04 ಫೆಬ್ರವರಿ 2020

ಸ್ವಾಸ್ಥ್ಯ ಸಮಾಜ ನಿರ್ಮಿಸೋಣ( ಲೇಖನ)


ಸ್ವಾಸ್ಥ್ಯ ಸಮಾಜ ನಿರ್ಮಿಸೋಣ
ಕರ್ನಾಟಕದಲ್ಲಿ ಮಕ್ಕಳ ಅಪೌಷ್ಟಿಕತೆ ಗಣನೀಯವಾಗಿ ಕಡಿಮೆಯಾಗಿರುವ ವರದಿ ನೋಡಿ ತುಂಬಾ ಸಂತಸವಾಯಿತು.ಇಪ್ಪತ್ತೊಂದನೇ ಶತಮಾನದಲ್ಲಿ ನಾವಿದ್ದರೂ ವಿವಿಧ ಕ್ರಾಂತಿಗಳಾದ ಹಸಿರು ಕ್ರಾಂತಿ, ನೀಲಿಕ್ರಾಂತಿ,ಹಳದಿಕ್ರಾಂತಿ,ಶ್ವೇತ ಕ್ರಾಂತಿ ಮಾಡಿರುವೆವವು ಎಂದು ಕೊಚ್ಚಿಕೊಂಡರೂ ಇಂದು ಜಗದಲ್ಲಿ ಕೋಟ್ಯಾಂತರ ಜನರು ಬಡತನದಲ್ಲಿ ಇರುವುದು ವ್ಯವಸ್ಥೆಯನ್ನು ಮತ್ತು ಅಭಿವೃದ್ಧಿಯನ್ನು ಅಣಕಿಸಿದಂತೆ. ಅದರಲ್ಲೂ ಏನೂ ಅರಿಯದ ಕಂದಮ್ಮಗಳು ಅಪೌಷ್ಟಿಕತೆಯ ಕೂಪಕ್ಕೆ ಸಿಕ್ಕು ತಮ್ಮದಲ್ಲದ ತಪ್ಪಿನಿಂದ ವಿವಿಧ ರೋಗಗಳಿಂದ ಬಳಲುತ್ತಿರುವ ಮತ್ತು ಮರಣಹೊಂದುತ್ತಿರುವ ಚಿತ್ರಣ. ನಮ್ಮ ಕಣ್ಣ ಮುಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಶಾಕಿರಣ ಎಂಬಂತೆ ಕರ್ನಾಟಕದಲ್ಲಿ ಈ ವರ್ಷ ಅಪೌಷ್ಟಿಕತೆಯ ಪ್ರಮಾಣ 0.33 ಕಡಿಮೆಯಾಗಿದೆ. ನೋಡಲು ಈ ಆನುಪಾತ ಚಿಕ್ಕದು ಎಂದು ಕಂಡರೂ 2015 ರಲ್ಲಿ ರಾಜ್ಯದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆ 21652 ರಿಂದ ಈ ವರ್ಷದ ಹೊತ್ತಿಗೆ 11265 ಕ್ಕೆ ಕಡಿಮೆಯಾಗಿದೆ ಇದು ಗಮನಾರ್ಹವಾದ ಬೆಳವಣಿಗೆ ಈ ದಿಸೆಯಲ್ಲಿ ಕಾರ್ಯಪ್ರವತ್ತವಾದ ಸರ್ಕಾರಗಳು ಸರ್ಕಾರೇತರ ಸಂಘ ಸಂಸ್ಥೆಗಳು, ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಅಭಿನಂದನಾರ್ಹರು. ಅನ್ನಭಾಗ್ಯ,ಕ್ಷೀರಭಾಗ್ಯ,ಸೃಷ್ಟಿ ಯೋಜನೆ, ವೈದ್ಯಕೀಯ ವೆಚ್ಚ ಯೋಜನೆಗಳ ಫಲ ಈ ಸಕಾರಾತ್ಮಕ ಬೆಳವಣಿಗೆ.ಆದರೂ ಬೆಳಗಾವಿಯಲ್ಲಿ1249 ಮಕ್ಕಳು, ಬಳ್ಳಾರಿಯಲ್ಲಿ 1134  ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ವರದಿ ಅತಂಕ ತರುವ ಅಂಶವಾಗಿದೆ.ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಅಪೌಷ್ಟಿಕತೆಯ ಹೋಗಲಾಡಿಸಲು ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ. ಇದರ ಜೊತೆಗೆ ಸಮರ್ಪಕವಾಗಿ ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾದರೆ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯು ಕಡಿಮೆಯಾಗುತ್ತದೆ ತನ್ಮೂಲಕ ಸ್ವಾಸ್ಥ್ಯ ಜನತೆ ಸ್ವಾಸ್ಥ್ಯ ಸಮಾಜದ ಪರಿಕಲ್ಪನೆಯನ್ನು ಸಾಕಾರ ಮಾಡಬಹುದು.
ಸಿ ಜಿ ವೆಂಕಟೇಶ್ವರ

29 ಜನವರಿ 2020

ನಾರಾಯಣನಾಗುವ ಬಯಕೆ(ಚಿತ್ರ ಕವನ)

*ನಾರಾಯಣನಾಗುವ ಬಯಕೆ*

ನಾನೂ ಒಬ್ಬ ನರ.
ಮೊದಲು ನಾನೂ
ಸಹ ಮರದಂತೆ
ಹಸಿರಾಗಿದ್ದೆ ಉಸಿರಾಗಿದ್ದೆ
ನೆರಳಾಗಿದ್ದೆ,ಪರೋಪಕಾರಿಯಾಗಿದ್ದೆ.
ನಿಸ್ವಾರ್ಥಿಯಾಗಿದ್ದೆ ,ಲವಲವಿಕೆಯಿಂದಿದ್ದೆ.

ನನ್ನಲ್ಲಿ ಆಸೆ ಚಿಗುರೊಡೆದು,
ಅತಿಯಾಸೆ ಕವಲೊಡೆದು
ಅಮಾನವೀಯ ಗುಣಗಳುದಿಸಿ,
ಮೃಗೀಯಗುಣಗಳು ಬೆಳೆದು,
ರಾಕ್ಷಸ ಗುಣಗಳ ನರ್ತನವಾಡಿ
ದುರ್ಗುಣಗಳ ಗಣಿಯಾಗಿ
ಸದ್ಗುಣಿಗಳ ಕಂಡರೂ ಕಾಣದೆ,
ನಾನು ನನ್ನಿಂದ ಎಂಬ ಅಹಂ
ಬೆಳೆದು, ಒಳಿತು ರುಚಿಸದೆ,ಕೆಡುಕುಗಳ
ಅಧಿಪತಿಯಾದೆ.

ನಾನೀಗ ಕೃಷಕಾಯದ ನರ
ನರಮೂಳೆಗಳು ಮಾತ್ರವಿರುವ
ಸತ್ವವಿರದ ನಿಸ್ಸತ್ವ ಜೀವಿ
ಜೀವಿಸಲು ಕೊರಗುತಿರುವ
ಹೆಣವಾಗಲು ಹೆಣಗುತಿರುವ
ಮಣಭಾರದ ಪಾಪದ ಮೂಟೆಹೊತ್ತ,
ನತದೃಷ್ಟ ನರ ನಾನು.

ಈ ಜನ್ನಮದಲಿ ಉತ್ತಮ ನರನಾಗಲಿಲ್ಲ
ನಾರಾಯಣನ ದಯವಿದ್ದರೆ
ಮುಂದಿನ ಜನ್ಮದಿ? ನರ ರೂಪದ ನಾರಾಯಣನಾಗುವ ಬಯಕೆ.

*ಸಿ ಜಿ ವೆಂಕಟೇಶ್ವರ*


ದಂಡಂ ದಶಗುಣಂ (ಲೇಖನ)

*ದಂಡಂ ದಶಗುಣಂ*

ನೂರಾರು ವರ್ಷಗಳಿಂದ ಅಪಘಾತಗಳ ತಡೆಯಲು ಸರ್ಕಾರ ,ಸರ್ಕಾರೇತರ ಸಂಘ ಸಂಸ್ಥೆಗಳು ವಿವಿಧ ಪ್ರಯತ್ನಗಳನ್ನು ಮಾಡಿದಾಗಲೂ ಅಪಘಾತಗಳ ಸಂಖ್ಯೆ ಇಳಿಮುಖದ ಹಾದಿ ಹಿಡಿಯಲೇ ಇಲ್ಲ. ಬದಲಾಗಿ ಅಪಘಾತಗಳ ಸಂಖ್ಯೆ ದುಪ್ಪಟ್ಟು ಆದವು.ಅಮೂಲ್ಯ ಜೀವಗಳು ಅಪಘಾತದಲ್ಲಿ ಮರೆಯಾದವು.ಸಾವಿರಾರು ಕುಟುಂಬಗಳು ಅನಾಥರಾದವು ಲೆಕ್ಕವಿಲ್ಲದಷ್ಟು ಜನ ಶಾಶ್ವತವಾಗಿ ಅಂಗವಿಕಲರಾದರು.  ಇದನ್ನು ಮನಗಂಡ ಸರ್ಕಾರವು ನಮ್ಮ ಜನರಿಗೆ ಬಾಯಿ ಮಾತಿನಲ್ಲಿ ಜಾಗೃತಿ ಮೂಡಿಸಿದರೆ ಸಾಲದು ದಂಡಂ ದಶಗುಣಂ ಎಂಬ ಅಸ್ತ್ರ ಪ್ರಯೋಗ ಮಾಡೊಯೇ ಬಿಟ್ಟಿತು. ಇದಕ್ಕೆ ಕಾನೂನಿನ ಬೆಂಬಲ ನೀಡಿ ಮೋಟಾರು ವಾಹನ ಕಾಯ್ದೆ ಜಾರಿಗೆ ತಂದಿತು .
ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ಅಪಘಾತ ತಡೆಯಲು ದಂಡವೊಂದೆ ಮಾನದಂಡವೆ?
ಹೌದು ಎಂದು ಸಾರುತ್ತಿವೆ ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶಗಳು.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ನಿಯಮ ಮೀರಿ  ಸರಕು ಸಾಗಣೆ ಮಾಡಿ ಅಪಘಾತ ಮಾಡುವ ವಾಹನಗಳ ಸಂಖ್ಯೆ ಇಳಿಮುಖವಾಗುತ್ತದೆ.
ದಂಡಕ್ಕೆ ಹೆದರಿ ಜನರು ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸುವುದರಿಂದ ಅಮೂಲ್ಯವಾದ ಜೀವಗಳು ಉಳಿಯುತ್ತಿವೆ.
ಅಪ್ರಾಪ್ತ ವಯಸ್ಕ ಮಕ್ಕಳು ವಾಹನ ಚಲಾಯಿಸುವುದು ಕಡಿಮೆಯಾಗುತ್ತದೆ. ಇದರಿಂದ ಅಪಘಾತದ ಪ್ರಮಾಣದಲ್ಲಿ ಇಳಿಮುಖವಾಗುತ್ತಿವೆ.
ದಂಡಕ್ಕೆ ಹೆದರಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದರಿಂದ  ೫೦% ಅಪಘಾತಗಳು ಕಡಿಮೆಯಾಗುತ್ತಿವೆ.

ಒಟ್ಟಿನಲ್ಲಿ ಸ್ವಇಚ್ಛೆಯಿಂದ ಮಾಡಲಾಗದ ಜಾಗೃತಿ ಆಂದೋಲನದಡಿ ಮಾಡಲಾಗಾದ ಕಾರ್ಯವನ್ನು ಸರ್ಕಾರದ ಕಾನೂನು ಮತ್ತು ದಂಡದ ಭಯವು ಮಾಡಿದೆ. ಇದರ ಪರಿಣಾಮ ಸಕಾರಾತ್ಮಕವಾಗಿ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆ.

*ಸಿ ಜಿ ವೆಂಕಟೇಶ್ವರ*

24 ಜನವರಿ 2020

ರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

*ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು*

ರಂಗನಾಥ ಸ್ವಾಮಿಯವರಂತೆ
ಹರಸಿದ "ರಂಗಜ್ಜಿ".
ಹೆತ್ತು ಹೊತ್ತುಸಾಕಿ ಸಲಹಿ
ಸಿರಿದೇವಿಯಂತೆ  ಕಾಯುವ "ಶ್ರೀದೇವಮ್ಮ".
ನನ್ನ ಬಾಳಲಿ ಕವಿತೆಯಾಗಿ ಬಂದ "ಕವಿತ*.
ಶೋಭಾಯಮಾನವಾಗಿ ನನ್ನ ಜೀವನ
ಬೆಳಗಲು ಬಂದ ನನ್ನ ಮೊದಲ ಲಕ್ಷ್ಮಿ "ಶೋಭಿತ".
ಮಳೆಯಿಂದ ಮನ ಉಲ್ಲಸಿತವಾಗುವಂತೆ
ಬಂದ ನನ್ನ ಎರಡನೇ ಲಕ್ಷ್ಮಿ" ವರ್ಷಿತ".

ಇವರೆಲ್ಲರಿಗೂ ಮತ್ತು ಜಗದ ಎಲ್ಲಾ ಹೆಣ್ಣು ಮಕ್ಕಳಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು.

*ಸಿ.ಜಿ ವೆಂಕಟೇಶ್ವರ*