09 ಜುಲೈ 2018

ಸಾಮಾಜಿಕ ಕಳಕಳಿ (ಲೇಖನ)

               *ಸಾಮಾಜಿಕ ಕಳಕಳಿ*

ನಮ್ಮ ಮೆಟ್ರೋಗೆ ಇನ್ಪೋಸಿಸ್ ಫೌಂಡೇಷನ್200 ಕೋಟಿ ರೂಗಳ ದೇಣಿಗೆ ನೀಡಿರುವುದು ಶ್ಲಾಘನೀಯ.ಅದರಲ್ಲೂ ಸುಧಾ ಮೂರ್ತಿಯವರ ಸಾಮಾಜಿಕ ಕಳಕಳಿ ಅನುಕರಣೀಯ   ಕಾರ್ಪೊರೇಟ್ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯಲು ಈ‌ರೀತಿಯ ಸಹಾಯ ಮಾಡುವುದು ವಾಡಿಕೆಯಲ್ಲಿದ್ದರೂ ಕರ್ನಾಟಕ ಸರ್ಕಾರ ಕ್ಕೆ ಇಷ್ಟು ಮೊತ್ತದ ಚೆಕ್ ಒಮ್ಮೆಲೆ ನೀಡಿರುವುದು ಇದೇ ಮೊದಲು .ಕೆರೆಯ ನೀರನು‌ ಕೆರೆಗೆ  ಚೆಲ್ಲಿ ಎಂದು ದಾಸವರೇಣ್ಯರು ಹೇಳಿದಂತೆ ಕಾರ್ಪೊರೇಟ್ ಕಂಪನಿಗಳು ತಾವು ಪಡೆದ ಲಾಭಾಂಶ ದಲ್ಲಿ ಒಂದಷ್ಟು ಪಾಲು ಸಮಾಜಕ್ಕೆ ಮೀಸಲಿಟ್ಟರೆ  ಸರ್ವಜನರ ಕಲ್ಯಾಣ ಆಗುವುದು.ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಮತ್ತೋರ್ವ ಉದ್ಯಮಿ ಅಜೀಂ ಪ್ರೇಮ್ ಜೀ ರವರು  ಸಹ ಸಮಾಜದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಪಂಚದ ನಂಬರ್ ಒನ್ ಶ್ರೀಮಂತ ರಾದ ವಾರ್ನ್ ಬಫೆಟ್ ರವರು ತಮ್ಮ ಆಸ್ತಿ ಯ ಅರ್ಧ ಸಂಪತ್ತನ್ನು ಸಮಾಜಕ್ಕೆ ದಾನ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ.
ಇದೇ ರೀತಿ ಉಳ್ಳವರು ಇಲ್ಲದವರ ಒಳಿತಿಗೆ ಕೈ ಜೋಡಿಸಿದರೆ ಪ್ರಪಂಚದಲ್ಲಿ ಸರ್ವಜನ ಸಮಾನವಾಗಿ ಜೀವಿಸುವ ಸಂತರ ಕನಸು ನನಸಾದೀತು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ನಾಲ್ಕು ಹನಿಗಳು

                 *ನಾಲ್ಕು ಹನಿಗಳು*

*೧*

*ಕಮಲಾಕರ*

ಈಗ ಏರಿಕೆಯಾಗಿದೆ
ಪೆಟ್ರೋಲ್ ಕರ
ವಿದ್ಯುತ್ ಕರ
ಆದಾಯ ಕರ
ನೀನೆ ಬಂದು ಇಳಿಸಬೇಕು
ಕಮಾಲಾಕರ

*೨*

*ಸೂರು*

ಯೋಜನೆಗಳು ನೂರಾರು
ಆಶ್ವಾಸನೆಗಳು ಸಾವಿರಾರು
ಭರವಸೆಗಳ ಕಾರುಬಾರು
ಸಮೀಕ್ಷೆ ಹೇಳಿತಿದೆ
ಲಕ್ಷಾಂತರ ಜನರಿಗಿಲ್ಲ ಸೂರು

*೩*

*ಸ್ವಂತಿ (Selfi)*

ವೃದ್ದರ ಹಳ್ಳಿಯಲ್ಲಿ ಬಿಟ್ಟು
ಪೇಟೆ ಸೇರಿ ಅವರಿಗೆ
ನೀಡಲಿಲ್ಲ ಅರೈಕೆ ಪ್ರೀತಿ
ವರ್ಷಕ್ಕೊಮ್ಮೆ ಬಂದು
ಹಲ್ಕಿರಿದು ಮೊಬೈಲ್ ನಲ್ಲಿ
ತೆಗೆದುಕೊಳ್ಳಲು ಮರೆಯುಲ್ಲ ಸ್ವಂತಿ


*೪*

*ನೆನಪು ಕೊಳ್ಳುವುದಿಲ್ಲ

ಹಳೆಪಾತ್ರೆ  ಹಳೇಕಬ್ಬಿಣದೊಂದಿಗೆ
ನಿನ್ನ ಹಳೆಯ ನೆನಪುಗಳ
ಮಾರಲು ಹೋದರೆ
ನಮ್ಮ ಗುಜರಿಯಲ್ಲಿ
ಹಳೆಯ ನೆನಪು
ಕೊಳ್ಲುವುದಿಲ್ಲ ಎಂದು ಬಿಟ್ಟ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ವಿವೇಚನೆಯಿಂದ ಬಾಳು (ಕವನ)

            *ವಿವೇಚನೆಯಿಂದ ಬಾಳು*

ಬೆಟ್ಟ ನೀರು ಗಾಳಿ ಕಾಡನು ಕೊಟ್ಟೆ ನಿನಗೆ
ಬಾಳಿ ಬದುಕದೇ ನನ್ನ ಮೇಲೆ ದಬ್ಬಾಳಿಕೆಮಾಡಿದೆ
ತಾಳಲಾರೆ ನಿಮ್ಮುಪದ್ರವಗಳ ನಿಲ್ಲಿಸು ಇಂದೆ
ಇಲ್ಲವಾದರೆ ನಿನ್ನ ಅಂತ್ಯವಾಗಲಿದೆ ಮುಂದೆ

ಕ್ಷಮಯಾ ಧರಿತ್ರಿ ನಾನು ಆಸೆಬುರುಕ ನೀನು
ಆಸೆಗಳಿಗೆ ಬಲಿಯಾಗಿ  ಕಾಡು ನಾಶಗೈಯುತಿರುವೆ
ಕಾಂಕ್ರೀಟ್ ಕಾಡನು ಬೆಳಸಿ ಮೆರೆಯುತಿರುವೆ
ನನ್ನ ನೋವನು  ನೀನು ಮರೆಯುತಿರುವೆ

ಬಗೆದೆನ್ನಯ ಒಡಲನು ದೋಚಿದೆ  ಸಾಕು
ಇನ್ನಾದರೂ ಮರ ಗಿಡ ಬೆಳಸಿ ಬಾಳು
ಬದುಕು ಬದುಕಲು ಬಿಡು ಸಕಲ ಜೀವಿಗಳ
ಇಲ್ಲವಾದರೆ ನಿನ್ನ ಬಾಳಾಗುವುದು ಗೋಳು

ಮೌನವಾಗಿರುವೆನೆಂದು ಮೆರೆಯಬೇಡ
ನನ್ನ ತಾಳ್ಮೆಗೆ ಮಿತಿಯಿದೆಯೆಂದು ಮರೆಯಬೇಡ
ನಾ ಮೈಕೊಡವಿದರೆ ನಿನ್ನಳಿವು ನೋಡ
ಇದ ತಿಳಿದ ವಿವೇಚನೆಯಿಂದ ಬಾಳು ಮೂಢ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 ಜುಲೈ 2018

ಗಜಲ್ ೩೯(ಕಂಡಿದ್ದೇನೆ )


ಗಜಲ್ ೩೯

ಪ್ರಖರ ಸೂರ್ಯ ಚಂದ್ರ ರಿಗೆ ಗ್ರಹಣ ಹಿಡಿದಿರುವುದನ್ನು ನಾನು ಕಂಡಿದ್ದೇನೆ
ಶಿಖರಗಳು ಕ್ಷಣಮಾತ್ರದಲ್ಲೇ ತರಗೆಲೆಯಂತೆ
ಧರೆಗುರುಳಿರುವುದನ್ನು ನಾನು ಕಂಡಿದ್ದೇನೆ

ಕೋಟಿ ಕಟ್ಡಿ ಕುಣಿದವರ ಬಗ್ಗೆ ಎಗರಿ ಹೇಳಬೇಡ
ಮೀಸೆ ತಿರುವಿ ಮೆರೆದವರು ಮಣ್ಣಾಗಿರುವುದನ್ನು ನಾನು ಕಂಡಿದ್ದೇನೆ

ಯಶಸ್ಸು ಪಡೆದವರ  ಕುರಿತು ಗರ್ವ ಪಡಬೇಡ
ಚುಕ್ಕಿಗಳು ಜಾರಿ ಬೀಳುವುದನ್ನು ನಾನು ಕಂಡಿದ್ದೇನೆ.

ಯಾರ  ಜ್ಞಾನದ ಆಳವನ್ನು ಕೊಂಡಾಡಬೇಡ
ಸಾಗರಗಳು ಬತ್ತಿರುವುದನ್ನು ನಾನು ಕಂಡಿದ್ದೇನೆ

ಬಾಹ್ಯ  ರೂಪದ ಬಗ್ಗೆ ಅಹಂಕಾರ ಪಡಬೇಡ
ಮೊನಾಲಿಸಾ ಮಣ್ಣು ಸೇರಿದ್ದನ್ನು ನಾನು ಕಂಡಿದ್ದೇನೆ .

ಜೀವನದಲ್ಲಿ ಗೆದ್ದೆನೆಂದು ಸೀಜೀವಿಯ ಮುಂದೆ  ಬೀಗಬೇಡ
ಅಲೆಕ್ಸಾಂಡರ್ ಶರಣಾಗಿದ್ದನ್ನು ನಾನು ಕಂಡಿದ್ದೇನೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಜುಲೈ 2018

ನೆನಪಾಗುವುದು (ಕವನ)

*ನೆನಪಾಗುವುದು*


ಶಾಲೆಯಿಂದ ಮನೆಗೆ ಬಂದ
ನನ್ನ ಮಗಳು ಅಮ್ಮಾ ನನಗೆ
ಗೋಬಿ ಬೇಕು ಪಿಜಾ ಬೇಕು ಎಂದಾಗ
ನನ್ನಜ್ಜಿ ನನಗೆ ಕೊಟ್ಟ ಸಜ್ಜೆ ರೊಟ್ಟಿ
ಚಿನಕುರುಳಿ ನೆನಪಾಗುವುದು

ಮಳೆಯಲಿ ನೆನೆದು ಬಂದು
ಅಪ್ಪಾ ನನಗೆ ಕೊಡೆ ಬೇಕು
ಬಣ್ಣದ್ದಿರಬೇಕು ವಿಶಿಷ್ಠವಾಗಿರಬೇಕು
ಎಂದಾಗ ಮಳೆಯಲೂ ಚಳಿಯಲೂ ನನ್ನ
ಬೆಚ್ಚಗಿಟ್ಟ ಅಜ್ಜಿಯ  ಕೌದಿಯ ನೆನಪಾಗುವುದು

ಅಮ್ಮಾ ನನಗೆ ಪೋಕೆಮಾನ್ ಬೇಕು
ಚಿಂಟು ಟೀವಿ ನೋಡಬೇಕು ಎಂದು
ಮಗಳ ಹಟ ಮಾಡಿದಾಗ ಮುಸ್ಸಂಜೆ
ತಲೆ ನೇವರಿಸಿ ಕಥೆ ಹೇಳುವ ಅಜ್ಜಿಯ
ನೆನಪಾಗುವುದು .

ಇವನ್ನೆಲ್ಲಾ ನನ್ನ ಮಗಳಿಗೆ ಹೇಳಿ
ಗೋಬಿ ಬೇಡ ಸಿರಿಧಾನ್ಯ ನೋಡು
ಟಿವಿ ಮೊಬೈಲ್ ಕಡಿಮೆ ಮಾಡು
ಎಂದರೆ ನೀನಾವ ಕಾಲದಲ್ಲಿರುವೆ
ಎಂದು ಮಗಳು‌ ಜರಿದಾಗಲೂ
ನಮ್ಮಜ್ಹಿಯ ನೆನಪಾಗುವುದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*