07 ಅಕ್ಟೋಬರ್ 2018

*ಅಂಬಿ ನಿಂಗೆ ವಯಸ್ಸಾಯ್ತೋ* ಚಿತ್ರ ವಿಮರ್ಶೆ

                   
*ಅಂಬಿ ನಿಂಗೆ ವಯಸ್ಸಾಯ್ತೋ*

ಚಿತ್ರ ವಿಮರ್ಶೆ

ಈ ವಾರ ನಾನು ನೋಡಿದ ಕನ್ನಡ ಚಲನಚಿತ್ರ *ಅಂಬಿ ನಿಂಗ್ ವಯಸ್ಸಯ್ತೋ* ಬಹಳ ದಿನಗಳ ನಂತರ ಕುಟುಂಬ ಸಮೇತ ಕುಳಿತುಕೊಂಡು ನೋಡಬಹುದಾದ ಚಿತ್ರ ಬಂದಿದೆ ಅದಕ್ಕೆ ನಿರ್ದೇಶಕರಾದ ಗುರುದತ್ ಗಾಣಿಗ ಅವರಿಗೊಂದು ನಮನ ಸಲ್ಲಿಸಲೇ ಬೇಕು .
ನಟಿಸುವುದರ ಜೊತೆಗೆ ಚಿತ್ರಕಥೆ ಬರೆದಿರುವ ಕಿಚ್ಚಸುದೀಪ್ ರವರ ಚಿತ್ರಕಥೆಯಲ್ಲಿ ಚಿತ್ರ ಚಕಚಕನೆ ಸಾಗುವುದು .
ಚಿತ್ರದ ಆರಂಭದಿಂದಲೂ ಭಾವನಾತ್ಮಕ ಅಂಶಗಳು ನಮ್ಮನ್ನು ಹಿಡಿದಿಡುವ ತಾಕತ್ ಇದೆ
ಪೈಟ್ ಮಾಸ್ಟರ್ ಆಗಿ  ಸೇವೆ ಸಲ್ಲಿಸಿದ ಅಂಬಿ ತನ್ನ ಇಳಿವಯಸ್ಸಿನಲ್ಲಿ ತನ್ನ ಮಗ ಸೊಸೆ ಮೊಮ್ಮಕ್ಕಳಜೊತೆ ಸುಖವಾಗಿರಲು ಹಾತೊರೆವ ಜೀವ ಆದರೆ ಮಗ ಸೊಸೆಯ ಅನಾದರ ಈ ಮದ್ಯ ಅಂಬಿ ಸಮಾಜ ಸೇವೆಯಿಂದ ಮಗ ಪೋಲೀಸ್ ಠಾಣೆ ಮೆಟ್ಟಿಲೇರಿ ಮಾತಿನ ಚಕಮಕಿಯಾಗಿ ಅಂಬಿ ಮನೆ ಬಿಟ್ಟು ಹೋಗುತ್ತಾರೆ .ಮುಂದೇನಾಗುವುದು ಎಂದು ಚಿತ್ರಮಂದಿರದಲ್ಲೇ ನೋಡಬೇಕು.
ಸಾಮಾನ್ಯವಾಗಿ ಇಳಿವಯಸ್ಸಿನಲ್ಲಿ ಮನೆಯವರ ಅನಾದರ ,ಅಲಕ್ಷ್ಯ,ಮುಂತಾದವುಗಳನ್ನು ಕಂಡು ಕುಗ್ಗಿ ಹೋಗುವ ಹಿರಿಯರ ಮದ್ಯ ಅಂಬಿ ನಮಗರ ವಿಶಿಷ್ಠವಾಗಿ ಕಾಣುತ್ತಾರೆ, ಆ ವಯಸ್ಸಿನಲ್ಲಿ ನಮ್ಮ ಹವ್ಯಾಸ ಕಳೆದುಕೊಂಡ ದನ್ನು ಹುಡುಕುವ ಇರದುದರ ಬಗ್ಗೆ ಚಿಂತಿಸದೇ ಬದುಕುವ ಪರಿಯನ್ನು ನಮ್ಮೆಲ್ಲ ಹಿರಿ ಜೀವಗಳು ಮೈಗೂಡಿಸಿಕೊಳ್ಳಬೇಕಿದೆ .ಜೊತೆಗೆ ತಮ್ಮ ವಯಸ್ಸಾದ ತಂದೆ ತಾಯಿ ಗಳನ್ನು ಕಳೆದುಕೊಂಡ ನಂತರ ಪರಿತಪಿಸುವ ಗುಣಗಳನ್ನು ಎಲ್ಲರೂ ಪಾಲಿಸಿದರೆ ಜಗತ್ತು ಸುಂದರವಾಗುವುದು
ರಾಕ್ ಲೈನ್ ವೆಂಕಟೇಶ್ ಪೋಲಿಸ್ ಅಧಿಕಾರಿಯಾಗಿ ,ದಿಲೀಪ್ ಮಗನಾಗಿ, ನಿಹಾಲ್ ಮೊಮ್ಮಗನಾಗಿ ಸುದೀಪ್ ಜ್ಯೂನಿಯರ್ ಅಂಬಿಯಾಗಿ,ಶೃತಿ ಹರಿಹರನ್ ಜ್ಯೂನಿಯರ್ ಅಂಬಿ ಜೋಡಿಯಾಗಿ ಸುಹಾಸಿನಿ ಸೀನಿಯರ್ ಅಂಬಿ ಜೋಡಿಯಾಗಿ ಎಲ್ಲರೂ ಪೈಪೋಟಿ ಗೆ ಬಿದ್ದವರಂತೆ ನಟಿಸಿದ್ದಾರೆ.
ಅರ್ಜನ್ ಜನ್ಯ ಸಂಗೀತ ಸೂಪರ್
ಡಾ.ನಾಗೇಂದ್ರ ಪ್ರಸಾದ್ ರವರ ರಚನೆ ಯ "ಮಾತಾಡೋ ತಾರೆಯ ಕಂಡ ಹಾಗೆ ಬೆಳದಿಂಗಳು ಕೈಗೆ ಸಿಕ್ಕ ಹಾಗೆ" ಸುಮದುರ ಹಾಡು ಜಸ್ಟಿನ್ ರೂಬೆನ್
ಕ್ಯಾಮರಾ ಕೈಚಳಕ ನೋಡಿಯೇ ಸವಿಯಬೇಕು .
ದೀಪು ಎಸ್ ಕುಮಾರ್ ಸಂಕಲನ ಸೂಪರ್‌ ರವಿವರ್ಮ ಮತ್ತು ಥ್ರಿಲ್ಲರ್ ಮಂಜು ಸಾಹಸ ರೆಬಲ್ ಸ್ಟಾರ್ ಗೆ ಹೇಳಿಮಾಡಿಸಿದಂತಿದೆ 
ತಮಿಳಿನ ಪವರ್ ಪಾಂಡಿ ರೀಮೇಕ್ ಆದರೂ ಕನ್ನಡದ ಚಿತ್ರದಂತೆ ಕಟ್ಟಿಕೊಟ್ಟ ನಿರ್ದೇಶಕರಿಗೊಂದು ನಮನ .
ಈ ಚಿತ್ರ ನೀವು ನೀಡದಿದ್ದರೆ ಖಂಡಿತ ನಿಮಗೆ ಲಾಸ್
ನಮಸ್ಕಾರ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಅಕ್ಟೋಬರ್ 2018

ಗಜ಼ಲ್48(ಯೌವನ)

                      *ಗಜ಼ಲ್48*

ಕೆಲವರಿಗೆ  ದೇಶವೇ ಕಾಣದು ಬರಲು  ಈ ಯೌವನ
ಹಲವರಿಗೆ ನೆಲವೇ ಕಾಣದು ಬಲಿಯಲು ಈ ಯೌವನ

ಮೈಯೆಲ್ಲಾ ಕಣ್ಣಾಗಿ ತನ್ಮಯವಾಗಿರಬೇಕು  ಕಾರ್ಯದಿ
ಅಡ್ಡದಾರಿ ಹಿಡಿಸುವುದು ಮೈಮರೆಯಲು  ಈ ಯೌವನ

ಚಿತ್ತ ಚಾಂಚಲ್ಯ ಮೊಂಡು ಭಂಡ ವಿತಂಡವಾದ
ಬಾಳೆಲ್ಲ ಗೋಳು ಅಮಲೇರಿರಲು   ಈ ಯೌವನ

ಸುಕರ್ಮ ಸುವಾರ್ತೆಗಳೆಡೆಗೆ ಸಾಗದು ಮನ
ಮೂಗಿನ ನೇರಕ್ಕಿರುವುದು ಚಿಂತನೆ ಜೊತೆಗಿರಲು ಈ ಯೌವನ

ನೆನೆದುದ ಸಾಧಿಸುವ ಅಗಣಿತ ಶಕ್ತಿಯ ಆಗರ
ಭುವಿಯೇ ಸ್ವರ್ಗ ಸದುಪಯೋಗವಾಗಲು   ಈ ಯೌವನ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಕೇಳಿಲ್ಲ (ಹನಿಗವನ)

          *ಕೇಳಿಲ್ಲ*

ನನಗೆ ಬುದ್ದಿ ಬಂದಾಗಿನಿಂದ
ಗಮನಿಸುತ್ತಲೇ ಇರುವೆ
ಮಾಮ ಪ್ರತಿದಿನ ಅಮ್ಮನ
ನೋಡಲು ರಾತ್ರಿಯೇ ಬರುವನು
ಅದು ಅಪ್ಪನಿಲ್ಲದಾಗ ಬರುವನು
ಯಾಕೆ ಹೀಗೆಂದು ಮೂವರನು
ಕೇಳಬೇಕಿನಿಸಿದರೂ ಕೇಳಿಲ್ಲ
ಏಕೆಂದರೆ ಚಂದಮಾಮನೆಂದರೆ
ನನಗೆ ಅಚ್ಚು ಮೆಚ್ಚು
ಸೂರ್ಯಪ್ಪ ಎಂದರೆ ಎಲ್ಲಿಲ್ಲದ ಗೌರವ
ಭೂತಾಯಿಯೆಂದರೆ ನನ್ನ ಜೀವ

 *ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

02 ಅಕ್ಟೋಬರ್ 2018

ಪರೋಪಕಾರಿಗಳಾಗೋಣ (ಪತ್ರಿಕಾ ಲೇಖನ)

               ಪರೋಪಕಾರಿಗಳಾಗೋಣ

"ಕರ್ನಾಟಕ ಉತ್ತಮ ಪರೋಪಕಾರಿ ಹಾಗೂ ವೈದ್ಯ ವೃತ್ತಿಪರ ಮಸೂದೆಗೆ" ರಾಷ್ಟ್ರಪತಿಗಳು ಅಂಕಿತ ಹಾಕಿ ಕಾನೂನಾಗಿರುವುದು ಸಂತಸದ ವಿಷಯ .ಇಂತಹ ಕಾನೂನು ಇಡೀ ದೇಶದಲ್ಲಿ ಮೊದಲು ನಮ್ಮ ರಾಜ್ಯದಲ್ಲಿ ಜಾರಿಯಾಗುತ್ತಿರುವ ಈ ಸಂಧರ್ಭದಲ್ಲಿ ಕರ್ನಾಟಕದವನಾಗಿ ನನಗೆ ಬಹಳ ಹೆಮ್ಮೆಯಿದೆ . ಇದನ್ನು ಕೇಂದ್ರ ಮತ್ತು ಇತರೆ ರಾಜ್ಯಗಳು ಜಾರಿಗೊಳಿಸುವ ಅಗತ್ಯವಿದೆ. ಅಪಘಾತದಲ್ಲಿ ಗಾಯಗೊಂಡರೆ  ಮೊದಲ ಒಂದು ಗಂಟೆ ಗೋಲ್ಡನ್ ಅವಧಿ ಈ ಸಂದರ್ಭಗಳಲ್ಲಿ ಬಹುತೇಕರು ಆಸ್ಪತ್ರೆಗೆ ಸಾಗಿಸಲು ಮುಂದಾದರೂ ನಂತರದ ಕಾನೂನಿನ ಭಯ ಮತ್ತು ಕೋರ್ಟ್ ಗೆ ಅಲೆಯಬೇಕಾಗ ಬಹುದು ಎಂಬ ಭಯದಿಂದ ಸಹಾಯವನ್ನು ಮಾಡಲು ಹಿಂಜರಿಯುತ್ತಿದ್ದರು  ಇದರಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿದ್ದವು .ಪ್ರಸ್ತುತ "ಪರೋಪಕಾರಿ ಕಾಯ್ದೆ" ಪ್ರಕಾರ ಪೊಲೀಸ್ ಮತ್ತು ಕೋರ್ಟ್ ನ ಅನಗತ್ಯ ಕಿರಿಕಿರಿ ಇರುವುದಿಲ್ಲ. ಇದರ ಬದಲಾಗಿ ಸೂಕ್ತ ಬಹುಮಾನ ಸಿಗಲಿದೆ .
ಈಗ ಅಪಘಾತದಲ್ಲಿ ಗಾಯಗೊಂಡ ವರ ರಕ್ಷಿಸಲು  ಕಾನೂನು ಇದೆ ಇದರ ಜೊತೆಗೆ ಅಪಘಾತದಲ್ಲಿ ತೊಂದರೆ ಗೀಡಾದವರ ವಿಡಿಯೋ ಪೋಟೋ ತೆಗೆಯುವ ಅಮಾನವೀಯ ಚಟುವಟಿಕೆಗಳನ್ನು ಬಿಟ್ಟು ಮಾನವೀಯತೆಯ ತೋರಿ ಅಮೂಲ್ಯವಾದ ಜೀವಗಳನ್ನು ಉಳಿಸೋಣ

ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು

01 ಅಕ್ಟೋಬರ್ 2018

ಮದುವೆಯಾಗಿದೆ (ಕವನ)

                  *ಮದುವೆಯಾಗಿದೆ*

ಅವನಿಗೆ  ಇಪ್ಪತ್ತೊಂದು ತುಂಬಿದೆ
ನಕ್ಷತ್ರಗಳನ್ನು ಮಾತಾಡಿಸಬಲ್ಲ
ಚಂದ್ರನ ಕೈಯಲ್ಲಿ ಹಿಡಿಯಬಲ್ಲ
ಆತ್ಮವಿಶ್ವಾಸ ಉಕ್ಕಿ ಹರಿದಿದೆ

ಅವನಿರುವ ಜಾಗದಲ್ಲಿ
ಜಗವೇ ಮೆಚ್ಚವ ಕಾರ್ಯ
ಮಾಡುವ ಹುಮ್ಮಸ್ಸು
ಗುಂಡೇಟಿಗೂ ಗುಂಡಿಗೆ
ಒಡ್ಡುವ ಕೆಚ್ಚೆದೆಯ ಕಲಿ

ಸಮಯದ ಪರಿವೆಯಿಲ್ಲದೆ
ಹಗಲಿರುಳೆನ್ನದೇ ದುಡಿವನು
ಎಲ್ಲರಿಗೂ ಮಾದರಿ ಇವನು
ಜಗವನೆ ಬದಲಿಸುವ ತಾಕತ್ತಿದೆ

ಅವನು ಈಗೀಗ ಏಕೋ
ಹರಳೆಣ್ಣೆ ಕುಡಿದಂತೆ ಮುಖ
ಎಲ್ಲದಕ್ಕೂ ಹೌದೆಂಬ ಕೋಲೆ ಬಸವ
ಟಿ ವಿ ರಿಮೋಟ್ನಲ್ಲಿ ಚಾನೆಲ್
ಬದಲಾಯಿಸಲೂ ಆಗುತ್ತಿಲ್ಲ
ಕಾರಣ ಅವನಿಗೆ ಮದುವೆಯಾಗಿದೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*