04 ಡಿಸೆಂಬರ್ 2018

ಅವಕಾಶ ಕೊಡಿ (ಚುಟುಕು)

               *ಅವಕಾಶ ಕೊಡಿ*

ಅಬಲರು ನಾವಲ್ಲ ಭಿಕ್ಷುಕರು ಅಲ್ಲವೇ ಅಲ್ಲ
ಚೇತನವಿರುವ ವಿಶೇಷ ಚೇತನರು ನಾವು
ಕರುಣೆ ತೋರಿ ಕಂಬನಿ ಮಿಡಿಯುವುದು ಬೇಡ
ಅವಕಾಶ ಕೊಟ್ಟ ಪ್ರೋತ್ಸಾಹಿಸಿ ನೋಡಿ ನೀವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 ಡಿಸೆಂಬರ್ 2018

ಪ್ರೋತ್ಸಾಹಿಸಿ ( ವಿಶ್ವ ವಿಕಲಚೇತನ ದಿನಾಚರಣೆಯ ಪ್ರಯುಕ್ತ)

                  *ಪ್ರೋತ್ಸಾಹಿಸಿ*
(ವಿಶ್ವ ವಿಕಲಚೇತನ ದಿನಾಚರಣೆಯ ಪ್ರಯುಕ್ತ)

ಬೈಯದಿರಿ ನೊಯಿಸದಿರಿ
ದಿವ್ಯಾಂಗರ ಮನಗಳ
ಬಯಸಿ ಯಾರೂ
ವಿಕಲಚೇತನರಾಗಲ್ಲ
ಎಲ್ಲರಲೂ ಚೇತನವಿದೆ.

ಎಲ್ಲಾ ಇರುವವರು
ಇಲ್ಲದವರ ಜಾಗದಿ
ನಿಂತು ಯೋಚಿಸಿ .
ಮುತ್ತು ರತ್ನ ಬೇಡ
ವಜ್ರ ಹವಳ ಬೇಡ
ಕರುಣೆ ಅನುಕಂಪ
ಅವರಿಗೆ ಬೇಡವೆ ಬೇಡ.

ಎಲ್ಲರಂತೆ ಬಾಳಲು
ಅವಕಾಶಗಳ ನೀಡಿ
ಅವರನು ಪ್ರೋತ್ಸಾಹಿಸಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ದಾರಿದೀಪ (ಚುಟುಕು)

           *ದಾರಿದೀಪ*

ದಾರಿಗಳು ನೂರಾರು ಬದುಕಿ ಬಾಳಲು
ಸಾವಿರ ದಾರಿಗಳಿವೆ ಇಂದು ಹಾಳಾಗಲು
ಅಡ್ಡ ದಾರಿಯ ಪಯಣ ಕೊನೆಗೊಳ್ಳಲಿ
ನಿನ್ನ ಬದುಕು ಇತರರಿಗೆ ದಾರಿದೀಪವಾಗಲಿ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*


25 ನವೆಂಬರ್ 2018

ಕಲಿಯುಗ ಕರ್ಣ ( ನುಡಿನಮನ)

                      *ಕಲಿಯುಗ ಕರ್ಣ*(ನುಡಿನಮನ)

ಚಿತ್ರರಂಗದ ಹೆಮ್ಮೆಯ
ಮೈಸೂರ್ ಜಾಣ
ಅಭಿಮಾನಿಗಳ ಪಾಲಿನ
ಪ್ರೀತಿಯ ಜಲೀಲ
ಕೋಟಿ ಜನರ ಪಾಲಿಗೆ
ಮಂಡ್ಯದ ಗಂಡು
ದುಷ್ಟರ ಪಾಲಿಗೆ
ರೆಬೆಲ್ ಸ್ಟಾರ್
ಪಡ್ಡೆಗಳ ಪ್ರೀತಿಯ
ಕನ್ವರ್ ಲಾಲ್
ನಟನೆಯಲಿ ಎಂದೂ
ಮರೆಯದ  ದಿಗ್ಗಜ
ಕೊಡಗೈದಾನಿಯಾದ
ಕಲಿಯುಗ ಕರ್ಣ
ಕನ್ನಡ ಕಲಾವಿದರಿಗೆ
ನಮಗೆಲ್ಲ ಅಣ್ಣ
ಅಮರ್ ನಾಥ್  ಹೆಸರಿನಂತೆ
ಅಮರನಾದೆ
ದೇಹದಿಂದ ನಿನ್ನ ಪ್ರಾಣ
ಹೋದರೂ ನಮ್ಮ ಹೃದಯದಲಿ
ಶಾಶ್ವತವಾಗಿ ನೆಲೆಸಿರುವೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

24 ನವೆಂಬರ್ 2018

ಗಜ಼ಲ್51(ಬದಲಾಗಿದ್ದೇನೆ)

          *ಗಜ಼ಲ್ 51*

ನಲವತ್ತು ದಾಟಿದ ಮೇಲೆ ನಿಜವಾಗಿ ಬದುಕಲು‌  ಬದಲಾಗಿದ್ದೇನೆ
ಗತಕಾಲದ ಮೆನಪುಗಳ ಮೊಗೆದು  ಸವಿಯಲು   ಬದಲಾಗಿದ್ದೇನೆ

ತಪ್ಪು ಮಾಡದವರಾರಿಲ್ಲ ಪರಿಪೂರ್ಣರು ಹುಟ್ಟಿಲ್ಲ
ವ್ಯಕ್ತಿ ,ವಸ್ತುಗಳು  ಹೇಗಿದ್ದರೂ ಹಾಗೆಯೇ  ಸ್ವೀಕರಿಸಲು‌  ಬದಲಾಗಿದ್ದೇನೆ

ನಡೆಯುವುದ ತಡೆಯುವ ನಿಯಂತ್ರಣ ಶಕ್ತಿ ನಾನಲ್ಲ
ನಿನ್ನೆ ನಾಳೆಗಳ ಚಿಂತಿಸದೇ   ವರ್ತಮಾನದಿ ಜೀವಿಸಲು  ಬದಲಾಗಿದ್ದೇನೆ

ಕುರುಡು ಕಾಂಚಾಣ ಕುಣಿದು ಅಮ್ಮ ಅಪ್ಪ ಬಂಧು ಬಳಗ ದೂರಮಾಡಿದೆ
ಸಂಬಂಧ ಗಳೊಂದಿಗೆ ರಾಜಿಯಾಗಿ ಸಂಭ್ರಮಿಸಲು ಬದಲಾಗಿದ್ದೇನೆ

ಸೂರ್ಯ, ಚಂದಿರ,ಗಾಳಿ ,ಭುವಿ ನಿರಂತರ ಕಾಯಕ ನಿರತ
ಸೀಜೀವಿಯನು ಇತರರು ಪ್ರಶಂಸೆ ಮಾಡಬೇಕು ಎಂಬುದನು ತೊರೆಯಲು ಬದಲಾಗಿದ್ದೇನೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*