01 ನವೆಂಬರ್ 2018

ಗಂಧದ ಬೀಡು( ಕವನ)

                    *ಗಂಧದ ಬೀಡು*

ಕನ್ನಡ ನಾಡು ನಮ್ಮ ಚಿನ್ನದ ಬೀಡು
ಕನ್ನಡ ನಾಡು ನಮ್ಮ ಗಂಧದ ನಾಡು |ಪ|

ಹಕ್ಕ ಬುಕ್ಕರಾಳಿದ ನಾಡಿದು
ಒಡೆಯರು ಗೌಡರು ಕಟ್ಟಿದ ಬೀಡಿದು
ಕದಂಬ ಹೋಯ್ಸಳರಾಳಿದ ನಾಡಿದು
ಚೆನ್ನಮ್ಮ ಓಬವ್ವರ ಕಂಡ ನೆಲವಿದು     
                                |ಕನ್ನಡ  ನಾಡು |                                                                                                         

ಬೇಲೂರು ಹಳೇಬೀಡು ಕೆತ್ತನೆ ಸೊಬಗು
ಬಾದಾಮಿ ಐಹೊಳೆ ಹಂಪಿಯ ವೈಭವ
ಶಿಲ್ಪಕಲೆಯ ತವರೂರು ನಮ್ಮದು
ಲಲಿತ ಕಲೆಗಳ ಸುಂದರ ತಾಣವು
                         |ಕನ್ನಡ ನಾಡು|

ಪಂಪ ರನ್ನ ಜನ್ನರ ನೆಲೆಯಿದು
ಅಷ್ಟ ಜ್ಞಾನ ಪೀಠಿಗಳ ನೆಲೆಯಿದು
ನವ್ಯ ನವೋದಯ ಕವಿಗಳ ಧರೆಯಿದು
ಜೇನಿನ ಸವಿ ನುಡಿ ನಮ್ಮಯ ನುಡಿಯು
                       |ಕನ್ನಡ ನಾಡು|

ಕನ್ನಡವನ್ನು ಎಲ್ಲರು ಕಲಿಯುವ
ನಮ್ಮಯ ನುಡಿಯ ಎಲ್ಲರಿಗೆ ಕಲಿಸುವ
ಕಲಿತು ಕಲಿಸುತಾ ಕನ್ನಡ ಬೆಳೆಸುವ
ನಮ್ಮ ನಾಡಿನ ಕೀರ್ತಿಯ ಬೆಳಗುವ
                        |ಕನ್ನಡ ನಾಡು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



31 ಅಕ್ಟೋಬರ್ 2018

ಪರಿಹಾರ (ನ್ಯಾನೋ ಕಥೆ)

             
*ನ್ಯಾನೋ ಕಥೆ*
*ಪರಿಹಾರ*
"ನಾನು ಆ ಬೀದಿಯಲಿ ಹುಡುಕಿದೆ ಸಿಗಲಿಲ್ಲ ನಿನಗೇನಾದರೂ ಸಿಕ್ಕನೆ? " ಗಂಡ ಕೇಳಿದಾಗ  ಹೆಂಡತಿಯ  ದುಃಖದ ಕಟ್ಟೆಯೊಡೆದು ಅಳಲು ಆರಂಬಿಸಿದಳು .
ನಾನು ಶಾಲೆಗೆ ಹೋಗುವುದಿಲ್ಲ ಎಂದು ವಾರದಿಂದ ಹಠ ಹಿಡಿದ ಎರಡನೇ ತರಗತಿ ಓದುವ ವಿವೇಕ್  ಬಲವಂತಕ್ಕೆ ಶಾಲೆಗೆ ಹೋದವನು ಮನೆಗೆ ಬಂದಿರಲಿಲ್ಲ .ಬೈಕ್ನಲ್ಲಿ  ಬಂದ ಪಕ್ಕದ ಮನೆಯ ರಮೇಶ್  ನಿಮ್ಮ ಮಗ ಬಸ್ ಸ್ಟಾಂಡ್ನಲ್ಲಿ ನಿಂತಿದ್ದ ಎಂದು ಕರೆದುಕೊಂಡು ಬಂದಾಗ ದಂಪತಿಗಳಿಬ್ಬರು ಮಗನನ್ನು ತಬ್ಬಿ ಗದ್ಗದಿತರಾದರು .ಜೋಯಿಸರ ಸಲಹೆಯ ಮೇರೆಗೆ ತಾಯಿ ಏನೋ ಶಾಂತಿ ಮಾಡಿದರು. ತಂದೆ ಹಿರಿಯರ ಕರೆಸಿ ಮಗನಿಗೆ ಆಪ್ತಸಮಾಲೋಚನೆ ಮಾಡಿಸಿದರು .ಮೂರು ದಿನದ ನಂತರ ಮಗ "ಅಮ್ಮ ಬೇಗ ರೆಡಿ ಮಾಡು ನಾನು ಶಾಲೆಗೆ ಹೋಗಬೇಕು" ಅಂದ .!
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಅಕ್ಟೋಬರ್ 2018

ಪರಿವರ್ತನೆ (ನ್ಯಾನೋ ಕಥೆ)

                  *ನ್ಯಾನೋ ಕಥೆ*

*ಪರಿವರ್ತನೆ*

ಅಲ್ಸರ್ ಮತ್ತು ಗ್ಯಾಸ್ಟ್ರಸೈಟಸ್  ನಿಂದ ಎರಡು ತಿಂಗಳು ಚಿಕಿತ್ಸೆ ಪಡೆದ ಶಕುಂತಲಮ್ಮ ಸಂಪೂರ್ಣವಾಗಿ ಗುಣಮುಖವಾಗಿ  ಆಸ್ಪತ್ರೆಯಿಂದ ಮನೆಗೆಬಂದರು .ಬೆಳಗ್ಗೆ ಹತ್ತು ಗಂಟೆಗೆ ಮಗಳು " ಅಮ್ಮಾ ಪೂಜೆಗೆ ಎಲ್ಲಾ ಸಿದ್ದ ಮಾಡಿರುವೆ" ಎಂದಳು " ಟಿಫನ್ ಕೊಡು ಮೊದಲು ಹೊಟ್ಟೆ ಪೂಜೆ ಆಮೇಲೆ ದೇವರ ಪೂಜೆ" ಎಂಬ ಅಮ್ಮನ ಮಾತು ಕೇಳಿ ಮಗಳು   ಬಿಟ್ಟ ಕಣ್ಣು ಬಿಟ್ಟು ಬಾಯಿತೆರೆದುಕೊಂಡು ಅಮ್ಮನನ್ನೇ ನೋಡುತ್ತಾ ನಿಂತಳು .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಉಳಿತಾಯ ದಿನ(ಹನಿಗವನ)

           

*ಉಳಿತಾಯ ದಿನ*ಹನಿಗವನ

ಮದುವೆಯಾದ ಹೊಸತರಲ್ಲಿ
ಅನುರಾಗ ಅರಳಿ
ಪ್ರೀತಿಯ ಜೇನಿನಲಿ ತೇಲಿಸುತ್ತಿದ್ದಿರಿ
ಈಗ ಅನುರಾಗವಿಲ್ಲ
ಮುತ್ತಿನ ಮಾತಿಲ್ಲ
ಮುತ್ತಂತೂ ಇಲ್ಲವೇ ಇಲ್ಲ
ಈಗೇಕೆ ಕಂಜ್ಯೂಸುತನ
ನಿನಗೆ ಗೊತ್ತಿಲ್ಲವೆ ಪ್ರಿಯೆ ?
ಇಂದು ವಿಶ್ವ ಉಳಿತಾಯ ದಿನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಪುಸ್ತಕ ವಿಮರ್ಶೆ (ಕಾಲಚಕ್ರ ಕಥಾ ಸಂಕಲನ)

             *ನಾ ಓದಿದ ಪುಸ್ತಕ*

*ಕಾಲಚಕ್ರ*

ಕಥಾ ಸಂಕಲನ
ಲೇಖಕರು : ನಾಗರಾಜ್ ಜಿ‌ ನಾಗಸಂದ್ರ
ಪ್ರಕಾಶನ : ವರ್ಷಾ ಪ್ರಕಾಶನ

ಹನ್ನೆರಡು ವಿಭಿನ್ನವಾದ ಕಥಾವಸ್ತುವನ್ನು ಒಳಗೊಂಡಿರುವ ಈ ಪುಸ್ತಕದಲ್ಲಿ ಒಂದಕ್ಕೊಂದು ಉತ್ತಮ ಕಥೆಗಳು ಇವೆ .ಒಂದೇ ಸಿಟ್ಟಿಂಗ್ನಲ್ಲಿ‌ ಓದಿ ಮುಗಿಸಿದ ಈ ಪುಸ್ತಕ ನನ್ನ ಬಹುವಾಗಿ ಕಾಡಿತು .

ಮಹಿಳೆಯರು ಉನ್ನತ ಹುದ್ದೆಯನ್ನು ಅಲಂಕರಿಸಿದರೂ ಅವರ ಶೋಷಣೆಯು ನಿಂತಿಲ್ಲ ಎಂದು ಮೊದಲ ಕಥೆಯಾದ
*ಪರಿವರ್ತನೆ* ಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ ತಹಶಿಲ್ದಾರರಂತಹ ಉನ್ನತ ಹುದ್ದೆಯಲ್ಲಿದ್ದರೂ ಮನೆಯಲ್ಲಿ ಗಂಡನ‌ ಕಿರುಕುಳಕ್ಕೆ ಬೇಸತ್ತು ಅಡ್ಡದಾರಿ ಹಿಡಿದು ಪುನಃ ಪರಿವರ್ತನೆ ಹೊಂದುವ ರೀತಿಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ನನಗೆ ವೈಯಕ್ತಿಕವಾಗಿ ಬಹಳ ಇಷ್ಟವಾದ ಕಥೆ *ಮಾರುತ* ಇದರಲ್ಲಿ ರೈತನ ಹಾಡು ಪಾಡುಗಳನ್ನು ವಿವರವಾಗಿ ಬಿಡಿಸಿಹೇಳಿದ್ದಾರೆ
ಈ ಕಥೆಯಲ್ಲಿ ಸುಭೀಕ್ಷವಾಗಿರುವ ರೈತನ ಚಿತ್ರಣದ ಜೊತೆಗೆ ಪ್ರಸ್ತುತ ಇರುವ ಅಂತರ್ಜಲ ಕುಸಿತ ರೈತರಸಾಲ ,ರೈತರ ಆತ್ಮಹತ್ಯೆ ಬಗ್ಗೆ ಬೆಳಕು ಚೆಲ್ಲಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

*ಕಾಲಚಕ್ರ* ಕಥೆಯಲ್ಲಿ ಹಣದ ಹಿಂದೆ ಬಿದ್ದು ದುಡ್ಡೇ ಸರ್ವಸ್ವ ಎಂದು ಜೀವನವನ್ನೇ ಹಾಳುಮಾಡಿಕೊಳ್ಳುವ ಯುವಕನ ಕಥೆ ಮೂಲಕ ಯುವ ಜನಾಂಗವನ್ನು ಕವಿ ಎಚ್ಚರಿಸಿದ್ದಾರೆ.

ಸಾಹಿತಿಯಾದವನು ತಾಳ್ಮೆಯಿಂದ ಇರಬೇಕು ಕೇವಲ ಹಾರ ತುರಾಯಿ ಪ್ರಶಸ್ತಿಯ ಹಿಂದೆ ಓಡಬಾರದು ಅವು ನಮ್ಮನ್ನು ಹುಡುಕಿಕೊಂಡ ಬರುವವುಎಂದು *ಗುರಿಮುಟ್ಟದ ಹಾದಿ*ಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಸಮಾಜವಾದಿ ತತ್ವ ರೂಢಿಸಿಕೊಂಡು ಬದಲಾವಣೆಗಳನ್ನು ತರಲು ಹೋಗಿ ತನ್ನ ಕುಟುಂಬವನ್ನೇ ತೊಂದರೆಗೆ ಒಡ್ಡುವ *ಗಾಳಿ ಗೋಪುರ*ಕಥಾ  ಚಿತ್ರಣ ಓದುಗರ ಕಣ್ಣಲ್ಲಿ ನೀರು ತರಿಸುತ್ತದೆ .
ಈಗೆ ಎಲ್ಲಾ ಕಥೆಗಳು ವಿಭಿನ್ನವಾದ ನಿರೂಪಣೆ ಮತ್ತು ಕಥಾವಸ್ತುವಿನಿಂದ ನಮ್ಮ ಮನ ಸೆಳೆಯುತ್ತವೆ.
ಈ ಕಥಾ ಸಂಕಲನ ಓದಿ ಮುಗಿಸಿದಾಗ ಒಂದು ಒಳ್ಳೆಯ ಪುಸ್ತಕ ಓದಿದ ಅನುಭವ ನಿಮಗಾಗುವುದು ಗ್ಯಾರಂಟಿ .

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*