07 ಮಾರ್ಚ್ 2019

ಅರಿಯಬೇಕಿದೆ (ಕವನ)

*ಅರಿಯಬೇಕಿದೆ*

ಪ್ರಾಮಾಣಿಕತೆ ಶಾಂತಿ ಸಹಕಾರ ದಯೆ
ಎಲ್ಲಿವೆ  ದುರ್ಬೀನು ಹಾಕಿ ಹುಡುಕಬೇಕಿದೆ
ಕಳೆದ ದಿನಗಳ ಗತ ಕಾಲ ಮರಳಬೇಕಿದೆ
ಮೌಲ್ಯಗಳ ಎಲ್ಲರೂ ಪಾಲಿಸಬೇಕಿದೆ.

ಬರೀ ಗಂಡು ಹೆಣ್ಣಿನ ಆಕರ್ಷಣೆ
ಸಂಕುಚಿತ ಅರ್ಥದ ಕಾಮವೇ
ಪ್ರೀತಿಯಲ್ಲ ಪ್ರತಿಫಲಾಪೇಕ್ಷೆ ಇಲ್ಲದೇ
ಸಕಲರ ಪ್ರೀತಿಸುವ ಮೌಲ್ಯ ಇಂದು ಎಲ್ಲರೂ ಕಲಿಯಬೇಕಿದೆ

ಪ್ರಾಣಿ ಪಕ್ಷಿಗಳ ಹಿಂಸೆ ಎಲ್ಲೆಡೆ
ಪ್ರಾಣಿಗಳು ನಿಕೃಷ್ಟ ಎಂಬ ನಡೆ
ಭುವಿ ಕೇವಲ ಮಾನವನದಲ್ಲ
ದುರಾಸೆಯಿಂದ ಮೆರೆಯುತಿಹನಲ್ಲ
ದಯವಿಲ್ಲ ಸಕಲ ಜೀವಿಗಳಲಿ
ಕರುಣೆಯ ಮೌಲ್ಯವ ಪಾಲಿಸಬೇಕಿದೆ.

ಅಸಹನೆಯಿಂದ ಕುದಿಯುತಿದೆ ಜಗ
ಅನಾಹುತಗಳು ಸಾಮಾನ್ಯ ಆಗಾಗ
ಸಹನೆಯ ಮೂರ್ತಿ ನಮ್ಮಮ್ಮನಿಂದ ಕಲಿಯಬೇಕಿದೆ
ಭೂತಾಯಿಯ ಸಹನಾ ಮೌಲ್ಯ ಅರಿಯಬೇಕಿದೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





06 ಮಾರ್ಚ್ 2019

ವಿಚಾರಣೆ (ಸಣ್ಣ ಕಥೆ)

               ಸಣ್ಣ ಕಥೆ

*ವಿಚಾರಣೆ*

ಈ ಮೊಬೈಲ್ ಯುಗದಲ್ಲಿ
ಅಪರೂಪಕ್ಕೊಮ್ಮೆ ಲ್ಯಾಂಡ್ ಲೈನ್ ರಿಂಗ್ ಆದಾಗ ಮುಖ್ಯ ಶಿಕ್ಷಕರಾದ ಮಾರುತಿಯವರು ರಿಸೀವರ್ ಎತ್ತಿ ಹಲೋ ಎಂದು
"ರೀ ತಿಮ್ಮಯ್ಯ ಆ ರಮೇಶ್ ಮಾಸ್ಟರ್‌ ನಂತೆ ಕರೀರಿ ಅವರಿಗೆ ಪೋನ್ ಇದೆ " ಎಂದು ರಾಮಣ್ಣನಿಗೆ ಹೇಳಿದರು.
ರಮೇಶ್‌ ಮಾಸ್ಟರ್ ಬಂದು ಹಲೋ ಎಂದು ರಿಸೀವರ್ ಗೆ ಕಿವಿಗೊಡುತ್ತಲೇ ಆ ಕಡೆಯಿಂದ ಬಂದ ಗಡಸು ಧ್ವನಿ " ನಾನು ಬಾಗಲಕೋಟೆ ಎಸ್.ಪಿ ಆಪೀಸ್ ನಿಂದ ಮಾತನಾಡುತ್ತಾ ಇದ್ದೇನೆ" ಎಂದಿತು  ಈ ಮಾತು ಕೇಳುತ್ತಲೇ ಸಣ್ಣಗೆ ಬೆವರಲು ಆರಂಬಿಸಿದ ರಮೇಶ್ ಭಯದಿಂದ "ಯಾಕೆ ಸರ್" ಎಂದ ಅದನ್ನೆಲ್ಲ ಡಿಟೈಲ್ ಆಗಿ ಹೇಳ್ತಿನಿ ಮೊದಲು ನಿಮ್ಮ ಮೊಬೈಲ್ ನಂಬರ್ ಹೇಳಿ " ಎಂದಿತು‌ ಧ್ವನಿ ತೊದಲುತ್ತಲೇ ಮೊಬೈಲ್ ನಂಬರ್ ಹೇಳಿದ ನಂತರ ಫೋನ್ ಕಟ್ ಆಯಿತು.
"ಯಾರ್ರಿ ಅದು‌"ಎಂದರು ಮುಖ್ಯ ಶಿಕ್ಷಕರು "ಗೊತ್ತಿಲ್ಲ ಸಾರ್ ಆಮೇಲೆ ಮಾಡ್ತಾರಂತೆ" ಎಂದು ಭಯದಿಂದ ಮತ್ತು ಚಿಂತಿಸುತ್ತಾ ಸ್ಟಾಪ್ ರೂಮ್ ಗೆ ಹೋಗಿ ಮೊಬೈಲ್ ಗೆ ಕರೆ ಯಾವಾಗ ಬರುವುದೋ? ಏನು ಕಾದಿದೆಯೋ ?ಎಂದು ಗಲ್ಲಕ್ಕೆ ಕೈಹೊತ್ತು ಚಿಂತಿಸುತ್ತಾ ಕುಳಿತರು.

ತಲೆಯಲ್ಲಿ ಏನೋನೋ ಕೆಟ್ಟ ವಿಚಾರಗಳು ದುತ್ತೆಂದು ಬಂದು ಕಾಡಲಾರಂಬಿಸಿದವು ಬೆಳಿಗ್ಗೆ ದಿನಪತ್ರಿಕೆಗಳಲ್ಲಿ " ವಾಟ್ಸಪ್ ಅವಹೇಳನ ಗುಂಪಿನ ಅಡ್ಮಿನ್ ಸರ್ಕಾರಿ ನೌಕರನ  ಬಂಧನ" ಎಂದು ಓದಿದ್ದು ನೆನಪಾಗಿ
ಪೋಲೀಸ್ ಬಂದು‌ ನನ್ನ ‌ಅರೆಸ್ಟ್ ಮಾಡಿದರೆ ನನ್ನ ಮರ್ಯಾದೆ ಏನಾಗಬೇಡ? ಎಂದು  ತಾನು ಅಡ್ಮಿನ್ ಆಗಿರುವ ಗುಂಪು ತೆರೆದು ನೋಡಿದ ಯಾವುದೇ ಅಂತಹ ಪೋಸ್ಟ್ ಇರಲಿಲ್ಲ. ಕೊಂಚ ಸಮಾಧಾನವಾಯಿತು.ಆದರೂ ಯಾಕೆ ಎಸ್ ಪಿ ಆಫೀಸ್‌ ನಿಂದ ಪೋನ್ ಬಂತು ?ಎಂದು ಯೋಚಿಸುತ್ತಿರುವಾಗ ಬೆಳಿಗ್ಗೆ ತನ್ನ  ಪೇಸ್ ಬುಕ್ನ ಗೋಡೆಯಲ್ಲಿ "ಪಾಪಿ ಪಾಕಿಗಳೆ ನಮ್ಮ ಕೆಣಕಿದ್ದೀರಿ ನಿಮಗಿದೆ ಗತಿ " ಎಂದು ಸ್ಟೇಟಸ್ ಹಾಕಿದ್ದಾಗ ಗೆಳೆಯ ಜಬಿ ಆ ರೀತಿಯಲ್ಲಿ ಪೋಸ್ಟ್ ಮಾಡುವುದು ಒಳಿತಲ್ಲ‌ಎಂದಿದ್ದ ಅದೇ ಏನಾದರೂ ತಪ್ಪಾಯಿತೇ? ಛೆ ಇನ್ನು ಮುಂದೆ ಈ ವಾಟ್ಸಪ್, ಪೇಸ್ಬುಕ್  ಟ್ವಿಟರ್ ಸಹವಾಸ ಬೇಡ ನಾಳೆಯೇ ಎಲ್ಲಾ ಅನ್ಇನ್ಸ್ಟಾಲ್ ಮಾಡಿ ನೆಮ್ಮದಿಯಾಗಿರಬೇಕು  ಎಂದು ಭಯದಿಂದ ಏನೋನೋ ಯೋಚಿಸುತ್ತಾ .ಆ ಪೋನ್ಗೆ ಕಾಯ್ತಾ ಕುಳಿತರು ಇತರ ಸಹೋದ್ಯೋಗಿಗಳು "ಯಾಕ್ ಸರ್ ಡಲ್ ಆಗಿದ್ದೀರಿ" ಎಂದಾಗ ಏನೂ ಇಲ್ಲ ಎಂದು ನಟಿಸಲು ಪ್ರಯತ್ನ ಪಟ್ಟರು.

ಮೊಬೈಲ್ ಪೋನ್ ರಿಂಗಾಯಿತು ಭಯದಿಂದ ಪೋನ್ ರಿಸೀವ್ ಮಾಡಿದ ರಮೇಶ್ ಹಲೋ ಎಂದರು . ಆ ಕಡೆಯಿಂದ " ನಾನು ಬಾಗಲಕೋಟೆ ಎಸ್ .ಪಿ‌ ನನ್ನ ಮಗಳಿಗೆ ಗಂಡು ಹುಡುಕುತ್ತಾ ಇದ್ದೇವೆ ಚಿಕ್ಕಬಳ್ಳಾಪುರ ದಲ್ಲಿ ನಮ್ಮ ಜಾತಿಯ ಒಳ್ಳೆಯ ವರ ಇರುವನಂತೆ ನಿಮ್ಮ ಸ್ನೇಹಿತರಾದ ಅಮರಾವತಿ ತಿರುಪತಿ ರವರು ನಿಮ್ಮ ಶಾಲೆಯ ನಂಬರ್ ಕೊಟ್ಟು ನಿಮ್ಮ ಹೆಸರು ಹೇಳಿದರು ದಯವಿಟ್ಟು ಆ ವರನ ಬಗ್ಗೆ ಮಾಹಿತಿ ಕಲೆ ಹಾಕಿ ಹೇಳಿದರೆ ಮಹದುಪಕಾರವಾಗುತ್ತದೆ " ಎಂದರು.
ರಮೇಶ್ಗೆ  ಹೋದ ಜೀವ ಬಂದಂತಾಯಿತು .ತನ್ನ ಸ್ನೇಹಿತನ ಬೈದುಕೊಂಡು ಆಯ್ತು ಸರ್ ಪೋನ್ ಮಾಡುವೆ ಎಂದು ಪೋನ್ ಕಟ್ ಮಾಡಿ ಸೀಮೇ ಸುಣ್ಣ ತೆಗೆದುಕೊಂಡು ತರಗತಿಗೆ ಹೊರಟರು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಮಾರ್ಚ್ 2019

*ಅಮರ ಪ್ರೇಮಿಗಳಾಗೋಣ (ಕವನ)

                    *ಅಮರ ಪ್ರೇಮಿಗಳಾಗೋಣ*

ಬಾರೆ ದೂರಕೆ ಹೋಗೋಣ
ಹೋಗಿ ಕುಣಿದು ನಲಿಯೋಣ
ಯಾರೂ ಇಲ್ಲದ ತಾಣಕೆ ಹೋಗಿ
ಮಧುಚಂದ್ರವ ಆಚರಿಸೋಣ

ಚಂದಿರನೂರಿಗೆ ಹೋಗೋಣ
ತಂಪಿನ‌ ನಾಡಲಿ ಕುಣಿಯೋಣ
ಬೆಳದಿಂಗಳ ಬೆಳಕಲಿ‌ ನಲಿಯೋಣ
ಪ್ರೇಮದ‌ ತೋರಣ ಕಟ್ಟೋಣ

ತಾರೆಗಳೂರಿಗೆ ಜಿಗಿಯೋಣ
ಜಗ ಮಗ ಬೆಳಕಲಿ‌ ಮಿಂಚೋಣ
ತಾರಾ ಮೆರಗನು ಪಡೆಯೋಣ
ಒಲವಿನ‌ ಸಿಹಿಯನು ಸವಿಯೋಣ

ಸ್ವರ್ಗಕ್ಕೆ ಹಾರಿ ಜಿಗಿಯೋಣ
ಕಲ್ಪವೃಕ್ಷವ ನೋಡೋಣ
ಪ್ರೇಮದ ವರವನು ಪಡೆಯೋಣ
ಅಮರ ಪ್ರೇಮಿಗಳಾಗೋಣ

*ಸಿ .ಜಿ ವೆಂಕಟೇಶ್ವರ*
*ಗೌರಿಬಿದನೂರು*




04 ಮಾರ್ಚ್ 2019

ನೀರು (ಕವನ)

       *ನೀರು*

ಎಲ್ಲೆಡೆ ಘೋಷಣೆ
ಮನೆಗೊಂದು ಮರ
ಊರಿಗೊಂದು ವನ.
ಬರೀ ಘೋಷಣೆ ಅಲ್ಲ
ಇದು ಜಾರಿಗೆ ಬಂದಿದೆ
ಕಾಡಿನ ಒಂದು ಮರ
ಕಡಿದರೆ ಮೂರು ನೆಟ್ಟರು.

ಮರಳು ಗಣಿಗಾರಿಕೆ
ಸಂಪೂರ್ಣ ಸ್ತಬ್ಧ
ಸಕಾಲಕ್ಕೆ ಮಳೆ ಬಂದು
ಕೆರೆ ಕಟ್ಟೆ ತುಂಬಿವೆ
ಒರತೆ ತೋಡಿದರೆ
ಕುಡಿವ ನೀರು ಲಬ್ಯ

ಸಸ್ಯ ಪ್ರಾಣಿ ಸಂಕುಲಗಳು
ಸಮೃದ್ಧಿಯಿಂದ ಜೀವಿಸುತ್ತಿವೆ
ಜೀವಿಗಳಿಗೆ ಜಲ ಅಪಾರವಾಗಿದೆ
ಅಕ್ಷರಶಃ ಜೀವಜಲ

ರಾಜ್ಯಗಳು ನೀರಿಗಾಗಿ
ಕಚ್ಚಾಡುತ್ತಿಲ್ಲ ಬಡಿದಾಡುತ್ತಿಲ್ಲ
ಎಲ್ಲರೂ ಸಮರಸದಿಂದ ಸಹಬಾಳ್ವೆ
ಮಾಡುತ್ತಿದ್ದಾರೆ .
ಎಷ್ಟೋ ದೇಶಗಳ ಜಲವಿವಾದಗಳು
ಬಗೆಹರಿದಿವೆ.
ವಿಶ್ವ ಶಾಂತಿಗೆ ಮುನ್ನುಡಿ
ಬರೆದಿದೆ.
ಇದರ ಫಲಶೃತಿ ಜಗದಾನಂದ .

ರೀ ಕುಡಿಯಾಕೆ ನೀರಿಲ್ಲ
ಎದ್ದೇಳ್ರಿ ಎಂದು ನನ್ನವಳು
ಕೂಗಿದಾಗ ಎದ್ದು ಖಾಲಿ
ಬಿಂದಿಗೆ ತೆಗೆದುಕೊಂಡು
ಮೂರು ಕಿಲೋಮೀಟರ್
ದೂರಕ್ಕೆ ಹೋಗಿ
ನೀರು ತರಲು ಅಣಿಯಾದೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




ಶಿವ ಶಿವ ಎನ್ನೋಣ (ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು)

   *ಶಿವ ಶಿವ ಎನ್ನೋಣ*

ಶಿವ ಶಿವ ಎನ್ನೋಣ
ಹರ ಹರ ಎನ್ನೋಣ

ಅಣ್ಣಾಮಲೆಯಲಿ ನೆಲೆಸಿರುವ
ಅರುಣಾಚಲೇಶ್ವರಗೆ
ಶಿವ ಶಿವ ಎನ್ನೋಣ

ಗೋಕರ್ಣದಲಿ‌ ಹರಸುತಿಹ
ಗೋಕರ್ಣೇಶ್ವರಗೆ
ಹರ ಹರ ಎನ್ನೋಣ

ಧರ್ಮಸ್ಥಳದಲಿ ನೆಲೆಸಿರುವ
ಮಜುನಾಥ ಸ್ವಾಮಿಗೆ
ಶಿವ ಶಿವ ಎನ್ನೋಣ

ವಾರಣಾಸಿಯಲಿ ನಿಂತಿರುವ
ಕಾಶಿವಿಶ್ವೇಶ್ವರನಿಗೆ
ಹರ ಹರ ಎನ್ನೋಣ

ಶ್ರೀಶೈಲದ ನೆಲೆಸಿರುವ
ಮಲ್ಲಿನಾಥ ಸ್ವಾಮಿಗೆ
ಶಿವ ಶಿವ ಎನ್ನೋಣ

ಕಠ್ಮಂಡುವಲಿ‌ ನಿಂತಿರುವ
ಪಶುಪತಿನಾಥಗೆ
ಹರ ಹರ ಎನ್ನೋಣ



*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*