07 ಏಪ್ರಿಲ್ 2019

ಗಜಲ್ ೫೬(ಸಾವು)

   
*ಗಜ್ಹಲ್ ೫೬*
ಸಾಸಿರ ಕೋಟಿಗಳ ಒಡೆಯನಿಗೆ ತಪ್ಪದು ಸಾವು
ಸಾಧು ಸಂತರಿಗು ಬಿಡದೆ  ಬಪ್ಪುದು ಸಾವು .

ಬಡವ ಬಲ್ಲಿದ ಮೇಲು‌ಕೀಳು‌ ನೋಡುವುದಿಲ್ಲ
ಸಮಾನತೆಯ ಸಂದೇಶ ಸಾರಲು ಬರುವುದು ಸಾವು.

ಬೆಳಗಾದ ಮೇಲೆ ಮಧ್ಯಾಹ್ನ ಸಂಜೆಯಾಗಲೇಬೇಕು
ಕರುಣಾಮಯಿಗಳಿಗೂ ಕರುಣೆ ತೋರದೆ ಆಗಮಿಸುವುದು ಸಾವು.

ಬರಿಗೈಲಿ ಬಂದರೂ ಕೈ ತುಂಬಾ ಸಂಪತ್ತು ಸಂಪಾದನೆಯ ಜಪ
ಆರಡಿ ಮೂರಡಿ‌ ತಾಣವ ಸೇರಿಸಲು ಬರದೇ ಇರದು ಸಾವು.

ದೇವತೆಗಳಂತೆ ಅಮರನಾಗಲು‌‌ ಸಿಹಿಜೀವಿಗೂ ಹಂಬಲ
ಕಾಲನು ಕರೆ ಮಾಡಲು ಮನೆ ಬಾಗಿಲಲಿ ನಿಲ್ಲುವುದು ಸಾವು.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


ಯುಗಾದಿ (ಹನಿ)

       
*ಯುಗಾದಿ*

 ಜಗವೆಲ್ಲಾ ಸಂತಸದಿ ಆಚರಿಸಿದೆ *ಯುಗಾದಿ*
ಈ ರಾಜಕಾರಣಿಗಳಿಗೆ ಒಂದೇ ಚಿಂತೆ ಯಾವಾಗ ಸಿಗುವುದು *ಗಾದಿ*

26 ಮಾರ್ಚ್ 2019

ಪುರಸ್ಕಾರ ಮಾಲೆ(ಚಿತ್ರ ಕವನ)

*ಪುರಸ್ಕಾರದ ಮಾಲೆ*

ಓದಬೇಕು ನಾನೀಗ
ತಿಳಿಯಲು ಈ ಜಗ
ಬರೆದುಕೊಳ್ಳಬೇಕು
ನನ್ನ ಹಣೆಬರಹ ನಾನೇ
ಕಾಲಿಲ್ಲದಿದ್ದರೂ ನಿಲ್ಲಬೇಕು
ನನ್ನ ಕಾಲ ಮೇಲೆ
ಸಾಧಿಸಿದ ನನ್ನ ಕೊರಳಿಗೆ
ಬಿದ್ದೇ ಬೀಳುವುದು
ಪುರಸ್ಕಾರದ ಮಾಲೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

25 ಮಾರ್ಚ್ 2019

*ಗಜಲ್೫೫(ಬಾ ಮಳೆಯೇ ಬಾ)

         *ಗಜಲ್*

ಧರೆಯತ್ತಿ ಉರಿಯುತಿದೆ ವರ್ಷವೆ ಬಾ
ತಿರೆಯ ಜೀವಿಗಳು ತತ್ತರಿಸಿವೆ ಪರ್ಜನ್ಯವೆ ಬಾ .

ಉತ್ತರೀಯ ನೆನೆಸಲೂ ಜಲವಿಲ್ಲ ಇಲ್ಲಿ
ಬಾಯಾರಿಕೆಗೆ ಉತ್ತರಿಸುವ ಉತ್ತರವೆ ಬಾ.

ನೊಗವ ಹೂಡಿಲ್ಲ ರೈತರು ನೀ ಬರದೆ
ಮೊಗೆದರೂ ಮುಗಿಯದ ಮಘವೆ ಬಾ .

ಹರಿಣಗಳಾದಿಯಾಗಿ ಮೃಗಗಳಿಗೆ ಜಲವಿಲ್ಲ
ಜೀವರಾಶಿಗಳ ರಕ್ಷಕ ಮೃಗಶಿರವೆ ಬಾ .

ಹಸ್ತತೊಳೆಯಲು ನೀರಿಲ್ಲ ಎಲ್ಲೆಡೆಯೂ
ಸೀಹಿಜೀವಿಗಳ ಜೀವನಾಡಿ ಹಸ್ತಚಿತ್ತವೆ ಬಾ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





23 ಮಾರ್ಚ್ 2019

ಗಜಲ್ ೫೪(ನನ್ನ ಶಿಕ್ಷಕ)


         *ಗಜಲ್೫೪*


ಕನಸು ಕಾಣಲು ಹೇಳಿಕೊಟ್ಟವನೇ ನನ್ನ ಶಿಕ್ಷಕ,
ನನಸಾದ ನನ್ನ ಗುರಿಗಳ ತಲುಪಿಸಿದವನೇ ನನ್ನ ಶಿಕ್ಷಕ .

ದೇವರು ಕಣ್ಣಿಗೆ ಕಾಣುವುದು ಅಪರೂಪ,
ಶಿವನ ಸ್ವರೂಪಿಯಾಗಿ ಕ್ಷಕಿರಣ ಬೀರಿದವನೇ ನನ್ನ ಶಿಕ್ಷಕ

ಕೆಡಲು ನೂರು ದಾರಿಗಳು ಆಧುನಿಕ ಜಗದಿ,
ಬದುಕಲು ಮಾರ್ಗದರ್ಶನ ನೀಡಿದವನೇ ನನ್ನ ಶಿಕ್ಷಕ.

ಸಮಾಜ ತಿದ್ದುವವರು ಬಹಳಿಲ್ಲ ಭವದಿ ,
ಸಾಮ ದಾನ ಭೇದ  ದಂಡಗಳಲಿ ಕಲಿಸಿದವನೇ ನನ್ನ ಶಿಕ್ಷಕ.

ಸೀಜೀವಿಯು ಅಂಧಕಾರದಲ್ಲಿದ್ದು ತೊಳಲುತಲಿದ್ದನು ,
ಜ್ಞಾನದ ಪಂಜನಿಡಿದು ಬಾಳ ಬೆಳಗಿಸಿದವನೇ ನನ್ನ ಶಿಕ್ಷಕ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*