30 ಮಾರ್ಚ್ 2018

ಗಜ಼ಲ್೩೬ (ಮಾಡಬಹುದಿತ್ತು)

*ಗಜ಼ಲ್ ೩೬*

ಓ ದೇವಾ ಧರೆಯನು ನಂದನವನವನಾಗಿ  ಮಾಡಬಹುದಿತ್ತು
ಧರಣಿಯನು ಸುಂದರ ಸ್ವರ್ಗವನಾಗಿ ಮಾಡಬಹುದಿತ್ತು

ಅತಿ ವೃಷ್ಟಿ ಅನಾವೃಷ್ಟಿ ಬರಗಾಲ ಭೂಕಂಪಗಳೇಕೆ ಮಾಡಿಸುವೆ
ಕಾಲ ಕಾಲಕೆ ಮಳೆ ಬೆಳೆನೀಡಿ ಸುಭಿಕ್ಷ  ನಾಡಾಗಿ ಮಾಡಬಹುದಿತ್ತು

ಮೋಸ ಕೊಲೆ ಸುಲಿಗೆ ಸುಳ್ಳು ಪೊಳ್ಳು ಮನಸುಗಳನೇಕಿತ್ತೆ
ನಿಷ್ಕಲ್ಮಶ ಮನಸುಗಳ ಸೃಷ್ಟಿಸಿ ರಾಮರಾಜ್ಯವಾಗಿ ಮಾಡಬಹುದಿತ್ತು

ಮೇಲು ಕೀಳು ಬಡವ ಬಲ್ಲಿದ ಜಾತಿ ಮತಗಳು ಏಕೆ ಬೇಕು
ಎಲ್ಲರಿಗೆ ಸಮಬಾಳು ನೀಡಿ ಏಕತೆಯ ಗೂಡಾಗಿ ಮಾಡಬಹುದಿತ್ತು

ಪರಿಸರ ಅಸಮತೋಲನ ಪರಿಸರ ಮಾಲಿನ್ಯ ಬೇಕೆ
ಸೀಜೀವಿಯ ಕನಸಿನ  ಆದರ್ಶ ಇಳೆಯಾಗಿ ಮಾಡಬಹುದಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 ಮಾರ್ಚ್ 2018

ದಿನ (ಭಾವಗೀತೆ)

*ದಿ‌ನ*

ದಿನವ ಬೆಳಗೊ ದಿನವು ನೀನು
ದಿನಕರನೆಂದೆನುವೆ ನಾನು
ನೀನು ಬರದೆ ದಿನವು ಇಲ್ಲ
ನೀನಿರದೇ ನಮ್ಮ ಜೀವನವಿಲ್ಲ

ತಮವ ತೊರೆದು ಬೆಳಕ ನೀಡುವೆ
ರಾತ್ರಿ ಚಂದಿರನಿಗೆ ಜಾಗ ಬಿಡುವೆ
ಥಳ  ಥಳ   ಹೊಳೆಸುವೆ  ಜಗವ
ನೀಡುತಲಿರುವೆ  ಶಕ್ತಿಯ ಮೂಲವ

ಹಳಿಯುವುದಿಲ್ಲ ಇತರರ ಕೆಲಸವ
ಮರೆಯುವುದಿಲ್ಲ ಬೆಳಗುವ ಕಾರ್ಯವ
ನನ್ನ  ಹಳೆಯ ದಿನಗಳ  ಮರೆಸುವೆ
ಹೊಸತು ಹುರುಪು ನೀಡಿ ಮೆರೆಸುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 ಮಾರ್ಚ್ 2018

ನಾನು ಮುಖ್ಯ ಮುಂತ್ರಿ ಆದರೆ?!!! (ಲೇಖನ) ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ


ನಾನು ಮುಖ್ಯ ಮಂತ್ರಿ ಆದರೆ

‌ನಾನು ಈ ರಾಜ್ಯದ ಮುಖ್ಯ ಮಂತ್ರಿಯಾದರೆ ಮೊದಲು ರಾಜ್ಯಾದ್ಯಂತ ಮದ್ಯಪಾನ ಮತ್ತು ಧೂಮಪಾನ ನಿಷೇಧ ಮಾಡುವೆ. ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಿ ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವೆ.ರೈತರ ಕಷ್ಟಗಳ ನಿವಾರಣೆಗೆ ಶ್ರಮಿಸುವೆ.ನದಿಗಳ ಜೋಡಣೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವೆ.ಕೈಗಾರಿಕೆಗಳು ತಮ್ಮ ವಸ್ತುಗಳ ಬೆಲೆ ನಿಗದಿ ಮಾಡುವಂತೆ ರೈತರು ತಮ್ಮ ವಸ್ತುಗಳ ಬೆಲೆ ನಿಗದಿ ಮಾಡಲು (ಎಂ ಆರ್.ಪಿ) ಅವಕಾಶ ಕೊಡುವೆ.ಕೃಷಿಯನ್ನು ಆಧುನೀಕರಣ ಗೊಳಿಸಿ ಲಾಭದಾಯಕ ಉದ್ಯೋಗ ವನ್ನಾಗಿ ಮಾಡುವೆ .ಶೈಕ್ಷಣಿಕ ವಾಗಿ ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲಾ ಖಾಸಗಿ ಶಾಲೆಗಳ ರಾಷ್ಟ್ರೀಕರಣ ಮಾಡಿ ಸರ್ಕಾರದ ವಶಕ್ಕೆ ಪಡೆದು ಏಕರೂಪದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವೆ ಒಂದರಿಂದ ಎಂಟನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಕಲಿತಲು ಶಾಸನ ಮಾಡುವೆ .

27 ಮಾರ್ಚ್ 2018

ಗಜ಼ಲ್ ೩೫(ಇದುವೆ ಜೀವನ)

*ಗಜ಼ಲ್ ೩೫*

ಇಲ್ಲದಿರೆ ತಿರಿದು ತಿವಿದರೂ ದಕ್ಕಲ್ಲ ಇದುವೆ ಜೀವನ
ಇದ್ದರೆ ಬೇಡವೆಂದು ಜಾಡಿಸಿದರೂ ಬರುವುದಲ್ಲ ಇದುವೆ ಜೀವನ

ಕಾಡಿ ಬೇಡಿದರೂ ದಮ್ಮಡಿ ದೊರೆಯಲಿಲ್ಲ ಅಂದು
ಅದೃಷ್ಟದ ಲಾಟರಿ ಒಡೆದು ಎಲ್ಲಾ ಸಿಕ್ಕಿತಲ್ಲ ಇದುವೇ ಜೀವನ

ಮರಳುಗಾಡಲಿ ಪಯಣ ಏಕಾಂಗಿ ಜೀವನದ ಹತಾಶೆ
ಯಶವಿರಲು ಊರೆಲ್ಲ ನೆಂಟರು ಬರುವರಲ್ಲ  ಇದುವೇ ಜೀವನ


ಬೆಂಬಿಡದೆ ಪೆಡಂಬೂತವಾಗಿ ಕಾಡುವುವು ದುರಿತಗಳು
ಪುಣ್ಯಕಾರ್ಯಗಳು ಕಾಯುವವು ಕೈಬಿಡಲ್ಲ  ಇದುವೆ ಜೀವನ

ಬೇವು ಬೆಲ್ಲ ಸಹಜ ಜೀವನದಿ ಸೀಜೀವಿ ಮುನ್ನುಗ್ಗು
ಕಷ್ಟಗಳ ನಂತರ ಸುಖಾಗಮನ ನಿಲ್ಲಲ್ಲ  ಇದುವೆ ಜೀವನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*.

ಬಂದಿ (ಹನಿಗವನ) ಮೊದಲ ಶತಕ 2018 ರ ನೂರನೇ( 100) ಪೋಸ್ಟ್ ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹನಿಗವನ


ಹನಿಗವನ

ಬಂದಿ

ನಮಗೆ ಜೀವವಿಲ್ಲ‌ ಆತ್ಮ ವಿಲ್ಲ
ಆದರೂ ಬಂಧನ ತಪ್ಪಲಿಲ್ಲ
ನಿಮಗೆ ಆತ್ಮವಿದೆ ಜೀವಿಸುತ್ತಿಲ್ಲ
ನಿಮಗೂ ನಮಗೂ ವ್ಯತ್ಯಾಸವಿಲ್ಲ
ನೀವು ಸಂಸಾರ ಸಾಗರದಿ ಬಂದಿ
ನಾವು ತಂತಿ ಪಂಜರದಲ್ಲಿ ಬಂದಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*