27 ಮಾರ್ಚ್ 2020

ಬೊಂಬೆಗಳು ನಾವು ( ವಿಶ್ವ ರಂಗ ಭೂಮಿ ದಿನದ ಕವನ)

*ಬೊಂಬೆಗಳು ನಾವು*

(ಇಂದು ವಿಶ್ವ ರಂಗಭೂಮಿ ದಿನ)

ಜಗದ ರಂಗಭೂಮಿಯ
ಬೊಂಬೆಗಳು ನಾವು
ರಂಗನಾಡಿಸಿದಂತೆ
ಆಡುವ ಸೂತ್ರದ
ಬೊಂಬೆಗಳು ನಾವು.

ನವರಸವ ತೋರಿ
ನವನವೀನದಿ ನಟಿಸಿ
ನಮಗರಿಯದೆ
ನಮ್ಮವರ ತೊರೆದು
ನಾಮದ ಒಡೆಯನ
ಸೇರುವ ಬೊಂಬೆಗಳು ನಾವು.

ಅತಿಯಾಸೆ ಪಡುತ
ಮಿತಿಮೀರಿ ಮೆರೆದು
ಸತಿಸುತರ ನಂಬಿ
ಅತಿಪಾಪ ಮಾಡಿ
ಪತಿತ ಪಾವನನು
ಸ್ತುತಿಸುವ ಬೊಂಬೆಗಳು ನಾವು.

ನಾನಾ ವೇಷದ
ನಾನಾ ಭಾಷೆಯ
ನಾನಾ ಭಾವದ
ನಟನೆಯ ಮಾಡಿ
ನಾನತ್ವವ ತೊರೆದು
ನಾನೂ ನೀನು
ಅವನಲಿ‌ ಲೀನವಾಗುವ
ಬೊಂಬೆಗಳು ನಾವು.

*ಸಿ ಜಿ ವೆಂಕಟೇಶ್ವರ*
*ತುಮಕೂರು*




25 ಮಾರ್ಚ್ 2020

ಯುಗಾದಿV/s ಕರೋನ

*ಯುಗಾದಿv/sಕರೋನ (ಹನಿಗಳು)*

           *೧*
*ಯಡುದಾರ*

ಪ್ರತೀ ವರ್ಷಯುಗಾದಿ ಹಬ್ಬಕ್ಕೆ
ಹೊಸ ಬಟ್ಟೆಗಳನ್ನು ತೊಟ್ಟು
ವರ್ಣಿಸಲಸದಳ ಸಡಗರ
ಈ ವರ್ಷ ಕರೋನ ಪ್ರಭಾವ
ಬಟ್ಟೆ ಅಂಗಡಿಗೆ ಬೀಗ
ಕೊಳ್ಳಲಾಗಿಲ್ಲ ಒಂದು ಉಡುದಾರ.

         *೨*

*ಕರೋನ*

ಬಾಲ್ಯದಲ್ಲಿ ಉಗಾದಿ ಹಬ್ಬಕ್ಕೆ
ಬಟ್ಟೆ ತಂದರೂ ಸಮಯಕ್ಕೆ
ಕೊಡದೆ ಹಾಕಲಾಗುತ್ತಿರಲಿಲ್ಲ
ಹೊಸ ಬಟ್ಟೆಗಳನ್ನು ಕಾರಣ
ಟೈಲರ್ ರಾಮಣ್ಣ
ಈ ವರ್ಷವೂ ಹೊಸ ಬಟ್ಟೆ
ಇಲ್ಲದೇ ಉಗಾದಿ ನಡೆದಿದೆ
ಕಾರಣ ಕರೋನ

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಒಳಿತಾಗಲಿ ಸರ್ವತ್ರ (ಉಗಾದಿ ಹಬ್ಬದ ಶುಭಾಶಯಗಳು)

*ಒಳಿತಾಗಲಿ ಸರ್ವತ್ರ*

*ಉಗಾದಿ ಹಬ್ಬದ ಶುಭಾಶಯಗಳು*

ಬಂದಿದೆ ನವ ಸಂವತ್ಸರ ಶಾರ್ವರಿ
ಕರೋನ ಇದ್ದರೂ ಬೇಡ ವರಿ
ನಮ್ಮಾಚರಣೆಗಳು ಇದ್ದರೆ ಸರಿ
ಕಾಪಾಡುವನು ನಮ್ಮ ಶ್ರೀಹರಿ.

ಉಳಿಯಲೇ ಬೇಕು ಆಲಯದಿ
ಅಳಿಸಲೇ ಬೇಕು ಮಹಾವ್ಯಾಧಿ
ಆರೋಗ್ಯವಾಗಲಿ ನಮ್ಮ ನಿಧಿ
ಅಳಿಯಲಿ ರೋಗ ಈ  ಜಗದಿ.

ಮುಂಜಾಗ್ರತೆಯನು ಪಾಲಿಸೋಣ
ಮಾಹಾಮಾರಿಯ‌ ತೊಲಗಿಸೋಣ
ನಾವು ಬದುಕಿ ಇತರರ ಬದುಕಿಸೋಣ
ಸರ್ವರ ಸುಖವನು ಕೋರೋಣ .

ಸ್ವಚ್ಚತೆಯಾಗಲಿ ಮಹಾಮಂತ್ರ
ಪಠಿಸೋಣ ಮೃತ್ಯುಂಜಯಮಂತ್ರ
ಸಾಮಾಜಿಕ ಅಂತರ ಸರಿ ಸೂತ್ರ
ಶೀಘ್ರದಿ ಒಳಿತಾಗಲಿ ಸರ್ವತ್ರ .

*ಸಿ ಜಿ‌ ವೆಂಕಟೇಶ್ವರ*




23 ಮಾರ್ಚ್ 2020

ಗಜ಼ಲ್ ೬೧(ಬಾ ಇನಿಯ)

ಗಜ಼ಲ್ ೬೧

ತಲೆಬಾಗಿಲಲಿ ತಲೆಬಾಗಿ ನಿಂತಿಹೆನು ತಣಿಸಲು ಬಾ ಇನಿಯ
ನಗದೊಡನೆ ಮಿನುಗುತ ನಿಂತಿರುವೆ ನಗಿಸಲು ಬಾ ಇನಿಯ.

ವಡ್ಯಾಣ ಬಿಗಿಯಾಗುತಿದೆ ನಿನ್ನ ಲೀಲೆಗಳ  ನೆನದು
ಬಂಡಿಯಿಂದಿಳಿದು ವಿರಹ ವೇದನೆ ಬಿಡಿಸಲು ಬಾ ಇನಿಯ.

ರಂಗಿನ ಸೀರೆಯುಟ್ಟು ರಂಗವಲ್ಲಿ ಹಾಕಿರುವೆನು
ರಂಗಮಂಚದಿ ರಂಗಿನಾಟದಿ  ರಂಗೇರಿಸಲು ಬಾ ಇನಿಯ.

ಕಂಠೀಹಾರವೇಕೋ ನಿಲ್ಲುತ್ತಿಲ್ಲ ಏದುಸಿರು ಬಿಡುತಿಹೆ
ಬಿರಿದೆದೆಯ ಭಾರವನು  ಇಳಿಸಲು ಬಾ ಇನಿಯ.

ದುಂಡು ಮಲ್ಲಿಗೆ ಚಂದನದ ಸೌಗಂಧವಿದೆ ನನ್ನಲಿ
*ಸಿಹಿಜೀವಿ* ಯಾಗಿ ಚೆಂದುಟಿ ಚುಂಬಿಸಲು ಬಾ ಇನಿಯ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಮಾ(ದಾ)ನವ .


*ಮಾ(ದಾ)ನವ*

ನಾನು ಮಾನವ
ಕೆಲಗುಣಗಳಲಿ
ನಿಜಕ್ಕೂ ದಾನವ
ನನಗೆ ಸರಿಸಾಟಿಯುಂಟೆ
ಈ ಜಗದಿ, ಆರು ಸಮರು ಎನಗೆ
ನಾನೇ ಶ್ರೇಷ್ಠ ಈ ಜಗದಿ
ನನಗೆ ನಾನೇ ಸಮ
ಮಿಕ್ಕ ಜೀವಿಗಳು ತೃಣಕ್ಕೆ ಸಮ

ಜಗದೆತ್ತರದ ಬೆಟ್ಟ ಹತ್ತಿರುವೆ
ಚಂದಿರನ ಮೇಲೆ ಪಾದ ಇಟ್ಟಿರುವೆ
ಇಂದ್ರನ ಮೀರಿಸಿದ ವೈಭವ ಪಡೆದಿರುವೆ
ಮಂಗಳನ ಮುಟ್ಟಿ ಬಂದಿರುವೆ
ಸೂರ್ಯನ ಹಿಡಿಯಲು ಪ್ರಯತ್ನಿಸುತ್ತಿರುವೆ.
ನಾನು ಕಂಡುಹಿಡಿದಿರುವುದು
ಒಂದೇ ಎರಡೇ ನನ್ನನೇ ಹೋಲುವ
ನರ ,ಇತರೆ ಪ್ರಾಣಿ ,ರೋಬಾಟ್,
ನನ್ನ ಸಾಧನೆ ಅಲ್ಲವೇ ಬೊಂಬಾಟ್
ಸಿದ್ದನಾಗಿದ್ದೇನೆ ಆಡಲು ಬಾಂಬಿನಾಟ.

ಏನಿದ್ದರೇನು ಬಂತು
ನನ್ನ ಸೊಕ್ಕನಿಳಿಸಿದೆ
ಒಂದು ಸೂಕ್ಷ್ಮ ಜೀವಿ
ಪಾರಾಗುವ ಪರಿಯೆಂತು
ತಿಳಿಯುತ್ತಿಲ್ಲ.
ಆದರೂ ನಾನೇ ಹೆಚ್ಚೆಂಬ ಧಿಮಾಕು
ಕಡಿಮೆಯಾಗುತ್ತಿಲ್ಲ
ಏಕೆಂದರೆ ನಾನು
ಮಾ (ದಾ)ನವ.

*ಸಿ ಜಿ ವೆಂಕಟೇಶ್ವರ*
*ತುಮಕೂರು*