15 ಜೂನ್ 2018

ವಿವೇಚನೆಯಿಂದ ಮೊಬೈಲ್ ಬಳಸೋಣ ( ಲೇಖನ)



*ವಿವೇಚನೆಯಿಂದ ಮೊಬೈಲ್ ಬಳಸೋಣ*

ಅಸಾದ್ಯವಾದುದನ್ನು ಸಾದ್ಯವಾಗಿಸಿ ,ಸಕಲ ಕಾರ್ಯಗಳನ್ನು ಮಾಡಿ ಇನ್ನೂ ಏನಾದರೂ ಮಾಡಬೇಕು,ಎಂದು ತುಡಿಯುತ್ತಿರುವ ನಮ್ಮ ಸೇವೆಗಾಗಿ ಸಿದ್ದವಾಗಿರುವ,ಕೆಲ ಅವಾಂತರಗಳಿಗೂ ಸಾಕ್ಷಿಯಾಗಿರುವ ಸಾಧನವೇ ಮೊಬೈಲ್.
ಆರಂಭದಲ್ಲಿ ಕೇವಲ ಮಾತು ಮತ್ತು ಸಂದೇಶಗಳನ್ನು ಕಳಿಸಲು ಮೀಸಲಾಗಿದ್ದ ಮೊಬೈಲ್ ಇಂದು ಜಾಗತೀಕರಣದ ಪರಿಣಾಮ ,ಇಂಟರ್ನೆಟ್‌ ಕ್ರಾಂತಿಯ ಪ್ರಭಾವದಿಂದಾಗಿ ಮೊಬೈಲ್ ಹಲವಾರು ಸಾಧನಗಳನ್ನು ನುಂಗಿ ನೀರು ಕುಡಿದು ಇನ್ನೂ ಕೆಲವು ಸಾಧನಗಳನ್ನು ಆಪೋಷನ ತೆಗೆದುಕೊಳ್ಳುವ ಹಂತದಲ್ಲಿದೆ  ಟೇಪ್ ರೆಕಾರ್ಡರ್, ಅಲಾರಾಂ,ಕ್ಯಾಲ್ಕುಲರೆಟರ್, ಸ್ಟಾಪ್ವಾಚ್ ,ಗಡಿಯಾರ, ಕಂಪ್ಯೂಟರ್, ಟಾರ್ಚ್, ಬ್ಯಾಕಿಂಗ್, ಟೈಪಿಂಗ್  ಮುಂತಾದವುಗಳ ಕಾರ್ಯವನ್ನು ಮಾಡುತ್ತಾ ಸಾಧನ ಒಂದು ಕಾರ್ಯಗಳು ನೂರಾರು ಎಂಬಂತೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಸಾಗಿದೆ
ಇತ್ತೀಚಿಗೆ ಮೊಬೈಲ್ ಅಪ್ಲಿಕೇಶನ್ ಗಳಾದ ವಾಟ್ಸಪ್ ,ಪೇಸ್ಬುಕ್ ಮುಂತಾದವುಗಳ ಮೂಲಕ ಸಾಮಾನ್ಯ ಜ್ಞಾನ, ಮನರಂಜನಾ, ಸಂಗೀತ, ವ್ಯವಹಾರ, ಸಾಹಿತ್ಯದ ಇತ್ಯಾದಿ ಗುಂಪುಗಳ ಮೂಲಕ ಸೃಜನಶೀಲತೆ ಬೆಳೆಯಲು‌ ಮತ್ತು ವ್ಯವಹಾರ ವೃದ್ದಿಸಲು ಮೊಬೈಲ್ ಸಹಕಾರಿಯಾಗಿದೆ.
.ಇಂತಿಪ್ಪ ಈ ಮೊಬೈಲ್ ಕೆಲವು ಅನಾನುಕೂಲ ಅವಘಡಗಳಿಗೂ ಕಾತಣವಾಗಿರುವುದು ಆತಂಕಕಾರಿಯಾದುದು.
ಕ್ಷುಲ್ಲಕ ಕಾರಣಗಳಿಗಾಗಿ ವಾಟ್ಸಪ್ ಮತ್ತು ಇತರೆ ಸಂದೇಶಗಳನ್ನು ನೋಡಿ ಅನುಮಾನಿಸಿ ಸಂಸಾರದಲ್ಲಿ ಜಗಳಗಳಾಗಿ ವಿಚ್ಚೇದನಗಳಾಗಿರುವುದು ಕಂಡಿದ್ದೇವೆ.ಕೆಲ ಯುವಕರು ಸಮಯ ಕಳೆವ ಸಾಧನವಾಗಿ ಮೊಬೈಲ್ ಬಳಕೆ ಮಾಡುತ್ತಿರುವುದು ದುರದೃಷ್ಟಕರ.
ಮೊಬೈಲ್ ಆಧುನಿಕ ತಂತ್ರಜ್ಞಾನದ ಒಂದು ಉತ್ತಮ ಕೊಡುಗೆ ಇದನ್ನು ವಿವೇಚನೆಯಿಂದ ಬಳಸಿದರೆ ಮನುಕುಲಕ್ಕೆ ಕೆಡುಕಿಗಿಂತ ಒಳಿತೇ ಆಗುವುದು .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
9900925529

14 ಜೂನ್ 2018

ಹಬ್ಬ (ಹನಿಗವನ)

*ಹಬ್ಬ*

ಮದುವೆಯ ಸಮಯದಲ್ಲಿ
ಬಂಧು ಬಾಂಧವರು ಬಂದು
ಅಕ್ಕಪಕ್ಕದಲಿ‌ ನಿಂತು
ಪಟ ತೆಗೆಸಿಕೊಳ್ಳುವರು
ನವ ವಧು ವರರು ತಿಳಿಯುವರು
ಇವರು ನಮ್ಮ ಹಾರೈಸುವರು ಎಂದು
ಬಾಂಧವರು ಒಳಗೊಳಗೆ ನಗುವರು
ಇರುವುದು ಮಾರಿ ಹಬ್ಬ ಮುಂದೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಮೇ 2018

ಪರುಷ (ಭಾವಗೀತೆ)

*ಪರುಷ*
 ಭಾವಗೀತೆ

ಮುಗಿಯಲಿದೆ ದುಃಖದ ಸಂಕೋಲೆ
ಬರಲಿದೆ ನಮ್ಮ ಬಾಳಿಗೆ  ಹರುಷ
ನಾವಾಗುವೆವು  ಅಪ್ಪ ಅಮ್ಮ
ಬರಲಿದೆ ನೋವ ಕಳೆವ ಪರುಷ

ಹತ್ತು ವರ್ಷದ ಕಾಯುವಿಕೆಗೆ
ಇಂದು ಫಲ ಸಿಕ್ಕಿದೆ
ಮನೆಯಲ್ಲಿ ಮಗುವಿನ
ಕಿಲ ಕಿಲ ಕಲರವ ಕೇಳಬೇಕಿದೆ

ದೇವರ ವರವೋ ಹಿರಿಯರ
ಆಶೀರ್ವಾದವೋ ಫಲಿಸಿದೆ
ನಮ್ಮ ಮನೆಯಲಿ ಬೀಸಣಿಗೆ
ಗಾಳಿಯು ಸುಳಿಯಲಿದೆ

ನನ್ನವಳ ಬಂಜೆಯೆಂಬುವ
ಶಾಪ ವಿಮೋಚನೆಯಾಗಲಿದೆ
ಮನ ಮನೆ ಬೆಳಗುವ ದೀಪ
ಶೀಘ್ರ ಆಗಮನವಾಗಲಿದೆ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಮೇ 2018

*ಕಾಲಯ ತಸ್ಮೈ ನಮಃ*(ಅಂದು ,ಇಂದು ಮುಂದೆ)



             ಕಾಲಯ ತಸ್ಮೈ ನಮಃ

             *ಅಂದು*

ಕಾಲಕ್ಕೆ ಸರಿಯಾಗಿ ಮಳೆಬೆಳೆ
ವರತೆಗಳಲ್ಲಿ ನೀರು
ಮಲಿನ ರಹಿತ ಗಾಳಿ
ಕಾನನಗಳಲಿ‌ ವನಮೃಗಗಳ
ಸ್ವೇಚ್ಛೆಯಾಗಿ ವಿಹಾರ
ಅನ್ನ ವಿದ್ಯೆ ಅರೋಗ್ಯ
ಉಚಿತವಾಗಿ ಲಬ್ಯ
ಸಮರಸದ ಜೀವನ ಎಲ್ಲೆಡೆ

*ಇಂದು*

ಮಳೆಗಾಲದಲ್ಲಿ ಉರಿ ಬಿಸಿಲು
ಚಳಿಗಾಲದಲ್ಲಿ ಮಳೆ
ಉರಿಯುತ್ತಿದೆ ಇಳೆ
ಸಿಲಿಂಡರ್ ಗಳಲ್ಲಿ ಗಾಳಿ ಬಂದಿ
ಕೊಂಡು ಕುಡಿಯಬೇಕು ನೀರು
ಕಡಿದ ಕಾಡು ತೊರೆದ
ವನ್ಯಜೀವಿಗಳಿಂದ ನಾಡ ಮುತ್ತಿಗೆ
ಅನ್ನ ಛತ್ರ ದ ಬದಲಿಗೆ
ಇನ್,ಹೋಟಲ್ ದರ್ಶಿನಿಗಳ ದರ್ಶನ
ಗುರುಕುಲದ ಬದಲಿಗೆ ಗುರುಗಳ
ವಿದ್ಯೆ ಮಾರಾಟದ ಸರಕು
ಜನರ ಅನಾರೋಗ್ಯ ಬಂಡವಾಳ
ಮಾಡಿಕೊಂಡ ಕಾರ್ಪೊರೇಟ್ ಆಸ್ಪತ್ರೆಗಳು
ಒಂದೇ ಎರಡೆ ಮುಂದುವರೆಯುತ್ತವೆ...

*ಮುಂದೆಯೂ*

ಸಮಯದ ಮುಂದೆ ನಾವು
ಬಹಳ ಕುಬ್ಜರು
ನಾವೆಲ್ಲರೂ ಸಮಯದ ಗೊಂಬೆಗಳು
ಗತ ವೈಭವ ನೆನದು ಭವಿಷ್ಯ
ಊಹಿಸಿದರೆ ಭಯವಾಗುತ್ತದೆ
ಯಾರೂ ಹೆದರಬೇಕಿಲ್ಲ ಏಕೆಂದರೆ
ಕಾಲಾಯ ತಸ್ಮೈ ನಮಃ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 ಮೇ 2018

ಮನಸ್ಸಿದ್ದಲ್ಲಿ ಮಾರ್ಗ ( ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ತಡೆ ಕುರಿತ ಸಮಾಜಿಕ ಕಳಕಳಿಯ ಲೇಖನ)



                  ಲೇಖನ

*ಮನಸ್ಸಿದ್ದಲ್ಲಿ ಮಾರ್ಗ*

ಕಾಮ ಕ್ರೋಧ ಮೋಹ ಮಧ ಮತ್ಸರ ಮುಂತಾದವು  ಪ್ರತಿಯೊಬ್ಬ ಮಾನವನಲ್ಲಿ ಇರುವ ಗುಣಗಳು .ಈ ಗುಣಗಳು ನಮ್ಮ ವ್ಯಕ್ತಿತ್ವ, ಸಂಸ್ಕೃತಿ ಸಂಸ್ಕಾರ ಗಳ ಆಧಾರಧ ಮೇಲೆ  ನಿಯಮಿತವಾಗಿ ಎಷ್ಟು ಬೇಕೋ ಯಾವಾಗ ಬೇಕೋ ಆಗ ಬಳಸಿದರೆ ಅಂತಹ ತೊಂದರೆಯಾಗುವುದಿಲ್ಲ .ಇವುಗಳು ಅತಿಯಾದರೆ ಅದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುವುದು

ಪಾಶ್ಚಾತ್ಯೀಕರಣ ,ಆಧುನೀಕರಣ ಜಾಗತೀಕರಣದ ಪರಿಣಾಮವಾಗಿ ಇತ್ತೀಚಿಗೆ ದೇಶದ ಬಹುತೇಕ ಕಡೆ ಸ್ವೇಚ್ಚಾಚಾರ,ಅತ್ಯಾಚಾರ ಅನಾಚಾರಗಳು ಎಲ್ಲೆಡೆ ವರದಿಯಾಗುತ್ತಲಿವೆ .
ಹಸುಳೆಗಳು.ಮಹಿಳೆಯರು. ವೃದ್ದೆಯರೆಂಬ ಬೇಧವಿಲ್ಲದೆ ಅತ್ಯಾಚಾರ ಮಾಡಿ ಕೊಲೆ ಮಾಡುವುದು ನೋಡಿ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ .

ಈ ಪಿಡುಗು ತಡೆಯಲು ಸಾದ್ಯವಿಲ್ಲವೆ

 ಮನಸ್ಸಿದ್ದರೆ ಮಾರ್ಗ ಎಂಬಂತೆ ಈ ಪಿಡುಗು ತಡೆಯಲು ಆಳುವ ಸರ್ಕಾರ, ಸಮಾಜ ಮತ್ತು ವ್ಯಕ್ತಿಗಳೆಲ್ಲ ಸಮೂಹಿಕ ಪ್ರಯತ್ನ ಮಾಡಬೇಕಾಗಿದೆ .

ನಮ್ಮನ್ನಾಳುವ ಸರ್ಕಾರಗಳು ಇಂತಹ ಅಪರಾಧಗಳಿಗೆ ಕಠಿಣಾತಿಕಠಿಣವಾದ ಕಾನೂನು ರೂಪಿಸಿ ಸಮರ್ಪಕವಾಗಿ ಜಾರಿಗೆ ತರಬೇಕಿದೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ನೆ ಸ್ವಾಗತಾರ್ಹ ನಡೆಯಾಗಿದೆ .

ಬಹುತೇಕ ಅತ್ಯಾಚಾರಕ್ಕೆ ಜನರಲ್ಲಿ ನೈತಿಕತೆ ಕುಸಿದಿರುವುದು ಮುಖ್ಯ ಕಾರಣವಾಗಿದೆ ಇದನ್ನೆ ಮನಗಂಡು ಜನರಲ್ಲಿ ನೈತಿಕತೆ ಬೆಳೆಸಲು ಪ್ರಯತ್ನಗಳಾಗಬೇಕು.

ಮಾಧ್ಯಮಗಳಲ್ಲಿ ಇತ್ತೀಚೆಗೆ ಕ್ರೌರ್ಯ. ಲೈಂಗಿಕತೆ ವಿಜೃಂಭಣೆಮಾಡುವ ಸಿನಿಮಾ ಮತ್ತು ಧಾರಾವಾಹಿ ಗಳು ಅವ್ಯಾಹತವಾಗಿ ಪ್ರಸಾರವಾಗುವ ಪರಣಾಮ ಜನರ ಮನದಲಿ ಕ್ರೌರ್ಯ ಚಿಗುರಿ ಇಂತಹ ಅನರ್ಥಗಳು ಹೆಚ್ಚಾಗುತ್ತದೆ ಇದಕ್ಕೆ ಸೂಕ್ತ ಕಡಿವಾಣ ಹಾಕುವ ಪ್ರಾಧಿಕಾರ ರಚನೆ ಆಗಬೇಕಿದೆ .

ನಮ್ಮ ಯುವತಿಯರು, ಮಹಿಳೆಯರು ಇಂತಹ ಸಂದರ್ಭಗಳಲ್ಲಿ ಸ್ವಯಂ ಶಿಸ್ತು ರೂಢಿಸಿಕೊಂಡು ಪ್ರಪಂಚದ ಎಲ್ಲಾ ಹೆಣ್ಣು ಮಕ್ಕಳು ನಮ್ಮ ಸಹೋದರಿಯರು ಎಂಬ ಬಾವ ಮೂಡದಿದ್ದರೆ ಯಾವ ಪ್ರಯೋಜನ ಇಲ್ಲ .

ಒಟ್ಟಿನಲ್ಲಿ ಹೇಳುವುದಾದರೆ ಅತ್ಯಾಚಾರದಂತಹ ಪಿಡುಗು ತೊಡೆದು ಹಾಕಲು ಸರ್ಕಾರದ ಬಿಗಿಯಾದ ಕಾನೂನಿನ ಜೊತೆಗೆ ಸಮಾಜದ ಸೂಕ್ತ ಬೆಂಬಲದಿಂದ ವೈಯಕ್ತಿಕ ಜಾಗೃತಿ ಮೂಲಕ ಸರ್ವರೂ ಪ್ರಯತ್ನ ಮಾಡಿದರೆ ಅತ್ಯಾಚಾರ  ಸಮಸ್ಯೆಯನ್ನು ಪರಿಹರಿಸಲು ಕಷ್ಟವೇನಲ್ಲ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*