25 ಮಾರ್ಚ್ 2018

ಬಾ ಶ್ರೀ ರಾಮ (ಭಕ್ತಿ ಗೀತೆ)

*ಬಾ ಶ್ರೀ ರಾಮ*

ಮತ್ತೊಮ್ಮೆ ಬಾ ಶ್ರೀ ರಾಮ ಭುವಿಗೆ
ನೀಡು ಸಮಾಧಾನ ನಮ್ಮ ನೋವಿಗೆ |ಪ|

ಅಧಿಕಾರಕ್ಕಾಗಿ ಕಚ್ಚಾಟ ಕೆಸರೆರಚಾಟ
ಯಾವ ಮಾರ್ಗವಾದರೂ ಸರಿ
ವಾಮಮಾರ್ಗವೂ ಅಯಿತು
ಅಧಿಕಾರದ ಬೆನ್ನ ಹತ್ತದೇ ಭರತನಿಗೆ
ರಾಜ್ಯ ಅಧಿಕಾರ ನೀಡಿದ ನೀ
ಭಾರತ ಕ್ಕೆ ಮತ್ತೆ ಬಾ ಶ್ರೀ ರಾಮ|೧|

ಅತ್ಯಾಚಾರ ಅನಾಚಾರ ಮಹಿಳೆಯರ
ಶೋಷಣೆ ಎಲ್ಲೆಲ್ಲೂ ಅವ್ಯಾಹತ
ಏಕಪತ್ನಿ ವೃತಸ್ತ ತಾಯಿಮಾತಿನ
ಪರಿಪಾಲಕನಾದ ನೀನು ನಮಗೆ ಮಾದರಿ
ಸಂಬಂಧಗಳ ಬೆಲೆ ತಿಳಿಸಿಕೊಡಲು
ಮತ್ತೆ ಧರೆಗೆ ಬಾ ಶ್ರೀ ರಾಮ|೨|

ಎಲ್ಲೆಲ್ಲೂ ಅಪಮೌಲ್ಯ ಅಧರ್ಮ
ದುಷ್ಟ ಶಕ್ತಿಗಳ ಅಟ್ಟಹಾಸ
ಮೌಲ್ಯವನ್ನು ಎತ್ತಿ ಹಿಡಿಯಲು
ಧರ್ಮಮಾರ್ಗದಿ ನಡೆಸಲು
ರಾಮರಾಜ್ಯವನು ಕರುಣಿಸಲು
ಮರಳಿ ಇಳೆಗೆ ಬಾ ಶ್ರೀ ರಾಮ|೩|

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಸರ್ವರಿಗೂ ‌ಶ್ರೀರಾಮ‌ನಮವಿ ಹಬ್ಬದ ಶುಭಾಶಯಗಳು*

24 ಮಾರ್ಚ್ 2018

ಪಟ್ಟದರಸಿಯಾಗು (ಭಾವಗೀತೆ) ಮದುಮಗಳಿಗೆ ತಾಯಿಯ ಬುದ್ದಿ ಮಾತುಗಳು

*ಪಟ್ಟದರಿಸಿಯಾಗು*

ಅಮ್ಮ ನಾನೀಗ ಹೇಳುವೆ ಕೇಳು
ನಮ್ಮನೆಯ ಮುತ್ತು ನೀ ಕೇಳು
ಹೆಮ್ಮೆಯ ಸೊಸೆಯಾಗಿ ಬಾಳು
ಸುಮ್ಮನೆ ಗೊಡವೆ ಮಾಡದಿರು| ಪ|

ಸುತ್ತುವ ಮನವನು ಹಿಡಿದಿಡು
ಸುತ್ತೆಲ್ಲ ಎಚ್ಚರದ ಕಣ್ಣಿಡು
ಮಾತುಗಳ ಕಡಿಮೆ ಮಾಡು
ಅತ್ತೆಗೆ ಮುದ್ದಿನ ಸೊಸೆಯಾಗು|೧|

ಇಟ್ಟ ಮನೆಯ ಮರೆಯದಿರು
ಕೊಟ್ಟ ಮನೆಯ ತೊರೆಯದಿರು
ಕೆಟ್ಟವರ ಸಂಘ ಮಾಡದಿರು
ಪಟ್ಟದರಿಸಿಯಾಗು ನಿನ್ನ ಗಂಡಗೆ|೨|

ವಿರಸದ ಮಾತನು ಕಡಿಮೆ ಮಾಡು
ಸರಸದಿಂದಲಿ ಗಂಡನ ಕೂಡು
ಸಮರಸದ ಸಂಸಾರ ಮುನ್ನೆಡೆಸು
ಮಾದರಿ ತಾಯಾಗು ನಿನ್ನ ಮಕ್ಕಳಿಗೆ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

23 ಮಾರ್ಚ್ 2018

ಗಜ಼ಲ್ ೩೩ (ಕನಸಾಗಿತ್ತು)

*ಗಜ಼ಲ್ ೩೩*


ಕೇಡಿಲ್ಲದ ದುಗುಡವಿಲ್ಲದ ಸಮಾಜ ಕಟ್ಟುವ  ಕನಸಾಗಿತ್ತು
ಸರ್ವಸಮಾನತೆಯ ಸಮಾಜ ಹೊಂದುವ ಕನಸಾಗಿತ್ತು

ಉಳಿವಿಗಾಗಿ ಹೋರಾಟ ಬಲಿಷ್ಠರ ಹಾರಾಟ ನಿಂತಿಲ್ಲ
ಉಳ್ಳವರ ಇರದವರ ಸಾಮರಸ್ಯ ಕಾಣುವ ಕನಸಾಗಿತ್ತು

ಮತಗಳಿಕೆಗೆ ಮತಗಳ ಒಲೈಕೆ ರಾಜಕಾರಣ ಎಲ್ಲೆಲ್ಲೂ
ಜಾತಿಮತದ ಭೇದವಿರದ ನಾಡು  ಕಟ್ಟುವ ಕನಸಾಗಿತ್ತು

ಹೆಜ್ಜೆ ಹೆಜ್ಜೆಗೆ ಕೊಲೆ ಸುಲಿಗೆ ಮೋಸಗಳ  ಮೆರವಣಿಗೆ
ಅಪರಾಧ ಮುಕ್ತ ಶಾಂತ  ಜಗವ ಹೊಂದುವ ಕನಸಾಗಿತ್ತು

ಐಹಿಕ ಸುಖ ಭೋಗದ ಲಾಲಸೆಯಲಿ‌ ಮಳುಗಿಹುದು‌ ಜಗ
ಸೀಜೀವಿಗೆ ಮುಕ್ತಿ ಹೊಂದಲು ಆತ್ಮಸಾಕ್ಷಾತ್ಕಾರ ಪಡೆವ ಕನಸಾಗಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 ಮಾರ್ಚ್ 2018

ಗಜ಼ಲ್ ೩೨ (ಕೊನೆಯಿಲ್ಲ)


*ಗಜ಼ಲ್ ೩೨*
ಬ್ರಹ್ಮಾಂಡವನೆ ಕೊಟ್ಟರೂ ಆಸೆಗಳ ಕೂಪಕೆ ಕೊನೆಯಿಲ್ಲ
ಬ್ರಹ್ಮ ಬಂದರೂ ಮಾನವರ ಕಚ್ಚಾಟಕೆ ಕೊನೆಯಿಲ್ಲ

ಸೂರ್ಯ ಚಂದ್ರ ತಾರೆಗಳ ಅನಂತ ವಿಶ್ವ ನಮ್ಮ ಅನುಕೂಲಕಿವೆ
ಅಪರಿಮಿತವಾದ ಬೇಡಿಕೆಗಳ ಮೋಹಕೆ ಕೊನೆಯಿಲ್ಲ

ನಾನು ನನ್ನದು ನನ್ನಿಂದಲೇ ಎಂದು ಅಹಂಕಾರದಿ ಮೆರೆವರು
ಸ್ವಾರ್ಥ ಲೋಭ  ಮೋಹ ಮದಗಳ ಜಾಲಕೆ ಕೊನೆಯಿಲ್ಲ

ನಿಸರ್ಗಕೆ ವಿರುದ್ದವಾದ ಜೀವನ ಆಚರಣೆಗಳು ಅವ್ಯಾಹತ
ಭೂಕಂಪ ಸುನಾಮಿ ಜ್ವಾಲಾಮುಖಿ ಪ್ರಕೃತಿ ವಿನಾಶಕೆ ಕೊನೆಯಿಲ್ಲ

ಮತೀಯತೆ ಪ್ರಾಂತೀಯತೆಯ ಬಡಿದಾಟ ನಿಲ್ಲುತ್ತಿಲ್ಲ
ಸೀಜೀವಿಯ ವದುಧೈವಕುಟುಂಬಕಂ ಆಶಯಕೆ ಕೊನೆಯಿಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 ಮಾರ್ಚ್ 2018

ದಯವಿಟ್ಟು ಓಟು ಕೊಡಿ (ಕವನ) ಇಂದು ವಿಶ್ವ ಕವನ ದಿನ ಅದರ ನೆನಪಿಗಾಗಿ ಈ ಕವನ

ದಯವಿಟ್ಟು ಓಟು ಕೊಡಿ

ಸದನದಲಿ ನಿದ್ದೆ ಮಾಡುವೆವು
ಎಚ್ಚರಾದಾಗ ಗದ್ದಲವೆಬ್ಬಿಸುವೆವು
ಮಸೂದೆಗಳ ಹರಿದು ಹಾಕುವೆವು
ದಯವಿಟ್ಟು ನಮಗೆ ಓಟು ಕೊಡಿ

ನಿಮ್ಮ ಚಿಂತೆ ಮಾಡುವುದಿಲ್ಲ
ನಮ್ಮ ಚಿಂತೆ ನಿಮಗೆ ಬೇಡ
ನಾವಿರುವುದೇ ನಮಗಾಗಿ
ದಯವಿಟ್ಟು ನಮಗೆ ಓಟು ಕೊಡಿ

ನಿಮ್ಮ ಒಗ್ಗಟ್ಟು ನಾವು ಸಹಿಸುವುದಿಲ್ಲ.
ಒಡೆದು ಆಳುವುದ  ನಾವು ಬಲ್ಲೆವಲ್ಲ
ನೀವು ಬಡಿದಾಡಿದರೆ ಲಾಭ ನಮಗೆ
ದಯವಿಟ್ಟು ನಮಗೆ ಓಟು ಕೊಡಿ

ಗೆದ್ದ ಮೇಲೆ ನಿಮ್ಮ ಸುದ್ದಿಗೆ ಬರುವುದಿಲ್ಲ
ಗದ್ದುಗೆಯನು ಬಿಡುವುದೇ ಇಲ್ಲ
ದೋಚುವ ಕಾಯಕ ಮರೆಯುವುದಿಲ್ಲ
ದಯವಿಟ್ಟು ನಮಗೆ ಓಟು ಕೊಡಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*