹಿನ್ನೆಲೆಯಲ್ಲಿ, ಪವಾಡಗಳ ಹಿನ್ನೆಲೆಯಲ್ಲಿ, ಧಾರ್ಮಿಕ, ಹಿನ್ನೆಲೆಯಲ್ಲಿ ಐತಿಹಾಸಿಕವಾದ ಹಿನ್ನೆಲೆಯಲ್ಲಿ ವಿವಿಧ ಲೇಖಕರು ,ಕವಿಗಳು ಬರೆದ ಮಹಾಭಾರತಗಳನ್ನು ಓದಿದ್ದೇವೆ ,ಪ್ರತಿ ಬಾರಿ ಮಹಾಭಾರತವನ್ನು ಓದುವಾಗ ರಸಸ್ವಾಧನೆ ,ಭಕ್ತಿ ರಸವನ್ನು ಸವಿದಿದ್ದೇವೆ .

ಪ್ರಸ್ತುತ ಕಾದಂಬರಿಯಲ್ಲಿ ಕಾದಂಬರಿಕಾರರು ಚಿತ್ತಿತವಾಗಿರುವ  ಮಾಹಭಾರತವನ್ನು  ನಾಸ್ತಿಕರು ಕೂಡ ಓದಿ ಮೆಚ್ಚುಗೆ ವ್ಯಕ್ತಪಡಿಸಿವರು. ಅಂದರೆ ಆಸ್ತಿಕರು ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗದು .

ಈಗಾಗಲೇ ಕಾಂಡ ಕಾದಂಬರಿಯ ಮೂಲಕ ರಾಮಾಯಣದ ಕೆಲವು ಮಿತ್ ಗಳನ್ನು ಒಡೆಯುವ ಪ್ರಯತ್ನ ಮಾಡಿದ್ದ ಕಂ ನಾಡಿಗ ನಾರಾಯಣ ರವರು ಅದರ ಮುಂದುವರೆದ ಭಾಗ ಎಂಬಂತೆ ಮಹಾಭಾರತದ ಕಾದಂಬರಿ ದ್ವಾಪರ ನಮ್ಮ ಕೈಗಿತ್ತಿದ್ದಾರೆ. ಇಲ್ಲಿ ಕೃಷ್ಣ ಅತೀಂದ್ರಿಯ ಶಕ್ತಿ ಇರುವ ದೇವರಲ್ಲ ಸಮಾನ್ಯವಾದ ಮಾನವ, ಅವನು ಮಾಡಿರುವ ಚಮತ್ಕಾರ, ಸಾಧನೆ ,ಅತೀಂದ್ರಿಯ ಶಕ್ತಿ,, ಇವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಕಾದಂಬರಿಕಾರರು ಮೊದಲ ಪುಟದಲ್ಲಿ ಹೇಳಿದಂತೆ " ಇಲ್ಲಿ ಯಾವುದು ಹೊಸತಲ್ಲ,ಯಾವುದು ಹಳೆಯದಲ್ಲ, ಇಲ್ಲಿ ಯಾವುದೂ ಆರಂಭವಲ್ಲ, ಯಾವುದೂ ಅಂತ್ಯವೂ ಅಲ್ಲ, ಇಲ್ಲಿ ಯಾವದೂ ಶಾಶ್ವತವಲ್ಲ, ಅಶಾಶ್ವತವೂ ಅಲ್ಲ,, ಆದರೆ ನಿರಂತರ ಬದಲಾವಣೆಯೊಂದೆ ಶಾಶ್ವತ "
ಎನ್ನುವ ಮಾತು ಕಾದಂಬರಿ ಓದಿದಂತೆ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಕೆಲವು ಲೇಖಕರು ಕೆಲವರನ್ನು ಮಾತ್ರ ವಿಲನ್ ಆಗಿ ಚಿತ್ರಿಸಿದ್ದಾರೆ. ಇವರು ಆಗಲ್ಲ ಸುಯೋಧನ ಸಹ ಕೆಲ ಗುಣಗಳಲ್ಲಿ ಇತರರಿಗಿಂತ ಮೇಲು ಎಂಬುದನ್ನು ಚೆನ್ನಾಗಿ ಚಿತ್ರಿಸಿದ್ದಾರೆ.

ಮಹಾಭಾರತದಲ್ಲಿ ಕಥೆ ಹೇಳುವ ಬದಲು
ಪಾತ್ರಗಳೆ ಸ್ವಗತದಲಿ ಮಾತನಾಡುವ ತಂತ್ರದ ಮೂಲಕ ಕಥೆಯು ನಿರಂತರವಾಗಿ ಮುಂದುವರೆಯುವ ಕೌಶಲ್ಯ ಗಮನಸೆಳೆಯಿತು
ಗರ್ಭ, ಪ್ರಜ್ಞೆ,  ಖಾಂಡವ, ದಾಳ ,ಅಕ್ಷಯ, ಅಜ್ಞಾತ, ಸಂಧಾನ, ಜಯ, ಎಂಬ ವಿಭಾಗದಲ್ಲಿ ಕಾದಂಬರಿಯು ಮುಂದುವರೆಯುವುದು. ವ್ಯಾಸರಿಂದ ಆರಂಭವಾಗುವ ಕಾದಂಬರಿ ಸತ್ಯವತಿ, ಕುಂತಿ,ಗಾಂಧಾರಿ, ಭೀಷ್ಮ, ಪಾಂಡವರು ಕೌರವರು, ಕೃಷ್ಣ, ದ್ರೌಪದಿ ಇನ್ನೂ ಮುಂತಾದ ಎಲ್ಲಾ ಪಾತ್ರಗಳು ತಮ್ಮ ಅಂತರಾವಲೋಕನ ಮಾಡಿಕೊಂಡಂತೆ ನಮಗೆ ಭಾಸವಾಗುತ್ತದೆ.
ಒಟ್ಟಿನಲ್ಲಿ ಕಾದಂಬರಿಯನ್ನು ಓದಿ ಮುಗಿಸಿದಾಗ ಮಹಾಭಾರತದ ಬಗ್ಗೆ ಅಲ್ಲಿಯ ಪಾತ್ರಗಳ ಬಗ್ಗೆ ನಮ್ಮಲ್ಲಿ ವಿಶ್ಲೇಷಣೆ ಆರಂಭವಾಗುವುದರಲ್ಲಿ ಸಂಶಯವಿಲ್ಲ.

ಕಾದಂಬರಿ: ದ್ವಾಪರ
ಲೇಖಕರು: ಕಂ ನಾಡಿಗ ನಾರಾಯಣ
ಪ್ರಕಾಶನ: ನವಕರ್ನಾಟಕ
ಬೆಲೆ: ೨೯೦

ಸಿ ಜಿ ವೆಂಕಟೇಶ್ವರ
ತುಮಕೂರು


12 ಮೇ 2020

ನಮನ ( ಇಂದು ವಿಶ್ವ ದಾದಿಯರ ದಿನ)


*ನಮನ*

(ಇಂದು ವಿಶ್ವ ಶುಶ್ರೂಷಾಧಿಕಾರಿ (nurses) ದಿನ)

ರೋಗಿಗಳ ಪಾಲಿಗೆಂದೂ  ಆಪ್ದ್ಭಾಂಧವರು
ಸೇವೆಗೆ ಮತ್ತೊಂದು ಹೆಸರೇ  ಶುಶ್ರೂಷಕರು
ಆಪ್ತವಾಗಿ ಆರೋಗ್ಯ ಕಾಪಾಡುವ ದಾದಿಯರು
ನಿಮಗಿದೋ ನಮ್ಮಗಳ ನಮನ ಸಾವಿರಾರು

ವಿಶ್ವ ಶುಶ್ರೂಷಾಧಿಕಾರಿ ದಿನದ ಶುಭಾಶಯಗಳು

*ಸಿ ಜಿ ವೆಂಕಟೇಶ್ವರ*

11 ಮೇ 2020

ಸನ್ಮಾರ್ಗ ಭಾಗ೨

ಹೆದ್ದಾರಿ ಭಾಗ ,೨

ರಸ್ತೆಯ ಪಶ್ಚಿಮಾಭಿಮುಖವಾಗಿ ಇರುವ ಕಟ್ಟಡದ ಮೇಲೆ ಸರ್ಕಾರಿ ಪದವಿಪೂರ್ವ ಕಾಲೇಜು ಯರಬಳ್ಳಿ  ಎಂಬ ದೊಡ್ಡದಾದ ಬೋರ್ಡ್ ರಸ್ತೆಗೆ  ಕಾಣುತ್ತಿತ್ತು.ರಸ್ತೆಯಲ್ಲಿ  ವಾಹನಗಳಲ್ಲಿ ಓಡಾಡುವ ಜನ ಪರವಾಗಿಲ್ಲ ಈ ಊರಲ್ಲು ಜೂನಿಯರ್ ಕಾಲೇಜಿದೆ ಎಂದು ಆಶ್ಚರ್ಯಕರ ಮತ್ತು ಮೆಚ್ಚುಗೆ ಮಾತನಾಡಿಕೊಳ್ಳುತ್ತಿದ್ದರು.

ಕಾಂಪೌಂಡ್ ಇಲ್ಲದ ವಿಶಾಲವಾದ ಶಾಲಾ ಆವರಣ ಪ್ರವೇಶಿಸಿದ ತರ್ಲೇ ಹುಡುಗರು ಒಬ್ಬರನ್ನು ಕಂಡೊಡನೆ  ಇದ್ದಕ್ಕಿದ್ದಂತೆ ನಿಶ್ಯಬ್ದವಾಗಿ  ಸಾಲಾಗಿ ಬಂದು ವೃತ್ತಾಕಾರವಾಗಿ ಕುಳಿತು ಶಾಲೆಯಲ್ಲಿ ನಿನ್ನೆ ಮಾತ್ರ ತೆಗೆದಿದ್ದ ಪುಸ್ತಕಗಳನ್ನು ಮನಸ್ಸಿಲ್ಲದಿದ್ರೂ ಅವರ ಭಯಕ್ಕೆ ಮನದಲ್ಲೇ ಶಪಿಸುತ್ತಾ , ಗೊಣಗುತ್ತಾ  ತೆರೆದು ಓದುವ ನಾಟಕ ಶುರುಮಾಡಿದರು
ಯಾವನೆಲೇ ಅದು ಗೊನ ಗೊನ ಶಬ್ದ. ಮುಚ್ಕೊಂಡು ಹೋದ್ರೋ ಓದ್ರೋ ಅಂದಿತು ಕರ್ಕಶ ಸದ್ದು "ಮುಚ್ಚಿದರೆ ಓದಕಾಗಲ್ಲ ಸರ್"  ಚಿದಾನಂದ್ ನ ಗುಂಪು ಸಣ್ಣಗೆ ನಕ್ಕಿತು. ಅವರಿಗದು ಕೇಳಿಸಲಿಲ್ಲ ಹುಡುಗರು ಬಚಾವ್.

 ಶಾಲೆಯ ಶಿಸ್ತು ಕಾಪಾಡುವ ಗುತ್ತಿಗೆ ಪಡೆದವರಂತೆ  ಆಗಾಗ ಕಿರುಚುವ, ತರಲೆಗಳ ಪಾಲಿನ ಸಿಂಹ ಸ್ವಪ್ನ , ಅನವಶ್ಯಕವಾಗಿ ಶಾಲೆಯಿಂದ ಮಕ್ಕಳು ಕಾಲಿಟ್ಟರೆ  ಪೀಪೀ ಊದುವ ಪೀಟಿ ಮಾಸ್ಟರ್‌ ಕಾಡಪ್ಪ  ಮಾತಷ್ಟೇ ಒರಟು ಮಕ್ಕಳ ಬಗ್ಗೆ ಕಾಳಜಿ ಅತಿ ಮತ್ತು ಒಳ್ಳೆಯ ಹೃದಯ ವ್ಯಕ್ತಿ ಮೊನ್ನೆ ರೂಪ ತಲೆ ಸುತ್ತಿ ಪ್ರಜ್ಞೆ ತಪ್ಪಿ ಬಿದ್ದಾಗ ಎಲ್ಲಾ ‌ಶಿಕ್ಷಕರು ಬರೀ ನೋಡಿ ಕನಿಕರ ತೋರುತ್ತಿದ್ದಾಗ   ಕಾಡಪ್ಪ ಸರ್ ತಮ್ಮ ಮಗಳಂತೆ  ‌ಶಾಲೆಯ ಪಕ್ಕವೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು ಆಗಿನಿಂದ ಮಕ್ಕಳಿಗೆ ಕಾಡಪ್ಪ ಮೇಷ್ಟ್ರು ಬಗ್ಗೆ ಸ್ವಲ್ಪ ಗೌರವ ಹೆಚ್ಚಾಯಿತು ಆದರೆ ಅವರು  ಕಿರುಚುವ ಮತ್ತು ಹೊಡೆಯುವ ಗುಣ ನೋಡಿ ಚಿದಾನಂದ್ "ಯಾರೋ ಈಯಪ್ಪನಿಗೆ ಸರಿಯಾದ ಹೆಸರು ಇಟ್ಟವ್ರೆ ಇವರು ಕಾಡಪ್ಪನೂ ಹೌದು.ಕಾಟಪ್ಪನೂ ಹೌದು " ಏಯ್ ಸುಮ್ನೆ ಇರೋ ಈ ಕಡೆ ಬತ್ತಾರೆ ಸತೀಶ್   ಗಾಬರಿಯಿಂದ ಅಂದಾಗ ಎಲ್ಲರೂ ನಿಶ್ಯಬ್ದ. ಒಮ್ಮೆ ಪೊಲೀಸರಂತೆ ಎಲ್ಲರನ್ನೂ ನೋಡಿ ಮುಂದೆ ಹೋದರು ಕಾಡಪ್ಪ ಮೇಷ್ಟು.
ಶಾಲೆಯ ಬೆಲ್ ಕೇಳಿ ಮಕ್ಕಳು ಬೆಳಗಿನ ಪ್ರೆಯರ್ಗೆ ಸಾಲಾಗಿ   ಹೊರಟರು.
 ಹತ್ತನೆಯ ತರಗತಿಗೆ ಗಣಿತ ವಿಷಯದ
ಮೊದಲ ಅವಧಿ ಮುಗಿದು‌ ಎರಡು‌ ನಿಮಿಷವಾಗಿರಲಿಲ್ಲ  ತರಗತಿಯಲ್ಲಿ ಮಕ್ಕಳ ಗಲಾಟೆ ತಾರಕಕ್ಕೇರಿ ರಸ್ತೆ ದಾಟಿ ಊರ ತಲುಪುವುದರಲ್ಲಿತ್ತು.ಇದ್ದಕ್ಕಿದ್ದಂತೆ ತರಗತಿ ಸ್ತಬ್ಧ ,ಕಿಟಕಿಯ ಬಳಿ ಯಾರೊ ಬಂದು ನಿಂತಂತಾಯಿತು.ಐವತ್ತಕ್ಕೂ ಹೆಚ್ಚಿನ ವಯಸ್ಸಿನ ಕನ್ನಡಕದಾರಿ ,ಮೀಸೆಇಲ್ಲ ,ಬಾಯ್ದೆಗೆದರೆ ಎರಡು ಹಲ್ಲು ಉದುರಿರುವುದು  ಕಾಣಬಹುದು, ಅವರ ಕಂಡರೆ ಇಡೀ ಶಾಲೆಯಲ್ಲಿ ಮತ್ತು ಮಕ್ಕಳಿಗೆ ಏನೋ  ಒಂದು ರೀತಿಯ ಭಯಮಿಶ್ರಿತ ಗೌರವ ಅವರೆ ಬಿ ಎಸ್ ಬಿ‌ ಪೂರ್ಣ ಹೆಸರು ಬಷೀರ್ ಆದರೂ ಮಕ್ಕಳು ಬಿ‌ಎಸ್ ಬಿ ಎಂದೆ ಕರೆಯುತ್ತಿದ್ದರು. ತರಗತಿಯಲ್ಲಿ ಸೊಗಸಾದ ವಿಜ್ಞಾನ ಶಿಕ್ಷಕರು ಕಾಡಪ್ಪ ಮೇಷ್ಟ್ರು ತರಹ ಕಿರಚಾಟ, ಅರಚಾಟ, ಹೊಡೆಯುವುದು ಮಾಡದಿದ್ದರೂ ಅವರನ್ನು ಕಂಡರೆ ಮಕ್ಕಳಿಗೆ ಗೌರವ ಅವರ ಅತೀ ದೊಡ್ಡ ಬೈಗುಳ ಎಂದರೆ " ಎಂಗುಟ್ಟಿದ್ರೋ ನೀವು".

ತರಗತಿಯ ಪ್ರವೇಶಿಸಿ ಬಿಎಸ್ಬಿ ಮೇಷ್ಟ್ರು ಮಕ್ಕಳಿಗೆ ಎ ಪ್ಲಸ್ ಬಿ ಹೋಲ್ ಸ್ಸ್ಕ್ವೇರ್ ಸೂತ್ರ ‌ಏನು? ಯಾರು‌ ಹೇಳ್ತಿರಾ? ಎಂದಾಗ .ತರಗತಿಯಲ್ಲಿ ಮೌನ ಯಾರೂ ಬಾಯಿಬಿಡಲೇ ಇಲ್ಲ .ಇನ್ನೇನು ಬೈಯಲು‌ಶುರು ಮಾಡಬೇಕು ಎಂದು ಕೊಂಡಾಗ ಒಬ್ಬ ಹುಡುಗ ಕೈ ಎತ್ತಿದ " ವೆರಿ ಗುಡ್ ಬಾರೋ ಸತೀಶ ಬೋರ್ಡ್ ಮೇಲೆ ಬರಿ" ಎಂದರು ಮೇಷ್ಟ್ರು. ಬೋರ್ಡ್ ಮೇಲೆ ಸೂತ್ರ ಬರೆದು ನಿಂತ ಸತೀಶನ ಕಂಡು ಹೀಗೆ  ಓದಬೇಕು ಸುಮ್ಮನೆ ಗಲಾಟೆ ಮಾಡೋದಲ್ಲ ಎಂದು ಎಲ್ಲಾ ಮಕ್ಕಳಿಗೆ ಹೇಳುತ್ತಿರುವಾಗ ಹಿಂದಿ ಮೇಡಂ ಬಂದಿದ್ದ ನ್ನು ನೋಡಿ ತರಗತಿಯಿಂದ ಹೊರಬಂದರು.
ಶಿಕ್ಷಕರ ಕೊಠಡಿಯಲ್ಲಿ ಮತ್ತು ತರಗತಿಯಲ್ಲಿ ಸತೀಶನ ಗುಣ, ಓದುವ ರೀತಿಯ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಆರಂಭವಾಗಿತ್ತು. ಯಾರು ಆ ಹುಡುಗ ಅಂದಾಗ ,ದೊಡ್ಡಪ್ಪಗಳ ಮನೆಯ ಹುಡುಗ ಪಡುವಲ ಸೀಮೆ ಹುಡುಗನಾದರೂ ಅವರ ಮಾವನ ಮನೆಯಲ್ಲಿ ಓದುತ್ತಿರುವ ಹುಡುಗ ಎಂದು ಅದೇ ಊರಿನ ಮೇಡಂ ಹೇಳಿದರು.

ಹಳ್ಳಿಯಲ್ಲಿ ಒಂದೆ ಹೆಸರಿನ ವ್ಯಕ್ತಿಗಳು ಬಹಳ ಇರುವಾಗ ಅವರ ಮನೆತನದ ಹೆಸರು ಸೇರಿಸಿ ವಿಳಾಸ ಹೇಳುವ ವಾಡಿಕೆ .ದೊಡ್ಡಪ್ಪಗಳ ಮನೆ ಮುಖ್ಯ ರಸ್ತೆಯ ಮಾರಮ್ಮನ ಗುಡಿಯ ಬಲಭಾಗದಲ್ಲಿ ಇನ್ನೂರು ಹೆಜ್ಜೆ ಹಾಕಿ ಎಡಕ್ಕೆ ತಿರುಗಿದರೆ ಸಿಗುವುದು. ಪಡುವಲ ಸೀಮೆಯ ಚೌಡಗೊಂಡನಹಳ್ಳಿಗೆ ಮದುವೆ ಮಾಡಿಕೊಟ್ಟಿದ್ದ ತಮ್ಮ ಅಕ್ಕನ ಮಗನನ್ನು ಇಲ್ಲೆ ಸಾಕಿ ಓದಿಸುತ್ತಿದ್ದರು ಸರಸ್ವತಜ್ಜಿ.

ದೊಡ್ಡಪ್ಪಗಳ ಮನೆಯಲ್ಲಿ ಸರಸ್ವತಜ್ಜಿ ಹಿರಿಯಳಾದರೂ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದುದು ಆ ಕಾಲಕ್ಕೆ ಎಸ್ಸೆಸ್ಸೆಲ್ಸಿ ಪಾಸದ ಬುದ್ದಿವಂತನಾದ ಮುಕುಂದಯ್ಯ,ಮದುವೆ ಆಗಿ ಕೆಲ ದಿನಗಳಲ್ಲಿ ಹೆಂಡತಿಯು ತೀರಿಕೊಂಡರು ಮತ್ತೊಂದು ಮದುವೆಗೆ ಬಲವಂತ ಮಾಡಿದರೂ ಆಗಲಿಲ್ಲ. ಎರಡನೇ ಮಗ ಮುರಾರಿಗೆ ಹಿರಿಯೂರಿನ  ವಾಣಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ದೂರದ ಮದಕರಿ ಪುರದಿಂದ ಮದುವೆ ಮಾಡಿಕೊಂಡು ಬರಲಾಗಿತ್ತು.ಹೆಸರು ತಿಮ್ಮಕ್ಕ ಮನೆಯ ಅಡಿಗೆಯಿಂದ ಹಿಡಿದು‌ ಎಲ್ಲಾ ಜವಾಬ್ದಾರಿ ಅವರದೆ .ಮೂರನೆಯ ಮಗ ಬಿಳಿಯಪ್ಪ ಹೆಸರಿಗೆ ಮಾತ್ರ ಬಿಳಿಯಪ್ಪ ಆದರೆ ನಿಜವಾಗಿ ಕಪ್ಪು ಬಣ್ಣದ ಅಷ್ಟಾಗಿ ಓದಲು ಬರೆಯಲು ಬರದವನು ಆದರೆ ಬುದ್ದಿವಂತ ಮನೆಯ ಬೇಸಾಯ ಜವಾಬ್ದಾರಿ ಅವನದೇ ಮದುವೆಯ ವಯಸ್ಸಿಗೆ ಬಂದಿದ್ದರೂ ಮದುವೆಯಾಗಿರಲಿಲ್ಲ. ದೊಡ್ಡ ‌ಮಗಳನ್ನು ಹೊಳಲ್ಕೆರೆ ತಾ ಚೌಡಗೊಂಡನಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು.

ಮದುವೆಯಾದ ಹದಿನಾರು ವರ್ಷಗಳ ಕಾಲ ಮಕ್ಕಳಾಗದ ಸರಸ್ವತಮ್ಮ ದೇವಿಯ ಪೂಜಿಸಲು ಆರಂಭಿಸಿದ ಫಲವಾಗಿ ಈ ಮೇಲಿನ ನಾಲ್ವರು ಮಕ್ಕಳನ್ನು ಪಡೆದ ಕಥೆಯನ್ನು ಆರಂಭದಲ್ಲಿ ಅವರು ಕೂಲಿ ಮಾಡಿದ ,ಕಷ್ಟ ಅನುಭವಿಸಿದ ರೀತಿಯನ್ನು ಸರಸ್ವತಜ್ಜಿ ಈಗ ಸ್ವಾರಸ್ಯಕರವಾಗಿ ಕತೆ ಹೇಳುವುದುಂಟು.

ಎರಡನೇ ಮಗನಿಗೆ ಇನ್ನೂ ಮಕ್ಕಳು ಆಗಿರಲಿಲ್ಲ ಅದಕ್ಕೆ ಚೌಡಗೊಂಡನಹಳ್ಳಿಯ ತನ್ನ ಅಕ್ಕನ ಮಗನಾದ ಸತೀಶನನ್ನು‌ ಕರೆದುಕೊಂಡು ಬಂದು ಇಲ್ಲೇ ಓದಿಸುತ್ತಿದ್ದರು. ಸತೀಶ ಚೆನ್ನಾಗಿ ಓದುವುದು ಅವನ ಗುಣ ನಡತೆಯನ್ನು ಇಡೀ ಶಾಲೆ ಮತ್ತು ಊರೇ ಮೆಚ್ಚಿತ್ತು. ಶಿಕ್ಷಕರ ಮೆಚ್ಚಿನ ಶಿಷ್ಯನಾಗಿದ್ದ ಸತೀಶ .

ಮುಂದುವರೆಯುವುದು.....

ಸಿ ಜಿ‌ ವೆಂಕಟೇಶ್ವರ

10 ಮೇ 2020

ಸನ್ಮಾರ್ಗ ಭಾಗ _೧


*ಸನ್ಮಾರ್ಗ ಭಾಗ೧*

ಅಂದು ಮಂಗಳವಾರ ಬೆಳಿಗ್ಗೆ ಒಂಬತ್ತೋ ಒಂಭತ್ತುವರೆ ಇರಬಹುದು ಊರಿನ ಭಕ್ತಮಹಾಶಯರು ಸ್ನಾನ ಮಾಡಿ ಮಡಿ ಉಟ್ಟು ಅಮ್ಮನವರ ಗುಡಿಯ ಕಡೆ ಸಾಗುತ್ತಿದ್ದರು. ಗುಡಿಯಲ್ಲಿ ಆಯ್ತಾರಪ್ಪ ಅಮ್ಮನಿಗೆ ಗುಡಿಯ ಬಲಭಾಗದಲ್ಲೇ ಕಟ್ಟಿಗೆ ಒಲೆಯಲ್ಲಿ ತಳಿಗೆ ಅನ್ನ ಮಾಡುತ್ತಾ ಗರ್ಭಗುಡಿಯಲ್ಲಿ ಪೂಜೆಗೆ ಅಣಕ ಮಾಡುತ್ತಿದ್ದರು. ಗುಡಿಯ ಒಳಗೆ ಜನರು ಬಂದು ಕೈಮುಗಿದು ಮಂಗಳಾರತಿಗೆ ಕಾದು ಕುಳಿತರು ಗುಡಿಯ ಒಳಗಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಗುಡಿಯಿಂದ ಹತ್ತು ಮೀಟರ್ ದೂರದಲ್ಲಿ ಕುಳಿತು ಕಾಣದಿರುವ ಪೂಜಾವಿಧಿಗಳನ್ನು ಕಾಣಲು ತವಕಿಸುತ್ತಿದ್ದರು .ಕೆಲವರು ನಾವೂ ಅವರಂತೆ ಗುಡಿಯ ಒಳಗೆ ಹೋಗಲಾಗುವುದಿಲ್ಲವಲ್ಲ ಎಂದು ಬೇಸರವಾದರೂ ಅಮ್ಮನ ನೆನದು ಭಯದಿಂದ ಅಲ್ಲೇ ಕೈಮುಗಿದು ‌ಕುಳಿತರು ಬಹುಶಃ ಅವರೆಲ್ಲರೂ ನಮಗೆ ಬೆಳಕಿನ ದಾರಿ ತೋರು ತಾಯಿ ಎಂದು ಬೇಡಿರಬೇಕು.
ಗುಡಿಯ ಮುಂದಿನ ಟಾರ್ ರೋಡ್ ದಾಟಿ ಇರುವ ಅಮ್ಮನ ಮರವೆಂದೇ ಹೆಸರಾದ ಬೇವಿನಮರದ ಕೆಳಗೆ ಚೌಕಾಬಾರ ಹಾಡುವ ನಾಲ್ಕು ಜನರ ತಂಡ ಹಾಜರಾಗಿ ಏನೊ ಸಾಧನೆ ಮಾಡಿದವರಂತೆ ಬೆವರು ವಾಸನೆ ಬರುವ ಟವಲ್ ಎತ್ತಿ ಗಾಳಿ  ಬೀಸಿಕೊಳ್ಳುತ್ತಾ ಆಟ ಮುಂದುವರೆಸಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಆ ಮರದ  ಆಯುಷ್ಯ ಮುಗಿಯಲಿದೆ ಎಂಬುದು ಅಮ್ಮನಿಗೆ ಗೊತ್ತಿತ್ತೇನೋ ಅವರಿಗೆ ಗೊತ್ತಿರಲಿಲ್ಲ.
ಗುಡಿಯಲ್ಲಿ ಗಂಟೆಗಳ ಶಬ್ಧ ಕೇಳಿತು ಅಲ್ಲಿಗೆ ಮಂಗಳಾರತಿ ಮುಗಿದಂತೆ ನಾಲ್ಕಾರು ಶಾಲಾ ಮಕ್ಕಳು ಸೇರಿದಂತೆ ಗುಡಿಯ ಒಳಗಿದ್ದವರಿಗೆ ಮಂಗಳಾರತಿ ತೀರ್ಥ ಪ್ರಸಾದ ಕೊಟ್ಟ ಮೇಲೆ  ಶಾಲಾ ಮಕ್ಕಳು ಚೀಲದೊಂದಿಗೆ   ಉತ್ತರದ ದಿಕ್ಕಿನಲ್ಲಿ ನಡೆಯಲು ಶುರು ಮಾಡಿದರು.

ಹೂಂ್ಞ ನೀವು ಬರ್ರಿ ತೀರ್ಥಕ್ಕೆ ಎಂದು ಫಣಿಭೂಷಣ ಗುಡಿಯ ಹೊರಗೆ ದೂರದಲ್ಲಿ ಇದ್ದ ಮಾದಿಗರಿಗೆ ಕರೆದ " ಇಲ್ಲ ಸಾಮಿ ನಾವು ಹತ್ರಕ್ಕೆ ಬರಾದಾ ? ಅವ್ವ ಸುಮ್ಮನಿರ್ತಾಳ ? ಬ್ಯಾಡ ಇಲ್ಲೇ ತಕಂಬನ್ನಿ ಭಂಡಾರ ತೀರ್ಥಾವಾ. ಅಂದರು ಫಣಿಭೂಷಣ ಗೊಣಗುತ್ತ ಅವರಿದ್ದಲ್ಲಿಗೆ ನಡೆದು ಬಂದು ಅವರ ಕೈ ತಾಗದಂತೆ ಮೇಲಿಂದ ಭಂಡಾರ ಉದುರಿಸಿ ಅವರು ತಂದಿದ್ದ ಲೋಟಗಳಿಗೆ ತೀರ್ಥ ಹಾಕಿ ಗುಡಿಯ ಒಳಗೆ ಹೋದ.

"ಏನ್ ಕಿಳ್ಳು ಹುಡುಗ್ರು ಮಾರಾಯ ಇವ್ರು ಅದೇನ್ ಓದ್ತಾವೋ ಏನೋ ? ಇದನ್ನೇನ್ರಲಾ ನಿಮ್ ಮೇಷ್ಟ್ರು ನಿಮಿಗೆ ಕಲ್ಸಿರೋದು" ಎಂದು ರಂಗಸ್ವಾಮಿಯವರು ಗದರಿಕೊಳ್ಳುವವರೆಗೆ ಆ ಹುಡುಗರು ಕೀಟಲೆ ಮಾಡುತ್ತಾ ,ಒಬ್ಬರಿಗೊಬ್ಬರು ಬೈದುಕೊಳ್ಳುತ್ತಾ ,ಜಗಳ ವಾಡುತ್ತಾ ರಸ್ತೆ ಎಲ್ಲಾ.... ನಮ್ಮದೇ ಎಂದುಕೊಂಡು ,ಕೆಲವೊಮ್ಮೆ ತಮ್ಮ ಕೈಚೀಲದಲ್ಲಿರುವ ಪುಸ್ತಕಗಳನ್ನು ಮೇಲೆಸೆದು ಕೆಳಗೆ ಬೀಳುವ ಮೊದಲೇ ಹಿಡಿಯುವ ಸಾಹಸ ಮಾಡುತ್ತಾ, ಜೋರಾಗಿ ಓಡೋ ಭರದಲ್ಲಿ ಮಹೇಶ ಮೈಲಿ ಕಲ್ಲಿಗೆ ಡಿಕ್ಕಿ ಹೊಡೆದ ಹುಡುಗರೆಲ್ಲ ಭಯದಿಂದ ಮಹೇಶನ ಹತ್ತಿರ ಹೋಗಿ ನೋಡಿದರು ತಲೆಯನ್ನು ಹಿಡಿದು  ಮಹೇಶ ಮಾತನಾಡದೇ ಸುಮ್ಮನೆ ಕುಳಿತಿದ್ದ.ಹತ್ತಿರ ಬಂದ ಸತೀಶ ಮಹೇಶನ‌ ತಲೆಸವರಿ ನೋಡಿದ ನೆತ್ತಿಯಲ್ಲಿ ಒಂದು ಉಂಡೆ ಗಾತ್ರದ ಉಬ್ಬು! ರಕ್ತ ಏನಾದರೂ ಬಂತಾ? ಚಿದಾನಂದ್ ಕೇಳಿದ ಇಲ್ಲ ಊದಿಕೊಂಡಿದೆ ಅಷ್ಟೇ.  ಸತೀಶ ಹೇ ಇವನ ತಲೆ ಕಬ್ಬಣ ಕಣಪ್ಪ ಅಂದ  ಚಿದಾನಂದ ಕಣ್ಣು ದಪ್ಪ ಮಾಡಿ ಉಬ್ಬು ಮೇಲೇರಿಸಿ ನುಡಿದ ,ಬರ್ರೋ ಸ್ಕೂಲ್ಗೆ ಟೈಮಾಗುತ್ತೆ ಅಂತ ಮತ್ತೆ‌ಅದೇ ತರಲೆ ಕೀಟಲೆ ಮಾಡುತ್ತಾ ರಾಜ್ಯ ಹೆದ್ದಾರಿ ೧೯ ರಲ್ಲಿ ನಡೆದು ಬಲಕ್ಕೆ ತಿರುಗಿ ಹೋದರು.

ಅದು ಯರಬಳ್ಳಿ ಅತೀ ಹೆಚ್ಚು ಎರೆಮಣ್ಣು ಇಲ್ಲದಿದ್ದರೂ ಎರೆ ಸೀಮೆ ಎಂದು ಕರೆಸಿಕೊಳ್ಳುವ ಈ ಹಳ್ಳಿ ಅತ್ತ ದೊಡ್ಡದೂ ಅಲ್ಲದ ಚಿಕ್ಕದೂ ಅಲ್ಲದ ಒಂದು ಸಾಧಾರಣವಾದ ಹಳ್ಳಿ .ಬೀದರ್ ಶ್ರೀರಂಗಪಟ್ಟಣ ‌ರಾಜ್ಯಹೆದ್ದಾರಿ ಹಾದು ಹೋದ ಪರಿಣಾಮ ಸುತ್ತಮುತ್ತಲಿನ ಹಳ್ಳಿಗಳಿಗಿಂತ ತುಸು ಬೆಳವಣಿಗೆ ಕಂಡ ಹಳ್ಳಿ ಎಂಭತ್ತರ ದಶಕವಾದರೂ ಇತರೆ ಹಳ್ಳಿಗಳಿಗಿಂತ ಹತ್ತು ವರ್ಷಗಳ ಕಾಲ ನಮ್ಮ ಹಳ್ಳಿ ಮುಂದಿದೆ ಎಂದು ಊರ ಮುಂದಿನ ಅರಳಿ  ಕಟ್ಟೆಯ  ಮೇಲೆ ಕುಳಿತವರು ಆಗಾಗ್ಗೆ ಕೊಚ್ಚಿಕೊಳ್ಳುತ್ತಿದ್ದರು.

  ಊರಿನ ಮುಂದೆ  ಪೂರ್ವ ಭಾಗದಲ್ಲಿ ರಸ್ತೆ ಹಾದು‌ ಹೋದ ಪರಿಣಾಮವಾಗಿ ಅದು ಅಲ್ಲಿನವರ ಭಾಷೆಯಲ್ಲಿ ಊರ ಮುಂದೆ ಎಂದು ಪ್ರಚಲಿತ. ರಸ್ತೆಯ ಇಕ್ಕೆಲಗಳಲ್ಲಿ ಪೈಪೋಟಿಗೆ ಎಂಬಂತೆ ಶೆಟ್ಟರ ಅಂಗಡಿಗಳು  ಬಣ್ಣ ಬಳಿದುಕೊಂಡು, ಮದುವಣಗಿತ್ತಿಯಂತೆ ಸಿಂಗರಿಸಕೊಂಡು ತಲೆಎತ್ತಿದ್ದವು.

ಅಲ್ಲೊಂದು‌ ಇಲ್ಲೊಂದು‌ ತುಂಬಾ ಹಳೆಯ ಬೇವಿನ ಮರಗಳು ಊರಿನ‌ ಮುಂದಕ್ಕೆ ನೈಸರ್ಗಿಕವಾಗಿ ತೋರಣ ಕಟ್ಟಿದಂತೆ ಊರಿನ ಅಂದ ಹೆಚ್ಚಿಸಿದ್ದವು ಅದರಲ್ಲೂ ಮಾರಮ್ಮನ ದೇವಾಲಯದ ಮುಂದೆ ಇದ್ದ ಮರಕ್ಕೆ ಒಂದು ವಿಶಿಷ್ಠವಾದ  ಸೊಬಗು ಮತ್ತು ಸೌಂದರ್ಯದ ಪರಿಣಾಮವಾಗಿ ಜನರು ಕೈಮುಗಿಯುವುದು ಪೂಜೆ ಮಾಡುವುದು ‌ನಡೆಯುತ್ತಲೇ ಇತ್ತು. ಈಗೀಗ ಜನರಲ್ಲಿ ಆ ಮರದ ಕುರಿತಾದ ಕಾಳಜಿ ಇನ್ನೂ ಹೆಚ್ಚಾಗಲು‌ ಶುರುವಾಯಿತು. ಹಿರಿಯೂರಿನ ಕೆಲ ಅಧಿಕಾರಿಗಳು ಬಂದು ಟೇಪ್ ಹಿಡಿದು ಅಳತೆ ಮಾಡಿ ಕೆಂಪು ಬಣ್ಣದ ಮೇಲೆ ಮನೆಗಳ ಮೇಲೆ ಪ್ಲಸ್ ರೀತಿಯಲ್ಲಿ ಗುರುತು ಮಾಡುವಾಗ ಕೆಲವರು ಯಾಕೆ ಎಂದು ವಿರೋಧಿಸಿ ಕೇಳಿದಾಗ "ನಮಗೇನು ಗೊತ್ತು ಸಾಹೇಬರು‌ ಹೇಳಿದರೆ ನಾವು ಹಾಕ್ತಿವಿ ಅಷ್ಟೇ" )ಊರಿನಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಪುಡಿರಾಜಕೀಯ ಮಾಡುವ  ರಾಜಶೇಖರ ಅಲಿಯಾಸ್ ರಾಜಿ ರಸ್ತೆ ಅಗಲ ಮಾಡುತ್ತಾರೆ (ಎನೊ ಯಾರೋ ಅಂಗಂದಿದ್ರ)ಈ ಶೆಟ್ಟರ ಅಂಗಡಿಗಳು ಮತ್ತು ಈ ಮರಗಳು ಹೋಗಬಹುದು ಅಂದ ಅಂದಿನಿಂದ .ಊರ‌ಮುಂದೆ ಕುಳಿತ ,ಮನೆಯಲ್ಲಿ ‌ಕುಳಿತ ಎಲ್ಲರ ಬಾಯಲ್ಲಿ ರಸ್ತೆಯ ಅಗಲ ಮಾಡುವ ಕುರಿತೇ ಮಾತು ಆಗಂತೆ ಈಗಂತೆ ಅವರ ಅಂಗಡಿ ಹೋಗುತ್ತಂತೆ ಇವರ ಅಂಗಡಿ ಅರ್ಧ ಹೋಗುತ್ತಂತೆ ಈ ಬೇವಿನ ಮರ ಹೋಗುತ್ತಂತೆ ಎಂದು ತಳ ಬುಡವಿಲ್ಲದ ಬರೀ ಅಂತೆ ಕಂತೆಗಳ ಸುದ್ದಿ ಯರಬಳ್ಳಿ ಮತ್ತು ಸುತ್ತ ಮುತ್ತಲಿನ ಜನರ ಬಾಯಲ್ಲಿ ‌ಹರಿದಾಡುತ್ತಿತ್ತು .ಅಂದಿನಿಂದ ಜನರಿಗೆ ಮಾರಮ್ಮನ ದೇವಾಲಯದ ಮುಂದಿರುವ ಮರದ ಮೇಲೆ ಒಂದು ರೀತಿಯ ಭಯ ಮತ್ತು ಭಕ್ತಿ ಮೂಡಿ ಜನರು ಆ ಮರದ ಹತ್ತಿರ ಹೋದಂತೆ ಭಾವುಕರಾಗುತ್ತಿದ್ದರು


ಮುಂದುವರೆಯುವುದು....

*ಸಿ ಜಿ ವೆಂಕಟೇಶ್ವರ*